ಒತ್ತಡ ಹೊತ್ತವಳು

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಒತ್ತಡ ಯಾರಿಗಿಲ್ಲ ಹೇಳಿ? ಆದ್ರೆ ಸ್ತ್ರೀಯರನ್ನು ಕಾಡುವ ಒತ್ತಡ ಅವರಿಗಷ್ಟೇ ಗೊತ್ತು. ಅದರಲ್ಲೂ ಭಾರತೀಯ ಮಹಿಳೆಯರ ಮೇಲೆ ಜಗತ್ತಿನಲ್ಲೇ ಎಲ್ಲಾ  ಮಹಿಳೆಯರಿಗಿಂತ ಸ್ಟ್ರೆಸ್ ಹೆಚ್ಚು ಎಂದು ಸಾಬೀತಾಗಿದೆ. ಶಾಂತಿ, ನೆಮ್ಮದಿಯ ನೆಲೆವೀಡು ಅನ್ನಿಸಿಕೊಂಡ ಭಾರತದಲ್ಲೇ ಮಾನಿನಿಗೇಕೆ ಇಷ್ಟು ಒತ್ತಡ?

ಒತ್ತಡವಾ? ಊಂ.. ಅದ್ರ ಬಗ್ಗೆ ಯೋಚ್ನೆ ಮಾಡೋಕೇ ಟೈಂ ಸಿಕ್ಕಿಲ್ಲ. ಸಿಡುಕು, ಸಿಟ್ಟು? ಹಾಂ, ಅದೆಲ್ಲಾ ಇದೆ, ಮನಸ್ಸಿನಲ್ಲೇ ಏನೋ ಕುದಿಯುತ್ತೆ, ಹೇಳೋಕೂ ಪುರುಸೊತ್ತಿಲ್ಲ. ನಮ್ಮ ದಿನದ ಶೆಡ್ಯೂಲ್ ಹೇಗಿರುತ್ತೆ ಗೊತ್ತಾ?
ಮೊಬೈಲ್‌ನ ಅಲರಾಂ ಕೀ ಕೀ ಅನ್ನುತ್ತಲೇ ಧಡಕ್ಕನೆ ಏಳು. ಬಡಬಡಿಸಿ ಕುಕ್ಕರ್ ಇಡು. ಮಕ್ಕಳನ್ನೆಬ್ಬಿಸು. ಅವರಿಗೆ ಬಾಕ್ಸ್ ರೆಡಿ ಮಾಡು. ಗಂಡ, ಮಕ್ಕಳು ಎಲ್ಲರಿಗೂ ತಿಂಡಿ ಕೊಡು. ಓಹ್, ತಾನೂ ಒಂದಷ್ಟು ಹೊಟ್ಟೆಗೆ ಹಾಕಿಕೊಳ್ಳಬೇಕಲ್ವಾ? ಬಸ್‌ಗೆ ಟೈಂ ಆಗೇ ಹೋಯ್ತಾ, ಹಾಗಾದ್ರೆ ಖಾಲಿ ಹೊಟ್ಟೆಯಲ್ಲೇ ಹೊರಟುಬಿಡು. ಆಫೀಸಲ್ಲಿ ಇದ್ದೇ ಇದೆ ಆಫೀಸ್ ಕೆಲ್ಸ. ಮತ್ತೆ ಸಂಜೆ ಮನೆಗೆ ಬಾ. ಮಕ್ಕಳನ್ನು ಓದಿಸು. ರಾತ್ರಿಗೆ ಅಡುಗೆ ಮಾಡು. ಅಷ್ಟರಲ್ಲೇ ಮಗ ಹೇಳುತ್ತಾನೆ, ನಾಡಿದ್ದು  ಸ್ಕೂಲ್‌ನಲ್ಲಿ ಪೇರೆಂಟ್ಸ್ ಮೀಟಿಂಗ್.. ಓ, ಆಫೀಸಿಗೆ ರಜಾ ಹಾಕ್ಬೇಕಲ್ವಾ? ಸರಿ, ರಜೆ ಹಾಕ್ಬೇಕಾದ್ರೆ ಆಫೀಸ್‌ನಲ್ಲಿ ನಾಳೆಯೇ ಹೆಚ್ಚು ಕೆಲ್ಸ ಮಾಡಿ ವರ್ಕ್ ಅಡ್ಜಸ್ಟ್ ಮಾಡ್ಬೇಕು… ಅಷ್ಟರಲ್ಲಿ ಸಂಡೇ ಬಂತು. ಮಕ್ಕಳಿಗೆ ಏನೋ ತಿಂಡಿ ಮಾಡ್ಬೇಕು. ಊಟಕ್ಕೆ ಬೇರೆ ಯಾರೋ ಗೆಸ್ಟ್ ಬರ್‍ತಾರೆ, ಏನು ಸ್ಪೆಷಲ್ ಮಾಡೋದು…? ಯೋಚಿಸುತ್ತಾ ಹಾಸಿಗೆಗೆ ತಲೆ ಕೊಟ್ಟದ್ದೇ ನಿದ್ದೆ ಆವರಿಸಿಯೂ ಬಿಡುತ್ತದೆ. ದಣಿದ ಜೀವಕ್ಕೆ ನಿದ್ದೆಯಷ್ಟು ಪರಮಾಪ್ತ ಬೇರಿನ್ನಾರು?
ಹೌದಪ್ಪ, ಇಂಥಾ ಉಸಿರು ಬಿಡಲಿಕ್ಕೂ ಆಗದ ಕಾರ್ಯಭಾರದ ಮಧ್ಯೆ ಒತ್ತಡದ ಬಗ್ಗೆ ಯೋಚಿಸುವುದಕ್ಕೆ ವ್ಯವಧಾನ ಯಾರಿಗೂ ಇರಲಿಕ್ಕಿಲ್ಲ. ಹಾಗೇ ರಿಲ್ಯಾಕ್ಸ್ ಮಾಡುವುದಕ್ಕೂ. ಅಂದಹಾಗೆ, ಇಂತಹ ಭಾರತೀಯ ಸ್ತ್ರೀಯರಿಗೆ ಈಗ ಜಗತ್ತಿನಲ್ಲೇ ಅತ್ಯಂತ ಒತ್ತಡಕ್ಕೊಳಗಾದ ಮಹಿಳೆಯರೆಂಬ ಪಟ್ಟ. ನೀಲ್ಸನ್ ಎಂಬ ಸಂಸ್ಥೆ ಕೇಳಿದ ಪ್ರಶ್ನೆಗಳಿಗೆ ಶೇ.೮೭ರಷ್ಟು ಭಾರತೀಯ ಸ್ತ್ರೀಯರು ‘ಹೌದು, ನಾವು ಒತ್ತಡಕ್ಕೊಳಗಾಗಿದ್ದೇವೆ’ ಅಂದಿದ್ದಾರೆ. ಅದರಲ್ಲೂ ಶೇ.೮೨ರಷ್ಟು  ಮಹಿಳೆಯರು ರಿಲ್ಯಾಕ್ಸ್ ಮಾಡುವುದಕ್ಕೂ ತಮಗೆ ಸಮಯವಿಲ್ಲ ಎಂದಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ, ರಷ್ಯಾ, ಸ್ವೀಡನ್… ಹೀಗೆ ಉಳಿದ ದೇಶದ ಹೆಂಗಸರಿದ್ದಾರೆ.
ಎಲ್ಲ ಸರಿ, ಭಾರತೀಯ ಮಹಿಳೆಯರೇ ಏಕೆ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ? ಯೋಗ, ಧ್ಯಾನಗಳನ್ನೆಲ್ಲ ಜಗತ್ತಿಗೇ ಹೇಳಿಕೊಟ್ಟ ಈ ದೇಶದ ಸ್ತ್ರೀಯರಿಗೂ ಒತ್ತಡವಾ?
ರೋಲ್ ಬದಲಾಗಿದ್ದಷ್ಟೇ
ಹೌದು, ಒತ್ತಡ ಹೆಚ್ಚುವುದಕ್ಕೂ ಕಾರಣವುಂಟು. ಇಲ್ಲಿನ ಮಾನಿನಿಯರಿಗೆ ಶಿಕ್ಷಣ ಸಿಕ್ಕಿದೆ, ಅವರೆಲ್ಲ ಹೊರ ಹೋಗಿ ಆದಾಯವನ್ನೂ ಗಳಿಸುತ್ತಿದ್ದಾರೆ. ಸಾಂಸಾರಿಕವಾಗಿ, ಸಾಮಾಜಿಕವಾಗಿ ಆಕೆಯ ಪಾತ್ರ ಬದಲಾಗಿದೆ. ಆದರೆ ಜವಾಬ್ದಾರಿ ಮಾತ್ರ ಹೆಚ್ಚುತ್ತಲೇ ಇದೆ. ಮನೋವೈದ್ಯರು ಹೇಳುವುದೂ ಇದನ್ನೇ. ಡಾ| ಜಗದೀಶ್ ಹೇಳ್ತಾರೆ, ‘ಹೆಂಗಸರು ಉದ್ಯೋಗಸ್ಥೆಯರಾಗಿ ಹೊರ ಹೋದರೂ ಮನೆಯೊಳಗಿನ ಕೆಲಸವನ್ನು ತಾವೇ ಮಾಡಬೇಕಿದೆ. ಮಕ್ಕಳು, ಮನೆ, ಅಡುಗೆ ಎನ್ನುತ್ತ ಆಕೆಯ ಕೆಲಸಗಳ ಪಟ್ಟಿ ಮುಗಿಯುವುದೇ ಇಲ್ಲ. ವಿದೇಶಗಳಲ್ಲಿ ಹೀಗಿಲ್ಲ. ಅಲ್ಲೆಲ್ಲ ಜವಾಬ್ದಾರಿಗಳ ಸಮಾನ ಹಂಚಿಕೊಳ್ಳುವಿಕೆ ಇದ್ದೇ ಇದೆ. ಅದಕ್ಕೇ ಅವರನ್ನು ಒತ್ತಡ ಇಷ್ಟೊಂದು ಬಾಸೋದಿಲ್ಲ.’
ಉದ್ಯೋಗಕ್ಕೆ ಹೋಗುವ ಮಧ್ಯಮ ವರ್ಗದ ಸ್ತ್ರೀಯರ ಮೇಲೆ ಮಾತ್ರವಲ್ಲ ಈ ಜವಾಬ್ದಾರಿಗಳ ರಾಶಿ ಕುಳಿತಿಲ್ಲ. ಅದೆಲ್ಲೋ ಕೂಲಿನಾಲಿ ಮಾಡಿ ಸಂಸಾರ ನಿಭಾಯಿಸುವ ಹೆಣ್ಣುಮಗಳಿಗೂ ಗಂಡನ ಕುಡಿತದಂತಹ ದುರಭ್ಯಾಸದ ವಿರುದ್ಧ ಸೆಣಸಿ ಮನೆ, ಮಕ್ಕಳ ದೋಣಿ ಸಾಗಿಸುವ ಹೊಣೆ ಇರುತ್ತದೆ. ಇದಕ್ಕಿಂತ ಒತ್ತಡ ಬೇರೆ ಬೇಕೇ?
ಕೆಲಸದಲ್ಲಿ ಮಾತ್ರ ಸೂಪರ್…
ಭಾರತೀಯ ಮಹಿಳೆಗೆ ‘ಸೂಪರ್ ವುಮನ್’ ಅನ್ನೋ ಬಿರುದಿದೆ ನಿಜ. ಇದು ಆಕೆ ನಿರ್ವಹಿಸುವ ಜವಾಬ್ದಾರಿಗಳ ವಿಚಾರದಲ್ಲಿ ಮಾತ್ರ. ಭಾವನಾತ್ಮಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಈಗಲೂ ಆಕೆ ಸೆಕೆಂಡ್ ಕ್ಲಾಸ್ ಸಿಟಿಝನ್. ‘ಅದೆಷ್ಟೋ ಮಹಿಳೆಯರು ಹಣ ಗಳಿಸ್ತಾರೆ ನಿಜ. ಆದರೆ ಅದನ್ನು ಅವರಿಗೆ ಬೇಕಾದಂತೆ ಖರ್ಚು ಮಾಡೋ ಸ್ವಾತಂತ್ರ್ಯ ಅವರಿಗಿರೋದಿಲ್ಲ. ಒಂದೋ ಆಕೆಯ ಗಳಿಕೆಯ ಮೇಲೆ ಪುರುಷರ ನಿಯಂತ್ರಣ ಇರುತ್ತದೆ. ಇಲ್ಲವೇ ಸಂಸಾರದ ಅವಶ್ಯಕತೆಗಳೇ ಆಕೆಗೆ ಮೊದಲ ಆದ್ಯತೆ ಆಗಿರುತ್ತದೆ. ಇದಲ್ಲದೆ ಆಕೆಯನ್ನು ಸೆಕ್ಸ್ ಆಬ್ಜೆಕ್ಟ್ ಆಗಿ ನೋಡುವ ಮನೋಭಾವ ಹೆಚ್ಚುತ್ತಲೇ ಇದೆ. ಉದ್ಯೋಗದಲ್ಲಿಯೂ ಎಲ್ಲೆಡೆಯೂ ಸಮಾನ ವೇತನ ಆಕೆಗಿಲ್ಲ. ಜೊತೆಗೆ ಎಲ್ಲಾ ನೋವುಗಳನ್ನೂ ಸಹಿಸಿಕೊಂಡು ಹೋಗುವ ಅನಿವಾರ್ಯತೆ. ಇದೆಲ್ಲವೂ ಜೊತೆಗೂಡಿದ್ರೆ ಒತ್ತಡ ಸಹಜವೇ ಅಲ್ಲವೇ?’ಅನ್ನುತ್ತಾರೆ ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ.ಎಸ್.
ಸ್ತ್ರೀ ‘ಕ್ಷಮಯಾ ಧರಿತ್ರೀ’ ಎಂಬ ಹಣೆಪಟ್ಟಿಯನ್ನು ಇಂದಿನ ಮಹಿಳೆಯರು ವಿರೋಸುತ್ತಾರಾದರೂ ಪರೋಕ್ಷವಾಗಿ ಅವರನ್ನು ಬೆಳೆಸುವುದು ಹಾಗೆಯೇ ಎನ್ನುತ್ತಾರೆ ಶಿಕ್ಷಕಿ ಲಕ್ಷ್ಮೀ. ‘ಚಿಕ್ಕಂದಿನಿಂದಲೂ ಆಕೆ ಗಂಡು ಹುಡುಗರಂತೆ ಅನಿಸಿದಾಗಲೆಲ್ಲ ಸಿಟ್ಟು, ಅಳು, ನಗುಗಳನ್ನು ವ್ಯಕ್ತಪಡಿಸದಂತೆ ಬೆಳೆಸುತ್ತಾರೆ. ಮುಂದೆ ಸಂಸಾರಸ್ಥೆಯಾದಾಗಲೂ ಅದೇ ಮುಂದುವರಿಯುತ್ತದೆ. ಗಂಡ ಮನೆಗೆ ಬಂದ ಅತಿಥಿಗಳ ಮುಂದೆಯೇ ಆಕೆಯನ್ನು  ನೋಯಿಸಬಹುದು, ಆದರೆ ಆಕೆ ಮಾತ್ರ ತಿರುಗಿ ಮಾತಾಡಬಾರದು. ತನ್ನ ಬೇಸರಗಳನ್ನು ಹೇಳಿಕೊಳ್ಳುವುದಕ್ಕೂ ಹೊತ್ತು-ಗೊತ್ತು ನೋಡಬೇಕಾಗುತ್ತದೆ. ಭಾವನೆಗಳನ್ನು ಹೀಗೆ ಅದುಮಿಟ್ಟರೆ ಒತ್ತಡ ಉಂಟಾಗುವುದು ಸಹಜ ತಾನೇ?’ ಅನ್ನುತ್ತಾರೆ ಲಕ್ಷ್ಮೀ. ಗಂಡ, ಮಕ್ಕಳ ಮನಸ್ಸನ್ನೆಲ್ಲ ತಿಳಿದು ನಡೆಯುವ ಆಕೆಯ ಮನಃಶಾಸ್ತ್ರಜ್ಞೆಯ ಗುಣ ಕುಟುಂಬಕ್ಕೆ ಎಷ್ಟು ಹಿತಕರವೋ ಅಷ್ಟೇ ಮಾರಕ ಆಕೆಯ ವೈಯಕ್ತಿಕ ಹಿತಕ್ಕೆ. ಗಂಡನ ಮೂಡ್ ನೋಡಿಕೊಂಡು ತನ್ನ ಅಸಮಾಧಾನವನ್ನು ಹತ್ತಿಕ್ಕಿಕೊಳ್ಳುವ ಅವಳು ತನ್ನೊಳಗೊಂದು ಅಗ್ನಿಪರ್ವತವನ್ನು ಕಟ್ಟಿಕೊಳ್ಳುತ್ತಲೇ ಹೋಗುತ್ತಾಳೆ. ಎಲ್ಲೋ ಮಾತಾಡಹೊರಟರೂ ‘ಬಾಯ್ಮಚ್ಚು’ ಎಂಬ ಗದರಿಸುವಿಕೆಯ ಮುಂದೆ ಮೌನಿಯಾಗುತ್ತಾಳೆ ಅವಳು. ಈ ಮಧ್ಯೆ ಮಕ್ಕಳ ಓದು, ಆರೋಗ್ಯ, ನಡತೆ ಎಲ್ಲವುಗಳ ಚಿಂತೆ ಪೇರಿಸಲ್ಪಡುತ್ತವೆ ಅವಳೊಳಗೆ. ಮಕ್ಕಳು ಹಾದಿ ತಪ್ಪಿದರೆ, ‘ನೀನೇ ಕಾರಣ’ ಎಂಬ ಆರೋಪವನ್ನು ಅವಳು ಎದುರಿಸಲೇಬೇಕಲ್ಲ..?
ಅರ್ಥ ಮಾಡ್ಕೊಳಿ ಪ್ಲೀಸ್…
ಒತ್ತಡಕ್ಕೆ ಯೋಗ, ಧ್ಯಾನ ಮಾಡಿದ್ರೆ ಸರಿ ಹೋಗುತ್ತೆ ಅಂತ ಸುಲಭ ಟಿಪ್ಸ್ ಏನೋ ಕೊಡಬಹುದು. ನಿಮಗೆ ನೀವೇ ಟೈಂ ಕೊಟ್ಟುಕೊಳ್ಳಿ ಅಂತ ಉಚಿತ ಸಲಹೆ ನೀಡಿ ಉದ್ದಾನುದ್ದ ಲೇಖನಗಳನ್ನೂ ಬರೆಯಬಹುದು. ಆದರೆ ಇದು ಅವಳೊಬ್ಬಳಿಂದಲೇ ಸಾಧ್ಯವಿಲ್ಲ. ಸುತ್ತಲಿನವರೆಲ್ಲರ ಸಹಕಾರವೂ ಆಕೆಗೆ ಬೇಕು. ಒತ್ತಡ ಬೇಡವೆಂದರೆ ಹೊರಗಡೆ ದುಡಿಯಬೇಡ ಎಂಬ ಮಾತು ಇಂದು ಅಸಂಗತ. ಇಷ್ಟಕ್ಕೂ ಆಕೆ ತರುವ ವೇತನವನ್ನು ಬೇಡವೆನ್ನುವವರು ಯಾರೂ ಇಲ್ಲ. ಎಲ್ಲ ಸರಿ, ಆಕೆಯ ಶ್ರಮಕ್ಕೆ ತಕ್ಕ ಮನ್ನಣೆ ನೀಡಬೇಕೆನ್ನುವುದೇ ಆಕೆಯ ಆಶಯ. ಇಷ್ಟೆಲ್ಲವನ್ನೂ ಮಾಡುವಾಕೆ ಸದಾ ಎರಡನೇ ದರ್ಜೆಯವಳಾಗಿರಬೇಕೆನ್ನುವುದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?
ಸಂಸಾರದಲ್ಲಿ ಪುರುಷ ಕೆಲಸಗಳನ್ನು ಹಂಚಿಕೊಳ್ಳುವ ಬಗ್ಗೆ ಅಲ್ಲೊಂದು ಕಡೆ ಇಲ್ಲೊಂದು ಕಡೆ ಕೇಳಿಬರುತ್ತಿದೆಯಷ್ಟೇ ಹೊರತು ಅದು ಸಾರ್ವತ್ರಿಕವಾಗಿಲ್ಲ. ಅದಾಗುವ ದಿನಗಳು ಎಷ್ಟು ದೂರ ಇವೆಯೋ ಏನೋ? ಕೆಲಸಗಳನ್ನು ಹಂಚಿಕೊಂಡ ಹಾಗೆಯೇ ಆಕೆಯ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೂ ಮರೆಯಬಾರದು. ಆಕೆಯೂ ಕೊಂಚ ಸಿಡುಕಲಿ, ಜಗಳವಾಡಲಿ. ತನ್ನ ಅತೃಪ್ತಿಯನ್ನು ಹೊರಹಾಕಲೊಂದು ಅವಕಾಶ, ಅದಕ್ಕೆ ಸ್ಪಂದನೆ ಸಿಕ್ಕರೆ ಆಕೆಗೂ ಸಮಾಧಾನವಾದೀತು. ಭಾವನೆಗಳನ್ನೂ ಕಟ್ಟಿಟ್ಟರೆ ಅದು ಸೋಟಕವಾಗಬಹುದು. ಅವಳು ಸಿಡಿಯಬಹುದು. ಅದು ಸಮಾಜಕ್ಕೂ ಸಲ್ಲ, ಸಂಸಾರಕ್ಕೂ…
————-

ಹೆಣ್ಣಿನ ಮೇಲೆ ನಮ್ಮ ದೇಶದಲ್ಲಿ ಇರುವಷ್ಟು ಒತ್ತಡ ಬೇರೆಲ್ಲೂ ಇಲ್ಲ. ಮಹಿಳೆ ಎಷ್ಟೇ ಮುಂದುವರೆದರೂ ಇಲ್ಲಿ ಹೆಣ್ಣು ಭ್ರೂಣದ ಹತ್ಯೆಯಾಗುತ್ತದೆ. ವರದಕ್ಷಿಣೆಯ ಭೂತ ಈಗಲೂ ಕಾಡುತ್ತದೆ. ಪುರುಷನಷ್ಟೇ ಕೆಲಸ ಮಾಡಿದರೂ ಆಕೆಗೆ ಸಮಾನ ವೇತನವಿಲ್ಲ, ಕೆಲಸಕ್ಕೆ ಸಮಾನ ಬೆಲೆಯಿಲ್ಲ. ಸಂಬಳದ ಮೇಲೆ ಹಿಡಿತವಿಲ್ಲ. ಮಾಡುವ ಮನೆಗೆಲಸವನ್ನೂ ‘ಅನುತ್ಪಾದಕ’ ಎಂದೇ ಬಜೆಟ್‌ನಲ್ಲೂ ಪರಿಗಣಿಸ್ತಾರೆ. ಆಕೆಯ ಜವಾಬ್ದಾರಿ ಹೆಚ್ಚುತ್ತಿದೆ, ಸಹಜವಾಗಿ ಒತ್ತಡವೂ.
ವಿಮಲಾ ಕೆ.ಎಸ್, ಜನವಾದಿ ಮಹಿಳಾ ಸಂಘಟನೆ
ನಾನು ರಜಾ ಸಮಯದಲ್ಲಿ ನೇಚರ್ ಕ್ಯೂರ್‌ಗೆ ಹೋಗಿ ಒಂದಷ್ಟು ದಿನ ಇದ್ದು ಬರುತ್ತೇನೆ. ಇದರಿಂದ ರಿಲ್ಯಾಕ್ಸ್ ಅನಿಸುತ್ತದೆ. ಆದರೆ ಇದು ಎಲ್ಲರಿಗೂ ಅಂತಿಮ ಮಾರ್ಗವಲ್ಲ. ಆಕೆಯ ಮೇಲೆ ಒತ್ತಡ ಬಾರದಂತೆ ಕುಟುಂಬದವರು ಸಹಕರಿಸಬೇಕು.
ಲಕ್ಷ್ಮೀ ಕೆ., ಶಿಕ್ಷಕಿ, ಬೆಂಗಳೂರು.
ಮಹಿಳೆಯರ ಮೇಲಿನ ಒತ್ತಡ ಕಡಿಮೆ ಮಾಡಲು ಪುರುಷರ ಸಹಕಾರ ಬೇಕೇ ಬೇಕು. ಎಲ್ಲವನ್ನೂ ಹೆಣ್ಣುಮಕ್ಕಳೇ ಮಾಡಬೇಕೆಂಬ ಆಟಿಟ್ಯೂಡ್ ಬಿಡಬೇಕು. ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು.
ಡಾ| ಜಗದೀಶ್, ಮನೋವೈದ್ಯರು.
—-
(ವಿಜಯ ನೆಕ್ಸ್ಟ್ ವಾರಪತ್ರಿಕೆಯ ಜುಲೈ ೧೫, ೨೦೧೧ರ ಸಂಚಿಕೆಯಲ್ಲಿ ಪ್ರಕಟಿತ )

ಟಿಪ್ಪಣಿಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s