ಮೊದಲ ಪ್ರೇಮವ ಮಡಿಲೊಳಿಟ್ಟು…

Posted: ಆಗಷ್ಟ್ 31, 2011 in ಅತ್ತೆ ಸ್ಪೀಕ್ಸ್...

ಮೊನ್ನೆ ಶನಿವಾರ ಸಂಜೆ ಮೊಮ್ಮಗ ಮನುಜನೊಂದಿಗೆ ಹರಟುತ್ತ ಟೆರೇಸ್‌ನಲ್ಲಿ ಕುಳಿತಿದ್ದೆ. ಸೊಸೆ ಸೌಖ್ಯಾ ಬಂದಳು. ಸಂಜೆಯಾಗುತ್ತಲೇ ಮುದುಡಿ ಹೋದ ಹೂವಿನಂತಿರುವ ಹುಡುಗಿಯ ಮುಖದಲ್ಲೊಂದು ಗೆಲುವು. ನಾಳೆ ರಜಾದಿನ ಎನ್ನುವ ಖುಷಿಯ ಎಫೆಕ್ಟ್ ಇರಬೇಕು ಅಂದ್ಕೊಂಡೆ.
ಆಮೇಲೆ ಹೇಳಿದ್ಳು, ‘ಇವತ್ತು ನನ್ನ ಫ್ರೆಂಡ್ ಬರ್‍ತಾಳೆ ಅತ್ತೇ.. ನಾಳೆ ಹೊರಗೆಲ್ಲಾದ್ರೂ ಸುತ್ತೋಣ ಅಂತ…’ ‘ಯಾರು, ಸಂಜನಾನಾ?’ ಅಂದೆ. ‘ಹಾಂ ಅತ್ತೇ, ಅವ್ಳೇ. ಇನ್ನೇನು ಅರ್ಧ-ಒಂದ್ಗಂಟೇಲಿ ಬರ್‍ಬಹುದು’ ಅಂದ್ಳು. ಸಂಜನಾ ನನ್ನ ಸೊಸೆಯ ಬಾಲ್ಯದ ಗೆಳತಿ. ಅವಳಿಗೆ ಮದುವೆ ಒಂದು ವರ್ಷ ಆಗಿದೆ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ. ಅವಳ ಕೈಹಿಡಿದವನೂ ಒಳ್ಳೆಯವನೇ, ಸುಖೀ ಸಂಸಾರ ಅವಳದ್ದು.
ಸಂಜನಾ ಬರ್‍ತಿದ್ದಾಳಲ್ಲ, ಅವ್ಳಿಗೆ ಕ್ಯಾರೆಟ್ ಹಲ್ವಾ ಅಂದ್ರೆ ಇಷ್ಟ, ಮಾಡೋಣ ಅನ್ನುತ್ತಾ ಎದ್ದು ಅಡುಗೆ ಮನೆ ಸೇರುವಷ್ಟರಲ್ಲಿ ಸಂಜನಾ ಬಂದೂಬಿಟ್ಟಳು. ಸಂಜೂಗೆ ತುಂಬಾ ಮಾತು. ಅವಳಿದ್ದರೆ ಮನೆಯಲ್ಲಿ ಹತ್ತು ಜನರಿದ್ದ ಹಾಗೆ. ಆದರೆ ಇವತ್ತು ಮಾತ್ರ ಎಂದಿನಂತಿರಲಿಲ್ಲ ಅವಳು. ‘ಹಾಯ್ ಆಂಟೀ, ಹೇಗಿದ್ದೀರಾ?’ ಅಂತ ಕೇಳಿದವಳ ಮುಖವೂ ಸಪ್ಪಗಿತ್ತು. ಸೌಖ್ಯಾ ಮಾಡಿಕೊಟ್ಟ ಕಾಫಿ ಕುಡಿದು ಸೌಖ್ಯಾನ ಕೋಣೆ ಸೇರಿಕೊಂಡವಳು ಮತ್ತೆ ಹೊರಬಂದದ್ದು ಊಟದ ಹೊತ್ತಿಗೇ.
ಊಟ ಮಾಡುವಾಗಲೂ ಸೌಖ್ಯಾ, ಸಂಜೂದು ಏನೋ ಗುಸುಗುಸು. ‘ಬಿಟ್ಬಿಡೇ ಅದನ್ನೆಲ್ಲಾ…’ ಅನ್ನೋ ಸೌಖ್ಯಾ, ‘ಅದು ಹೇಗಾಗುತ್ತೇ…’ ಅನ್ನೋ ಸಂಜೂ…
ಊಟ ಮಾಡಿ ಸೌಖ್ಯಾ ಮನುಜನನ್ನು ಮಲಗಿಸಲು ಹೋದಳು. ಸಂಜೂ ಅಡುಗೆಕೋಣೆಯಲ್ಲಿ ಉಳಿದಳು. ‘ಏನೇ, ನಿನ್ ಗಂಡನ್ನ ಕರ್‍ಕೊಂಡು ಬರ್‍ಬಾರ್ದಿತ್ತಾ?’ ಅಂದೆ. ‘ಅವ್ರೂ ಫ್ರೆಂಡ್ ಮನೆಗೆ ಹೋಗಿದ್ದಾರೆ ಆಂಟಿ’ ಅಂತ ಅಂದು ಸುಮ್ಮನಾದಳು. ಸ್ವಲ್ಪ ಹೊತ್ತು ಸುಮ್ಮನೇ ಬೆರಳಲ್ಲಿ ನೆಲ ಕೊರೆಯುತ್ತಾ ಕುಳಿತಿದ್ದ ಸಂಜೂ ಇದ್ದಕ್ಕಿದ್ದ ಹಾಗೆ ಮಾತು ತೆಗೆದಳು. ‘ಆಂಟೀ, ನೀವು ಕಾಲೇಜ್‌ಗೆ ಹೋಗ್ತಿದ್ದಾಗ ಯಾರೂ ನಿಮ್ಮನ್ನು ಲವ್ ಮಾಡ್ಲಿಲ್ವಾ? ನೀವು ಯಾರನ್ನೂ ಲವ್ ಮಾಡ್ಲಿಲ್ವಾ?’ ಅಂದ್ಳು. ನನಗೆ ಸೋಜಿಗ, ‘ಅರೆ, ಇದ್ಯಾಕಮ್ಮಾ ನನ್ ಕಾಲದ ಕಥೆ ಕೇಳ್ತಿದ್ದೀಯಾ?’ ಅಂದೆ. ‘ಈಗ್ಲೂ ಕಳೆಕಳೆಯಾಗಿ ಇಷ್ಟೊಂದು ಚೆನ್ನಾಗಿದ್ದೀರಲ್ಲಾ ಆಂಟೀ, ಯಾರನ್ನಾದ್ರೂ ಅಟ್ರಾಕ್ಟ್ ಮಾಡಿರ್‍ತೀರಾ ಅಂತ ಕೇಳ್ದೆ’ ಅಂದ್ಳು. ‘ಏನೀಗ ನಿನ್ ಸಮಸ್ಯೆ?’ ಅಂತ ನೇರವಾಗಿ ಕೇಳ್ದೆ. ‘ಆಂಟೀ, ನಾನು ಕಾಲೇಜ್‌ನಲ್ಲಿದ್ದಾಗ ಒಬ್ಬನನ್ನ ಲವ್ ಮಾಡಿದ್ದೆ. ಅದ್ಯಾಕೋ ನಾವು ಮದ್ವೆ ಆಗ್ಲಿಲ್ಲ. ಆದ್ರೆ ಈಗ ಒಂದು ಮೂರು ತಿಂಗಳ ಹಿಂದೆ ಅವ್ನು ನಮ್ ಆಫೀಸ್ ಬಸ್ ಸ್ಟಾಪ್ ಹತ್ರ ಸಿಕ್ಕ. ಸುಮ್ನೆ ಮಾತಾಡಿದ್ವಿ. ಆಮೇಲಿಂದ ಅವ್ನು ಪ್ರತಿದಿನ ಅದೇ ಬಸ್ ಸ್ಟಾಪ್‌ನಲ್ಲಿ ಸಿಗ್ತಿದ್ದಾನೆ. ಇತ್ತೀಚೆಗೆ ಈ ವಿಷ್ಯದಲ್ಲಿ ನಾನು ತುಂಬಾ ಡಿಸ್ಟರ್ಬ್ ಆಗಿದ್ದೀನಿ ಆಂಟಿ.  ಅವನ ಬಗೆಗೆ ಫೀಲ್ ಮಾಡ್ಕೊಂಡು ಈಗ ನನ್ನ ಗಂಡಂಗೆ ದ್ರೋಹ ಮಾಡ್ತಿದ್ದೀನೇನೋ ಅನಿಸ್ತಿದೆ. ನನ್ ಹಸ್ಬೆಂಡ್‌ಗೆ ಹೇಳೇ ಬಿಡೋಣ ಅಂದ್ಕೊಂಡೆ, ಆದ್ರೂ ಸುಮ್ನಾದೆ’ ಅಂದಾಗ ಹುಡ್ಗಿ ವಿಷ್ಯ ಗಂಭೀರ ಆಗಿದ್ಯಲ್ಲಾ ಅಂದ್ಕೊಂಡು ಶುರುಮಾಡಿದೆ, ‘ನೋಡು ಸಂಜೂ, ಅಂದಿನ ಆ ಪ್ರೀತಿ, ಆ ಹುಡುಗ ಎಲ್ಲಾ ಆ ಕಾಲಕ್ಕೆ ಸರಿ. ಆಗ ನೀನು ಪ್ರೀತಿ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ಆದ್ರೆ ಈಗ ಅವನನ್ನು ನೆನಪಿಸಿಕೊಂಡು ಕೊರಗೋದು ತಪ್ಪು. ಮೊದಲ ಪ್ರೇಮವನ್ನು ಮರೆಯೋದು ಸುಲಭ ಅಲ್ಲ. ಆದರೆ ಅದನ್ನು ಜೀವಂತ ಇಟ್ಟುಕೊಳೋದ್ರಿಂದ ಇವತ್ತು ಯಾವ ಪ್ರಯೋಜನವೂ ಇಲ್ಲ. ಎಲ್ಲೋ ಒಂಟಿಯಾಗಿದ್ದಾಗ ಆ ಪ್ರೀತಿ ನಿನಗೊಂದು ಹನಿ ಖುಷಿ ಕೊಡಲಿ. ಅಷ್ಟರಮಟ್ಟಿಗೆ ಅದನ್ನು ಪಕ್ಕಕ್ಕಿಡು. ಅವನು ದಿನವೂ ಸಿಕ್ಕರೂ ಮತ್ತೆ ಅದೇ ಪ್ರೀತಿಯನ್ನು ಮುಂದುವರಿಸಬೇಡ. ಹಳೆಯ ಪ್ರೀತಿಯನ್ನು ಮದುವೆಯ ಬಳಿಕವೂ ಎಳೆತರೋ ತಪ್ಪು ಮಾತ್ರ ಮಾಡ್ಬೇಡ’
‘ಹೂಂ ಆಂಟಿ’ ಎಂದು ನಗುನಗುತ್ತ ಮಲಗುವುದಕ್ಕೆ ಹೊರಟ ಸಂಜೂ ಮತ್ತೆ ತಿರುಗಿ ಕೇಳಿದಳು, ‘ಆದ್ರೂ ಆಂಟೀ, ಒಂದು ಪ್ರಶ್ನೆಗೆ ಮಾತ್ರ ಉತ್ತರ ಸಿಗ್ಲಿಲ್ಲ.. ನಿಮ್ ಲವ್ವು…?’
ಸುಮ್ಮನೇ ನಕ್ಕೆ.

ಟಿಪ್ಪಣಿಗಳು
  1. sandhya ಹೇಳುತ್ತಾರೆ:

    ಎಲ್ಲೋ ಒಂಟಿಯಾಗಿದ್ದಾಗ ಆ ಪ್ರೀತಿ ನಿನಗೊಂದು ಹನಿ ಖುಷಿ ಕೊಡಲಿ…… ಈ ಸಾಲುಗಳು ತು೦ಬಾನೇ ಮೆಚ್ಚುಗೆಯಾಯಿತು. ಕಥೆ ಚೆನ್ನಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s