ಎಡ್ಗರ್ ಲೀ ಮಾಸ್ಟರ್‍ಸ್‌ನ ಕವನದ ಅನುವಾದ
ನನ್ನೆದೆಯಲಿ ನೀರವ ಮೌನ
ಬಹುದಿನಗಳ ನೋವಿಗೆ ಸಿಕ್ಕ ಬಿಡುಗಡೆಯಂತೆ
ಹೊರಗೆ ಸುರಿಯುವ ಮಳೆಯೊಳಗೆ
ಚಿಲಿಪಿಲಿಸುವ ಮಾಡಿನ ಗುಬ್ಬಚ್ಚಿಗಳು
ನನ್ನೆದೆಯೆಲ್ಲ ಒದ್ದೆ; ಛಾವಣಿಯಲೂ ಮಳೆ;
ಬೂದು ನರೆಯಡಿಯಲ್ಲಿ ಮಲಗಿದೆ ನೆನಪು
ಗಾಳಿಯಾಡದ ಆಗಸದಲಿ
ಆ ಸುದಿನಗಳ ಕನಸಿಲ್ಲ
ಸ್ವರ್ಗದಾಣೆಗೂ ಸಿಗಲಿಲ್ಲ,
ಬಂಗಾರದ ಮೋಡಗಳು, ಮೆಲುಗಾಳಿಯ ಸಿಂಚನ
ನಿನ್ನ ಕಳಕೊಂಡ ನೋವು ಸಂತೈಸಲಾದರೂ
ಇಂತಹ ದಿನಗಳು ಬರಲಿ.
ನಿನ್ನ ನಾನು ಕಾಣಲಾರೆ. ನೀನಿದ್ದಂತೆಯೇ
ನಿನ್ನನ್ನು ತಿಳಿವ ಬಯಕೆಯೂ ಬರಿದಾಗಿದೆ
ಬದಲಾಗಿರುವ ನಾನೂ
ನನ್ನೊಲುಮೆಯ ನಿನ್ನ ಮುಖ ಬದಲಾಗಿರುವುದನ್ನು ನೋಡಲಾರೆ