ಸುಮ್‌ಸುಮ್ನೆ ಮಾತಾಡ್ತಾರೆ…

Posted: ಸೆಪ್ಟೆಂಬರ್ 5, 2011 in ಅತ್ತೆ ಸ್ಪೀಕ್ಸ್...

ಪಕ್ಕದ್ಮನೆ ಶಶಿಗೆ ಮನೆಯಲ್ಲಿ ಮಾಡಿದ ಸ್ವೀಟ್ ಕೊಡೋದಕ್ಕೆಂದು ಹೋದವಳು ಸಂಜೆ ಅಲ್ಲೇ ಮಾತಾಡುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಶಶಿಯ ಮಗಳು ಅಂಜನಾ ಆಫೀಸ್‌ನಿಂದ ಬಂದಳು. ಬರುತ್ತಲೇ ಮೊಬೈಲ್ ಕಿವಿಗಂಟಿತ್ತು. ಅದೇ ಭಂಗಿಯಲ್ಲೇ ನಮಗಿಬ್ಬರೂ ಹಾಯ್ ಅಂದು ತನ್ನ ರೂಮ್‌ಗೆ ಹೋದಳು ಹುಡುಗಿ.
ಅವಳತ್ತ ತಿರುಗಿದಾಕ್ಷಣ ಶಶಿ ಪಿಸುಗುಟ್ಟಿದಳು, ‘ನೋಡಿ ನೋಡಿ, ಹೀಗೆ ಒಮ್ಮೆ ಮೊಬೈಲ್ ಕಿವಿಗಂಟಿಸ್ಕೊಂಡ್ರೆ ತೆಗೆಯೋದೇ ಇಲ್ಲ ಅವ್ಳು. ಕೆಲ್ಸಕ್ಕೆ ಸೇರಿದ್ಮೇಲಂತೂ ಇದು ಜಾಸ್ತಿ ಆಗಿದೆ.. ಏನಾದ್ರೂ ಅಫೇರ್ ಗಿಫೇರ್ ಶುರು ಮಾಡ್ಕೊಂಡು ಬಿಟ್ಟಿದಾಳೋ ಏನೋ ಅಂತ ಭಯ ಕಣ್ರೀ..’
ಎಂಜಿನಿಯರಿಂಗ್ ಓದಿರೋ ಅಂಜನಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿದೆಯಷ್ಟೆ. ಎಷ್ಟಾದ್ರೂ ಹುಡ್ಗಿ ಅಂತ ಅವಳ ಮೇಲೆ ಶಶಿ ಕಾಳಜಿ ವಹಿಸೋದು, ಎಚ್ಚರ ವಹಿಸೋದು ಎಲ್ಲ ಕೊಂಚ ಜಾಸ್ತೀನೇ. ಆದ್ರೂ ಪಾಪದ ಮಗೂ ಮೇಲೆ ಯಾಕೆ ಅಷ್ಟೊಂದು ಸಂದೇಹ ಪಡ್ಬೇಕು ಅಂತ, ‘ಅಲ್ರೀ ಪಾಪ, ಹಳೇ ಕಾಲೇಜ್ ಫ್ರೆಂಡ್ಸ್ ಎಲ್ಲ ಫೋನ್ ಮಾಡ್ತಾರೇನೋ… ನಮ್ಮ ಹಾಗಲ್ವಲ್ಲಾ ಇವತ್ತಿನ ಮಕ್ಳು’ ಅಂತ ಶಶಿ ಮನಸ್ಸನ್ನು ತಿಳಿಯಾಗಿಸೋಕೆ ಪ್ರಯತ್ನಿಸಿದೆ. ‘ಹಾಗಲ್ರೀ, ಯಾವಾಗ್ಲೂ ಖುಷಿಯಾಗಿರೋ ಅಂಜನಾ ಒಮ್ಮೊಮ್ಮೆ ಆಫೀಸ್‌ನಿಂದ ಬರ್‍ತಾನೇ ತುಂಬಾ ಸೀರಿಯಸ್ಸಾಗಿರ್‍ತಾಳೆ. ಕೆಲವೊಮ್ಮೆ ಫೋನ್ ಕಾಲ್ ಬಂದ್ರೆ ಡಲ್ ಆಗ್ತಾಳೆ. ಕೆಲವೊಂದು ಕಾಲ್ಸ್‌ನ ರಿಸೀವ್ ಮಾಡೋದೇ ಇಲ್ಲ. ಏನೇ, ಕೆಲ್ಸ ಜಾಸ್ತೀನಾ ಅಂದ್ರೆ ‘ಇಲ್ಲಮ್ಮಾ’ ಅಂತಾಳೆ! ಇನ್ನು ಹೇಗೆ ಕೇಳಲಿ ನಾನವಳ ಸಮಸ್ಯೇನಾ? ಆದ್ರೂ, ಸ್ವಲ್ಪ ಜೋರಾಗೇ ಹೇಳಿದ್ದೇನೆ, ಅಫೇರ್ ಗಿಫೇರ್ ಅಂತ ಶುರು ಮಾಡ್ಕೊಂಡ್ರೆ ಸುಮ್ನಿರೋಲ್ಲ ನೋಡು ಅಂತ’
‘ಓ, ಅಂಜನಾನ ಅವಳಮ್ಮನೇ ಸಾಕಷ್ಟು ಹೆದರಿಸಿಬಿಟ್ಟಿದ್ದಾಳಲ್ಲಾ’ ಅಂದ್ಕೊಂಡು, ‘ನೋಡೋಣ, ಸಾಧ್ಯವಾದ್ರೆ ನಾನವಳ ಹತ್ರ ಮಾತಾಡ್ತೇನೆ’ ಅಂತ ಶಶಿಗೆ ಹೇಳಿ ಹೊರಟೆ.
ಇದಾಗಿ ಎರಡು ದಿನ ಕಳೆದು ಭಾನುವಾರ ಎಂದಿನಂತೆ ಮೊಮ್ಮಗ ಮನುಜನೊಡನೆ ಆಟವಾಡೋದಕ್ಕೆ ಅಂತ ಅಂಜನಾ ಮನೆಗೆ ಬಂದಳು. ಅವರು ಟೆರೇಸ್‌ನಲ್ಲಿ ಆಟವಾಡುತ್ತಿದ್ದಾಗ ನಾನೂ ಏನೋ ತಿಂಡಿ ತೆಗೆದುಕೊಂಡು ಅಲ್ಲಿಗೇ ಹೋದೆ. ನನ್ನ ಜೊತೆ ಚೆನ್ನಾಗಿಯೇ ಮಾತಾಡಿದಳು ಹುಡುಗಿ. ಕೊಂಚ ಸುಸ್ತಾದಂತಿದ್ದಳು ಅಂಜನಾ. ಕೇಳಿದೆ, ‘ಏನೇ, ಕೆಲ್ಸ ಜಾಸ್ತೀನಾ? ಸುಸ್ತಾದ ಹಾಗಿದ್ದೀಯಾ?’
‘ಏನಿಲ್ಲ ಆಂಟೀ, ಸ್ವಲ್ಪ ನಿದ್ದೆ ಕಡಿಮೆ ಆಗಿದೆ ಅಷ್ಟೇ’ ಅಂದಳು.
‘ಯಾಕೆ, ರಾತ್ರಿ ೧೦ ಗಂಟೆಗೇ ಮಲಗ್ತೀಯಾ ಅಂತಿದ್ಳು ಶಶಿ. ನಿದ್ದೆ ಬರೋಲ್ವಾ?’
‘ನಿದ್ದೆ ಬರುತ್ತೆ ಆಂಟಿ, ಆದ್ರೆ ಯಾರ್‍ಯಾರದ್ದೋ ಫೋನ್ ಕಾಲ್ಸು… ಅದೇ ಸಮಸ್ಯೆ’
‘ಯಾರ್‍ದು, ಕಾಲೇಜ್ ಫ್ರೆಂಡ್ಸ್ ಕಾಲ್ ಮಾಡ್ತಾರಾ?’
‘ಇಲ್ಲ, ಫ್ರೆಂಡ್ಸ್ ಮೆಸೇಜ್, ಮೇಲು ಮಾಡ್ತಾರೆ. ಒಮ್ಮೊಮ್ಮೆ ಫೇಸ್‌ಬುಕ್‌ಲಿ ಚಾಟ್‌ಗೇ ಸಿಕ್ತಾರೆ. ಇದು ಆಫೀಸ್‌ನೋರೇ ಯಾರಾದ್ರೂ ಕಾಲ್ ಮಾಡಿ ಸುಮ್ನೆ ಮಾತಾಡೋದು’
‘ಅವ್ರೆಲ್ಲಾ ಆಫೀಸ್‌ನಲ್ಲೇ ಸಿಗ್ತಾರಲ್ವಾ, ಇನ್ನು ಮನೆಗೆ ಬಂದ್ಮೇಲೂ ಏನಿದೆ ಮಾತಾಡೋದಕ್ಕೆ?’
‘ಅಂಥದ್ದೇನೂ ಇರೋದಿಲ್ಲ ಆಂಟೀ, ಆದ್ರೂ ಗಂಡಸ್ರು ಕೆಲವ್ರು ಸುಮ್‌ಸುಮ್ನೆ ಕಾಲ್ ಮಾಡಿ ಮಾತಾಡ್ತಾರೆ. ಆಫೀಸ್‌ನಲ್ಲಿ ಸಿಕ್ಕಾಗ್ಲೂ ಮಾತಾಡಿಸ್ತಾರೆ. ಕೆಲವೊಮ್ಮೆ ಇವ್ರನ್ನೆಲ್ಲಾ ಹೇಗೆ ಅವಾಯ್ಡ್  ಮಾಡೋದು ಅಂತಾನೇ ಗೊತ್ತಾಗೋದಿಲ್ಲ. ಎಲ್ಲರ ಜೊತೆಗೂ ನಗ್ತಾ ನಗ್ತಾ ಮಾತಾಡೋದೇ ತಪ್ಪಾ? ಈಗ ಏನಾಗ್ಬಿಟ್ಟಿದೆ ಅಂದ್ರೆ ನಾನು ಯಾರ ಜೊತೆಗಾದ್ರೂ ಕಾಫಿಗೆ ಹೋದ್ರೆ ಆಫೀಸ್ನಲ್ಲೆಲ್ಲಾ  ಏನೋ ಒಂಥರಾ ನೋಡ್ತಾರೆ. ಅದ್ಕೆ ಯಾವ ಗಂಡಸ್ರ ಜೊತೆಗೂ ಹೋಗೋಲ್ಲ ಅಂತ ತೀರ್ಮಾನ ಮಾಡಿದ್ದೇನೆ ನಾನು.. ಹೆಂಗಸ್ರ ಜೊತೇನೂ ಏನಾದ್ರೂ ಓಪನ್ ಆಗಿ ಹೇಳ್ಕೊಂಡ್ರೆ ಅದೇ ದೊಡ್ಡ ಇಶ್ಯೂ ಆಗುತ್ತೆ..’
ಹುಡ್ಗಿ ಸುಮ್‌ಸುಮ್ನೆ ಸಮಸ್ಯೆಲಿ ಸಿಕ್ಕಿ ಹಾಕಿಕೊಂಡಿದ್ದಾಳೆ ಅನಿಸ್ತು. ಹೇಳಿದೆ,
‘ನೋಡು ಅಂಜನಾ, ನೀನು ಅದೇ ಕಾಲೇಜ್ ಸ್ಟೂಡೆಂಟ್ ಮೂಡ್‌ನಲ್ಲಿ ಆಫೀಸ್‌ನಲ್ಲೂ ವರ್ತಿಸಿದ್ದೀಯ. ಆದ್ರೆ ಇಲ್ಲಿ ಸಂಬಂಧಗಳ ಬಗೆ ಬೇರೆಯೇ ಇರುತ್ತೆ. ಇಲ್ಲಿ ಕಾಲೇಜಿನಲ್ಲಿದ್ದ ಹಾಗೆ ಮನಸೋಇಚ್ಛೆ  ಮಾತಾಡ್ಬೇಡ. ಜೆಂಟ್ಸ್, ಲೇಡೀಸ್ ಎಲ್ಲರ ಜೊತೆ ಮಾತಾಡುವಾಗ್ಲೂ  ನಿನಗೆ ನೀನೇ ಒಂದು ಲಿಮಿಟ್ ಹಾಕಿಕೋ. ಅನಿಸೋದನ್ನೆಲ್ಲ ಮಾತಾಡೋಕೆ ಹೋಗ್ಬೇಡ. ಕೊಂಚ ಬಿಗಿಯಾಗಿ ವರ್ತಿಸು. ಇಲ್ದೇ ಇದ್ರೆ ನಿನ್ನ ಮುಗ್ಧತೇನ ಮಿಸ್‌ಯೂಸ್ ಮಾಡ್ಕೋತಾರೆ ನೋಡು’
‘ಹಾಗಿದ್ರೆ ಗಂಡಸ್ರ ಜೊತೆ ಎಲ್ಲ ಮಾತಾಡೋದೇ ಬೇಡ ಅಂತೀರಾ?’
‘ಹಾಗಲ್ವೇ… ಅತಿಮಾತು ಯಾರ ಜೊತೆಯೂ ಬೇಡ. ವೈಯಕ್ತಿಕವಾಗಿ ಕ್ಲೋಸ್ ಆಗೋಕೆ ಹತ್ರ ಬರ್‍ತಾರಲ್ಲ, ಅಂಥೋರನ್ನ ದೂರ ಇಟ್ರೇನೇ ಒಳ್ಳೇದು. ಮೊದ್ಲೇ ಬ್ಯಾಚುಲರ್ ಹುಡ್ಗಿ, ನಿನ್ ಜೊತೆ ಮಾತಾಡೋರೇನು ಕಡಿಮೆ ಇರ್‍ತಾರಾ? ರಾತ್ರಿ ೧೦ರ ನಂತ್ರ ಕಾಲ್ಸ್ ಬಂದ್ರೆ ರಿಸೀವ್ ಮಾಡ್ಬೇಡ. ಎಲ್ಲ  ಸರಿ ಹೋಗುತ್ತೆ…’
‘ಊಂ, ಸರಿ ಆಂಟಿ, ಅರ್ಥ ಆಯ್ತು. ನಮ್ಮಮ್ಮಂಗೆ ಇದೆಲ್ಲಾ ಹೇಳ್ಬೇಡಿ, ಸುಮ್ನೆ ತಲೆ ಕೆಡಿಸ್ಕೋತಾಳೆ. ನಾನೇ ಎಲ್ಲಾ ಸರಿ ಮಾಡ್ಕೋತೀನಿ ಬಿಡಿ’ ಅನ್ನುತ್ತ ಮನೆಗೆ ಹೊರಟಳು ಅಂಜನಾ.
ಜಾಣೆ ಹುಡುಗಿಗೆ ಒಳ್ಳೇದಾಗಲಿ ಅಂದಿತು ಮನಸ್ಸು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s