Archive for the ‘ಪುಸ್ತಕ ಪ್ರಪಂಚ’ Category

ನಾನು ಚಿಕ್ಕವಳಿದ್ದಾಗ ಆಗಸದಲ್ಲಿ ವಿಮಾನ ಹಾರುವ ಸದ್ದಾದಾಗಲೆಲ್ಲ ನಾವು ಮಕ್ಕಳು ಮನೆಯೊಳಗಿನಿಂದ ಅಂಗಳಕ್ಕೆ ಓಡಿ ಬಂದು ಆಕಾಶ ನೋಡುತ್ತ ನಿಲ್ಲುತ್ತಿದ್ದೆವು. ಅದು ರಾಕೆಟ್ಟೋ, ವಿಮಾನವೋ, ಹೆಲಿಕಾಪ್ಟರೋ ಯಾವುದಾದರೂ ಸರಿ, ಅದರ ಸದ್ದು, ಚುಕ್ಕಿಯಂತೆ ಕಾಣುವ ಅದರ ಆಕಾರ ಎಲ್ಲವೂ ನಮಗೆ ರೋಚಕವೇ. ಆದರೆ ಇದನ್ನು ನೋಡುವ ರಭಸದಲ್ಲೂ ನನ್ನ ಅಣ್ಣಂದಿರು ಹೇಳುವುದಿತ್ತು, ’ಹೇ, ಅದು ಮದ್ದು ಬಿಡುವ ಹೆಲಿಕಾಪ್ಟರ್. ಬೀಜದ ಗುಡ್ಡೆಗೆ ಎಂಡೋಸಲ್ಫಾನ್ ಬಿಡ್ತಿದ್ದಾರೆ’ ಅಂತ. ನಮ್ಮ ಮನೆಯ ಹಿಂಭಾಗದಲ್ಲೂ ಗೇರುಬೀಜದ ಮರಗಳಿರುವ ಗುಡ್ಡವಿತ್ತು, ಇದಕ್ಕೂ ಮದ್ದು ಬಿಡುತ್ತಾರೋ ಅಂದುಕೊಳ್ಳುತ್ತಾ ’ಸಾಧ್ಯವಿಲ್ಲ, ನಮ್ಮ ಮನೆಯ ನೇರ ಮೇಲಕ್ಕೇನೂ ಹೆಲಿಕಾಪ್ಟರ್ ಬರುವುದಿಲ್ಲ’ ಅಂದುಕೊಂಡು ಸುಮ್ಮನಾಗುತ್ತಿದ್ದೆ ನಾನು. ಆದರೆ, ಆ ಎಂಡೋಸಲ್ಫಾನ್ ಸೇವೆ ಸರ್ಕಾರಕ್ಕೆ ಸೇರಿದ ಗೇರುಬೀಜದ ನೆಡುತೋಪುಗಳಿಗೆ ಮಾತ್ರ ಎನ್ನುವುದು ನನಗಾಗ ಗೊತ್ತಿರಲಿಲ್ಲ. ಅದರಿಂದಾಗುವ ದುಷ್ಪರಿಣಾಮದ ಬಗೆಗೂ ಆಗ ತಿಳಿದಿರಲಿಲ್ಲ, ಬಹುಶಃ ಎಂಡೋಸಲ್ಫಾನ್‌ನ ಪರಿಣಾಮ ಆಗಿನ್ನೂ ಯಾರಿಗೂ ಗೊತ್ತಿರಲಿಲ್ಲವೇನೋ.
ನಾನು ಕಾಲೇಜು ಹಂತಕ್ಕೆ ತಲುಪುವ ವೇಳೆಗೆ ಎಂಡೋಸಲ್ಫಾನ್ ಸುದ್ದಿ ಮಾಡಲಾರಂಭಿಸಿತ್ತು. ನಮ್ಮೂರಿನಿಂದ ಹತ್ತು-ಹದಿನೈದು ಕಿಲೋಮೀಟರ್ ಅಂತರದೊಳಗೇ ಇರುವ ಸ್ವರ್ಗ, ವಾಣಿನಗರ ಮೊದಲಾದ ಊರುಗಳಲ್ಲೆಲ್ಲ ಎಂಡೋಸಲ್ಫಾನ್ ಮಾರಕ ಪರಿಣಾಮ ಬೀರಿದ್ದು ಸುದ್ದಿಯಾಗಿತ್ತು. ಈ ಊರುಗಳೆಲ್ಲ ಇರುವುದು ಪಡ್ರೆ ಗ್ರಾಮದಲ್ಲಿ. ಇಡಿಯ ಕಾಸರಗೋಡು ಜಿಲ್ಲೆಯಲ್ಲೇ ಎಂಡೋಸಲ್ಫಾನ್‌ನಿಂದ ಗರಿಷ್ಟ ಹಾನಿಗೊಳಗಾದದ್ದು ಈ ಪ್ರದೇಶ. ಏಕೆಂದರೆ ಅತ್ಯಂತ ಹೆಚ್ಚು ಗೇರುಬೀಜದ ಪ್ಲಾಂಟೇಶನ್‌ಗಳು ಇದ್ದದ್ದು-ಇರುವುದು ಈ ಗ್ರಾಮದಲ್ಲಿ. ಈ ಗ್ರಾಮ ಇರುವುದು ಎಣ್ಮಕಜೆ ಗ್ರಾಮ ಪಂಚಾಯತ್‌ನಲ್ಲಿ. ನನ್ನ ’ಪೆಲತ್ತಡ್ಕ’ವೂ ಈ ಎಣ್ಮಕಜೆ ಪಂಚಾಯತ್‌ನಲ್ಲೇ ಇದೆ.
ಇಂತಹ “ಎಣ್ಮಕಜೆ” ಎಂಬ ಹೆಸರನ್ನು ಹೊತ್ತ ಕಾದಂಬರಿಯೊಂದು ಬಂದಿದೆ ಎಂದು ತಿಳಿದಾಗ ಅಚ್ಚರಿಯಾಗಿತ್ತು, ಏನಿರಬಹುದು ಎಂಬ ಕುತೂಹಲವೂ ಮೂಡಿತ್ತು. ಎಂಡೋಸಲ್ಫಾನ್ ದುರಂತ ಬಗೆಗಿನ ಕಾದಂಬರಿ ಅದು ಎಂದು ತಿಳಿದು ಈ ವಿಷಯದಲ್ಲಿ ಕಾದಂಬರಿಯನ್ನು ಹೇಗೆ ಬರೆದಿರಬಹುದು ಎಂದು ಇನ್ನಷ್ಟು ಆಸಕ್ತಿ ಕೆರಳಿತು. ಈಚೆಗೆ ಸಹೋದ್ಯೋಗಿ ರಾಮಸ್ವಾಮಿ ಹುಲ್ಕೋಡ್ ಅವರಿಂದ ಓದುವ ಅವಕಾಶವೂ ಸಿಕ್ಕಿತು.
ಮಲಯಾಳಂ ಬಾಷೆಯಲ್ಲಿ ೨೦೦೯ರಲ್ಲಿ ಪ್ರಕಟವಾದ ಎಲ್ಲ ಪ್ರಕಾರದ ಕೃತಿಗಳ ಪೈಕಿ ಅತ್ಯುತ್ತಮ ಪುಸ್ತಕ ಎಂದು ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಮನ್ನಣೆ ಪಡೆದ ಕೃತಿ ಇದು. ಅಂಬಿಕಾಸುತನ್ ಮಾಂಗಾಡ್ ಬರೆದ ಈ ಮಲಯಾಳಂ ಕೃತಿ ಕನ್ನಡಕ್ಕೆ ಬಂದುದು ಉಪನ್ಯಾಸಕ ಬಾಲಕೃಷ್ಣ ಹೊಸಂಗಡಿ ಅವರಿಂದ, ೨೦೧೦ರಲ್ಲಿ.
ದುರಂತ ನಡೆದ ಸ್ವರ್ಗ, ವಾಣಿನಗರ, ಎಣ್ಮಕಜೆಗಳಲ್ಲೇ ಕಥೆಯೂ ನಡೆಯುತ್ತದೆ. ವಾಸ್ತವದ ದುರಂತವೊಂದನ್ನು ಫಿಕ್ಷನ್‌ನ ಚೌಕಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವುದರಲ್ಲೇ ಇದೆ ಕಾದಂಬರಿಯ ಶಕ್ತಿ.
ಸ್ತ್ರೀ ಮತ್ತು ಪುರುಷ – ಈ ಎರಡು ಹೆಸರಿಲ್ಲದ ಪಾತ್ರಗಳಿಂದ ಕಾದಂಬರಿ ಆರಂಭ. ಇವರಿಬ್ಬರೂ ಬಂದು ನೆಲೆಸುವುದು ಎಣ್ಮಕಜೆಯಲ್ಲಿ. ಸ್ತ್ರೀಗೆ ಆ ಊರಿನಲ್ಲಿ ಒಂದು ಅನಾಥ ಮಗು ಸಿಗುವಲ್ಲಿಂದ ಎಣ್ಮಕಜೆಯ ದುರಂತಗಳ ಸರಮಾಲೆ ನಿಧಾನವಾಗಿ ತೆರೆದುಕೊಳ್ಳುತ್ತದೆ.
ಅನಾಥರಿಗೆ, ಭಿಕ್ಷುಕರಿಗೆ, ವೇಶ್ಯೆಯರಿಗೆ ಆಶ್ರಯ ನೀಡಿ ಸೇವೆ ಮಾಡುತ್ತಿದ್ದ ನೀಲಕಂಠನ್ ಹಾಗೂ ದೇವಯಾನಿ ನಾಗರಿಕ ಪ್ರಪಂಚದ ಕಪಟಗಳಿಂದ ನೊಂದು ಇದ್ಯಾವುದೂ ತಮಗೆ ಬೇಡವೆಂದು ಬಂದವರು. ಅದಕ್ಕಾಗಿಯೇ ಈ ಊರಿನಲ್ಲಿ ಮೊದಲು ಮನುಷ್ಯರ ಸಂಪರ್ಕವೇ ಇಲ್ಲದೆ, ತಮಗೊಂದು ಹೆಸರಿತ್ತು ಎಂಬುದನ್ನೇ ಮರೆತು ಬದುಕುತ್ತಾರೆ. ಆದರೆ, ಸ್ತ್ರೀಯ ಕೈಗೆ ಸಿಕ್ಕ ಮಗು ಅವರಿಬ್ಬರ ಮಾವೀಯತೆಯನ್ನು ಮತ್ತೆ ಜಾಗೃತಗೊಳಿಸುತ್ತದೆ. ನೀಲಕಂಠನ್ ಆ ಊರಿನಲ್ಲಿ ಜಟಾಧಾರಿ ಭೂತದ ಶಾಪದಿಂದ ಗುಣಪಡಿಸಲಾಗದ ಕಾಯಿಲೆಗೊಳಗಾಗಿ ನರಳುತ್ತಿರುವ ಅನೇಕರನ್ನು ನೋಡುತ್ತಾನೆ. ಬೆನ್ನಿಗೇ ಇದು ಎಂಡೋಸಲ್ಫಾನ್ ಪರಿಣಾಮ ಎಂದೂ ತಿಳಿಯುತ್ತದೆ. ಅದರ ಸಿಂಪಡಣೆಯ ಬಗ್ಗೆ ಜಾಗೃತರಾಗಿರುವವರ ಅನೇಕರ ಪರಿಚಯವೂ ಆತನಿಗಾಗುತ್ತದೆ. ಕ್ರಮೇಣ ಎಂಡೋಲ್ಫಾನ್ ವಿರುದ್ಧ ಅಲ್ಲೊಂದು ಹೋರಾಟ ಆರಂಭವಾಗುತ್ತದೆ.
ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಹೀಗೆ ಯಾರು ಜನರನ್ನು ಕಾಪಾಡಬೇಕೋ ಅವರೆಲ್ಲರೂ ಈ ಹೋರಾಟಕ್ಕೆ ತಡೆಹಾಕಲು ಪ್ರಯತ್ನಿಸುತ್ತಾರೆ. ನೀಲಕಂಠ ಹಾಗೂ ದೇವಯಾನಿ ಇಬ್ಬರೂ ತಲೆಮರೆಸಿಕೊಳ್ಳಬೆಕಾಗುತ್ತದೆ. ಎಂಡೋಸಲ್ಫಾನ್ ವಿರುದ್ಧ ಏರ್ಪಾಡಾಗುವ ರ್‍ಯಾಲಿಯೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ಜಯರಾಜನೂ ಇದ್ದಕ್ಕಿದ್ದ ಹಾಗೆ ಕಾಣೆಯಾಗುತ್ತಾನೆ. ದೇವಯಾನಿ ಹಾಗೂ ನೀಲಕಂಠನ್ ಇಬ್ಬರನ್ನೂ ಕೊಲ್ಲಲೆಂದೇ ತಂಡಸಮೇತ ಬರುವ ನೇತಾರ ಸರ್ಪದ ಕಡಿತಕ್ಕೆ ಒಳಗಾಗುತ್ತಾನೆ. ಇಲ್ಲಿಯೂ ಹೇಗೋ ಜೀವವುಳಿಸಿಕೊಂಡ ನೀಲಕಂಠನ್-ದೇವಯಾನಿ ಸ್ತ್ರೀ-ಪುರುಷರಾಗಿ ಗುಹೆಯೊಂದರಲ್ಲಿ ಆಸರೆ ಪqಯುತ್ತಾರೆ. ಸ್ತ್ರೀ-ಪುರುಷರ ಪಾತ್ರ ಚಿತ್ರಣದೊಂದಿಗೆ ಆರಂಭವಾಗುವ ಕಾದಂಬರಿ ಮತ್ತೆ ಅವರಿಬ್ಬರೂ ಅನಾಮಧೇಯರಾಗಿ (ಸ್ತ್ರೀ-ಪುರುಷ) ಕಾಣಿಸಿಕೊಳ್ಳುವುದರೊಂದಿಗೆ ಮುಗಿಯುತ್ತದೆ.
ಇಲ್ಲಿ ಕಾಣುವ ಈ ಪರಿಸರ, ಎದುರಾಗುವ ಪಾತ್ರಗಳು.. ಎಲ್ಲವೂ ಬರಿಯ ಎಣ್ಮಕಜೆಗಷ್ಟೇ ಸೀಮಿತವಾದುದಲ್ಲ. ಓದುತ್ತ ಹೋದಂತೆ, ನಿತ್ಯ ಝರಿತೊರೆಗಳಿಂದ, ಹಸಿರಿನಿಂದ ಸಂಭ್ರಮಿಸುತ್ತಾ ಸ್ವರ್ಗದಂತಿರುವ ಈ ಊರು ಎಂಡೋಸಲ್ಫಾನ್‌ನಿಂದಾಗಿ ನರಕವಾದ ಎಲ್ಲಾ ಪ್ರದೇಶಗಳನ್ನೂ ಪ್ರತಿನಿಧಿಸುತ್ತದೆ. ದೇವಯಾನಿ-ನೀಲಕಂಠನ್‌ರ ಮಗುವಾಗಿ ಕೊನೆಯುಸಿರೆಳೆಯುವ ಪರೀಕ್ಷಿತ, ಆತ್ಮಹತ್ಯೆ ಮಾಡಿಕೊಳ್ಳುವ ದಾಮೋದರ ಶೆಟ್ಟರ ಮಗಳು.. -ಇವರೆಲ್ಲ ಎಂಡೋಸಲ್ಫಾನ್ ಪೀಡಿತವಾದ ಇತರ ಊರುಗಳಲ್ಲೂ ಕಾಣಸಿಗಬಲ್ಲರು.
ಎಂಡೋಸಲ್ಫಾನ್ ವಿರುದ್ಧ ಹೋರಾಡುವವರನ್ನೇ ದಮನಿಸುವ ’ನೇತಾರ’ನಂಥ ಅಧಿಕಾರಸ್ಥರು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅದೆಷ್ಟು ಜನರಿದ್ದಾರೋ.. ಎಂಡೋಸಲ್ಫಾನ್ ಕುರಿತಾಗಿ ನಿಜಜೀವನದಲ್ಲೂ ಹೋರಾಡಿದ ಶ್ರೀಪಡ್ರೆಯವರನ್ನು ಬಿಂಬಿಸುವ ಪಾತ್ರ ’ಶ್ರೀರಾಮ’, ಡಾ.ವೈ.ಎಸ್.ಮೋಹನ್ ಕುಮಾರ್‌ರಂತಿರುವ ವೈದ್ಯ, ಹಲವು ಹೋರಾಟಗಾರರು.. ಎಲ್ಲರೂ ಹೋರಾಟದ ಚಿತ್ರಣಕ್ಕೆ ಕಾವು ನೀಡುತ್ತಾ ಕಥೆಯನ್ನು ಆಪ್ತವಾಗಿಸುತ್ತಾರೆ.
ವಾಸ್ತವ ಜಗತ್ತಿನ ಸಮಸ್ಯೆಯೊಂದನ್ನು ಬಿಚ್ಚಿಡುವ ಕೃತಿ ಆರಂಭವಾಗುವುದು ಕಾಲ್ಪನಿಕವಾಗಿ. ಕೊನೆಯಾಗುವುದೂ ಹಾಗೆಯೇ. ಮಾನವ ಜಗತ್ತಿನ ಆರಂಭಕ್ಕೆ ಸ್ತ್ರೀ-ಪುರುಷರಿಬ್ಬರೂ ಬೇಕು. ಕಾದಂಬರಿಯ ಆರಂಭ-ಅಂತ್ಯಗಳೂ ಇದನ್ನೇ ಸಂಕೇತಿಸುತ್ತವೆ. ಎಂಡೋಸಲ್ಫಾನ್ ವಿರುದ್ಧ ಹೋರಾಟ ಕಾದಂಬರಿಯಲ್ಲಿ ದಮನಕ್ಕೆ ಒಳಗಾಗಿರಬಹುದು. ಆದರೆ ಇದು ಜೀವಸಂಕುಲದ ಅಂತ್ಯವಲ್ಲ. ಅವರಿಬ್ಬರಿಗೂ ಪರಿಶುದ್ಧವಾದ ನೀರು ಹರಿಯುತ್ತಿರುವ ತೊರೆ ಹುಟ್ಟಿರುವ ಗುಹೆಯೊಂದು ಸಿಗುತ್ತದೆ. ಸ್ತ್ರೀ-ಪುರುಷರಿಬ್ಬರೂ ಮನುಜವರ್ಗದ ಪ್ರತಿನಿಧಿಗಳಾಗಿ ಆ ಗುಹೆ ಪ್ರವೇಶಿಸುತ್ತಾರೆ. ಕತ್ತೆಯ ರೂಪದಲ್ಲಿ ಭತ್ತದ ಹೊಟ್ಟನ್ನು ತಿನ್ನುತ್ತಾ ಕಾಲಯಾಪನೆ ಮಾಡುತ್ತಿರುವ ಬಲಿಯೇಂದ್ರನಿಗೆ ಇದು ಕಷ್ಟಕಾಲ. ಈ ಬಲಿಯೂ ಸೇರಿದಂತೆ ಆ ಪ್ರದೇಶದ ಸಕಲ ಅಳಿದುಳಿದ ಜೀವರಾಶಿಗಳಿಗೂ ಈ ಗುಹೆ ಆಸರೆಯಾಗುತ್ತದೆ. ಸ್ತ್ರೀ-ಪುರುಷರಿಬ್ಬರೂ ಇಲ್ಲಿ ಬಂದು ಸೇರುವುದರೊಂದಿಗೆ ನಾಳೆ ಆರೋಗ್ಯಕರ ಪ್ರಕೃತಿ ಹಾಗೂ ಸಮಾಜವೊಂದು ರೂಪಿತವಾಗುವುದಕ್ಕೆ ಇಲ್ಲಿ ಸೇರಿದವರೇ ಮೂಲವಾಗುತ್ತಾರೆ ಎಂಬ ಆಶಯ ಪರೋಕ್ಷವಾಗಿ ಮೂಡುತ್ತದೆ. ಸಂತ್ರಸ್ತರ ಅಸಹಾಯಕತೆ ಮನವನ್ನು ಕಲಕುವ ಜೊತೆಜೊತೆಗೇ ಪ್ರತಿಯೊಂದು ಹೋರಾಟದ ಹಿಂದೆಯೂ ಆಶಾವಾದದ ಬೆಳಕು ಸ್ಫೂರ್ತಿಯಾಗಿರಬೇಕು ಎಂಬುದನ್ನು ಸಾರುವ ಮೂಲಕ ಓದುಗರಿಗೂ ಸಮಾಧಾನ ನೀಡುತ್ತದೆ.
ಪರಿಸರ ಹೋರಾಟದ ಘಟನೆಗಳ ನಿರೂಪಣೆ ಬರಿಯ ಪ್ರಬಂಧವಾಗುವ ಎಲ್ಲಾ ಸಾಧ್ಯತೆಗಳೂ ಇಲ್ಲಿ ಇತ್ತು. ಆದರೆ ಮಾಂಗಾಡ್ ಇದನ್ನು ಹಾಗಾಗುವುದಕ್ಕೆ ಬಿಟ್ಟಿಲ್ಲ. ಕಥೆಯ ಪಾತಳಿಯಲ್ಲಿ ತಮಗೆ ಹೇಳಬೇಕಾದುದನ್ನೆಲ್ಲಾ ಹೇಳಿ ಓದುಗರ ಮನ ತಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಬಾಲಕೃಷ್ಣ ಹೊಸಂಗಡಿಯವರ ಅನುವಾದ ಓದಲು ಸುಖ ನೀಡುತ್ತದೆ.

 

ಈ ರಾತ್ರಿ
ನಿನ್ನ ಹೆಸರಲ್ಲೊಂದು
ಕವಿತೆ ಬರೆಯುವೆ…
ಅಂತನ್ನುತ್ತಾ ಪ್ರೀತಿಯಿಂದ ಕವನಿಸುವ ಎಸ್. ಕುಮಾರ್‌ಗೆ ಕಾವ್ಯವೆಂದರೆ ಮತ್ತೇರಿಸುವಷ್ಟು ಪ್ರಿಯ. ಚೆಂದಕೆ ಕವನಗಳನ್ನು ಅನುವಾದಿಸುವ ಕುಮಾರ್ ಇದೀಗ ’ಚಳಿಗಾಲದ ಎಲೆ ಸಾಲು’ ಎಂಬ ಸ್ವರಚಿತ ಕವನ ಸಂಕಲವನ್ನೂ ಹೊರ ತಂದಿದ್ದಾರೆ. ಮಂಜುನಾಥ್ ಲತಾ ಹೊದಿಸಿದ ಸುಂದರ ಹೊದಿಕೆಯೊಳಗೆ ಕೆಲವು ಬೆಚ್ಚನೆಯ ಭಾವದ ಕವಿತೆಗಳಿವೆ. ಪ್ರೀತಿಯ ವಿಷಯದಲ್ಲಿ ಕವನಿಸುವಾಗ ಕುಮಾರ್‌ರ ಕಾವ್ಯಶಕ್ತಿಗೆ ವಿಶೇಷ ಸೊಗಸು:
ಈ ರಾತ್ರಿ ಬರೆವೆ
ನಿನಗಾಗಿ ಕವಿತೆ

ನೆನಪುಗಳು ಅಮರ
ವೆಂದು
ಸಾರುವುದಕ್ಕೆ.

ಬರೆದ ಪದಗಳೇ
ನಾಳೆ ನನ್ನ ಕೈ ಹಿಡಿಯುವುದೆಂಬ
ಭರವಸೆಗೆ  (ನಿನ್ನ ಹೆಸರಿನ ರಾತ್ರಿ)
-ಬರಿಯ ಪ್ರೀತಿಯ ಬಗೆಗಷ್ಟೇ ಅವರಿಗೆ ಈ ಭರವಸೆಯಲ್ಲ, ಕವಿತೆಯ ಬಗೆಗೂ. ಅವರಿಗೆ ಗೊತ್ತು ಒತ್ತಾಯಕ್ಕೆ ಕಟ್ಟಿದ್ದು ಕವನವಾಗುವುದಿಲ್ಲವೆಂದು:
ಚೆಲ್ಲಿ ಹೋಗುತ್ತಿವೆ ಪದಗಳು
ಯಾವ ಭಾವದ ಎಳೆಯಲ್ಲೂ
ಪೋಣಿಸಲಾಗುತ್ತಿಲ್ಲ…

“ಒತ್ತಾಯಕ್ಕೆ ಕಟ್ಟಬೇಡ
ಅದು ಕವಿತೆಯಲ್ಲ
ಮೋಡವನ್ನು ನಿನ್ನ
ಕೈಯಲ್ಲಿ ಮಾಡಲು ಆಗುವುದಿಲ್ಲ
ಮಳೆ ನಿನ್ನ ಕೈಯಲ್ಲಿ ಇಲ್ಲ”  (ಕಟ್ಟು)
ಆದರೂ,
ಸಿಡಿಯುತ್ತಲೇ ಇವೆ
ಅಕ್ಷರಗಳು  (ಕಟ್ಟು)
ಅನ್ನುತ್ತಾರೆ ಅವರು. ಅದಕ್ಕೇ ಗಾಢ ಭಾವಗಳು ಕವನವಾಗುವುದನ್ನು ತಡೆಯುವುದಿಲ್ಲ ಅವರು. ’ಮಳೆ ಹನಿಗಳ’ ಜೊತೆ ಜೊತೆಗೇ ಪ್ರೀತಿಯ ಹನಿಗಳೂ ಸೇರಿಕೊಂಡ ಬಗೆ ಇದು:
ಮಳೆ ನಿಂತ ಮೇಲೆ ಎಲೆ ಅಲುಗಿಸಿದರೆ
ನೀನು ಕೆನ್ನೆ ಮೇಲಿಟ್ಟ ಹನಿಗಳ ಸಾಲು
ಜೋಪಾನ ಎನ್ನುವಷ್ಟು ಹೊತ್ತಿಗೆ ಜಾರಿ ಹೋಗಿವೆ
ಎಲೆಗಳು ಮತ್ತೆ ಹಸಿಯಾಗಲು ಸಿದ್ಧವಾಗಿವೆ
ಗರಿಕೆ ಹುಲ್ಲಿನ ದಳದ ಮೇಲೆ ಅಲ್ಲವೆ
ನಾನು, ನೀನು ಹೆಸರು ಬರೆದಿದ್ದು
ಆ ಹೆಸರುಗಳು ಈಗ ನಮಗೂ ಕಾಣದು
ಆದರೆ ನಮ್ಮಿಬ್ಬರ ಸ್ಪರ್ಶ ಅವಕ್ಕೆ ಗೊತ್ತಿದೆ.  (ಮಳೆ ಹನಿಗಳು)
ಇದರಂತೆಯೇ ಪ್ರೇಮಿಯ ನಿರೀಕ್ಷೆಯಲ್ಲಿರುವ ’ಎಲ್ಲಿ ಹೋದೆ?’ ಕವನದ ಹರಿವು ಸರಾಗವಾಗಿ ಗಮನ ಸೆಳೆಯುತ್ತದೆ. ಇದೇ ಪ್ರೀತಿಯ ಜಾಡಿನಲ್ಲಿ, ’ಕಳೆದ ಸಾರಿ ಅಂಗಿಗೆ ಮೆತ್ತಿದ ನಿನ್ನ ಕೈಯ ಮದರಂಗಿ ಬಣ್ಣ’ ಅನ್ನುತ್ತಿರುವಾಗಲೇ,
ಸಂಕಟದ ಸೆಳಕು
ನಾಭಿಯೊಳು ಮೂಡಿದರೆ
ನಾನು ನಿರ್ಲಿಪ್ತನೂ ಆಗದೆ,
ಆಪ್ತನೂ ಆಗದೆ
ಅನ್ಯನ ಹಾಗೆ
ಗಡ್ಡದ ಕೂದಲನ್ನು ಪ್ರೀತಿಸುತ್ತಿದ್ದೆ (ನೀನು ಮತ್ತೆ ಮತ್ತೆ ಸಿಗುತ್ತಿರುವುದಾದರೂ ಹೇಗ?)
-ಎಂಬ ಆತ್ಮನಿವೇದನೆ.
ನಾಳೆ ಎದೆಯಲ್ಲೇ ಬೆಳಗೋ
ಬೆಳಕಲ್ಲಿ ಹೊಳೆಯೋ 
ಕಣ್ಣುಗಳನ್ನು ನೋಡಿಕೊಳ್ಳೋಣ (ಕನಸು) 
ಎಂಬ ಆಶಾವಾದ. ಜೊತೆಗೇ ಇದೆ ಹುಡುಕಾಟ:
ಬಿದ್ದ ಎಲೆಗಳೊಳಗೆ ಯಾರ ಹಾಡು?
ಹಿಂದೆ…
ಒಣಗಿದೆಲೆಗಳ ಮೇಲೆ ಸರಿವ ಹೆಜ್ಜೆ ಯಾರದು? (ಚಳಿಗಾಲದ ಎಲೆಸಾಲು)
ಗಂಭೀರ ವಿಷಯಗಳತ್ತಲೂ ತನ್ನ ಗಮನವಿದೆ ಎಂದು ಕವಿ ತನ್ನ ಕವನಗಳ ಮೂಲಕವೇ ಸಾರುತ್ತಾರೆ. ಮಲ್ಲಿಗೆಯ ಎರಡು ಭಿನ್ನ ವ್ಯಕ್ತಿತ್ವಗಳನ್ನು ಚಿತ್ರಿಸುವ ಶಕ್ತ ಕವಿತೆ ’ಮಲ್ಲಿಗೆ ಮತ್ತು ಅವಳು’. ಒಬ್ಬಾಕೆಯ ಮುಡಿಯೇರಿ ಹಗಲೆಲ್ಲ ಸಾಥ್ ನೀಡುವ ಮಲ್ಲಿಗೆ ಇನ್ನೊಬ್ಬಾಕೆಗೆ ರಾತ್ರಿಯೆಲ್ಲ ಜೊತೆಯಾಗುತ್ತದೆ. ಆಕೆ ಮನೆಗೆ ಬಂದು ಮಲ್ಲೆ ಹೂವನ್ನು ಮುಡಿಯಿಂದ ತೆಗೆದೆಸೆದರೆ ಈಕೆ ಕತ್ತಲಾದ ಮೇಲೆ ರಸ್ತೆಯ ಮೂಲೆಗೆ ಬಂದು ಮಲ್ಲಿಗೆ ಕೊಂಡು ಮುಡಿಯುತ್ತಾಳೆ.
’ಎರಡು ಬಾಗಿಲ ಮನೆ’ ಕವನ ಬರೆಬರೆಯುತ್ತ ಬೆಳೆಯುತ್ತ ಹೋಗುವ ರೀತಿಯೇ ಸುಂದರ. ಇದು ಕೊನೆಗೊಳ್ಳುವ ರೀತಿ ನೋಡಿ:
ಬೆಳಕು ಇಲ್ಲಿ..
ಅನಾಥ.. ಜೀರಂಗಿ ಕೂಗು,
ಬೆಕ್ಕಿನ ಹೆಜ್ಜೆಗೆ ರಹದಾರಿ
ಅಣ್ಣನ ಕಳ್ಳಾಟ,
ಅಕ್ಕನ ಸಂಭ್ರಮದ ಮಲ್ಲಿಗೆ

ಇಲ್ಲಿನ ಜಗತ್ತಿನಲ್ಲಿ ಎಲ್ಲರೂ ಸೇರುತ್ತಾರೆ..
ಇದು ಏಕಾಂತ..
ಸದ್ದೇ ಇಲ್ಲದೆ ಲೋಕಾಂತ.

ಅಮ್ಮನ ಮುಸುರೆ ಕೈಯಿಂದ ಜಾರಿದ
ನಿಂಬೆ ಬೀಜ ಮೊಳೆತು ನಿಲ್ಲುವುದು. (ಎರಡು ಬಾಗಿಲ ಮನೆ)
ಸಹಜ ಲೋಕವ್ಯವಹಾರಗಳೂ ಕುಮಾರ್ ಕೈಯಲ್ಲಿ ಕವನವಾಗುತ್ತವೆ:
ಕೊಳದೊಳಗೆ ಬಿದ್ದ
ಕಲ್ಲು ಮಾತಾಡುವುದಿಲ್ಲ
ಸುಖಾ ಸುಮ್ಮನೆ
ಮಾತುಗಳ ವರ್ತುಲ (ಕೊಳಕೆ ಬಿದ್ದ ಕಲ್ಲು)
-ಯಾರೋ ಬದುಕಿಗೆಸೆದ ಕಲ್ಲೂ ತಲ್ಲಣಗಳನ್ನೆಬ್ಬಿಸುವುದೂ ಹೀಗೆಯೇ ಅಲ್ಲವೇ?
ಇಂಥದೇ ನೋವಿನಲ್ಲಿ ಸಿಲುಕಿದವರ ಮುಂದೆ ನಿಂತು ಸಂವೇದನಾ ರಹಿತರಾಗಿ ’ಏನನಿಸುತ್ತದೆ ನಿಮಗೆ?’ ಅಂದರೆ ಹೇಗೆ? ಕವಿಮನಸ್ಸು ಟಿವಿ ಮಾಧ್ಯಮಗಳ ಈ ಸುದ್ದಿಗಾರಿಕೆಯ ಬಗೆಗೆ ವ್ಯಂಗ್ಯವಾಡಿರುವುದು “ಏನನಿಸುತ್ತಿದೆ ನಿಮಗೆ?’ ಕವನದಲ್ಲಿ.
ಶವದ ಮುಂದೆ 
ಕಟ್ಟೆಯೊಡೆದ ಕಣ್ಣೀರಿಗೆ
’ಏನನ್ನಿಸುತ್ತಿದೆ ನಿಮಗೆ?’
ಎಂಬ ಪ್ರಶ್ನೆ
ಹೀಗೆ ಪ್ರಶ್ನಿಸುವವರನ್ನೆಲ್ಲ ’ಏನೂ ಅನ್ನಿಸುವುದಿಲ್ಲವೆ ನಿನಗೆ?’ ಎಂದು ಯಾರು ಕೇಳುತ್ತಾರೆ ಎಂಬುದು ಅವರ ಬೇಸರ. ಈ ಎಲ್ಲ ಜಗದ ಜಂಜಾಟಗಳ ನಡುವೆ ’ಮುಕ್ತಿ, ಸಾವಿನ ಬಗೆಗೂ ಕವನಿಸುತ್ತಾರವರು. ನಾವೆಷ್ಟೇ ಹೇಳಿದರೂ ಬದುಕು ’ಇಷ್ಟೇ..’ ಅನಿಸುತ್ತದೆ ಕವಿಗೆ..
ಅಮ್ಮನ ಪಾತ್ರೆಯಲಿ ನೆರಳು
ಅದು ಅಪ್ಪನದಲ್ಲ
ತಂಗಿಯ ಹೆರಳಲ್ಲಿ ಬೆರಳ ಹಾದಿ
ಅಣ್ಣನದಲ್ಲ (ಇಷ್ಟೇ..)
ಮಗ್ಗದಲ್ಲಿ ನೂಲನ್ನು ನೇಯುವ ಪ್ರಕ್ರಿಯೆಯಲ್ಲಿಯೂ ನೋವು ಮಿಳಿತವಾಗಿರುವ ಪ್ರತಿಮೆಯನ್ನು ನೇಯ್ದಿರುವುದು ’ನೋವ ನೂಲು’ ಕವನದಲ್ಲಿ. ಸಂಕಲನದ ಒಳ್ಳೆಯ ಕವನಗಳಲ್ಲಿ ಇದೂ ಒಂದು. ನೋಯುವ ನೂಲು,
ನೂಲುವ ಬೆರಳ
ಕಾವಿಗಾದರೂ
ಸುಟ್ಟು ಹೋಗದೆ..
ಎಂಬ ಆಶಯ ಕವಿಯಲ್ಲಿದೆಯಾದರೂ ಅದು ಸುಟ್ಟು ಹೋಗದೆಂದು ಅವರಿಗೂ ಗೊತ್ತಿದೆ. ಅದಕ್ಕೇ ಅವಳ ಕಣ್ಣ ನೆರಳಿನ ಮಿಂಚಿಗಾಗಿ ಕಾಯುತ್ತಿರುವುದು. ಇವೆಲ್ಲವುಗಳೊಂದಿಗೆ ಚಿತ್ರದಂತಿರುವ ’ಒಂದು ಚೌಕಟ್ಟಿನ ಪದ’ ಕನ್ನಡಕ್ಕೆ ಹೊಸ ಪ್ರಯೋಗ.
ಬಹುಪಾಲು ಪ್ರೇಮಕವನಗಳೇ ಇರುವ ’ಚಳಿಗಾಲದ ಎಲೆ ಸಾಲು’ ತನ್ನ ಸಹಜ ಅಭಿವ್ಯಕ್ತಿಯಿಂದ ಗಮನ ಸೆಳೆಯುತ್ತದೆ. ತಮ್ಮ ಅನುಭವವನ್ನು ಅದು ಇದ್ದಂತೆಯೇ ಕವನದಲ್ಲಿ ಕಟ್ಟಿಕೊಡಲು ಹೊರಟಾಗಲೆಲ್ಲ ಕವಿ ಗೆಲ್ಲುತ್ತಾರೆ. ಅಲ್ಲಲ್ಲಿ ನಿತ್ಯ ಬದುಕಿನ ಕುರಿತ ಅವರ ಸೂಕ್ಷ್ಮ ನಿರೀಕ್ಷಣೆಗಳೂ ಕಾವ್ಯರೂಪದಲ್ಲಿ ಒಡಮೂಡಿ ಸಮರ್ಥವಾಗಿಯೇ ಓದುಗರ ತೆಕ್ಕೆಗೂ ಬರುತ್ತವೆ. ಇಲ್ಲಿನ ಕವನಗಳೆಲ್ಲವೂ ಶಾಶ್ವತವಾಗಿ ನೆನಪಿನಲ್ಲುಳಿಯುವುದಿಲ್ಲವಾದರೂ ಇಷ್ಟವಾಗಿ ಇನ್ನೊಮ್ಮೆ ಓದಿಸುವ ಸಾಲುಗಳು ಅಲ್ಲಲ್ಲಿ ಸಿಗುತ್ತವೆ. ಇಡಿಯಾಗಿ ಗಮನಾರ್ಹವೆನಿಸುವ ಕೆಲವು ಕವನಗಳು ಅವರ ಕವಿತಾ ಸಾಮಥ್ಯಕ್ಕೆ ಸಾಕ್ಷಿಯಾಗುತ್ತವೆ. ಕುಮಾರ್ ಕವಿಯಾಗಿ ಇನ್ನಷ್ಟು ಬೆಳೆಯಬಲ್ಲರು ಎಂಬುದಕ್ಕೆ ಇಷ್ಟು ಸಾಕು.