(ಪೀಪ್ಲಿ ಲೈವ್) ರೈತನ ಆತ್ಮಹತ್ಯಾ ಪ್ರಸಂಗವೂ, ಮಾಧ್ಯಮಗಳ ಅಮಾನವೀಯತೆಯೂ, ರಾಜಕೀಯ ಲೆಕ್ಕಾಚಾರಗಳೂ…

Posted: ಆಗಷ್ಟ್ 25, 2011 in ಸಿನಿಮಾ

ಈ ಸಿನೆಮಾ ನೋಡಲು ಶುರುಮಾಡಿದಾಕ್ಷಣ ನಾವು ನಗಲಾರಂಭಿಸುತ್ತೇವೆ. ಆದರೆ ನೋಡುತ್ತ ಹೋದಂತೆ ನಗುವಿನ ಜೊತೆ ಯಾವುದೋ ಒಂದು ಬಗೆಯ ಖೇದ, ಅಸಹಾಯಕತೆ, ದಿಗ್ಭ್ರಮೆಗಳು  ಮನಸ್ಸನ್ನು ಕಾಡುತ್ತವೆ. ಮುಂದೆಯೂ ಆಗಾಗ ನಗು ಮೂಡುತ್ತಲೇ ಇರುತ್ತದೆ, ವಿಷಾದದ ಛಾಯೆಯೊಂದಿಗೆ, ವ್ಯಂಗ್ಯದ ಎಳೆಯೊಂದಿಗೆ.
‘ಪೀಪ್ಲಿ ಲೈವ್’ ಚಿತ್ರದ ಶಕ್ತಿ ಇದು. ನಗಿಸುತ್ತಲೇ ವಾಸ್ತವದ ಚಿತ್ರಣವನ್ನು ಬಿಚ್ಚಿಡುವ, ಸಿಹಿಯ ಕವಚದೊಳಗೆ ವಾಸ್ತವದ ಕಹಿಯನ್ನು ಕಟ್ಟಿಕೊಡುವ ಅಪರೂಪದ ಚಿತ್ರ ಇದು.
ಆರಂಭದಲ್ಲಿ ರೈತರ ಆತ್ಮಹತ್ಯೆ ಕುರಿತ ಚಲನಚಿತ್ರ ಎಂಬಂತೆ ಭಾಸವಾಗುವ ಪೀಪ್ಲಿ ಲೈವ್, ಚಿತ್ರದ ಒಟ್ಟು ೨ ಗಂಟೆಗಳ ಅವಧಿಯಲ್ಲಿ ಇಡಿಯ ಭಾರತದ ಹಲವು ಕ್ಷೇತ್ರಗಳ ವಸ್ತುಸ್ಥಿತಿಯನ್ನು ತೆರೆದಿಡುವ ರೀತಿಯೇ ಅನನ್ಯ.
ಪೀಪ್ಲಿ ಎಂಬ ಪುಟ್ಟ ಗ್ರಾಮ. ಇಲ್ಲಿ ಬುಧಿಯಾ ಮತ್ತು ನಾಥ ಎಂಬ ಇಬ್ಬರು ಅಣ್ಣತಮ್ಮಂದಿರು. ಕೃಷಿಗಾಗಿ ಸರ್ಕಾರ ಕೊಟ್ಟ ಸಾಲ ಪಡೆದ ಈ ಸಹೋದರರಿಗೆ ಅದರ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಈಗ ಸಾಲ ಪಾವತಿಸದಿದ್ದರೆ ಪಿತ್ರಾರ್ಜಿತವಾಗಿ ಬಂದ ಆಸ್ತಿ ಸರ್ಕಾರದ ಪಾಲಾಗುವ ಹಂತ ಬಂದಿದೆ. ಇದಕ್ಕೆ ಪರಿಹಾರ ಹುಡುಕುತ್ತಾ ಹೋದಾಗ ಸಾಲತೀರಿಸಲಾಗದೆ ಆತ್ಮಹತ್ಯೆ ಮಾಡಿದ ರೈತರ ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಹಣ ನೀಡುವ ಸರ್ಕಾರದ ಇನ್ನೊಂದು ಯೋಜನೆಯ ಬಗೆಗೆ ತಿಳಿಯುತ್ತದೆ. ಸರಿ, ಭೂಮಿಯನ್ನು ಉಳಿಸಲು ಇಬ್ಬರಲ್ಲೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಕಿರಿಯವನಾದ ನಾಥ ಆತ್ಮಹತ್ಯೆ ಮಾಡಿಕೊಳ್ಳುವುದೆಂದು ನಿರ್ಧಾರವಾಗುತ್ತದೆ.
ಆದರೆ, ಈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆನ್ನುವ ವಿಷಯ ಸ್ಥಳೀಯ ಪತ್ರಿಕೆಯ ವರದಿಗಾರ ರಾಕೇಶ್‌ನ ಕಿವಿಗೆ ಬೀಳುತ್ತದೆ. ಈತ ತಕ್ಷಣವೇ ಜಾಗೃತನಾಗಿ ಇಬ್ಬರೂ ಸಹೋದರರನ್ನು ಮಾತನಾಡಿಸಿ ವರದಿ ಮಾಡುತ್ತಾನೆ. ಈ ವರದಿ ರಾಷ್ಟ್ರಮಟ್ಟದ ನ್ಯೂಸ್ ಚಾನೆಲ್‌ನ ಆಂಕರ್/ವರದಿಗಾರ್ತಿಯನ್ನೂ ತಲುಪಿ ಆಕೆಯೂ ನಾಥನನ್ನು ಸಂದರ್ಶನ ಮಾಡಿ ಸುದ್ದಿ ಪ್ರಸಾರ ಮಾಡುತ್ತಾಳೆ. ಇದು ಇತರ ಟಿವಿ ಚಾನೆಲ್‌ಗಳ ಗಮನಕ್ಕೆ ಬರುತ್ತಿದ್ದಂತೆ ಅವರೆಲ್ಲರೂ ಸಾಲುಸಾಲಾಗಿ ನಾಥನ ಮನೆಯ ಮುಂದೆ ನೆರೆಯುತ್ತಾರೆ. ರೈತನೊಬ್ಬನ ಆತ್ಮಹತ್ಯೆಯ ದೃಶ್ಯವನ್ನು ನೇರಪ್ರಸಾರ ಮಾಡುವ ಅವಕಾಶ ಯಾರಿಗೆ ತಾನೇ ಬೇಡ? ಒಟ್ಟಿನಲ್ಲಿ, ಎಲ್ಲಾ ಚಾನೆಲ್‌ಗಳ ಸಿಬ್ಬಂದಿಯೂ ನಾಥನ ಮನೆಯ ಮುಂದೆ ವಾಸ್ತವ್ಯ ಹೂಡುತ್ತಾರೆ. ಎಲ್ಲಿ ನೋಡಿದರೂ ನಾಥ ಹಾಗೂ ಆತನ ಮನೆಯವರನ್ನು, ನೆರೆಯವರನ್ನು, ಊರವರನ್ನು ಸಂದರ್ಶಿಸುವ ಟಿವಿ ಚಾನೆಲ್‌ಗಳ ಮಂದಿ. ಇವರನ್ನು ನೋಡಲು ಊರು, ಪರವೂರುಗಳಿಂದ ಬಂದವರು ಇನ್ನೆಷ್ಟೋ ಜನ. ಒಟ್ಟಿನಲ್ಲಿ ಅಲ್ಲೊಂದು ಜಾತ್ರೆಯ ದೃಶ್ಯಾವಳಿ ಆರಂಭವಾಗಿಬಿಡುತ್ತದೆ.
ಚಾನೆಲ್‌ಗಳ ಹಾವಳಿ ಹೀಗಾದರೆ ರಾಜಕೀಯದ ಮಂದಿಯ ಉಪದ್ವ್ಯಾಪ ಬೇರೆಯದೇ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರೋ ಹಿನ್ನೆಲೆಯಲ್ಲಿ ಇದನ್ನು ತಂತಮ್ಮ ಲಾಭಕ್ಕಾಗಿ ಬಳಸುವ ಉದ್ದೇಶ ಎಲ್ಲರದೂ. ರಾಜ್ಯಸರ್ಕಾರ ನಾಥನಿಗಾಗಿ ಹ್ಯಾಂಡ್ ಪಂಪ್ ಕಳುಹಿಸಿ ಸಂತೈಸಿದರೆ ಸ್ಥಳೀಯ ರಾಜಕಾರಣಿಯೊಬ್ಬ ವಿದ್ಯುತ್ ಇಲ್ಲದ ನಾಥನ ಮನೆಗೆ ಟಿವಿ ತಂದು ಜನಮನ ಗೆಲ್ಲುವ ಪ್ರಯತ್ನ ಮಾಡುತ್ತಾನೆ! ರಾಜ್ಯದ ಮುಖ್ಯಮಂತ್ರಿ ಮತ್ತು ಕೃಷಿಮಂತ್ರಿ ಇದೇ ವಿಷಯದ ನೆಪದಲ್ಲಿ ತಮ್ಮ ಹಳೆಯ ದ್ವೇಷ ಕಾರಿಕೊಳ್ಳುತ್ತಾರೆ. ವಿರೋಧ ಪಕ್ಷದವರಿಗೆ ನಾಥ ಸತ್ತರೆ ಆಡಳಿತ ಪಕ್ಷದವರನ್ನು ಬಲಿಹಾಕಲು ಬಲವಾದ ಅಸ್ತ್ರವೊಂದು ಸಿಕ್ಕಂತಾಗುತ್ತದೆ ಎಂಬ ನಿರೀಕ್ಷೆ. ಹೀಗೆ ಎಲ್ಲರ ಸೋಗಲಾಡಿತನವನ್ನು ಹೊರಹಾಕುತ್ತಾ ಹೋಗುತ್ತದೆ ನಾಥನ ಆತ್ಮಹತ್ಯಾ ಪ್ರಸಂಗ.
ಚಿತ್ರ ಹಲವು ಹಂತಗಳಲ್ಲಿ ಪ್ರೇಕ್ಷಕರಿಗೆ ಶಾಕ್ ನೀಡುತ್ತಾ ಹೋಗುತ್ತದೆ. ಭೂಮಿ ಉಳಿಸುವುದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುವ ಸಹೋದರರು ಮೊದಲು ತಾನು ತಾನೆಂದು ಆತ್ಮಹತ್ಯೆಗೆ ಮುಂದಾಗುತ್ತಾರೆ. ಕೊನೆಗೊಮ್ಮೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಕಿರಿಯವನಾದ ನಾಥ ಹೇಳಿದ್ದೇ ತಡ, ಅಣ್ಣ ಬುಧಿಯಾ ‘ಪಕ್ಕಾ?’ ಅನ್ನುತ್ತಾನೆ. ಈಗ ನಾಥ ತನ್ನ ಮಾತಿನ ಉರುಳಲ್ಲಿ ತಾನೇ ಸಿಕ್ಕಿಹಾಕಿಕೊಳ್ಳುತ್ತಾನೆ. ಬದುಕುವ ಇಚ್ಛೆ, ಭೂಮಿಯನ್ನು ಉಳಿಸಿಕೊಳ್ಳುವ ಅನಿವಾರ್‍ಯತೆ ಸಹೋದರನನ್ನು ಆತ್ಮಹತ್ಯೆಗೂ ತಳ್ಳುವಂತಹ ನಿಷ್ಕಾರುಣ ಕ್ರಿಯೆಗೆ ಹಚ್ಚುವ ಪ್ರಸಂಗವೇ ಪ್ರೇಕ್ಷಕರಿಗಾಗುವ ಮೊದಲ ತಣ್ಣಗಿನ ಆಘಾತ.
ಮುಂದಿನದು ಮೀಡಿಯಾ ಮೇನಿಯಾ. ಒಂದು ಚಾನೆಲ್‌ನಲ್ಲಿ ಎಕ್ಸ್‌ಕ್ಲೂಸಿವ್ ಸುದ್ದಿ ಬಂದರೆ ಅದು ನಮ್ಮಲ್ಲೇಕೆ ಬರಲಿಲ್ಲ ಎಂದು ಅಬ್ಬರಿಸುವ ಇನ್ನೊಂದು ಸುದ್ದಿವಾಹಿನಿಯ ಮುಖ್ಯಸ್ಥ, ತಕ್ಷಣವೇ ಆ ‘ಟಿಆರ್‌ಪಿ’ ಸುದ್ದಿಯ ಬೆಂಬತ್ತುವ ನೂರಾರು ಚಾನೆಲ್‌ಗಳು, ಏನಕೇನ ಪ್ರಕಾರೇಣ ರೈತ ಸಾಯುವ ಸುದ್ದಿ ಪ್ರಸಾರ ಮಾಡಲು ಹದ್ದುಗಳಂತೆ ಕಾದುಕೂರುವ ಪತ್ರಕರ್ತರು, ಹೆಣ್ಣುಮಕ್ಕಳ ಮೇಲೆ ‘ದರ್ಶನ’ ಬಂದಂತೆ ನಟಿಸಲು ಹೇಳಿ ಅವರ ಬಾಯಿಂದಲೇ ನಾಥ ಸಾಯಬೇಕು ಎಂಬಂತೆ ರೈತನ ಚರಮಗೀತೆಯನ್ನು ಪ್ರಸಾರ ಮಾಡುವ ಪತ್ರಕರ್ತ, ಎರಡು ವೃತ್ತಿಪರ ಚಾನಲ್‌ಗಳ ಮಧ್ಯೆ ಇರೋ ವೈರ… ಹೀಗೆ ಮಾಧ್ಯಮ ಪ್ರಪಂಚದ ಆಗುಹೋಗುಗಳಿಗೆಲ್ಲ ಸಾಕ್ಷಿಯಾಗುತ್ತದೆ ಸಿನಿಮಾ. ಟಿಆರ್‌ಪಿಗಾಗಿ ರೈತನೊಬ್ಬನ ಸಾವನ್ನು ಬಯಸುವಷ್ಟು ಅಮಾನವೀಯರಾಗುವ ಮಾಧ್ಯಮಗಳು ಅಸಹ್ಯ ಹುಟ್ಟಿಸುತ್ತವೆ.
ಈ ಮಾಧ್ಯಮಗಳ ಮೇಲಾಟ, ಇಲ್ಲಿನ ವರದಿಗಾರರ ಚಿತ್ರಣ ಇಂದಿನ ರಾಷ್ಟ್ರೀಯ ಸುದ್ದಿವಾಹಿನಿಗಳನ್ನು, ಅಲ್ಲಿನ ಸ್ಟಾರ್ ಪತ್ರಕರ್ತರನ್ನು ನೆನಪಿಸುತ್ತವೆಯಾದರೂ ಬಹುತೇಕ ಇಂತಹುದೇ ಸ್ಥಿತಿ ನಮ್ಮ ಕನ್ನಡ ಮಾಧ್ಯಮರಂಗದಲ್ಲೂ ಇದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಬಾಲಕನೊಬ್ಬ ಕೊಳವೆ ಬಾವಿಗೆ ಬಿದ್ದರೆ ಆತನ ಸಾವು-ಬದುಕಿನ ಹೋರಾಟವನ್ನೇ ನೇರಪ್ರಸಾರ ಮಾಡುವ, ಸೆಲೆಬ್ರಿಟಿಯೊಬ್ಬರು ಆಸ್ಪತ್ರೆ ಸೇರಿದರೆ ಅವರ ಮರಣವಾರ್ತೆಗಾಗಿ ಆಸ್ಪತ್ರೆಯ ಹೊರಗೆ ಹದ್ದಿನಂತೆ ಕಾಯುವ, ಸ್ವಇಚ್ಛೆಯಿಂದ ಸನ್ಯಾಸಿನಿಯೊಬ್ಬಳು ವಿವಾಹವಾದರೆ ಆಕೆಯ ವೈಯಕ್ತಿಕ ಬದುಕಿನಲ್ಲೂ ಮೂಗುತೂರಿಸುವ.. ಹೀಗೆ ಕನ್ನಡ ಸುದ್ದಿವಾಹಿನಿಗಳೇ ಮಿತಿಮೀರಿದ ರೀತಿಯಲ್ಲಿ ಸುದ್ದಿಯನ್ನು ಬೆಂಬತ್ತಿರುವುದು ಪ್ರಜ್ಞಾವಂತರಿಗೆ ಈಗಾಗಲೇ ಗೊತ್ತು.
ಮಾಧ್ಯಮದವರೆಲ್ಲ ನಾಥನ ಸಾವಿಗಾಗಿ ಕಾಯುತ್ತಿರುವಾಗ ಅದೇ ಗ್ರಾಮದಲ್ಲಿ ರೈತನೊಬ್ಬ ಹಸಿವೆಯಿಂದ ಅಸುನೀಗಿದ ಘಟನೆ ಮಾತ್ರ ಸುದ್ದಿಯೇ ಆಗುವುದಿಲ್ಲ. ಟಿಆರ್‌ಪಿ ಹುಚ್ಚಿನಲ್ಲಿ ನಿಜವಾದ ಸುದ್ದಿ ಸತ್ತೇ ಹೋಗಿರುವುದರ ಸಂಕೇತವಿದು. ಕೊನೆಯಲ್ಲಿ ಸ್ಥಳೀಯ ಪತ್ರಕರ್ತ ರಾಕೇಶ್ ಸಾಯುವ ಸನ್ನಿವೇಶವೂ ನಿಜವಾದ ಪತ್ರಕರ್ತ ಸತ್ತಿದ್ದಾನೆ ಎಂಬುದರ ಸೂಚಕ. ಅದು ಹೇಗೋ ಏನೋ ಈ ಸುದ್ದಿವಾಹಿನಿಗಳು ಟಿಆರ್‌ಪಿಯ ಸುಳಿಗೆ, ಬ್ರೇಕಿಂಗ್ ನ್ಯೂಸ್‌ನ ಸ್ಪರ್ಧೆಗೆ ಸಿಲುಕಿಬಿಟ್ಟಿವೆ. ಸಹಜವಾಗಿಯೇ ಇಲ್ಲಿ ಉದ್ಯೋಗಕ್ಕೆಂದು ಬಂದಿರುವ ಎಲ್ಲರೂ ಇದರಲ್ಲಿ ಸಿಲುಕಿದ್ದಾರೆ. ಈ ವೃತ್ತಿ ಆಯ್ಕೆ ಮಾಡಿದ ಮೇಲೆ ಅವರಿಲ್ಲಿ ಕೆಲಸ ಮಾಡಲೇಬೇಕು. ನಾಥನ ಆತ್ಮಹತ್ಯಾ ಪ್ರಕರಣಕ್ಕೆ ವೀಕ್ಷಕರ ಮನ್ನಣೆ ಇದೆ ಎಂದಾದಲ್ಲಿ ಇವರೂ ಆತನ ಮನೆಮುಂದೆ ಕಾಯಲೇಬೇಕು. ಇನ್ನೊಂದು ನೈಜ ಸುದ್ದಿಯನ್ನು ಕಡೆಗಣಿಸಿಯಾದರೂ ಈ ಸುದ್ದಿಯನ್ನು ಗಳಿಸಲೇಬೇಕು. ಈ ವಿಷವೃತ್ತದಿಂದ ಹೊರಬರುವ ದಾರಿಯನ್ನು ಚಿತ್ರ ಹೇಳುವುದಿಲ್ಲ, ಹೇಳಬೇಕಾಗಿಯೂ ಇಲ್ಲ. ಆದರೆ ಸಮಸ್ಯೆಯನ್ನು ಸಮರ್ಥವಾಗಿ ಬಿಚ್ಚಿಡುತ್ತದೆ. ಇದಕ್ಕಾಗಿ ಕೆಲವೊಂದು ಕಡೆಗಳಲ್ಲಿ ಮಾಧ್ಯಮಗಳನ್ನು ಕೊಂಚ ಅತಿರೇಕವೆನಿಸುವಷ್ಟು ವಿಡಂಬಿಸಿದ್ದರೂ ಅದು ಪ್ರೇಕ್ಷಕರ ಮನಸ್ಸಿಗೆ ನಾಟುವಲ್ಲಿ ಪೂರಕವಾಗುವುದೂ ಹೌದು. ಆದರೆ, ಇವೆಲ್ಲವುಗಳ ಮೇಲೆ ವ್ಯಂಗ್ಯದ ಬೆಳಕು ಚೆಲ್ಲುವ ಭರದಲ್ಲಿ ಆ ರೈತ ಕುಟುಂಬದ ನೋವು, ಆತಂಕಗಳು ನಿರೀಕ್ಷಿತ ಪ್ರಾಮುಖ್ಯ ಪಡೆದಿಲ್ಲ ಎನ್ನಿಸುವುದೂ ನಿಜ.
ಪೀಪ್ಲಿ ಲೈವ್‌ನ ಚಿತ್ರಕಥೆ, ನಿರ್ದೇಶನ ಅನುಶಾ ರಿಝ್ವಿ ಅವರದು. ಈಕೆ ಎನ್‌ಡಿಟಿವಿ ಯಲ್ಲಿ ಕೆಲಸ ಮಾಡಿದವರಂತೆ. ಹಾಗಾಗಿ ಟಿವಿ ಮಾಧ್ಯಮದ ಒಳಹೊರಗನ್ನು, ರಾಜಕಾರಣಿಗಳ ನಿಜಬಣ್ಣವನ್ನೆಲ್ಲ ಬಲ್ಲವರೀಕೆ. ಆದ್ದರಿಂದಲೇ ಚಿತ್ರ ಬಲು ಸಹಜವಾಗಿ ಮೂಡಿಬಂದಿದೆ. ಚೊಚ್ಚಲ ನಿರ್ದೇಶನ, ಗ್ಲಾಮರ್ ಇಲ್ಲದ ಕಥೆ, ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲದ ಚಿತ್ರ.. -ಇಷ್ಟೆಲ್ಲಾ ರಿಸ್ಕ್‌ಗಳಿದ್ದರೂ ಈ ಚಿತ್ರಕ್ಕೆ ಹಣ ಹೂಡಿದ ಆಮೀರ್ ಖಾನ್ ಈ ಮೂಲಕವೇ ಗ್ರೇಟ್ ಅನ್ನಿಸಿಬಿಡುತ್ತಾರೆ. ಎಲ್ಲೋ ಸಾಕ್ಷ್ಯಚಿತ್ರವಾಗಿ ಯಾರ ಗಮನಕ್ಕೂ ಬಾರದಂತೆ ಮಾಯವಾಗಿಬಿಡುತ್ತಿದ್ದ ವಿಷಯವನ್ನು ಚಲನಚಿತ್ರವಾಗಿಸಿ ಹಲವರ ಗಮನಕ್ಕೆ ತರುವಂತೆ ಮಾಡಿದ್ದೂ ಈ ಚಿತ್ರದ ನಿರ್ಮಾತೃಗಳ ಹೆಚ್ಚುಗಾರಿಕೆ.
ಹೆಚ್ಚು ಸಂಭಾಷಣೆಯಿಲ್ಲದಿದ್ದರೂ ಮುಖಭಾವದಲ್ಲೇ ನೂರೊಂದು ಭಾವವನ್ನು ವ್ಯಕ್ತಪಡಿಸುವ ಓಂಕಾರ್‌ದಾಸ್ ಮಾಣಿಕ್‌ಪುರಿ(ನಾಥ), ಸಹಜನಟ ರಘುವೀರ್ ಯಾದವ್(ಬುಧಿಯಾ), ಹಾಸಿಗೆ ಹಿಡಿದಿದ್ದರೂ ನಗುವಿನಲೆ ತರಿಸುವ ತಾಯಿಯಾಗಿ ಪಾತ್ರಮಾಡಿದ ಫರೂಕ್ ಜಾಫರ್, ಕೃಷಿಸಚಿವ ಸಲೀಂ ಕಿದ್ವಾಯಿಯಾಗಿ ಕಾಣಿಸಿಕೊಂಡ ನಾಸಿರುದ್ದೀನ್ ಶಾ.. ಹೀಗೆ ಎಲ್ಲರೂ ತಮ್ಮ ಸಹಜಾಭಿನಯದ ಮೂಲಕ ನಿರ್ದೇಶಕರ ಕೆಲಸ ಸುಲಭ ಮಾಡಿದ್ದಾರೆ. ಸರಳ, ಚುರುಕು ಸಂಭಾಷಣೆ ಇವರಿಗೆ ಪೂರಕವಾಗಿದೆ.
ರೈತ ದೇಶದ ಬೆನ್ನೆಲುಬು ಅನ್ನುತ್ತೇವೆ. ಶಾಸಕಾಂಗ, ರಾಜಕಾರಣಿಗಳೆಲ್ಲಾ ಸಂವಿಧಾನದ ಅವಿಭಾಜ್ಯ ಅಂಗ ಎಂಬ ಮನ್ನಣೆಯನ್ನೂ ನಾವು ನೀಡಿದ್ದೇವೆ. ಮಾಧ್ಯಮಗಳು ಪ್ರಜಾಪ್ರಭುತ್ವ ರಾಷ್ಟ್ರವೊಂದರ ನಾಲ್ಕನೆಯ ಆಧಾರಸ್ತಂಭವಿದ್ದಂತೆ ಎಂಬ ಗುರುತರ ಜವಾಬ್ದಾರಿಯನ್ನೂ ಮಾಧ್ಯಮಗಳಿಗೆ ಹೊರಿಸಿದ್ದೇವೆ. ಈ ಜವಾಬ್ದಾರಿಯುತ ಕ್ಷೇತ್ರಗಳು ಹೇಗಿವೆ, ಇಲ್ಲಿನ ವ್ಯಕ್ತಿಗಳೆಲ್ಲಾ ಏನು ಮಾಡುತ್ತಿದ್ದಾರೆ ಎಂಬುದನ್ನು ಈ ಚಿತ್ರ ವಿಡಂಬಿಸುವ ಪರಿಯನ್ನು ನೋಡಿಯೇ ತಿಳಿಯಬೇಕು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರೆಲ್ಲ ಈ ಚಿತ್ರವನ್ನು ನೋಡಿದರೆ, ತಕ್ಕ ಸಂವೇದನಾಶೀಲರಾಗಿದ್ದರೆ ಖಂಡಿತಾ ತಂತಮ್ಮ ಕೆನ್ನೆ ಮುಟ್ಟಿ ನೋಡಿಕೊಳ್ಳುವಷ್ಟು ಹರಿತವಾಗಿದೆ ಈ ಚಿತ್ರದ ವಿಡಂಬನೆ.
ಚಿತ್ರ, ಭಾರತದ ಭ್ರಷ್ಟ ರಾಜಕಾರಣ, ಅಪ್ರಾಮಾಣಿಕ ಅಧಿಕಾರಶಾಹಿ, ವಿವೇಕಹೀನ ಅಭಿವೃದ್ಧಿ ಯೋಜನೆಗಳು, ರೈತರ ಅಸಹಾಯಕತೆ ಇತ್ಯಾದಿ ಹಲವು ಕ್ಷೇತ್ರಗಳನ್ನು ವಿಡಂಬಿಸುತ್ತದಾದರೂ, ‘ಪೀಪ್ಲಿ ಲೈವ್’ ಅನ್ನುವ ಹೆಸರೇ ಹೇಳುವಂತೆ ಇದರ ಮುಖ್ಯ ಗುರಿ ಟಿವಿ ಮಾಧ್ಯಮ. ಮಾಧ್ಯಮ ಕ್ಷೇತ್ರ ಮಾತ್ರ ಇದುವರೆಗೂ ಚಲನಚಿತ್ರದ ಚೌಕಟ್ಟಿನಿಂದ ಹೊರಗುಳಿದಿತ್ತು. ಈಗ ಈ ಕ್ಷೇತ್ರವನ್ನೂ ಬತ್ತಲಾಗಿ ನಿಲ್ಲಿಸಿದೆ ‘ಪೀಪ್ಲಿ ಲೈವ್’. ಇದರೊಂದಿಗೆ ಮಾಧ್ಯಮಲೋಕದ ಥಳಕುಬಳುಕಿನಲ್ಲಿ ಮೈಮರೆತಿರುವವರೆಲ್ಲ ಸಾಗುತ್ತಿರುವ ಅಮಾನವೀಯ ದಾರಿಯತ್ತ ಎಚ್ಚರಿಕೆಯ ಗಂಟೆಯನ್ನೂ ಬಾರಿಸಿದೆ. ಜೊತೆಗೆ ಮಾಧ್ಯಮಗಳ ಬಗೆಗೆ ಹೆಚ್ಚು ತಿಳಿದಿಲ್ಲದವರ ಕಣ್ಣನ್ನೂ ತೆರೆಸಿಬಿಡುತ್ತದೆ. ಇದು ಚಿತ್ರದ ಹೆಚ್ಚುಗಾರಿಕೆ, ಮಾಧ್ಯಮಗಳ ದುರಂತ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s