ಇದೊಂದು ಫ್ಯಾಷನ್ ಹಬ್. ಯೌವನ ತುಳುಕುವ ಸುಂದರ, ಸುಂದರಿಯರಿಂದ ಇಲ್ಲಿ ನಿತ್ಯವೂ ಫ್ಯಾಷನ್ ಪೆರೇಡ್. ಅವರಿಗೆ ಹೊಸತನ್ನು ಹಾಕಿದ ಸಂಭ್ರಮವಾದರೆ ನೋಡುವ ಕಂಗಳಿಗೆ ಎಲ್ಲೋ ತೇಲಿಹೋದ ಅನುಭವ. ಕಾಲೇಜು ಕ್ಯಾಂಪಸ್ ಅಂದರೆ ಹಾಗೆಯೇ, ಇಲ್ಲಿ ನಿತ್ಯವೂ ಫ್ಯಾಷನ್ ಮೇಳ.
———-
ಅಬ್ಬಬ್ಬಾ, ಫ್ಯಾಷನ್ ಅಂದ್ರೆ ಇದು ಕಣ್ರೀ… ಇಂಥದೊಂದು ಉದ್ಗಾರ ನಿಮ್ಮ ಬಾಯಿಂದ ಹೊರಬಿತ್ತಾ? ಹಾಗಿದ್ದರೆ ಖಂಡಿತಾ ಅದು ಕಾಲೇಜು ಕ್ಯಾಂಪಸ್ಸೇ ಇರಬೇಕು. ಕಾಲೇಜು ವಿದ್ಯಾರ್ಥಿಗಳೇ ಹಾಗೆ, ಹೊಸ ಫ್ಯಾಷನ್‌ಗೆ ತಕ್ಷಣ ಅಪ್‌ಡೇಟ್ ಆಗ್ತಾರೆ. ತಮಗೆ ಚೆಂದ ಕಾಣೋದನ್ನು ಇನ್ನೂ ಚೆಂದಕೆ ತೊಟ್ಟುಕೊಳ್ಳುತ್ತಾರೆ. ಅಲ್ಲಿಂದಲೇ ಟ್ರೆಂಡ್ ಒಂದು ಶುರುವಾಗಿಯೂಬಿಡುತ್ತದೆ.
ಉಡುಗೆ ಇರಲಿ, ಕೈಕಾಲುಗಳಿಗೆ ಹಾಕೋ ಆಕ್ಸೆಸರಿಗಳೇ ಇರಲಿ, ಎಲ್ಲದರಲ್ಲಿಯೂ ಇವರಲ್ಲೊಂದು ಹೊಸತು. ಈ ಹೊಸ ಶೈಕ್ಷಣಿಕ ವರ್ಷದಲ್ಲಿಯೂ ಕ್ಯಾಂಪಸ್‌ಗಳಲ್ಲಿ ಈ ನಾವೀನ್ಯದ ಝಲಕ್ ಕಾಣಿಸಿಕೊಳ್ಳುತ್ತಲೇ ಇದೆ.
ಟ್ರೆಂಡಿ ಕ್ಯಾಶುವಲ್ಸ್
ಕ್ಲಾಸ್‌ಗೆ ಬಂದು ಪಾಠ ಕೇಳೋದಕ್ಕೆ, ಅತ್ತಿತ್ತ ಅಡ್ಡಾಡೋದಕ್ಕೆ ಎಲ್ಲಕ್ಕೂ ಜೀನ್ಸ್ ತುಂಬಾ ಕಂಫರ್ಟೆಬಲ್. ಅದಕ್ಕೇ ಕಾಲೇಜು ಹುಡುಗ, ಹುಡುಗಿಯರ ಮೊದಲ ವೋಟು ಜೀನ್ಸ್‌ಗೇ. ಇದಕ್ಕೆ ತಕ್ಕ ಟಾಪ್ ಅಥವಾ ಟಿ-ಶರ್ಟ್ ಸಿಕ್ಕಿಸಿಕೊಂಡು ಬಂದರೆ ಸೈ. ಆದರೆ, ಕೆಲವು ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಮಾಡಿರೋದರಿಂದ ಇದಕ್ಕೆ ಕೊಂಚ ತೊಡಕು. ಆದರೂ ಜೀನ್ಸ್‌ಗೆ ಪರ್ಯಾಯವಾದ ಲೆಗ್ಗಿಂಗ್ಸ್ ಇದೇ ಇದೆ ಹುಡುಗಿಯರಿಗೆ. ಇದಕ್ಕೆ ಚೂಡಿದಾರ್ ಟಾಪ್ ಕೂಡ ಹಾಕಬಹುದಾದ್ದರಿಂದ ಮಿಕ್ಸ್ ಅಂಡ್ ಮ್ಯಾಚ್ ಮಾಡೋದೂ ಸುಲಭ.
ಲೆಗ್ಗಿಂಗ್ಸ್‌ನಂತೆಯೇ ಕಾಣುವ ಜೆಗ್ಗಿಂಗ್ಸ್ ಈಗ ಕ್ಯಾಂಪಸ್‌ಗಳಲ್ಲಿ ಫೇಮಸ್. ೨೦೧೦ರಲ್ಲಿ ಕ್ಯಾಂಪಸ್‌ಗಳಿಗೆ ಪರಿಚಯಗೊಂಡ ಈ ದಿರಿಸು ಈ ವರ್ಷವಂತೂ ಇನ್ನಷ್ಟು ಪ್ರಚಲಿತಗೊಂಡಿದೆ. ಜೀನ್ಸ್ ನಂತೆ ಕಾಣುವ ಡಿಸೈನ್ ಹೊಂದಿರುವ ಈ ಬಟ್ಟೆ ಹುಡುಗಿಯರಿಗೆ ಹಾಟ್ ಫೇವರಿಟ್.
ಹುಡುಗರೂ ಜೀನ್ಸ್ ಬಿಟ್ಟರೆ ಬೇರೇನೂ ಇಲ್ಲ ಅಂತ ಕುಳಿತುಕೊಳ್ಳೋರಲ್ಲ. ಫಾರ್ಮಲ್ಸ್‌ನಲ್ಲಿ ಸ್ವಲ್ಪ ಫ್ಯಾಷನೇಟ್ ಆಗಿರೋ ಟ್ರೆಂಡ್ ಅನ್ನು ಇವರೆಲ್ಲ ಕಂಡುಕೊಂಡಿದ್ದಾರೆ. ಜೊತೆಗೆ ಕೌಬಾಯ್ ಶೂಸ್ ರೀತಿ ಕಾಣಿಸೋ ಪಠಾಣ್ ಶೂಸ್‌ನ್ನೂ ತೊಟ್ಟುಕೊಂಡರೆ ಆಹ್, ಲುಕ್ಕೋ ಲುಕ್ಕು. ‘ಲೋ ವೇಸ್ಟ್ ಪ್ಯಾಂಟ್ ಜೊತೆಗೆ ಶಾರ್ಟ್ ಟಿ-ಶರ್ಟ್ ಧರಿಸೋದಂತೂ ಈಗ ಮಾಮೂಲು. ಹುಡುಗರೂ ಹೀಗೇ ಹಾಕ್ಕೋತಾರೆ. ಹುಡುಗಿಯರು ಎಷ್ಟೇ ಫ್ಯಾಷನೇಬಲ್ ಆಗಿದ್ದರೂ ಫಾರ್ಮಲ್ಸ್ ತೊಟ್ಟು ಡೀಸೆಂಟ್ ಆಗಿರೋ ಹುಡುಗರನ್ನೇ ಇಷ್ಟಪಡ್ತಾರೆ ಅನ್ನೋ ಕಾರಣಕ್ಕೆ ಹುಡುಗರೂ ಈಗ ಫಾರ್ಮಲ್ಸ್‌ನೇ ಇಷ್ಟಪಡ್ತಾರೆ’ ಅಂತಾರೆ ಬೆಂಗಳೂರಿನ ವಿದ್ಯಾರ್ಥಿ ಶರತ್ ಶರ್ಮಾ.
ಭರ್ಜರಿ ಪಾರ್ಟಿವೇರ್
ಕಾಲೇಜಿನಲ್ಲೊಂದು ಬಗೆಯ ಡ್ರೆಸ್ಸಾದರೆ ಇನ್ನಿತರ ಉದ್ದೇಶಕ್ಕೆ ಬೇರೆಯದೇ ಔಟ್‌ಫಿಟ್. ಪಬ್, ಸಿನಿಮಾಗಳಿಗೆ, ರಜಾದಿನಗಳಂದು ಹಾಕೋದಕ್ಕೆ ಶಾರ್ಟ್ಸ್ ಅಥವಾ ಥ್ರೀ ಫರ್ತ್ ಇವರ ಆಯ್ಕೆ. ಪಾರ್ಟಿಗಳಿಗಂತೂ ಹುಡುಗಿಯರ ಮೊದಲ ಆಯ್ಕೆ ಶಾರ್ಟ್ ಸ್ಕಟ್ ಮತ್ತು ಟಾಪ್. ‘ಕೊಂಚ ಚಳಿ ಇರೋವಾಗ ಸ್ಕರ್ಟ್ ಬದಲಾಗಿ ಲೆಗ್ಗಿಂಗ್ಸ್ ಹಾಕ್ಕೊಳೋ ಹುಡ್ಗೀರು ಜೀನ್ಸ್ ಮತ್ತು ಬಾಡಿ ಫಿಟ್ ಟಾಪ್ಸ್ ಹಾಕೋದನ್ನು ಇಷ್ಟಪಡ್ತಾರೆ. ಮಳೆಗಾಲದಲ್ಲಿ ಜಾಕೆಟ್ ಹಾಕೋದು ಸ್ಟೈಲ್‌ನ ಜೊತೆಗೆ ಆರಾಮವಾಗಿಯೂ ಇರುತ್ತೆ’ ಅಂತಾರೆ ಮಾಡೆಲ್ ಟೀನಾ ಪೊನ್ನಪ್ಪ.
ಕಾಲೇಜು ಸಂಬಂ ಕಾರ್‍ಯಕ್ರಮಗಳಿಗಾದರೆ ಫಂಕಿ ಆಕ್ಸೆಸರಿಗಳು ಇವರನ್ನಲಂಕರಿಸುತ್ತವೆ. ಪಾರ್ಟಿಯ ಮಟ್ಟವನ್ನು ನೋಡಿಕೊಂಡು ಅದಕ್ಕೆ ತಕ್ಕ ರೀತಿಯ ಅಲಂಕಾರ ಮಾಡಿಕೊಳ್ಳುತ್ತಾರೆ. ಫಾಸ್ಟ್ರಾಕ್‌ನಂತಹ ಫ್ಯಾನ್ಸಿ ಲುಕ್ ಇರೋ ವಾಚ್‌ಗಳು ಇವರಲ್ಲಿ ಹೆಚ್ಚು ಜನಪ್ರಿಯ. ನೂರು ರುಪಾಯಿಗೆ ಸಿಗೋ ವಾಚ್ ಕಟ್ಟಿಕೊಂಡು ಗಮನಸೆಳೆಯುವಂತೆ ಸಿಂಗರಿಸಿಕೊಳ್ಳಲೂ ಇವರಿಗೆ ಗೊತ್ತು. ಜೊತೆಗೆ ಹೈಹೀಲ್ಡ್ ಚಪ್ಪಲಿಯಂತೂ ಇದ್ದೇ ಇರುತ್ತದೆ.
ಬಗೆ ಬಗೆ ಆಕ್ಸೆಸರಿ
‘ಮರದಿಂದ ತಯಾರಿಸಿರೋ ಬಗೆಬಗೆಯ ಅಲಂಕಾರ ಸಾಮಗ್ರಿಗಳಿಗೆ ಈಗ ಹೆಚ್ಚು ಡಿಮ್ಯಾಂಡ್. ಕಾಲೇಜು ಹುಡುಗೀರ್‍ಗೆಲ್ಲ ಇದೇ ಫೇವರಿಟ್’ ಅಂತಾರೆ ಬೆಂಗಳೂರಿನ ಎಂಕಾಂ ವಿದ್ಯಾರ್ಥಿನಿ ಪಾವನಾ. ಕತ್ತಿನಲ್ಲಿ ಎದ್ದು ಕಾಣಿಸೋ ಮರದ ನೆಕ್‌ಪೀಸ್, ಕಿವಿ, ಕೈಗಳಿಗೂ ಸೂಕ್ಷ್ಮ ಕೆತ್ತನೆಯ ಮರದ ಆಭರಣಗಳು ಇವರ ಸಂಗ್ರಹದಲ್ಲಿ ಇದ್ದೇ ಇರುತ್ತದೆ. ಜೊತೆಗೆ ಒಂದೇ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದೂ ಈಗಿನ ಟ್ರೆಂಡ್. ಒಂದೇ ಕಾಲಿಗೆ ಟೋ ರಿಂಗ್ ಹಾಕಿಕೊಳ್ಳುವುದು ಹುಡುಗಿಯರ ಸ್ಟೈಲ್ ಆದರೆ ಒಂದೇ ಕಿವಿಗೆ ಪುಟ್ಟ ಓಲೆ ಧರಿಸಿಕೊಳ್ಳುವುದು ಹುಡುಗರ ಫ್ಯಾಷನ್.
ಕಾಲೇಜು ಆವರಣಕ್ಕೆ ಬಗೆಬಗೆ ಗಡ್ಡ ಮಾಡಿಸಿಕೊಳ್ಳೋದು ಕಷ್ಟವಾದರೂ ವಿಧವಿಧ ಹೇರ್‌ಸ್ಟೈಲ್‌ಗಂತೂ ಕೊರತೆ ಇಲ್ಲ. ಸಿನಿಮಾ ಹೀರೋಗಳು ಮಾಡಿದ ಒಂದೊಂದು ಹೇರ್‌ಸ್ಟೈಲ್ ಕೂಡ ಇಲ್ಲಿ ಪ್ರಯೋಗಕ್ಕೆ ಒಳಪಡುತ್ತದೆ. ಸ್ಟೆಪ್ ಕಟ್, ಬಾಬ್, ಪೋನಿ.. ಹೀಗೆ ನೂರೆಂಟು ಸ್ಟೈಲು ಹುಡುಗಿಯರಿಗಿದೆ. ಜೊತೆಗೆ ಕಲರ್ ಹಾಕಿಸಿಕೊಳ್ಳುವವರೂ ಉಂಟು. ಪಾರ್ಟಿಗಳಿಗೆ ಹೀಲ್ಡ್ ಧರಿಸೋ ಹುಡುಗೀರು ಕಾಲೇಜುಗಳಿಗೆ ಫ್ಲ್ಯಾಟ್ಸ್ ಹಾಕ್ತಾರೆ. ಇಷ್ಟೆಲ್ಲ ರೆಡಿ ಆಗಿ ಹೆಗಲಿಗೊಂದು ದೊಡ್ಡ ವ್ಯಾನಿಟಿ ಬ್ಯಾಗ್ ಹಾಕಿಕೊಂಡರೆ ಕಾಲೇಜ್‌ಗೆ ಫುಲ್ ರೆಡಿ. ಹುಡುಗರೂ ಕೈಲೆರಡು ಪುಸ್ತಕ ಹಿಡಿಯೋದಕ್ಕಿಂತ ಬೆನ್ನಿಗೊಂದು ಬ್ಯಾಗ್ ಹಾಕಿ ಬರೋದೇ ಹೆಚ್ಚು.
ಫ್ಯಾಷನಿಷ್ಠರು
ಇವರೆಲ್ಲ ಹೀಗೆ ಹೊಸ ಫ್ಯಾಷನ್ ಮಾಡೋದಕ್ಕೆ ಬಹುತೇಕ ಹಿಂದಿ ಸಿನಿಮಾಗಳೇ ಸೂರ್ತಿ. ಕ್ಯಾಂಪಸ್ ಕಥೆಯುಳ್ಳ ಸಿನಿಮಾಗಳು ಬಂದರೆ ತಕ್ಷಣ ಇವರೂ ಅಪ್‌ಡೇಟ್ ಆಗಿಬಿಡೋದು ಮಾಮೂಲು. ಓದೋದರ ಜೊತೆಗೆ ಫ್ಯಾಷನ್ ಕೂಡ ತಾಜಾ ಆಗಿ ಮೆಂಟೇನ್ ಆಗಿ ನಿರ್ವಹಿಸೋ ಫ್ಯಾಷನಿಷ್ಟರು ಇವರು. ಅದಕ್ಕೇ, ಕ್ಯಾಂಪಸ್‌ನ ರೀತಿಯೇ ಹಾಗೆ. ಇಲ್ಲಿರೋ ವಿದ್ಯಾರ್ಥಿಗಳಂತೆ ಅಲ್ಲಿ ಬದಲಾಗೋ ಫ್ಯಾಷನ್ ಕೂಡ ತುಂಬಾ ಫಾಸ್ಟ್ ಆಗಿ ಬದಲಾಗುತ್ತೆ. ಇವರೆಲ್ಲರ ಸ್ಟೈಲ್ ಸ್ಟೇಟ್‌ಮೆಂಟ್ ಎಷ್ಟೇ ಬದಲಾದರೂ ತಮಗೆ ಕಂಫರ್ಟೆಬಲ್ ಅನ್ನಿಸುವುದನ್ನೇ ಇವರು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಸ್ಟೈಲ್ ಟ್ರೆಂಡಿಯಾಗಿಯೂ ಕಾಲೇಜು ವಾತಾವರಣಕ್ಕೆ ಪೂರಕವಾಗಿಯೂ ಇರುವಂತೆ ನೋಡಿಕೊಳ್ಳಬಲ್ಲ ಜಾಣರು ಇವರು. ಹೊಸ ಫ್ಯಾಷನ್ ಎಲ್ಲಿದ್ದರೂ ಇವರನ್ನೇ ಅರಸಿ ಬರುವುದು ಇದಕ್ಕೇ.
————–
ಲೆಗ್ಗಿಂಗ್ಸ್‌ನಂತೆಯೇ ಕಾಣೊ ಜೆಗ್ಗಿಂಗ್ಸ್ ಈಗ ಕ್ಯಾಂಪಸ್‌ಗಳಲ್ಲಿ ತುಂಬಾ ಫೇಮಸ್. ಲೆಗ್ಗಿಂಗ್ಸ್, ಜೀನ್ಸ್ ಕೂಡ ಹಾಕ್ತಾರೆ. ವುಡನ್ ನೆಕ್‌ಪೀಸ್, ಬ್ಯಾಂಗಲ್, ಈಯರ್ ರಿಂಗ್ಸ್‌ಗಳೂ ತುಂಬಾ ಬಳಕೆಯಲ್ಲಿವೆ.
ಪಾವನಾ, ಎಂಕಾಂ, ಬೆಂಗಳೂರು ವಿವಿ.
ಕಾಲೇಜಿಗೆ ಕ್ಯಾಶುವಲ್ ಆಗಿ ಹೋಗುವ ಹುಡುಗರೆಲ್ಲಾ ಪಾರ್ಟಿಗಳಿಗೆ ತುಂಬಾ ಗಾರ್ಜಿಯಸ್ ಆಗಿ ಬರ್‍ತಾರೆ. ಕೆಲವು ಕಡೆಗೆ ಫಂಕಿ ಐಟಮ್‌ಗಳನ್ನು ತೊಡೋ ಯೂಥ್ ಇನ್ನು ಕೆಲವು ಕಡೆ ಡೀಸೆಂಟ್ ಆಗಿ ಎಲಿಗೆಂಟ್ ಆಗಿ ಕಾಣೋ ಹಾಗೆ ಬರ್‍ತಾರೆ. ಬ್ಲ್ಯಾಕ್ ಕಲರ್ ಡ್ರೆಸ್ ಕೂಡ ಈಗಿನ ಟ್ರೆಂಡ್.
ಟೀನಾ ಪೊನ್ನಪ್ಪ, ಮಾಡೆಲ್
ಅರ್ಧ ಫಾರ್ಮಲ್, ಅರ್ಧ ಫ್ಯಾಷನೇಬಲ್ ಡ್ರೆಸ್ ಹಾಕೋದು ಈಗಿನ ಟ್ರೆಂಡ್. ಜೀನ್ಸ್‌ಗೆ ಅವಕಾಶವಿಲ್ಲದಿದ್ದರೆ ಫಾರ್ಮಲ್ಸ್‌ನೇ ಹಾಕ್ತಾರೆ. ಟಿ-ಶರ್ಟ್‌ನಲ್ಲಿ ‘ಸನ್ ಆಫ್ ಅ ರಿಚ್’ ಎಂಬಿತ್ಯಾದಿ ಬಗೆಬಗೆ ಸ್ಲೋಗನ್‌ಗಳಿರೋದನ್ನೇ ಹಾಕ್ಕೊಂಡು ಶೋ ಆಫ್ ಮಾಡೋದು ಹೆಚ್ಚು. ಹುಡುಗರ ಈ ಫ್ಯಾಷನ್‌ನಲ್ಲೆಲ್ಲ ಹೆಣ್ಣುಮಕ್ಕಳನ್ನು ಇಂಪ್ರೆಸ್ ಮಾಡೋ ಐಡಿಯಾ ಇದ್ದೇ ಇರುತ್ತದೆ.
ಶರತ್ ಎಂ. ಶರ್ಮಾ, ಅಂತಿಮ ಪತ್ರಿಕೋದ್ಯಮ ಬಿಎ, ವಿಜಯಾ ಕಾಲೇಜು, ಬೆಂಗಳೂರು.