ಮಾತಿಗೇಕೆ ಮಧ್ಯವರ್ತಿ?

Posted: ಜುಲೈ 26, 2011 in ಅತ್ತೆ ಸ್ಪೀಕ್ಸ್...

ರಲ್ಲೇನೋ ಕಾರ್‍ಯಕ್ರಮವೆಂದು ಹೋಗಿದ್ದೆ. ಸುರಿವ ಮಳೆಯನ್ನು ಸುಮ್ಮನೇ ನೋಡುತ್ತ ಕುಳಿತಿದ್ದೆ. ಎಂಜಿನಿಯರಿಂಗ್ ಎರಡನೇ ವರ್ಷ ಓದುತ್ತಿರುವ ಮಿಥುನ್ ಪಕ್ಕದಲ್ಲೇ ಲ್ಯಾಪ್‌ಟಾಪ್ ಹಿಡಿದು ಬಂದು ಕುಳಿತ. ನಾನು ಮಳೆ ನೋಡುವುದರಲ್ಲಿ ತಲ್ಲೀನಳಾಗಿದ್ದರೆ ಅವನು ಲ್ಯಾಪ್‌ಟಾಪ್ ತೆರೆದು ಅದರಲ್ಲೇ ಬಿಝಿಯಾಗಿದ್ದ. ಮುಂಬೈಯಲ್ಲಿರುವ ನನ್ನ ಕಿರಿಯ ತಮ್ಮನ ಮುದ್ದಿನ ಮಗನೀತ.
ಇದೇನು ಹುಡುಗನಪ್ಪಾ, ಮಳೆ ನೋಡಬೇಕೆಂದು ಅನಿಸೋದೇ ಇಲ್ಲವೇ ಇವನಿಗೆ ಅಂತ ಅಂದುಕೊಂಡೆ. ಕೇಳಿದೆ, ‘ಏನೋ, ಮುಂಬೈಯಲ್ಲಿ ಇಷ್ಟು ಚೆನ್ನಾಗಿರೋ ಮಳೆ ನೋಡೋಕೆ ಸಿಗುತ್ತಾ ನಿಂಗೆ? ಮಳೆ ನೋಡ್ಬೇಕು ಅಂತ ಅನಿಸೋದಿಲ್ವಾ?’
‘ಹಾಗೇನೋ ಅನ್ಸೋದಿಲ್ಲ ಅತ್ತೆ.. ಮಳೆ ಎಲ್ಲಾ ಕಡೇನೂ ಒಂದೇ ಅಲ್ವಾ? ಥತ್, ಈ ನೆಟ್ ಯಾಕೋ ಕೈಕೊಡ್ತಾ ಇದೆ. ಇಂಟರ್ನೆಟ್ ಸರಿ ಇಲ್ದೆ ಇದ್ರೆ ಭಾರೀ ಕಷ್ಟ’ ಅಂದ ಅವನು.
‘ಏನಪ್ಪಾ, ಅಂಥಾ ಇಂಪಾರ್ಟೆಂಟ್ ಕೆಲ್ಸ ಏನಿತ್ತು?’ ಅಂದೆ.
‘ಏನಿಲ್ಲ, ನೆಟ್‌ನಲ್ಲಾದ್ರೆ ಫ್ರೆಂಡ್ಸ್ ಸಿಗ್ತಾರೆ, ಮಾತಾಡ್ಬಹುದು. ಟೈಂ ಪಾಸ್ ಆಗುತ್ತೆ..’
‘ನಾವು ಇಷ್ಟೆಲ್ಲಾ ಜನ ಇದ್ದೀವಲ್ಲಾ, ನಮ್ ಹತ್ರ ಮಾತಾಡು’ ಅನ್ನುತ್ತಾ ಪ್ರೀತಿಯಿಂದ ತಲೆ ಸವರುತ್ತಿದ್ದಂತೆ ಕೊಸರಿಕೊಂಡು ಎದ್ದೇ ಹೋಗಿಬಿಟ್ಟ ಹುಡುಗ. ಅಷ್ಟರಲ್ಲಿ ಮೊಬೈಲ್‌ಗೆ ತಗಲಿಕೊಂಡ ಅವನಕ್ಕ ‘ಹಲೋ ಹಲೋ’ ಅನ್ನುತ್ತ ಹೊರಹೋದಳು. ಎರಡು ದಿನದಿಂದ ನೋಡುತ್ತಿದ್ದೆ, ಅವಳೂ ಅಷ್ಟೇ, ಮನೆಯವರೊಂದಿಗೆ ಮಾತಾಡಿದ್ದಕ್ಕಿಂತ ಮೊಬೈಲ್‌ನಲ್ಲಿ ಮಾತಾಡಿದ್ದೇ ಹೆಚ್ಚು. ಇಬ್ಬರನ್ನೂ ನೋಡಿ ಅಚ್ಚರಿಯಾಯಿತು.
ಅಲ್ಲೇ ಬಂದ ತಮ್ಮನಲ್ಲಿ ಹೇಳಿದೆ, ‘ಅಲ್ವೋ, ನಾ ಮದುವೆಯಾದ ಹೊಸತರಲ್ಲಿ ನಮ್ಮನೆಗೆ ಫೋನ್ ಬಂದಾಗ ಅದರಲ್ಲಿ ಮಾತಾಡೋದಕ್ಕೆ ಅದೆಷ್ಟು ಕಿರಿಕಿರಿ ಆಗ್ತಿತ್ತು ನಂಗೆ. ಈಗ್ಲೂ ಈ ಮೊಬೈಲ್‌ನಲ್ಲಿ ಮಾತಾಡೋದು ಕಷ್ಟವೇ ನೋಡು. ಏನಿದ್ರೂ ಎದುರು ಬದುರು ಮಾತಾಡೋದೇ ಸುಖ ಅನ್ಸುತ್ತೆ ನಂಗೆ. ಹೀಗಿರೋವಾಗ ಈ ಹುಡುಗರು ಮೊಬೈಲ್, ನೆಟ್ಟು ಅಂತ ಮುಳುಗಿ ಹೋಗಿದ್ದಾರಲ್ಲ..’
‘ಹೌದಕ್ಕಾ, ಈ ಮಕ್ಳಿಗೆ ನೇರವಾಗಿ ಮಾತಾಡೋಕೇ ಬರೋಲ್ಲ. ನನ್ ಮಗ ಈಗ ನಿನ್ನಲ್ಲಿ ಮಾತಾಡದೇ ಇರ್‍ಬಹುದು. ಆದ್ರೆ ಫೇಸ್‌ಬುಕ್‌ನಲ್ಲಿ ಸಿಕ್ಕು, ಅದೆಷ್ಟು ಹೊತ್ತು ಚಾಟ್ ಮಾಡ್ತಾನೋ ನೋಡು’ ಅಂದ ತಮ್ಮ.
ಇದ್ಯಾಕೋ ಸೀರಿಯಸ್ ಸಮಸ್ಯೆ ಎನಿಸಿತು. ಮಿಥುನ್ ಮತ್ತು ಅವನ ಅಕ್ಕ ಮೈನಾ -ಇಬ್ಬರನ್ನೂ ಸಾಧ್ಯವಾದಾಗಲೆಲ್ಲಾ ಕರೆಕರೆದು ಮಾತಾಡಿಸಿದೆ. ಹುಡುಗರು ಮೊದಮೊದಲು ಮಾತಾಡುವುದಕ್ಕೂ ಕಷ್ಟಪಟ್ಟರು. ಅದೃಷ್ಟಕ್ಕೆ ಆ ಹಳ್ಳಿಮನೆಯಲ್ಲಿ  ಅವನ ನೆಟ್ಟೂ, ಇವಳ ಮೊಬೈಲ್ ನೆಟ್‌ವರ್ಕೂ ಕೈಕೊಟ್ಟಿದ್ದವು. ಟೈಂಪಾಸ್ ಆಗುತ್ತಿಲ್ಲವೆಂದು ಬೇಸರಿಸುತ್ತಿದ್ದ ಅವರಿಬ್ಬರನ್ನೂ ಅಕ್ಕಪಕ್ಕದ ಮನೆಗಳಿಗೆ ಕರೆದೊಯ್ದೆ, ಮನೆಯಲ್ಲೇ ಯಾವ್ಯಾವುದೋ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಇಬ್ಬರೂ ಮುಖ ಕೊಟ್ಟು ಮಾತಾಡುವುದಕ್ಕೆ, ನೇರ ಸಂಭಾಷಣೆಗೆ ನಿಧಾನವಾಗಿ ತೆರೆದುಕೊಂಡರು.
ಕೊನೆಗೆ ರಜೆ ಮುಗಿಸಿ ಮುಂಬೈಗೆ ಹೊರಟು ನಿಂತಾಗ ಅಕ್ಕ-ತಮ್ಮನ ಮುಖದಲ್ಲಿ ಏನೋ ಖುಷಿ, ಹೊಸತನ. ಅಕ್ಕಪಕ್ಕದ ಗೆಳೆಯರಿಗೂ ಬೈ ಅಂದು ಹೊರಟಾಗ ಪರವಾಗಿಲ್ವೇ ಅಂದುಕೊಂಡೆ.
ಇದೀಗ ನನ್ನ ತಮ್ಮ ಮತ್ತವನ ಹೆಂಡತಿ ಮುಂಬೈನಿಂದ ಪ್ರೊಗ್ರೆಸ್ ರಿಪೋರ್ಟ್ ಕೊಡುತ್ತಿದ್ದಾರೆ… ಮಿಥುನ್‌ನ ಲ್ಯಾಪ್‌ಟಾಪ್‌ಗೀಗ ಕೆಲಸ ಕಡಿಮೆಯಾಗಿದೆ. ಮೈನಾ ಮೊಬೈಲ್‌ನಲ್ಲಿ ಮಾತಾಡೋದೂ ಅಷ್ಟಾಗಿ ಕಾಣ್ತಿಲ್ಲ. ಇಬ್ಬರೂ ಮನೆಗೆ ಬಂದವರ ಜೊತೆ, ಅಕ್ಕಪಕ್ಕದವರ ಜೊತೆ ತಾವಾಗಿ ಮಾತಾಡ್ತಾರೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s