Archive for the ‘ಕಥಾ ಸಮಯ’ Category

ಅವಳ ಕಥೆ

Posted: ಫೆಬ್ರವರಿ 24, 2015 in ಕಥಾ ಸಮಯ
ಅವಳು ದಿನವೂ ಬೆಳಿಗ್ಗೆ ಮಗಳನ್ನು ಸ್ಕೂಲಿಗೆ ಬಿಟ್ಟು ಹೊರಡುವಾಗ ಸ್ಕೂಲ್ ಗೇಟಿನಿಂದ ಸ್ವಲ್ಪ ದೂರದಲ್ಲೇ ಇಬ್ಬರು -ಮೂವರು ಅಮ್ಮಂದಿರು ನಿಂತು ಮಾತಾಡುತ್ತಿದ್ದರು. ಇವಳು ಪ್ರತಿದಿನ ಅವರ ಈ ಮೀಟಿಂಗ್ ನೋಡುತ್ತಿದ್ದಳು. ತನ್ನ ಮಗಳ ಕ್ಲಾಸ್‌ಮೇಟ್‌ಗಳ ಅಮ್ಮಂದಿರೇ ಆದ್ದರಿಂದ ತಾನೂ ಸೇರಬಹುದೇನೋ ಅಂದುಕೊಂಡು ಇವಳೂ ಒಂದಿನ ಅವರ ಗುಂಪಿನಲ್ಲಿ ಸೇರಿಕೊಂಡಳು.
‘ನಮ್ಮತ್ತೆ ಒಂದು ಕಸಕಡ್ಡಿ ಕೂಡ ಎತ್ತಿಡಲ್ಲಪ್ಪ… ನಾನು ವರ್ಕಿಂಗ್ ವುಮನ್ ಏನೂ ಅಲ್ಲ ಸರಿ, ಆದ್ರೂ ಸ್ವಲ್ಪ ಹೆಲ್ಪ್ ಮಾಡ್ಬಾರ್ದಾ..? ಏನ್ ಜನಾನೋ..’ ಮೂಗು ಮುರಿದಳು ಒಬ್ಬಳು.
‘ನಮ್ಮನೇಲೂ ಅಷ್ಟೆ. ಅತ್ತೆ-ಮಾವ ಇಬ್ರೂ ದೊಡ್ಡ ಸೌಂಡ್‌ನಲ್ಲಿ ಸೀರಿಯಲ್ ನೋಡ್ತಿರ‍್ತಾರೆ. ಮಗೂಗೆ ಹೋಮ್‌ವರ್ಕ್ ಮಾಡ್ಸೋಕೂ ಕಷ್ಟ, ಬೆಡ್‌ರೂಮೇ ಹೋಗ್ಬೇಕು  ನಾನು’ ಅಂತಂದಳು ಇನ್ನೊಬ್ಬಳು.
ಇವಳು ತನಗೆ ಮಾತಾಡುವುದಕ್ಕೇನೂ ವಿಷಯವಿಲ್ಲವೆಂಬಂತೆ ಹೊರಡಲನುವಾದಳು. ಅಷ್ಟರಲ್ಲಿ ಒಬ್ಬ ತಾಯಿ ಕೇಳಿದಳು, ‘ನಿಮ್ಮ ಅತ್ತೆ-ಮಾವ ಊರಲ್ಲಿದ್ದಾರಾ?’
‘ಇಲ್ಲ, ನಂಗೆ ಅತ್ತೆ-ಮಾವ ಇಲ್ಲ. ನಾವೇ ಗಂಡ-ಹೆಂಡ್ತಿ-ಮಗು, ಅಷ್ಟೆ’ ಅಂದಳು.
‘ಓ, ಮಜಾ… ಹಾಗಾದ್ರೆ ನಿಮ್ಗೆ ನಮ್ಮ ಹಾಗೆ ಕಷ್ಟ  ಹೇಳ್ಕೊಳ್ಳೋಕೆ ಏನೂ ಇಲ್ಲ ಬಿಡಿ’ ಅಂದಳು ಇನ್ನೊಬ್ಬಳು.
‘ಹೂಂ’ ಅನ್ನುತ್ತ ಹೊರಟಳು ಇವಳು. ‘ಗಂಡ ಕೊಡೋ ಕಷ್ಟಾನಾ ಹೇಳ್ಕೊಳ್ಳೋಕಾಗುತ್ತಾ?’ ಅಂತ ಗೊಣಗಿದ್ದು ಅವರಾರಿಗೂ ಕೇಳಲಿಲ್ಲ.
ವಿದ್ಯಾರಶ್ಮಿ ಪೆಲತ್ತಡ್ಕ

ಹಾರುವ ಹಕ್ಕಿ

Posted: ಆಗಷ್ಟ್ 17, 2011 in ಕಥಾ ಸಮಯ

ಅವಳು ಒಬ್ಬ ಸಹೃದಯಿ ತಾಯಿ. ಆಕೆಗೊಬ್ಬನೇ ಮಗ. ಮುಚ್ಚಟೆಯಿಂದ ಅವನನ್ನು ಬೆಳೆಸಿದ್ದಳು. ಮಗ ಓದಿದ, ಒಳ್ಳೆ ಉದ್ಯೋಗ ಹಿಡಿದ. ಮಗ ಬೆಳೆಯುವುದನ್ನು ನೋಡುತ್ತಿದ್ದಂತೆ ತಾಯಿಗೆ ಮೇರೆ ಮೀರಿದ ಹೆಮ್ಮೆ. ಮಹತ್ವಾಕಾಂಕ್ಷಿ ಮಗ ಇಷ್ಟಕ್ಕೇ ಸುಮ್ಮನಿರಲಿಲ್ಲ. ಅವನ ಪ್ರಯತ್ನಕ್ಕೆ ವಿದೇಶದಲ್ಲಿ ಕೆಲಸವೂ ಸಿಕ್ಕಿತು. ಹೋಗುತ್ತೇನೆ ಎಂದ. ಈಗ ಅಮ್ಮನಿಗೆ ಶುರುವಾಯಿತು ಚಿಂತೆ. ತನ್ನನ್ನು ಬಿಟ್ಟು ಮಗ ದೂರ ಹೋಗುತ್ತಾನಲ್ಲಾ ಎಂದು ನಿತ್ಯವೂ ಕೊರಗಿದಳು. ಬೇಡವೆಂದು ಪ್ರತಿಭಟಿಸಿದಳು. ಮಗ ಸರಿಯೆಂದು ಸುಮ್ಮನಾದ. ಆದರೆ ದಿನೇದಿನೇ ಮಗ ತನ್ನ ಉತ್ಸಾಹ ಕಳೆದುಕೊಳ್ಳತೊಡಗಿದ. ಅಮ್ಮನ ಮಾತಿಗೆ ಸ್ಪಂದಿಸಿದರೂ ಅವನ ಮುಖ ಕಳೆಗುಂದಿರುತ್ತಿತ್ತು. ಅಮ್ಮನಿಗೆ ಯೋಚನೆಯಾಯಿತು. ಏನು ಮಾಡುವುದೆಂದು ಯೋಚಿಸುತ್ತಾ ಕಿಟಕಿಯಲ್ಲಿ ಕೈಯಿಟ್ಟು ಮನೆಯ ಹಿತ್ತಲಿನತ್ತ ನೋಡುತ್ತ ನಿಂತಳು. ಆಕೆ ನಿತ್ಯವೂ ನೋಡುತ್ತಿದ್ದ ಹಕ್ಕಿಗೂಡು ಕಾಣಿಸಿತು. ಹಲವು ದಿನಗಳಿಂದ ಅಲ್ಲೊಂದು ಹಕ್ಕಿ ಸಂಸಾರ ವಾಸಿಸಿತ್ತು. ಆ ಗೂಡಿನಲ್ಲಿ ಎರಡು ಹಕ್ಕಿ ಮರಿಗಳೂ ಇದ್ದವು. ಇಂದು ಆಕೆ ನೋಡುತ್ತಿದ್ದಂತೆ ಆ ಹಕ್ಕಿ ಮರಿಗಳು ಗೂಡು ಬಿಟ್ಟು ಹಾರಿದವು. ಅಮ್ಮ ಸಂಜೆ ಮತ್ತೆ ಆ ಹಕ್ಕಿಗೂಡಿನೆಡೆಗೆ ನೋಡಿದಳು. ಅಪ್ಪ-ಅಮ್ಮ ಹಕ್ಕಿಗಳು ಬಂದವು. ಮರಿಗಳನ್ನು ಹುಡುಕಿದವರು. ಅವು ಇಲ್ಲದ್ದು ಕಂಡು ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ವ್ಯಸ್ತವಾದವು. ಅಮ್ಮ ಇದೆಲ್ಲವನ್ನೂ ನೋಡುತ್ತಲೇ ಇದ್ದಳು… ಮಗ ವಿದೇಶಕ್ಕೆ ಹೋಗಲು ಅಮ್ಮನ ಅನುಮತಿ ಅಂದೇ ಸಿಕ್ಕಿತು.

ಬಂಧನ

Posted: ಆಗಷ್ಟ್ 17, 2011 in ಕಥಾ ಸಮಯ

ಆತನೊಬ್ಬ ಸುಖಲೋಲುಪ, ದುರಹಂಕಾರಿ ರಾಜ. ಸರ್ವಾಕಾರ ಅವನ ಪ್ರತಿ ಹೆಜ್ಜೆಯಲ್ಲೂ ಗೋಚರವಾಗುತ್ತಿತ್ತು. ಅವನ ನೀತಿ, ಕಾರ್‍ಯಗಳ ವಿರುದ್ಧ ಆ ಸಾಮ್ರಾಜ್ಯದಲ್ಲಿ ಯಾರೊಬ್ಬರೂ ಮಾತಾಡುವಂತಿರಲಿಲ್ಲ. ಹೀಗೆ ಯಾರಾದರೂ ತನಗಾಗದ ಮಾತಾಡಿದ್ದು ಕೇಳಿದಾಕ್ಷಣ ಆತ ಅವರನ್ನು ಶಿಕ್ಷಿಸುತ್ತಿದ್ದ. ಆ ಸಾಮ್ರಾಜ್ಯದಲ್ಲೊಬ್ಬ ಸಂತನಿದ್ದ. ಅವನೊಂದು ದಿನ ರಾಜನ ದಮನಕಾರಿ ನೀತಿಯ ವಿರುದ್ಧ ಬಹಿರಂಗವಾಗಿ ಏನೋ ಹೇಳಿದ ಸುದ್ದಿ ರಾಜನಿಗೆ ಸಿಕ್ಕಿತು. ತಕ್ಷಣ ರಾಜ ಆ ಸಂತನನ್ನು ಎಳೆದು ತರಲು ಆಜ್ಞಾಪಿಸಿದ. ಸಂತನಿಗೆ ತನ್ನ ಸೇವಕರ ಕೈಯಲ್ಲೇ ಹೊಡೆಸಿ ಅವನನ್ನು ಬಂಧನದಲ್ಲಿಟ್ಟ ರಾಜ. ಬಹು ದಿನಗಳ ಅನಂತರ ಕಾರಾಗೃಹದತ್ತ ಬಂದ ರಾಜ ಆ ಸಂತನನ್ನು ಕೇಳಿದ, ‘ಈಗಲಾದರೂ ನಿನ್ನ ಕೊಬ್ಬು ಕರಗಿರಬೇಕು. ಇನ್ನು ಮುಂದೆ ನನ್ನ ವಿರುದ್ಧ ಮಾತಾಡುವೆಯಾ?’ ‘ಮಾತಾಡುವೆ’ ತಣ್ಣಗೆ ಹೇಳಿದ ಸಂತ. ರಾಜನಿಗೆ ಕೋಪ ಉಕ್ಕೇರಿ ಸಂತನ ನಾಲಿಗೆಯನ್ನೇ ಕತ್ತರಿಸಿ ಹಾಕಿದ. ಮತ್ತೆ ಕೇಳಿದ, ‘ಈಗ ನನ್ನ ವಿರುದ್ಧ ನೀನು ಮಾತಾಡುವುದು ಸಾಧ್ಯವೇ ಇಲ್ಲ..’ ಸಂತ ನೆಲದಲ್ಲೇ ಬರೆದು ತೋರಿಸಿದ, ‘ಮಾತಾಡಲು ನನಗೆ ನಾಲಿಗೆ ಇಲ್ಲದಿರಬಹುದು. ಆದರೆ ನಿನ್ನ ವಿರುದ್ಧ ನನ್ನ ಮನಸ್ಸಂತೂ ಮಾತನಾಡುತ್ತಿರುತ್ತದೆ’ ಚಕಿತನಾದ ರಾಜ ಸಂತನನ್ನು ಬಿಡುಗಡೆ ಮಾಡಿದ. ಪ್ರಜಾಹಿತ ಕಾರ್‍ಯಕ್ರಮಗಳನ್ನು ಜಾರಿಗೆ ತಂದ.

ಸ್ವೇಚ್ಛೆ

Posted: ಆಗಷ್ಟ್ 17, 2011 in ಕಥಾ ಸಮಯ

ಅದೊಂದು ಪುಟ್ಟ ಮೊಲ. ಕಾಡಿನಲ್ಲಿ ತನ್ನ ಗುಂಪಿನವರೊಡನೆ ವಾಸವಾಗಿತ್ತು. ಆ ಮೊಲಗಳ ಬಳಗದಲ್ಲೆಲ್ಲ ಈ ಮೊಲವೇ ಅತ್ಯಂತ ಪುಟ್ಟದಾಗಿದ್ದುದರಿಂದ ಉಳಿದೆಲ್ಲ ಮೊಲಗಳಿಗೂ ಇದರ ಬಗ್ಗೆ ತುಂಬಾ ಕಾಳಜಿ. ಮೊಲ ಭಲೇ ತುಂಟ ಬೇರೆ. ಹೀಗಾಗಿ ಉಳಿದ ಮೊಲಗಳೂ ಅದನ್ನು ಆಗಾಗ್ಗೆ ಗದರಿಸುವುದೂ ಇತ್ತು. ಒಂದು ಬಾರಿ ಪುಟಾಣಿ ಮೊಲಕ್ಕೆ ತಾನಿದ್ದ ಪರಿಸರವೇ ಒಂದು ಜೈಲಿನ ಹಾಗನಿಸಿತು. ಏನು ಮಾಡುವುದಿದ್ದರೂ ಹಿರಿಯರ ಅನುಮತಿ ಕೇಳಬೇಕು, ಎಲ್ಲೋ ಪರಿ ಮೀರಿ ಹೆಜ್ಜೆಯಿಟ್ಟರೆ, ತನಗಿಷ್ಟವಾದ ಕೆಲಸ ಮಾಡಿದರೆ ಉಳಿದವರ ನಿಂದನೆ ಕೇಳುವ ಈ ಬಾಳೊಂದು ಬಾಳೇ ಎಂದು ಬೇಸರವಾಯಿತು. ಇವರನ್ನೆಲ್ಲ ಬಿಟ್ಟು ತಾನು ಬೇರೆಲ್ಲಾದರೂ ಹೋದರೆ ಹೇಗೆ ಎಂಬ ಆಲೋಚನೆ ಬಂತು. ಯಾರ ಅಂಕೆಯೂ ಇಲ್ಲದ ಆ ಸ್ಥಿತಿಯನ್ನು ನೆನಪಿಸಿಕೊಂಡೇ ಖುಷಿಯಾಯಿತು ಅದಕ್ಕೆ. ಒಂದು ದಿನ ಗಟ್ಟಿ ನಿರ್ಧಾರ ಮಾಡಿ ತನ್ನವರನ್ನೆಲ್ಲ ಬಿಟ್ಟು ಹೊರಟೇಬಿಟ್ಟಿತು ಪುಟಾಣಿ ಮೊಲ. ಜಿಗಿಜಿಗಿದು ಹೊರಟ ಮೊಲ ತನಗಿಷ್ಟ ಬಂದಂತೆ ಮಾಡುತ್ತಾ, ಆಡುತ್ತಾ, ಕುಣಿಯುತ್ತಾ ಸಾಗುತ್ತಿತ್ತು. ಮರದಿಂದ ನೇತಾಡುತ್ತಿದ್ದ ಮಂಗನ ಬಾಲವನ್ನು ಮುಟ್ಟಬೇಕೆನಿಸಿತು ಅದಕ್ಕೆ. ಅದರಂತೆಯೇ ಮುಟ್ಟಿತು. ದಾರಿಯಲ್ಲಿ ಮಲಗಿದ್ದ ಆನೆಯ ಬೆನ್ನ ಮೇಲೆ ಹತ್ತಿ ನೆಗೆಯಿತು. ಕಣ್ಣಿಗೆ ಬಿದ್ದ ಚೆಂದದ ಹಣ್ಣನ್ನು ತಿಂದಿತು. ಹೀಗೇ ಮುಂದಕ್ಕೆ ಸಾಗಿದಾಗ ಸಿಂಹಗಳ ಸಮೂಹವೊಂದು ಕಂಡಿತು. ಸಿಂಹವೊಂದರ ಮುಖದ ಸುತ್ತ ಕೇಸರ ಕಂಡು ಅದನ್ನು ಮುಟ್ಟುವ ಆಸೆಯಾಯಿತು. ಆ ಸಿಂಹ ಕಣ್ಣುಮುಚ್ಚಿ ತೂಕಡಿಸುತ್ತಿತ್ತು. ಮೊಲ ಧೈರ್‍ಯಮಾಡಿ ಅದರ ಮುಖದ ಬಳಿಸಾರಿ ಕತ್ತಿನಮೇಲೆ ಜಿಗಿಯಹೊರಟಿತು. ಅದು ಸಿಂಹದ ಕತ್ತು ತಲುಪಲಿಲ್ಲ, ಅದರ ಬಾಯಿ ಪ್ರವೇಶಿಸಿತು.

ಬಂಧನ

Posted: ಜುಲೈ 31, 2011 in ಕಥಾ ಸಮಯ

ಅಧ್ಯಾತ್ಮ ಆಧಾರಿತ ಸಣ್ಣ ಕಥೆಗಳನ್ನು ಒಂದಷ್ಟು ಬರೆದಿದ್ದೇನೆ. ಇವುಗಳನ್ನು ಕನ್ನಡ ಜೆನ್ ಕಥೆಗಳು ಎಂದರೂ ಸರಿಯೇ. ಇವು ಯಾವುದೇ ಜೆನ್ ಅಥವಾ ಸೂಫಿ ಕಥೆಯ ಅನುವಾದವೂ ಅಲ್ಲ. ನನ್ನ ಸ್ವಂತ ರಚನೆಗಳು. ಆದರೆ ಓದಿದಾಗ ಅದೇ ಫೀಲ್ ಬರಬಹುದೇನೋ. ಮೊದಲು ಉದಯವಾಣಿ ಸಾಪ್ತಾಹಿಕಕ್ಕೆ ಪ್ರಿಥ್ವಿರಾಜ್ ಕವತ್ತಾರ ಹೇಳಿ ಬರೆಸಿ, ‘ಸಪಸ’ ಎಂಬ ಹೆಸರಿನ ಅಂಕಣದಲ್ಲಿ ಪ್ರಕಟವಾದ ಕತೆಗಳಿವು. ಅವುಗಳಲ್ಲೊಂದು ಕಥೆ ಇಲ್ಲಿದೆ.

ಅದೊಂದು ಪುಟ್ಟ ರಾಜ್ಯ. ಆ ರಾಜ್ಯದ ಪ್ರಜೆಗಳೆಲ್ಲಾ ಪರಮ ಧಾರ್ಮಿಕರು. ಈ ಪ್ರಜೆಗಳಿಗೊಬ್ಬ ರಾಜನಿದ್ದ. ಆಶ್ಚರ್ಯವೆಂದರೆ, ಈತ ಪರಮ ನಾಸ್ತಿಕ. ದೇವರೇ ಇಲ್ಲ, ದೇವರೆಂಬ ಕಲ್ಪನೆಗೆ ಪೂಜೆ ಪುನಸ್ಕಾರ ಮಾಡುವುದೆಲ್ಲ ವ್ಯರ್ಥ ಎನ್ನುವುದು ಆತನ ಅಭಿಪ್ರಾಯ. ಇಷ್ಟಕ್ಕೇ ಸುಮ್ಮನಿರಲಿಲ್ಲ ರಾಜ. ತನ್ನ ಪ್ರಜೆಗಳ್ಯಾರೂ ದೇವರನ್ನು ನಂಬಬಾರದು, ಪೂಜಿಸಬಾರದು ಎಂದು ಫರ್ಮಾನು ಹೊರಡಿಸಿಬಿಟ್ಟ. ಜೊತೆಗೆ ತನ್ನ ಸಾಮ್ರಾಜ್ಯದಲ್ಲಿದ್ದ ಎಲ್ಲಾ ದೇಗುಲಗಳಿಗೂ ಬೀಗವನ್ನೂ ಹಾಕಿಸಿದ.

ದೇವರನ್ನು ನಂಬುವ ಬಹುಸಂಖ್ಯಾತ ಪ್ರಜೆಗಳು ಇಷ್ಟಕ್ಕೆ ಸೋಲುತ್ತಾರೆಯೇ? ಎಲ್ಲರೂ ತಂತಮ್ಮ ಮನೆಗಳಲ್ಲಿ ದೇವರ ಮೂರ್ತಿಯನ್ನಿಟ್ಟು ಪೂಜಿಸಲು ಶುರುಮಾಡಿದರು. ಇದು ರಾಜನಿಗೂ ತಿಳಿಯಿತು. ಕೂಡಲೇ ತನ್ನ ಸೈನಿಕರನ್ನು ಎಲ್ಲಾ ಮನೆಗಳಿಗೂ ಕಳುಹಿಸಿ ಆ ಮನೆಗಳಲ್ಲಿದ್ದ ದೇವರ ಪ್ರತಿಮೆಗಳನ್ನೂ ಹೊರಹಾಕಿಸಿ ಸುಡುವಂತೆ ಆಜ್ಞೆ ಮಾಡಿದ. ತಮ್ಮ ನಂಬಿಕೆಗೆ ಧಕ್ಕೆ ಬಂದಾಗ ಪ್ರಜೆಗಳೆಲ್ಲಾ ದುಃಖಿತರಾದರು. ಆದರೂ ಅವರೆಲ್ಲ ಸೋಲಲಿಲ್ಲ. ಮನೆಗಳಲ್ಲೇ ದೇವರ ಚಿತ್ರಗಳನ್ನು ಗೋಡೆಗೆ ಅಂಟಿಸಿಕೊಂಡು ಪ್ರಾರ್ಥನೆ ಸಲ್ಲಿಸತೊಡಗಿದರು.

ಈಗ ಅರಸನಿಗೆ ಸಿಟ್ಟು ನೆತ್ತಿಗೇರಿ ಎಲ್ಲಾ ಪ್ರಜೆಗಳನ್ನೂ ಕಾರಾಗೃಹಕ್ಕೆ ಹಾಕುವಂತೆ ಆಜ್ಞಾಪಿಸಿದ. ಜನರನ್ನು ಬಂಧಿಸಿಡುವುದಕ್ಕಾಗಿಯೇ ಏಕಕೋಣೆಯುಳ್ಳ ದೊಡ್ಡ ಕಟ್ಟಡವನ್ನೂ ನಿರ್ಮಿಸಿದ. ಇಲ್ಲಿ ಬಂದ ಜನರೂ ಮತ್ತೆ ದೇವಾರಾಧನೆಗೆ ಬೇರೆ ಮಾರ್ಗ ಹುಡುಕಿದರು. ಎಲ್ಲರೂ ಗೋಡೆಯಲ್ಲಿ ದೇವರ ಚಿತ್ರ ಬಿಡಿಸಿ ಕೈಮುಗಿಯಲಾರಂಭಿಸಿದರು. ಈಗ ಇನ್ನಷ್ಟು ಸಿಡಿಮಿಡಿಗೊಂಡ ರಾಜ ಆ ಕೋಣೆಯನ್ನು ಪೂರ್ಣವಾಗಿ ಕತ್ತಲುಮಯವಾಗಿಸಿದ. ಹಗಲು ಹೊತ್ತಿನಲ್ಲೂ ಬೆಳಕು ಒಳಬರದ ಈ ಕೋಣೆಯಲ್ಲಿದ್ದ ಪ್ರಜೆಗಳಿಗೆಲ್ಲ ಹತಾಶೆ ಮಡುಗಟ್ಟಿತು. ಎಲ್ಲರೂ ನಿಧಾನವಾಗಿ ರಾಜನ ಅಧಿಕಾರ ದರ್ಪದ ಮುಂದೆ ಸೋಲಲಾರಂಭಿಸಿದರು.

ದೇವರನ್ನು ಪೂಜಿಸುವ ಬೇರಾವ ದಾರಿಯೂ ಕಾಣದೆ ಇವರೆಲ್ಲರೂ ಮಂಕಾಗತೊಡಗಿದರು. ಹೀಗೆ ದುಃಖಿತರಾದ ಜನರನ್ನು ನೋಡನೋಡುತ್ತ ರಾಜನ ಅಹಂಕಾರ ಹೆಚ್ಚುತ್ತ ಬಂತು.

ಒಂದು ದಿನ ಬಂಧನದಲ್ಲಿದ್ದ ಜನರನ್ನೆಲ್ಲ ನೋಡಲು ಬಂದ ರಾಜ. ಜನರ ಸೋತ ಮುಖವನ್ನು ಕಂಡು ಈತನಿಗೆ ಒಳಗೊಳಗೇ ಗೆಲುವಿನ ಸಂತಸ. ಎಲ್ಲರನ್ನೂ ಒಟ್ಟಾಗಿ ಪ್ರಶ್ನಿಸಿದ,

‘ದೇವರನ್ನು ಪೂಜಿಸುವುದಿಲ್ಲ, ದೇವರಿಲ್ಲ ಎಂದು ಒಪ್ಪುತ್ತೀರಾ? ಹಾಗಿದ್ದರೆ ಈ ಕ್ಷಣ ನಿಮ್ಮೆಲ್ಲರನ್ನೂ ಬಿಡುಗಡೆ ಮಾಡುತ್ತೇನೆ’ ಎಂದ.

ಬಂಧಿತರಿಗೆಲ್ಲ ಬಿಡುಗಡೆಯ ಹಂಬಲ. ಆದರೆ, ದೇವರನ್ನು ಧಿಕ್ಕರಿಸಿ ಬದುಕುವ ಧೈರ‍್ಯ ಅವರಾರಿಗೂ ಇರಲಿಲ್ಲ. ಎಲ್ಲರೂ ಸಪ್ಪಗಾದರು. ಆದರೆ, ಇವರೆಲ್ಲರ ನಡುವೆ ಒಬ್ಬ ವ್ಯಕ್ತಿ ಮಾತ್ರ ನಸುನಗುತ್ತಿದ್ದ. ರಾಜನಿಗೆ ಒಳಗೊಳಗೇ ಕುತೂಹಲ. ಈತನೂ ದೈವಭಕ್ತನೇ. ಆದರೆ ಉಳಿದವರಂತೆ ಇವನ ಮುಖ ಕಳೆಗುಂದಿಲ್ಲವಲ್ಲ, ಏನಿದರ ಮರ್ಮ ಎಂಬ ಪ್ರಶ್ನೆ ಆತನನ್ನು ಕಾಡಿತು. ಆದರೂ ಏನನ್ನೂ ಪ್ರಶ್ನಿಸದೆ ಆತನ ಮೇಲೆ ಒಂದು ಕಣ್ಣಿಟ್ಟಿರಲು ಕಾವಲುಭಟರಿಗೆ ಹೇಳಿ ಅರಮನೆಗೆ ತೆರಳಿದ.

ಆ ವ್ಯಕ್ತಿ ತನ್ನ ಪಾಡಿಗೆ ಕುಳಿತಿರುತ್ತಿದ್ದ. ಕೆಲವೊಮ್ಮೆ ಇತರರೊಂದಿಗೆ ಮಾತಾಡುತ್ತಿದ್ದ ಎಂಬ ವರದಿ ಬಂತು. ಹಾಗಿದ್ದರೆ ಆತ ದೇವರ ಪೂಜೆಗೆ ಬೇರಾವುದೇ ದಾರಿ ಕಂಡುಕೊಂಡಿಲ್ಲವೆಂದುಕೊಂಡು ರಾಜ ನಿಶ್ಚಿಂತನಾದ.

ಇನ್ನೊಂದು ವಾರ ಕಳೆದು ಬಂದ ರಾಜ. ಜನರೆಲ್ಲ ಈ ಬಂಧನದಲ್ಲಿ ಸಂಪೂರ್ಣವಾಗಿ ಬಳಲಿದ್ದಾರೆಂದೂ, ತನ್ನ ಕರಾರಿಗೆ ಒಪ್ಪಿ ಬಿಡುಗಡೆಯನ್ನು ಬೇಡುತ್ತಾರೆಂದುಕೊಂಡೇ ಬಂದ. ಆದರೆ, ಈ ಬಾರಿ ಬಂದಾಗ ಅದೇಕೋ ಜನರೆಲ್ಲ ಹೆಚ್ಚು ಗೆಲುವಾಗಿರುವಂತೆ ಕಂಡಿತು ರಾಜನಿಗೆ. ಆದರೂ ಮತ್ತೆ ಪ್ರಶ್ನಿಸಿದ, ‘ದೇವರಿಗೆ ಪೂಜೆ ಮಾಡುವುದಿಲ್ಲ, ದೇವರ ಹೆಸರೆತ್ತುವುದಿಲ್ಲ ಎನ್ನುವವರನ್ನು ಬಿಡುಗಡೆ ಮಾಡುತ್ತೇನೆ, ಯಾರು ಸಿದ್ಧರಿದ್ದೀರಿ?’

ಬಂಧಿತರೆಲ್ಲರೂ ಒಪ್ಪಿ ಮುಂದೆ ಬಂದರು. ರಾಜನಿಗೆ ಅಚ್ಚರಿಯಾಯಿತು. ಮಹಾನ್ ದೈವಭಕ್ತರಾದ ಈ ಜನರೆಲ್ಲ ಇಷ್ಟು ಸುಲಭದಲ್ಲಿ ಈ ಕರಾರಿಗೆ ಒಪ್ಪಿದ್ದು ಹೇಗೋ ಎಂಬ ಸಂದೇಹ ಹುಟ್ಟಿತು. ಹಿಂದಿನ ವಾರ ಬಂದಾಗ ನಸುನಗುತ್ತಿದ್ದ ವ್ಯಕ್ತಿಯ ಮೇಲೆ ಯಾಕೋ ಸಂದೇಹ ಬಂತು. ‘ಈ ಜನರೆಲ್ಲ ನನ್ನ ದಾರಿಗೆ ಬಂದಿದ್ದಾರೆಂದರೆ ದೇವರ ಆರಾಧನೆಗೆ ಅವರೆಲ್ಲ ಇನ್ನಾವುದೋ ದಾರಿ ಕಂಡುಕೊಂಡಿರಬೇಕು. ಈ ಮೂರ್ಖ ಜನರಿಗೆ ಯಾರೋ ಏನನ್ನೋ ಹೇಳಿದ್ದಾರೆ. ನೀನೇ ಇದಕ್ಕೆಲ್ಲ ಕಾರಣವೆಂದು ನನ್ನ ಮನಸ್ಸು ಹೇಳುತ್ತಿದೆ, ಹೇಳು, ಏನು ಮಾಡಿದೆ?’

ಆ ವ್ಯಕ್ತಿ ನಗುತ್ತಲೇ ಉತ್ತರಿಸಿದ,

‘ರಾಜನೇ, ನಾವು ದೇವಸ್ಥಾನಕ್ಕೆ ಹೋಗುವುದಕ್ಕೆ ನೀನು ತಡೆಹಾಕಿದೆ. ನಾವು ಪೂಜಿಸುತ್ತಿದ್ದ ದೇವರ ಪ್ರತಿಮೆಗಳನ್ನೂ ನಾಶಮಾಡಿದೆ. ಆದರೆ, ದೇವರು ನಮ್ಮ ಮನಸ್ಸಿನಲ್ಲಾಗಲೇ ಪ್ರತಿಷ್ಠಾಪಿತನಾಗಿದ್ದಾನೆ. ನಮ್ಮ ಮನಸ್ಸಿನಿಂದ ಅವನನ್ನು ನಾಶಮಾಡಲು ನಿನ್ನಿಂದ ಸಾಧ್ಯವಿಲ್ಲ. ನಾವು ದೇವರನ್ನು ಮನಸ್ಸಿನಲ್ಲೇ ಆರಾಧಿಸುತ್ತೇವೆ. ಅದನ್ನು ನೀನು ತಡೆಯುವುದು ಅಸಾಧ್ಯ. ನಮ್ಮ ಕೈಗಳನ್ನು ನೀನು ಕಟ್ಟಿಹಾಕಬಹುದು, ದೇಹವನ್ನು ಬಂಧನದಲ್ಲಿಡಬಹುದು, ಮನಸ್ಸನ್ನು ಬಂಧಿಸುವುದು ಸಾಧ್ಯವಿಲ್ಲ. ನನ್ನ ಮನಸ್ಸಿಗೆ ಬಂದ ಈ ಯೋಚನೆಯನ್ನು ಈ ಎಲ್ಲ ನನ್ನ ಸ್ನೇಹಿತರಿಗೂ ಹೇಳಿದ್ದೇನೆ’ ಎಂದನಾತ.

ಪ್ರಜೆಗಳ ದೈವಭಕ್ತಿಯನ್ನು ತಡೆಯಲು ಬೇರೆ ದಾರಿ ಕಾಣದೆ ಹತಾಶನಾದ ರಾಜ ಎಲ್ಲರನ್ನೂ ಬಿಡುಗಡೆ ಮಾಡಿದ.