ಅವರು ಅಣ್ಣ-ತಂಗಿಯರಲ್ಲ. ಗಂಡ-ಹೆಂಡತಿಯಂತೂ ಅಲ್ಲವೇ ಅಲ್ಲ. ಆದರೆ ಇಬ್ಬರೂ ಪರಸ್ಪರ ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಅನಿಸಿದ್ದನ್ನೆಲ್ಲಾ ಹಂಚಿಕೊಳ್ಳುತ್ತಾರೆ. ಇವರಿಬ್ಬರ ನಡುವಣ ನಂಟೇನು? ಆತ್ಮಗಳ ಸಾಂಗತ್ಯವೆಂದರೆ ಹೀಗೇನಾ?
ಅವನು ಮಾತಾಡುತ್ತಿದ್ದರೆ ಇವಳೊಳಗೆ ಖುಷಿಯ ಉಲಿ. ಇವಳು ಜೊತೆಗಿದ್ದರೆ ಅವನಲ್ಲಿ ಪುಳಕದ ಅಲೆ. ಅವರಿಬ್ಬರ ನಡುವೆ ಏನಿಲ್ಲ? ಮಾತು, ಮೌನ, ನಗು, ಮುನಿಸು, ಹರಟೆ, ಕಿಲಾಡಿತನ… ಎಲ್ಲವೂ ಇದೆ. ಇಬ್ಬರೂ ದಿನಕ್ಕೊಮ್ಮೆಯಾದರೂ ಸಿಕ್ಕಿ ಮಾತಾಡಬೇಕು, ಹಾಗಾದರೇ ಜೀವಕ್ಕೆ ಸಮಾಧಾನ. ಹಾಗಿದ್ದರೆ ಅವರಿಬ್ಬರು ಪ್ರೇಮಿಗಳಾ?
ಹೌದು, ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಆದರೆ ಆ ಪ್ರೀತಿ ಎಲ್ಲರಂತಲ್ಲ. ವಿವಾಹವೆಂಬ ಚೌಕಟ್ಟಿನ ಒಳಗೆ ತಮ್ಮ ಸಂಬಂಧವನ್ನು ಸೀಮಿತಗೊಳಿಸುವ ತುಡಿವ ಅವರಿಗಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆಯೂ ನಾಲ್ಕು ಗೋಡೆಗಳ ಮಧ್ಯೆ ಇರುವ ತಹತಹಿಕೆಯೂ ಅವರಿಗಿಲ್ಲ. ದೈಹಿಕ ವಾಂಛೆಗಳನ್ನು ಮೀರಿದ ಪ್ರೀತಿ ಅವರದು. ಆತ್ಮಸಂಗಾತಿಗಳೆಂದರೆ ಇವರೇ.
ಇದೊಂಥರಾ ಸ್ಪೆಷಲ್
ಆಕೆಗೆ ಗಂಡನಿರಬಹುದು. ಆದರೂ ಆಕೆಗೆ ಮನಸ್ಸಿನ ಭಾವನೆಗಳನ್ನೆಲ್ಲ ಹಂಚಿಕೊಳ್ಳಬೇಕೆನ್ನಿಸುವುದು ಇವನ ಜೊತೆಯೇ. ಅವನಿಗೂ ಅಷ್ಟೆ. ಪತ್ನಿ ಇದ್ದರೂ ತನ್ನ ಅನಿಸಿಕೆಗಳಿಗೆಲ್ಲ ಸೂಕ್ತ ಸ್ಪಂದನೆ ಸಿಗುವುದು ಇವಳಲ್ಲಿಯೇ ಎಂಬ ಭಾವ. ಸಾವಿರ ಮೈಲುಗಳಷ್ಟು ದೂರವಿದ್ದರೂ ಪ್ರತಿದಿನವೂ ತಮ್ಮೊಳಗನ್ನು ಹಂಚಿಕೊಳ್ಳದಿದ್ದರೆ ಇಬ್ಬರಿಗೂ ಸಮಾಧಾನವಿಲ್ಲ. ಅವನು ಅವಳ ಸಮಸ್ಯೆಗೆ ಪರಿಹಾರ ಹೇಳುತ್ತಾಳೋ ಇಲ್ಲವೋ, ಆದರೂ ಅವನಲ್ಲೊಮ್ಮೆ ಅದನ್ನು ಹೇಳಬೇಕು. ಅವನು ನಿರ್ಧಾರ ತೆಗೆದುಕೊಳ್ಳುವುದು ತನ್ನಿಷ್ಟದ ಹಾಗೆಯೇ, ಆದರೂ ಅವಳಲ್ಲೊಮ್ಮೆ ಕೇಳಬೇಕು… ಹೀಗಿರುತ್ತದೆ ಆತ್ಮಸಂಗಾತಿಗಳ ನಡುವಣ ನಂಟು.
ಇದು ಪ್ರೀತಿ ಹೌದು. ಆದರೆ ಅಣ್ಣ-ತಂಗಿ ನಡುವಣ ಪ್ರೀತಿಯಂತಲ್ಲ ಇದು. ಗಂಡ-ಹೆಂಡಿರ ನಡುವಣ ಪ್ರೇಮವೂ ಅಲ್ಲ. ಹುಡುಗಿಯೊಬ್ಬಳು ಹುಡುಗನಿಗೆ ರಾಖಿ ಕಟ್ಟಿದಾಗ ಹುಟ್ಟಿಕೊಳ್ಳುವ ಸಂಬಂಧವೂ ಇದಲ್ಲ. ಆದರೆ, ಇದು ಸದಾ ಒಬ್ಬ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಬಂಧ. ಹಾಗೆಂದು ಫ್ಲರ್ಟಿಂಗ್‌ನ ಹೆಸರಿನಲ್ಲಿ ಸರಸ ಸಲ್ಲಾಪ ನಡೆಸುವ ಹುಡುಗ-ಹುಡುಗಿಯೂ ಇವರಲ್ಲ. ಲೈಂಗಿಕತೆಯ ಭಾವವೂ ಸೋಕದ ಬರಿಯ ಮಾನಸಿಕ ಪ್ರೇಮ ಇದು. ಈ ಆತ್ಮಸಾಂಗತ್ಯಕ್ಕೇ ಆಂಗ್ಲ ಪರಿಭಾಷೆಯಲ್ಲಿ ‘ಪ್ಲೆಟಾನಿಕ್ ಲವ್’ ಎಂಬ ಹೆಸರು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಇಪ್ಪತ್ತರ ಹುಡುಗಿಗೆ ಐವತ್ತರ ಪುರುಷನೊಂದಿಗೆ ಈ ಭಾವ ಹುಟ್ಟಬಹುದು. ನಲುವತ್ತರ ಸ್ತ್ರೀ ಮೂವತ್ತರ ಪುರುಷನೊಂದಿಗೂ ಆತ್ಮಸಖ್ಯವನ್ನು ಹೊಂದಿರಬಹುದು.
ದೈವಿಕ ಪ್ರೀತಿ
ಈ ಪ್ಲೆಟಾನಿಕ್ ಲವ್ ಆಧ್ಯಾತ್ಮಿಕವಾಗಿ ‘ದೈವಿಕ ಪ್ರೀತಿ’ ಎನಿಸಿಕೊಂಡಿದೆ. ವಚನಕಾರರಲ್ಲಿ ಕಾಣುವ ‘ಶರಣ ಸತಿ ಲಿಂಗ ಪತಿ’ ಭಾವದ ಮೂಲದಲ್ಲಿ ಇರುವುದು ಇದೇ ಪ್ರೀತಿ. ಸೂಫಿ ಪಂಥದವರು ಅಲ್ಲಾನೆಡೆಗೆ ತೋರಿಸುವ ‘ರುಹಾನಿ ಲವ್’ನಲ್ಲೂ ಇದೇ ಪ್ರೀತಿ ವ್ಯಕ್ತವಾಗುತ್ತದೆ. ಇದನ್ನೇ ಅಕ್ಕಮಹಾದೇವಿ ತನ್ನ ವಚನವೊಂದರಲ್ಲೂ ಹೇಳಿದ್ದಾಳೆ,
‘ಹಸಿವಾದರೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ ಬಾವಿಗಳುಂಟು
ಶಯನಕೆ ಹಾಳು ದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಾ
ಆತ್ಮ ಸಂಗಾತಕ್ಕೆ ನೀ ಎನಗುಂಟು..’
ಅಕ್ಕನ ಇತರೆ ವಚನಗಳಲ್ಲಿ ಲೈಂಗಿಕ ಭಾವ ಸುಳಿದಾಡುವುದಾದರೂ ಇಲ್ಲಿ ಆತ್ಮಸಾಂಗತ್ಯದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಆಕೆ ವ್ಯಕ್ತಪಡಿಸಿದ್ದಂತೂ ಹೌದು.
ಇದು ಸಾಧ್ಯವಾ?
ವಂಶವಾಹಿ ಲೆಕ್ಕಾಚಾರದ ಪ್ರಕಾರ ಈ ಬಗೆಯ ಸಂಬಂಧ ಇರುವುದು ಕಷ್ಟಸಾಧ್ಯ. ಸಾಮಾನ್ಯವಾಗಿ ಗಂಡು-ಹೆಣ್ಣಿನ ನಡುವೆ ಒಂದು ಮಟ್ಟದ ಲೈಂಗಿಕ ಆಕರ್ಷಣೆ ಇದ್ದೇ ಇರುತ್ತದೆ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇದು ಅಂತರ್ಗತವಾಗಿರುತ್ತದೆ. ವ್ಯಕ್ತಿಗಳಿಂದ ಹೊರಸೂಸುವ ‘ಫೆರೋಮೋನ್’ಗಳೆಂಬ ರಾಸಾಯನಿಕದ ಕಾರಣದಿಂದ ವಿರುದ್ಧ ಲಿಂಗಿಗಳು ದೈಹಿಕವಾಗಿ ಕಣ್ಸೆಳೆಯುತ್ತಾರೆ. ಬರಿಯ ಕ್ಷಣಮಾತ್ರ ಕೇಳಿದ ಧ್ವನಿಯೂ ಈ ಸೆಳೆತಕ್ಕೆ ನೆಪವಾಗಬಹುದು. ಆದ್ದರಿಂದಲೇ ಕಾಯದ ಕಾಮನೆಗಳಿಲ್ಲದೇ ಸಂಬಂಧವೊಂದಿದ್ದರೆ ಅದು ಬರಿಯ ಸ್ನೇಹವಷ್ಟೇ ಆಗಿರಬಹುದು, ಅಲ್ಲಿ ಪ್ರೇಮವಿರಲಾರದು ಎನ್ನುತ್ತದೆ ಜೆನೆಟಿಕ್ ಲೆಕ್ಕಾಚಾರ. ಮೊದಮೊದಲು ಇಬ್ಬರೂ ಇಂತಹ ಪ್ಲೆಟಾನಿಕ್ ಪ್ರೇಮಿಗಳಾಗಿದ್ದರೂ ಅಲ್ಲಿ ರೊಮ್ಯಾಂಟಿಕ್ ಭಾವ ಹುಟ್ಟಿದರೆ ಮುಂದೆ ಅದು ಪ್ಲೆಟಾನಿಕ್ ಲವ್ ಆಗಿ ಉಳಿಯುವುದು ಸಾಧ್ಯವಿಲ್ಲ. ಇಬ್ಬರಲ್ಲೊಬ್ಬರಲ್ಲಿ ದೈಹಿಕ ಆಸಕ್ತಿ ಹುಟ್ಟಿದರೂ ಅದು ಆತ್ಮಸಾಂಗತ್ಯವಾಗಿರದು.
ಆದರೆ ಇಂಥ ಸಂಬಂಧಗಳು ಹಿಂದೆ ಆಗಿಹೋದದ್ದಿದೆ, ಈಗಲೂ ನಮ್ಮ ಸುತ್ತಲಲ್ಲಿ ಇಂಥ ಆತ್ಮಸಂಗಾತಿಗಳನ್ನು ಗಮನಿಸಲೂಬಹುದು. ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್ ನಿವೇದಿತಾ ಇಂತಹ ಆತ್ಮ ಸಾಂಗತ್ಯಕ್ಕೊಂದು ಅಪೂರ್ವ ನಿದರ್ಶನವೆನಿಸಿದರು. ಗಾಂಜಿಯವರಿಗೂ ಹಲವು ಹೆಣ್ಣುಮಕ್ಕಳೊಂದಿಗೆ ಇದ್ದುದು ಇಂತಹ ಸಾಂಗತ್ಯವೇ. ಅರಬಿಂದೋ ಹಾಗೂ ಮೀರಾ ಅದಿತಿ ಮಧ್ಯೆಯೂ ಇಂತಹುದೊಂದು ಸಂಬಂಧವಿತ್ತು. ಅಮೆರಿಕಾದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಹಾಗೂ ಅಮೆರಿಕಾದ ಧ್ವಜವನ್ನು ವಿನ್ಯಾಸಗೊಳಿಸಿದವಳೆನ್ನಲಾದ ಮಹಿಳೆ ಬೆಟ್ಸಿ ರಾಸ್ ಮಧ್ಯೆಯೂ ಇಂತಹ ಪ್ರೇಮವಿತ್ತು ಎನ್ನಲಾಗಿದೆ.
ಅವರ ಜೊತೆ ಎಲ್ಲ ಮರೆತು…
ಪ್ರತಿಯೊಂದು ಪ್ರೇಮ ಪ್ರಸಂಗವೂ ಆರಂಭದಲ್ಲಿ ಪ್ಲೆಟಾನಿಕ್ ಸ್ವರೂಪದ್ದೇ ಆಗಿರುತ್ತದೇನೋ, ಯಾಕೆಂದರೆ ಪ್ರೀತಿಸುವ
ಮೊದಲಿನ ಹಂತದಲ್ಲಿ ದೈಹಿಕ ಕಾಮನೆಗಳಿರುವುದಿಲ್ಲ. ಪತಿ-ಪತ್ನಿಯರ ಸಂಬಂಧದಲ್ಲಿಯೂ ದಾಂಪತ್ಯ ಹಳತಾದಂತೆ ಈ ಪ್ಲೆಟಾನಿಕ್ ಲವ್‌ನ ಭಾವ ಕಾಣಿಸಿಕೊಳ್ಳುತ್ತದೆ. ಮೊದಲು ದೈಹಿಕ ಆಕರ್ಷಣೆಯ ಹಸಿಬಿಸಿಯಲ್ಲಿ ಗಂಡ-ಹೆಂಡಿರ ಬಂಧ ಗಟ್ಟಿಯಾದರೆ ಬಳಿಕ ಮಾನಸಿಕ ಅವಲಂಬನೆಯೇ ಅವರಿಬ್ಬರ ಬದುಕಿನ ಮೂಲಸೆಲೆಯಾಗುತ್ತದೆ. ಆಗ ಅವರಿಬ್ಬರಲ್ಲಿ ಈ ಆತ್ಮಸಾಂಗತ್ಯವೇ ಎಲ್ಲವನ್ನೂ ಮೀರಿ ನಿಲ್ಲುತ್ತದೆ.
ಸಂಬಂಧಗಳಿಗೆಲ್ಲ ಹೆಸರು ಬೇಕೆನ್ನುವ ಕನ್ನಡಕವನ್ನು ಹಾಕಿಕೊಂಡಿರುವ ಸಮಾಜ ನಮ್ಮದು. ಇಂಥಲ್ಲಿ ಎಲ್ಲ ರೀತಿಯ ಬಂಧಗಳನ್ನೂ ಮೀರಿ ನಿಂತ ಆತ್ಮಸಾಂಗತ್ಯದ ಪರಿಕಲ್ಪನೆ ಎಲ್ಲರ ಬೊಗಸೆಗೂ ದಕ್ಕುವುದು ಕಷ್ಟ. ಸುತ್ತಲಿರುವವರು ಅದಕ್ಕೆ ಒಪ್ಪುವ ಸಾಧ್ಯತೆಯೂ ಕಡಿಮೆ.
ನಂಟಿಗೊಂದು ಹೆಸರು ಕೊಟ್ಟಾಗ ಅಲ್ಲಿ ವ್ಯಕ್ತಿಗಳ ನಡುವೆ ಅಹಂ, ಸಣ್ಣತನ, ಭಾವನೆಗಳ ತಾಕಲಾಟ ಎಲ್ಲವೂ ಬರುತ್ತದೆ. ಆದರೆ ಇವ್ಯಾವುದೂ ಇಲ್ಲದ ಈ ಆತ್ಮಸಖ್ಯದ ಬಂಧದ ಅನುಭವವೇ ಬಲು ಅನನ್ಯ. ಹೀಗೆ ತನ್ನ ಮನಸ್ಸಿನ ಎಲ್ಲವನ್ನೂ ಹಂಚಿಕೊಳ್ಳುವ, ಮಾನಸಿಕ ಸಾಂಗತ್ಯವನ್ನು ನೀಡಲು ಸೂಕ್ತ ವ್ಯಕ್ತಿಯೊಬ್ಬರು ಸಿಕ್ಕರೆ ಅದೃಷ್ಟ. ಸಿಗದಿದ್ದರೆ ಚಿಂತೆ ಬೇಡ, ನಮ್ಮ ಮನಕ್ಕೆ ನಮ್ಮ ಆಂತರ್‍ಯದ ಸಾಂತ್ವನವಾದರೂ ಇರಲಿ.
——-
ಈ ಪ್ಲೆಟಾನಿಕ್ ಲವ್ ಇಂದು-ನಿನ್ನೆಯ ಪರಿಕಲ್ಪನೆಯಲ್ಲ. ‘ಪ್ಲೆಟಾನಿಕ್ ಲವ್’ ಎಂಬ ಪದವನ್ನು ಮೊದಲು ಟಂಕಿಸಿದವನು ಇಟಾಲಿಯನ್ ವಿದ್ವಾಂಸ ಮಾರ್ಸಿಲೋ ಫಿಸಿನೋ. ಈ ಪರಿಕಲ್ಪನೆ ಪ್ಲಾಟೋನ ತತ್ವಗ್ರಂಥ ‘ಸಿಂಪೋಸಿಯಮ್’ನಲ್ಲಿ ಮೊದಲ ಬಾರಿ ಉಲ್ಲೇಖಗೊಂಡಿತ್ತು. ಇದರಲ್ಲಿ ಹೆಸರಿಸಲಾದ ಸನ್ಯಾಸಿನಿ ಡಯಟಿಮಾ ಹೇಳಿದ ತತ್ವಗಳೇ ಈ ‘ಪ್ಲೆಟಾನಿಕ್ ಲವ್’ಗೆ ಮೂಲ ಎನ್ನಲಾಗಿದೆ. ಡಯಾಟಿಮಾ ಪ್ರಕಾರ ಪ್ರೇಮವೆಂದರೆ ದೈವೀ ಚಿಂತನೆಯ ಹಾದಿ. ಇದು ದೇವರನ್ನು ಶಾಶ್ವತವಾಗಿ ಹೊಂದುವ ಕೆಲಸ. ಆಕೆಯ ಪ್ರಕಾರ ಇದು ಸುಂದರ ವಸ್ತುಗಳನ್ನು ಹೊಂದಬಯಸುವ ಕಲಾವಿದನೊಬ್ಬನ ಬಯಕೆಯಾಗಿರಬಹುದು, ಜ್ಞಾನವಂತನಾಗುವ ತತ್ವಜ್ಞಾನಿಯೊಬ್ಬನ ಬಯಕೆಯೂ ಆಗಿರಬಹುದು. ಮಕ್ಕಳನ್ನು ಹೊಂದುವ ಅಥವಾ ಇನ್ನಾವುದೇ ಕಲಾವಸ್ತು, ವಿಚಾರದತ್ತಲಿನ ಪ್ರೇಮಿಗಳ ತುಡಿತವೂ ಇದು ಆಗಿರಬಹುದೆನ್ನುತ್ತಾಳೆ ಆಕೆ. ಹೀಗೆ ಕ್ರಿಯೇಟಿವ್ ಆಗಿರುವುದರಿಂದ ಪ್ರೇಮಿಗಳಿಗೆ ಶಾಶ್ವತತೆ ಪ್ರಾಪ್ತವಾಗುತ್ತದೆ ಎಂಬುದು ಆಕೆಯ ಹೇಳಿಕೆ. ಆದರೆ ಎಲ್ಲಕ್ಕಿಂತ ಶ್ರೇಷ್ಠ ಪ್ರೇಮಿಗಳೆಂದರೆ ಈ ದೈಹಿಕ ಅಥವಾ ವೈಯಕ್ತಿಕ ಪ್ರೀತಿಯನ್ನು ಮೀರಿ ಬೌದ್ಧಿಕ ಪ್ರೀತಿಯ ಮಜಲನ್ನು ಹೊಕ್ಕವರು ಎನ್ನುತ್ತಾಳೆ ಡಯಟಿಮಾ.
ಪ್ಲಾಟೋನ ಕೃತಿಯಲ್ಲಿ ಕಂಡುಬಂದ ಈ ಪರಿಕಲ್ಪನೆಯನ್ನು ಆಧರಿಸಿಯೇ ವಿಲಿಯಮ್ ಡಿ ಅವೆನಂತ್ ಎಂಬ ಕವಿ ಹಾಗೂ ನಾಟಕಕಾರ ೧೬೩೬ರಲ್ಲಿ ‘ದ ಪ್ಲೆಟಾನಿಕ್ ಲವರ್‍ಸ್’ ಎಂಬ ಹಾಸ್ಯ ನಾಟಕವನ್ನು ಬರೆದ. ಇದೇ ಪ್ಲೆಟಾನಿಕ್ ಲವ್ ಅನ್ನು ವಚನಕಾರರು ೧೨ನೇ ಶತಮಾನದಲ್ಲಿ ‘ಆತ್ಮ ಸಾಂಗತ್ಯ’ ಎಂದರು.