ಅವಳು ದಿನವೂ ಬೆಳಿಗ್ಗೆ ಮಗಳನ್ನು ಸ್ಕೂಲಿಗೆ ಬಿಟ್ಟು ಹೊರಡುವಾಗ ಸ್ಕೂಲ್ ಗೇಟಿನಿಂದ ಸ್ವಲ್ಪ ದೂರದಲ್ಲೇ ಇಬ್ಬರು -ಮೂವರು ಅಮ್ಮಂದಿರು ನಿಂತು ಮಾತಾಡುತ್ತಿದ್ದರು. ಇವಳು ಪ್ರತಿದಿನ ಅವರ ಈ ಮೀಟಿಂಗ್ ನೋಡುತ್ತಿದ್ದಳು. ತನ್ನ ಮಗಳ ಕ್ಲಾಸ್‌ಮೇಟ್‌ಗಳ ಅಮ್ಮಂದಿರೇ ಆದ್ದರಿಂದ ತಾನೂ ಸೇರಬಹುದೇನೋ ಅಂದುಕೊಂಡು ಇವಳೂ ಒಂದಿನ ಅವರ ಗುಂಪಿನಲ್ಲಿ ಸೇರಿಕೊಂಡಳು.
‘ನಮ್ಮತ್ತೆ ಒಂದು ಕಸಕಡ್ಡಿ ಕೂಡ ಎತ್ತಿಡಲ್ಲಪ್ಪ… ನಾನು ವರ್ಕಿಂಗ್ ವುಮನ್ ಏನೂ ಅಲ್ಲ ಸರಿ, ಆದ್ರೂ ಸ್ವಲ್ಪ ಹೆಲ್ಪ್ ಮಾಡ್ಬಾರ್ದಾ..? ಏನ್ ಜನಾನೋ..’ ಮೂಗು ಮುರಿದಳು ಒಬ್ಬಳು.
‘ನಮ್ಮನೇಲೂ ಅಷ್ಟೆ. ಅತ್ತೆ-ಮಾವ ಇಬ್ರೂ ದೊಡ್ಡ ಸೌಂಡ್‌ನಲ್ಲಿ ಸೀರಿಯಲ್ ನೋಡ್ತಿರ‍್ತಾರೆ. ಮಗೂಗೆ ಹೋಮ್‌ವರ್ಕ್ ಮಾಡ್ಸೋಕೂ ಕಷ್ಟ, ಬೆಡ್‌ರೂಮೇ ಹೋಗ್ಬೇಕು ನಾನು’ ಅಂತಂದಳು ಇನ್ನೊಬ್ಬಳು.
ಇವಳು ತನಗೆ ಮಾತಾಡುವುದಕ್ಕೇನೂ ವಿಷಯವಿಲ್ಲವೆಂಬಂತೆ ಹೊರಡಲನುವಾದಳು. ಅಷ್ಟರಲ್ಲಿ ಒಬ್ಬ ತಾಯಿ ಕೇಳಿದಳು, ‘ನಿಮ್ಮ ಅತ್ತೆ-ಮಾವ ಊರಲ್ಲಿದ್ದಾರಾ?’
‘ಇಲ್ಲ, ನಂಗೆ ಅತ್ತೆ-ಮಾವ ಇಲ್ಲ. ನಾವೇ ಗಂಡ-ಹೆಂಡ್ತಿ-ಮಗು, ಅಷ್ಟೆ’ ಅಂದಳು.
‘ಓ, ಮಜಾ… ಹಾಗಾದ್ರೆ ನಿಮ್ಗೆ ನಮ್ಮ ಹಾಗೆ ಕಷ್ಟ ಹೇಳ್ಕೊಳ್ಳೋಕೆ ಏನೂ ಇಲ್ಲ ಬಿಡಿ’ ಅಂದಳು ಇನ್ನೊಬ್ಬಳು.
‘ಹೂಂ’ ಅನ್ನುತ್ತ ಹೊರಟಳು ಇವಳು. ‘ಗಂಡ ಕೊಡೋ ಕಷ್ಟಾನಾ ಹೇಳ್ಕೊಳ್ಳೋಕಾಗುತ್ತಾ?’ ಅಂತ ಗೊಣಗಿದ್ದು ಅವರಾರಿಗೂ ಕೇಳಲಿಲ್ಲ.
