ಪಕ್ಕದ್ಮನೆ ಶಶಿಗೆ ಮನೆಯಲ್ಲಿ ಮಾಡಿದ ಸ್ವೀಟ್ ಕೊಡೋದಕ್ಕೆಂದು ಹೋದವಳು ಸಂಜೆ ಅಲ್ಲೇ ಮಾತಾಡುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಶಶಿಯ ಮಗಳು ಅಂಜನಾ ಆಫೀಸ್‌ನಿಂದ ಬಂದಳು. ಬರುತ್ತಲೇ ಮೊಬೈಲ್ ಕಿವಿಗಂಟಿತ್ತು. ಅದೇ ಭಂಗಿಯಲ್ಲೇ ನಮಗಿಬ್ಬರೂ ಹಾಯ್ ಅಂದು ತನ್ನ ರೂಮ್‌ಗೆ ಹೋದಳು ಹುಡುಗಿ.
ಅವಳತ್ತ ತಿರುಗಿದಾಕ್ಷಣ ಶಶಿ ಪಿಸುಗುಟ್ಟಿದಳು, ‘ನೋಡಿ ನೋಡಿ, ಹೀಗೆ ಒಮ್ಮೆ ಮೊಬೈಲ್ ಕಿವಿಗಂಟಿಸ್ಕೊಂಡ್ರೆ ತೆಗೆಯೋದೇ ಇಲ್ಲ ಅವ್ಳು. ಕೆಲ್ಸಕ್ಕೆ ಸೇರಿದ್ಮೇಲಂತೂ ಇದು ಜಾಸ್ತಿ ಆಗಿದೆ.. ಏನಾದ್ರೂ ಅಫೇರ್ ಗಿಫೇರ್ ಶುರು ಮಾಡ್ಕೊಂಡು ಬಿಟ್ಟಿದಾಳೋ ಏನೋ ಅಂತ ಭಯ ಕಣ್ರೀ..’
ಎಂಜಿನಿಯರಿಂಗ್ ಓದಿರೋ ಅಂಜನಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿದೆಯಷ್ಟೆ. ಎಷ್ಟಾದ್ರೂ ಹುಡ್ಗಿ ಅಂತ ಅವಳ ಮೇಲೆ ಶಶಿ ಕಾಳಜಿ ವಹಿಸೋದು, ಎಚ್ಚರ ವಹಿಸೋದು ಎಲ್ಲ ಕೊಂಚ ಜಾಸ್ತೀನೇ. ಆದ್ರೂ ಪಾಪದ ಮಗೂ ಮೇಲೆ ಯಾಕೆ ಅಷ್ಟೊಂದು ಸಂದೇಹ ಪಡ್ಬೇಕು ಅಂತ, ‘ಅಲ್ರೀ ಪಾಪ, ಹಳೇ ಕಾಲೇಜ್ ಫ್ರೆಂಡ್ಸ್ ಎಲ್ಲ ಫೋನ್ ಮಾಡ್ತಾರೇನೋ… ನಮ್ಮ ಹಾಗಲ್ವಲ್ಲಾ ಇವತ್ತಿನ ಮಕ್ಳು’ ಅಂತ ಶಶಿ ಮನಸ್ಸನ್ನು ತಿಳಿಯಾಗಿಸೋಕೆ ಪ್ರಯತ್ನಿಸಿದೆ. ‘ಹಾಗಲ್ರೀ, ಯಾವಾಗ್ಲೂ ಖುಷಿಯಾಗಿರೋ ಅಂಜನಾ ಒಮ್ಮೊಮ್ಮೆ ಆಫೀಸ್‌ನಿಂದ ಬರ್‍ತಾನೇ ತುಂಬಾ ಸೀರಿಯಸ್ಸಾಗಿರ್‍ತಾಳೆ. ಕೆಲವೊಮ್ಮೆ ಫೋನ್ ಕಾಲ್ ಬಂದ್ರೆ ಡಲ್ ಆಗ್ತಾಳೆ. ಕೆಲವೊಂದು ಕಾಲ್ಸ್‌ನ ರಿಸೀವ್ ಮಾಡೋದೇ ಇಲ್ಲ. ಏನೇ, ಕೆಲ್ಸ ಜಾಸ್ತೀನಾ ಅಂದ್ರೆ ‘ಇಲ್ಲಮ್ಮಾ’ ಅಂತಾಳೆ! ಇನ್ನು ಹೇಗೆ ಕೇಳಲಿ ನಾನವಳ ಸಮಸ್ಯೇನಾ? ಆದ್ರೂ, ಸ್ವಲ್ಪ ಜೋರಾಗೇ ಹೇಳಿದ್ದೇನೆ, ಅಫೇರ್ ಗಿಫೇರ್ ಅಂತ ಶುರು ಮಾಡ್ಕೊಂಡ್ರೆ ಸುಮ್ನಿರೋಲ್ಲ ನೋಡು ಅಂತ’
‘ಓ, ಅಂಜನಾನ ಅವಳಮ್ಮನೇ ಸಾಕಷ್ಟು ಹೆದರಿಸಿಬಿಟ್ಟಿದ್ದಾಳಲ್ಲಾ’ ಅಂದ್ಕೊಂಡು, ‘ನೋಡೋಣ, ಸಾಧ್ಯವಾದ್ರೆ ನಾನವಳ ಹತ್ರ ಮಾತಾಡ್ತೇನೆ’ ಅಂತ ಶಶಿಗೆ ಹೇಳಿ ಹೊರಟೆ.
ಇದಾಗಿ ಎರಡು ದಿನ ಕಳೆದು ಭಾನುವಾರ ಎಂದಿನಂತೆ ಮೊಮ್ಮಗ ಮನುಜನೊಡನೆ ಆಟವಾಡೋದಕ್ಕೆ ಅಂತ ಅಂಜನಾ ಮನೆಗೆ ಬಂದಳು. ಅವರು ಟೆರೇಸ್‌ನಲ್ಲಿ ಆಟವಾಡುತ್ತಿದ್ದಾಗ ನಾನೂ ಏನೋ ತಿಂಡಿ ತೆಗೆದುಕೊಂಡು ಅಲ್ಲಿಗೇ ಹೋದೆ. ನನ್ನ ಜೊತೆ ಚೆನ್ನಾಗಿಯೇ ಮಾತಾಡಿದಳು ಹುಡುಗಿ. ಕೊಂಚ ಸುಸ್ತಾದಂತಿದ್ದಳು ಅಂಜನಾ. ಕೇಳಿದೆ, ‘ಏನೇ, ಕೆಲ್ಸ ಜಾಸ್ತೀನಾ? ಸುಸ್ತಾದ ಹಾಗಿದ್ದೀಯಾ?’
‘ಏನಿಲ್ಲ ಆಂಟೀ, ಸ್ವಲ್ಪ ನಿದ್ದೆ ಕಡಿಮೆ ಆಗಿದೆ ಅಷ್ಟೇ’ ಅಂದಳು.
‘ಯಾಕೆ, ರಾತ್ರಿ ೧೦ ಗಂಟೆಗೇ ಮಲಗ್ತೀಯಾ ಅಂತಿದ್ಳು ಶಶಿ. ನಿದ್ದೆ ಬರೋಲ್ವಾ?’
‘ನಿದ್ದೆ ಬರುತ್ತೆ ಆಂಟಿ, ಆದ್ರೆ ಯಾರ್‍ಯಾರದ್ದೋ ಫೋನ್ ಕಾಲ್ಸು… ಅದೇ ಸಮಸ್ಯೆ’
‘ಯಾರ್‍ದು, ಕಾಲೇಜ್ ಫ್ರೆಂಡ್ಸ್ ಕಾಲ್ ಮಾಡ್ತಾರಾ?’
‘ಇಲ್ಲ, ಫ್ರೆಂಡ್ಸ್ ಮೆಸೇಜ್, ಮೇಲು ಮಾಡ್ತಾರೆ. ಒಮ್ಮೊಮ್ಮೆ ಫೇಸ್‌ಬುಕ್‌ಲಿ ಚಾಟ್‌ಗೇ ಸಿಕ್ತಾರೆ. ಇದು ಆಫೀಸ್‌ನೋರೇ ಯಾರಾದ್ರೂ ಕಾಲ್ ಮಾಡಿ ಸುಮ್ನೆ ಮಾತಾಡೋದು’
‘ಅವ್ರೆಲ್ಲಾ ಆಫೀಸ್‌ನಲ್ಲೇ ಸಿಗ್ತಾರಲ್ವಾ, ಇನ್ನು ಮನೆಗೆ ಬಂದ್ಮೇಲೂ ಏನಿದೆ ಮಾತಾಡೋದಕ್ಕೆ?’
‘ಅಂಥದ್ದೇನೂ ಇರೋದಿಲ್ಲ ಆಂಟೀ, ಆದ್ರೂ ಗಂಡಸ್ರು ಕೆಲವ್ರು ಸುಮ್‌ಸುಮ್ನೆ ಕಾಲ್ ಮಾಡಿ ಮಾತಾಡ್ತಾರೆ. ಆಫೀಸ್‌ನಲ್ಲಿ ಸಿಕ್ಕಾಗ್ಲೂ ಮಾತಾಡಿಸ್ತಾರೆ. ಕೆಲವೊಮ್ಮೆ ಇವ್ರನ್ನೆಲ್ಲಾ ಹೇಗೆ ಅವಾಯ್ಡ್ ಮಾಡೋದು ಅಂತಾನೇ ಗೊತ್ತಾಗೋದಿಲ್ಲ. ಎಲ್ಲರ ಜೊತೆಗೂ ನಗ್ತಾ ನಗ್ತಾ ಮಾತಾಡೋದೇ ತಪ್ಪಾ? ಈಗ ಏನಾಗ್ಬಿಟ್ಟಿದೆ ಅಂದ್ರೆ ನಾನು ಯಾರ ಜೊತೆಗಾದ್ರೂ ಕಾಫಿಗೆ ಹೋದ್ರೆ ಆಫೀಸ್ನಲ್ಲೆಲ್ಲಾ ಏನೋ ಒಂಥರಾ ನೋಡ್ತಾರೆ. ಅದ್ಕೆ ಯಾವ ಗಂಡಸ್ರ ಜೊತೆಗೂ ಹೋಗೋಲ್ಲ ಅಂತ ತೀರ್ಮಾನ ಮಾಡಿದ್ದೇನೆ ನಾನು.. ಹೆಂಗಸ್ರ ಜೊತೇನೂ ಏನಾದ್ರೂ ಓಪನ್ ಆಗಿ ಹೇಳ್ಕೊಂಡ್ರೆ ಅದೇ ದೊಡ್ಡ ಇಶ್ಯೂ ಆಗುತ್ತೆ..’
ಹುಡ್ಗಿ ಸುಮ್‌ಸುಮ್ನೆ ಸಮಸ್ಯೆಲಿ ಸಿಕ್ಕಿ ಹಾಕಿಕೊಂಡಿದ್ದಾಳೆ ಅನಿಸ್ತು. ಹೇಳಿದೆ,
‘ನೋಡು ಅಂಜನಾ, ನೀನು ಅದೇ ಕಾಲೇಜ್ ಸ್ಟೂಡೆಂಟ್ ಮೂಡ್‌ನಲ್ಲಿ ಆಫೀಸ್‌ನಲ್ಲೂ ವರ್ತಿಸಿದ್ದೀಯ. ಆದ್ರೆ ಇಲ್ಲಿ ಸಂಬಂಧಗಳ ಬಗೆ ಬೇರೆಯೇ ಇರುತ್ತೆ. ಇಲ್ಲಿ ಕಾಲೇಜಿನಲ್ಲಿದ್ದ ಹಾಗೆ ಮನಸೋಇಚ್ಛೆ ಮಾತಾಡ್ಬೇಡ. ಜೆಂಟ್ಸ್, ಲೇಡೀಸ್ ಎಲ್ಲರ ಜೊತೆ ಮಾತಾಡುವಾಗ್ಲೂ ನಿನಗೆ ನೀನೇ ಒಂದು ಲಿಮಿಟ್ ಹಾಕಿಕೋ. ಅನಿಸೋದನ್ನೆಲ್ಲ ಮಾತಾಡೋಕೆ ಹೋಗ್ಬೇಡ. ಕೊಂಚ ಬಿಗಿಯಾಗಿ ವರ್ತಿಸು. ಇಲ್ದೇ ಇದ್ರೆ ನಿನ್ನ ಮುಗ್ಧತೇನ ಮಿಸ್‌ಯೂಸ್ ಮಾಡ್ಕೋತಾರೆ ನೋಡು’
‘ಹಾಗಿದ್ರೆ ಗಂಡಸ್ರ ಜೊತೆ ಎಲ್ಲ ಮಾತಾಡೋದೇ ಬೇಡ ಅಂತೀರಾ?’
‘ಹಾಗಲ್ವೇ… ಅತಿಮಾತು ಯಾರ ಜೊತೆಯೂ ಬೇಡ. ವೈಯಕ್ತಿಕವಾಗಿ ಕ್ಲೋಸ್ ಆಗೋಕೆ ಹತ್ರ ಬರ್‍ತಾರಲ್ಲ, ಅಂಥೋರನ್ನ ದೂರ ಇಟ್ರೇನೇ ಒಳ್ಳೇದು. ಮೊದ್ಲೇ ಬ್ಯಾಚುಲರ್ ಹುಡ್ಗಿ, ನಿನ್ ಜೊತೆ ಮಾತಾಡೋರೇನು ಕಡಿಮೆ ಇರ್‍ತಾರಾ? ರಾತ್ರಿ ೧೦ರ ನಂತ್ರ ಕಾಲ್ಸ್ ಬಂದ್ರೆ ರಿಸೀವ್ ಮಾಡ್ಬೇಡ. ಎಲ್ಲ ಸರಿ ಹೋಗುತ್ತೆ…’
‘ಊಂ, ಸರಿ ಆಂಟಿ, ಅರ್ಥ ಆಯ್ತು. ನಮ್ಮಮ್ಮಂಗೆ ಇದೆಲ್ಲಾ ಹೇಳ್ಬೇಡಿ, ಸುಮ್ನೆ ತಲೆ ಕೆಡಿಸ್ಕೋತಾಳೆ. ನಾನೇ ಎಲ್ಲಾ ಸರಿ ಮಾಡ್ಕೋತೀನಿ ಬಿಡಿ’ ಅನ್ನುತ್ತ ಮನೆಗೆ ಹೊರಟಳು ಅಂಜನಾ.
ಜಾಣೆ ಹುಡುಗಿಗೆ ಒಳ್ಳೇದಾಗಲಿ ಅಂದಿತು ಮನಸ್ಸು.
Archive for the ‘ಅತ್ತೆ ಸ್ಪೀಕ್ಸ್…’ Category
ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂತು. ಪಕ್ಕದ ಮನೆಯ ಶಶಿಯ ಮಗ ಅನೂಪ್‌ನಿಗೂ ರಿಸಲ್ಟ್ ಬಂತು. ೯೫ ಪರ್ಸೆಂಟ್ ಮಾರ್ಕ್ ತೆಗೆದಿದ್ದ ಹುಡುಗ. ಮನೆಮಂದಿಗೆಲ್ಲಾ ಖುಷಿ. ಯಾವುದಾದರೂ ಒಳ್ಳೇ ಕಾಲೇಜಿನಲ್ಲಿ ಸೀಟು ಸಿಗೋದಂತೂ ಗ್ಯಾರಂಟಿಯಾಗಿತ್ತು.
ಒಳ್ಳೇ ಅಂಕ ತೆಗೆದ ಹುಡುಗನಿಗೆ ಕಂಗ್ರಾಟ್ಸ್ ಹೇಳಿಬರೋಣವೆಂದು ಬೆಳಗ್ಗಿನ ಹೊತ್ತಿನಲ್ಲೇ ಪಕ್ಕದ ಮನೆಗೆ ಹೋದೆ. ಹುಡುಗ ಖುಷಿಪಟ್ಟ, ಸ್ವೀಟೂ ಕೊಟ್ಟ. ನಾನು ಶಶಿಯ ಬಳಿ ಅದೇನೇನೋ ಮಾತಾಡುತ್ತಾ ಕುಳಿತಿದ್ದೆ. ಅಲ್ಲೇ ಇದ್ದ ಶಶಿಯ ಗಂಡ, ‘ಹಾ, ಕಾಲೇಜಿಗೆ ಹೊರಡೋಣ್ವೇನೋ..’ ಅಂದರು ಅನೂಪನಿಗೆ.
‘ಹೂಂ, ಈಗ ರೆಡಿ ಆಗಿ ಬರ್‍ತೀನಪ್ಪಾ’ ಅನ್ನುತ್ತ ಮೇಲೆ ಹೋದ ಅನೂಪ. ‘ನೋಡಿ, ಈಗ ಬರ್‍ತೀನಿ ಅಂತ ಹೋಗಿದ್ದಾನೆ, ಒಂದು ಶರ್ಟ್ ಸಿಕ್ಕಿಸ್ಕೊಂಡು ಬರೋಕೆ ಎಷ್ಟು ಹೊತ್ತು ತಗೊಳ್ತಾನೆ ನೀವೇ ನೋಡಿ..’ ಅಂದಳು ಶಶಿ ನನ್ನ ಬಳಿ. ಐದು ನಿಮಿಷದಲ್ಲೇ ರೆಡಿಯಾದ ಅನೂಪನ ಅಪ್ಪ ಸಿಡುಕಿದರು, ‘ಅಲ್ವೇ, ಇವ್ನು ಏನು ಮಾಡ್ತಿದ್ದಾನೆ? ಕಾಲೇಜಿಗೆ ಹೊರಡೋಕೆ ಮದುಮಗಳ ಥರ ರೆಡಿ ಆಗ್ತಿದ್ದಾನಾ ಏನ್ಕಥೆ?’
‘ಅವ್ನು ಹಾಗೇ ಇತ್ತೀಚೆಗೆ, ಹೊರಡೋದೆಲ್ಲಾ ಭಾರೀ ಲೇಟು. ನಾ ಮನೆ ಕೆಲ್ಸ ಎಲ್ಲಾ ಮುಗ್ಸಿ ಹೊರಡೋದಾದ್ರೂ ಇವನಷ್ಟು ಲೇಟ್ ಆಗೋದಿಲ್ಲಪ್ಪ’ ಅನ್ನುತ್ತ ಶಶಿ ಅನೂಪನ ಕೋಣೆಗೇ ಹೋದಳು.
ಹೋಗಿ ನಗುತ್ತ ಕೆಳಗೆ ಬಂದವಳೇ, ‘ಅವ್ನು ಕನ್ನಡಿ ನೋಡ್ಕೊಂಡು ಅದ್ಯಾವುದೋ ಕ್ರೀಮ್ ಹಚ್ಕೋತಾ ಇದ್ದಾನೆ. ಡ್ರೆಸ್ ಸೆಲೆಕ್ಟ್ ಮಾಡೋಕೇ ಇಷ್ಟು ಹೊತ್ತು ಬೇಕಾಯ್ತಂತೆ ಅವ್ನಿಗೆ..!’ ಅಂದಳು.
‘ಅರೆ, ಇದ್ಯಾವ ಸೀಮೆ ತಯಾರಿನಪ್ಪಾ? ಹುಡ್ಗೀರು ಈ ಪರಿ ಗಂಟೆಗಟ್ಟಲೆ ತಯಾರಾಗೋದುಂಟು. ಹುಡುಗ್ರೂ ಹೀಗೆ ತಯಾರಾಗ್ತಾರಾ?’ ಅನ್ನುತ್ತ ಅನೂಪನ ಅಪ್ಪ ನ್ಯೂಸ್‌ಪೇಪರ್ ಬಿಚ್ಚಿದರು. ಶಶಿಯೂ,
‘ಹೌದಪ್ಪ, ಅವನಕ್ಕನೂ ಇವನ ಹಾಗೆ ರೆಡಿಯಾಗೋದಿಲ್ಲಪ್ಪ. ಅದೇನು ಸೌಂದರ್‍ಯಪ್ರಜ್ಞೆಯೋ ಏನೋ.. ನನಗಂತೂ, ಇವ್ನು ಹೀಗೆ ಮಾಡಿ ಮಾಡಿ ಇವ್ನು ಎಸ್ಸೆಸ್ಸೆಲ್ಸಿಲಿ ಒಳ್ಳೆ ಮಾರ್ಕ್ಸ್ ತೆಗೀತಾನೋ ಇಲ್ವೋ ಅಂತ ಡೌಟ್ ಬಂದಿತ್ತು. ಆದ್ರೂ ಹೇಗೋ ಮಾರ್ಕ್ಸ್ ತೆಗೆದುಬಿಟ್ನಪ್ಪ’ ಅಂದಳು. ಅವಳಿಗೆ ನಾನೂ ಏನೋ ಸಮಾಧಾನ ಹೇಳಹೊರಡುವಷ್ಟರಲ್ಲಿ ಮಹಡಿಯಿಂದ ಇಳಿದುಬಂದ ಮಗರಾಯ.
‘ಆಯ್ತಾ…’ ಅನ್ನುತ್ತ ಅವನ ತಂದೆ ಚಪ್ಪಲಿ ಮೆಟ್ಟಿದರು. ‘ನೀನು ಹೀಗೇ ಆಗ್ಬಿಟ್ರೆ ಪಿಯೂಸಿ ಸೈನ್ಸ್ ಪಾಸಾಗೋದು ಕಷ್ಟ ಇದೆ ಕಣೋ’ ಅಂದಳು ಶಶಿ ಚಿಂತಾಕ್ರಾಂತಳಾಗಿ. ನಮ್ಮತ್ತ ನೋಡಿ ನಕ್ಕ ಅನೂಪ, ‘ನೀನು ಏನೂ ವರಿ ಮಾಡ್ಕೋಬೇಡಮ್ಮಾ, ನಾನು ಪಿಯೂಸಿಲೂ ಒಳ್ಳೇ ಮಾರ್ಕ್ಸ್ ತೆಗೀತೀನಿ ಬಿಡು’ ಅನ್ನುತ್ತ ಮೆಟ್ಟಲಿಳಿದು ಹೋದ.
‘ಅದೇನು ಮಾಡ್ತಾನೋ.. ನೋಡಿ, ಹುಡ್ಗೀರಂದ್ರೆ ತಲೆಬಿಸಿ ಅಂತಾರಾಲ್ಲಾ, ನಮ್ಮನೇಲಿ ಇದು ಉಲ್ಟಾ ಆಗ್ಬಿಟ್ಟಿದೆ. ಅವ್ಳನ್ನು ನೋಡಿದ್ರೆ ಹುಡುಗರ ಥರಾ ಬಿಂದಾಸ್ ಆಗಿರ್‍ತಾಳೆ. ಇವ್ನೋ, ಹುಡ್ಗೀರ ಥರಾ ಒಳ್ಳೇ ಡ್ರೆಸ್ಸು, ಮೇಕಪ್ಪು, ಕನ್ನಡಿ ಅಂತಿರ್‍ತಾನೆ.. ಏನು ಮಾಡೋದು’ ಅನ್ನುತ್ತ ಇನ್ನಷ್ಟು ಬೇಸರ ಹೇಳಿಕೊಳ್ಳತೊಡಗಿದಳು. ‘ಅದಕ್ಯಾಕೆ ಚಿಂತೆ ಮಾಡ್ಕೋತೀರೀ, ಈ ವಯಸ್ಸಿನಲ್ಲಿ ಹುಡುಗ್ರಿಗೆ ಹುಡುಗೀರ್‍ಗೆ ಎಲ್ಲರ್‍ಗೂ ಹೀಗೆ ರೂಪದ ಮೇಲೆ ಕಾಳಜಿ ಬರೋದು ಸಾಮಾನ್ಯ. ಎಲ್ಲಾ ಹುಡುಗರೂ ಇದನ್ನು ಎಕ್ಸ್‌ಪ್ರೆಸ್ ಮಾಡೋಲ್ಲ. ನನ್ ಮಗನೂ ಕಾಲೇಜ್ಗೆ ಹೋಗೋವಾಗ ಹೀಗೇ ಸೊಗಸುಗಾರ ಪುಟ್ಟಸ್ವಾಮಿ ಥರ ಇದ್ದ. ಆದ್ರೆ ಓದೋದ್ರಲ್ಲಿ ಏನೂ ಹಿಂದೆ ಬಿದ್ದಿಲ್ಲ ಅವ್ನು. ಅದ್ಕೆಲ್ಲಾ ಅವನ್ನ ಬೈಬೇಡಿ. ಹೀಗಿದ್ರೆ ಇರ್‍ಲಿ ಬಿಡಿ, ಮುಂದೆ ಅವ್ನ ಡ್ರೆಸ್ ಬಗ್ಗೆ ಎಲ್ಲಾ ನೀವ್ಯಾರೂ ಕಾಳಜಿ ವಹಿಸೋದೇ ಬೇಕಿಲ್ಲ ನೋಡು. ಕೆದರಿದ ಕೂದಲು, ಅಸ್ತವ್ಯಸ್ತ ಬಟ್ಟೆ ಇರೋದಕ್ಕಿಂತ ಇದೇ ಬೆಟರ್ ಅಲ್ವಾ?’ ಅಂದೆ.
ಶಶಿ ಅರೆಮನಸ್ಸಿನಿಂದ ‘ಹೂಂ’ ಅನ್ನುವಷ್ಟರಲ್ಲಿ ಹೊರಗಿನಿಂದ ಅನೂಪನ ಅಕ್ಕ ಅಂಜನಾ ಬಂದಳು. ‘ಎಲ್ಲಮ್ಮಾ, ಅನೂಪ್ ಹೋದ್ನಾ? ಅವ್ನಿಗೆ ಪಿಂಪಲ್ ಕ್ರೀಮ್ ತಂದಿದ್ದೀನಿ..’ ಅನ್ನುತ್ತ ಅನೂಪನ ಕೋಣೆಗೆ ಹೋದಳು. ನನಗೂ ಶಶಿಗೂ ನಗದೇ ಇರಲಿಕ್ಕಾಗಲಿಲ್ಲ…
ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಸದಾ ನೆಂಟರಿಷ್ಟರ ಆಗಮನ, ನಿರ್ಗಮನ ನಡೆಯುತ್ತಲೇ ಇರುತ್ತದೆ. ಕಳೆದ ವಾರ ಬಂದದ್ದು ನನ್ನ ತಮ್ಮನ ಹೆಂಡತಿ ಮತ್ತವರ ಮಗಳು ಸ್ಮಿತಾ.
ಮೊನ್ನೆಯಷ್ಟೇ ಪಿಯುಸಿ ಪರೀಕ್ಷೆ ಬರೆದಿರುವ ಸ್ಮಿತಾಳನ್ನು ನೋಡಿ ಆಗಲೇ ಮೂರು ವರ್ಷ ಕಳೆದಿತ್ತು. ಈ ಅವಯಲ್ಲಿ ಅವಳು ಎಷ್ಟೊಂದು ಬದಲಾಗಿದ್ದಳೆಂದರೆ ನಮ್ಮ ಮನೆಯಂಗಳಕ್ಕೆ ಕಾಲಿಡುತ್ತಿದ್ದಂತೆ ಮೊದಲಿಗೆ ‘ಯಾರಪ್ಪಾ ಈ ಚೆಲುವೆ’ ಅನ್ನಿಸಿ ನಿಧಾನವಾಗಿ ಗುರುತು ಹಿಡಿದ. ಉದ್ದಾನುದ್ದಕೆ ಬೆಳೆದ ಹುಡುಗಿ ಚೆನ್ನಾಗಿ ಮೈಕೈ ಬೇರೆ ತುಂಬಿಕೊಂಡು ಲಕ್ಷಣವಾಗಿರುವುದು ಕಂಡು ಮನಸ್ಸಿನಲ್ಲೇ ದೃಷ್ಟಿ ತೆಗೆದೆ.
ಬಂದು ಅರ್ಧ ಗಂಟೆಯಲ್ಲಿಯೇ ನನ್ನ-ಅತ್ತಿಗೆಯ ಪಟ್ಟಾಂಗ ಶುರುವಾಯಿತು. ನಮ್ಮಿಬ್ಬರ ಮಾತೇ ಹಾಗೆ, ಒಮ್ಮೆ ಶುರುವಾದರೆ ಸುಲಭಕ್ಕಂತೂ ಮುಗಿಯುವುದಿಲ್ಲ. ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಾ ಸುಮ್ಮನೆ ಕುಳಿತಿದ್ದಳು ಸ್ಮಿತಾ. ಈ ಹುಡುಗಿಗೆ ಮಾತ್ರ ಯಾಕೋ ಸಂಗಾತಿಗಳಿಲ್ಲದೇ ಬೋರ್ ಅನಿಸ್ತಿದೆ ಅನ್ನಿಸಿತು. ಅವಳಮ್ಮ ಸ್ನಾನಕ್ಕೆ ನಡೆದಾಗ ಮಾತಿಗೆಳೆದೆ. ಪಿಯುಸಿ ಆದ್ಮೇಲೆ ಏನ್ಮಾಡ್ತೀಯ ಅಂತ ಕೇಳಿದೆ. ಬಿಎ ಓದ್ತೀನಿ ಅಂದಳು. ಡಿಗ್ರಿ ಮಾಡಿ ಯಾವ ಕೆಲ್ಸಕ್ಕೆ ಸೇರ್‍ತೀಯ ಅಂತ ಮತ್ತೆ ಕೇಳಿದೆ. ‘ಏನೂ ಇಲ್ಲ, ಮನೆಯಲ್ಲಿ ಇರೋದು, ನಮ್ಮಪ್ಪನ ಜೊತೆ ತೋಟದಲ್ಲಿ ಕೆಲ್ಸ ಮಾಡೋದು’ ಅಂದಳು. ಈ ಮಾತು ಕೇಳಿ ಯಾಕೋ ಒಮ್ಮೆಲೆ ಮಾತೇ ಹೊರಬರದಂತಾಯಿತು ನನಗೆ. ಆದರೂ ಸುಧಾರಿಸಿಕೊಂಡು, ‘ಯಾಕಮ್ಮಾ, ಎಲ್ಲಾ ಹುಡ್ಗೀರೂ ಕೆಲ್ಸ ಕೆಲ್ಸ ಅನ್ನೋವಾಗ ನೀನು ಮಾತ್ರ ಯಾಕೆ ಹೀಗಂತಿದ್ದೀ? ಯಾಕೆ, ಜಾಬ್ ಮಾಡೋಕೆ ಇಷ್ಟ ಇಲ್ವಾ?’ ಅಂದೆ.
‘ಇಲ್ಲಪ್ಪ, ನಾ ಜಾಬ್‌ಗೆ ಹೋಗೋಲ್ಲ. ನಂಗೆ ಸಿಟಿ ಲೈಫ್ ಇಷ್ಟ ಇಲ್ಲ. ಇಲ್ಲೆಲ್ಲಾ ಬಂದು ಕೆಲ್ಸ ಮಾಡೋದು, ಒದ್ದಾಡೋದು ಎಲ್ಲ ಬೇಡಾಂತ..’ ಅವಳ ಮಾತು ಕೇಳಿ, ಬೇರೇನೂ ಹೇಳುವುದಕ್ಕೆ ತೋಚದೆ ‘ಓ, ಹಾಗಾ’ ಅನ್ನುತ್ತ ಸುಮ್ಮನಾದೆ. ಜೀವನ ಪೂರ್ತಿ ಕೆಲಸ, ಕೆರಿಯರ್ ಅಂತೆಲ್ಲ ದುಡಿದು ರಿಟೈರ್ ಆದ ನನಗೆ ಈ ಕೂಸು ಹೇಳುವ ಮಾತನ್ನು ಅರಗಿಸಿಕೊಳ್ಳುವುದೇ ಕಷ್ಟವಾಯಿತು. ಹೀಗಾಗಿ ಮುಂದೆ ಮಾತು ಬೆಳೆಸಲಿಲ್ಲ.
ಮರುದಿನ ಪುರುಸೊತ್ತಿನಲ್ಲಿ ಅತ್ತಿಗೆಯ ಜೊತೆ ಮಾತಾಡುವಾಗ ವಿಷಯ ಪ್ರಸ್ತಾಪಿಸಿದೆ. ‘ಏನೇ, ನಿನ್ಮಗಳು ಹೀಗೆ ಹೇಳ್ತಿದ್ದಾಳಲ್ಲಾ? ಎಲ್ಲಾ ಹುಡ್ಗೀರೂ ಸಿಟಿ ಲೈಫು, ಜಾಬ್ ಅನ್ನೋವಾಗ ಇವಳ್ಯಾಕೇ ಹೀಗಿದ್ದಾಳೆ?’
‘ಅದೇನೋ, ಕಳೆದ ಎರಡು ವರ್ಷದಿಂದ ಹೀಗೇ ಹೇಳ್ತಿದ್ದಾಳಪ್ಪ ಅವ್ಳು. ಎಲ್ಲಿ, ಯಾರು ಇದನ್ನೆಲ್ಲಾ ತಲೆ ತುಂಬಿದ್ರೋ ಗೊತ್ತಿಲ್ಲ..’
‘ಓದೋದ್ರಲ್ಲಿ ಹೇಗಿದ್ದಾಳೆ?’
‘ಚೆನ್ನಾಗೇ ಮಾಡ್ತಾಳೆ ಅತ್ತಿಗೆ, ಫಸ್ಟ್ ರ್‍ಯಾಂಕ್ ಅಲ್ಲದಿದ್ರೂ ಎಪ್ಪತ್ತು ಪರ್ಸೆಂಟ್ ಮೇಲೇಯೇ ಇರುತ್ತೆ ಅವಳ ಮಾರ್ಕ್ಸ್ ಎಲ್ಲ. ದಡ್ಡಿ ಏನಲ್ಲ. ಶಾರ್ಪ್ ಇದ್ದಾಳೆ. ಅದ್ಕೇ, ಡಿಗ್ರಿ ಒಂದು ಮುಗೀಲಿ ಅಂತ ಕಾಯ್ತಾ ಇದ್ದೀವಿ, ಆಮೇಲೆ ಯಾರಾದ್ರೂ ಒಳ್ಳೆ ಕೆಲಸದಲ್ಲಿರೋನಿಗೆ ಮದುವೆ ಮಾಡಿ ಕೊಡೋದು ಅಂತಿದ್ದೀವಿ’
‘ಅಲ್ವೇ, ಸಿಟಿ ಲೈಫು ಇಷ್ಟ ಇಲ್ಲ ಅಂತಿದ್ಲು ಅವ್ಳು. ಯಾರೋ ಬೆಂಗಳೂರಲ್ಲಿರೋ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮದ್ವೆ ಮಾಡೋಕೆ ಹೋದ್ರೆ ಒಪ್ಕೋತಾಳಾ ಅವ್ಳು?’
‘ಅದೇ ನನಗೂ ಸಮಸ್ಯೆ ಬಂದಿರೋದು. ನನ್ನಂಥ ಹಣ್ಮಕ್ಕಳೆಲ್ಲಾ ಹಳ್ಳಿ ಜೀವನ, ಹಸುಕರು, ತೋಟ, ಗುಡ್ಡ ಎಲ್ಲಾ ಸಾಕು ಅಂತ ಅಂದ್ಕೋತಿದ್ರೆ ಇವಳಿಗೆ ಅದೇ ಇಷ್ಟ. ರಜಾ ಸಮಯದಲ್ಲೂ ಮನೆಯಲ್ಲಿ ಒಂದಷ್ಟು ಕೆಲ್ಸ ಮಾಡಿ ಅಪ್ಪನ ಜೊತೆ ತೋಟಕ್ಕೆ ಹೋಗ್ತಾಳೆ. ಅವಳಪ್ಪ ಒಂದೊಂದ್ಸಲ ಇವಳ ಹತ್ರಾನೇ ಕೆಲ್ಸ ಹೇಳಿ ಕಳಿಸ್ತಾರೆ. ಇವ್ಳೇ ಕೆಲಸದೋರ ಹತ್ರ ನಿಂತು ಮಾಡಿಸ್ಕೊಂಡೂ ಬರ್‍ತಾಳೆ. ಅವಳ ಅಣ್ಣನಿಗಿಂತ ಇವ್ಳಿಗೇ ಕೃಷಿಯಲ್ಲಿ ಆಸಕ್ತಿ ಜಾಸ್ತಿ’
‘ಓ, ಹಾಗಿದ್ರೆ ಯಾಕೆ ತಲೆಬಿಸಿ ಮಾಡ್ಕೋತೀಯೇ? ಅವ್ಳಿಗೆ ಕೃಷಿ ಮಾಡ್ಬೇಕು ಅಂತ ಆಸೆ ಇರ್‍ಬೇಕು, ಸರಿಯಾಗಿ ಕೇಳು ಅವಳನ್ನ’ ಅನ್ನುತ್ತಿರುವಾಗ ಸ್ಮಿತಾ ಅಲ್ಲೇ ಬಂದಳು.
‘ಏನೇ, ಕೃಷಿ ಮಾಡ್ತೀಯಾ?’ ಅಂದೆ.
‘ಹೂಂ ಅತ್ತೆ, ನಂಗೆ ತೋಟ, ಗಿಡದ ಜೊತೆ ಇರೋದಂದ್ರೆ ಇಷ್ಟ. ನಾನು ಅಪ್ಪನ ಜೊತೆ ಒಂದಷ್ಟು ತೋಟದ ಕೆಲ್ಸ ಕಲ್ತಿದ್ದೀನಿ’ ಅಂದ್ಲು.
‘ಮತ್ತೇನು, ನನ್ನ ತಮ್ಮಂಗೆ ಒಳ್ಳೇ ಉತ್ತರಾಕಾರಿ ಸಿಕ್ಬಿಟ್ಳಲ್ಲಾ’ ಅಂತ ನಕ್ಕೆ. ಇಂದಿನ ಹುಡುಗಿಯ ಈ ನಿರ್ಧಾರ ಕಂಡು ಒಳಗೇ ತುಂಬ ಮೆಚ್ಚಿಕೊಂಡೆ.
ಮೊನ್ನೆ ಶನಿವಾರ ಸಂಜೆ ಮೊಮ್ಮಗ ಮನುಜನೊಂದಿಗೆ ಹರಟುತ್ತ ಟೆರೇಸ್‌ನಲ್ಲಿ ಕುಳಿತಿದ್ದೆ. ಸೊಸೆ ಸೌಖ್ಯಾ ಬಂದಳು. ಸಂಜೆಯಾಗುತ್ತಲೇ ಮುದುಡಿ ಹೋದ ಹೂವಿನಂತಿರುವ ಹುಡುಗಿಯ ಮುಖದಲ್ಲೊಂದು ಗೆಲುವು. ನಾಳೆ ರಜಾದಿನ ಎನ್ನುವ ಖುಷಿಯ ಎಫೆಕ್ಟ್ ಇರಬೇಕು ಅಂದ್ಕೊಂಡೆ.
ಆಮೇಲೆ ಹೇಳಿದ್ಳು, ‘ಇವತ್ತು ನನ್ನ ಫ್ರೆಂಡ್ ಬರ್‍ತಾಳೆ ಅತ್ತೇ.. ನಾಳೆ ಹೊರಗೆಲ್ಲಾದ್ರೂ ಸುತ್ತೋಣ ಅಂತ…’ ‘ಯಾರು, ಸಂಜನಾನಾ?’ ಅಂದೆ. ‘ಹಾಂ ಅತ್ತೇ, ಅವ್ಳೇ. ಇನ್ನೇನು ಅರ್ಧ-ಒಂದ್ಗಂಟೇಲಿ ಬರ್‍ಬಹುದು’ ಅಂದ್ಳು. ಸಂಜನಾ ನನ್ನ ಸೊಸೆಯ ಬಾಲ್ಯದ ಗೆಳತಿ. ಅವಳಿಗೆ ಮದುವೆ ಒಂದು ವರ್ಷ ಆಗಿದೆ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ. ಅವಳ ಕೈಹಿಡಿದವನೂ ಒಳ್ಳೆಯವನೇ, ಸುಖೀ ಸಂಸಾರ ಅವಳದ್ದು.
ಸಂಜನಾ ಬರ್‍ತಿದ್ದಾಳಲ್ಲ, ಅವ್ಳಿಗೆ ಕ್ಯಾರೆಟ್ ಹಲ್ವಾ ಅಂದ್ರೆ ಇಷ್ಟ, ಮಾಡೋಣ ಅನ್ನುತ್ತಾ ಎದ್ದು ಅಡುಗೆ ಮನೆ ಸೇರುವಷ್ಟರಲ್ಲಿ ಸಂಜನಾ ಬಂದೂಬಿಟ್ಟಳು. ಸಂಜೂಗೆ ತುಂಬಾ ಮಾತು. ಅವಳಿದ್ದರೆ ಮನೆಯಲ್ಲಿ ಹತ್ತು ಜನರಿದ್ದ ಹಾಗೆ. ಆದರೆ ಇವತ್ತು ಮಾತ್ರ ಎಂದಿನಂತಿರಲಿಲ್ಲ ಅವಳು. ‘ಹಾಯ್ ಆಂಟೀ, ಹೇಗಿದ್ದೀರಾ?’ ಅಂತ ಕೇಳಿದವಳ ಮುಖವೂ ಸಪ್ಪಗಿತ್ತು. ಸೌಖ್ಯಾ ಮಾಡಿಕೊಟ್ಟ ಕಾಫಿ ಕುಡಿದು ಸೌಖ್ಯಾನ ಕೋಣೆ ಸೇರಿಕೊಂಡವಳು ಮತ್ತೆ ಹೊರಬಂದದ್ದು ಊಟದ ಹೊತ್ತಿಗೇ.
ಊಟ ಮಾಡುವಾಗಲೂ ಸೌಖ್ಯಾ, ಸಂಜೂದು ಏನೋ ಗುಸುಗುಸು. ‘ಬಿಟ್ಬಿಡೇ ಅದನ್ನೆಲ್ಲಾ…’ ಅನ್ನೋ ಸೌಖ್ಯಾ, ‘ಅದು ಹೇಗಾಗುತ್ತೇ…’ ಅನ್ನೋ ಸಂಜೂ…
ಊಟ ಮಾಡಿ ಸೌಖ್ಯಾ ಮನುಜನನ್ನು ಮಲಗಿಸಲು ಹೋದಳು. ಸಂಜೂ ಅಡುಗೆಕೋಣೆಯಲ್ಲಿ ಉಳಿದಳು. ‘ಏನೇ, ನಿನ್ ಗಂಡನ್ನ ಕರ್‍ಕೊಂಡು ಬರ್‍ಬಾರ್ದಿತ್ತಾ?’ ಅಂದೆ. ‘ಅವ್ರೂ ಫ್ರೆಂಡ್ ಮನೆಗೆ ಹೋಗಿದ್ದಾರೆ ಆಂಟಿ’ ಅಂತ ಅಂದು ಸುಮ್ಮನಾದಳು. ಸ್ವಲ್ಪ ಹೊತ್ತು ಸುಮ್ಮನೇ ಬೆರಳಲ್ಲಿ ನೆಲ ಕೊರೆಯುತ್ತಾ ಕುಳಿತಿದ್ದ ಸಂಜೂ ಇದ್ದಕ್ಕಿದ್ದ ಹಾಗೆ ಮಾತು ತೆಗೆದಳು. ‘ಆಂಟೀ, ನೀವು ಕಾಲೇಜ್‌ಗೆ ಹೋಗ್ತಿದ್ದಾಗ ಯಾರೂ ನಿಮ್ಮನ್ನು ಲವ್ ಮಾಡ್ಲಿಲ್ವಾ? ನೀವು ಯಾರನ್ನೂ ಲವ್ ಮಾಡ್ಲಿಲ್ವಾ?’ ಅಂದ್ಳು. ನನಗೆ ಸೋಜಿಗ, ‘ಅರೆ, ಇದ್ಯಾಕಮ್ಮಾ ನನ್ ಕಾಲದ ಕಥೆ ಕೇಳ್ತಿದ್ದೀಯಾ?’ ಅಂದೆ. ‘ಈಗ್ಲೂ ಕಳೆಕಳೆಯಾಗಿ ಇಷ್ಟೊಂದು ಚೆನ್ನಾಗಿದ್ದೀರಲ್ಲಾ ಆಂಟೀ, ಯಾರನ್ನಾದ್ರೂ ಅಟ್ರಾಕ್ಟ್ ಮಾಡಿರ್‍ತೀರಾ ಅಂತ ಕೇಳ್ದೆ’ ಅಂದ್ಳು. ‘ಏನೀಗ ನಿನ್ ಸಮಸ್ಯೆ?’ ಅಂತ ನೇರವಾಗಿ ಕೇಳ್ದೆ. ‘ಆಂಟೀ, ನಾನು ಕಾಲೇಜ್‌ನಲ್ಲಿದ್ದಾಗ ಒಬ್ಬನನ್ನ ಲವ್ ಮಾಡಿದ್ದೆ. ಅದ್ಯಾಕೋ ನಾವು ಮದ್ವೆ ಆಗ್ಲಿಲ್ಲ. ಆದ್ರೆ ಈಗ ಒಂದು ಮೂರು ತಿಂಗಳ ಹಿಂದೆ ಅವ್ನು ನಮ್ ಆಫೀಸ್ ಬಸ್ ಸ್ಟಾಪ್ ಹತ್ರ ಸಿಕ್ಕ. ಸುಮ್ನೆ ಮಾತಾಡಿದ್ವಿ. ಆಮೇಲಿಂದ ಅವ್ನು ಪ್ರತಿದಿನ ಅದೇ ಬಸ್ ಸ್ಟಾಪ್‌ನಲ್ಲಿ ಸಿಗ್ತಿದ್ದಾನೆ. ಇತ್ತೀಚೆಗೆ ಈ ವಿಷ್ಯದಲ್ಲಿ ನಾನು ತುಂಬಾ ಡಿಸ್ಟರ್ಬ್ ಆಗಿದ್ದೀನಿ ಆಂಟಿ. ಅವನ ಬಗೆಗೆ ಫೀಲ್ ಮಾಡ್ಕೊಂಡು ಈಗ ನನ್ನ ಗಂಡಂಗೆ ದ್ರೋಹ ಮಾಡ್ತಿದ್ದೀನೇನೋ ಅನಿಸ್ತಿದೆ. ನನ್ ಹಸ್ಬೆಂಡ್‌ಗೆ ಹೇಳೇ ಬಿಡೋಣ ಅಂದ್ಕೊಂಡೆ, ಆದ್ರೂ ಸುಮ್ನಾದೆ’ ಅಂದಾಗ ಹುಡ್ಗಿ ವಿಷ್ಯ ಗಂಭೀರ ಆಗಿದ್ಯಲ್ಲಾ ಅಂದ್ಕೊಂಡು ಶುರುಮಾಡಿದೆ, ‘ನೋಡು ಸಂಜೂ, ಅಂದಿನ ಆ ಪ್ರೀತಿ, ಆ ಹುಡುಗ ಎಲ್ಲಾ ಆ ಕಾಲಕ್ಕೆ ಸರಿ. ಆಗ ನೀನು ಪ್ರೀತಿ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ಆದ್ರೆ ಈಗ ಅವನನ್ನು ನೆನಪಿಸಿಕೊಂಡು ಕೊರಗೋದು ತಪ್ಪು. ಮೊದಲ ಪ್ರೇಮವನ್ನು ಮರೆಯೋದು ಸುಲಭ ಅಲ್ಲ. ಆದರೆ ಅದನ್ನು ಜೀವಂತ ಇಟ್ಟುಕೊಳೋದ್ರಿಂದ ಇವತ್ತು ಯಾವ ಪ್ರಯೋಜನವೂ ಇಲ್ಲ. ಎಲ್ಲೋ ಒಂಟಿಯಾಗಿದ್ದಾಗ ಆ ಪ್ರೀತಿ ನಿನಗೊಂದು ಹನಿ ಖುಷಿ ಕೊಡಲಿ. ಅಷ್ಟರಮಟ್ಟಿಗೆ ಅದನ್ನು ಪಕ್ಕಕ್ಕಿಡು. ಅವನು ದಿನವೂ ಸಿಕ್ಕರೂ ಮತ್ತೆ ಅದೇ ಪ್ರೀತಿಯನ್ನು ಮುಂದುವರಿಸಬೇಡ. ಹಳೆಯ ಪ್ರೀತಿಯನ್ನು ಮದುವೆಯ ಬಳಿಕವೂ ಎಳೆತರೋ ತಪ್ಪು ಮಾತ್ರ ಮಾಡ್ಬೇಡ’
‘ಹೂಂ ಆಂಟಿ’ ಎಂದು ನಗುನಗುತ್ತ ಮಲಗುವುದಕ್ಕೆ ಹೊರಟ ಸಂಜೂ ಮತ್ತೆ ತಿರುಗಿ ಕೇಳಿದಳು, ‘ಆದ್ರೂ ಆಂಟೀ, ಒಂದು ಪ್ರಶ್ನೆಗೆ ಮಾತ್ರ ಉತ್ತರ ಸಿಗ್ಲಿಲ್ಲ.. ನಿಮ್ ಲವ್ವು…?’
ಸುಮ್ಮನೇ ನಕ್ಕೆ.
ಊರಲ್ಲೇನೋ ಕಾರ್‍ಯಕ್ರಮವೆಂದು ಹೋಗಿದ್ದೆ. ಸುರಿವ ಮಳೆಯನ್ನು ಸುಮ್ಮನೇ ನೋಡುತ್ತ ಕುಳಿತಿದ್ದೆ. ಎಂಜಿನಿಯರಿಂಗ್ ಎರಡನೇ ವರ್ಷ ಓದುತ್ತಿರುವ ಮಿಥುನ್ ಪಕ್ಕದಲ್ಲೇ ಲ್ಯಾಪ್‌ಟಾಪ್ ಹಿಡಿದು ಬಂದು ಕುಳಿತ. ನಾನು ಮಳೆ ನೋಡುವುದರಲ್ಲಿ ತಲ್ಲೀನಳಾಗಿದ್ದರೆ ಅವನು ಲ್ಯಾಪ್‌ಟಾಪ್ ತೆರೆದು ಅದರಲ್ಲೇ ಬಿಝಿಯಾಗಿದ್ದ. ಮುಂಬೈಯಲ್ಲಿರುವ ನನ್ನ ಕಿರಿಯ ತಮ್ಮನ ಮುದ್ದಿನ ಮಗನೀತ.
ಇದೇನು ಹುಡುಗನಪ್ಪಾ, ಮಳೆ ನೋಡಬೇಕೆಂದು ಅನಿಸೋದೇ ಇಲ್ಲವೇ ಇವನಿಗೆ ಅಂತ ಅಂದುಕೊಂಡೆ. ಕೇಳಿದೆ, ‘ಏನೋ, ಮುಂಬೈಯಲ್ಲಿ ಇಷ್ಟು ಚೆನ್ನಾಗಿರೋ ಮಳೆ ನೋಡೋಕೆ ಸಿಗುತ್ತಾ ನಿಂಗೆ? ಮಳೆ ನೋಡ್ಬೇಕು ಅಂತ ಅನಿಸೋದಿಲ್ವಾ?’
‘ಹಾಗೇನೋ ಅನ್ಸೋದಿಲ್ಲ ಅತ್ತೆ.. ಮಳೆ ಎಲ್ಲಾ ಕಡೇನೂ ಒಂದೇ ಅಲ್ವಾ? ಥತ್, ಈ ನೆಟ್ ಯಾಕೋ ಕೈಕೊಡ್ತಾ ಇದೆ. ಇಂಟರ್ನೆಟ್ ಸರಿ ಇಲ್ದೆ ಇದ್ರೆ ಭಾರೀ ಕಷ್ಟ’ ಅಂದ ಅವನು.
‘ಏನಪ್ಪಾ, ಅಂಥಾ ಇಂಪಾರ್ಟೆಂಟ್ ಕೆಲ್ಸ ಏನಿತ್ತು?’ ಅಂದೆ.
‘ಏನಿಲ್ಲ, ನೆಟ್‌ನಲ್ಲಾದ್ರೆ ಫ್ರೆಂಡ್ಸ್ ಸಿಗ್ತಾರೆ, ಮಾತಾಡ್ಬಹುದು. ಟೈಂ ಪಾಸ್ ಆಗುತ್ತೆ..’
‘ನಾವು ಇಷ್ಟೆಲ್ಲಾ ಜನ ಇದ್ದೀವಲ್ಲಾ, ನಮ್ ಹತ್ರ ಮಾತಾಡು’ ಅನ್ನುತ್ತಾ ಪ್ರೀತಿಯಿಂದ ತಲೆ ಸವರುತ್ತಿದ್ದಂತೆ ಕೊಸರಿಕೊಂಡು ಎದ್ದೇ ಹೋಗಿಬಿಟ್ಟ ಹುಡುಗ. ಅಷ್ಟರಲ್ಲಿ ಮೊಬೈಲ್‌ಗೆ ತಗಲಿಕೊಂಡ ಅವನಕ್ಕ ‘ಹಲೋ ಹಲೋ’ ಅನ್ನುತ್ತ ಹೊರಹೋದಳು. ಎರಡು ದಿನದಿಂದ ನೋಡುತ್ತಿದ್ದೆ, ಅವಳೂ ಅಷ್ಟೇ, ಮನೆಯವರೊಂದಿಗೆ ಮಾತಾಡಿದ್ದಕ್ಕಿಂತ ಮೊಬೈಲ್‌ನಲ್ಲಿ ಮಾತಾಡಿದ್ದೇ ಹೆಚ್ಚು. ಇಬ್ಬರನ್ನೂ ನೋಡಿ ಅಚ್ಚರಿಯಾಯಿತು.
ಅಲ್ಲೇ ಬಂದ ತಮ್ಮನಲ್ಲಿ ಹೇಳಿದೆ, ‘ಅಲ್ವೋ, ನಾ ಮದುವೆಯಾದ ಹೊಸತರಲ್ಲಿ ನಮ್ಮನೆಗೆ ಫೋನ್ ಬಂದಾಗ ಅದರಲ್ಲಿ ಮಾತಾಡೋದಕ್ಕೆ ಅದೆಷ್ಟು ಕಿರಿಕಿರಿ ಆಗ್ತಿತ್ತು ನಂಗೆ. ಈಗ್ಲೂ ಈ ಮೊಬೈಲ್‌ನಲ್ಲಿ ಮಾತಾಡೋದು ಕಷ್ಟವೇ ನೋಡು. ಏನಿದ್ರೂ ಎದುರು ಬದುರು ಮಾತಾಡೋದೇ ಸುಖ ಅನ್ಸುತ್ತೆ ನಂಗೆ. ಹೀಗಿರೋವಾಗ ಈ ಹುಡುಗರು ಮೊಬೈಲ್, ನೆಟ್ಟು ಅಂತ ಮುಳುಗಿ ಹೋಗಿದ್ದಾರಲ್ಲ..’
‘ಹೌದಕ್ಕಾ, ಈ ಮಕ್ಳಿಗೆ ನೇರವಾಗಿ ಮಾತಾಡೋಕೇ ಬರೋಲ್ಲ. ನನ್ ಮಗ ಈಗ ನಿನ್ನಲ್ಲಿ ಮಾತಾಡದೇ ಇರ್‍ಬಹುದು. ಆದ್ರೆ ಫೇಸ್‌ಬುಕ್‌ನಲ್ಲಿ ಸಿಕ್ಕು, ಅದೆಷ್ಟು ಹೊತ್ತು ಚಾಟ್ ಮಾಡ್ತಾನೋ ನೋಡು’ ಅಂದ ತಮ್ಮ.
ಇದ್ಯಾಕೋ ಸೀರಿಯಸ್ ಸಮಸ್ಯೆ ಎನಿಸಿತು. ಮಿಥುನ್ ಮತ್ತು ಅವನ ಅಕ್ಕ ಮೈನಾ -ಇಬ್ಬರನ್ನೂ ಸಾಧ್ಯವಾದಾಗಲೆಲ್ಲಾ ಕರೆಕರೆದು ಮಾತಾಡಿಸಿದೆ. ಹುಡುಗರು ಮೊದಮೊದಲು ಮಾತಾಡುವುದಕ್ಕೂ ಕಷ್ಟಪಟ್ಟರು. ಅದೃಷ್ಟಕ್ಕೆ ಆ ಹಳ್ಳಿಮನೆಯಲ್ಲಿ ಅವನ ನೆಟ್ಟೂ, ಇವಳ ಮೊಬೈಲ್ ನೆಟ್‌ವರ್ಕೂ ಕೈಕೊಟ್ಟಿದ್ದವು. ಟೈಂಪಾಸ್ ಆಗುತ್ತಿಲ್ಲವೆಂದು ಬೇಸರಿಸುತ್ತಿದ್ದ ಅವರಿಬ್ಬರನ್ನೂ ಅಕ್ಕಪಕ್ಕದ ಮನೆಗಳಿಗೆ ಕರೆದೊಯ್ದೆ, ಮನೆಯಲ್ಲೇ ಯಾವ್ಯಾವುದೋ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಇಬ್ಬರೂ ಮುಖ ಕೊಟ್ಟು ಮಾತಾಡುವುದಕ್ಕೆ, ನೇರ ಸಂಭಾಷಣೆಗೆ ನಿಧಾನವಾಗಿ ತೆರೆದುಕೊಂಡರು.
ಕೊನೆಗೆ ರಜೆ ಮುಗಿಸಿ ಮುಂಬೈಗೆ ಹೊರಟು ನಿಂತಾಗ ಅಕ್ಕ-ತಮ್ಮನ ಮುಖದಲ್ಲಿ ಏನೋ ಖುಷಿ, ಹೊಸತನ. ಅಕ್ಕಪಕ್ಕದ ಗೆಳೆಯರಿಗೂ ಬೈ ಅಂದು ಹೊರಟಾಗ ಪರವಾಗಿಲ್ವೇ ಅಂದುಕೊಂಡೆ.
ಇದೀಗ ನನ್ನ ತಮ್ಮ ಮತ್ತವನ ಹೆಂಡತಿ ಮುಂಬೈನಿಂದ ಪ್ರೊಗ್ರೆಸ್ ರಿಪೋರ್ಟ್ ಕೊಡುತ್ತಿದ್ದಾರೆ… ಮಿಥುನ್‌ನ ಲ್ಯಾಪ್‌ಟಾಪ್‌ಗೀಗ ಕೆಲಸ ಕಡಿಮೆಯಾಗಿದೆ. ಮೈನಾ ಮೊಬೈಲ್‌ನಲ್ಲಿ ಮಾತಾಡೋದೂ ಅಷ್ಟಾಗಿ ಕಾಣ್ತಿಲ್ಲ. ಇಬ್ಬರೂ ಮನೆಗೆ ಬಂದವರ ಜೊತೆ, ಅಕ್ಕಪಕ್ಕದವರ ಜೊತೆ ತಾವಾಗಿ ಮಾತಾಡ್ತಾರೆ!