ಅದೇ ಕ್ಲಾಸು, ಅದೇ ಪಾಠ. ಎಷ್ಟೊಂದು ಕೇಳೋದಪ್ಪಾ, ಎಲ್ಲಾ ಸಿಕ್ಕಾಪಟ್ಟೆ ಬೋರ್.. ಹೀಗನ್ನಿಸ್ತಾ ಇದ್ಯಾ ನಿಮ್ಗೆ? ನಿಜ, ಬೋರ್‌ಡಮ್ ಎಲ್ಲರನ್ನೂ ಕಾಡುತ್ತೆ. ಆದರೆ ಇದರಿಂದ ಹೊರಬರೋಕೂ ಅವರವರಲ್ಲೇ ದಾರಿಯೂ ಇರುತ್ತೆ. ಆದರೆ ಈ ಸುಮ್ಮನೇ ಕಾಡುವ ಬೇಸರದಲ್ಲೇ ಮುಳುಗಿ ಹೋದರೆ ಮಾತ್ರ ಬದುಕೂ ಮುಳುಗಬಹುದು.
———
ಈಗ ಕೆಮಿಸ್ಟ್ರಿ ಕ್ಲಾಸು. ಕ್ಲಾಸಿನಲ್ಲಿ ಅರ್ಧದಷ್ಟು ಜನರ ಮುಖ ಡಲ್ ಹೊಡೀತಿದೆ. ಕಾರಣ ಇಷ್ಟೇ, ಅವರಿಗೆಲ್ಲ ಕೆಮಿಸ್ಟ್ರಿ ಅಂದ್ರೆ ಬೋರು. ಇವರ ಮಧ್ಯೆ ಕೂತಿರೋ ಚಂಚಲಾಗೂ ಬೇಸರವಾಗಿದೆ. ಆದ್ರೆ, ಅವಳ ಸಮಸ್ಯೆ ಬೇರೆಯೇ. ಅವಳ ಪಕ್ಕದ ಗೆಳತಿ ಪ್ರಜ್ಞಾ ಇವತ್ತು ಕಾಲೇಜಿಗೆ ಬಂದಿಲ್ಲ. ಅದಕ್ಕೇ ಅವಳಿಗೆ ಕಂಪೆನಿ ಇಲ್ದೆ ಸಖತ್ ಬೋರು. ಮುಂದಿನ ಬೆಂಚ್‌ನ ಸ್ನೇಹಾಗೆ ಕ್ಲಾಸ್ ಮುಗಿಸಿ ಪ್ರಾಕ್ಟಿಕಲ್ಸ್‌ಗೆ ಹೋಗ್ಬೇಕಲ್ಲಾ ಅನ್ನೋದೇ ಬೋರ್ ಅನಿಸಿದೆ. ಯಾರಿಗೆ ಗೊತ್ತು, ಇದೀಗ ಕ್ಲಾಸಿಗೆ ಬರಲಿಕ್ಕಿರುವ ಕೆಮಿಸ್ಟ್ರಿ ಲೆಕ್ಚರರ್‌ಗೂ ಪಾಠ ಮಾಡೋದಕ್ಕೆ ಬೋರ್ ಅನಿಸ್ತಿರಬಹುದಾ ಒಳಗೊಳಗೆ?!
ಹೌದು, ‘ಬೋರ್‌ಡಮ್’ ಕಾಡದಿರುವ ವ್ಯಕ್ತಿಗಳೇ ಇಲ್ಲವೇನೋ… ಬೋರಾಗೋದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣ. ಎಳೆಯ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಈ ‘ಬೋರ್’ ಕಾಡುತ್ತದೆ. ಮೇಲ್ನೋಟಕ್ಕೆ ಬೋರ್‌ಡಮ್ ಅಂದರೆ ಏಕತಾನತೆಯಿಂದ ಉಂಟಾಗುವ ಬೇಜಾರು. ತನಗೆ ಏನೂ ಕೆಲಸ ಇಲ್ಲದಿದ್ದಾಗ ಅಥವಾ ಸುತ್ತಲಿನ ಪರಿಸರದ ಬಗೆಗೆ ಆಸಕ್ತಿ ಸತ್ತಾಗ ಉಂಟಾಗುವ ಬೇಸರ. ಆದರೆ, ಇದನ್ನು ಬಗೆಯುತ್ತ ಹೊರಟರೆ ಇದು ಒಬ್ಬೊಬ್ಬರಲ್ಲಿ ಒಂದೊಂದು ಅರ್ಥವನ್ನು ಬಿಂಬಿಸಬಹುದು.
ಅಯ್ಯೋ ಬೇಜಾರು!
ಹಾಸ್ಟೆಲ್‌ನಲ್ಲಿ ದಿನವೂ ಅದೇ ಉಪ್ಪಿಟ್ಟು ಮಾಡ್ತಾರೆ, ತಿನ್ನೋಕೆ ಬೇಜಾರು… ಕಾಲೇಜ್‌ಗೆ ಹೋಗೋಕೆ ಆಟೋ ಸಿಕ್ಕಿಲ್ಲ, ನಡ್ಕೊಂಡು ಹೋಗೋದಕ್ಕೆ ಬೋರು. ಎಕ್ಸಾಮ್‌ಗೆ ಇನ್ನು ನಾಲ್ಕೇ ದಿನ, ಓದೋಕೆ ಬೇಸರ… ಹೀಗೇ ಲೆಕ್ಕ ಹಾಕುತ್ತ ಹೋದರೆ ಒಬ್ಬರನ್ನೇ ದಿನವೊಂದಕ್ಕೆ ಹಲವು ಬೇಸರಗಳು ಕಾಡುತ್ತವೆ. ಸ್ನಾನ ಮಾಡುವುದಕ್ಕೆ, ಬಟ್ಟೆ ಒಗೆಯುವುದಕ್ಕೆ, ತಿನ್ನುವುದಕ್ಕೆ, ಕುಡಿಯುವುದಕ್ಕೆ… ಹೀಗೆ ಎಲ್ಲಕ್ಕೂ ಬೋರ್ ಅನ್ನುತ್ತಾ ಓಡಾಡುವವರು ಅದೆಷ್ಟೋ.
ಕೆಲವರಿಗೆ ಮಾಡಿದ ಕೆಲಸವನ್ನೇ ಮಾಡಿದ, ಕೇಳಿದ ವಿಚಾರವನ್ನೇ ಕೇಳುವ ನೀರಸ ಅನುಭವದಿಂದ ಈ ಬೇಸರ ಬರಬಹುದು. ಇನ್ನು ಅನೇಕರಿಗೆ ಇದು ಅವರಲ್ಲಡಗಿರುವ ಸೋಮಾರಿತನ ಕೆಲಸವೊಂದನ್ನು ಮಾಡುವುದಕ್ಕೆ ಒಡ್ಡುವ ನೆಪವೂ ಆಗಬಹುದು. ಕೈಗೆ ಸಿಕ್ಕ ಫ್ರೀ ಸಮಯವನ್ನು ಸದುಪಯೋಗಪಡಿಸುವುದನ್ನು ತಿಳಿಯದೆ ಒದ್ದಾಡುವವರೂ ಇವರು ಇರಬಹುದು. ಕೆಲವರು ಬರೀ ಮಾತಿನಲ್ಲಿ ‘ಬೋರ್’ ಅನ್ನುತ್ತಾ ಇರುವುದೂ ಉಂಟು. ಹೀಗೆ ಹೇಳುತ್ತಲೇ ತಮ್ಮಲ್ಲಿ, ಸುತ್ತಲಲ್ಲಿ ಒಂದು ಬೇಸರದ ವಾತಾವರಣವನ್ನೂ ಇವರು ಹುಟ್ಟುಹಾಕಬಹುದು. ಆದರೆ, ‘ಬೋರ್’ ಅಂದರೆ ಇಷ್ಟೇ ಅಲ್ಲ. ಮನಃಶಾಸ್ತ್ರದ ಪ್ರಕಾರ ಇದರೊಳಗೆ ಇನ್ನೂ ಇದೆ.
ಮಾನಸಿಕ ಸಮಸ್ಯೆಯಾ?
‘ಯುವಕರಲ್ಲಿ ಈ ‘ಬೋರ್‌ಡಮ್’ ಪದದ ಬಳಕೆ ಹೆಚ್ಚು. ತಮಗೆ ಇಷ್ಟವಿಲ್ಲದ ಕೆಲಸವನ್ನು ಮುಂದೂಡಲು ಕೆಲವರು ಇದನ್ನು ಒಂದು ನೆಪವಾಗಿ ಬಳಸುವುದುಂಟು. ಇದು ವ್ಯಕ್ತಿತ್ವ ದೋಷವಾಗಿಯೂ, ಖಿನ್ನತೆಯ ಲಕ್ಷಣವಾಗಿಯೂ ಕಾಣಿಸುತ್ತದೆ. ಈ ಬಗ್ಗೆ ಎಚ್ಚರವಹಿಸಬೇಕು’ ಎನ್ನುತ್ತಾರೆ ಮನೋವೈದ್ಯ ಡಾ| ಪಿ.ವಿ.ಭಂಡಾರಿ.
ಮಾನಸಿಕ ವೈದ್ಯರು ಹೇಳುವ ಪ್ರಕಾರ ‘ಕೆಲವರು ಬಾರ್ಡರ್‌ಲೈನ್ ಪರ್ಸನಾಲಿಟಿ’ ಅಂತಿರುತ್ತಾರೆ. ಅವರಿಗೆ ಎಲ್ಲಾ ವಿಷಯಗಳೂ ಬೋರ್ ಅನ್ನಿಸುತ್ತದೆ. ಇಂಥವರು ಬಹಳ ಸೂಕ್ಷ್ಮ ಸ್ವಭಾವದವರು. ಯಾವುದೋ ವಿಷಯವನ್ನು ‘ಬೋರ್’ ಅನ್ನುತ್ತಲೇ ಇತರರ ಗಮನ ಸೆಳೆಯುವಂತೆ ಇನ್ನಾವುದೋ ಕೆಲಸವನ್ನು ವಿಶೇಷವಾಗಿ ಮಾಡಲು ಹೊರಡುವವರು ಇವರು. ಸದ್ದಿಲ್ಲದ ವಾತಾವರಣದಲ್ಲಿ ಭರ್ರನೆ ಬೈಕ್ ಓಡಿಸುವುದು, ಎಲ್ಲರೂ ಸುಮ್ಮನಿರುವಾಗ ಇದ್ದಕ್ಕಿದ್ದಂತೆ ಮಾತಾಡುವುದು ಹೀಗೆ ಇವರ ಚಟುವಟಿಕೆಗಳೇ ವಿಭಿನ್ನ. ಸಣ್ಣಪುಟ್ಟ ವಿಷಯಕ್ಕೆಲ್ಲ ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ಎನ್ನುವ ಇಂಥವರು ಆಕಸ್ಮಿಕವಾಗಿ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡುಬಿಡಬಹುದು. ಈ ಬಗೆಯವರಿಗೆ ಸದಾ ಏನಾದರೊಂದು ಹೊಸ ಚಟುವಟಿಕೆ ಬೇಕು.
ಇವರದು ಒಂದು ಬಗೆಯಾದರೆ ಖಿನ್ನತೆಯ ಅಂಚಿಗೆ ಸಿಲುಕಿರುವವರದು ಇನ್ನೊಂದು ಬಗೆ. ಇವರಿಗೆ ‘ಬೋರ್’ ಅನ್ನಲು ಕಾರಣವೇ ಬೇಡ. ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವುದೇ ಇವರ ಸ್ವಭಾವ. ಅವರು ತಮ್ಮ ಬಗ್ಗೆ, ಬದುಕಿನ ಭೂತ, ಭವಿಷ್ಯಗಳ ಬಗೆಗೆಲ್ಲ ನಕಾರಾತ್ಮಕ ಧೋರಣೆಯನ್ನೇ ಹೊಂದಿರುತ್ತಾರೆ. ವ್ಯಕ್ತಿ ಯಾವುದೋ ಕೆಲಸದಲ್ಲಿದ್ದರೆ, ‘ಬಾಸ್‌ಗೆ ನಾನು ಏನು ಮಾಡಿದ್ರೂ ಸರಿ ಹೋಗೋಲ್ಲ’ ಎಂಬ ಪಲ್ಲವಿ ಅವರ ಬಾಯಿಂದ ಕೇಳಿಬರುತ್ತಲೇ ಇರುತ್ತದೆ. ಈ ವ್ಯಕ್ತಿತ್ವ ದೋಷ ಕಾಡುತ್ತಿರುವ ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿಯಲ್ಲಿ ಶೇ.೮೦ರಷ್ಟು ಅಂಕ ಪಡೆದಿದ್ದರೂ ಪಿಯುಸಿಗೆ ಬಂದಾಗ ಶೇ.೬೦ರಷ್ಟು ಅಂಕಕ್ಕಿಳಿದು ಹಿಂದೆ ಹೆಚ್ಚು ಅಂಕ ಪಡೆದದ್ದಕ್ಕೆ ‘ಆಗ ಬರೇ ಟಿಕ್ ಮಾಡಿದ್ರೆ ಸಾಕಿತ್ತು, ಈಗ ಹಾಗಲ್ಲ’ ಅಂತ ನೆಪ ಹೇಳಬಲ್ಲ. ಇಂಥವರಿಗೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ. ಆದ್ದರಿಂದಲೇ ಪದೇ ಪದೇ ‘ಬೋರ್’ ಅನ್ನುವವರ ಬಗೆಗೆ ಎಚ್ಚರವಹಿಸಬೇಕು ಎನ್ನುತ್ತಾರೆ ಮನೋವೈದ್ಯರು.
ಬೋರ್‌ಡಮ್ ಬೇಡಮ್ಮಾ…
ಬೇಸರ ಸಹಜವಾಗಿಯೇ ಕಾಡಬಹುದು. ಆದರೆ ಇದನ್ನು ಬೆಳೆಯುವುದಕ್ಕೆ ಬಿಟ್ಟರೆ ಮರದೊಳಕ್ಕೆ ಗೆದ್ದಲು ಪ್ರವೇಶಿಸಿದಂತೆ ನಮ್ಮನ್ನೇ ನಾಶಮಾಡುವಷ್ಟು ಶಕ್ತಿ ಅದಕ್ಕಿದೆ. ಸುಮ್ಮನೇ ಕಾಡುವ ಬೇಸರಕ್ಕೆ ತಲೆಬಾಗಿದರೆ ದಿನೇ ದಿನೇ ನಮ್ಮ ಕಾರ್ಯಕ್ಷಮತೆ, ಜೀವನಾಸಕ್ತಿ ಕುಗ್ಗುವುದರ ಹೊರತಾಗಿ ಬೇರೆ ಪ್ರಯೋಜನವೇನೂ ಇಲ್ಲ. ಖಿನ್ನತೆಯ ಪರಿಣಾಮವಾಗಿ ಬೇಜಾರು ಕಾಡುತ್ತಿದ್ದರಂತೂ ಇದನ್ನು ಬೆಳೆಯುವುದಕ್ಕೆ ಬಿಡಲೇಬಾರದು. ಇನ್ನಷ್ಟು ಆಳವಾದ ಖಿನ್ನತೆಯ ಮಡುವಿಗೆ ವ್ಯಕ್ತಿಯನ್ನು ನೂಕಬಹುದು. ಅದೆಷ್ಟೋ ಯುವಕರು ಕುಡಿತ, ಡ್ರಗ್ಸ್‌ಗಳ ಚಟಕ್ಕೆ ಬೀಳುವುದೂ ಹೀಗೆ ಸಮಯ ಕೊಲ್ಲುವುದಕ್ಕಾಗಿಯೇ. ಇದನ್ನು ನಿವಾರಿಸಬೇಕಾದರೆ ನಾವೇ ಮನಸ್ಸಿಗೆ ಖುಷಿ ತಂದುಕೊಳ್ಳಬೇಕು, ಹೊಸ ಚಟುವಟಿಕೆಗಳಲ್ಲಿ ನಿರತರಾಗಿ ಫ್ರೆಶ್ ಆಗಬೇಕು.
ಪ್ರತಿಯೊಬ್ಬ ವ್ಯಕ್ತಿಗೂ ಮನಸ್ಸು ಮಾಡಿದರೆ ‘ಬೋರ್’ ಅನ್ನುವ ಪದವನ್ನು ತಂತಮ್ಮ ಪದಕೋಶದಿಂದ ಕಿತ್ತುಹಾಕುವ ಶಕ್ತಿ ಇದ್ದೇ ಇದೆ. ಸದಾ ಹೊಸ ಕೆಲಸ, ವಿಚಾರಗಳನ್ನು ಹಚ್ಚಿಕೊಳ್ಳುವುದು, ಇಷ್ಟವಾಗದ ಕೆಲಸಗಳನ್ನೂ ಹೊಸ ರೀತಿಯಲ್ಲಿ ಮಾಡುವ ಮೂಲಕ ಇಷ್ಟವಾಗಿಸಿಕೊಳ್ಳುವುದು, ತನ್ನಲ್ಲಿ, ತನ್ನ ಸುತ್ತಮುತ್ತ ಆಸಕ್ತಿ ತಂದುಕೊಳ್ಳುವುದೇ ಇದಕ್ಕೆ ದಾರಿ.
ನಮಗೆ ನಾವೇ ನಿತ್ಯನೂತನರಾಗಿದ್ದರೆ ಬೋರ್‌ಡಮ್ ಕಾಡೀತಾದರೂ ಹೇಗೆ? ನಮ್ಮನ್ನು ನಾವು ಹೊಸಬರಾಗಿಸಿಕೊಳ್ಳುವುದೂ ನಮ್ಮ ಕೈಯಲ್ಲೇ ಇದೆ.
—-
ನಂಗೆ ‘ಬೋರ್’ ಅಂತ ತುಂಬಾ ಸಲ ಅನ್ಸುತ್ತೆ. ಫ್ರೆಂಡ್ಸ್ ಇಲ್ದೆ ಇದ್ದಾಗ, ಹಾಸ್ಟೆಲ್‌ನಿಂದ ಮನೆಗೆ ಹೋದಾಗ ಬೇಸರವಾಗೋದಿದೆ. ಹಾಗೆ ಅನಿಸಿದಾಗೆಲ್ಲ ಬುಕ್ಸ್ ಓದ್ತೇನೆ ಅಥವಾ ಸಾಂಗ್ಸ್ ಕೇಳ್ತೇನೆ, ಹಳೇ ಮ್ಯಾಗಝಿನ್ಸ್ ಓದ್ತೇನೆ.
ಸುಷ್ಮಾ ಎನ್.ಚಕ್ರೆ, ಪ್ರಥಮ ಎಂಸಿಜೆ, ಕುವೆಂಪು ವಿವಿ, ಶಿವಮೊಗ್ಗ
‘ಬೋರ್‌ಡಮ್’ ಅನ್ನುವುದು ಏಕತಾನತೆಯಿಂದ ಕೆಲಸವನ್ನು ಮುಂದೂಡುವ ಬಗೆ ಇರಬಹುದು. ಅದೊಂದು ವ್ಯಕ್ತಿತ್ವದ ದೋಷವೂ ಇರಬಹುದು, ಖಿನ್ನತೆಯನ್ನು ವ್ಯಕ್ತಪಡಿಸುವ ರೀತಿಯೂ ಇರಬಹುದು. ಅತಿಯಾಗಿ ಬೋರ್‌ಡಮ್ ಕಾಡುವವರು ಮೊದಲು ತಮ್ಮ ಭಾವನೆಗಳನ್ನು ಹತ್ತಿರದವರೊಂದಿಗೆ ಹಂಚಿಕೊಳ್ಳಬೇಕು. ಇದರಿಂದಲೂ ಮನಸ್ಸು ಹಗುರವಾಗದಿದ್ದರೆ ಆಪ್ತಸಲಹೆಯ ಮೊರೆ ಹೋಗಬಹುದು.
ಡಾ.ಪಿ.ವಿ.ಭಂಡಾರಿ, ಮನೋವೈದ್ಯರು
—–
‘ಬೋರ್‌ಡಮ್’ ಅನ್ನುವ ಶಬ್ದವನ್ನು ಮೊದಲಬಾರಿ ಬಳಸಿದವನು ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ತನ್ನ ‘ಬ್ಲೀಕ್ ಹೌಸ್’ ಕಾದಂಬರಿಯಲ್ಲಿ(೧೮೫೨). ಸಿ.ಡಿ.ಫಿಷರ್ ಎಂಬ ಮನೋವೈದ್ಯ ಇದನ್ನು ‘ತನ್ನ ಸದ್ಯದ ಚಟುವಟಿಕೆಯಲ್ಲಿ ಗಮನ ಕೇಂದ್ರೀಕರಿಸಲಾಗದ, ಆಸಕ್ತಿ ಇರದ ಅಹಿತಕರ, ಕ್ಷಣಿಕ ಅನುಭವ ಇದು’ ಎಂದು ವ್ಯಾಖ್ಯಾನಿಸಿದ್ದ. ವ್ಯಕ್ತಿಯೊಬ್ಬ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದ ಸವಾಲನ್ನು ಎದುರಿಸಿದಾಗ ಅದಕ್ಕೆ ತೋರುವ ಪ್ರತಿಕ್ರಿಯೆ ಇದು ಎನ್ನುತ್ತದೆ ಪಾಸಿಟಿವ್ ಸೈಕಾಲಜಿ. ವಿಲಿಯಮ್ ನಾಸ್ ಎಂಬ ಮನಃಶಾಸ್ತ್ರಜ್ಞ ಇದನ್ನು, ‘ಮಾಡಬೇಕಾದ ಪ್ರಮುಖ ಕೆಲಸವನ್ನು ಮುಂದೂಡುವ ಪ್ರೊಕ್ರಾಸ್ಟಿನೇಶನ್ ಪ್ರವೃತ್ತಿ’ ಎಂದು ವಿವರಿಸಿದ. ತತ್ವಶಾಸ್ತ್ರದಲ್ಲೂ ‘ಮನಸ್ಸು ತನ್ನ ಪರಿಸರವನ್ನು ಮಂಕಾಗಿ, ಪ್ರೇರಣೆರಹಿತವಾಗಿ ಪರಿಭಾವಿಸುವುದಕ್ಕೆ’ ಬೋರ್‌ಡಮ್ ಎಂಬ ವ್ಯಾಖ್ಯಾನ ನೀಡಲಾಗಿದೆ.
ಮೇಡಮ್, ನಿಮ್ ಬ್ಲಾಗನ್ನು ತುಂಬಾ ಹಿಂದೊಮ್ಮೆ ನೋಡಿದ್ದೆ. ಹಿಡಿಸಿತ್ತು. ಈಗ ಅದಕ್ಕಿಂತಲೂ ಚಂದವಿದೆ ವಿನ್ಯಾಸ. ಆದ್ರೆ ನಿಮ್ಮ ಬರಹಗಳಿಲ್ಲದೆ ಅದು ಸೊರಗಿಹೋದಂತಿದೆ ನೋಡಿ