ನಮ್ಮೊಳಗಿನ ಬಿಗ್ ಬಾಸ್

Posted: ಜುಲೈ 4, 2013 in Uncategorized

ಏನೇ, ಬಿಗ್ ಬಾಸ್ ನೋಡ್ತಿದ್ದೀಯಾ? -ಆಕೆ ತಮ್ಮ ಗೆಳತಿಯನ್ನು ಪ್ರಶ್ನಿಸಿದರು. 
‘ಅದನ್ನೇನಮ್ಮಾ ನೋಡೋದು, ಅದಕ್ಕಿಂತ ದೊಡ್ಡ ಬಿಗ್‌ಬಾಸ್ ಕಾರ್‍ಯಕ್ರಮ ನಮ್ ಮನೇಲೇ ನಡೀತಿರುತ್ತೆ..’ ಉತ್ತರಿಸಿದರು ಆ ಗೆಳತಿ. ಮದುವೆ ಮಾಡಿ ಕಳಿಸಿದ್ದ ಮಗಳು ಒಂದು ಮಗುವಿನೊಂದಿಗೆ ಮರಳಿ ತವರಿಗೆ ಬಂದು ಅವರ ಮನೆಯ ನೆಮ್ಮದಿಯನ್ನೇ ಕೆಡಿಸಿದ್ದಳು. ಗಂಡ-ಹೆಂಡತಿಯ ನಡುವೆಯೇ ಭಿನ್ನಾಭಿಪ್ರಾಯಕ್ಕೆ ಕಾರಣಳಾಗಿದ್ದ ಸ್ವಂತ ಮಗಳೇ ಆಕೆಗೆ ವೈರಿಯಂತಾಗಿದ್ದಳು. ‘ಇವತ್ತು ನೋಡು, ಹೊರಗೆ ಏನೋ ಕೆಲಸ ಇದೆ ಅಂತ ಬಂದಿದ್ದೀನಿ. ರಾತ್ರಿ ಅಡುಗೆನಾದ್ರೂ ಅವಳೇ ಮಾಡಲಿ. ನಾ ಎಷ್ಟೂಂತ ಸಾಯಲಿ.. ನಮ್ಮ ಯಜಮಾನರಿಗೂ ಮಗಳು ಹೇಳಿದ್ದೇ ವೇದವಾಕ್ಯ. ಇಬ್ಬರಿಗೂ ಕಲಿಸ್ತೀನಿ ಇರು..’ ಅಂತನ್ನುತ್ತ ಆಕೆ ಗೆಳತಿಯ ಮನೆಯಲ್ಲಿ ಟೈಂ ಪಾಸ್‌ಗಾಗಿ ಮಾತಾಡುತ್ತ ಕುಳಿತರು.
ಬದುಕೇ ಹಾಗೆ, ಗಂಡನಿಗೆ ಬುದ್ಧಿ ಕಲಿಸುತ್ತೇನೆನ್ನುವ ಹೆಂಡತಿ, ತಮ್ಮನ ವಿರುದ್ಧ ಒಳಗೊಳಗೇ ದ್ವೇಷ ಸಾಸುವ ಅಣ್ಣ.. ಹೀಗೆ ಹತ್ತಿರದ ಸಂಬಂಧದ ಒಳಗೊಳಗೇ ಏರುಪೇರು, ಏನೋ ಲೆಕ್ಕಾಚಾರ. ಟಿವಿ ತೆರೆಯ ಮೇಲೆ ಕಾಣುವ ಬಿಗ್‌ಬಾಸ್ ಕಾರ್‍ಯಕ್ರಮವನ್ನೂ ಮೀರಿಸುವ ಘಟನೆಗಳು ಇಲ್ಲಾಗುತ್ತವೆ. ಅಲ್ಲಿನ ಸದಸ್ಯರ ನಡುವಣ ಮಾತು, ಕತೆ, ಮುನಿಸು, ಪ್ರೀತಿ ಎಲ್ಲವನ್ನೂ ಮೀರಿದ್ದು ಇಲ್ಲಿನ ಆಗುಹೋಗುಗಳು. ಸೂಕ್ಷ್ಮವಾಗಿ ನೋಡಿದರೆ ನಾವೆಲ್ಲರೂ ಬಿಗ್ ಬಾಸ್‌ನಲ್ಲಿ ಒಬ್ಬೊಬ್ಬ ಪಾತ್ರಧಾರಿಗಳು.

ಅಂಕವಿಲ್ಲದ ಈ ಆಟ
ಆ ಬಿಗ್‌ಬಾಸ್ ಮನೆಯಂತೆ ಇಲ್ಲಿ ಹಲವು ಮನೆಗಳು. ಈ ಮನೆಗಳೆಲ್ಲ ಸೇರಿ ಒಂದು ಸಮಾಜ. ಎಲ್ಲವೂ ಸೇರಿ ಒಂದು ಜಗತ್ತು. ಇವೆಲ್ಲದರ ನಡುವೆ ಹಲವು ಹಂತಗಳಲ್ಲಿ ಹಲವು ಆಟಗಳು, ಟಾಸ್ಕ್‌ಗಳು. ಅದನ್ನು ಆಡುವವರು ನಾವು. ಹೆಂಡತಿಯ ಎದುರಿನಲ್ಲಿ ಏನೋ ನಾಟಕ ಮಾಡಿ ಹೊರಹೋಗಿ ಇನ್ನೊಬ್ಬಳೊಂದಿಗೆ ಸುತ್ತಲು ಹೋಗುವ ಗಂಡ. ಅದನ್ನು ನಂಬದಿದ್ದರೂ ನಂಬಿದವಳಂತೆ ಇದ್ದು ಅವನ ಒಳಗುಟ್ಟು ಕಂಡುಹಿಡಿಯುವ ಹೆಂಡತಿ. ಇನ್ನೊಂದೆಡೆ ಅಪ್ಪ ಕಟ್ಟಿಟ್ಟ ಗಂಟನ್ನು ಕಂಡುಹಿಡಿಯುವ ಹುಡುಕಾಟ ಮಗನದ್ದು. ಮಗನಿಗೆ ಕೊಡದೇ ಇನ್ನೆಲ್ಲೋ ಬಚ್ಚಿಡುವ ಸವಾಲು ಅಪ್ಪನಿಗೆ. ಸೊಸೆ ಎಲ್ಲಿ ತಪ್ಪು ಮಾಡುತ್ತಾಳೆ ಎಂಬುದನ್ನೇ ಕಾದು ಕುಳಿತು ಕಂಡುಹಿಡಿದು ಶಿಕ್ಷಿಸುವ ಅತ್ತೆ. ಅತ್ತೆಯೊಡನೆ ಒಂದಿಲ್ಲೊಂದು ನೆಪ ತೆಗೆದು ಜಗಳಾಡುವ ಸೊಸೆ. ಲಂಚ ಪಡೆದು ಕೆಲಸ ಮಾಡಿಕೊಡುವ ಅಕಾರಿ. ಸುಳ್ಳು ಹೇಳಿ ಅಕಾರಕ್ಕೇರುವ ರಾಜಕಾರಣಿ. ಕಚ್ಚಾಡುವ ಯೂನಿವಸಿಟಿ ಪ್ರೊಫೆಸರ್‌ಗಳು.. ಬಾಸ್ ಅನ್ನು ಬೈಯುವ ಉದ್ಯೋಗಿಗಳು..
ಇವೆಲ್ಲದರ ಮಧ್ಯೆ ಒಂದು ಸುಂದರ ಪ್ರೇಮ ಪ್ರಸಂಗ. ಒಂದು ಅನ್ಯೋನ್ಯ ಗೆಳೆತನದ ನಿದರ್ಶನ. ಅಪ್ಪ-ಮಗಳ ಭಾವನಾತ್ಮಕ ಬಂಧ. ಯಾವ ರಕ್ತ ಸಂಬಂಧವಿಲ್ಲದಿದ್ದರೂ ನೆರವಾಗುವ ಒಳ್ಳೆ ಮನಸ್ಸು.. ಹೀಗೆ ಇಲ್ಲಿ ಕಾಣಿಸಿಕೊಳ್ಳುವುದು ತಮಗೆ ಎದುರಾಗುವ ಟಾಸ್ಕ್‌ಗಳನ್ನು ತಂತಮ್ಮ ನೆಲೆಯಲ್ಲಿ ನಿಭಾಯಿಸುವ ಬಗೆಬಗೆಯ ಪಾತ್ರಗಳು.
ವಿಶೇಷವೆಂದರೆ ಇವರಿಗೆಲ್ಲ ತಾವು ನಿಭಾಯಿಸಿದ ಟಾಸ್ಕ್‌ಗೆ ಅಂಕಗಳಿಲ್ಲ. ಭರ್ಜರಿಯಾಗಿ ಲಕ್ಷುರಿ ಬಜೆಟ್ ಸಿಗುತ್ತದೋ ಎಂದರೆ ಅದೂ ಇಲ್ಲ. ಆದರೂ ಅವರು ತಮಗೆ ಹೇಗೆ ತಿಳಿಯುತ್ತದೋ ಹಾಗೆ ಟಾಸ್ಕ್ ನಿರ್ವಹಿಸುತ್ತಾರೆ. ಇದನ್ನವರು ಮಾಡಲೇಬೇಕು. ಇಲ್ಲವಾದರೆ ಬದುಕು ಅವರನ್ನು ಸೋಲಿಸುತ್ತದೆ.

ಇಲ್ಲೂ ಇದೆ ಗ್ರೂಪಿಸಮ್
ಬಿಗ್ ಬಾಸ್ ಎಂಬ ಗೇಮ್‌ನಲ್ಲಿ ನಾನು ಗೆಲ್ಲಬೇಕು. ಅದಕ್ಕೇ ಆಕೆಯ ಫ್ರೆಂಡ್‌ಶಿಪ್ ಮಾಡಿಕೊಂಡು ಅವಳು ನನ್ನನ್ನು ನಾಮಿನೇಟ್ ಮಾಡದಂತೆ ನೋಡಿಕೊಂಡರೆ ಹೇಗೆ? ಲೆಕ್ಕಾಚಾರ ಹಾಕುತ್ತದೆ ಅವಳ ಮನಸ್ಸು. ಆ ಇನ್ನೊಬ್ಬಳೂ ಸೈ ಅನ್ನುತ್ತ ಇಬ್ಬರೂ ಆ ಮಹಾ ಮನೆಯೊಳಗೆ ಪರಸ್ಪರ ಬೆಂಬಲಿಸುತ್ತಾರೆ. ಅವರಿಬ್ಬರ ಜೊತೆ ಇನ್ನಾರೋ ಸೇರಿಕೊಳ್ಳುತ್ತಾರೆ. ‘ಹೋ, ಅವರು ಮೂರೂ ಜನ ಒಂದೇ ಗ್ರೂಪ್. ಇಲ್ಲಿ ಗ್ರೂಪಿಸಮ್ ನಡೀತಿದೆ, ನಮ್ಮನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ’ ಅಂತ ಚೀರುತ್ತಾರೆ ಇನ್ನಾರೋ. ಅದೇ ವೇಳೆ ಈ ಗ್ರೂಪ್ ಅನ್ನು ಕಂಡರಾಗದ ಆ ಗುಂಪು, ಆ ಗುಂಪಿನವರು ಸೋಲಲೆಂದು ಶತಾಯಗತಾಯ ಪ್ರಯತ್ನಿಸುವ ಈ ಗುಂಪು.. ಈ ಬಗೆಯ ಮೇಲಾಟವೂ ನಡೆಯುತ್ತಿರುತ್ತದೆ.
ಇದೇ ಗುಂಪುಗೂಡುವಿಕೆ, ವೇವ್‌ಲೆಂತ್ ನೆಪದಲ್ಲಿ ಜೊತೆಯಾಗಿ ಇರುವಿಕೆ ಎಲ್ಲವೂ ನಿಜದ ನೆಲೆಯಲ್ಲೂ ನಡೆಯುವಂಥದ್ದೇ ಅಲ್ಲವೇ? ಬಾಲ್ಯದಲ್ಲಿ ಜೊತೆಯಾಗಿ ಆಡಿ, ಹಾಡಿ ಬೆಳೆದ ಮೂರ್‍ನಾಲ್ಕು ಜನ ಅಣ್ಣ ತಂಗಿಯರ ಕುಟುಂಬ ಬೆಳೆಬೆಳೆಯುತ್ತಾ ಗುಂಪುಗಳಾಗಿ ಒಡೆಯುತ್ತದೆ. ಆ ಅಣ್ಣನಿಗೆ ಈ ತಂಗಿ ಬೆಂಬಲಿಸುತ್ತಾಳೆ. ಈ ಅಕ್ಕನಿಗೆ ಆ ತಮ್ಮನ ಸಪೋರ್ಟ್ ಬೆನ್ನ ಹಿಂದಿರುತ್ತದೆ. ಕಚೇರಿಯಲ್ಲೂ ಆಕೆಗೆ ಅವನು ಸ್ವಲ್ಪ ಕ್ಲೋಸು. ಇವನಿಗೆ ಸಮಸ್ಯೆ ಬಂದಾಗ ಸಂತೈಸುವ ಮತ್ತೊಬ್ಬ ಗೆಳೆಯ. ಹೀಗೆ ಒಬ್ಬರಿಗೊಬ್ಬರು ಜೊತೆಯಾಗುತ್ತಾರೆ, ಭಾವನಾತ್ಮಕವಾಗಿ ಅವಲಂಬಿತರಾಗುತ್ತಾರೆ. ಪರಸ್ಪರ ಸಹಾಯ ಮಾಡುತ್ತಾರೆ. ಇವೆಲ್ಲವೂ ಅವರವರ ಅನುಕೂಲಕ್ಕಾಗಿ. ಅದರಿಂದ ಸಿಗುವ ಕಂಫರ್ಟ್ ಫೀಲಿಂಗ್‌ಗಾಗಿ.

ರಿಯಾಲಿಟಿ ಶೋವನ್ನೂ ಮೀರಿಸಿದ ಈ ಆಟ
ತೆರೆಯ ಮೇಲಿನ ಎಲ್ಲವೂ ತಾತ್ಕಾಲಿಕ. ಆ ಬಿಗ್‌ಬಾಸ್ ಎಂಬ ಮನೆ, ಅಲ್ಲಿನ ಸದಸ್ಯರು, ಅವರು ಮಾಡುವ ಕಾರ್‍ಯಗಳು ಎಲ್ಲಕ್ಕೂ ನಿಗದಿತ ಅವಯಿದೆ. ಮೂರು ತಿಂಗಳೊಳಗೆ ಮುಗಿದೇ ಮುಗಿಯುತ್ತದೆ ಎಂಬ ಡೆಡ್‌ಲೈನ್ ಇದೆ. ಹಾಗಾಗಿ ಎಷ್ಟೇ ಕಷ್ಟವಾದರೂ, ಉಸಿರು ಬಿಗಿ ಹಿಡಿದಾದರೂ ಅವರು ಇಲ್ಲಿ ಈಸುತ್ತಾರೆ.. ನಿಜದ ಬದುಕಿನ ಈ ಆಟದಲ್ಲಿ ಡೆಡ್‌ಲೈನ್ ಇಲ್ಲ. ಕೊನೆಯ ‘ಡೆತ್’ಲೈನೇ ಇಲ್ಲಿನ ಡೆಡ್‌ಲೈನ್. ಆದ್ದರಿಂದ ಅಲ್ಲಿಯವರೆಗೆ ಆಡುತ್ತಲೇ ಇರಬೇಕು. ಗುರಿಯಿರದ ಆ ತೀರ ಮುಟ್ಟುವ ತನಕ ಹುಟ್ಟುಹಾಕಲು ಅದೆಷ್ಟು ತಾಳ್ಮೆ ಬೇಕಲ್ಲವೇ?
ಸದಾ ವಿರೋಧ ಪಕ್ಷದವರಂತೆ ಆಡುವ ಆ ಬೇಜವಾಬ್ದಾರಿ ಗಂಡನನ್ನು ಕಟ್ಟಿಕೊಂಡು ಮನೆ, ಮಕ್ಕಳನ್ನು ತೀರಕ್ಕೊಯ್ಯಲು ಆಕೆ ಅದೆಷ್ಟು ಹರಸಾಹಸ ಪಡಬೇಕೋ.. ನಿತ್ಯವೂ ವಟಗುಟ್ಟುವ ಪತ್ನಿಯನ್ನು ಸಂಭಾಳಿಸಿಕೊಂಡು ಮನದ ಸಮತೋಲನವನ್ನೂ ಕಾಯ್ದುಕೊಳ್ಳಲು ಅವನು ಅದೆಷ್ಟು ಪಾಡು ಪಡಬೇಕೋ.. ವರುಷಗಳಿಂದ ಕಟ್ಟಿದ ಮಹಾಮನೆಯ ಒಂದೊಂದೇ ಸಿರಿಯನ್ನು ತನ್ನ ಹುಚ್ಚಾಟಗಳಿಗೆ ಮಾರುವ ಮಗನನ್ನು ಸರಿದಾರಿಗೆ ಹಚ್ಚಲು ಆ ತಾಯಿ ಅದೆಷ್ಟು ಪರಿತಪಿಸಬೇಕೋ.. ಇವರೆಲ್ಲರೂ ಆಶಾವಾದದ ಬೆನ್ನುಹತ್ತಿ ಹೆಜ್ಜೆ ಹಾಕುವವರು. ಎತ್ತು ಏರಿಗೆಳೆದರೆ ಎಮ್ಮೆ ನೀರಿಗೆಳೆಯಿತು ಎನ್ನುವಂತಾಗುತ್ತದೆ ಇಲ್ಲಿಯೂ. ಆದರೂ ಅವರು ಛಲ ಬಿಡುವುದಿಲ್ಲ. ನಿಂತ ನೆಲವೇ ಕುಸಿದರೂ ನಾಳಿನ ಕನಸು ತಮ್ಮನ್ನು ಖಂಡಿತ ಕಾಪಾಡುತ್ತದೆ ಎಂಬಂತೆ ಗಟ್ಟಿಯಾಗಿ ಕನಸು ಕಾಣುತ್ತಾರೆ ಇವರು. ಅದಕ್ಕೇ ಇವರ ಹೋರಾಟಕ್ಕೆ, ಆ ಆಟಕ್ಕೆ ಬಹುಮಾನ ಇಲ್ಲದಿದ್ದರೂ ಅವರು ಆಡುತ್ತಲೇ ಹೋಗುತ್ತಾರೆ..

ಸಂಬಂಧ ಅನ್ನೋದು…
ಆ ಬಿಗ್‌ಬಾಸ್ ಮನೆಯ ಅಣ್ಣ-ತಮ್ಮ, ಅಕ್ಕ-ತಂಗಿ ಸಂಬಂಧಗಳು ಅವರೆಲ್ಲ ಆ ಮನೆಯಲ್ಲಿ ಇರುವಷ್ಟು ಸಮಯಕ್ಕೆ ಮಾತ್ರ ಸೀಮಿತ. ಹೊರ ಬಂದರೆ ಅವರ್‍ಯಾರೋ, ಇವರ್‍ಯಾರೋ. ನಿಜದ ಬದುಕಿನ ಸಂಬಂಧಗಳು ಹಾಗಲ್ಲ. ಇಲ್ಲವಳು ಅವನೇನೇ ಕಿರಿಕಿರಿ ಮಾಡಿದರೂ ಸಹಿಸಿ ಮುನ್ನಡೆಯುತ್ತಾಳೆ, ಸಂಬಂಧ ಮುರಿಯುವ ಮುನ್ನ ಸಾವಿರ ಬಾರಿ ಯೋಚಿಸುತ್ತಾಳೆ. ‘ಅವನು ನನ್ನ ಜೊತೆ ಜಗಳವಾಡಿದ. ಅವನ ಆಟಿಟ್ಯೂಡ್ ನನಗಿಷ್ಟವಿಲ್ಲ. ಆದ್ದರಿಂದ ಅವನನ್ನು ಬಿಗ್‌ಬಾಸ್ ಮನೆಯಿಂದ ಹೊರಗೆ ಹಾಕಲು ನಾಮಿನೇಟ್ ಮಾಡುತ್ತೇನೆ’ ಎಂದು ಹೊಟ್ಟೆಯೊಳಗಿನ ವಿಷ ಕಾರಲು ಬಿಗ್‌ಬಾಸ್ ಮನೆಯಲ್ಲಿ ಅವಕಾಶವಿದೆ. ಇಲ್ಲಿ ಇಂತಹ ಸೌಲಭ್ಯಗಳಾವುವೂ ಇಲ್ಲ. ‘ನೀನು ಸರಿ ಇಲ್ಲ, ನೀನು ನನ್ನ ಬದುಕಿನಿಂದ ಹೊರ ಹೋಗು’ ಎಂದು ನಿರ್ದಾಕ್ಷಿಣ್ಯವಾಗಿ ನಾಮಿನೇಟ್ ಮಾಡುವುದು ಇಲ್ಲಿ ಸುಲಭವಲ್ಲ. ಕೆಲವು ಸಂಬಂಧಗಳು ಬೇಕಿಲ್ಲದಿದ್ದರೂ ಅವನ್ನು ಅನಿವಾರ್‍ಯಕ್ಕೆಂದು ಜೋಪಾನ ಮಾಡುವ, ಬೇಕೆನಿಸಿದ ಬಂಧಗಳನ್ನು ಬದುಕಿನ ಚೌಕಟ್ಟಿಗೆ ದಕ್ಕುವುದಿಲ್ಲವೆಂದು ದೂರವಿಡುವ ದರ್ದು ಇಲ್ಲಿನದು. ಇಲ್ಲಿ ಲೆಕ್ಕಾಚಾರವೂ ಬೇಕು, ಮಾನವೀಯತೆಯ ಕ್ಯಾನ್ವಾಸ್ ಕೂಡ ಇರಬೇಕು. ಆತ್ಮಸಾಕ್ಷಿ ಮತ್ತು ವಿವೇಕದ ಮಾರ್ಗದರ್ಶನದಲ್ಲಿ ಈ ಬಿಗ್‌ಬಾಸ್ ಆಟ ಆಡುವುದು ನಿಜಕ್ಕೂ ಕಷ್ಟ. ಇಲ್ಲಿ ಸಿಗುವ ಸೋಲು ನಿಜವಾದ ಸೋಲೂ ಆಗಿರದು, ಗೆಲುವೂ ಸಹಜ ಗೆಲುವೂ ಆಗಿರದು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು.

 

 

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s