ಕವಿ ಕುಮಾರರ ಕಾವ್ಯಸಂಗದಲ್ಲಿ…

Posted: ಆಗಷ್ಟ್ 7, 2011 in ಪುಸ್ತಕ ಪ್ರಪಂಚ

 

ಈ ರಾತ್ರಿ
ನಿನ್ನ ಹೆಸರಲ್ಲೊಂದು
ಕವಿತೆ ಬರೆಯುವೆ…
ಅಂತನ್ನುತ್ತಾ ಪ್ರೀತಿಯಿಂದ ಕವನಿಸುವ ಎಸ್. ಕುಮಾರ್‌ಗೆ ಕಾವ್ಯವೆಂದರೆ ಮತ್ತೇರಿಸುವಷ್ಟು ಪ್ರಿಯ. ಚೆಂದಕೆ ಕವನಗಳನ್ನು ಅನುವಾದಿಸುವ ಕುಮಾರ್ ಇದೀಗ ’ಚಳಿಗಾಲದ ಎಲೆ ಸಾಲು’ ಎಂಬ ಸ್ವರಚಿತ ಕವನ ಸಂಕಲವನ್ನೂ ಹೊರ ತಂದಿದ್ದಾರೆ. ಮಂಜುನಾಥ್ ಲತಾ ಹೊದಿಸಿದ ಸುಂದರ ಹೊದಿಕೆಯೊಳಗೆ ಕೆಲವು ಬೆಚ್ಚನೆಯ ಭಾವದ ಕವಿತೆಗಳಿವೆ. ಪ್ರೀತಿಯ ವಿಷಯದಲ್ಲಿ ಕವನಿಸುವಾಗ ಕುಮಾರ್‌ರ ಕಾವ್ಯಶಕ್ತಿಗೆ ವಿಶೇಷ ಸೊಗಸು:
ಈ ರಾತ್ರಿ ಬರೆವೆ
ನಿನಗಾಗಿ ಕವಿತೆ

ನೆನಪುಗಳು ಅಮರ
ವೆಂದು
ಸಾರುವುದಕ್ಕೆ.

ಬರೆದ ಪದಗಳೇ
ನಾಳೆ ನನ್ನ ಕೈ ಹಿಡಿಯುವುದೆಂಬ
ಭರವಸೆಗೆ  (ನಿನ್ನ ಹೆಸರಿನ ರಾತ್ರಿ)
-ಬರಿಯ ಪ್ರೀತಿಯ ಬಗೆಗಷ್ಟೇ ಅವರಿಗೆ ಈ ಭರವಸೆಯಲ್ಲ, ಕವಿತೆಯ ಬಗೆಗೂ. ಅವರಿಗೆ ಗೊತ್ತು ಒತ್ತಾಯಕ್ಕೆ ಕಟ್ಟಿದ್ದು ಕವನವಾಗುವುದಿಲ್ಲವೆಂದು:
ಚೆಲ್ಲಿ ಹೋಗುತ್ತಿವೆ ಪದಗಳು
ಯಾವ ಭಾವದ ಎಳೆಯಲ್ಲೂ
ಪೋಣಿಸಲಾಗುತ್ತಿಲ್ಲ…

“ಒತ್ತಾಯಕ್ಕೆ ಕಟ್ಟಬೇಡ
ಅದು ಕವಿತೆಯಲ್ಲ
ಮೋಡವನ್ನು ನಿನ್ನ
ಕೈಯಲ್ಲಿ ಮಾಡಲು ಆಗುವುದಿಲ್ಲ
ಮಳೆ ನಿನ್ನ ಕೈಯಲ್ಲಿ ಇಲ್ಲ”  (ಕಟ್ಟು)
ಆದರೂ,
ಸಿಡಿಯುತ್ತಲೇ ಇವೆ
ಅಕ್ಷರಗಳು  (ಕಟ್ಟು)
ಅನ್ನುತ್ತಾರೆ ಅವರು. ಅದಕ್ಕೇ ಗಾಢ ಭಾವಗಳು ಕವನವಾಗುವುದನ್ನು ತಡೆಯುವುದಿಲ್ಲ ಅವರು. ’ಮಳೆ ಹನಿಗಳ’ ಜೊತೆ ಜೊತೆಗೇ ಪ್ರೀತಿಯ ಹನಿಗಳೂ ಸೇರಿಕೊಂಡ ಬಗೆ ಇದು:
ಮಳೆ ನಿಂತ ಮೇಲೆ ಎಲೆ ಅಲುಗಿಸಿದರೆ
ನೀನು ಕೆನ್ನೆ ಮೇಲಿಟ್ಟ ಹನಿಗಳ ಸಾಲು
ಜೋಪಾನ ಎನ್ನುವಷ್ಟು ಹೊತ್ತಿಗೆ ಜಾರಿ ಹೋಗಿವೆ
ಎಲೆಗಳು ಮತ್ತೆ ಹಸಿಯಾಗಲು ಸಿದ್ಧವಾಗಿವೆ
ಗರಿಕೆ ಹುಲ್ಲಿನ ದಳದ ಮೇಲೆ ಅಲ್ಲವೆ
ನಾನು, ನೀನು ಹೆಸರು ಬರೆದಿದ್ದು
ಆ ಹೆಸರುಗಳು ಈಗ ನಮಗೂ ಕಾಣದು
ಆದರೆ ನಮ್ಮಿಬ್ಬರ ಸ್ಪರ್ಶ ಅವಕ್ಕೆ ಗೊತ್ತಿದೆ.  (ಮಳೆ ಹನಿಗಳು)
ಇದರಂತೆಯೇ ಪ್ರೇಮಿಯ ನಿರೀಕ್ಷೆಯಲ್ಲಿರುವ ’ಎಲ್ಲಿ ಹೋದೆ?’ ಕವನದ ಹರಿವು ಸರಾಗವಾಗಿ ಗಮನ ಸೆಳೆಯುತ್ತದೆ. ಇದೇ ಪ್ರೀತಿಯ ಜಾಡಿನಲ್ಲಿ, ’ಕಳೆದ ಸಾರಿ ಅಂಗಿಗೆ ಮೆತ್ತಿದ ನಿನ್ನ ಕೈಯ ಮದರಂಗಿ ಬಣ್ಣ’ ಅನ್ನುತ್ತಿರುವಾಗಲೇ,
ಸಂಕಟದ ಸೆಳಕು
ನಾಭಿಯೊಳು ಮೂಡಿದರೆ
ನಾನು ನಿರ್ಲಿಪ್ತನೂ ಆಗದೆ,
ಆಪ್ತನೂ ಆಗದೆ
ಅನ್ಯನ ಹಾಗೆ
ಗಡ್ಡದ ಕೂದಲನ್ನು ಪ್ರೀತಿಸುತ್ತಿದ್ದೆ (ನೀನು ಮತ್ತೆ ಮತ್ತೆ ಸಿಗುತ್ತಿರುವುದಾದರೂ ಹೇಗ?)
-ಎಂಬ ಆತ್ಮನಿವೇದನೆ.
ನಾಳೆ ಎದೆಯಲ್ಲೇ ಬೆಳಗೋ
ಬೆಳಕಲ್ಲಿ ಹೊಳೆಯೋ 
ಕಣ್ಣುಗಳನ್ನು ನೋಡಿಕೊಳ್ಳೋಣ (ಕನಸು) 
ಎಂಬ ಆಶಾವಾದ. ಜೊತೆಗೇ ಇದೆ ಹುಡುಕಾಟ:
ಬಿದ್ದ ಎಲೆಗಳೊಳಗೆ ಯಾರ ಹಾಡು?
ಹಿಂದೆ…
ಒಣಗಿದೆಲೆಗಳ ಮೇಲೆ ಸರಿವ ಹೆಜ್ಜೆ ಯಾರದು? (ಚಳಿಗಾಲದ ಎಲೆಸಾಲು)
ಗಂಭೀರ ವಿಷಯಗಳತ್ತಲೂ ತನ್ನ ಗಮನವಿದೆ ಎಂದು ಕವಿ ತನ್ನ ಕವನಗಳ ಮೂಲಕವೇ ಸಾರುತ್ತಾರೆ. ಮಲ್ಲಿಗೆಯ ಎರಡು ಭಿನ್ನ ವ್ಯಕ್ತಿತ್ವಗಳನ್ನು ಚಿತ್ರಿಸುವ ಶಕ್ತ ಕವಿತೆ ’ಮಲ್ಲಿಗೆ ಮತ್ತು ಅವಳು’. ಒಬ್ಬಾಕೆಯ ಮುಡಿಯೇರಿ ಹಗಲೆಲ್ಲ ಸಾಥ್ ನೀಡುವ ಮಲ್ಲಿಗೆ ಇನ್ನೊಬ್ಬಾಕೆಗೆ ರಾತ್ರಿಯೆಲ್ಲ ಜೊತೆಯಾಗುತ್ತದೆ. ಆಕೆ ಮನೆಗೆ ಬಂದು ಮಲ್ಲೆ ಹೂವನ್ನು ಮುಡಿಯಿಂದ ತೆಗೆದೆಸೆದರೆ ಈಕೆ ಕತ್ತಲಾದ ಮೇಲೆ ರಸ್ತೆಯ ಮೂಲೆಗೆ ಬಂದು ಮಲ್ಲಿಗೆ ಕೊಂಡು ಮುಡಿಯುತ್ತಾಳೆ.
’ಎರಡು ಬಾಗಿಲ ಮನೆ’ ಕವನ ಬರೆಬರೆಯುತ್ತ ಬೆಳೆಯುತ್ತ ಹೋಗುವ ರೀತಿಯೇ ಸುಂದರ. ಇದು ಕೊನೆಗೊಳ್ಳುವ ರೀತಿ ನೋಡಿ:
ಬೆಳಕು ಇಲ್ಲಿ..
ಅನಾಥ.. ಜೀರಂಗಿ ಕೂಗು,
ಬೆಕ್ಕಿನ ಹೆಜ್ಜೆಗೆ ರಹದಾರಿ
ಅಣ್ಣನ ಕಳ್ಳಾಟ,
ಅಕ್ಕನ ಸಂಭ್ರಮದ ಮಲ್ಲಿಗೆ

ಇಲ್ಲಿನ ಜಗತ್ತಿನಲ್ಲಿ ಎಲ್ಲರೂ ಸೇರುತ್ತಾರೆ..
ಇದು ಏಕಾಂತ..
ಸದ್ದೇ ಇಲ್ಲದೆ ಲೋಕಾಂತ.

ಅಮ್ಮನ ಮುಸುರೆ ಕೈಯಿಂದ ಜಾರಿದ
ನಿಂಬೆ ಬೀಜ ಮೊಳೆತು ನಿಲ್ಲುವುದು. (ಎರಡು ಬಾಗಿಲ ಮನೆ)
ಸಹಜ ಲೋಕವ್ಯವಹಾರಗಳೂ ಕುಮಾರ್ ಕೈಯಲ್ಲಿ ಕವನವಾಗುತ್ತವೆ:
ಕೊಳದೊಳಗೆ ಬಿದ್ದ
ಕಲ್ಲು ಮಾತಾಡುವುದಿಲ್ಲ
ಸುಖಾ ಸುಮ್ಮನೆ
ಮಾತುಗಳ ವರ್ತುಲ (ಕೊಳಕೆ ಬಿದ್ದ ಕಲ್ಲು)
-ಯಾರೋ ಬದುಕಿಗೆಸೆದ ಕಲ್ಲೂ ತಲ್ಲಣಗಳನ್ನೆಬ್ಬಿಸುವುದೂ ಹೀಗೆಯೇ ಅಲ್ಲವೇ?
ಇಂಥದೇ ನೋವಿನಲ್ಲಿ ಸಿಲುಕಿದವರ ಮುಂದೆ ನಿಂತು ಸಂವೇದನಾ ರಹಿತರಾಗಿ ’ಏನನಿಸುತ್ತದೆ ನಿಮಗೆ?’ ಅಂದರೆ ಹೇಗೆ? ಕವಿಮನಸ್ಸು ಟಿವಿ ಮಾಧ್ಯಮಗಳ ಈ ಸುದ್ದಿಗಾರಿಕೆಯ ಬಗೆಗೆ ವ್ಯಂಗ್ಯವಾಡಿರುವುದು “ಏನನಿಸುತ್ತಿದೆ ನಿಮಗೆ?’ ಕವನದಲ್ಲಿ.
ಶವದ ಮುಂದೆ 
ಕಟ್ಟೆಯೊಡೆದ ಕಣ್ಣೀರಿಗೆ
’ಏನನ್ನಿಸುತ್ತಿದೆ ನಿಮಗೆ?’
ಎಂಬ ಪ್ರಶ್ನೆ
ಹೀಗೆ ಪ್ರಶ್ನಿಸುವವರನ್ನೆಲ್ಲ ’ಏನೂ ಅನ್ನಿಸುವುದಿಲ್ಲವೆ ನಿನಗೆ?’ ಎಂದು ಯಾರು ಕೇಳುತ್ತಾರೆ ಎಂಬುದು ಅವರ ಬೇಸರ. ಈ ಎಲ್ಲ ಜಗದ ಜಂಜಾಟಗಳ ನಡುವೆ ’ಮುಕ್ತಿ, ಸಾವಿನ ಬಗೆಗೂ ಕವನಿಸುತ್ತಾರವರು. ನಾವೆಷ್ಟೇ ಹೇಳಿದರೂ ಬದುಕು ’ಇಷ್ಟೇ..’ ಅನಿಸುತ್ತದೆ ಕವಿಗೆ..
ಅಮ್ಮನ ಪಾತ್ರೆಯಲಿ ನೆರಳು
ಅದು ಅಪ್ಪನದಲ್ಲ
ತಂಗಿಯ ಹೆರಳಲ್ಲಿ ಬೆರಳ ಹಾದಿ
ಅಣ್ಣನದಲ್ಲ (ಇಷ್ಟೇ..)
ಮಗ್ಗದಲ್ಲಿ ನೂಲನ್ನು ನೇಯುವ ಪ್ರಕ್ರಿಯೆಯಲ್ಲಿಯೂ ನೋವು ಮಿಳಿತವಾಗಿರುವ ಪ್ರತಿಮೆಯನ್ನು ನೇಯ್ದಿರುವುದು ’ನೋವ ನೂಲು’ ಕವನದಲ್ಲಿ. ಸಂಕಲನದ ಒಳ್ಳೆಯ ಕವನಗಳಲ್ಲಿ ಇದೂ ಒಂದು. ನೋಯುವ ನೂಲು,
ನೂಲುವ ಬೆರಳ
ಕಾವಿಗಾದರೂ
ಸುಟ್ಟು ಹೋಗದೆ..
ಎಂಬ ಆಶಯ ಕವಿಯಲ್ಲಿದೆಯಾದರೂ ಅದು ಸುಟ್ಟು ಹೋಗದೆಂದು ಅವರಿಗೂ ಗೊತ್ತಿದೆ. ಅದಕ್ಕೇ ಅವಳ ಕಣ್ಣ ನೆರಳಿನ ಮಿಂಚಿಗಾಗಿ ಕಾಯುತ್ತಿರುವುದು. ಇವೆಲ್ಲವುಗಳೊಂದಿಗೆ ಚಿತ್ರದಂತಿರುವ ’ಒಂದು ಚೌಕಟ್ಟಿನ ಪದ’ ಕನ್ನಡಕ್ಕೆ ಹೊಸ ಪ್ರಯೋಗ.
ಬಹುಪಾಲು ಪ್ರೇಮಕವನಗಳೇ ಇರುವ ’ಚಳಿಗಾಲದ ಎಲೆ ಸಾಲು’ ತನ್ನ ಸಹಜ ಅಭಿವ್ಯಕ್ತಿಯಿಂದ ಗಮನ ಸೆಳೆಯುತ್ತದೆ. ತಮ್ಮ ಅನುಭವವನ್ನು ಅದು ಇದ್ದಂತೆಯೇ ಕವನದಲ್ಲಿ ಕಟ್ಟಿಕೊಡಲು ಹೊರಟಾಗಲೆಲ್ಲ ಕವಿ ಗೆಲ್ಲುತ್ತಾರೆ. ಅಲ್ಲಲ್ಲಿ ನಿತ್ಯ ಬದುಕಿನ ಕುರಿತ ಅವರ ಸೂಕ್ಷ್ಮ ನಿರೀಕ್ಷಣೆಗಳೂ ಕಾವ್ಯರೂಪದಲ್ಲಿ ಒಡಮೂಡಿ ಸಮರ್ಥವಾಗಿಯೇ ಓದುಗರ ತೆಕ್ಕೆಗೂ ಬರುತ್ತವೆ. ಇಲ್ಲಿನ ಕವನಗಳೆಲ್ಲವೂ ಶಾಶ್ವತವಾಗಿ ನೆನಪಿನಲ್ಲುಳಿಯುವುದಿಲ್ಲವಾದರೂ ಇಷ್ಟವಾಗಿ ಇನ್ನೊಮ್ಮೆ ಓದಿಸುವ ಸಾಲುಗಳು ಅಲ್ಲಲ್ಲಿ ಸಿಗುತ್ತವೆ. ಇಡಿಯಾಗಿ ಗಮನಾರ್ಹವೆನಿಸುವ ಕೆಲವು ಕವನಗಳು ಅವರ ಕವಿತಾ ಸಾಮಥ್ಯಕ್ಕೆ ಸಾಕ್ಷಿಯಾಗುತ್ತವೆ. ಕುಮಾರ್ ಕವಿಯಾಗಿ ಇನ್ನಷ್ಟು ಬೆಳೆಯಬಲ್ಲರು ಎಂಬುದಕ್ಕೆ ಇಷ್ಟು ಸಾಕು.
ಟಿಪ್ಪಣಿಗಳು
 1. Ganapagni ಹೇಳುತ್ತಾರೆ:

  ಅಮ್ಮನ ಪಾತ್ರೆಯಲಿ ನೆರಳು
  ಅದು ಅಪ್ಪನದಲ್ಲ
  ತಂಗಿಯ ಹೆರಳಲ್ಲಿ ಬೆರಳ ಹಾದಿ
  ಅಣ್ಣನದಲ್ಲ (ಇಷ್ಟೇ..)
  – ನಾ ಮೆಚ್ಚಿಕೊಂಡ ಸಾಲುಗಳಿವು.
  ಅದರಲ್ಲೂ “ಒಂದು ಚೌಕಟ್ಟಿನ ಪದ” ಕನ್ನಡಕ್ಕೆ ಹೊಸ ಪ್ರಯೋಗ. ನನ್ನ ಪ್ರಕಾರ ಎದು ಕೇವಲ ಕವಿತೆಯಾಗಿ ಅಸ್ಟೇ ಉಳಿಯಲಾರದು. ಇದೊಂದು ಚಿತ್ರ ಕೂಡ ಹೌದು. ಸುಮ್ನೆ ಯೋಚಿಸಿ… ಆ ಅಕ್ಷರಗಳು ಅರ್ಥವಾಗದೇ ಇದ್ದಿದ್ದರೆ ಕೇವಲ ಚಿತ್ರವಾಗಿಯೇ ಉಳಿಯುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಇವತ್ತಿನ ಸಂದರ್ಭದ ನವ್ಯ ಕಲಾಕೃತಿಗಳಲ್ಲಿ ಅಕ್ಷರಗಳು ಒಂದು ಆಕೃತಿಯಾಗಿ, ರೂಪವಾಗಿ ಬಳಸಿಕೊಳ್ಳಲಾಗುತ್ತದೆ. ಅಂತದೇ ಒಂದು ಪ್ರಯತ್ನ ಈ “ಒಂದು ಚೌಕಟ್ಟಿನ ಪದ”.
  ಚಿತ್ರಗಳ “ರೂಪ’ದ ಬಗ್ಗೆ ಹೀಗೊಂದು ಮಾತಿದೆ. ಅದೇನೆಂದರೆ, ಒಂದು ಬಣ್ಣ ಆವರಿಸುವ ಸ್ಥಳವನ್ನು ರೂಪ(form ) ಎನ್ನಲಾಗುತ್ತದೆ. ಚಿತ್ರಕಾರ ಚೌಕ ಅಥವಾ ಆಯತಾಕೃತಿಯ ಪೇಪರ್ , ಕ್ಯಾನ್ವಾಸ್ ನಲ್ಲಿ ಚಿತ್ರ ರಚಿಸುತ್ತಾನೆ. ಯೋಜನಬದ್ದವಾಗಿ ವಿವಿಧ ಆಕೃತಿಗಳನ್ನು ಬರೆಯುತ್ತಾನೆ. ಬೇರೆ ಬೇರೆ ಬಣ್ಣಗಳನ್ನು ಬಳಸಿಕೊಳ್ಳುತ್ತಾನೆ. ಈ ಬಣ್ಣ ಲೇಪಿಸಿದ ಭಾಗವನ್ನೇ “ರೂಪ” ಎಂದು ಕರೆಯ ಲಾಗುತ್ತದೆ. ಬಣ್ಣ ಬಲಿಯದೇ ಇದ್ದರೂ ಆ ಭಾಗ ಒಂದು ರೂಪವಾಗಿ ಇರಲಾರದು ಎಂದೇನು ಇಲ್ಲ. ಹಾಗೆ ಈ ರೂಪದಲ್ಲಿ ಒಂದೇ ತೀಕ್ಷ್ಣತೆಯ ಬಣ್ಣವೂ ಇರಬೇಕಾಗಿಲ್ಲ.
  ಇಂಥ ಕೆಲವು ಅಂಶಗಳನ್ನೂ ಉಳ್ಳ ಕಾಲಾಕೃತಿಯನ್ನಾಗಿಯೂ “ಒಂದು ಚೌಕಟ್ಟಿನ ಪದ” ವನ್ನು ನೋಡಲು ಸಾಧ್ಯ. ಆ ಚಿತ್ರ ಓದುಗರ ಮನಕ್ಕೂ ಸ್ಪಂದನೆ ನೀಡುತ್ತೆ ಎನ್ನುವುದೇ “ಒಂದು ಚೌಕಟ್ಟಿನ ಪದ”ದ ವಿಶೇಷ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s