ಒಬ್ಬ ರೈತನಿದ್ದ. ಅವನು ತನ್ನ ಹೊಲದಲ್ಲಿ ಹೂಗಳ ಕೃಷಿ ಮಾಡುತ್ತಿದ್ದ. ಆ ಬಾರಿ ಅವನು ಮಲ್ಲಿಗೆಯ ಕೃಷಿ ಮಾಡಬೇಕೆಂದು ನಿಶ್ಚಯಿಸಿದ. ಅದರಂತೆ ಮಲ್ಲಿಗೆ ಗಿಡಗಳನ್ನು ನೆಟ್ಟ. ಎಲ್ಲಾ ಗಿಡಗಳೂ ಚೆನ್ನಾಗಿ ಚಿಗುರಿಕೊಂಡು ಬೆಳೆದವು. ಇನ್ನೇನು ಗಿಡಗಳೆಲ್ಲಾ ಹೂ ಬಿಡಲು ಸಿದ್ಧವಾಗಿದ್ದವು. ಇದ್ದಕ್ಕಿದ್ದಂತೆ ಅದೇಕೇ ಏನೋ ಒಂದು ಮಲ್ಲಿಗೆ ಗಿಡಕ್ಕೆ ಅನಿಸಿತು, “ರೈತ ನೀರು ಹಾಕಿದನೆಂದ ಮಾತ್ರಕ್ಕೆ ನಾವೇಕೆ ಅವನಿಗೆ ಹೂ ಕೊಡಬೇಕು? ಅವನು ಹೂಗಳನ್ನು ಮಾರಿ ದುಡ್ಡು ಮಾಡಿಕೊಳ್ಳಬಹುದು ಎಂಬ ಸ್ವಾರ್ಥದಿಂದ ನನಗೆ ನೀರು ಹಾಕಿದ. ನಾನೇಕೆ ಅವನ ಸ್ವಾರ್ಥಕ್ಕೆ ಸಹಕರಿಸಬೇಕು? ಈ ಬಾರಿ ನಾವ್ಯಾರೂ ಹೂ ಬಿಡುವುದೇ ಬೇಡ’ ಹೀಗೆ ಯೋಚಿಸಿದ ಆ ಮಲ್ಲಿಗೆ ಗಿಡ ಉಳಿದೆಲ್ಲ ಗಿಡಗಳಿಗೂ ಇದನ್ನೇ ಹೇಳಿತು. ಹೂತೋಟದ ಅರ್ಧದಷ್ಟು ಗಿಡಗಳು ಆ ಗಿಡದ ಮಾತಿಗೆ ಒಪ್ಪಿಕೊಂಡವು. ಸರಿ, ಅರ್ಧಭಾಗ ತೋಟದಲ್ಲಿ ಹೂ ಅರಳಲೇ ಇಲ್ಲ.
ರೈತನೂ ಪ್ರತಿದಿನ ತೋಟಕ್ಕೆ ಬಂದು ನೋಡಿದರೂ ಹೀಗೆ ಮುಷ್ಕರ ಹೂಡಿ ನಿಂತ ಗಿಡಗಳಲ್ಲಿ ಹೂ ಅರಳಲೇ ಇಲ್ಲ. ಉಳಿದ ಗಿಡಗಳಲ್ಲಿ ಮೊಗ್ಗು ಮೂಡಿ ರೈತ ಕೊಯ್ಲನ್ನೂ ಶುರುಮಾಡಿದ. ಉಳಿದರ್ಧ ತೋಟದಲ್ಲಿ ಹೂವಾಗಬಹುದೆಂದು ರೈತ ಸ್ವಲ್ಪ ದಿನಗಳ ಕಾಲ ಕಾದ. ಊಹೂಂ, ಆ ಗಿಡಗಳಲ್ಲಿ ಹೂಗಳು ಅರಳಲಿಲ್ಲ. ಆ ಗಿಡಗಳಿಗೆ ಪೋಷಕಾಂಶಗಳು ಸಾಕಾಗಲಿಲ್ಲವೇನೋ ಅಂದುಕೊಂಡ ರೈತ ಗೊಬ್ಬರವನ್ನೂ ತಂದು ಹೂತೋಟಕ್ಕೆ ಹಾಕಿದ. ಇದರಿಂದ ಆ ಮಲ್ಲಿಗೆ ಗಿಡಗಳೆಲ್ಲವೂ ಇನ್ನಷ್ಟು ಪುಷ್ಟಿಗೊಂಡವು. ಅವುಗಳಿಗೆ ಹೂ ಬಿಡದಿರಲಾಗಲಿಲ್ಲ. ಸರಿ, ಮುನಿಸಿ ಕುಳಿತಿದ್ದ ಮಲ್ಲಿಗೆ ಗಿಡಗಳಲ್ಲಿ ಮೊಗ್ಗು ಮೂಡಲಾರಂಭಿಸಿದವು. ತನ್ನ ಶ್ರಮ ಸಾರ್ಥಕವಾಯಿತು ಅಂದುಕೊಂಡ ರೈತ ಖುಷಿಗೊಂಡ. ಇನ್ನು ಎರಡು ದಿನಗಳಲ್ಲಿ ಕೊಯ್ಲು ಶುರು ಮಾಡಬಹುದೆಂದುಕೊಂಡು ಮನೆಗೆ ತೆರಳಿದ.
ಅಷ್ಟರಲ್ಲಿ ಒಂದು ಮಲ್ಲಿಗೆ ಗಿಡ ಹೇಳಿತು, “ಪ್ರಕೃತಿಯೇ ನಮಗೆ ಬೇಕಾದ ಪೋಷಕಾಂಶವನ್ನೆಲ್ಲ ಕೊಡುವಾಗ ನಾವೇಕೆ ಈ ರೈತ ಗೊಬ್ಬರ ಕೊಟ್ಟನೆಂದು ಕೃತಜ್ಞನಾಗಿ ಹೂ ಬಿಡಬೇಕು? ನಾವು ಎಲ್ಲೋ ಕಾಡಿನಲ್ಲಿ ಹುಟ್ಟಿದ್ದರೂ ಚೆನ್ನಾಗಿ ಬೆಳೆದು ಹೂ ಬಿಡುತ್ತಿದ್ದೆವಲ್ಲ.. ಅವನಿಂದಾಗಿ ನಾವೇನೂ ಬದುಕಬೇಕಾಗಿಲ್ಲ. ಅವನ ಸ್ವಾರ್ಥಕ್ಕೆ ನನ್ನ ಧಿಕ್ಕಾರ’ ಹಾಗಾದರೆ ನಮ್ಮ ಹೂವಿನಲ್ಲಿ ಪರಿಮಳವೇ ಇಲ್ಲದಂತೆ ಮಾಡೋಣ ಎಂದು ಆ ಎಲ್ಲ ಗಿಡಗಳೂ ತಾವು ಬಿಟ್ಟ ಹೂಗಳಿಗೆ ಪರಿಮಳವೇ ಇಲ್ಲದಂತೆ ನೋಡಿಕೊಂಡವು. ಮರುದಿನ ಹೂ ಕೊಯ್ಯಲೆಂದು ರೈತ ಬಂದ. ತನ್ನ ತೋಟದಲ್ಲಿ ಸದಾ ಬರುತ್ತಿದ್ದ ಮಲ್ಲಿಗೆಯ ಘಮ ಆ ದಿನ ಅವನ ಮೂಗಿಗೆ ಬಡಿಯಲಿಲ್ಲ! ಮಲ್ಲಿಗೆ ಮೊಗ್ಗುಗಳೇನೋ ಅರಳುವುದಕ್ಕೆ ಸಿದ್ಧವಾಗಿ ನಿಂತಿವೆ, ಆದರೆ ಪರಿಮಳವೇಕೆ ಇಲ್ಲ? ರೈತ ಒಂದೆರಡು ಮೊಗ್ಗುಗಳನ್ನು ಕೊಯ್ದು ಆಘ್ರಾಣಿಸಿದ. ಯಾವುದಕ್ಕೂ ಪರಿಮಳವಿಲ್ಲ. ಇದೇಕೆ ಹೀಗೆ ಎಂದು ರೈತನಿಗೆ ಆಶ್ಚರ್‍ಯವಾಯಿತು. ರೈತ ಹೂಗಳನ್ನು ಕೊಯ್ಯದೆ ಇನ್ನೂ ಒಂದು ದಿನ ಹೂಗಳನ್ನೇ ಗಮನಿಸಿದ. ಆ ಗಿಡಗಳ ಬಳಿ ಚಿಟ್ಟೆಗಳೂ ಸುಳಿಯುತ್ತಿರಲಿಲ್ಲ!
ಇದೆಲ್ಲವನ್ನೂ ಗಮನಿಸಿದ ರೈತ ತನ್ನ ಮಲ್ಲಿಗೆ ತೋಟಕ್ಕೇನೋ ರೋಗ ಬಡಿದಿದೆ, ಈಗಾಗಲೇ ಅರ್ಧದಷ್ಟು ಗಿಡಗಳು ಇದರಿಂದಲೇ ಘಮವಿಲ್ಲದ ಮಲ್ಲಿಗೆ ಬಿಟ್ಟಿವೆ ಎಂದು ಚಿಂತೆಗೊಳಗಾದ. ಈ ರೋಗಿಷ್ಟ ಗಿಡಗಳನ್ನು ಹಾಗೆಯೇ ಬಿಟ್ಟರೆ ಉಳಿದರ್ಧ ತೋಟಕ್ಕೂ ರೋಗ ತಗುಲಿ ತನ್ನ ಮಲ್ಲಿಗೆ ಕೃಷಿ ನಾಶವಾಗಬಹುದು ಎಂದುಕೊಂಡ ರೈತ ಕೂಡಲೇ ಪರಿಮಳರಹಿತ ಮಲ್ಲಿಗೆ ಬಿಟ್ಟ ಗಿಡಗಳನ್ನೆಲ್ಲಾ ಕಿತ್ತೆಸೆದ. ಅನವಶ್ಯಕವಾಗಿ ರೈತನಿಗೆ ಕೆಡುಕನ್ನು ಬಯಸಿದ ಮಲ್ಲಿಗೆ ಗಿಡಗಳೆಲ್ಲ ತಮ್ಮ ಪರಿಸ್ಥಿತಿಗೆ ಮರುಗಿ ಸತ್ತು ಹೋದವು. ಮೊದಲೇ ಪರಿಮಳಭರಿತ ಹೂ ಬಿಟ್ಟಿದ್ದ ಗಿಡಗಳೆಲ್ಲ ನಳನಳಿಸುತ್ತಿದ್ದವು.
ನೀತಿ: ತನ್ನ ಕೇಡು ತನಗೇ ದೋಷ ಉಂಟುಮಾಡುತ್ತದೆ.