Archive for the ‘ವಿಷಯ ವಿಶೇಷ’ Category

ಬೋರೋ ಬೋರು!

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಅದೇ ಕ್ಲಾಸು, ಅದೇ ಪಾಠ. ಎಷ್ಟೊಂದು ಕೇಳೋದಪ್ಪಾ, ಎಲ್ಲಾ ಸಿಕ್ಕಾಪಟ್ಟೆ ಬೋರ್.. ಹೀಗನ್ನಿಸ್ತಾ ಇದ್ಯಾ ನಿಮ್ಗೆ? ನಿಜ, ಬೋರ್‌ಡಮ್ ಎಲ್ಲರನ್ನೂ ಕಾಡುತ್ತೆ. ಆದರೆ ಇದರಿಂದ ಹೊರಬರೋಕೂ ಅವರವರಲ್ಲೇ ದಾರಿಯೂ ಇರುತ್ತೆ. ಆದರೆ ಈ ಸುಮ್ಮನೇ ಕಾಡುವ ಬೇಸರದಲ್ಲೇ ಮುಳುಗಿ ಹೋದರೆ ಮಾತ್ರ ಬದುಕೂ ಮುಳುಗಬಹುದು.
———
ಈಗ ಕೆಮಿಸ್ಟ್ರಿ ಕ್ಲಾಸು. ಕ್ಲಾಸಿನಲ್ಲಿ ಅರ್ಧದಷ್ಟು ಜನರ ಮುಖ ಡಲ್ ಹೊಡೀತಿದೆ. ಕಾರಣ ಇಷ್ಟೇ, ಅವರಿಗೆಲ್ಲ ಕೆಮಿಸ್ಟ್ರಿ ಅಂದ್ರೆ ಬೋರು. ಇವರ ಮಧ್ಯೆ ಕೂತಿರೋ ಚಂಚಲಾಗೂ ಬೇಸರವಾಗಿದೆ. ಆದ್ರೆ, ಅವಳ ಸಮಸ್ಯೆ ಬೇರೆಯೇ. ಅವಳ ಪಕ್ಕದ ಗೆಳತಿ ಪ್ರಜ್ಞಾ ಇವತ್ತು ಕಾಲೇಜಿಗೆ ಬಂದಿಲ್ಲ. ಅದಕ್ಕೇ ಅವಳಿಗೆ ಕಂಪೆನಿ ಇಲ್ದೆ ಸಖತ್ ಬೋರು. ಮುಂದಿನ ಬೆಂಚ್‌ನ ಸ್ನೇಹಾಗೆ ಕ್ಲಾಸ್ ಮುಗಿಸಿ ಪ್ರಾಕ್ಟಿಕಲ್ಸ್‌ಗೆ ಹೋಗ್ಬೇಕಲ್ಲಾ ಅನ್ನೋದೇ ಬೋರ್ ಅನಿಸಿದೆ. ಯಾರಿಗೆ ಗೊತ್ತು, ಇದೀಗ ಕ್ಲಾಸಿಗೆ ಬರಲಿಕ್ಕಿರುವ ಕೆಮಿಸ್ಟ್ರಿ ಲೆಕ್ಚರರ್‌ಗೂ ಪಾಠ ಮಾಡೋದಕ್ಕೆ ಬೋರ್ ಅನಿಸ್ತಿರಬಹುದಾ ಒಳಗೊಳಗೆ?!
ಹೌದು, ‘ಬೋರ್‌ಡಮ್’ ಕಾಡದಿರುವ ವ್ಯಕ್ತಿಗಳೇ ಇಲ್ಲವೇನೋ… ಬೋರಾಗೋದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಕಾರಣ. ಎಳೆಯ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಈ ‘ಬೋರ್’ ಕಾಡುತ್ತದೆ. ಮೇಲ್ನೋಟಕ್ಕೆ ಬೋರ್‌ಡಮ್ ಅಂದರೆ ಏಕತಾನತೆಯಿಂದ ಉಂಟಾಗುವ ಬೇಜಾರು. ತನಗೆ ಏನೂ ಕೆಲಸ ಇಲ್ಲದಿದ್ದಾಗ ಅಥವಾ ಸುತ್ತಲಿನ ಪರಿಸರದ ಬಗೆಗೆ ಆಸಕ್ತಿ ಸತ್ತಾಗ ಉಂಟಾಗುವ ಬೇಸರ. ಆದರೆ, ಇದನ್ನು ಬಗೆಯುತ್ತ ಹೊರಟರೆ ಇದು ಒಬ್ಬೊಬ್ಬರಲ್ಲಿ ಒಂದೊಂದು ಅರ್ಥವನ್ನು ಬಿಂಬಿಸಬಹುದು.
ಅಯ್ಯೋ ಬೇಜಾರು!
ಹಾಸ್ಟೆಲ್‌ನಲ್ಲಿ ದಿನವೂ ಅದೇ ಉಪ್ಪಿಟ್ಟು ಮಾಡ್ತಾರೆ, ತಿನ್ನೋಕೆ ಬೇಜಾರು… ಕಾಲೇಜ್‌ಗೆ ಹೋಗೋಕೆ ಆಟೋ ಸಿಕ್ಕಿಲ್ಲ, ನಡ್ಕೊಂಡು ಹೋಗೋದಕ್ಕೆ ಬೋರು. ಎಕ್ಸಾಮ್‌ಗೆ ಇನ್ನು ನಾಲ್ಕೇ ದಿನ, ಓದೋಕೆ ಬೇಸರ… ಹೀಗೇ ಲೆಕ್ಕ ಹಾಕುತ್ತ ಹೋದರೆ ಒಬ್ಬರನ್ನೇ ದಿನವೊಂದಕ್ಕೆ ಹಲವು ಬೇಸರಗಳು ಕಾಡುತ್ತವೆ. ಸ್ನಾನ ಮಾಡುವುದಕ್ಕೆ, ಬಟ್ಟೆ ಒಗೆಯುವುದಕ್ಕೆ, ತಿನ್ನುವುದಕ್ಕೆ, ಕುಡಿಯುವುದಕ್ಕೆ… ಹೀಗೆ ಎಲ್ಲಕ್ಕೂ ಬೋರ್ ಅನ್ನುತ್ತಾ ಓಡಾಡುವವರು ಅದೆಷ್ಟೋ.
ಕೆಲವರಿಗೆ ಮಾಡಿದ ಕೆಲಸವನ್ನೇ ಮಾಡಿದ, ಕೇಳಿದ ವಿಚಾರವನ್ನೇ ಕೇಳುವ ನೀರಸ ಅನುಭವದಿಂದ ಈ ಬೇಸರ ಬರಬಹುದು. ಇನ್ನು ಅನೇಕರಿಗೆ ಇದು ಅವರಲ್ಲಡಗಿರುವ ಸೋಮಾರಿತನ ಕೆಲಸವೊಂದನ್ನು ಮಾಡುವುದಕ್ಕೆ ಒಡ್ಡುವ ನೆಪವೂ ಆಗಬಹುದು. ಕೈಗೆ ಸಿಕ್ಕ ಫ್ರೀ ಸಮಯವನ್ನು ಸದುಪಯೋಗಪಡಿಸುವುದನ್ನು ತಿಳಿಯದೆ ಒದ್ದಾಡುವವರೂ ಇವರು ಇರಬಹುದು. ಕೆಲವರು ಬರೀ ಮಾತಿನಲ್ಲಿ  ‘ಬೋರ್’ ಅನ್ನುತ್ತಾ ಇರುವುದೂ ಉಂಟು. ಹೀಗೆ ಹೇಳುತ್ತಲೇ ತಮ್ಮಲ್ಲಿ, ಸುತ್ತಲಲ್ಲಿ ಒಂದು ಬೇಸರದ ವಾತಾವರಣವನ್ನೂ ಇವರು ಹುಟ್ಟುಹಾಕಬಹುದು. ಆದರೆ, ‘ಬೋರ್’ ಅಂದರೆ ಇಷ್ಟೇ ಅಲ್ಲ. ಮನಃಶಾಸ್ತ್ರದ ಪ್ರಕಾರ ಇದರೊಳಗೆ ಇನ್ನೂ ಇದೆ.
ಮಾನಸಿಕ ಸಮಸ್ಯೆಯಾ?
‘ಯುವಕರಲ್ಲಿ  ಈ ‘ಬೋರ್‌ಡಮ್’ ಪದದ ಬಳಕೆ ಹೆಚ್ಚು. ತಮಗೆ ಇಷ್ಟವಿಲ್ಲದ ಕೆಲಸವನ್ನು ಮುಂದೂಡಲು ಕೆಲವರು ಇದನ್ನು ಒಂದು ನೆಪವಾಗಿ ಬಳಸುವುದುಂಟು. ಇದು ವ್ಯಕ್ತಿತ್ವ ದೋಷವಾಗಿಯೂ, ಖಿನ್ನತೆಯ ಲಕ್ಷಣವಾಗಿಯೂ ಕಾಣಿಸುತ್ತದೆ. ಈ ಬಗ್ಗೆ ಎಚ್ಚರವಹಿಸಬೇಕು’ ಎನ್ನುತ್ತಾರೆ ಮನೋವೈದ್ಯ ಡಾ| ಪಿ.ವಿ.ಭಂಡಾರಿ.
ಮಾನಸಿಕ ವೈದ್ಯರು ಹೇಳುವ ಪ್ರಕಾರ ‘ಕೆಲವರು ಬಾರ್ಡರ್‌ಲೈನ್ ಪರ್ಸನಾಲಿಟಿ’ ಅಂತಿರುತ್ತಾರೆ. ಅವರಿಗೆ ಎಲ್ಲಾ ವಿಷಯಗಳೂ ಬೋರ್ ಅನ್ನಿಸುತ್ತದೆ. ಇಂಥವರು ಬಹಳ ಸೂಕ್ಷ್ಮ ಸ್ವಭಾವದವರು. ಯಾವುದೋ ವಿಷಯವನ್ನು ‘ಬೋರ್’ ಅನ್ನುತ್ತಲೇ ಇತರರ ಗಮನ ಸೆಳೆಯುವಂತೆ ಇನ್ನಾವುದೋ ಕೆಲಸವನ್ನು ವಿಶೇಷವಾಗಿ ಮಾಡಲು ಹೊರಡುವವರು ಇವರು. ಸದ್ದಿಲ್ಲದ ವಾತಾವರಣದಲ್ಲಿ ಭರ್ರನೆ ಬೈಕ್ ಓಡಿಸುವುದು, ಎಲ್ಲರೂ ಸುಮ್ಮನಿರುವಾಗ ಇದ್ದಕ್ಕಿದ್ದಂತೆ ಮಾತಾಡುವುದು ಹೀಗೆ ಇವರ ಚಟುವಟಿಕೆಗಳೇ ವಿಭಿನ್ನ. ಸಣ್ಣಪುಟ್ಟ ವಿಷಯಕ್ಕೆಲ್ಲ ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ಎನ್ನುವ  ಇಂಥವರು ಆಕಸ್ಮಿಕವಾಗಿ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡುಬಿಡಬಹುದು. ಈ ಬಗೆಯವರಿಗೆ ಸದಾ ಏನಾದರೊಂದು ಹೊಸ ಚಟುವಟಿಕೆ ಬೇಕು.
ಇವರದು ಒಂದು ಬಗೆಯಾದರೆ ಖಿನ್ನತೆಯ ಅಂಚಿಗೆ ಸಿಲುಕಿರುವವರದು ಇನ್ನೊಂದು ಬಗೆ. ಇವರಿಗೆ ‘ಬೋರ್’ ಅನ್ನಲು ಕಾರಣವೇ ಬೇಡ. ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವುದೇ ಇವರ ಸ್ವಭಾವ. ಅವರು ತಮ್ಮ ಬಗ್ಗೆ, ಬದುಕಿನ ಭೂತ, ಭವಿಷ್ಯಗಳ ಬಗೆಗೆಲ್ಲ ನಕಾರಾತ್ಮಕ ಧೋರಣೆಯನ್ನೇ ಹೊಂದಿರುತ್ತಾರೆ. ವ್ಯಕ್ತಿ ಯಾವುದೋ ಕೆಲಸದಲ್ಲಿದ್ದರೆ, ‘ಬಾಸ್‌ಗೆ ನಾನು ಏನು ಮಾಡಿದ್ರೂ ಸರಿ ಹೋಗೋಲ್ಲ’ ಎಂಬ ಪಲ್ಲವಿ ಅವರ ಬಾಯಿಂದ ಕೇಳಿಬರುತ್ತಲೇ ಇರುತ್ತದೆ. ಈ ವ್ಯಕ್ತಿತ್ವ ದೋಷ ಕಾಡುತ್ತಿರುವ ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿಯಲ್ಲಿ ಶೇ.೮೦ರಷ್ಟು ಅಂಕ ಪಡೆದಿದ್ದರೂ ಪಿಯುಸಿಗೆ ಬಂದಾಗ ಶೇ.೬೦ರಷ್ಟು ಅಂಕಕ್ಕಿಳಿದು ಹಿಂದೆ ಹೆಚ್ಚು ಅಂಕ ಪಡೆದದ್ದಕ್ಕೆ ‘ಆಗ ಬರೇ ಟಿಕ್ ಮಾಡಿದ್ರೆ ಸಾಕಿತ್ತು, ಈಗ ಹಾಗಲ್ಲ’ ಅಂತ ನೆಪ ಹೇಳಬಲ್ಲ. ಇಂಥವರಿಗೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ. ಆದ್ದರಿಂದಲೇ ಪದೇ ಪದೇ ‘ಬೋರ್’ ಅನ್ನುವವರ ಬಗೆಗೆ ಎಚ್ಚರವಹಿಸಬೇಕು ಎನ್ನುತ್ತಾರೆ ಮನೋವೈದ್ಯರು.
ಬೋರ್‌ಡಮ್ ಬೇಡಮ್ಮಾ…
ಬೇಸರ ಸಹಜವಾಗಿಯೇ ಕಾಡಬಹುದು. ಆದರೆ ಇದನ್ನು ಬೆಳೆಯುವುದಕ್ಕೆ ಬಿಟ್ಟರೆ ಮರದೊಳಕ್ಕೆ ಗೆದ್ದಲು ಪ್ರವೇಶಿಸಿದಂತೆ ನಮ್ಮನ್ನೇ ನಾಶಮಾಡುವಷ್ಟು ಶಕ್ತಿ ಅದಕ್ಕಿದೆ. ಸುಮ್ಮನೇ ಕಾಡುವ ಬೇಸರಕ್ಕೆ ತಲೆಬಾಗಿದರೆ ದಿನೇ ದಿನೇ ನಮ್ಮ ಕಾರ್ಯಕ್ಷಮತೆ, ಜೀವನಾಸಕ್ತಿ ಕುಗ್ಗುವುದರ ಹೊರತಾಗಿ ಬೇರೆ ಪ್ರಯೋಜನವೇನೂ ಇಲ್ಲ. ಖಿನ್ನತೆಯ ಪರಿಣಾಮವಾಗಿ ಬೇಜಾರು ಕಾಡುತ್ತಿದ್ದರಂತೂ ಇದನ್ನು ಬೆಳೆಯುವುದಕ್ಕೆ ಬಿಡಲೇಬಾರದು. ಇನ್ನಷ್ಟು ಆಳವಾದ ಖಿನ್ನತೆಯ ಮಡುವಿಗೆ ವ್ಯಕ್ತಿಯನ್ನು ನೂಕಬಹುದು. ಅದೆಷ್ಟೋ ಯುವಕರು ಕುಡಿತ, ಡ್ರಗ್ಸ್‌ಗಳ ಚಟಕ್ಕೆ ಬೀಳುವುದೂ ಹೀಗೆ ಸಮಯ ಕೊಲ್ಲುವುದಕ್ಕಾಗಿಯೇ. ಇದನ್ನು ನಿವಾರಿಸಬೇಕಾದರೆ ನಾವೇ ಮನಸ್ಸಿಗೆ ಖುಷಿ ತಂದುಕೊಳ್ಳಬೇಕು, ಹೊಸ ಚಟುವಟಿಕೆಗಳಲ್ಲಿ ನಿರತರಾಗಿ ಫ್ರೆಶ್ ಆಗಬೇಕು.
ಪ್ರತಿಯೊಬ್ಬ ವ್ಯಕ್ತಿಗೂ ಮನಸ್ಸು ಮಾಡಿದರೆ ‘ಬೋರ್’ ಅನ್ನುವ ಪದವನ್ನು ತಂತಮ್ಮ ಪದಕೋಶದಿಂದ ಕಿತ್ತುಹಾಕುವ ಶಕ್ತಿ ಇದ್ದೇ ಇದೆ. ಸದಾ ಹೊಸ ಕೆಲಸ, ವಿಚಾರಗಳನ್ನು ಹಚ್ಚಿಕೊಳ್ಳುವುದು, ಇಷ್ಟವಾಗದ ಕೆಲಸಗಳನ್ನೂ ಹೊಸ ರೀತಿಯಲ್ಲಿ ಮಾಡುವ ಮೂಲಕ ಇಷ್ಟವಾಗಿಸಿಕೊಳ್ಳುವುದು, ತನ್ನಲ್ಲಿ, ತನ್ನ ಸುತ್ತಮುತ್ತ ಆಸಕ್ತಿ ತಂದುಕೊಳ್ಳುವುದೇ ಇದಕ್ಕೆ ದಾರಿ.
ನಮಗೆ ನಾವೇ ನಿತ್ಯನೂತನರಾಗಿದ್ದರೆ ಬೋರ್‌ಡಮ್ ಕಾಡೀತಾದರೂ ಹೇಗೆ? ನಮ್ಮನ್ನು ನಾವು ಹೊಸಬರಾಗಿಸಿಕೊಳ್ಳುವುದೂ ನಮ್ಮ ಕೈಯಲ್ಲೇ ಇದೆ.
—-

ನಂಗೆ ‘ಬೋರ್’ ಅಂತ ತುಂಬಾ ಸಲ ಅನ್ಸುತ್ತೆ. ಫ್ರೆಂಡ್ಸ್ ಇಲ್ದೆ ಇದ್ದಾಗ, ಹಾಸ್ಟೆಲ್‌ನಿಂದ ಮನೆಗೆ ಹೋದಾಗ ಬೇಸರವಾಗೋದಿದೆ. ಹಾಗೆ ಅನಿಸಿದಾಗೆಲ್ಲ ಬುಕ್ಸ್ ಓದ್ತೇನೆ ಅಥವಾ ಸಾಂಗ್ಸ್ ಕೇಳ್ತೇನೆ, ಹಳೇ ಮ್ಯಾಗಝಿನ್ಸ್ ಓದ್ತೇನೆ.
ಸುಷ್ಮಾ ಎನ್.ಚಕ್ರೆ, ಪ್ರಥಮ ಎಂಸಿಜೆ, ಕುವೆಂಪು ವಿವಿ, ಶಿವಮೊಗ್ಗ
‘ಬೋರ್‌ಡಮ್’ ಅನ್ನುವುದು ಏಕತಾನತೆಯಿಂದ ಕೆಲಸವನ್ನು ಮುಂದೂಡುವ ಬಗೆ ಇರಬಹುದು. ಅದೊಂದು ವ್ಯಕ್ತಿತ್ವದ ದೋಷವೂ ಇರಬಹುದು, ಖಿನ್ನತೆಯನ್ನು ವ್ಯಕ್ತಪಡಿಸುವ ರೀತಿಯೂ ಇರಬಹುದು. ಅತಿಯಾಗಿ ಬೋರ್‌ಡಮ್ ಕಾಡುವವರು ಮೊದಲು ತಮ್ಮ ಭಾವನೆಗಳನ್ನು ಹತ್ತಿರದವರೊಂದಿಗೆ ಹಂಚಿಕೊಳ್ಳಬೇಕು. ಇದರಿಂದಲೂ ಮನಸ್ಸು ಹಗುರವಾಗದಿದ್ದರೆ ಆಪ್ತಸಲಹೆಯ ಮೊರೆ ಹೋಗಬಹುದು.
ಡಾ.ಪಿ.ವಿ.ಭಂಡಾರಿ, ಮನೋವೈದ್ಯರು
—–

‘ಬೋರ್‌ಡಮ್’ ಅನ್ನುವ ಶಬ್ದವನ್ನು ಮೊದಲಬಾರಿ ಬಳಸಿದವನು ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ತನ್ನ ‘ಬ್ಲೀಕ್ ಹೌಸ್’ ಕಾದಂಬರಿಯಲ್ಲಿ(೧೮೫೨). ಸಿ.ಡಿ.ಫಿಷರ್ ಎಂಬ ಮನೋವೈದ್ಯ ಇದನ್ನು ‘ತನ್ನ ಸದ್ಯದ ಚಟುವಟಿಕೆಯಲ್ಲಿ ಗಮನ ಕೇಂದ್ರೀಕರಿಸಲಾಗದ, ಆಸಕ್ತಿ ಇರದ ಅಹಿತಕರ, ಕ್ಷಣಿಕ ಅನುಭವ ಇದು’ ಎಂದು ವ್ಯಾಖ್ಯಾನಿಸಿದ್ದ. ವ್ಯಕ್ತಿಯೊಬ್ಬ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದ ಸವಾಲನ್ನು ಎದುರಿಸಿದಾಗ ಅದಕ್ಕೆ ತೋರುವ ಪ್ರತಿಕ್ರಿಯೆ ಇದು ಎನ್ನುತ್ತದೆ ಪಾಸಿಟಿವ್ ಸೈಕಾಲಜಿ. ವಿಲಿಯಮ್ ನಾಸ್ ಎಂಬ ಮನಃಶಾಸ್ತ್ರಜ್ಞ  ಇದನ್ನು, ‘ಮಾಡಬೇಕಾದ ಪ್ರಮುಖ ಕೆಲಸವನ್ನು ಮುಂದೂಡುವ ಪ್ರೊಕ್ರಾಸ್ಟಿನೇಶನ್ ಪ್ರವೃತ್ತಿ’ ಎಂದು ವಿವರಿಸಿದ. ತತ್ವಶಾಸ್ತ್ರದಲ್ಲೂ  ‘ಮನಸ್ಸು ತನ್ನ ಪರಿಸರವನ್ನು ಮಂಕಾಗಿ, ಪ್ರೇರಣೆರಹಿತವಾಗಿ ಪರಿಭಾವಿಸುವುದಕ್ಕೆ’ ಬೋರ್‌ಡಮ್ ಎಂಬ ವ್ಯಾಖ್ಯಾನ ನೀಡಲಾಗಿದೆ.

ಬಸುರಿಗೂ ಡಯಾಬಿಟಿಸ್!

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ನಿಶಾಗೆ ವಯಸ್ಸು  ಇನ್ನೂ ೩೦. ನಾಲ್ಕು ತಿಂಗಳ ಗರ್ಭಿಣಿ. ಊಟ ತಿಂಡಿಯಲ್ಲೆಲ್ಲ ನಿತ್ಯವೂ ಪಥ್ಯ ಪಾಲನೆ. ಯಾಕಪ್ಪಾ, ಈಗೇನಾಯ್ತು ಅಂತೀರಾ? ಆಕೆಗೆ ಡಯಾಬಿಟಿಸ್! ಈ ವಯಸ್ಸಿನಲ್ಲೂ ಶುಗರ್ರಾ ಅಂತ ಅಚ್ಚರಿಯಾಗಬಹುದು. ಹೌದು, ಹೆಣ್ಣುಮಕ್ಕಳಿಗೆ ಗರ್ಭಿಣಿಯಾಗಿರುವ ಹಂತದಲ್ಲಿ ಡಯಾಬಿಟಿಸ್ ಮೆಲಿಟಸ್ ಬರುವ ಸಾಧ್ಯತೆ ಇದೆ. ಇದಕ್ಕೆ ಗೆಸ್ಟೇಷನಲ್ ಡಯಾಬಿಟಿಸ್ ಮೆಲಿಟಸ್ (ಜಿಡಿಎಂ) ಎನ್ನುತ್ತಾರೆ. ಹತ್ತರಲ್ಲಿ ಮೂರು ಮಂದಿ ಗರ್ಭಿಣಿ ಮಹಿಳೆಯರಿಗೆ ಈ ರೀತಿ ಡಯಾಬಿಟಿಸ್ ಬರುವ ಸಾಧ್ಯತೆ ಇದೆ ಅನ್ನುತ್ತದೆ ವೈದ್ಯಕೀಯ ವಿಜ್ಞಾನ.
ಸಾಮಾನ್ಯವಾಗಿ ಗರ್ಭಾವಯ ೨೪ನೇ ಅಥವಾ ೨೮ನೇ ವಾರದಲ್ಲಿ  ಪತ್ತೆಯಾಗುವ ಈ ಡಯಾಬಿಟಿಸ್ ಕೆಲವರಲ್ಲಿ ಮೂರನೇ ತಿಂಗಳಿಗೇ ಪತ್ತೆಯಾಗುವುದುಂಟು. ಸಾಮಾನ್ಯವಾಗಿ ರಕ್ತ ಪರೀಕ್ಷೆಗೆ ಕೊಟ್ಟಾಗ ರಕ್ತದಲ್ಲಿ ಗ್ಲುಕೋಸ್‌ನ ಅಂಶ ಇರುವುದು ಗೊತ್ತಾಗುತ್ತದೆ. ಇದನ್ನು ನಿಯಂತ್ರಿಸದಿದ್ದಲ್ಲಿ ಅದು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಅನ್ನುವ ಕಾರಣಕ್ಕೆ ಗರ್ಭಾವಸ್ಥೆಯ ಡಯಾಬಿಟಿಸ್ ಬಂದಾಕ್ಷಣ ವೈದ್ಯರೂ ಎಚ್ಚರವಹಿಸಲು ಸೂಚಿಸುತ್ತಾರೆ. ಭಾರತ, ಚೀನಾಗಳಲ್ಲಿ ಈ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗರ್ಭಾವಯಲ್ಲಿಯೇ ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.
ಯಾಕೆ ಬರುತ್ತೆ?
ಆಹಾರವು ಗ್ಲುಕೋಸ್ ರೂಪದಲ್ಲಿ ಎಲ್ಲಾ ಜೀವಕೋಶಗಳನ್ನೂ ಪ್ರವೇಶಿಸಲು ಇನ್ಸುಲಿನ್‌ನ ಸಹಕಾರ ಬೇಕೇ ಬೇಕು. ಆದರೆ ಗರ್ಭಿಣಿಯರ ದೇಹವು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ ಗ್ಲುಕೋಸ್ ರಕ್ತದಲ್ಲೇ ಅಕ ಪ್ರಮಾಣದಲ್ಲಿ ಕಂಡುಬರುತ್ತದೆ. ಇದೇ ಡಯಾಬಿಟಿಸ್.
ಕುಟುಂಬದಲ್ಲಿ  ಸಮೀಪದ ಸಂಬಂಗಳಿಗೆ ಡಯಾಬಿಟಿಸ್ ಬಂದ ಹಿನ್ನೆಲೆಯಿದ್ದರೆ, ಗರ್ಭಿಣಿಯ ದೇಹ ಅಕ ತೂಕ ಹೊಂದಿದ್ದರೆ, ಅವಳಿ ಮಕ್ಕಳು ಗರ್ಭದಲ್ಲಿದ್ದರೆ, ಗರ್ಭಿಣಿಯ ವಯಸ್ಸು ೩೫ಕ್ಕಿಂತ ಹೆಚ್ಚಿದ್ದರೆ  ಡಯಾಬಿಟಿಸ್ ಬರುವ ಅಪಾಯ ಹೆಚ್ಚು. ೩೫ಕ್ಕಿಂತ ಕಡಿಮೆ ವಯಸ್ಸಿನವರಲ್ಲೂ ಇದು ಕಾಣಿಸುವುದುಂಟು. ಇಂಥವರಲ್ಲಿ  ಡಯಾಬಿಟಿಸ್ ಕಂಡುಬರುವುದಕ್ಕೆ ಅನಿಯಮಿತ ಜೀವನಶೈಲಿಯೇ ಕಾರಣ ಎನ್ನುತ್ತಾರೆ ವೈದ್ಯರು.
ಎಲ್ಲರಲ್ಲೂ ಡಯಾಬಿಟಿಸ್‌ನ ಲಕ್ಷಣ ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಅಕ ದಾಹ, ಆಗಾಗ ಮೂತ್ರ ಮಾಡಬೇಕೆನ್ನಿಸುವುದು, ಆಯಾಸ, ವಾಕರಿಕೆ, ವಾಂತಿ, ಯೂರಿನರಿ ಬ್ಲಾಡರ್ ಸೋಂಕು, ಕೊಂಚ ಮಂದವಾದ ದೃಷ್ಟಿ  ಇತ್ಯಾದಿ ಲಕ್ಷಣಗಳು ಅಪರೂಪಕ್ಕೆ ಕೆಲವರಲ್ಲಿ ಕಂಡುಬರಬಹುದು. ಗರ್ಭಧರಿಸಿ ೯೦ ಅಥವಾ ೧೨೦ ದಿನಗಳಾದಾಗ ಕೆಂಪು ರಕ್ತಕಣದಲ್ಲಿನ ಗ್ಲುಕೋಸ್ ಮಟ್ಟವನ್ನು ಅಳೆದಾಗ ಅದು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇದ್ದರೆ ಡಯಾಬಿಟಿಸ್ ಇದೆಯೆಂದು ಅರ್ಥ.
ಶುಗರ್ ಲೆವೆಲ್ ಎಷ್ಟಿರಬೇಕು?
ಸಾಮಾನ್ಯರ ದೇಹದಲ್ಲಿ ಆಹಾರ ಸೇವನೆಯ ಬಳಿಕ ರಕ್ತದಲ್ಲಿನ ಗ್ಲುಕೋಸ್‌ನ ಮಟ್ಟ ೧೪೦ ಇರಬೇಕು. ಗರ್ಭಿಣಿಯರಲ್ಲಂತೂ ಆಹಾರ ಸೇವಿಸಿ ೧ ಗಂಟೆಯಾದಾಗ ಈ ಮಟ್ಟ ೧೪೦ ಮೀರಿರಬಾರದು. ೨ ಗಂಟೆಯಾದ ಬಳಿಕ ಇದು ೧೨೦ರ ಒಳಗೆಯೆ ಇರಬೇಕು. ಆಹಾರ ಸೇವನೆಯ ಮೊದಲಾದರೆ ಈ ಮಟ್ಟ ೯೦ಕ್ಕಿಂತ ಕಡಿಮೆ ಇರಬೇಕು.
ಇದರ ಪರೀಕ್ಷೆಗಾಗಿಯೇ ಗ್ಲುಕೋಸ್ ಟಾಲರೆನ್ಸ್ ಟೆಸ್ಟ್ ಎಂಬ ಟೆಸ್ಟ್ ಕೂಡ ಇದೆ. ಇದರಲ್ಲಿ  ಆಹಾರ ತೆಗೆದುಕೊಂಡು ೮ ಗಂಟೆ ಕಾಲ ಖಾಲಿ ಹೊಟ್ಟೆಯಲ್ಲಿದ್ದ ವ್ಯಕ್ತಿಗೆ ೭೫ ಗ್ರಾಂನಷ್ಟು ಗ್ಲುಕೋಸ್ ಕೊಡುತ್ತಾರೆ. ಗ್ಲುಕೋಸ್ ಸೇವಿಸಿ ಒಂದು ಗಂಟೆ ಹಾಗೂ ಎರಡು ಗಂಟೆಯ ಬಳಿಕ ರಕ್ತದ ಗ್ಲುಕೋಸ್ ಮಟ್ಟವನ್ನು ಅಳೆಯುತ್ತಾರೆ. ಇಲ್ಲಿ ಸಿಗುವ ವಾಲ್ಯೂಗಳ ಆಧಾರದಲ್ಲಿ ವ್ಯಕ್ತಿಗೆ ಡಯಾಬಿಟಿಸ್ ಇದೆಯೋ ಇಲ್ಲವೋ ಎಂದು ನಿರ್ಧರಿಸುತ್ತಾರೆ.
ಇದನ್ನು ಪ್ರತಿದಿನವೂ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದು ಕೂಡ. ಡಯಾಬಿಟಿಸ್ ಇರುವ ಗರ್ಭಿಣಿಯರು ಆಹಾರದ ಮೂಲಕವೇ ಇದನ್ನು ನಿಯಂತ್ರಿಸುವಾಗ ದಿನಕ್ಕೆ ಮೂರು ಬಾರಿ, ಕ್ರಮೇಣ ನಿಯಂತ್ರಣಕ್ಕೆ ಬಂದಲ್ಲಿ ದಿನಕ್ಕೆ ಒಂದು ಬಾರಿಯಾದರೂ ಈ ಗ್ಲುಕೋಸ್ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು.
ಏನಾಗುತ್ತೆ?
ಗರ್ಭ ಧರಿಸುವುದಕ್ಕೆ ಮುನ್ನವೇ ತಾಯಿ ಡಯಾಬಿಟಿಸ್ ಹೊಂದಿದ್ದು, ಗರ್ಭ ಧರಿಸಿದ ಸಂದರ್ಭದಲ್ಲಿ ಇದನ್ನು ನಿಯಂತ್ರಿಸದಿದ್ದಲ್ಲಿ ಅದು ಭ್ರೂಣದ ಬೆಳವಣಿಗೆಯ ಮೇಲೆ ಪ್ರಭಾವ ಬೀರಿ ಅಸಹಜ ದೈಹಿಕ ರಚನೆಯ ಮಗುವಿನ ಜನನಕ್ಕೂ ಕಾರಣವಾಗಬಹುದು. ಗರ್ಭ ಧರಿಸಿದ ನಂತರ ಡಯಾಬಿಟಿಸ್ ಬಂದಿದ್ದರೆ ಜನಿಸುವ ಮಗುವಿನ ಗಾತ್ರ ಸಾಮಾನ್ಯಕ್ಕಿಂತ ದೊಡ್ಡದಾಗುವ ಸಂಭವವಿದೆ. ಮಗು ಮುಂದೆ ಬೊಜ್ಜಿನ ದೇಹವನ್ನು ಹೊಂದುವ ಸಾಧ್ಯತೆಯೂ ಇದೆ. ಗರ್ಭದಲ್ಲಿ ಹೆಚ್ಚು ನೀರು ತುಂಬಿ (ಪಾಲಿಹೈಡ್ರಾಮಿನಸ್) ಅವಗೂ ಮುನ್ನ ಹೆರಿಗೆ ಆಗಲೂಬಹುದು. ಹೆರಿಗೆ ಆದ ತಕ್ಷಣ ಮಗುವಿನ ದೇಹದ ಗ್ಲೂಕೋಸ್ ಮಟ್ಟ ತೀರಾ ಕೆಳಮುಖವಾಗಿ ಫಿಟ್ಸ್‌ನಂತಹ ಕಾಯಿಲೆಗಳು ಮಗುವನ್ನು ಕಾಡಬಹುದು.
ಮೊದಲ ಹೆರಿಗೆಯಲ್ಲಿ ತಾಯಿಗೆ ಡಯಾಬಿಟಿಸ್ ಇದ್ದರೆ ಅದು ಎರಡನೇ ತಾಯ್ತನದಲ್ಲೂ ಕಂಡುಬರಬಹುದು. ಗರ್ಭಿಣಿಯಾದ ಸಂದರ್ಭದಲ್ಲಿ  ರಕ್ತದಲ್ಲಿ ಅಕ ಗ್ಲುಕೋಸ್ ಕಂಡುಬಂದ ಮಹಿಳೆ ಪ್ರಸವದ ನಂತರ ಗುಣಮುಖಳಾಗುತ್ತಾಳಾದರೂ ತನ್ನ ಜೀವಿತಾವಯಲ್ಲಿ  ಇಪ್ಪತ್ತು-ಮೂವತ್ತು ವರ್ಷಗಳಾದ ಬಳಿಕ ಡಯಾಬಿಟಿಸ್‌ಗೆ ತುತ್ತಾಗುವ ಅಪಾಯವಿದೆ. ಇಂಥವರಿಗೆ ಹುಟ್ಟುವ ಮಕ್ಕಳಲ್ಲಿಯೂ ಮುಂದೆ ಡಯಾಬಿಟಿಸ್ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ಟೆನ್ಷನ್ ಬೇಡ
ಗರ್ಭಿಣಿಯಾದಾಗ ಹೀಗೆ ಡಯಾಬಿಟಿಸ್ ಬಂತೆಂದರೆ ಗರ್ಭಿಣಿ ಸೇರಿದಂತೆ ಮನೆಯವರಿಗೆಲ್ಲ ಆತಂಕವಾಗುವುದು ಸಹಜ. ಆದರೆ ಈ ಬಗ್ಗೆ ಅತಿಯಾಗಿ ಚಿಂತಿಸಿ ಗಾಬರಿಪಟ್ಟುಕೊಂಡರೆ ಅದರಿಂದಾಗಿಯೇ ರಕ್ತದ ಗ್ಲುಕೋಸ್ ಮಟ್ಟ ಏರಬಹುದು. ಆದ್ದರಿಂದ ಸಮಾಧಾನಚಿತ್ತರಾಗಿ ಇದಕ್ಕೆ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು. ವೈದ್ಯರು ಆಹಾರದ ನಿಯಮಗಳನ್ನು ಹೇಳಿದರೆ ಅವನ್ನು ಸರಿಯಾಗಿ ತಿಳಿದುಕೊಂಡು ಅನುಷ್ಠಾನಿಸಿದರೆ ಅಪಾಯವೇನೂ ಇಲ್ಲ. ವಾಕಿಂಗ್ ಮಾಡುವುದು, ಸರಿಯಾದ ಸಮಯಕ್ಕೆ ಆಹಾರ ಸೇವನೆಯಂತಹ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಅದೆಷ್ಟೋ ಹೆಣ್ಣುಮಕ್ಕಳು ಈ ಸಂದರ್ಭವನ್ನು ಯಶಸ್ವಿಯಾಗಿಯೇ ದಾಟಿ ಆರೋಗ್ಯವಂತ ಮಕ್ಕಳಿಗೆ ಜನ್ಮವಿತ್ತ ಉದಾಹರಣೆಗಳು ಎಷ್ಟೋ ಇವೆ.
ಗರ್ಭಿಣಿಯಾದಾಕ್ಷಣ ಇಬ್ಬರು ಊಟ ಮಾಡುವಷ್ಟು ಪ್ರಮಾಣದ ಆಹಾರ ಸೇವಿಸಬೇಕೆನ್ನುವುದು ತಪ್ಪು ಕಲ್ಪನೆ. ಒಬ್ಬರು ಸೇವಿಸುವ ಆಹಾರಕ್ಕಿಂತ ೩೦೦ ಕ್ಯಾಲೊರಿಯಷ್ಟು ಹೆಚ್ಚು ಆಹಾರವನ್ನು ಗರ್ಭಿಣಿ ಸೇವಿಸಬೇಕಷ್ಟೆ. ಆದರೂ, ರುಚಿರುಚಿಯಾದುದನ್ನೆಲ್ಲ ತಿಂದುಂಡು ಇರಬೇಕಾದ ಸಮಯದಲ್ಲಿ ಹೀಗೆ ಆಹಾರದಲ್ಲಿ ಪಥ್ಯ ಮಾಡುವುದು ಕಷ್ಟಕರವೆನಿಸಬಹುದು. ಹುಟ್ಟುವ ಮಗುವಿನ ಆರೋಗ್ಯಕ್ಕಾಗಿ ಇದನ್ನು ಮಾಡುವುದು ಅನಿವಾರ್‍ಯವೂ ಹೌದು.

——-

ಸಿಕ್ಸ್ ಮೀಲ್ ಡಯಟ್
ಗರ್ಭಾವಸ್ಥೆಯ ಡಯಾಬಿಟಿಸ್ ಅನ್ನು ಆಹಾರದ ಮೂಲಕವೇ ನಿಯಂತ್ರಿಸುವುದು ಸೂಕ್ತ. ಇದಕ್ಕೆ ಡಯಾಬಿಟಿಸ್ ತಜ್ಞರು ‘ಸಿಕ್ಸ್ ಮೀಲ್ ಪ್ಲಾನ್’ ಎಂಬ ಆಹಾರ ಸೇವನಾ ಟೈಂ ಟೇಬಲ್ ಅನ್ನೂ ನೀಡುತ್ತಾರೆ. ದಿನಕ್ಕೆ ಮೂರು ಬಾರಿ ಆಹಾರ ಸೇವಿಸುತ್ತಿದ್ದರೆ ಅದನ್ನು ಆರು ಬಾರಿ ವಿಭಜಿಸಿ ಸೇವಿಸಬೇಕೆನ್ನುತ್ತದೆ ಈ ಸೂತ್ರ. ಅಂದರೆ ಬೆಳಗ್ಗಿನ ತಿಂಡಿಗೆ ೩ ಚಪಾತಿ ಸೇವಿಸುತ್ತಿದ್ದರೆ ಬರಿಯ ೨ ಚಪಾತಿ ಸೇವಿಸಬೇಕು. ಮೂರು ಗಂಟೆಯ ಬಳಿಕ ಮತ್ತೆ ಹಾಲು, ಹಣ್ಣು ಸೇವನೆ. ಹೀಗೆ ಒಂದು ಬಾರಿ ಆಹಾರ ಸೇವಿಸುವಾಗ ದೇಹಕ್ಕೆ ಗ್ಲುಕೋಸ್ ಕಡಿಮೆ ಸೇರುವಂತೆ ನೋಡಿಕೊಳ್ಳಬೇಕು.
ಸಿಹಿ ವರ್ಜಿಸಬೇಕು. ಬಹುಬೇಗ ರಕ್ತಕ್ಕೆ ಸೇರುವ ಅನ್ನಕ್ಕಿಂತ ನಿಧಾನವಾಗಿ ರಕ್ತಕ್ಕೆ ಸೇರುವ ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳಾದ ಗೋ, ರಾಗಿಯ ತಿನಿಸುಗಳೇ ಉತ್ತಮ. ಬಾದಾಮಿಯನ್ನು ಹೊರತುಪಡಿಸಿದರೆ ಇನ್ನೆಲ್ಲಾ ಒಣ ಹಣ್ಣುಗಳ ಸೇವನೆಯೂ ಬೇಡವೆನ್ನುತ್ತಾರೆ ತಜ್ಞರು. ತೆಂಗಿನ ಕಾಯಿ ಹಾಕಿದ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳಿಂದ ದೂರವಿರುವುದೇ ಸುರಕ್ಷಿತ. ದೇಹಕ್ಕೆ ಸೇರುವ ಕಾರ್ಬೊಹೈಡ್ರೇಡ್ ಪ್ರಮಾಣ ಮಿತವಾಗಿರಬೇಕು. ಬೇಳೆಕಾಳುಗಳು, ಸೊಪ್ಪು ತರಕಾರಿಗಳೇ ಆಹಾರದ ಮುಖ್ಯ ಭಾಗವಾಗಿರಬೇಕು. ಹಾಲನ್ನೂ ಕೆನೆ ತೆಗೆದೇ ಕುಡಿಯುವಷ್ಟು ಎಚ್ಚರಿಕೆ ವಹಿಸಬೇಕು.
———-

ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಗ್ಲುಕೋಸ್ ಅಂಶ ಕೆಲವರಲ್ಲಿ ಹೆಚ್ಚಾಗುತ್ತದೆ. ಇದು ಮಗುವಿನ ಬೆಳವಣಿಗೆಗೆ ಹಾನಿ ಮಾಡಬಹುದು. ಅಸಹಜ ಮಗುವಿನ ಹುಟ್ಟಿಗೂ ಕಾರಣವಾಗಬಹುದು. ಸಾಮಾನ್ಯವಾಗಿ ಗರ್ಭಿಣಿಯರಿಗೆ ಡಯಾಬಿಟಿಸ್ ಬಂದಾಗ ಆಹಾರದಲ್ಲೇ ಅದನ್ನು ನಿಯಂತ್ರಿಸಲು ಸೂಚಿಸುತ್ತೇವೆ. ಆಹಾರ ಕ್ರಮದಲ್ಲಿ ಕಂಟ್ರೋಲ್‌ಗೆ ಬರದಿದ್ದರೆ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ. ಸರಿಯಾದ ಲೈಫ್‌ಸ್ಟೈಲ್, ಆಹಾರಕ್ರಮ ಅಳವಡಿಸಿಕೊಳ್ಳುವುದು ಅಥವಾ ಇನ್ಸುಲಿನ್ -ಇವಲ್ಲದೆ ಇದನ್ನು ನಿಯಂತ್ರಿಸಲು ಬೇರಾವ ದಾರಿಯೂ ಇಲ್ಲ.
-ಡಾ| ಶೈಲಜಾ ಬಾಬು ಕೆ.ವಿ.ಎನ್., ಸ್ತ್ರೀರೋಗ ತಜ್ಞರು.

ಪ್ಲೆಟಾನಿಕ್ ಲವ್

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಅವರು ಅಣ್ಣ-ತಂಗಿಯರಲ್ಲ. ಗಂಡ-ಹೆಂಡತಿಯಂತೂ ಅಲ್ಲವೇ ಅಲ್ಲ. ಆದರೆ ಇಬ್ಬರೂ ಪರಸ್ಪರ ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಅನಿಸಿದ್ದನ್ನೆಲ್ಲಾ ಹಂಚಿಕೊಳ್ಳುತ್ತಾರೆ. ಇವರಿಬ್ಬರ ನಡುವಣ ನಂಟೇನು? ಆತ್ಮಗಳ ಸಾಂಗತ್ಯವೆಂದರೆ ಹೀಗೇನಾ?

ಅವನು ಮಾತಾಡುತ್ತಿದ್ದರೆ ಇವಳೊಳಗೆ ಖುಷಿಯ ಉಲಿ. ಇವಳು ಜೊತೆಗಿದ್ದರೆ ಅವನಲ್ಲಿ ಪುಳಕದ ಅಲೆ. ಅವರಿಬ್ಬರ ನಡುವೆ ಏನಿಲ್ಲ? ಮಾತು, ಮೌನ, ನಗು, ಮುನಿಸು, ಹರಟೆ, ಕಿಲಾಡಿತನ… ಎಲ್ಲವೂ ಇದೆ. ಇಬ್ಬರೂ ದಿನಕ್ಕೊಮ್ಮೆಯಾದರೂ ಸಿಕ್ಕಿ ಮಾತಾಡಬೇಕು, ಹಾಗಾದರೇ ಜೀವಕ್ಕೆ ಸಮಾಧಾನ. ಹಾಗಿದ್ದರೆ ಅವರಿಬ್ಬರು ಪ್ರೇಮಿಗಳಾ?
ಹೌದು, ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಆದರೆ ಆ ಪ್ರೀತಿ ಎಲ್ಲರಂತಲ್ಲ. ವಿವಾಹವೆಂಬ ಚೌಕಟ್ಟಿನ ಒಳಗೆ ತಮ್ಮ ಸಂಬಂಧವನ್ನು ಸೀಮಿತಗೊಳಿಸುವ ತುಡಿವ ಅವರಿಗಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆಯೂ ನಾಲ್ಕು ಗೋಡೆಗಳ ಮಧ್ಯೆ ಇರುವ ತಹತಹಿಕೆಯೂ ಅವರಿಗಿಲ್ಲ. ದೈಹಿಕ ವಾಂಛೆಗಳನ್ನು ಮೀರಿದ ಪ್ರೀತಿ ಅವರದು. ಆತ್ಮಸಂಗಾತಿಗಳೆಂದರೆ ಇವರೇ.
ಇದೊಂಥರಾ ಸ್ಪೆಷಲ್
ಆಕೆಗೆ ಗಂಡನಿರಬಹುದು. ಆದರೂ ಆಕೆಗೆ ಮನಸ್ಸಿನ ಭಾವನೆಗಳನ್ನೆಲ್ಲ ಹಂಚಿಕೊಳ್ಳಬೇಕೆನ್ನಿಸುವುದು ಇವನ ಜೊತೆಯೇ. ಅವನಿಗೂ ಅಷ್ಟೆ. ಪತ್ನಿ ಇದ್ದರೂ ತನ್ನ ಅನಿಸಿಕೆಗಳಿಗೆಲ್ಲ ಸೂಕ್ತ ಸ್ಪಂದನೆ ಸಿಗುವುದು ಇವಳಲ್ಲಿಯೇ ಎಂಬ ಭಾವ. ಸಾವಿರ ಮೈಲುಗಳಷ್ಟು ದೂರವಿದ್ದರೂ ಪ್ರತಿದಿನವೂ ತಮ್ಮೊಳಗನ್ನು ಹಂಚಿಕೊಳ್ಳದಿದ್ದರೆ ಇಬ್ಬರಿಗೂ ಸಮಾಧಾನವಿಲ್ಲ. ಅವನು ಅವಳ ಸಮಸ್ಯೆಗೆ ಪರಿಹಾರ ಹೇಳುತ್ತಾಳೋ ಇಲ್ಲವೋ, ಆದರೂ ಅವನಲ್ಲೊಮ್ಮೆ ಅದನ್ನು ಹೇಳಬೇಕು. ಅವನು ನಿರ್ಧಾರ ತೆಗೆದುಕೊಳ್ಳುವುದು ತನ್ನಿಷ್ಟದ ಹಾಗೆಯೇ, ಆದರೂ ಅವಳಲ್ಲೊಮ್ಮೆ ಕೇಳಬೇಕು… ಹೀಗಿರುತ್ತದೆ ಆತ್ಮಸಂಗಾತಿಗಳ ನಡುವಣ ನಂಟು.
ಇದು ಪ್ರೀತಿ ಹೌದು. ಆದರೆ ಅಣ್ಣ-ತಂಗಿ ನಡುವಣ ಪ್ರೀತಿಯಂತಲ್ಲ ಇದು. ಗಂಡ-ಹೆಂಡಿರ ನಡುವಣ ಪ್ರೇಮವೂ ಅಲ್ಲ. ಹುಡುಗಿಯೊಬ್ಬಳು ಹುಡುಗನಿಗೆ ರಾಖಿ ಕಟ್ಟಿದಾಗ ಹುಟ್ಟಿಕೊಳ್ಳುವ ಸಂಬಂಧವೂ ಇದಲ್ಲ. ಆದರೆ, ಇದು ಸದಾ ಒಬ್ಬ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಬಂಧ. ಹಾಗೆಂದು ಫ್ಲರ್ಟಿಂಗ್‌ನ ಹೆಸರಿನಲ್ಲಿ ಸರಸ ಸಲ್ಲಾಪ ನಡೆಸುವ ಹುಡುಗ-ಹುಡುಗಿಯೂ ಇವರಲ್ಲ. ಲೈಂಗಿಕತೆಯ ಭಾವವೂ ಸೋಕದ ಬರಿಯ ಮಾನಸಿಕ ಪ್ರೇಮ ಇದು. ಈ ಆತ್ಮಸಾಂಗತ್ಯಕ್ಕೇ ಆಂಗ್ಲ ಪರಿಭಾಷೆಯಲ್ಲಿ  ‘ಪ್ಲೆಟಾನಿಕ್ ಲವ್’ ಎಂಬ ಹೆಸರು. ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಇಪ್ಪತ್ತರ ಹುಡುಗಿಗೆ ಐವತ್ತರ ಪುರುಷನೊಂದಿಗೆ ಈ ಭಾವ ಹುಟ್ಟಬಹುದು. ನಲುವತ್ತರ ಸ್ತ್ರೀ ಮೂವತ್ತರ ಪುರುಷನೊಂದಿಗೂ ಆತ್ಮಸಖ್ಯವನ್ನು ಹೊಂದಿರಬಹುದು.
ದೈವಿಕ ಪ್ರೀತಿ
ಈ ಪ್ಲೆಟಾನಿಕ್ ಲವ್ ಆಧ್ಯಾತ್ಮಿಕವಾಗಿ ‘ದೈವಿಕ ಪ್ರೀತಿ’ ಎನಿಸಿಕೊಂಡಿದೆ. ವಚನಕಾರರಲ್ಲಿ ಕಾಣುವ ‘ಶರಣ ಸತಿ ಲಿಂಗ ಪತಿ’ ಭಾವದ ಮೂಲದಲ್ಲಿ ಇರುವುದು ಇದೇ ಪ್ರೀತಿ.  ಸೂಫಿ ಪಂಥದವರು ಅಲ್ಲಾನೆಡೆಗೆ ತೋರಿಸುವ ‘ರುಹಾನಿ ಲವ್’ನಲ್ಲೂ ಇದೇ ಪ್ರೀತಿ ವ್ಯಕ್ತವಾಗುತ್ತದೆ. ಇದನ್ನೇ ಅಕ್ಕಮಹಾದೇವಿ ತನ್ನ ವಚನವೊಂದರಲ್ಲೂ ಹೇಳಿದ್ದಾಳೆ,
‘ಹಸಿವಾದರೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ ಬಾವಿಗಳುಂಟು
ಶಯನಕೆ ಹಾಳು ದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಾ
ಆತ್ಮ ಸಂಗಾತಕ್ಕೆ ನೀ ಎನಗುಂಟು..’
ಅಕ್ಕನ ಇತರೆ ವಚನಗಳಲ್ಲಿ ಲೈಂಗಿಕ ಭಾವ ಸುಳಿದಾಡುವುದಾದರೂ ಇಲ್ಲಿ ಆತ್ಮಸಾಂಗತ್ಯದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಆಕೆ ವ್ಯಕ್ತಪಡಿಸಿದ್ದಂತೂ ಹೌದು.
ಇದು ಸಾಧ್ಯವಾ?
ವಂಶವಾಹಿ ಲೆಕ್ಕಾಚಾರದ ಪ್ರಕಾರ ಈ ಬಗೆಯ ಸಂಬಂಧ ಇರುವುದು ಕಷ್ಟಸಾಧ್ಯ. ಸಾಮಾನ್ಯವಾಗಿ ಗಂಡು-ಹೆಣ್ಣಿನ ನಡುವೆ ಒಂದು ಮಟ್ಟದ ಲೈಂಗಿಕ ಆಕರ್ಷಣೆ ಇದ್ದೇ ಇರುತ್ತದೆ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇದು ಅಂತರ್ಗತವಾಗಿರುತ್ತದೆ. ವ್ಯಕ್ತಿಗಳಿಂದ ಹೊರಸೂಸುವ ‘ಫೆರೋಮೋನ್’ಗಳೆಂಬ ರಾಸಾಯನಿಕದ ಕಾರಣದಿಂದ ವಿರುದ್ಧ ಲಿಂಗಿಗಳು ದೈಹಿಕವಾಗಿ ಕಣ್ಸೆಳೆಯುತ್ತಾರೆ. ಬರಿಯ ಕ್ಷಣಮಾತ್ರ ಕೇಳಿದ ಧ್ವನಿಯೂ ಈ ಸೆಳೆತಕ್ಕೆ ನೆಪವಾಗಬಹುದು. ಆದ್ದರಿಂದಲೇ ಕಾಯದ ಕಾಮನೆಗಳಿಲ್ಲದೇ ಸಂಬಂಧವೊಂದಿದ್ದರೆ ಅದು ಬರಿಯ ಸ್ನೇಹವಷ್ಟೇ ಆಗಿರಬಹುದು, ಅಲ್ಲಿ ಪ್ರೇಮವಿರಲಾರದು ಎನ್ನುತ್ತದೆ ಜೆನೆಟಿಕ್ ಲೆಕ್ಕಾಚಾರ. ಮೊದಮೊದಲು ಇಬ್ಬರೂ ಇಂತಹ ಪ್ಲೆಟಾನಿಕ್ ಪ್ರೇಮಿಗಳಾಗಿದ್ದರೂ ಅಲ್ಲಿ ರೊಮ್ಯಾಂಟಿಕ್ ಭಾವ ಹುಟ್ಟಿದರೆ ಮುಂದೆ ಅದು ಪ್ಲೆಟಾನಿಕ್ ಲವ್ ಆಗಿ ಉಳಿಯುವುದು ಸಾಧ್ಯವಿಲ್ಲ. ಇಬ್ಬರಲ್ಲೊಬ್ಬರಲ್ಲಿ ದೈಹಿಕ ಆಸಕ್ತಿ ಹುಟ್ಟಿದರೂ ಅದು ಆತ್ಮಸಾಂಗತ್ಯವಾಗಿರದು.
ಆದರೆ ಇಂಥ ಸಂಬಂಧಗಳು ಹಿಂದೆ ಆಗಿಹೋದದ್ದಿದೆ, ಈಗಲೂ ನಮ್ಮ ಸುತ್ತಲಲ್ಲಿ ಇಂಥ ಆತ್ಮಸಂಗಾತಿಗಳನ್ನು ಗಮನಿಸಲೂಬಹುದು. ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್ ನಿವೇದಿತಾ ಇಂತಹ ಆತ್ಮ ಸಾಂಗತ್ಯಕ್ಕೊಂದು ಅಪೂರ್ವ ನಿದರ್ಶನವೆನಿಸಿದರು. ಗಾಂಜಿಯವರಿಗೂ ಹಲವು ಹೆಣ್ಣುಮಕ್ಕಳೊಂದಿಗೆ ಇದ್ದುದು ಇಂತಹ ಸಾಂಗತ್ಯವೇ. ಅರಬಿಂದೋ ಹಾಗೂ ಮೀರಾ ಅದಿತಿ ಮಧ್ಯೆಯೂ ಇಂತಹುದೊಂದು ಸಂಬಂಧವಿತ್ತು. ಅಮೆರಿಕಾದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಹಾಗೂ ಅಮೆರಿಕಾದ ಧ್ವಜವನ್ನು ವಿನ್ಯಾಸಗೊಳಿಸಿದವಳೆನ್ನಲಾದ ಮಹಿಳೆ ಬೆಟ್ಸಿ ರಾಸ್ ಮಧ್ಯೆಯೂ ಇಂತಹ ಪ್ರೇಮವಿತ್ತು ಎನ್ನಲಾಗಿದೆ.
ಅವರ ಜೊತೆ ಎಲ್ಲ ಮರೆತು…
ಪ್ರತಿಯೊಂದು ಪ್ರೇಮ ಪ್ರಸಂಗವೂ ಆರಂಭದಲ್ಲಿ ಪ್ಲೆಟಾನಿಕ್ ಸ್ವರೂಪದ್ದೇ ಆಗಿರುತ್ತದೇನೋ, ಯಾಕೆಂದರೆ ಪ್ರೀತಿಸುವ
ಮೊದಲಿನ ಹಂತದಲ್ಲಿ ದೈಹಿಕ ಕಾಮನೆಗಳಿರುವುದಿಲ್ಲ. ಪತಿ-ಪತ್ನಿಯರ ಸಂಬಂಧದಲ್ಲಿಯೂ ದಾಂಪತ್ಯ ಹಳತಾದಂತೆ ಈ ಪ್ಲೆಟಾನಿಕ್ ಲವ್‌ನ ಭಾವ ಕಾಣಿಸಿಕೊಳ್ಳುತ್ತದೆ. ಮೊದಲು ದೈಹಿಕ ಆಕರ್ಷಣೆಯ ಹಸಿಬಿಸಿಯಲ್ಲಿ ಗಂಡ-ಹೆಂಡಿರ ಬಂಧ ಗಟ್ಟಿಯಾದರೆ ಬಳಿಕ ಮಾನಸಿಕ ಅವಲಂಬನೆಯೇ ಅವರಿಬ್ಬರ ಬದುಕಿನ ಮೂಲಸೆಲೆಯಾಗುತ್ತದೆ. ಆಗ ಅವರಿಬ್ಬರಲ್ಲಿ ಈ ಆತ್ಮಸಾಂಗತ್ಯವೇ ಎಲ್ಲವನ್ನೂ ಮೀರಿ ನಿಲ್ಲುತ್ತದೆ.
ಸಂಬಂಧಗಳಿಗೆಲ್ಲ  ಹೆಸರು ಬೇಕೆನ್ನುವ ಕನ್ನಡಕವನ್ನು ಹಾಕಿಕೊಂಡಿರುವ ಸಮಾಜ ನಮ್ಮದು. ಇಂಥಲ್ಲಿ  ಎಲ್ಲ ರೀತಿಯ ಬಂಧಗಳನ್ನೂ ಮೀರಿ ನಿಂತ ಆತ್ಮಸಾಂಗತ್ಯದ ಪರಿಕಲ್ಪನೆ ಎಲ್ಲರ ಬೊಗಸೆಗೂ ದಕ್ಕುವುದು ಕಷ್ಟ. ಸುತ್ತಲಿರುವವರು ಅದಕ್ಕೆ ಒಪ್ಪುವ ಸಾಧ್ಯತೆಯೂ ಕಡಿಮೆ.
ನಂಟಿಗೊಂದು ಹೆಸರು ಕೊಟ್ಟಾಗ ಅಲ್ಲಿ  ವ್ಯಕ್ತಿಗಳ ನಡುವೆ ಅಹಂ, ಸಣ್ಣತನ, ಭಾವನೆಗಳ ತಾಕಲಾಟ ಎಲ್ಲವೂ ಬರುತ್ತದೆ. ಆದರೆ ಇವ್ಯಾವುದೂ ಇಲ್ಲದ ಈ ಆತ್ಮಸಖ್ಯದ ಬಂಧದ ಅನುಭವವೇ ಬಲು ಅನನ್ಯ. ಹೀಗೆ ತನ್ನ ಮನಸ್ಸಿನ ಎಲ್ಲವನ್ನೂ ಹಂಚಿಕೊಳ್ಳುವ, ಮಾನಸಿಕ ಸಾಂಗತ್ಯವನ್ನು ನೀಡಲು ಸೂಕ್ತ ವ್ಯಕ್ತಿಯೊಬ್ಬರು ಸಿಕ್ಕರೆ ಅದೃಷ್ಟ. ಸಿಗದಿದ್ದರೆ ಚಿಂತೆ ಬೇಡ, ನಮ್ಮ ಮನಕ್ಕೆ ನಮ್ಮ ಆಂತರ್‍ಯದ ಸಾಂತ್ವನವಾದರೂ ಇರಲಿ.
——-

ಈ ಪ್ಲೆಟಾನಿಕ್ ಲವ್ ಇಂದು-ನಿನ್ನೆಯ ಪರಿಕಲ್ಪನೆಯಲ್ಲ. ‘ಪ್ಲೆಟಾನಿಕ್ ಲವ್’ ಎಂಬ ಪದವನ್ನು ಮೊದಲು ಟಂಕಿಸಿದವನು ಇಟಾಲಿಯನ್ ವಿದ್ವಾಂಸ ಮಾರ್ಸಿಲೋ ಫಿಸಿನೋ. ಈ ಪರಿಕಲ್ಪನೆ ಪ್ಲಾಟೋನ ತತ್ವಗ್ರಂಥ ‘ಸಿಂಪೋಸಿಯಮ್’ನಲ್ಲಿ ಮೊದಲ ಬಾರಿ ಉಲ್ಲೇಖಗೊಂಡಿತ್ತು. ಇದರಲ್ಲಿ ಹೆಸರಿಸಲಾದ ಸನ್ಯಾಸಿನಿ ಡಯಟಿಮಾ ಹೇಳಿದ ತತ್ವಗಳೇ ಈ ‘ಪ್ಲೆಟಾನಿಕ್ ಲವ್’ಗೆ ಮೂಲ ಎನ್ನಲಾಗಿದೆ. ಡಯಾಟಿಮಾ ಪ್ರಕಾರ ಪ್ರೇಮವೆಂದರೆ ದೈವೀ ಚಿಂತನೆಯ ಹಾದಿ. ಇದು ದೇವರನ್ನು ಶಾಶ್ವತವಾಗಿ ಹೊಂದುವ ಕೆಲಸ. ಆಕೆಯ ಪ್ರಕಾರ ಇದು ಸುಂದರ ವಸ್ತುಗಳನ್ನು ಹೊಂದಬಯಸುವ ಕಲಾವಿದನೊಬ್ಬನ ಬಯಕೆಯಾಗಿರಬಹುದು, ಜ್ಞಾನವಂತನಾಗುವ ತತ್ವಜ್ಞಾನಿಯೊಬ್ಬನ ಬಯಕೆಯೂ ಆಗಿರಬಹುದು. ಮಕ್ಕಳನ್ನು ಹೊಂದುವ ಅಥವಾ ಇನ್ನಾವುದೇ ಕಲಾವಸ್ತು, ವಿಚಾರದತ್ತಲಿನ ಪ್ರೇಮಿಗಳ ತುಡಿತವೂ ಇದು ಆಗಿರಬಹುದೆನ್ನುತ್ತಾಳೆ ಆಕೆ. ಹೀಗೆ ಕ್ರಿಯೇಟಿವ್ ಆಗಿರುವುದರಿಂದ ಪ್ರೇಮಿಗಳಿಗೆ ಶಾಶ್ವತತೆ ಪ್ರಾಪ್ತವಾಗುತ್ತದೆ ಎಂಬುದು ಆಕೆಯ ಹೇಳಿಕೆ. ಆದರೆ ಎಲ್ಲಕ್ಕಿಂತ ಶ್ರೇಷ್ಠ ಪ್ರೇಮಿಗಳೆಂದರೆ ಈ ದೈಹಿಕ ಅಥವಾ ವೈಯಕ್ತಿಕ ಪ್ರೀತಿಯನ್ನು ಮೀರಿ ಬೌದ್ಧಿಕ ಪ್ರೀತಿಯ ಮಜಲನ್ನು ಹೊಕ್ಕವರು ಎನ್ನುತ್ತಾಳೆ ಡಯಟಿಮಾ.
ಪ್ಲಾಟೋನ ಕೃತಿಯಲ್ಲಿ ಕಂಡುಬಂದ ಈ ಪರಿಕಲ್ಪನೆಯನ್ನು ಆಧರಿಸಿಯೇ ವಿಲಿಯಮ್ ಡಿ ಅವೆನಂತ್ ಎಂಬ ಕವಿ ಹಾಗೂ ನಾಟಕಕಾರ ೧೬೩೬ರಲ್ಲಿ  ‘ದ ಪ್ಲೆಟಾನಿಕ್ ಲವರ್‍ಸ್’ ಎಂಬ ಹಾಸ್ಯ ನಾಟಕವನ್ನು ಬರೆದ. ಇದೇ ಪ್ಲೆಟಾನಿಕ್ ಲವ್ ಅನ್ನು ವಚನಕಾರರು ೧೨ನೇ ಶತಮಾನದಲ್ಲಿ  ‘ಆತ್ಮ ಸಾಂಗತ್ಯ’ ಎಂದರು.

ಒತ್ತಡ ಹೊತ್ತವಳು

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಒತ್ತಡ ಯಾರಿಗಿಲ್ಲ ಹೇಳಿ? ಆದ್ರೆ ಸ್ತ್ರೀಯರನ್ನು ಕಾಡುವ ಒತ್ತಡ ಅವರಿಗಷ್ಟೇ ಗೊತ್ತು. ಅದರಲ್ಲೂ ಭಾರತೀಯ ಮಹಿಳೆಯರ ಮೇಲೆ ಜಗತ್ತಿನಲ್ಲೇ ಎಲ್ಲಾ  ಮಹಿಳೆಯರಿಗಿಂತ ಸ್ಟ್ರೆಸ್ ಹೆಚ್ಚು ಎಂದು ಸಾಬೀತಾಗಿದೆ. ಶಾಂತಿ, ನೆಮ್ಮದಿಯ ನೆಲೆವೀಡು ಅನ್ನಿಸಿಕೊಂಡ ಭಾರತದಲ್ಲೇ ಮಾನಿನಿಗೇಕೆ ಇಷ್ಟು ಒತ್ತಡ?

ಒತ್ತಡವಾ? ಊಂ.. ಅದ್ರ ಬಗ್ಗೆ ಯೋಚ್ನೆ ಮಾಡೋಕೇ ಟೈಂ ಸಿಕ್ಕಿಲ್ಲ. ಸಿಡುಕು, ಸಿಟ್ಟು? ಹಾಂ, ಅದೆಲ್ಲಾ ಇದೆ, ಮನಸ್ಸಿನಲ್ಲೇ ಏನೋ ಕುದಿಯುತ್ತೆ, ಹೇಳೋಕೂ ಪುರುಸೊತ್ತಿಲ್ಲ. ನಮ್ಮ ದಿನದ ಶೆಡ್ಯೂಲ್ ಹೇಗಿರುತ್ತೆ ಗೊತ್ತಾ?
ಮೊಬೈಲ್‌ನ ಅಲರಾಂ ಕೀ ಕೀ ಅನ್ನುತ್ತಲೇ ಧಡಕ್ಕನೆ ಏಳು. ಬಡಬಡಿಸಿ ಕುಕ್ಕರ್ ಇಡು. ಮಕ್ಕಳನ್ನೆಬ್ಬಿಸು. ಅವರಿಗೆ ಬಾಕ್ಸ್ ರೆಡಿ ಮಾಡು. ಗಂಡ, ಮಕ್ಕಳು ಎಲ್ಲರಿಗೂ ತಿಂಡಿ ಕೊಡು. ಓಹ್, ತಾನೂ ಒಂದಷ್ಟು ಹೊಟ್ಟೆಗೆ ಹಾಕಿಕೊಳ್ಳಬೇಕಲ್ವಾ? ಬಸ್‌ಗೆ ಟೈಂ ಆಗೇ ಹೋಯ್ತಾ, ಹಾಗಾದ್ರೆ ಖಾಲಿ ಹೊಟ್ಟೆಯಲ್ಲೇ ಹೊರಟುಬಿಡು. ಆಫೀಸಲ್ಲಿ ಇದ್ದೇ ಇದೆ ಆಫೀಸ್ ಕೆಲ್ಸ. ಮತ್ತೆ ಸಂಜೆ ಮನೆಗೆ ಬಾ. ಮಕ್ಕಳನ್ನು ಓದಿಸು. ರಾತ್ರಿಗೆ ಅಡುಗೆ ಮಾಡು. ಅಷ್ಟರಲ್ಲೇ ಮಗ ಹೇಳುತ್ತಾನೆ, ನಾಡಿದ್ದು  ಸ್ಕೂಲ್‌ನಲ್ಲಿ ಪೇರೆಂಟ್ಸ್ ಮೀಟಿಂಗ್.. ಓ, ಆಫೀಸಿಗೆ ರಜಾ ಹಾಕ್ಬೇಕಲ್ವಾ? ಸರಿ, ರಜೆ ಹಾಕ್ಬೇಕಾದ್ರೆ ಆಫೀಸ್‌ನಲ್ಲಿ ನಾಳೆಯೇ ಹೆಚ್ಚು ಕೆಲ್ಸ ಮಾಡಿ ವರ್ಕ್ ಅಡ್ಜಸ್ಟ್ ಮಾಡ್ಬೇಕು… ಅಷ್ಟರಲ್ಲಿ ಸಂಡೇ ಬಂತು. ಮಕ್ಕಳಿಗೆ ಏನೋ ತಿಂಡಿ ಮಾಡ್ಬೇಕು. ಊಟಕ್ಕೆ ಬೇರೆ ಯಾರೋ ಗೆಸ್ಟ್ ಬರ್‍ತಾರೆ, ಏನು ಸ್ಪೆಷಲ್ ಮಾಡೋದು…? ಯೋಚಿಸುತ್ತಾ ಹಾಸಿಗೆಗೆ ತಲೆ ಕೊಟ್ಟದ್ದೇ ನಿದ್ದೆ ಆವರಿಸಿಯೂ ಬಿಡುತ್ತದೆ. ದಣಿದ ಜೀವಕ್ಕೆ ನಿದ್ದೆಯಷ್ಟು ಪರಮಾಪ್ತ ಬೇರಿನ್ನಾರು?
ಹೌದಪ್ಪ, ಇಂಥಾ ಉಸಿರು ಬಿಡಲಿಕ್ಕೂ ಆಗದ ಕಾರ್ಯಭಾರದ ಮಧ್ಯೆ ಒತ್ತಡದ ಬಗ್ಗೆ ಯೋಚಿಸುವುದಕ್ಕೆ ವ್ಯವಧಾನ ಯಾರಿಗೂ ಇರಲಿಕ್ಕಿಲ್ಲ. ಹಾಗೇ ರಿಲ್ಯಾಕ್ಸ್ ಮಾಡುವುದಕ್ಕೂ. ಅಂದಹಾಗೆ, ಇಂತಹ ಭಾರತೀಯ ಸ್ತ್ರೀಯರಿಗೆ ಈಗ ಜಗತ್ತಿನಲ್ಲೇ ಅತ್ಯಂತ ಒತ್ತಡಕ್ಕೊಳಗಾದ ಮಹಿಳೆಯರೆಂಬ ಪಟ್ಟ. ನೀಲ್ಸನ್ ಎಂಬ ಸಂಸ್ಥೆ ಕೇಳಿದ ಪ್ರಶ್ನೆಗಳಿಗೆ ಶೇ.೮೭ರಷ್ಟು ಭಾರತೀಯ ಸ್ತ್ರೀಯರು ‘ಹೌದು, ನಾವು ಒತ್ತಡಕ್ಕೊಳಗಾಗಿದ್ದೇವೆ’ ಅಂದಿದ್ದಾರೆ. ಅದರಲ್ಲೂ ಶೇ.೮೨ರಷ್ಟು  ಮಹಿಳೆಯರು ರಿಲ್ಯಾಕ್ಸ್ ಮಾಡುವುದಕ್ಕೂ ತಮಗೆ ಸಮಯವಿಲ್ಲ ಎಂದಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ, ರಷ್ಯಾ, ಸ್ವೀಡನ್… ಹೀಗೆ ಉಳಿದ ದೇಶದ ಹೆಂಗಸರಿದ್ದಾರೆ.
ಎಲ್ಲ ಸರಿ, ಭಾರತೀಯ ಮಹಿಳೆಯರೇ ಏಕೆ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ? ಯೋಗ, ಧ್ಯಾನಗಳನ್ನೆಲ್ಲ ಜಗತ್ತಿಗೇ ಹೇಳಿಕೊಟ್ಟ ಈ ದೇಶದ ಸ್ತ್ರೀಯರಿಗೂ ಒತ್ತಡವಾ?
ರೋಲ್ ಬದಲಾಗಿದ್ದಷ್ಟೇ
ಹೌದು, ಒತ್ತಡ ಹೆಚ್ಚುವುದಕ್ಕೂ ಕಾರಣವುಂಟು. ಇಲ್ಲಿನ ಮಾನಿನಿಯರಿಗೆ ಶಿಕ್ಷಣ ಸಿಕ್ಕಿದೆ, ಅವರೆಲ್ಲ ಹೊರ ಹೋಗಿ ಆದಾಯವನ್ನೂ ಗಳಿಸುತ್ತಿದ್ದಾರೆ. ಸಾಂಸಾರಿಕವಾಗಿ, ಸಾಮಾಜಿಕವಾಗಿ ಆಕೆಯ ಪಾತ್ರ ಬದಲಾಗಿದೆ. ಆದರೆ ಜವಾಬ್ದಾರಿ ಮಾತ್ರ ಹೆಚ್ಚುತ್ತಲೇ ಇದೆ. ಮನೋವೈದ್ಯರು ಹೇಳುವುದೂ ಇದನ್ನೇ. ಡಾ| ಜಗದೀಶ್ ಹೇಳ್ತಾರೆ, ‘ಹೆಂಗಸರು ಉದ್ಯೋಗಸ್ಥೆಯರಾಗಿ ಹೊರ ಹೋದರೂ ಮನೆಯೊಳಗಿನ ಕೆಲಸವನ್ನು ತಾವೇ ಮಾಡಬೇಕಿದೆ. ಮಕ್ಕಳು, ಮನೆ, ಅಡುಗೆ ಎನ್ನುತ್ತ ಆಕೆಯ ಕೆಲಸಗಳ ಪಟ್ಟಿ ಮುಗಿಯುವುದೇ ಇಲ್ಲ. ವಿದೇಶಗಳಲ್ಲಿ ಹೀಗಿಲ್ಲ. ಅಲ್ಲೆಲ್ಲ ಜವಾಬ್ದಾರಿಗಳ ಸಮಾನ ಹಂಚಿಕೊಳ್ಳುವಿಕೆ ಇದ್ದೇ ಇದೆ. ಅದಕ್ಕೇ ಅವರನ್ನು ಒತ್ತಡ ಇಷ್ಟೊಂದು ಬಾಸೋದಿಲ್ಲ.’
ಉದ್ಯೋಗಕ್ಕೆ ಹೋಗುವ ಮಧ್ಯಮ ವರ್ಗದ ಸ್ತ್ರೀಯರ ಮೇಲೆ ಮಾತ್ರವಲ್ಲ ಈ ಜವಾಬ್ದಾರಿಗಳ ರಾಶಿ ಕುಳಿತಿಲ್ಲ. ಅದೆಲ್ಲೋ ಕೂಲಿನಾಲಿ ಮಾಡಿ ಸಂಸಾರ ನಿಭಾಯಿಸುವ ಹೆಣ್ಣುಮಗಳಿಗೂ ಗಂಡನ ಕುಡಿತದಂತಹ ದುರಭ್ಯಾಸದ ವಿರುದ್ಧ ಸೆಣಸಿ ಮನೆ, ಮಕ್ಕಳ ದೋಣಿ ಸಾಗಿಸುವ ಹೊಣೆ ಇರುತ್ತದೆ. ಇದಕ್ಕಿಂತ ಒತ್ತಡ ಬೇರೆ ಬೇಕೇ?
ಕೆಲಸದಲ್ಲಿ ಮಾತ್ರ ಸೂಪರ್…
ಭಾರತೀಯ ಮಹಿಳೆಗೆ ‘ಸೂಪರ್ ವುಮನ್’ ಅನ್ನೋ ಬಿರುದಿದೆ ನಿಜ. ಇದು ಆಕೆ ನಿರ್ವಹಿಸುವ ಜವಾಬ್ದಾರಿಗಳ ವಿಚಾರದಲ್ಲಿ ಮಾತ್ರ. ಭಾವನಾತ್ಮಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಈಗಲೂ ಆಕೆ ಸೆಕೆಂಡ್ ಕ್ಲಾಸ್ ಸಿಟಿಝನ್. ‘ಅದೆಷ್ಟೋ ಮಹಿಳೆಯರು ಹಣ ಗಳಿಸ್ತಾರೆ ನಿಜ. ಆದರೆ ಅದನ್ನು ಅವರಿಗೆ ಬೇಕಾದಂತೆ ಖರ್ಚು ಮಾಡೋ ಸ್ವಾತಂತ್ರ್ಯ ಅವರಿಗಿರೋದಿಲ್ಲ. ಒಂದೋ ಆಕೆಯ ಗಳಿಕೆಯ ಮೇಲೆ ಪುರುಷರ ನಿಯಂತ್ರಣ ಇರುತ್ತದೆ. ಇಲ್ಲವೇ ಸಂಸಾರದ ಅವಶ್ಯಕತೆಗಳೇ ಆಕೆಗೆ ಮೊದಲ ಆದ್ಯತೆ ಆಗಿರುತ್ತದೆ. ಇದಲ್ಲದೆ ಆಕೆಯನ್ನು ಸೆಕ್ಸ್ ಆಬ್ಜೆಕ್ಟ್ ಆಗಿ ನೋಡುವ ಮನೋಭಾವ ಹೆಚ್ಚುತ್ತಲೇ ಇದೆ. ಉದ್ಯೋಗದಲ್ಲಿಯೂ ಎಲ್ಲೆಡೆಯೂ ಸಮಾನ ವೇತನ ಆಕೆಗಿಲ್ಲ. ಜೊತೆಗೆ ಎಲ್ಲಾ ನೋವುಗಳನ್ನೂ ಸಹಿಸಿಕೊಂಡು ಹೋಗುವ ಅನಿವಾರ್ಯತೆ. ಇದೆಲ್ಲವೂ ಜೊತೆಗೂಡಿದ್ರೆ ಒತ್ತಡ ಸಹಜವೇ ಅಲ್ಲವೇ?’ಅನ್ನುತ್ತಾರೆ ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ.ಎಸ್.
ಸ್ತ್ರೀ ‘ಕ್ಷಮಯಾ ಧರಿತ್ರೀ’ ಎಂಬ ಹಣೆಪಟ್ಟಿಯನ್ನು ಇಂದಿನ ಮಹಿಳೆಯರು ವಿರೋಸುತ್ತಾರಾದರೂ ಪರೋಕ್ಷವಾಗಿ ಅವರನ್ನು ಬೆಳೆಸುವುದು ಹಾಗೆಯೇ ಎನ್ನುತ್ತಾರೆ ಶಿಕ್ಷಕಿ ಲಕ್ಷ್ಮೀ. ‘ಚಿಕ್ಕಂದಿನಿಂದಲೂ ಆಕೆ ಗಂಡು ಹುಡುಗರಂತೆ ಅನಿಸಿದಾಗಲೆಲ್ಲ ಸಿಟ್ಟು, ಅಳು, ನಗುಗಳನ್ನು ವ್ಯಕ್ತಪಡಿಸದಂತೆ ಬೆಳೆಸುತ್ತಾರೆ. ಮುಂದೆ ಸಂಸಾರಸ್ಥೆಯಾದಾಗಲೂ ಅದೇ ಮುಂದುವರಿಯುತ್ತದೆ. ಗಂಡ ಮನೆಗೆ ಬಂದ ಅತಿಥಿಗಳ ಮುಂದೆಯೇ ಆಕೆಯನ್ನು  ನೋಯಿಸಬಹುದು, ಆದರೆ ಆಕೆ ಮಾತ್ರ ತಿರುಗಿ ಮಾತಾಡಬಾರದು. ತನ್ನ ಬೇಸರಗಳನ್ನು ಹೇಳಿಕೊಳ್ಳುವುದಕ್ಕೂ ಹೊತ್ತು-ಗೊತ್ತು ನೋಡಬೇಕಾಗುತ್ತದೆ. ಭಾವನೆಗಳನ್ನು ಹೀಗೆ ಅದುಮಿಟ್ಟರೆ ಒತ್ತಡ ಉಂಟಾಗುವುದು ಸಹಜ ತಾನೇ?’ ಅನ್ನುತ್ತಾರೆ ಲಕ್ಷ್ಮೀ. ಗಂಡ, ಮಕ್ಕಳ ಮನಸ್ಸನ್ನೆಲ್ಲ ತಿಳಿದು ನಡೆಯುವ ಆಕೆಯ ಮನಃಶಾಸ್ತ್ರಜ್ಞೆಯ ಗುಣ ಕುಟುಂಬಕ್ಕೆ ಎಷ್ಟು ಹಿತಕರವೋ ಅಷ್ಟೇ ಮಾರಕ ಆಕೆಯ ವೈಯಕ್ತಿಕ ಹಿತಕ್ಕೆ. ಗಂಡನ ಮೂಡ್ ನೋಡಿಕೊಂಡು ತನ್ನ ಅಸಮಾಧಾನವನ್ನು ಹತ್ತಿಕ್ಕಿಕೊಳ್ಳುವ ಅವಳು ತನ್ನೊಳಗೊಂದು ಅಗ್ನಿಪರ್ವತವನ್ನು ಕಟ್ಟಿಕೊಳ್ಳುತ್ತಲೇ ಹೋಗುತ್ತಾಳೆ. ಎಲ್ಲೋ ಮಾತಾಡಹೊರಟರೂ ‘ಬಾಯ್ಮಚ್ಚು’ ಎಂಬ ಗದರಿಸುವಿಕೆಯ ಮುಂದೆ ಮೌನಿಯಾಗುತ್ತಾಳೆ ಅವಳು. ಈ ಮಧ್ಯೆ ಮಕ್ಕಳ ಓದು, ಆರೋಗ್ಯ, ನಡತೆ ಎಲ್ಲವುಗಳ ಚಿಂತೆ ಪೇರಿಸಲ್ಪಡುತ್ತವೆ ಅವಳೊಳಗೆ. ಮಕ್ಕಳು ಹಾದಿ ತಪ್ಪಿದರೆ, ‘ನೀನೇ ಕಾರಣ’ ಎಂಬ ಆರೋಪವನ್ನು ಅವಳು ಎದುರಿಸಲೇಬೇಕಲ್ಲ..?
ಅರ್ಥ ಮಾಡ್ಕೊಳಿ ಪ್ಲೀಸ್…
ಒತ್ತಡಕ್ಕೆ ಯೋಗ, ಧ್ಯಾನ ಮಾಡಿದ್ರೆ ಸರಿ ಹೋಗುತ್ತೆ ಅಂತ ಸುಲಭ ಟಿಪ್ಸ್ ಏನೋ ಕೊಡಬಹುದು. ನಿಮಗೆ ನೀವೇ ಟೈಂ ಕೊಟ್ಟುಕೊಳ್ಳಿ ಅಂತ ಉಚಿತ ಸಲಹೆ ನೀಡಿ ಉದ್ದಾನುದ್ದ ಲೇಖನಗಳನ್ನೂ ಬರೆಯಬಹುದು. ಆದರೆ ಇದು ಅವಳೊಬ್ಬಳಿಂದಲೇ ಸಾಧ್ಯವಿಲ್ಲ. ಸುತ್ತಲಿನವರೆಲ್ಲರ ಸಹಕಾರವೂ ಆಕೆಗೆ ಬೇಕು. ಒತ್ತಡ ಬೇಡವೆಂದರೆ ಹೊರಗಡೆ ದುಡಿಯಬೇಡ ಎಂಬ ಮಾತು ಇಂದು ಅಸಂಗತ. ಇಷ್ಟಕ್ಕೂ ಆಕೆ ತರುವ ವೇತನವನ್ನು ಬೇಡವೆನ್ನುವವರು ಯಾರೂ ಇಲ್ಲ. ಎಲ್ಲ ಸರಿ, ಆಕೆಯ ಶ್ರಮಕ್ಕೆ ತಕ್ಕ ಮನ್ನಣೆ ನೀಡಬೇಕೆನ್ನುವುದೇ ಆಕೆಯ ಆಶಯ. ಇಷ್ಟೆಲ್ಲವನ್ನೂ ಮಾಡುವಾಕೆ ಸದಾ ಎರಡನೇ ದರ್ಜೆಯವಳಾಗಿರಬೇಕೆನ್ನುವುದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?
ಸಂಸಾರದಲ್ಲಿ ಪುರುಷ ಕೆಲಸಗಳನ್ನು ಹಂಚಿಕೊಳ್ಳುವ ಬಗ್ಗೆ ಅಲ್ಲೊಂದು ಕಡೆ ಇಲ್ಲೊಂದು ಕಡೆ ಕೇಳಿಬರುತ್ತಿದೆಯಷ್ಟೇ ಹೊರತು ಅದು ಸಾರ್ವತ್ರಿಕವಾಗಿಲ್ಲ. ಅದಾಗುವ ದಿನಗಳು ಎಷ್ಟು ದೂರ ಇವೆಯೋ ಏನೋ? ಕೆಲಸಗಳನ್ನು ಹಂಚಿಕೊಂಡ ಹಾಗೆಯೇ ಆಕೆಯ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೂ ಮರೆಯಬಾರದು. ಆಕೆಯೂ ಕೊಂಚ ಸಿಡುಕಲಿ, ಜಗಳವಾಡಲಿ. ತನ್ನ ಅತೃಪ್ತಿಯನ್ನು ಹೊರಹಾಕಲೊಂದು ಅವಕಾಶ, ಅದಕ್ಕೆ ಸ್ಪಂದನೆ ಸಿಕ್ಕರೆ ಆಕೆಗೂ ಸಮಾಧಾನವಾದೀತು. ಭಾವನೆಗಳನ್ನೂ ಕಟ್ಟಿಟ್ಟರೆ ಅದು ಸೋಟಕವಾಗಬಹುದು. ಅವಳು ಸಿಡಿಯಬಹುದು. ಅದು ಸಮಾಜಕ್ಕೂ ಸಲ್ಲ, ಸಂಸಾರಕ್ಕೂ…
————-

ಹೆಣ್ಣಿನ ಮೇಲೆ ನಮ್ಮ ದೇಶದಲ್ಲಿ ಇರುವಷ್ಟು ಒತ್ತಡ ಬೇರೆಲ್ಲೂ ಇಲ್ಲ. ಮಹಿಳೆ ಎಷ್ಟೇ ಮುಂದುವರೆದರೂ ಇಲ್ಲಿ ಹೆಣ್ಣು ಭ್ರೂಣದ ಹತ್ಯೆಯಾಗುತ್ತದೆ. ವರದಕ್ಷಿಣೆಯ ಭೂತ ಈಗಲೂ ಕಾಡುತ್ತದೆ. ಪುರುಷನಷ್ಟೇ ಕೆಲಸ ಮಾಡಿದರೂ ಆಕೆಗೆ ಸಮಾನ ವೇತನವಿಲ್ಲ, ಕೆಲಸಕ್ಕೆ ಸಮಾನ ಬೆಲೆಯಿಲ್ಲ. ಸಂಬಳದ ಮೇಲೆ ಹಿಡಿತವಿಲ್ಲ. ಮಾಡುವ ಮನೆಗೆಲಸವನ್ನೂ ‘ಅನುತ್ಪಾದಕ’ ಎಂದೇ ಬಜೆಟ್‌ನಲ್ಲೂ ಪರಿಗಣಿಸ್ತಾರೆ. ಆಕೆಯ ಜವಾಬ್ದಾರಿ ಹೆಚ್ಚುತ್ತಿದೆ, ಸಹಜವಾಗಿ ಒತ್ತಡವೂ.
ವಿಮಲಾ ಕೆ.ಎಸ್, ಜನವಾದಿ ಮಹಿಳಾ ಸಂಘಟನೆ
ನಾನು ರಜಾ ಸಮಯದಲ್ಲಿ ನೇಚರ್ ಕ್ಯೂರ್‌ಗೆ ಹೋಗಿ ಒಂದಷ್ಟು ದಿನ ಇದ್ದು ಬರುತ್ತೇನೆ. ಇದರಿಂದ ರಿಲ್ಯಾಕ್ಸ್ ಅನಿಸುತ್ತದೆ. ಆದರೆ ಇದು ಎಲ್ಲರಿಗೂ ಅಂತಿಮ ಮಾರ್ಗವಲ್ಲ. ಆಕೆಯ ಮೇಲೆ ಒತ್ತಡ ಬಾರದಂತೆ ಕುಟುಂಬದವರು ಸಹಕರಿಸಬೇಕು.
ಲಕ್ಷ್ಮೀ ಕೆ., ಶಿಕ್ಷಕಿ, ಬೆಂಗಳೂರು.
ಮಹಿಳೆಯರ ಮೇಲಿನ ಒತ್ತಡ ಕಡಿಮೆ ಮಾಡಲು ಪುರುಷರ ಸಹಕಾರ ಬೇಕೇ ಬೇಕು. ಎಲ್ಲವನ್ನೂ ಹೆಣ್ಣುಮಕ್ಕಳೇ ಮಾಡಬೇಕೆಂಬ ಆಟಿಟ್ಯೂಡ್ ಬಿಡಬೇಕು. ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು.
ಡಾ| ಜಗದೀಶ್, ಮನೋವೈದ್ಯರು.
—-
(ವಿಜಯ ನೆಕ್ಸ್ಟ್ ವಾರಪತ್ರಿಕೆಯ ಜುಲೈ ೧೫, ೨೦೧೧ರ ಸಂಚಿಕೆಯಲ್ಲಿ ಪ್ರಕಟಿತ )

ಯಾಕೋ ಲೈಫು ಬೋರು. ಮಕ್ಕಳಿಗೆ ಮಾಡೋ ಕರ್ತವ್ಯ ಮಾಡಿ ಆಗಿದೆ. ದುಡಿದೂ ದುಡಿದೂ ಸಾಕಾಗಿದೆ. ಎಲ್ಲೋ ಏಕಾಂಗಿ ಭಾವ. ಮನೆಯಲ್ಲಿ ಅವಳನ್ನು ಕಂಡರೂ ಅಂಥಾ ಸೆಳೆತವಿಲ್ಲ.. ಬದುಕಿನಲ್ಲಿ ಗೆದ್ದೆ ಅಂದುಕೊಂಡವರಿಗೂ ಮುಂದೆಲ್ಲಾ ಖಾಲಿ ಖಾಲಿ. ಏನಪ್ಪಾ ಮಾಡೋದು? ಮನಸ್ಸು  ಗೊಂದಲದಲ್ಲಿದೆ. ಹೊಸತರ ಹುಡುಕಾಟದಲ್ಲಿದೆ. ಮಧ್ಯವಯಸ್ಸಿನ ತಲ್ಲಣ ಅಂದರೆ ಇದುವೇ..

ಎಲ್ಲ ರೀತಿಯಲ್ಲೂ ಡೀಸೆಂಟ್ ಆಗಿದ್ದ ವ್ಯಕ್ತಿ ಆತ. ಆದರೂ ಇದ್ದಕ್ಕಿದ್ದ ಹಾಗೆ ಅದೇಕೋ ಆಫೀಸ್‌ನಲ್ಲಿ ಇರೋ ಇಪ್ಪತ್ತು ಚಿಲ್ರೆ ವಯಸ್ಸಿನ ಹುಡುಗಿಯರ ಜೊತೆ ಕಾರಣವಿಲ್ಲದೇ ಮಾತಾಡುತ್ತಿರಬೇಕೆಂಬ ಚಪಲ. ಹೆಣ್ಣುಮಕ್ಕಳಿಗೆಲ್ಲ ಏನೋ ಸಹಾಯ ಮಾಡಿ ಒಳ್ಳೆಯವನು ಅನಿಸಿಕೊಳ್ಳುವ ಹಂಬಲ. ಸಹೋದ್ಯೋಗಿಗಳಿಗೆಲ್ಲ  ‘ಈ ಮನುಷ್ಯನಿಗೆ ಈಗ್ಯಾಕಪ್ಪಾ ಹೀಗಾಯ್ತು?’ ಅಂತ ಕುತೂಹಲ. ಒಳಗೊಳಗೇ ಅವರ ಬಗ್ಗೆ ಹರಡಿಕೊಳ್ಳುವ ಕುಹಕ ನಗು…
ದಿನವೂ ಬಸ್ಸಿಗೆ ಹತ್ತುವ ಆಕೆಯದು ಇನ್ನೊಂದು ಟೈಪು. ವಯಸ್ಸು ಐವತ್ತು. ಆದರೂ ಇಪ್ಪತ್ತರ ಹುಡುಗಿಯರು ಹಾಕೋ ಡ್ರೆಸ್ಸು. ಗಾಢ ಲಿಪ್‌ಸ್ಟಿಕ್ಕು, ಹೈಹೀಲ್ಡ್ ಚಪ್ಪಲ್ಲು, ನೆರಳಲ್ಲಿಯೂ ಕಣ್ಣಿಗೆ ಗಾಗಲ್ಸ್… ವಯಸ್ಸು ಕಡಿಮೆ ಕಾಣಲಿ ಅನ್ನೋ ತವಕವಾ? ಬಸ್ಸಿನಲ್ಲಿಯೋ ಆಫೀಸಿನಲ್ಲಿಯೋ ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಬಯಕೆಯಾ? ಆಕೆಗೇ ಗೊತ್ತು..
ಪ್ರಾಯ ನಲುವತ್ತು ದಾಟಿತೋ, ಹೀಗೊಂದು ಬದಲಾವಣೆ ಕೆಲವರ ಮನವನ್ನಾದರೂ ಹೊಗುವುದುಂಟು. ಬದುಕಿನ ಗತಿಯನ್ನೇ ಅಲುಗಾಡಿಸಬಲ್ಲ ಸ್ಥಿತ್ಯಂತರವೇ ಇದಕ್ಕೆ ಕಾರಣವಾಗಿರಬಹುದು. ಏನೂ ಇಲ್ಲದ ನಿಂತ ನೀರಿನ ಸ್ಥಿತಿಯೂ ಇರಬಹುದು. ಯಾವ ಕಾರಣವೂ ಇಲ್ಲದೆ ಇರಬಹುದು. ನೆಪ ಇರಲಿ, ಇಲ್ಲದಿರಲಿ ಮಧ್ಯವಯಸ್ಕರನ್ನು ಕಾಡುವ ಈ ಏರುಪೇರುಗಳಿಗೆ ಮನಃಶಾಸ್ತ್ರೀಯವಾಗಿ ‘ಮಿಡ್‌ಲೈಫ್ ಕ್ರೈಸಿಸ್’ ಎಂಬ ಹೆಸರಿದೆ. ಅಮೆರಿಕದಂತಹ ಪಾಶ್ಚಾತ್ಯ ದೇಶಗಳಲ್ಲಿ ಈ ತಲ್ಲಣ ಕಾಣುವುದು ಹೆಚ್ಚಾದರೂ ಬದಲಾದ ಭಾರತೀಯ ಜೀವನ ಶೈಲಿಗೋ ಏನೋ ಇಲ್ಲಿಯೂ ಇದು ಕಾಣಿಸಿಕೊಳ್ಳುತ್ತಿರುವುದು ಸುಳ್ಳಲ್ಲ.
ಬೋರೋ ಬೋರು
ಸಾಮಾನ್ಯವಾಗಿ ೪೦ರಿಂದ ೬೫ ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಕಂಡು ಬರೋ ಸಮಸ್ಯೆ ಇದು. ಫಲವತ್ತಾದ ಬದುಕೋ ಅಥವಾ ನೀರಸವೋ, ೪೦ ವರ್ಷಗಳ ಕಾಲ ಬಾಳಿಯಾಗಿರುತ್ತದೆ. ಅದೇಕೋ ಏನೋ, ಇದ್ದಕ್ಕಿದ್ದ ಹಾಗೆ ‘ಲೈಫು ಇಷ್ಟೇನಾ?’ ಅನ್ನಿಸಬಹುದು. ನಿತ್ಯವೂ ಅದೇ ಮನೆ, ಅದೇ ಸಂಸಾರ, ಅದೇ ತಾಪತ್ರಯಗಳು… ಓಹ್, ಇದು ಮುಗಿಯುವುದೇ ಇಲ್ಲವಾ ಅನ್ನಿಸಬಹುದು. ಮಕ್ಕಳೂ ಮನಸ್ಸಿಗೆ ಮುದ ಕೊಡುವ ಬಾಲಲೀಲೆಗಳನ್ನು ದಾಟಿ ಹದಿಹರೆಯದ ಸ್ವಪ್ನಲೋಕಕ್ಕೆ ಹೊಕ್ಕಿರುವಾಗ ಹೆತ್ತವರಿಗೆ ಕನಸಿನ ಬರ… ಆಫೀಸಿನಲ್ಲೂ ಅದೇ ಕೆಲಸ, ಅದೇ ಬಾಸು, ಅದೇ ಕಲೀಗ್ಸ್… ಊಹ್, ರೇಜಿಗೆ ಹುಟ್ಟಿಸದಿರುತ್ತದಾ? ದಿನಕ್ಕೆ ೧೬ ಗಂಟೆ ದುಡಿದ ಐಟಿ ವ್ಯಕ್ತಿಗಂತೂ ಮೈಮನಕ್ಕೆಲ್ಲ ಅದೇನೋ ಸುಸ್ತು ಆವರಿಸಬಹುದು. ವೃತ್ತಿಯಲ್ಲಿ ಮೇಲುಮೇಲಕ್ಕೇರುತ್ತಾ ಹೋಗಿ ಸ್ವಂತದ್ದೊಂದು ನರ್ಸಿಂಗ್ ಹೋಂ ಇಟ್ಟುಕೊಂಡು ಚೆನ್ನಾಗಿರುವ ವೈದ್ಯರಿಗೂ, ಬಿಸ್ನೆಸ್‌ನಲ್ಲಿ ಲಾಭವನ್ನುಂಡು ಸಂತೃಪ್ತಿಯ ತುರೀಯಾವಸ್ಥೆಗೆ ತಲುಪಿರುವ ವ್ಯವಹಾರಸ್ಥನಿಗೂ ಮುಂದೇನೆಂದು ಗೊತ್ತಾಗದೆ ಖಾಲಿ ಖಾಲಿ ಅನ್ನಿಸಬಹುದು. ಬೆಂಬತ್ತಲು ಹೊಸ ಗುರಿ ಏನೂ ಇಲ್ಲದೇ ಹೋಯಿತಾ?
ಹೆತ್ತವರ ಇಲ್ಲವಾಗುವಿಕೆಯಿಂದ ಒಳಗೊಳಗೇ ತಬ್ಬಲಿತನವೂ ಕಾಡಬಹುದು. ಓದು, ಉದ್ಯೋಗ, ಸ್ವಂತ ಸಂಸಾರ ಅನ್ನುತ್ತ ಮಕ್ಕಳೆಲ್ಲಾ  ದೂರಾದರೆ ಎಲ್ಲವೂ ಬಿಕೋ ಅನ್ನಿಸುವ ‘ಎಂಪ್ಟಿ ನೆಸ್ಟ್ ಸಿಂಡ್ರೋಮ್’ ಮನಸ್ಸನ್ನೇ ಬಗೆಯಬಹುದು. ತನಗಿಷ್ಟು ಪ್ರಾಯವಾದರೂ ತಾನು ಇನ್ನೂ ಏನನ್ನೂ ಸಾಸಿಲ್ಲವಲ್ಲಾ ಎಂಬ ತಳಮಳ ಶುರುವಾಗಿ ಏನೋ ಹೊಸತು ಮಾಡಬೇಕೆನ್ನಿಸಬಹುದು. ಯಾಕೋ ತನ್ನ ಜೀವನ, ಬದುಕಿನ ರೀತಿ ಯಾವುದೂ ಸರಿಯಿಲ್ಲ ಎಂಬ ಅಸಮಾಧಾನ ಮೊಳಕೆಯೊಡೆಯಬಹುದು. ಇಂಥದ್ದರಲ್ಲಿ ಯಾವುದಾದರೊಂದು ಅನಿಸಿಕೆ ಕಾಡುವುದಕ್ಕೆ ಶುರುವಾಯಿತಾ, ಆ ವ್ಯಕ್ತಿ ಅದನ್ನು ಮೀರಲು ವಿಚಿತ್ರ ಪ್ರಯತ್ನಗಳನ್ನೂ ಮಾಡಬಹುದು. ಸುತ್ತಲಿನವರೆಲ್ಲ ಬಿಟ್ಟ ಕಣ್ಣುಗಳಿಂದ ನೋಡುವಂತಾಗುವುದೂ ಹೀಗಾದಾಗಲೇ..
ಗಂಡಸ್ರಿಗೊಂಥರಾ…
‘ಇದು ವಯೋಸಂಬಂ ಸಮಸ್ಯೆಯಾದರೂ ಹಾರ್ಮೋನ್‌ನಿಂದ ಉಂಟಾಗುವ ಸಮಸ್ಯೆಯೇನೂ ಇಲ್ಲಿ ಕಾಣುವುದಿಲ್ಲ. ತನ್ನ ವಯಸ್ಸಿನಿಂದಾಗಿ ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ನಿಂದ ಬಳಲುತ್ತಿರುವವರು ಇದ್ದಕ್ಕಿದ್ದಂತೆ ಸುಪೀರಿಯರ್ ರೀತಿಯಲ್ಲಿ ಬಿಹೇವ್ ಮಾಡಬಹುದು. ಗಂಡುಮಕ್ಕಳ ಆಂಡ್ರೋಪಾಸ್, ಹೆಣ್ಣುಮಕ್ಕಳ ಮೆನೋಪಾಸ್ ಸಮಸ್ಯೆಗಳನ್ನೂ ಇದರಲ್ಲಿ ಸೇರಿಸುವುದುಂಟು’ ಅಂತಾರೆ ಮನೋವೈದ್ಯ ಡಾ. ಪಿ.ವಿ.ಭಂಡಾರಿ.
೪೦-೪೫ರ ವೇಳೆಗೆ ಹೆಣ್ಣುಮಕ್ಕಳು ಮೆನೋಪಾಸ್‌ನಿಂದ ಬಳಲುವುದು ನಮಗೆಲ್ಲ ಗೊತ್ತು. ಮುಟ್ಟು ನಿಲ್ಲುವ ಈ ಹೊತ್ತು ಆಕೆಯನ್ನು ಕಾಡುವ ಅಭದ್ರತೆ, ಒಂದು ಸುಕ್ಕು ಮುಖದಲ್ಲಿ ಕಾಣಿಸಿದರೂ ಆಗುವ ಖಿನ್ನತೆ ಅವಳಿಗೆ ಮಾತ್ರ ಗೊತ್ತು. ವಿಶೇಷವೆಂದರೆ ಇದೇ ಹೊತ್ತಿನಲ್ಲಿ ಪುರುಷರಲ್ಲಿಯೂ ಮೇಲ್ ಮೆನೋಪಾಸ್ ಅಥವಾ ‘ಆಂಡ್ರೋಪಾಸ್’ ಕಾಣಿಸಿಕೊಳ್ಳುತ್ತದೆ. ಸ್ತ್ರೀಯರಲ್ಲಾಗುವಂತೆ ಸಂತಾನೋತ್ಪತ್ತಿಯ ಸಾಧ್ಯತೆಗಳು ಇಲ್ಲಿ ಒಮ್ಮೆಲೇ ಸ್ಥಗಿತಗೊಳ್ಳುವುದಿಲ್ಲವಾದರೂ ‘ಟೆಸ್ಟಿಸ್ಟಿರೋನ್’ ಹಾರ್ಮೋನ್ ಉತ್ಪಾದನೆ ನಿಧಾನವಾಗಿ ಕಡಿಮೆಯಾಗುವುದರಿಂದ ತನ್ನ ಶಕ್ತಿಯೂ ಕುಂದುತ್ತಿರುವಂತೆ ಪುರುಷರಿಗೆ ಅನಿಸುವುದುಂಟು. ಈ ಹಂತದಲ್ಲೇ ಎಲ್ಲೋ ಮುದುಕನಾದೆನಾ ಅಂತಂದುಕೊಳ್ಳುತ್ತಲೇ ತನ್ನ ಬೊಕ್ಕವಾಗುತ್ತಿರುವ ತಲೆಯನ್ನು ಮರೆಮಾಚುವ ಪ್ರಯತ್ನ ಮಾಡುತ್ತಾರವರು. ಬಿಳಿಗೂದಲನ್ನು ಕಪ್ಪು ಮಾಡಿಕೊಳ್ಳುತ್ತಾರೆ. ತನ್ನ ಸಂಗಾತಿಯ ಸಂತಾನೋತ್ಪತ್ತಿಯ ಸಾಧ್ಯತೆ ಕಡಿಮೆಯಾಯೆತೆನ್ನುವಾಗ ತನ್ನ ಈ ಅವಕಾಶ ಹೆಚ್ಚುಳ್ಳ ಎಳೆಯ ವಯಸ್ಸಿನ ಸ್ತ್ರೀಯರತ್ತ ಮನಸ್ಸು ಆಸಕ್ತವಾಗುತ್ತದಂತೆ. ಅದಕ್ಕೇ ಮಗಳ ವಯಸ್ಸಿನ ಹುಡುಗಿಯ ಜೊತೆ ಅಫೇರ್ ಇಟ್ಟುಕೊಳ್ಳಬೇಕೆನ್ನಿಸುವುದು. ಮಹಿಳೆಯರೂ ತಮ್ಮಿಂದ ಕಿರಿಯ ವಯಸ್ಸಿನ ಪುರುಷನ ಜೊತೆ ಸಂಬಂಧ ಹೊಂದಬಹುದು. ಸ್ತ್ರೀ-ಪುರುಷರಲ್ಲಿ ಸಮಾನವಾಗಿಯೇ ವಿವಾಹೇತರ ಸಂಬಂಧಗಳು ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಹೊರ ಬರೋದು ಹೇಗೆ?
ಇದೊಂದು ಮಹಾ ಬಿಕ್ಕಟ್ಟೇನಲ್ಲ. ಆದರೆ ತಳಮಳಿಸುವ ಜೀವಕ್ಕೆ ಈ ತೊಂದರೆ ದೊಡ್ಡದೇ. ಆದರೆ ಈ ಸಮಸ್ಯೆಯನ್ನೇ ಬೃಹತ್ತಾಗಿಸಿಕೊಂಡು ಖಿನ್ನತೆಯ ಆಳಕ್ಕೆ ತಮ್ಮನ್ನು ತಾವು ತಳ್ಳಿಕೊಳ್ಳುವುದು ಮಾತ್ರ ತರವಲ್ಲ. ಯಾಕೋ ಬೋರಾಯ್ತು ಅನ್ನುತ್ತಾ ಏನೂ ತೊಂದರೆ ಇಲ್ಲದ ಕೆಲಸವನ್ನು ಬಿಟ್ಟು ಎದ್ದು ಬರುವುದೂ ಮೂರ್ಖತನವೇ. ತಿಳಿಯಾಗಿರುವ ಸಂಸಾರದ ನೆಮ್ಮದಿಯನ್ನು ಕದಡುವುದೂ ಸಲ್ಲ.
ಕೆಲವರು ಬದುಕಿನಲ್ಲಿ ಏಕತಾನತೆ ಕಂಡುಬಂತು ಅಂದಾಕ್ಷಣ ಹೊಸ ಹೊಸ ಕೆಲಸಗಳಿಗೆ ಕೈಹಾಕುವುದೋ ಅಥವಾ ಮರೆತುಹೋದ ಹಳೆಯ ಹವ್ಯಾಸವನ್ನು ಮತ್ತೆ ನೆನಪಿಸಿಕೊಂಡು ಅತ್ತ ಹೊರಡುವುದೋ ಹೀಗೆ ಏನಾದರೊಂದು ಮಾಡುತ್ತಾರೆ. ಬಿಕ್ಕಟ್ಟು ಕಾಡುತ್ತಿರುವುದು ಸ್ಪಷ್ಟವಾದರೆ ಅದರ ಕಾರಣ ತಿಳಿದುಕೊಂಡು ಅದನ್ನು ಪರಿಹರಿಸುವುದು ವಿವೇಕಯುತ ಮಾರ್ಗ. ಕೌಟುಂಬಿಕ ಸಂಬಂಧದ ಎಳೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿದರೆ ಭಾವನಾತ್ಮಕ ಭದ್ರತೆ ಸಿಗುವುದಂತೂ ಖಚಿತ. ಏಕಾಂಗಿತನವನ್ನು ದೂರಾಗಿಸುವ ಮಾರ್ಗಗಳಂತೂ ಹಲವು ಇವೆ.
ಬದುಕಿನಲ್ಲಿ ಬಣ್ಣವಿಲ್ಲ ಅನಿಸಿದಾಗ ಮೂಡುವ ಭಾವ ಈ ಕ್ರೈಸಿಸ್. ರಂಗಿಲ್ಲದೆ ಬರಡಾಗುವ ಬದುಕಿಗೆ ಹೊಸ ಬಣ್ಣ ಹಚ್ಚಬೇಕಾದವರು ನಾವೇ. ಅದು ಢಾಳಾಗಿ ಅಸಹಜವೆನಿಸದಂತೆ ಎಚ್ಚರವಹಿಸಬೇಕಾದವರೂ ನಾವೇ.

ಹದಿಹರೆಯ, ಅಡಲ್ಟ್‌ಹುಡ್, ಮುದಿತನಗಳಂತೆ ಮಿಡ್‌ಲೈಫ್ ಹಂತ ಕೂಡ ಒಂದು ಸ್ಥಿತ್ಯಂತರದ ಹಂತ. ಇದಕ್ಕೆ ಯಾವುದೋ ಹಾರ್ಮೋನ್ ಏರುಪೇರು ಕಾರಣವಲ್ಲ. ವಯಸ್ಸಿನ ಕಾರಣದಿಂದ ಕೆಲವೊಮ್ಮೆ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಬದಲಾವಣೆ ಇದು. ಹೆಣ್ಣುಮಕ್ಕಳು ಇನ್ನಷ್ಟು ಸಣ್ಣ ವಯಸ್ಸಿನವರಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಬಹುದು, ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳಲೂ ಇಷ್ಟಪಡಬಹುದು. ಅದೇ ರೀತಿ ಪುರುಷರೂ ತಮ್ಮ  ಮ್ಯಾನ್ಲಿ ಗುಣಗಳನ್ನು ಆಕ್ರಮಣಕಾರಿಯಾಗಿ ತೋರಿಸಿಕೊಳ್ಳಲು ಇಷ್ಟಪಡಬಹುದು.
ಪುರುಷರಿಗೆ ಇಂತಹ ಸಮಸ್ಯೆಗಳು, ಏಕತಾನತೆ ಕಾಡಿದಾಗ ಬೇರೆಡೆ ಗಮನ ಹರಿಸಲು ಕುಡಿತದಂತಹ ಮಾರ್ಗಗಳಿವೆ. ಆದರೆ ಸ್ತ್ರೀಯರಿಗೆ ಇಂತಹ ಪರ್ಯಾಯಗಳಿಲ್ಲ. ಅಂಥವರನ್ನು ಇದು ಹೆಚ್ಚು ಕಾಡಬಹುದು. ನಿತ್ಯವೂ ಒತ್ತಡದಲ್ಲಿ ಬದುಕುವವರಿಗೆ ಈ ಕ್ರೈಸಿಸ್ ಹೆಚ್ಚಾಗಿ ಎದುರಾಗಬಹುದು. ಕಾಡುತ್ತಿರುವ ಸಮಸ್ಯೆ, ಅದರ ಕಾರಣವನ್ನು ಗುರುತಿಸಿದರೆ ಅದಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದೂ ಕಷ್ಟವೇನಲ್ಲ.
-ಡಾ| ಪಿ.ವಿ.ಭಂಡಾರಿ, ಮನೋವೈದ್ಯರು,

ಮಿಡ್‌ಲೈಫ್ ಕ್ರೈಸಿಸ್ ಅನ್ನುವ ಪದವನ್ನು ಮೊದಲ ಬಾರಿಗೆ ಬಳಸಿದ್ದು ಎಲಿಯಟ್ ಜಾಕ್ವೆಸ್ ಎಂಬ ಕೆನಡಿಯನ್ ಮನಃಶಾಸ್ತ್ರಜ್ಞ. ೧೯೬೫ರಲ್ಲಿ  ಪಾಶ್ಚಾತ್ಯ ಜೀವನರೀತಿಯನ್ನು ವಿಶ್ಲೇಷಿಸುವ ವೇಳೆ ಆತ ಬಳಸಿದ ಶಬ್ದ ಇದು. ಸಿಗ್ಮಂಡ್ ಫ್ರಾಯ್ಡ್ ಕೂಡ ಮಧ್ಯವಯಸ್ಸಿನಲ್ಲಿ ಎಲ್ಲರ ಮನಸ್ಸನ್ನೂ ಸಾವಿನ ಭಯ ಸೆಳೆಯುತ್ತದೆ ಎಂದಿದ್ದ.
ಎರಿಕ್ ಎರಿಕ್‌ಸನ್ ಎಂಬ ಮನಃಶಾಸ್ತ್ರಜ್ಞ ಮನೋವೈಜ್ಞಾನಿಕ ರೀತಿಯ ಲೈಫ್ ಸೈಕಲ್ ವಿಂಗಡಣೆಯ ವೇಳೆ ಈ ಪರಿಕಲ್ಪನೆಯನ್ನು ಸ್ಥೂಲವಾಗಿ ಹೇಳಿದ್ದ. ಆತನ ಪ್ರಕಾರ, ಬದುಕಿನ ಏಳನೇ ಹಂತದಲ್ಲಿ ಜನರು ತಮ್ಮ ಜೀವನ, ತಮ್ಮ ಬದುಕಿನ ಉದ್ದೇಶ ಇತ್ಯಾದಿಗಳಿಗೆ ಹೊಸ ಅರ್ಥವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದುವರೆಗೂ ತಾನು ಏನೂ ಸಾಸಿಲ್ಲ ಎಂಬರ್ಥದ ಅತೃಪ್ತಿಗಳು ವ್ಯಕ್ತಿಯನ್ನು ಕಾಡತೊಡಗಿ ಇದ್ದಕ್ಕಿದ್ದಂತೆ ತನ್ನ ಬದುಕಿಗೆ ಒಂದು ಹೊಸ ಅರ್ಥವನ್ನು ತುಂಬಿಕೊಳ್ಳುವ ಪ್ರಯತ್ನವೆಂಬಂತೆ ಹೊಸದಾದ ಯಾವುದೋ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಕಾರ್ಲ್ ಜಂಗ್ ಎಂಬ ಮನಃಶಾಸ್ತ್ರಜ್ಞ  ಈ ಪರಿಕಲ್ಪನೆಯನ್ನು ವಿವರಿಸುವುದಕ್ಕೆ ಪ್ರಯತ್ನಿಸಿದ. ೪೦ರಿಂದ ೬೦ರ ವಯಸ್ಸಿನ ವ್ಯಕ್ತಿಗಳಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಯೇ ‘ಮಿಡ್‌ಲೈಫ್ ಕ್ರೈಸಿಸ್’ ಎಂದು ಆತ ವ್ಯಾಖ್ಯಾನಿಸಿದ. ವ್ಯಕ್ತಿತ್ವದ ಮಾಗುವಿಕೆಯ ಹಂತಗಳಲ್ಲಿ ಇದೂ ಒಂದು ಎಂದು ಆತ ಹೇಳಿದ.

ಕ್ಯಾಂಪಸ್ ಫ್ಯಾಷನ್

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಇದೊಂದು ಫ್ಯಾಷನ್ ಹಬ್. ಯೌವನ ತುಳುಕುವ ಸುಂದರ, ಸುಂದರಿಯರಿಂದ ಇಲ್ಲಿ ನಿತ್ಯವೂ ಫ್ಯಾಷನ್ ಪೆರೇಡ್. ಅವರಿಗೆ ಹೊಸತನ್ನು ಹಾಕಿದ ಸಂಭ್ರಮವಾದರೆ ನೋಡುವ ಕಂಗಳಿಗೆ ಎಲ್ಲೋ ತೇಲಿಹೋದ ಅನುಭವ. ಕಾಲೇಜು ಕ್ಯಾಂಪಸ್ ಅಂದರೆ ಹಾಗೆಯೇ, ಇಲ್ಲಿ ನಿತ್ಯವೂ ಫ್ಯಾಷನ್ ಮೇಳ.
———-
ಅಬ್ಬಬ್ಬಾ, ಫ್ಯಾಷನ್ ಅಂದ್ರೆ ಇದು ಕಣ್ರೀ… ಇಂಥದೊಂದು ಉದ್ಗಾರ ನಿಮ್ಮ ಬಾಯಿಂದ ಹೊರಬಿತ್ತಾ? ಹಾಗಿದ್ದರೆ ಖಂಡಿತಾ ಅದು ಕಾಲೇಜು ಕ್ಯಾಂಪಸ್ಸೇ ಇರಬೇಕು. ಕಾಲೇಜು ವಿದ್ಯಾರ್ಥಿಗಳೇ ಹಾಗೆ, ಹೊಸ ಫ್ಯಾಷನ್‌ಗೆ ತಕ್ಷಣ ಅಪ್‌ಡೇಟ್ ಆಗ್ತಾರೆ. ತಮಗೆ ಚೆಂದ ಕಾಣೋದನ್ನು ಇನ್ನೂ ಚೆಂದಕೆ ತೊಟ್ಟುಕೊಳ್ಳುತ್ತಾರೆ. ಅಲ್ಲಿಂದಲೇ ಟ್ರೆಂಡ್ ಒಂದು ಶುರುವಾಗಿಯೂಬಿಡುತ್ತದೆ.
ಉಡುಗೆ ಇರಲಿ, ಕೈಕಾಲುಗಳಿಗೆ ಹಾಕೋ ಆಕ್ಸೆಸರಿಗಳೇ ಇರಲಿ, ಎಲ್ಲದರಲ್ಲಿಯೂ ಇವರಲ್ಲೊಂದು ಹೊಸತು. ಈ ಹೊಸ ಶೈಕ್ಷಣಿಕ ವರ್ಷದಲ್ಲಿಯೂ ಕ್ಯಾಂಪಸ್‌ಗಳಲ್ಲಿ ಈ ನಾವೀನ್ಯದ ಝಲಕ್ ಕಾಣಿಸಿಕೊಳ್ಳುತ್ತಲೇ ಇದೆ.
ಟ್ರೆಂಡಿ ಕ್ಯಾಶುವಲ್ಸ್
ಕ್ಲಾಸ್‌ಗೆ ಬಂದು ಪಾಠ ಕೇಳೋದಕ್ಕೆ, ಅತ್ತಿತ್ತ ಅಡ್ಡಾಡೋದಕ್ಕೆ ಎಲ್ಲಕ್ಕೂ ಜೀನ್ಸ್ ತುಂಬಾ ಕಂಫರ್ಟೆಬಲ್. ಅದಕ್ಕೇ ಕಾಲೇಜು ಹುಡುಗ, ಹುಡುಗಿಯರ ಮೊದಲ ವೋಟು ಜೀನ್ಸ್‌ಗೇ. ಇದಕ್ಕೆ ತಕ್ಕ ಟಾಪ್ ಅಥವಾ ಟಿ-ಶರ್ಟ್ ಸಿಕ್ಕಿಸಿಕೊಂಡು ಬಂದರೆ ಸೈ.   ಆದರೆ, ಕೆಲವು ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಮಾಡಿರೋದರಿಂದ ಇದಕ್ಕೆ ಕೊಂಚ ತೊಡಕು. ಆದರೂ ಜೀನ್ಸ್‌ಗೆ ಪರ್ಯಾಯವಾದ ಲೆಗ್ಗಿಂಗ್ಸ್ ಇದೇ ಇದೆ ಹುಡುಗಿಯರಿಗೆ. ಇದಕ್ಕೆ ಚೂಡಿದಾರ್ ಟಾಪ್ ಕೂಡ ಹಾಕಬಹುದಾದ್ದರಿಂದ ಮಿಕ್ಸ್ ಅಂಡ್ ಮ್ಯಾಚ್ ಮಾಡೋದೂ ಸುಲಭ.
ಲೆಗ್ಗಿಂಗ್ಸ್‌ನಂತೆಯೇ ಕಾಣುವ ಜೆಗ್ಗಿಂಗ್ಸ್ ಈಗ ಕ್ಯಾಂಪಸ್‌ಗಳಲ್ಲಿ  ಫೇಮಸ್. ೨೦೧೦ರಲ್ಲಿ ಕ್ಯಾಂಪಸ್‌ಗಳಿಗೆ ಪರಿಚಯಗೊಂಡ ಈ ದಿರಿಸು ಈ ವರ್ಷವಂತೂ ಇನ್ನಷ್ಟು ಪ್ರಚಲಿತಗೊಂಡಿದೆ. ಜೀನ್ಸ್ ನಂತೆ ಕಾಣುವ ಡಿಸೈನ್ ಹೊಂದಿರುವ ಈ ಬಟ್ಟೆ ಹುಡುಗಿಯರಿಗೆ ಹಾಟ್ ಫೇವರಿಟ್.
ಹುಡುಗರೂ ಜೀನ್ಸ್ ಬಿಟ್ಟರೆ ಬೇರೇನೂ ಇಲ್ಲ ಅಂತ ಕುಳಿತುಕೊಳ್ಳೋರಲ್ಲ. ಫಾರ್ಮಲ್ಸ್‌ನಲ್ಲಿ ಸ್ವಲ್ಪ ಫ್ಯಾಷನೇಟ್ ಆಗಿರೋ ಟ್ರೆಂಡ್ ಅನ್ನು ಇವರೆಲ್ಲ ಕಂಡುಕೊಂಡಿದ್ದಾರೆ. ಜೊತೆಗೆ ಕೌಬಾಯ್ ಶೂಸ್ ರೀತಿ ಕಾಣಿಸೋ ಪಠಾಣ್ ಶೂಸ್‌ನ್ನೂ ತೊಟ್ಟುಕೊಂಡರೆ ಆಹ್, ಲುಕ್ಕೋ ಲುಕ್ಕು. ‘ಲೋ ವೇಸ್ಟ್  ಪ್ಯಾಂಟ್ ಜೊತೆಗೆ ಶಾರ್ಟ್ ಟಿ-ಶರ್ಟ್ ಧರಿಸೋದಂತೂ ಈಗ ಮಾಮೂಲು. ಹುಡುಗರೂ ಹೀಗೇ ಹಾಕ್ಕೋತಾರೆ. ಹುಡುಗಿಯರು ಎಷ್ಟೇ ಫ್ಯಾಷನೇಬಲ್ ಆಗಿದ್ದರೂ ಫಾರ್ಮಲ್ಸ್ ತೊಟ್ಟು ಡೀಸೆಂಟ್ ಆಗಿರೋ ಹುಡುಗರನ್ನೇ ಇಷ್ಟಪಡ್ತಾರೆ ಅನ್ನೋ ಕಾರಣಕ್ಕೆ ಹುಡುಗರೂ ಈಗ ಫಾರ್ಮಲ್ಸ್‌ನೇ ಇಷ್ಟಪಡ್ತಾರೆ’ ಅಂತಾರೆ ಬೆಂಗಳೂರಿನ ವಿದ್ಯಾರ್ಥಿ ಶರತ್ ಶರ್ಮಾ.
ಭರ್ಜರಿ ಪಾರ್ಟಿವೇರ್
ಕಾಲೇಜಿನಲ್ಲೊಂದು ಬಗೆಯ ಡ್ರೆಸ್ಸಾದರೆ ಇನ್ನಿತರ ಉದ್ದೇಶಕ್ಕೆ ಬೇರೆಯದೇ ಔಟ್‌ಫಿಟ್. ಪಬ್, ಸಿನಿಮಾಗಳಿಗೆ, ರಜಾದಿನಗಳಂದು ಹಾಕೋದಕ್ಕೆ ಶಾರ್ಟ್ಸ್ ಅಥವಾ ಥ್ರೀ ಫರ್ತ್ ಇವರ ಆಯ್ಕೆ. ಪಾರ್ಟಿಗಳಿಗಂತೂ ಹುಡುಗಿಯರ ಮೊದಲ ಆಯ್ಕೆ ಶಾರ್ಟ್ ಸ್ಕಟ್ ಮತ್ತು ಟಾಪ್. ‘ಕೊಂಚ ಚಳಿ ಇರೋವಾಗ ಸ್ಕರ್ಟ್ ಬದಲಾಗಿ ಲೆಗ್ಗಿಂಗ್ಸ್ ಹಾಕ್ಕೊಳೋ ಹುಡ್ಗೀರು ಜೀನ್ಸ್ ಮತ್ತು ಬಾಡಿ ಫಿಟ್ ಟಾಪ್ಸ್ ಹಾಕೋದನ್ನು ಇಷ್ಟಪಡ್ತಾರೆ. ಮಳೆಗಾಲದಲ್ಲಿ ಜಾಕೆಟ್ ಹಾಕೋದು ಸ್ಟೈಲ್‌ನ ಜೊತೆಗೆ ಆರಾಮವಾಗಿಯೂ ಇರುತ್ತೆ’ ಅಂತಾರೆ ಮಾಡೆಲ್ ಟೀನಾ ಪೊನ್ನಪ್ಪ.
ಕಾಲೇಜು ಸಂಬಂ ಕಾರ್‍ಯಕ್ರಮಗಳಿಗಾದರೆ ಫಂಕಿ ಆಕ್ಸೆಸರಿಗಳು ಇವರನ್ನಲಂಕರಿಸುತ್ತವೆ. ಪಾರ್ಟಿಯ ಮಟ್ಟವನ್ನು ನೋಡಿಕೊಂಡು ಅದಕ್ಕೆ ತಕ್ಕ ರೀತಿಯ ಅಲಂಕಾರ ಮಾಡಿಕೊಳ್ಳುತ್ತಾರೆ. ಫಾಸ್ಟ್ರಾಕ್‌ನಂತಹ ಫ್ಯಾನ್ಸಿ ಲುಕ್ ಇರೋ ವಾಚ್‌ಗಳು ಇವರಲ್ಲಿ ಹೆಚ್ಚು ಜನಪ್ರಿಯ. ನೂರು ರುಪಾಯಿಗೆ ಸಿಗೋ ವಾಚ್ ಕಟ್ಟಿಕೊಂಡು ಗಮನಸೆಳೆಯುವಂತೆ ಸಿಂಗರಿಸಿಕೊಳ್ಳಲೂ ಇವರಿಗೆ ಗೊತ್ತು. ಜೊತೆಗೆ ಹೈಹೀಲ್ಡ್ ಚಪ್ಪಲಿಯಂತೂ ಇದ್ದೇ ಇರುತ್ತದೆ.
ಬಗೆ ಬಗೆ ಆಕ್ಸೆಸರಿ
‘ಮರದಿಂದ ತಯಾರಿಸಿರೋ ಬಗೆಬಗೆಯ ಅಲಂಕಾರ ಸಾಮಗ್ರಿಗಳಿಗೆ ಈಗ ಹೆಚ್ಚು ಡಿಮ್ಯಾಂಡ್. ಕಾಲೇಜು ಹುಡುಗೀರ್‍ಗೆಲ್ಲ ಇದೇ ಫೇವರಿಟ್’ ಅಂತಾರೆ ಬೆಂಗಳೂರಿನ ಎಂಕಾಂ ವಿದ್ಯಾರ್ಥಿನಿ ಪಾವನಾ. ಕತ್ತಿನಲ್ಲಿ ಎದ್ದು ಕಾಣಿಸೋ ಮರದ ನೆಕ್‌ಪೀಸ್, ಕಿವಿ, ಕೈಗಳಿಗೂ ಸೂಕ್ಷ್ಮ ಕೆತ್ತನೆಯ ಮರದ ಆಭರಣಗಳು ಇವರ ಸಂಗ್ರಹದಲ್ಲಿ ಇದ್ದೇ ಇರುತ್ತದೆ. ಜೊತೆಗೆ ಒಂದೇ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದೂ ಈಗಿನ ಟ್ರೆಂಡ್. ಒಂದೇ ಕಾಲಿಗೆ ಟೋ ರಿಂಗ್ ಹಾಕಿಕೊಳ್ಳುವುದು ಹುಡುಗಿಯರ ಸ್ಟೈಲ್ ಆದರೆ ಒಂದೇ ಕಿವಿಗೆ ಪುಟ್ಟ ಓಲೆ ಧರಿಸಿಕೊಳ್ಳುವುದು ಹುಡುಗರ ಫ್ಯಾಷನ್.
ಕಾಲೇಜು ಆವರಣಕ್ಕೆ ಬಗೆಬಗೆ ಗಡ್ಡ ಮಾಡಿಸಿಕೊಳ್ಳೋದು ಕಷ್ಟವಾದರೂ ವಿಧವಿಧ ಹೇರ್‌ಸ್ಟೈಲ್‌ಗಂತೂ ಕೊರತೆ ಇಲ್ಲ. ಸಿನಿಮಾ ಹೀರೋಗಳು ಮಾಡಿದ ಒಂದೊಂದು ಹೇರ್‌ಸ್ಟೈಲ್ ಕೂಡ ಇಲ್ಲಿ ಪ್ರಯೋಗಕ್ಕೆ ಒಳಪಡುತ್ತದೆ. ಸ್ಟೆಪ್ ಕಟ್, ಬಾಬ್, ಪೋನಿ.. ಹೀಗೆ ನೂರೆಂಟು ಸ್ಟೈಲು ಹುಡುಗಿಯರಿಗಿದೆ. ಜೊತೆಗೆ ಕಲರ್ ಹಾಕಿಸಿಕೊಳ್ಳುವವರೂ ಉಂಟು. ಪಾರ್ಟಿಗಳಿಗೆ ಹೀಲ್ಡ್ ಧರಿಸೋ ಹುಡುಗೀರು ಕಾಲೇಜುಗಳಿಗೆ ಫ್ಲ್ಯಾಟ್ಸ್ ಹಾಕ್ತಾರೆ. ಇಷ್ಟೆಲ್ಲ ರೆಡಿ ಆಗಿ ಹೆಗಲಿಗೊಂದು ದೊಡ್ಡ ವ್ಯಾನಿಟಿ ಬ್ಯಾಗ್ ಹಾಕಿಕೊಂಡರೆ ಕಾಲೇಜ್‌ಗೆ ಫುಲ್ ರೆಡಿ. ಹುಡುಗರೂ ಕೈಲೆರಡು ಪುಸ್ತಕ ಹಿಡಿಯೋದಕ್ಕಿಂತ ಬೆನ್ನಿಗೊಂದು ಬ್ಯಾಗ್ ಹಾಕಿ ಬರೋದೇ ಹೆಚ್ಚು.
ಫ್ಯಾಷನಿಷ್ಠರು
ಇವರೆಲ್ಲ ಹೀಗೆ ಹೊಸ ಫ್ಯಾಷನ್ ಮಾಡೋದಕ್ಕೆ ಬಹುತೇಕ ಹಿಂದಿ ಸಿನಿಮಾಗಳೇ ಸೂರ್ತಿ. ಕ್ಯಾಂಪಸ್ ಕಥೆಯುಳ್ಳ ಸಿನಿಮಾಗಳು ಬಂದರೆ ತಕ್ಷಣ ಇವರೂ ಅಪ್‌ಡೇಟ್ ಆಗಿಬಿಡೋದು ಮಾಮೂಲು. ಓದೋದರ ಜೊತೆಗೆ ಫ್ಯಾಷನ್ ಕೂಡ ತಾಜಾ ಆಗಿ ಮೆಂಟೇನ್ ಆಗಿ ನಿರ್ವಹಿಸೋ ಫ್ಯಾಷನಿಷ್ಟರು ಇವರು. ಅದಕ್ಕೇ, ಕ್ಯಾಂಪಸ್‌ನ ರೀತಿಯೇ ಹಾಗೆ. ಇಲ್ಲಿರೋ ವಿದ್ಯಾರ್ಥಿಗಳಂತೆ  ಅಲ್ಲಿ ಬದಲಾಗೋ ಫ್ಯಾಷನ್ ಕೂಡ ತುಂಬಾ ಫಾಸ್ಟ್ ಆಗಿ ಬದಲಾಗುತ್ತೆ. ಇವರೆಲ್ಲರ ಸ್ಟೈಲ್ ಸ್ಟೇಟ್‌ಮೆಂಟ್ ಎಷ್ಟೇ ಬದಲಾದರೂ ತಮಗೆ ಕಂಫರ್ಟೆಬಲ್ ಅನ್ನಿಸುವುದನ್ನೇ ಇವರು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಸ್ಟೈಲ್ ಟ್ರೆಂಡಿಯಾಗಿಯೂ ಕಾಲೇಜು ವಾತಾವರಣಕ್ಕೆ ಪೂರಕವಾಗಿಯೂ ಇರುವಂತೆ ನೋಡಿಕೊಳ್ಳಬಲ್ಲ ಜಾಣರು ಇವರು. ಹೊಸ ಫ್ಯಾಷನ್ ಎಲ್ಲಿದ್ದರೂ ಇವರನ್ನೇ ಅರಸಿ ಬರುವುದು ಇದಕ್ಕೇ.
————–

ಲೆಗ್ಗಿಂಗ್ಸ್‌ನಂತೆಯೇ ಕಾಣೊ ಜೆಗ್ಗಿಂಗ್ಸ್ ಈಗ ಕ್ಯಾಂಪಸ್‌ಗಳಲ್ಲಿ ತುಂಬಾ ಫೇಮಸ್. ಲೆಗ್ಗಿಂಗ್ಸ್, ಜೀನ್ಸ್ ಕೂಡ ಹಾಕ್ತಾರೆ. ವುಡನ್ ನೆಕ್‌ಪೀಸ್, ಬ್ಯಾಂಗಲ್, ಈಯರ್ ರಿಂಗ್ಸ್‌ಗಳೂ ತುಂಬಾ ಬಳಕೆಯಲ್ಲಿವೆ.
ಪಾವನಾ, ಎಂಕಾಂ, ಬೆಂಗಳೂರು ವಿವಿ.
ಕಾಲೇಜಿಗೆ ಕ್ಯಾಶುವಲ್ ಆಗಿ ಹೋಗುವ ಹುಡುಗರೆಲ್ಲಾ ಪಾರ್ಟಿಗಳಿಗೆ ತುಂಬಾ ಗಾರ್ಜಿಯಸ್ ಆಗಿ ಬರ್‍ತಾರೆ. ಕೆಲವು ಕಡೆಗೆ ಫಂಕಿ ಐಟಮ್‌ಗಳನ್ನು ತೊಡೋ ಯೂಥ್ ಇನ್ನು ಕೆಲವು ಕಡೆ ಡೀಸೆಂಟ್ ಆಗಿ ಎಲಿಗೆಂಟ್ ಆಗಿ ಕಾಣೋ ಹಾಗೆ ಬರ್‍ತಾರೆ. ಬ್ಲ್ಯಾಕ್ ಕಲರ್ ಡ್ರೆಸ್ ಕೂಡ ಈಗಿನ ಟ್ರೆಂಡ್.
ಟೀನಾ ಪೊನ್ನಪ್ಪ, ಮಾಡೆಲ್
ಅರ್ಧ ಫಾರ್ಮಲ್, ಅರ್ಧ ಫ್ಯಾಷನೇಬಲ್ ಡ್ರೆಸ್ ಹಾಕೋದು ಈಗಿನ ಟ್ರೆಂಡ್. ಜೀನ್ಸ್‌ಗೆ ಅವಕಾಶವಿಲ್ಲದಿದ್ದರೆ ಫಾರ್ಮಲ್ಸ್‌ನೇ ಹಾಕ್ತಾರೆ. ಟಿ-ಶರ್ಟ್‌ನಲ್ಲಿ  ‘ಸನ್ ಆಫ್ ಅ ರಿಚ್’ ಎಂಬಿತ್ಯಾದಿ ಬಗೆಬಗೆ ಸ್ಲೋಗನ್‌ಗಳಿರೋದನ್ನೇ ಹಾಕ್ಕೊಂಡು ಶೋ ಆಫ್ ಮಾಡೋದು ಹೆಚ್ಚು. ಹುಡುಗರ ಈ ಫ್ಯಾಷನ್‌ನಲ್ಲೆಲ್ಲ ಹೆಣ್ಣುಮಕ್ಕಳನ್ನು ಇಂಪ್ರೆಸ್ ಮಾಡೋ ಐಡಿಯಾ ಇದ್ದೇ ಇರುತ್ತದೆ.
ಶರತ್ ಎಂ. ಶರ್ಮಾ, ಅಂತಿಮ ಪತ್ರಿಕೋದ್ಯಮ ಬಿಎ, ವಿಜಯಾ ಕಾಲೇಜು, ಬೆಂಗಳೂರು.

ನಾಳೆ ನಮ್ಮದೇ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ತಲ್ಲಣಗಳಾ? ನೋ ಚಾನ್ಸ್… ಡೈಲೆಮಾಗಳು ನಮ್ಮನ್ನು ಕಾಡುವುದಿಲ್ಲ. ನಮ್ಮನ್ನು ನಾವು ಜಡ್ಜ್ ಮಾಡಿಕೊಳ್ಳುತ್ತೇವೆ. ನಮ್ಮ ಭವಿಷ್ಯದ ಚಿತ್ರವನ್ನು ನಾವೇ ಬಿಡಿಸಿಕೊಳ್ಳುತ್ತೇವೆ. ಇದಕ್ಕಾಗಿ ನಾವು ಹೆತ್ತವರ ಮಾರ್ಗದರ್ಶನ ಕೇಳುವುದಿಲ್ಲ. ಹಿರಿಯರ ಕಂಡೀಷನ್‌ಗಳಿಗೆ ಒಪ್ಪುವುದೂ ಇಲ್ಲ. ನಮ್ಮ ಹಾದಿ ನಮ್ಮದು ಅನ್ನುತ್ತಿದ್ದಾರೆ ಇಂದಿನ ಯುವಕರು.

ಯೌವನ ಅನ್ನೋದು ಕೊಂಚ ತಡವಾಗಿ ಬಂದಿದ್ದರೆ ಜೀವನದಲ್ಲಿ ಅದರಷ್ಟು ಒಳ್ಳೆಯ ಸ್ಥಿತಿ ಇನ್ನೊಂದಿರಲಿಲ್ಲ ಅನ್ನುತ್ತಾನೆ ಬ್ರಿಟಿಷ್ ರಾಜಕಾರಣಿ ಹರ್ಬರ್ಟ್ ಹೆನ್ರಿ ಆಸ್ಕಿತ್. ಬಹಳಷ್ಟು ಜನರಿಗೆ ಆಗೋದು ಹೀಗೆಯೇ, ತಾರುಣ್ಯ ಬಂದಾಗ ಅದನ್ನು ಸರಿಯಾಗಿ ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ. ತನ್ನನ್ನು ತಾನು ಅಳೆದುಕೊಂಡು ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳುವ ಆ ಸತ್ವಭರಿತ ಸಮಯ ಸುಮ್ಮನೇ ಕೈಜಾರಿಬಿಡುತ್ತದೆ. ಬಳಿಕ ಕೊಂಚ ವಯಸ್ಸಾದ ಮೇಲೆ, ಈಗ ಯೌವನ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವ ಹಳಹಳಿಕೆ.
ಆದರೆ ಇಂದಿನ ಯುವಕರೆಲ್ಲ ಹೀಗಲ್ಲ. ಇವರು ನಾಳೆ ಯೌವನ ಕಳೆದ ಮೇಲೆ ಹೀಗೆಲ್ಲ ಪಶ್ಚಾತ್ತಾಪ ಪಡುವವರೂ ಅಲ್ಲ. ಇಂದೇ, ಈಗಲೇ ನಾಳೆಗೊಂದು ಭದ್ರ ಅಡಿಪಾಯ ಹಾಕಿಕೊಳ್ಳುತ್ತಾರೆ ಈ ಹುಡುಗರು. ತಮ್ಮ ಉದ್ಯೋಗ, ಭವಿಷ್ಯದ ಬಗೆಗೆ ಇವರಿಗೊಂದು ಸ್ಪಷ್ಟ ನಿಲುವು ಇದೆ. ತಮ್ಮ  ಜೀವನದ ತೀರಕ್ಕೆ ತಾವೇ ದೋಣಿಯನ್ನು ಹುಟ್ಟುಹಾಕುತ್ತಾ ಕೊಂಡೊಯ್ಯುವಷ್ಟು ಗಟ್ಟಿಗರೂ ಇವರು ಹೌದು.
ನಮ್ಮ ಕನಸು ನಮ್ಮದು
‘ನಾನು ಓದಿ ಫೈನಾನ್ಸ್ ಮ್ಯಾನೇಜರ್ ಆಗ್ತೇನೆ’ ಹೀಗನ್ನುತ್ತಾನೆ ಉಡುಪಿಯ ೯ನೇ ತರಗತಿಯ ವಿದ್ಯಾರ್ಥಿ ನಿರಂಜನ್ ಮೊಳೆಯಾರ. ಈ ಹುದ್ದೆಗೇರುವುದಕ್ಕೆ ಏನೇನು ಓದಬೇಕು, ಯಾವೆಲ್ಲ ತಯಾರಿ ಮಾಡಬೇಕು ಎಂಬುದು ಎಲ್ಲವೂ ಅವನಿಗೆ ಗೊತ್ತು. ಅಚ್ಚರಿಯೆಂದರೆ ಇದನ್ನೆಲ್ಲ ಆತ ತಿಳಿದುಕೊಂಡದ್ದು ಅಪ್ಪನ ಸಹಾಯದಿಂದಾಗಲೀ, ಅಮ್ಮನ ಸಹಾಯದಿಂದಾಗಲೀ ಅಲ್ಲ. ತಾನೇ ಇಂಟರ್ನೆಟ್‌ನಲ್ಲಿ ಜಾಲಾಡಿದ, ಎಲ್ಲವನ್ನೂ ತಿಳಿದುಕೊಂಡ.
ಹೀಗೇ ತಾವಾಗಿಯೇ ತಮ್ಮ ಮುಂದಿನ ಓದು, ಉದ್ಯೋಗ ಎಲ್ಲವನ್ನೂ ಸ್ಕೆಚ್ ಮಾಡಿಕೊಂಡ ಹುಡುಗರು ಅದೆಷ್ಟೋ. ‘ಇದು ಕಾಂಪಿಟಿಟಿವ್ ವರ್ಲ್ಡ್. ಇಲ್ಲಿ ನಾವು ಮುಂದೆ ಹೋಗ್ಬೇಕಾದ್ರೆ ತುಂಬಾ ಪ್ರಿಪೇರ್ ಆಗಿರ್‍ಬೇಕು, ಪ್ರೀಪ್ಲಾನ್ ಇರ್‍ಬೇಕು. ಅದ್ಕೇ, ನಾನು ಪಿಯುಸಿಲಿ ಇರೋವಾಗ್ಲೇ ಫ್ಯಾಷನ್ ಡಿಸೈನರ್ ಆಗೋದು ಅಂತ ಡಿಸೈಡ್ ಮಾಡ್ಕೊಂಡು ಅದೇ ಫೀಲ್ಡ್‌ಗೆ ಬಂದೆ’ ಅಂತಾರೆ ಬೆಂಗಳೂರಿನ ಫ್ಯಾಷನ್ ಡಿಸೈನರ್ ಸ್ವಾತಿ. ಇವರಿಗೆಲ್ಲ ಕನಸು ಕಟ್ಟಿಕೊಟ್ಟವರಿಲ್ಲ, ಕನಸು ಕಾಣುವುದನ್ನು ಹೇಳಿಕೊಟ್ಟವರಿಲ್ಲ. ಅವರ ಕನಸು ಅವರದೇ.
ನಮ್ಮಿಂದಲೇ ನನಸು
ಇವರೆಲ್ಲ ಬರಿಯ ಕನಸು ಕಾಣೋದಷ್ಟೇ ಅಲ್ಲ, ಅದನ್ನು ನನಸು ಮಾಡಿಕೊಳ್ತಾರೆ ಕೂಡ. ಶಿರಸಿಯಲ್ಲಿರೋ ಗಾಯತ್ರಿ ಇದೀಗಷ್ಟೇ ಪಿಯುಸಿ ಮುಗಿಸಿ ಬಿಕಾಂ ಮೆಟ್ಟಿಲು ಹತ್ತಿದ್ದಾರೆ. ಮುಂದೆ ಸಿಎ ಓದಬೇಕೆಂಬುದು ಅವರಾಸೆ. ಇದಕ್ಕಾಗಿ ಈಗಲೇ ರೆಡಿಯಾಗುತ್ತಿದ್ದಾರೆ ಆಕೆ. ಜೊತೆಗೆ ಟ್ಯಾಲಿ ಇತ್ಯಾದಿ ಅಕೌಂಟಿಂಗ್ ಸಾಫ್ಟ್‌ವೇರ್‌ಗಳ ಕಲಿಕೆಯೂ ನಡೆದಿದೆ. ಹಳ್ಳಿ ಹುಡುಗಿಯಾದರೇನು, ಯಾರ್‍ಯಾರಲ್ಲೋ ಕೇಳಿ ಮುಂದುವರಿಯಬಾರದೆಂದಿದೆಯೇ ಅನ್ನೋದು ಗಾಯತ್ರಿಯ ನಿಲುವು. ಆಕೆಯ ಹಾಗೆಯೇ ಮಾಸ್ಟರ್ ಆಫ್ ಬಿಸ್ನೆಸ್ ಸ್ಟಡೀಸ್ ಓದುತ್ತಿರುವ ಪೃಥ್ವಿಗೂ ಸಿಎ ಜೊತೆಗೆ ಐಸಿಡಬ್ಲ್ಯೂಎ ಮಾಡೋ ಹಂಬಲ. ‘ನಾನು ಕೆಲಸ ಮಾಡುತ್ತಲೇ ಅದನ್ನೂ ಪಾಸ್ ಮಾಡ್ತೇನೆ’ ಅಂತಾರೆ ಪೃಥ್ವಿ. ಲೆಕ್ಚರರ್‍ಸ್ ಜೊತೆ, ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಂದಿಗೆ ಚರ್ಚೆ ಮಾಡಿ ಈ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದಾರೆ ಪೃಥ್ವಿ.
ಓದಿನಲ್ಲಿ ಮುಂದೆ ಬರುವುದಕ್ಕೆ, ಉದ್ಯೋಗ ಹಿಡಿಯುವುದಕ್ಕೆ ಯಾವೆಲ್ಲ ದಾರಿಗಳಿವೆಯೋ ಅದನ್ನೆಲ್ಲ ಹಿಡಿದುಕೊಂಡು ಮುನ್ನುಗ್ಗುವವರು ಇವರು. ಇಂಟರ್ನೆಟ್‌ನಂತಹ ಇಂದಿನ ಆಧುನಿಕ ಮಾಧ್ಯಮಗಳಂತೂ ಈ ನಿಟ್ಟಿನಲ್ಲಿ ಇವರಿಗೆ ತುಂಬಾ ಸಹಾಯ ಮಾಡಿವೆ.
ಕಾನಿಡೆಂಟ್ ಹುಡುಗರು
‘ನಾನು ಜರ್ನಲಿಸಮ್ ಫೀಲ್ಡ್‌ಗೆ ಹೋಗ್ಬೇಕು ಅಂತ ಒಂಭತ್ತನೇ ಕ್ಲಾಸ್‌ನಲ್ಲಿದ್ದಾಗಲೇ ಅಂದ್ಕೊಂಡೆ. ನಾನು ಈ ವರ್ಷ ಪತ್ರಿಕೋದ್ಯಮ ಪಿಜಿ ಓದುವವನಾಗಿದ್ರೂ ಈಗಲೂ ಫ್ಯಾಮಿಲಿಯಿಂದ ಆ ಕ್ಷೇತ್ರ ಬೇಡ ಅಂತ ವಿರೋಧ ವ್ಯಕ್ತವಾಗೋದಿದೆ. ಆದ್ರೆ, ನಾನು ಕೇರ್ ಮಾಡೋಲ್ಲ. ನಂಗೆ ಏನಾಗ್ಬೇಕೋ ಅದನ್ನೇ ಮಾಡ್ತೇನೆ’ ಅಂತಾರೆ ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿ ಇರ್ಷಾದ್. ಹೈಸ್ಕೂಲ್‌ನಿಂದಲೇ ತನ್ನ ಬರವಣಿಗೆಯನ್ನು ತಾನೇ ರೂಢಿಸಿಕೊಂಡ ಈ ಹುಡುಗನಿಗೆ ಎಷ್ಟೇ ಕಷ್ಟವಾದರೂ ತನ್ನ ಗುರಿ ಮುಟ್ಟಿಯೇ ತೀರುತ್ತೇನೆಂಬ ವಿಶ್ವಾಸ.
ಈ ಹುಡುಗರ ಆತ್ಮವಿಶ್ವಾಸದ ಗುಟ್ಟು ಅವರೊಳಗೇ ಇದೆ. ಇವರೆಲ್ಲ ತಮ್ಮ ಶಕ್ತಿಯನ್ನು ಕಂಡುಕೊಂಡಿದ್ದಾರೆ. ಹೆತ್ತವರಿಗಿಂತ ಹೆಚ್ಚು ಉಪನ್ಯಾಸಕರ, ಗೆಳೆಯರ ಪ್ರಭಾವ ಇವರ ಮೇಲಿದೆ. ಹೊಸ ಹೊಸ ವಿಷಯಗಳನ್ನು ತಾವಾಗಿ ತಿಳಿದುಕೊಳ್ಳುತ್ತಾರೆ, ಮಾಧ್ಯಮಗಳ ಸದುಪಯೋಗ ಮಾಡಿಕೊಳ್ಳುತ್ತಾರೆ.
ಆದರೆ, ಮುಂದೇನು ಅನ್ನುತ್ತ ಡೈಲೆಮಾದಲ್ಲಿರುವ ಎಳೆಯರು ಯಾರೂ ಇಲ್ಲವೇ ಅನ್ನಬೇಡಿ. ಅಂತಹ ಹುಡುಗರ ಸಂಖ್ಯೆಯೂ ಒಂದಷ್ಟಿದೆ. ಇವರೆಲ್ಲ ಒಂದು ಕ್ಷಣ ದ್ವಂದ್ವದಲ್ಲಿ ನಿಂತರೂ ಮತ್ತೆ ಅದನ್ನು ಸ್ಪಷ್ಟಪಡಿಸಿಕೊಂಡು ಮುಂದಕ್ಕೆ ನುಗ್ಗುವಷ್ಟು ಛಾತಿವಂತರು. ಎಳವೆಯಿಂದಲೇ ‘ನೀನು ಡಾಕ್ಟರಾಗು, ನೀನು ಎಂಜಿನಿಯರಾಗ್ಬೇಕು’ ಅನ್ನುವ ಹೆತ್ತವರ ಸಿದ್ಧಸೂತ್ರಕ್ಕೆ ಕಟ್ಟುಬಿದ್ದ ಯುವಕರೂ ಇಲ್ಲದಿಲ್ಲ. ‘ಅದೆಷ್ಟೋ ಬಾರಿ ಹೀಗೆ ಇತರರ ಒತ್ತಾಯಕ್ಕೆ ಕಟ್ಟುಬಿದ್ದು ಇಷ್ಟವಿಲ್ಲದ ಕೋರ್ಸ್‌ಗೆ ಸೇರಿಕೊಂಡವರು ಮತ್ತೆ ತಮ್ಮ ಓದಿನ ಲೈನ್ ಚೇಂಜ್ ಮಾಡಿಕೊಳ್ಳುವುದಿದೆ’ ಅಂತಾರೆ ಬೆಂಗಳೂರಿನ ಉಪನ್ಯಾಸಕ ಶೇಷಗಿರಿ.
ನಮ್ಮ ಸ್ಟೈಲೇ ಬೇರೆ
ತಮ್ಮ ಹಾದಿಯನ್ನು ತಾವೇ ಕಂಡುಕೊಳ್ಳುವ ಈ ಹುಡುಗರ ರೀತಿ ನೀತಿ ಎಲ್ಲವೂ ಅವರಿಗೇ ವಿಶಿಷ್ಟವಾದುದು. ಇವರು ಯಾರನ್ನೂ ಅನುಕರಿಸುವವರಲ್ಲ. ಹಳೆಯದರ ಹಿಂಬಾಲಕರೂ ಅಲ್ಲ. ಹಿಂದೆ ಉದ್ಯೋಗಕ್ಕೆ ಬರಿಯ ಓದು ಮುಖ್ಯವಾಗುತ್ತಿತ್ತು. ಆದರೆ ಇಂದು ಕೌಶಲವೂ ಮುಖ್ಯ ಎಂಬುದು ಇವರಿಗೆ ತಿಳಿದಿದೆ. ಅದಕ್ಕೇ ತಮಗೆ ಅಗತ್ಯವಾದುದನ್ನು ತಾವು ರೂಢಿಸಿಕೊಳ್ಳುವತ್ತಲೇ ಇವರ ನಿರಂತರ ಪ್ರಯತ್ನ. ತಮ್ಮ ನಾಳೆಗಳ ಚಿತ್ರಗಳನ್ನು ತಮ್ಮದೇ ಕ್ಯಾನ್ವಾಸ್‌ನಲ್ಲಿ  ಚೆಂದವಾಗಿ ಬಿಡಿಸಿಕೊಳ್ಳುವಲ್ಲಿ ಇವರು ನಿಪುಣರು.
ಇವರೆಲ್ಲರಿಂದಾಗಿಯೇ ‘ಯುತ್ ಈಸ್ ವೇಸ್ಟೆಡ್ ಆನ್ ದ ಯಂಗ್’ ಎನ್ನುವ ಬರ್ನಾರ್ಡ್ ಶಾನ ಮಾತೂ ಸುಳ್ಳಾಗಿದೆ.
———

ನಂಗೆ ಮೊದಲಿನಿಂದ್ಲೂ ಫೈನಾನ್ಸ್ ಮತ್ತು ಅಕೌಂಟಿಂಗ್ ಅಂದ್ರೆ ಇಷ್ಟ. ಅದ್ಕೇ ಡಿಗ್ರಿ ಆದ್ಮೇಲೆ ಎಂಬಿಎ ಫೈನಾನ್ಸ್ ಮಾಡಿದೆ. ಯವುದು ಓದಿದ್ರೆ ಏನು ಅಡ್ವಾಂಟೇಜ್ ಇದೆ, ಹೇಗೆ ಬೆಳೀಬಹುದು ಎಂದೆಲ್ಲ ನನ್ನ ಸೀನಿಯರ್‍ಸ್, ಲೆಕ್ಚರರ್‍ಸ್ ಹೇಳ್ತಿದ್ರು. ಹಾಗೇ ಇಂಟರ್ನೆಟ್ ಮೂಲಕವೂ ಮಾಹಿತಿ ಪಡ್ಕೊಂಡೆ.
ನಿತಿನ್ ಹೆಗ್ಡೆ ಮುತ್ತಿಗೆ, ಕಾರ್ಪೊರೇಟ್ ಅಕಾರಿ, ಬೆಂಗಳೂರು.
ನನ್ನ ಓದಿನ ವಿಷಯದಲ್ಲಿ ಹೈಸ್ಕೂಲ್‌ನಿಂದ ತೊಡಗಿ ನಂದೇ ಡಿಸಿಷನ್. ಚಿಕ್ಕಂದಿನಿಂದಲೂ ಆಸ್ಟ್ರಾನಮಿ, ಫಿಸಿಕ್ಸ್ ಅಂದ್ರೆ ಆಸಕ್ತಿ ನಂಗೆ. ಅದಕ್ಕೆ ಮುಂದೆ ಇದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡ್ಬೇಕು ಅಂತ ಇದ್ದೇನೆ. ಹೆಚ್ಚು ಹಣ ಮಾಡೋ ಉದ್ಯೋಗ ನನಗೆ ಬೇಡ. ಮನೆಯಲ್ಲೂ ಈ ಬಗ್ಗೆ ಒತ್ತಡ ಏನಿಲ್ಲ.  
ಶಚಿ ಮದ್ದೂರು, ಎಂಎಸ್ಸಿ ಫಿಸಿಕ್ಸ್, ಎನ್‌ಇಟಿಕೆ, ಸುರತ್ಕಲ್.
ತಮ್ಮ ಭವಿಷ್ಯದ ವಿಷಯದಲ್ಲಿ ಯುವಕರು ಈಗ ತುಂಬಾ ಇಂಡಿಪೆಂಡೆಂಟ್ ಆಗಿದ್ದಾರೆ. ತಮ್ಮ ಮುಂದಿನ ಓದು, ಉದ್ಯೋಗ ಎಲ್ಲವನ್ನೂ ಅವರು ತಾವಾಗಿಯೇ ನಿರ್ಧರಿಸಿಕೊಳ್ಳುವಷ್ಟು ಸಬಲರು. ಇದಕ್ಕಾಗಿ ಅವರು ಹೆತ್ತವರ ಮುಖ ನೋಡುವುದೂ ಇಲ್ಲ. ಇಂಟರ್ನೆಟ್‌ನಂತಹ ಮಾಧ್ಯಮಗಳ ಸಹಾಯವೂ ಅವರಿಗಿದೆ.
-ಜಯದೇವ ಪ್ರಸಾದ ಮೊಳೆಯಾರ, ಪೋಷಕರು.

ಮಾನ್ಸೂನ್ ನೆಂಟಸ್ತನ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ತುಂತುರು ಮಳೆ. ಆಗಸದಿಂದ ಹನಿ ಹನಿ ನೀರು ಬೀಳುವಾಗ ಅದೆಷ್ಟೋ ಹೃದಯಗಳೊಳಗೂ ಮಿಡಿವ ಪುಳಕ. ಮಳೆರಾಗದಲ್ಲೂ ಕೇಳಿಸುವ ಪ್ರೇಮರಾಗ. ದೂರಾದ ದಂಪತಿಗೆ ವರ್ಷಧಾರೆಯೇ ವಿರಹಗೀತೆ. ಮುಸಲಧಾರೆಯ ನೋಡುತ್ತ ಕುಳಿತರೆ ಮುತ್ತೈದೆ ಮನಕ್ಕೆ ತವರಿನ ನೆನಪು…

ಚಿರಕ್… ಚಿರಕ್… ಚಿರಕ್… ಮಳೆ ನೀರು ನಿಂತ ನೆಲದಲ್ಲಿ ನಡೆಯುವಾಗ ಕಿವಿಗೆ ರಾಚುವ ಸದ್ದು. ಕಿವಿಗಷ್ಟೇ ಅಲ್ಲ, ಇನ್ನೊಬ್ಬರ ಮೈಗೂ ಸಿಡಿದ ಕೊಚ್ಚೆ ನೀರು ಅವರ ಮುಖದಲ್ಲಿ ಏನೋ ಸಿಡಿಮಿಡಿ ತರಿಸಿ… ಈ ಸಿಡಿಮಿಡಿಯೇ ಒಂದು ಪರಿಚಯಕ್ಕೂ ಕಾರಣವಾಗಿ ನೀರಿನಲ್ಲಿಯೇ ಆಟವಾಡುತ್ತಾ ಸಾಗುವಾಗ ಹುಟ್ಟುವ ಹೊಸದೇ ಒಂದು ಗೆಳೆತನ..
ಮಳೆ ನೀರು ತರುವ ನಂಟುಗಳು ಹೀಗೆಯೇ.. ನೀರಾಟವಾಡುವ ವಯಸ್ಸಿನಿಂದ ತೊಡಗಿ ಮಪ್ಪಿನವರೆಗೂ ಮಳೆಗೂ ಮನುಷ್ಯರಿಗೂ ಅದೇನೋ ಬಂಧ. ಮನಸ್ಸು-ಮನಸ್ಸಿನ ನಡುವಣ ಬಂಧಕ್ಕೂ ಈ ಮಳೆ ನಿಮಿತ್ತ. ನಿಜಕ್ಕಾದರೆ ಮಳೆ ಸಂಬಂಧದ ಸಂಕೇತ, ಆಗಸಕ್ಕೂ ಭೂಮಿಗೂ ಅದರಂತೆ ನಂಟು ತರುವ ನೆಂಟ ಇನ್ನಾರುಂಟು?
ಮಳೆಯೊಳಗೆ ಪ್ರೀತಿಯ ಬಲೆ
ಬೀಳುವ ಹನಿಹನಿಯೂ ಒಂದಕ್ಕೊಂದು ಸೇರಿಕೊಂಡು ಧಾರೆಯಾಗುವ ಆ ಕ್ರಿಯೆಯೇ ಪ್ರೀತಿಗೊಂದು ಮಾದರಿ. ಜೀವಸಂಕುಲಕ್ಕೆಲ್ಲ ಇದು ಸೃಷ್ಟಿಕ್ರಿಯೆಯ ಕಾಲ. ನಾಲ್ಕು ಮಳೆ ಬೀಳುವುದೇ ತಡ, ಪ್ರಕೃತಿಯೆಲ್ಲ ಹಸಿರು ಹೊದ್ದು ನಿಂತು ಜೀವನೋತ್ಸಾಹದ ಮೇಳ ಮಾಡುತ್ತಿರುತ್ತದೆ. ಗಿಡಮರಕ್ಕಷ್ಟೇ ಅಲ್ಲ, ಅದೆಲ್ಲೋ ವಟಗುಟ್ಟುವ ಕಪ್ಪೆಗೂ ಒಲವು ಶುರು. ಇನ್ನು ಮನುಜನೇನು ಇದಕ್ಕಿಂತ ಹೊರತೇ..? ಹೂಂ, ಅಲ್ಲೂ ಪ್ರೀತಿಯ ಓಂಕಾರ.
ಭೂಮಿಗೆ ಬಿದ್ದ ಹೊಸ ಹನಿಗಳ ಹಾಗೇ ಕಾಲೇಜಿಗೂ ಹೊಸ ಮುಖಗಳು. ಮನೆಗೆ ಬಂದರೂ ಕಾಡುವ ಈ ಹೊಸಮುಖಗಳ ಹೊಂಗನಸು. ತುಂತುರು ಮಳೆ ಜಡಿಮಳೆಯಾಗುವ ಹಾಗೇ ಗಾಢವಾಗುವ ಪ್ರೀತಿ. ಅಲ್ಲಿಂದಲೇ ಬೀಸಿ ಬರುವ ತಂಗಾಳಿ ಇಲ್ಲೇ ಒಲವಾಗಿದೆ ಎಂದು ಹೇಳದೇ ಇದ್ದೀತಾದರೂ ಹೇಗೆ? ಪ್ರೇಮ ನಿವೇದಿಸಿಕೊಂಡ ಹೃದಯಗಳಿಗೆ ಮಳೆಗಾಲದ ಥಂಡಿಯೂ ಲೆಕ್ಕಕ್ಕಿಲ್ಲ. ಒಲವಿನ ಮಳೆಯಲ್ಲಿ ಮೀಯುವಾಗ ಎಲ್ಲವೂ ಬೆಚ್ಚಗೇ… ಸುಮ್ಮನೇ ಕತ್ತಲ ಕೋಣೆಯಲ್ಲಿ ಕುಳಿತು ಮಳೆಯನ್ನು ನೋಡುತ್ತಾ ಪ್ರೀತಿಯ ಹೃದಯವನ್ನು ನೆನಪಿಸಿಕೊಂಡರೆ ಅದೆಷ್ಟು ಸುಖವೋ…
ಅಲ್ಲೇ ಶುರುವಾಗಿದೆ ವಿರಹ
ಪ್ರೀತಿಯನ್ನು ಉದ್ದೀಪಿಸುವ ಮಳೆ ವಿರಹಕ್ಕೂ ಕುಮ್ಮಕ್ಕು ನೀಡುವ ಚಾಲಾಕಿ. ಆಷಾಢಮಾಸ ಬಂತೆಂದರೆ ಹೊಸದಾಗಿ ಮದುವೆಯಾದ ದಂಪತಿಯನ್ನು ಬೇರೆ ಮಾಡಿಸಿಬಿಡುತ್ತದೆ ಕಟ್ಟಳೆ. ಉತ್ತರ ಕರ್ನಾಟಕದ ಭಾಗದಲ್ಲಂತೂ ನವವಿವಾಹಿತರಿಗೆ ಆಷಾಢವೆಂದರೆ ದೂರಾಗುವ ಸಂಕಟ. ಈ ಮಾಸ ಬಂತೆಂದರೆ ಸಾಕು, ಖಾಸ ಅಣ್ಣ  ಇನ್ನೂ ಬರಲಿಲ್ಲವಲ್ಲಾ ಎಂದು ಕಾಯುತ್ತ ಅವನು ಬಂದಾಗ ಜೊತೆಗೇ ತವರಿಗೆ ಹೊರಟುನಿಲ್ಲುತ್ತಾಳೆ ನವವಧು. ಅವನಿಗೋ ಅವಳಿಲ್ಲದ ಬೇಸರ. ಅವಳಿಗೆ ತೌರ ಸುಖದ ಸೆಳೆತ ಒಂದೆಡೆ. ಅವನನ್ನು ಬಿಟ್ಟು ಹೊರಡಬೇಕಲ್ಲಾ ಎನ್ನುವ ತಳಮಳ ಇನ್ನೊಂದೆಡೆ. ಇನ್ನೊಂದು ತಿಂಗಳು ಅವರ ಪ್ರೇಮಕ್ಕೆ ಪರೀಕ್ಷೆಯ ಕಾಲ.
ವಿವಾಹಿತರಿಗಷ್ಟೇ ಸೀಮಿತವಲ್ಲ ಈ ಪರೀಕ್ಷೆ. ಪ್ರೇಮಿಗಳಿಗೆಲ್ಲರಿಗೂ ಸವಾಲೇ. ಬೇಕುಬೇಕೆನ್ನುವಾಗಲೆಲ್ಲ ಪರಸ್ಪರ ಭೇಟಿ ಮಾಡುವಂತಿಲ್ಲ. ಅಕ್ಕಪಕ್ಕ ಕುಳಿತು ಸಲ್ಲಾಪ ನಡೆಸುವಂತಿಲ್ಲ. ದೂರದಲ್ಲಿ ಕುಳಿತೇ ದೂರವಾಣಿಯಲ್ಲಿ ಮಾತಾಡೋಣವೆಂದರೆ ಹವಾಮಾನ ಸಂಪರ್ಕಕ್ಕೆ ಕಡ್ಡಿ ಆಡಿಸುತ್ತದೆ. ಇಂಥ ಸಂದರ್ಭದಲ್ಲಿ ಮಳೆಯೇ ನೆಟ್‌ವರ್ಕ್ ಆಗಬೇಕು. ಇವನಿಲ್ಲಿ ಕುಳಿತು ಹೊರದಬ್ಬಿದ ನಿಟ್ಟುಸಿರನ್ನು ಮಳೆರಾಯನೇ ಅವಳಿಗೆ ತಲುಪಿಸಬೇಕು. ಅವರಿಬ್ಬರ ವಿರಹದ ಬೇಗೆಗೆ ಹನಿಮಳೆಯೇ ತಂಪಿನ ಸೇಚನವ ನೀಡಬೇಕು. ಇದೆಲ್ಲವನ್ನೂ ಮಳೆಗೆ ಹೊಸದಾಗಿ ಹೇಳಿಕೊಡಬೇಕಾ, ಅವನು ಇದರಲ್ಲಿ ಪರಿಣತನೇ ಸರಿ. ಜೊತೆಗೆ ಮೇಘನಂತೂ ಪ್ರೇಮಿಗಳಿಗೆ ಹಳೆಯ ದೂತ. ಇವರಿಬ್ಬರ ಮಧ್ಯಸ್ಥಿಕೆಯಲ್ಲಿ ಪ್ರೇಮಬಂಧ ಗಟ್ಟಿಯಾಗಿಬಿಡುತ್ತದೆ. ಅವಳಿಗಾಗಿ ಅವನು, ಅವನಿಗಾಗಿ ಅವಳು ಹಪಹಪಿಸುವಾಗ ಎಂದೆಂದೂ ಬಿಟ್ಟಿರಲಾರೆವೆಂಬ ಪ್ರತಿಜ್ಞೆ ಸದ್ದಿಲ್ಲದೇ ಎದೆಯೊಳಗೆ ಅಡಗಿ ಕೂರುತ್ತದೆ.
ನೆನಪಿನ ನಾವೆಯಲ್ಲಿ
ಮಳೆ ಇಂದಿನ ಯಾವ್ಯಾವುದೋ ಚಟುವಟಿಕೆಗಳಿಗೆಲ್ಲ ಪ್ರೇರಕ. ಹಾಗೆಯೇ ನಿನ್ನೆಯ ನೆನಪುಗಳಿಗೂ ಅಪೂರ್ವ ನಾವೆ. ಕಿಟಕಿಯಲ್ಲಿ ನಿಂತು ಮಳೆಹಬ್ಬವನ್ನು ನೋಡುತ್ತಿದ್ದರೆ ಬಾಲ್ಯದ್ದೇ ಸ್ಮರಣೆ. ಆ ನೀರಧಾರೆಗೆ ಮೈಯೊಡ್ಡಿದ್ದು, ಸೀನುತ್ತಾ ಮನೆಗೆ ಬಂದು ಅಮ್ಮನ ಬಳಿ ಬೈಸಿಕೊಂಡದ್ದು, ಬಿಸಿಬಿಸಿ ಚಳಿ ಕಾಯಿಸಲು ಒಲೆಯ ಬಳಿ ಕೂತದ್ದು, ಬೆಳಗ್ಗೆ ಶಾಲೆಗೆ ತಡವಾದರೂ ಮತ್ತೆ ಮತ್ತೆ ಮುದುರಿದಾಗ ಅಪ್ಪ ಗದರಿದ್ದು, ಗದ್ದೆಯಲ್ಲಿ ಓಡುತ್ತ ಹೋಗುವಾಗ ಜಾರಿ ಬಿದ್ದದ್ದು… ನೆಲಕ್ಕೆ ಬೀಳುವ ಒಂದೊಂದು ಹನಿಯಲ್ಲೂ ಬಾಲ್ಯದ ಎಳೆಗಳಿವೆ.
ಅಡುಗೆಮನೆಯಲ್ಲಿ ಸೌಟು ಹಿಡಿದಿರುವ ಅವಳಿಗೂ ತವರಿನ ನೆನಪಿಗೆ ಈ ಮಳೆಯೇ ಸಾಥಿ. ಮಳೆಯ ಕೆಸರಿಗೆ ಒದ್ದೆಯಾದ ಬಟ್ಟೆ ಹಾಕಿ ಹೊರಟಿದ್ದ ಅವನನ್ನು ಕಂಡು ನಕ್ಕಿದ್ದ ತಾನು, ತನ್ನ ನೋಡಲೆಂದೇ ಮನೆಯಂಗಳಕ್ಕೆ ನೆಪಹೂಡಿ ಬಂದ ಅವನು, ಮಳೆ ಹನಿಯಲು ತೊಡಗಿದರೆ ಸಾಕು ಮನೆಯೊಳಗೇ ಆಟಕ್ಕೆ ಶುರುವಿಟ್ಟುಕೊಳ್ಳುತ್ತಿದ್ದ ಮಕ್ಕಳ ಲೋಕ, ಓದಿಕೊಳ್ಳಿರೆಂದು ಆಗಾಗ ಎಚ್ಚರಿಸುತ್ತಿದ್ದ ಅಪ್ಪ, ಗದ್ದೆಯಲ್ಲಿ ಬತ್ತದ ಸಸಿಗಳನ್ನು ನೆಡುವ ಹೆಣ್ಣುಮಕ್ಕಳು ಹಾಡುವ ಹಾಡು, ಆ ಹಿಗ್ಗು… ಎಲ್ಲವೂ ಮನಃಪಟಲದಲ್ಲೇ ಹಾದುಹೋಗುವಾಗ ಮತ್ತದೇ ಲೋಕಕ್ಕೆ ಓಡಿಹೋಗಿಬಿಡೋಣವೆನ್ನುವ ತವಕ.
ಮಳೆಯ ನೆಪದಲ್ಲಿ ಅರಳುವ ನಂಟು
ಇದ್ದಕ್ಕಿದ್ದಂತೆ ಜೋರಾಗಿ ಸುರಿವ ಮಳೆಗೆ ಎಲ್ಲರನ್ನೂ ತಡೆಹಿಡಿದು ನಿಲ್ಲಿಸಿಬಿಡುವ ಶಕ್ತಿ ಇದೆ. ಕೊಂಚ ಮಳೆ ಕಡಿಮೆಯಾಗಲೆಂದು  ಯಾವುದೋ ಅಂಗಡಿಯ ಬಾಗಿಲಲ್ಲಿ ನಿಂತವರೂ ‘ಓಹ್, ಎಂಥಾ ಮಳೆ’ ಅನ್ನುತ್ತ ಮಾತಿಗೆ ಶುರುವಿಟ್ಟು ಗೆಳೆಯರೇ ಆಗಿಬಿಡುವ ಪರಿಯೇ ಒಂದು ಮ್ಯಾಜಿಕ್. ಮನೆಮನೆಯಲ್ಲೂ ಕುರುಕಲು ತಿಂಡಿಯನ್ನು ಮೆಲ್ಲುತ್ತ ಎಲ್ಲರೂ ಒಟ್ಟಿಗೇ ಕುಳಿತು ಮಾತಿಗೆ ಕೂತಾಗ ಕಳೆದುಕೊಂಡಿದ್ದ ಏನನ್ನೋ ಪಡೆದುಕೊಂಡಂತೆ ಭಾಸ.
ಮಿಂಚು, ಗುಡುಗುಗಳು ದಾಂಗುಡಿ ಇಟ್ಟ ರಭಸಕ್ಕೆ ಒಳಗೊಳಗೇ ಭಯವಾಗುತ್ತದಾದರೂ ಅದೇ ನೆಪದಲ್ಲಿ ಇಬ್ಬಿಬ್ಬರೇ ಅಂಟಿ ಕೂತಾಗ ಗಟ್ಟಿಯಾಗುವ ಬಂಧ. ಹಳಸಿದ ಸಂಬಂಧಕ್ಕೂ ಎಲ್ಲೋ ಸಿಕ್ಕ ನವ ಕಂಪು.. ಕಡಿದುಕೊಂಡು ನಂಟು ಮತ್ತೆ ನೆನಪಾದರೂ ಮನಕ್ಕೆ ತಟ್ಟುವ ಭಾವಗಳು, ನೆಲ ಮುಟ್ಟುವ ಹನಿಗಳ ಟಪ ಟಪ ಸದ್ದಿನಂತೆ…
ಮಳೆ ಸದಾ ವರಪ್ರದಾಯಕನೇನಲ್ಲ. ಒಮ್ಮೊಮ್ಮೆ ಮುಂಗಾರು ಸಿಟ್ಟುಗೊಂಡು ಅಬ್ಬರಿಸಿತಾ, ಜೀವಸಂಕುಲಕ್ಕೆಲ್ಲ  ಹಾನಿಯ ಸುನಾಮಿ. ಆದರೂ ಒಬ್ಬರಿಗೊಬ್ಬರು ಆಸರೆಯಾಗುವಾಗ ಮಾನವೀಯತೆಯನ್ನು ಬಡಿದೆಬ್ಬಿಸಿದ ಶ್ರೇಯ ಪಡೆದುಕೊಳ್ಳುವುದು ಮತ್ತೆ ಮಳೆಯೇ.
ಹನಿಗಳ ಲೀಲೆ
ಮಳೆಗಾಲದ ಭರದಲ್ಲಿ ಸೇತುವೆಗಳು ಮುರಿದು ಬೀಳಬಹುದು. ಆದರೆ ಅದೇ ಮಳೆ ಮನ ಮನಗಳ ಮಧ್ಯೆ ಹೊಸ ಸೇತುಗಳನ್ನು ಹುಟ್ಟಿಸುತ್ತದೆ. ಮುರಿದಿದ್ದ ಮನಗಳನ್ನು ಒಂದಾಗಿಸುತ್ತದೆ ಕೂಡ.
ಮಳೆ ನಂಟುಗಳಿಗೆ ಅಂಟು ಹಾಕುವಂತೆಯೇ ತನ್ನೊಳಗೇ ಹಲವು ನಂಟಸ್ತನಗಳನ್ನು ಕಟ್ಟಿಕೊಂಡೇ ಧರೆಗಿಳಿಯುತ್ತದೆ. ಧೋ ಎಂದು ಸುರಿವ ಮಳೆ ಮಗುವಿನ ಅಳು. ತುಂತುರು ಮಳೆಗೆ ಪ್ರೇಮಿಗಳ ತುಂಟತನ. ಗುಡುಗು ಸಿಡಿಲಿನ ಮಳೆಯಲ್ಲಿದೆ ಅಪ್ಪನ ಜೋರು. ಮುಂಜಾನೆಯ ಮಳೆಗೆ ಅಮ್ಮನ ವಾತ್ಸಲ್ಯ. ಹೀಗೆ ಗ್ರಹಿಸಿದಷ್ಟೂ  ಹಲವು ಭಾವ ಹುಟ್ಟಿಸುವ ಮಳೆ ಭೂಮಿಯ ಮಕ್ಕಳಿಗೆಲ್ಲ ಸಿಕ್ಕ ಅಪೂರ್ವ ಸಂಬಂ. ಮಳೆ ಎಂದರೆ ನಮಗೆಲ್ಲ ಖುಷಿ ಆಗುವುದು ಅದಕ್ಕೇ ಇರಬೇಕು. ವರುಷಕ್ಕೊಮ್ಮೆ ಬರುವ ಆತ್ಮೀಯ ನೆಂಟನನ್ನು ಕಂಡರೆ ಯಾರ ಮನ ತಾನೇ ಅರಳದಿದ್ದೀತು ಹೇಳಿ…
————

ಆಷಾಢಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡು-ಹೆಣ್ಣು ಪರಸ್ಪರ ದೂರ ಇರಬೇಕು ಅನ್ನೋ ಸಂಪ್ರದಾಯ ಇದೆ ನಿಜ. ಏಕೆಂದರೆ ಈ ಕಾಲದಲ್ಲಿ ಹವೆ ತಂಪಾಗಿರುತ್ತದೆ, ಗಂಡು-ಹೆಣ್ಣು ಜೊತೆಗಿರಲು ಬಯಸ್ತಾರೆ. ಈ ಸಂದರ್ಭದಲ್ಲಿಯೇ ಇಬ್ಬರನ್ನೂ ದೂರವಿಟ್ಟು ತೀವ್ರವಾಗಿ ಒಬ್ಬರನ್ನೊಬ್ಬರು ಬಯಸುವಂತೆ ಮಾಡುವ ಸೂತ್ರವಿದು. ಇಬ್ಬರ ನಡುವೆ ಪ್ರೀತಿ, ಆಕರ್ಷಣೆ ಹೆಚ್ಚಾಗಿ ಆ ಬಂಧ ಗಟ್ಟಿಯಾಗಿಸಲು ಮಾಡುವ ಉಪಾಯ ಇದು. ಹಾಗೇ ಈ ಕಾಲದಲ್ಲಿ ವ್ಯವಸಾಯದ ಕೆಲಸ ಹೆಚ್ಚು ಇರುತ್ತದೆ. ಆ ಸಂದರ್ಭದಲ್ಲಿ ನೂತನ ದಂಪತಿ ಜೊತೆಗಿದ್ದರೆ ಇತ್ತ ಕಡೆ ಗಮನ ಕೊಡುವುದಕ್ಕಾಗುವುದಿಲ್ಲವೆಂಬ ಕಾರಣಕ್ಕೂ ಹೆಣ್ಮಗಳನ್ನು ತವರಿಗೆ ಕರೆದುಕೊಂಡು ಹೋಗುತ್ತಾರೆ. ಮದುವೆಯಾಗಿ ವರ್ಷ ಕಳೆದರೆ ನಂತರ ಈ ಬೇರ್ಪಡಿಸುವಿಕೆ ಬೇಕಾಗುವುದಿಲ್ಲ.
-ಜಿ.ವೆಂಕಟಸುಬ್ಬಯ್ಯ, ನಿಘಂಟು ತಜ್ಞ

ಪುಟಾಣಿ ಪ್ರೇಮ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಪ್ರೇಮ ಹುಟ್ಟೋದಕ್ಕೆ ಹೊತ್ತು ಗೊತ್ತು ಹೇಗೂ ಇಲ್ಲ. ಪ್ರಾಯದ ಮಿತಿಯೂ ಇಲ್ಲ ಅಂದ್ರೆ ನಂಬ್ತೀರಾ? ಹೌದು, ನಮ್ಮ ಅಕ್ಕಪಕ್ಕದಲ್ಲೇ ಆಟವಾಡೋ ಹತ್ತರ ಹರೆಯದ ಪುಟಾಣಿಗಳೂ ಲವ್ವಿಗೆ ಬೀಳಬಹುದು. ಅರೆರೆ, ಅಷ್ಟು ಚಿಕ್ಕ ವಯಸ್ಸಿನಲ್ಲಾ? ಡೋಂಟ್ ವರಿ. ಅದು ರೊಮ್ಯಾಂಟಿಕ್ ಲವ್ ಏನಲ್ಲ, ಬರಿಯ ಟೆಂಪರರಿ ಪ್ರೀತಿ ಅಷ್ಟೇ.

ಅಮ್ಮಾ, ನಮ್ ಮಿಸ್ ಎಷ್ಟು ಒಳ್ಳೆಯವ್ರು ಗೊತ್ತಾ..? ಎಷ್ಟು ಚೆನ್ನಾಗಿ ಪಾಠ ಹೇಳ್ಕೊಡ್ತಾರೆ…
-ನಾಲ್ಕನೇ ತರಗತಿಯಲ್ಲಿರೋ ಮಗ ಹೀಗೆ ದಿನವೂ ಟೀಚರಮ್ಮನನ್ನು ಸ್ತುತಿಸುವುದು ಅಮ್ಮನಿಗೇನೂ ಹೊಸದಲ್ಲ. ತನ್ನ ಮಿಸ್ ಹಾಗೆ ಮಾಡಿದ್ರು, ಹೀಗೆ ಮಾಡಿದ್ರು ಅನ್ನುತ್ತಾ ದಿನಕ್ಕೊಂದು ಟೀಚರ್ ಕಥೆ ಹೇಳುವ ಪುಟ್ಟ ಒಂದು ದಿನವಂತೂ ‘ಅಮ್ಮಾ, ನಾನು ನಮ್ ಕರುಣಾ ಮಿಸ್‌ನೇ ಮದ್ವೆ ಆಗೋದು’ ಅನ್ನಬೇಕಾ!? ಅಮ್ಮನಿಗೆ ನಗು. ಪುಟ್ಟನ ಅಪ್ಪ, ಅಮ್ಮನಿಗೆ, ನೆರೆಮನೆಯ ಸಂಗೀತಾ ಆಂಟಿಗೆ ಎಲ್ಲರಿಗೂ ಅವನ ಈ ಟೀಚರ್ ಪ್ರೇಮ ನಗಲೊಂದು ವಿಷಯ.
ಇಷ್ಟು ಸಣ್ಣ ಹುಡುಗನಿಗೇಕೆ ಮದುವೆ ವಿಚಾರ ತಲೆಯಲ್ಲಿ ಹೊಳೆಯಿತು? ಅದೂ ತನಗಿಂತ ಅಷ್ಟೊಂದು ದೊಡ್ಡವರಾದ ಟೀಚರನ್ನೇ ಮದ್ವೆ ಆಗ್ತೇನೆ ಅಂದುದ್ಯಾಕೆ ಎಂದೆಲ್ಲ ಅವರು ಆಲೋಚಿಸುವುದಕ್ಕೆ ಹೋಗಿರಲಾರರು. ನಿಜ, ಎಂಟೊಂಭತ್ತು ವರ್ಷದ ಆ ಪುಟ್ಟ ಹುಡುಗನೂ ಲವ್ ಮಾಡ್ತಾನೆ ಅನ್ನೋ ಸಂಶಯ ಮೂಡೋದಾದ್ರೂ ಕಷ್ಟವೇ. ಆ ವಯಸ್ಸಿನಲ್ಲೂ  ಅವನಲ್ಲಿ ಪ್ರೇಮದ ಭಾವನೆ ಹುಟ್ಟುವುದಕ್ಕೆ ಸಾಧ್ಯವಾ? ಇನ್ನೂ ‘ಲವ್’ ಅನ್ನೋ ಪದವನ್ನು ಟಿವಿಯಲ್ಲಿ ಕೇಳಿ, ನೋಡಿ ಗೊತ್ತಿರುವ ಹುಡುಗನಿಗೆ ಟೀಚರಮ್ಮನ ಮೇಲೆ ಉಂಟಾದದ್ದು  ನಿಜಕ್ಕೂ ಪ್ರೇಮವಾ?
‘ಅಲ್ಲ’ ಅನ್ನುತ್ತದೆ ಮನಃಶಾಸ್ತ್ರ, ಅದರ ಪ್ರಕಾರ ಇದು ‘ಪಪ್ಪಿ ಲವ್’.
ಎಳೆಯರ ಪ್ರೇಮ
ಇನ್ನೇನು ಹದಿಹರೆಯಕ್ಕೆ ಕಾಲಿಡುತ್ತಿದ್ದಾರೆ ಎನ್ನುವಾಗ ಅಥವಾ ಅದಕ್ಕಿಂತಲೂ ಮೊದಲೇ ಎಂಟರಿಂದ ಹತ್ತು ವರ್ಷದ ಪ್ರಾಯದಲ್ಲೇ ಎಳೆಯ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಭಾವನೆ ಇದು. ಹುಡುಗನೊಬ್ಬನಿಗೆ ತನ್ನದೇ ವಯಸ್ಸಿನ ಹುಡುಗಿಯ ಮೇಲೆ ಸುಖಾಸುಮ್ಮನೇ ಪ್ರೀತಿ ಹುಟ್ಟಬಹುದು, ಟೀಚರ್ ಮೇಲೂ ಅಟ್ಯಾಚ್‌ಮೆಂಟ್ ಕಾಣಿಸಿಕೊಳ್ಳಬಹುದು. ಹತ್ತರ ಹರೆಯದ ಹುಡುಗಿಯೂ ತನಗಿಂತ ಕೊಂಚ ದೊಡ್ಡ ಹುಡುಗನೊಬ್ಬನ ಮೇಲೋ ಅಥವಾ ತನ್ನದೇ ಕ್ಲಾಸಿನ ಗೆಳೆಯನ ಮೇಲೆ ಪ್ರೇಮಕ್ಕೆ ಬಿದ್ದುಬಿಡಬಹುದು. ಆದರೆ ಈ ಪ್ರೇಮ ಗಂಭೀರ ಪ್ರೇಮವಲ್ಲ. ಮನೆಯಲ್ಲಿರುವ ನಾಯಿಮರಿಯೊಂದು ಮುದ್ದಿನಿಂದ ಕರೆದಾಗ ನಮ್ಮ ಕಾಲನ್ನೇ ಪ್ರೀತಿಯಿಂದ ನೆಕ್ಕಿ ಮುದ್ದಿಸುತ್ತದಲ್ಲ, ಹಾಗೆಯೇ ಇದು. ತನ್ನನ್ನು ಆದರಿಸುವವರ, ಪ್ರೀತಿಯಿಂದ ಕಾಣುವವರ ಮೇಲೆ ಒಲವು ವ್ಯಕ್ತಪಡಿಸುವ ರೀತಿ ಇದು.
ಇದಕ್ಕೆ ‘ಕಾಫ್ ಲವ್’ ಅಥವಾ ‘ಕಿಟನ್ ಲವ್’ ಎಂಬ ಹೆಸರೂ ಇದೆ. ಎಳೆಗರು ತನ್ನಮ್ಮನನ್ನು ಪ್ರೀತಿಯಿಂದ ನೆಕ್ಕುತ್ತದಲ್ಲ ಹಾಗೆ ಈ ಎಳೆಮಕ್ಕಳ ಪ್ರೀತಿಯೂ ಅಬೋಧ. ಬೆಕ್ಕುಗಳು ಒಂದಕ್ಕೊಂದು ನೆಕ್ಕುತ್ತಾ ಮುದ್ದು ಮಾಡುತ್ತವಲ್ಲ, ಹಾಗೇ ಈ ಪುಟಾಣಿಗಳ ಪ್ರೀತಿಯೂ ನಿಷ್ಕಲ್ಮಷ. ಅಲ್ಲಿ ದೈಹಿಕ ವಾಂಛೆ ಏನೂ ಇರದು. ತನಗಿಷ್ಟವಾದ ಜೀವ ತನ್ನ ಜೊತೆಗಿರಲಿ ಎಂಬ ಹಂಬಲ ಕಾಣಿಸಬಹುದು ಅಷ್ಟೆ.
ಸಕಲರ ಅನುಭವ
ಅಲ್ಲೊಬ್ಬ ಇಲ್ಲೊಬ್ಬರೆಂದಲ್ಲ, ಬಹುತೇಕ ಎಲ್ಲರೂ ಈ ‘ಪಪ್ಪಿ ಲವ್’ ಹಂತವನ್ನು ಅನುಭವಿಸಿಯೇ ದಾಟಿ ಬರುತ್ತಾರೆ ಅನ್ನುತ್ತಾರೆ ಮನಃಶಾಸ್ತ್ರಜ್ಞರು. ಇದು ರೊಮ್ಯಾಂಟಿಕ್ ಲವ್‌ನಷ್ಟು ತೀವ್ರವಲ್ಲ. ಅನೇಕರಲ್ಲಿ ಇತರರ ಬಗೆಗೆ ಇದೊಂದು ಆದರ, ಅಭಿಮಾನವಾಗಿ ಉಳಿಯಬಹುದು. ಇನ್ನು ಕೆಲವರು ಪ್ರೀತಿ, ಪ್ರೇಮ ಎಂದು ವ್ಯಕ್ತಪಡಿಸಲೂಬಹುದು. ಎಳೆಯದರಲ್ಲೇ ಸಿನಿಮಾದಂತಹ ಮಾಧ್ಯಮಗಳಲ್ಲಿ ಪ್ರೇಮ ವ್ಯಕ್ತಪಡಿಸುವಿಕೆಯ ವಿಧಾನಗಳನ್ನು ಕಂಡು ಪರಿಚಯವಿರುವವರು ಅದನ್ನೂ ಅನುಕರಿಸಬಹುದು. ಕೆಲವು ಚಲನಚಿತ್ರಗಳಲ್ಲಿ ಈ ಪಪ್ಪಿ ಲವ್ ಸಮಸ್ಯೆ ಚಿತ್ರಿತವಾದದ್ದುಂಟು. ‘ಮೇರಾ ನಾಮ್ ಜೋಕರ್’ ಚಿತ್ರದಲ್ಲಿ ನಾಯಕ ರಾಜು ತನ್ನ ಹದಿಹರೆಯದಲ್ಲಿ ತನ್ನ ಟೀಚರ್ ಮೇರಿಯನ್ನೇ ಪ್ರೀತಿಸುತ್ತಾನೆ.
ಈ ಪಪ್ಪಿ ಲವ್ ಹುಟ್ಟಿಕೊಳ್ಳಲು ತನ್ನ ಟೀಚರ್ರೇ ಆಗಬೇಕೆಂದಿಲ್ಲ. ದಿನವೂ ಸಿಗುವ ಫ್ಯಾಮಿಲಿ ಫ್ರೆಂಡ್, ಸದಾ ಮುದ್ದು ಮಾಡೋ ಆಂಟಿ, ಅಂಕಲ್, ಫ್ಯಾಮಿಲಿ ಫ್ರೆಂಡ್, ತನ್ನ ಅಭಿಮಾನದ ನಟ ಅಥವಾ ನಟಿ… ಹೀಗೆ ಮನಸ್ಸು ಮೆಚ್ಚಿಕೊಂಡ ಯಾರ ಮೇಲಾದರೂ ಈ ಪ್ರೀತಿ ಹುಟ್ಟಬಹುದು. ತಾನು ಮೆಚ್ಚಿದ ಆ ವ್ಯಕ್ತಿಯ ದಿನಚರಿ, ನಡೆ-ನುಡಿಗಳನ್ನೆಲ್ಲ ಗಮನಿಸುವುದು, ಅವರಿಗೆ ಗಿಫ್ಟ್ ಕೊಡುವುದು, ಅವರ ಬಗ್ಗೆ ತನ್ನದೇ ರೀತಿಯಲ್ಲಿ ಕನಸು ಹೆಣೆದುಕೊಳ್ಳುವುದನ್ನೆಲ್ಲ ಮಾಡಬಹುದು. ಮಾದರಿಗಳನ್ನು ಕಂಡುಕೊಳ್ಳುವ ವಯಸ್ಸೂ ಇದಾಗಿರುವುದರಿಂದ ತಮ್ಮ ಮೆಚ್ಚಿನ ವ್ಯಕ್ತಿಯ ಅಭ್ಯಾಸ, ಹವ್ಯಾಸಗಳನ್ನು ತಾನೂ ಬೆಳೆಸಿಕೊಳ್ಳುವ ಪ್ರಯತ್ನವನ್ನೂ ಕಾಣಬಹುದು. ಚೆನ್ನಾಗಿ ಓದಬೇಕೆನ್ನುವ ಅಭಿಲಾಷೆಯುಳ್ಳ ಹುಡುಗಿಗೆ ಪಕ್ಕದ ಮನೆಯ ಓದಿನಲ್ಲಿ ಮುಂದಿರುವ ಹುಡುಗನ ಮೇಲೆ ಅಭಿಮಾನ ಹುಟ್ಟಿ ಅವನನ್ನೇ ಗಮನಿಸಬಹುದು, ಅವನ ದಿನಚರಿಗಳನ್ನೆಲ್ಲ ತಾನೂ ಅಳವಡಿಸಿಕೊಳ್ಳಬಹುದು. ಕ್ರಮೇಣ ಆಕೆ ತನ್ನದೇ ದಿನಚರಿ, ಓದುವ ರೀತಿಗಳನ್ನು ರೂಢಿಸಿಕೊಂಡಂತೆ ಆ ಹುಡುಗನನ್ನು ಗಮನಿಸುವ ಅಭ್ಯಾಸ ಬಿಟ್ಟೇ ಹೋಗಬಹುದು. ಹೀಗೆ ಅಭಿಮಾನಪೂರ್ವಕವಾಗಿ ಪ್ರೀತಿ ಹುಟ್ಟಿಕೊಳ್ಳಲು ಹೆಚ್ಚು ಸಮಯ ಬೇಡ, ಅದು ಬಹುಕಾಲ ಬಾಳುವುದೂ ಇಲ್ಲ.
ರಿಸ್ಕಿ ಅಲ್ಲ
‘ನಾನು ಕರುಣಾ ಮಿಸ್‌ನ ಮದ್ವೆ ಆಗ್ತೀನಿ’ ಅಂತ ಮೇಲೆ ಪುಟ್ಟ ನೊಬ್ಬ ಹೇಳಿದ ಹಾಗೇ ನಮ್ಮ ಮನೆಯ ಪುಟ್ಟನೋ ಪುಟ್ಟಿಯೋ ಹೇಳಿದಾಕ್ಷಣ ಇದೆಂಥದಪ್ಪಾ ಈ ಪ್ರಾಯದಲ್ಲೇ ಲವ್ವು, ಮದುವೆ ಅಂತಾರಲ್ಲ ಮಕ್ಕಳು ಅಂತ ಹೆತ್ತವರು ಚಿಂತೆಗೆ ಬೀಳೋದೇನೂ ಬೇಡ. ‘ಇಂಥ ಪ್ರೇಮಗಳು ಅಂಥಾ ಗಂಭೀರವೇನಲ್ಲ. ಆ ಹಂತದಲ್ಲಿ ಮನಸ್ಸಿನಲ್ಲಿ ಮೂಡುವ ಇನ್‌ಫ್ಯಾಚುವೇಶನ್ ಅಷ್ಟೇ ಇದು. ಆ ಒಂದು ಹಂತವನ್ನು ದಾಟಿದಾಗ ಅದು ಕ್ರಮೇಣ ಮರೆಯಾಗುತ್ತದೆ. ಈ ರೀತಿಯ ಪ್ರೀತಿಯಲ್ಲಿ ಸಿಲುಕಿದ ಮಕ್ಕಳಿಗೆ ಚಿಕಿತ್ಸೆಯೂ ಬೇಕಾಗುವುದಿಲ್ಲ. ಹೆಚ್ಚೆಂದರೆ ಕೌನ್ಸೆಲಿಂಗ್ ಮಾಡಿದರೆ ಸಾಕಾಗುತ್ತದೆ’ ಅಂತಾರೆ ಮನಃಶಾಸ್ತ್ರಜ್ಞೆ ಡಾ|ಲತಾ.
ಆದರೂ ಈ ಪ್ರೀತಿಯ ಸೆಳೆತಕ್ಕೆ ಬಿದ್ದವರಿಗೆ ಏಕಾಗ್ರತೆಯ ಕೊರತೆ ಆಗಬಹುದು. ಕೆಲವೊಮ್ಮೆ ತಾವೂ ದೊಡ್ಡವರಂತೆಯೇ ಪ್ರೇಮಪತ್ರಗಳನ್ನು ಕೊಡುವಂತಹ ಸಾಹಸಕ್ಕೂ ಇಳಿದು ತಮ್ಮ ಪರಿಸರದಲ್ಲೇ ಗಾಸಿಪ್ ಹುಟ್ಟಿಕೊಳ್ಳುವುದಕ್ಕೂ ಕಾರಣವಾಗಬಹುದು. ತಾನು ಪ್ರೀತಿಸುವ ಹುಡುಗನ ಬಗೆಗೆ ಡೈರಿಯಲ್ಲಿ ಬರೆದಿಟ್ಟುದನ್ನು ಅಮ್ಮ ಓದಿದಳೆಂಬ ಕಾರಣಕ್ಕೇ ಹತ್ತರ ಹರೆಯದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೂ ಬೆಂಗಳೂರಿನಲ್ಲಿ ನಡೆದಿದೆ.
ಮಕ್ಕಳಲ್ಲಿ ಪಪ್ಪಿ ಲವ್ ಶುರುವಾಯಿತೆಂದಾಕ್ಷಣ ಹೆತ್ತವರ ಗಮನಕ್ಕೆ ಅದು ಬಂದೇ ಬರುತ್ತದೆ. ಅದನ್ನು ನಕ್ಕು ಆನಂದಿಸುವ ಹಾಗೆಯೇ ಒಳಗೊಳಗೇ ಮಕ್ಕಳ ಮೇಲೆ ಕೊಂಚ ನಿಗಾ ಇಡಬೇಕಾದ್ದೂ ಹೆತ್ತವರ ಕರ್ತವ್ಯ. ಹೀಗಾದರೆ ಮಕ್ಕಳು ಈ ಆರಂಭಿಕ ಹಂತದ ‘ಕ್ರಶ್’ ಅನ್ನೇ ಪ್ರೇಮವೆಂದು ಗಂಭೀರವಾಗಿ ಪರಿಗಣಿಸುವುದನ್ನು ತಪ್ಪಿಸಬಹುದು. ಕೆಲವೊಮ್ಮೆ ಈ ಪ್ರೀತಿ ಮುರಿದು ಹೋದಂತೆನಿಸಿದಾಗ ಮಕ್ಕಳು ಕುಗ್ಗಿ ಹೋಗುವ ಸಂದರ್ಭದಲ್ಲೂ ಹೆತ್ತವರ ಕಾಳಜಿ ಅವರಿಗೆ ಬೇಕು. ಆದರೆ, ಹೀಗೆ ಹಳಿ ತಪ್ಪುವ ಪ್ರಕರಣಗಳು ಬಹು ಕಡಿಮೆ.
ಪಪ್ಪಿ ಲವ್ ಯಾವ ಸ್ವರೂಪದಲ್ಲೇ ಇರಲಿ, ಅದು ಮಗುವಿಗೊಂದು ವಿಶೇಷ ಆತ್ಮವಿಶ್ವಾಸವನ್ನು ನೀಡುವುದು ಸುಳ್ಳಲ್ಲ. ಮೊತ್ತಮೊದಲ ಬಾರಿಗೆ ತನ್ನ ಮನೆಯಿಂದ ಹೊರತಾದವರೊಬ್ಬರನ್ನು ಅದು ಪ್ರೀತಿಸಿರುತ್ತದೆ. ಹಾಗೆಂದು, ಈ ಪ್ರೀತಿಯನ್ನೇ ಕೊನೆತನಕ ಉಳಿಸಿಕೊಳ್ಳುತ್ತೇನೆ ಅನ್ನುವುದು ಮಾತ್ರ ಮೂರ್ಖತನ. ಇಂತಹ ಮೂರ್ಖತನಕ್ಕೆ ಯಾರೂ ಇಳಿಯುವುದೂ ಇಲ್ಲ. ಈ ಎಳೆಯ ಪ್ರೇಮದ ಮಾಯೆಯೇ ಹಾಗೆ, ಗೊತ್ತಾಗದಂತೆ ಬರುತ್ತದೆ, ಸದ್ದಿಲ್ಲದೇ ಹೊರಟು ಹೋಗಿಬಿಡುತ್ತದೆ.
—–

ಮಕ್ಕಳಲ್ಲಿ ಹದಿಹರೆಯದ ಹಂತದಲ್ಲಾಗುವ ಯಾವುದೋ ಹಾರ್ಮೋನ್ ಬದಲಾವಣೆಯಿಂದ ಇದು ಬರುವುದಿರಬೇಕು. ಹೆಚ್ಚಾಗಿ ಮನೆಯಿಂದ ಹೊರತಾದ ಪರಿಸರದಲ್ಲಿ ಎಲ್ಲರೂ ಮಕ್ಕಳನ್ನು ಆದರಿಸುವುದಿಲ್ಲ. ಇಂಥಲ್ಲಿ ಅವರನ್ನು ವಿಶೇಷವಾಗಿ ಯಾರೋ ಆತ್ಮೀಯತೆಯಿಂದ ಕಂಡು ಪ್ರೀತಿ ನೀಡಿದಾಗ ಮಕ್ಕಳಲ್ಲಿಯೂ ಒಂದು ಅಟ್ಯಾಚ್‌ಮೆಂಟ್ ಬೆಳೆಯುತ್ತದೆ. ಇದನ್ನೇ ‘ಪಪ್ಪಿ ಲವ್’ ಅನ್ನಬಹುದು. ಓದಿನಲ್ಲಿ ಏಕಾಗ್ರತೆ ನಷ್ಟವಾಗೋದು, ತುಂಬಾ ಚೆಂದವಾಗಿ ತಮ್ಮನ್ನು ಸಿಂಗರಿಸಿಕೊಳ್ಳೋದು ಇಂತಹುದರಲ್ಲೂ ಅವರ ‘ಪಪ್ಪಿ ಲವ್’ ಪ್ರಭಾವ ಕಾಣಿಸಿಕೊಳ್ಳಬಹುದು. ಆದರೆ, ಇದು ಶಾಶ್ವತವಾಗಿ ಉಳಿಯುವುದಿಲ್ಲ. ಇದೊಂದು ಪಾಸಿಂಗ್ ಸ್ಟೇಜ್ ಅಷ್ಟೇ.
ಡಾ. ಕೆ.ಎಸ್. ಲತಾ, ಮನಃಶಾಸ್ತ್ರಜ್ಞೆ, ಕೆಎಂಸಿ, ಮಣಿಪಾಲ.

ಟೀನೇಜ್ ತಲ್ಲಣ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಫ್ಯಾಷನ್ ಮಾಡ್ಬೇಕು ಅಂತ ಆಸೆ. ಆದ್ರೆ ಹೇಗೆ ಮಾಡಿದ್ರೆ ತನಗೊಪ್ಪುತ್ತೆ? ಫ್ರೆಂಡ್ಸ್ ಎಲ್ಲಾ ಕ್ಲಾಸ್‌ಗೆ ಬಂಕ್ ಮಾಡ್ತಾರಂತೆ, ನಾನೂ ಮಾಡ್ಲಾ? ಡಿಗ್ರಿ ಆದ್ಮೇಲೆ ಪಿಜಿ ಮಾಡ್ಲಾ, ಕೆಲಸಕ್ಕೆ ಸೇರಲಾ? ಅವ್ಳು ನನ್ನ ಫ್ರೆಂಡ್ ನಿಜ. ಆದ್ರೂ… ಯಾಕೋ ಕಸಿವಿಸಿ. ಓಹ್, ಎಷ್ಟೆಲ್ಲಾ ತಳಮಳ…? ಈ ಹದಿಹರೆಯವೇ ಹಾಗೆ, ದಿನಕ್ಕೊಂದು ಡೈಲೆಮಾದಿಂದ ಮನವನ್ನು ಕುದಿಸುತ್ತದೆ. ನಿತ್ಯವೂ ಕಾಡುವ ಈ ದ್ವಂದ್ವಗಳ್ಯಾವುವು?

ಪಕ್ಕದಲ್ಲಿ ಕೂರೋ ದೀಕ್ಷಾ ತುಂಬಾ ಸ್ಟೈಲಿಷ್ ಆಗಿ ಬರ್‍ತಾಳೆ. ನಾನೂ ಹಾಗೇ ಬಂದ್ರೆ ಹೇಗಿರುತ್ತೆ? ಅಥ್ವಾ ನನ್ ಬಾಡಿ ನೇಚರ್‌ಗೆ ಅದು ಸರಿ ಹೋಗೋಲ್ವಾ? ಯಾರನ್ನ ಕೇಳೋದು? – ಪಿಯುಸಿ ಓದುತ್ತಿರೋ ಸಂಜನಾಳ ತಳಮಳ ಇದು. ಡಿಗ್ರಿ ಓದೋ ಪ್ರಣವನಿಗೆ ಇನ್ನೊಂದು ದ್ವಂದ್ವ. ಅವನ ಜೊತೆಗಾರರೆಲ್ಲ, ‘ಈಗ ಮಜಾ ಮಾಡೋಣ ಕಣೋ, ಎಕ್ಸಾಮ್ ಟೈಮ್‌ಗೆ ಓದ್ಕೊಂಡ್ರಾಯ್ತು’ ಅನ್ನುತ್ತಾ ಜೊತೆಗೆ ಬಾ ಅಂತ ಕರೀತಾರೆ. ಅವರ ಜೊತೆ ಹೋಗ್ಲಾ  ಅಥವಾ ಲೈಬ್ರರಿಗೆ ಹೋಗ್ಲಾ ಅಂತ ನಿತ್ಯ ತಲೆಬಿಸಿ ಅವನಿಗೆ.
ಇವರಿಬ್ಬರಿಗಷ್ಟೇ ಅಲ್ಲ ಈ ಬಗೆಯ ತಳಮಳ, ಹದಿಹರೆಯದ ಹಂತಕ್ಕೆ ಕಾಲಿಟ್ಟ ಎಲ್ಲ ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ವಿಷಯದಲ್ಲಿ ಅದೇನೋ ಗೊಂದಲ, ಅದೇನೋ ತಲ್ಲಣ. ವ್ಯಕ್ತಿತ್ವಕ್ಕೊಂದು ಸ್ವಂತ ಗುರುತು ಕಂಡುಕೊಳ್ಳುವ ಪ್ರಶ್ನೆಯಿಂದ ತೊಡಗಿ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಎನ್ನುವವರೆಗೆ ಇವರ ಮುಂದೆ ಇರುವುದು ಪ್ರಶ್ನೆಗಳೋ ಪ್ರಶ್ನೆಗಳು.
ನಿಮ್ಮೊಳಗಿದ್ದೂ…
ಎಲ್ಲರ ಜೊತೆಗಿದ್ದೂ ಎಲ್ಲರಂತಾಗದಿರುವ ಪ್ರಯತ್ನವಿದು. ಗೆಳೆಯರ ಗುಂಪಿನಲ್ಲಿ ಸೇರಿಕೊಳ್ಳಬೇಕು, ಆದರೆ ಅವರೆಲ್ಲರೂ ಮಾಡಿದಂತೆ ಮಾಡಲು ಮನಸ್ಸೊಪ್ಪುವುದಿಲ್ಲ. ಸಹಪಾಠಿಗಳ ಪ್ರಭಾವ ಒತ್ತಡವಾಗಿಬಿಡುವುದು ಹೀಗೆ. ಗೆಳೆಯರೆಲ್ಲಾ ಕ್ಲಾಸ್ ಬಂಕ್ ಮಾಡಿದರೆ ತಾನು ಮನಸ್ಸಿಲ್ಲದಿದ್ದರೂ ಮಾಡಬೇಕು, ಮಾಡದಿದ್ದರೆ? ತಾನೇ ಪ್ರತ್ಯೇಕವಾಗಿ ನಿಲ್ಲು ವ ಭಯ. ಇತರರಿಗೆ ಚಿಕ್ಕದೆಂದು ಕಾಣುವ ವಿಷಯವೂ ಇವರಿಗೀಗ ದೊಡ್ಡ ವಿಷಯ. ಪಿಯೂಸಿಗೆ ಹಾಸ್ಟೆಲ್‌ಗೆ ಸೇರಿರುವ ಪುಟ್ಟಿಗೆ ತಾನು ಹೇಗೆ ಓದಿಕೊಳ್ಳುವುದೆಂಬುದೇ ಸಮಸ್ಯೆ. ತನ್ನ ರೂಮ್‌ಮೇಟ್ಸ್ ಎಲ್ಲಾ ಕಾರಿಡಾರ್‌ನಲ್ಲಿ ದೊಡ್ಡದಾಗಿ ಓದಿಕೊಳ್ಳುತ್ತಾರೆ, ತಾನು ಹೇಗೆ ಓದಿಕೊಂಡರೆ ಸರಿ? ಗಟ್ಟಿಯಾಗಿ ಹೇಳಿಕೊಳ್ಳುತ್ತಾ ಓದಿದರೆ ಪಾಠ ಬೇಗ ನೆನಪಿನಲ್ಲಿ ಉಳಿಯುತ್ತದೆ ಅಂತಾಳೆ ಪಕ್ಕದ ಬೆಂಚ್‌ನ ಪ್ರಣಮ್ಯಾ. ತನಗೋ ಮನಸ್ಸಿನಲ್ಲೇ ಓದುವ ಅಭ್ಯಾಸ. ಹಾಗಿದ್ದರೆ ಹೇಗೆ ಓದಲಿ?
ಇಂಥ ಸಮಸ್ಯೆಗಳ ಜೊತೆಗೇ ಎದುರಾಗುತ್ತದೆ ಐಡೆಂಟಿಟಿ ಕ್ರೈಸಿಸ್. ಅಪ್ಪ-ಅಮ್ಮನ ಕೋಶದಿಂದ ಹೊರಬಂದು ತನ್ನದೇ ಜಗತ್ತಿನಲ್ಲಿ ತನ್ನದೊಂದು ಗುರುತನ್ನು ಸ್ಥಾಪಿಸುವ ಸಮಯವಿದು. ಇಲ್ಲಿ ತನಗೊಂದು ಅಸ್ತಿತ್ವ ಕಂಡುಕೊಳ್ಳುವುದು ಕಷ್ಟವೇ. ನಾನು ಹೀಗೆ, ನನ್ನ ಅಭಿಪ್ರಾಯ ಇದು ಎಂದು ಗಟ್ಟಿಯಾಗಿ ಮಾತಾಡುವ ದೃಢತೆಯನ್ನು ಬೆಳೆಸಿಕೊಳ್ಳುವುದೇ ಇಲ್ಲೊಂದು ಸವಾಲು.
ಯಾವ ಓದು? ಏನು ಕೆಲ್ಸ?
ಹಂತ ಹಂತದಲ್ಲೂ ಎದುರಾಗೋ ಪ್ರಶ್ನೆ ಇದು. ಹತ್ತನೇ ಕ್ಲಾಸ್ ಮುಗಿದಾಕ್ಷಣ ಮುಂದೇನು ಅನ್ನೋ ಗೊಂದಲ ಕೆಲವರನ್ನಾದರೂ ಕಾಡುತ್ತದೆ. ಅಂಕ ಹೆಚ್ಚು ಸಿಕ್ಕಿತೆಂದು ಸೈನ್ಸ್‌ಗೆ ಹೋಗೋದೋ ಅಥವಾ ಇಷ್ಟದ ಆರ್ಟ್ಸ್ ತೆಗೆದುಕೊಳ್ಳೋದೋ.. ಪಿಯುಸಿಯಲ್ಲಿ ಕಾಮರ್ಸ್ ಓದಿ ಆಯ್ತು. ಇನ್ನು ಬಿಕಾಂ ಮಾಡೋದಾ ಬಿಬಿಎಮ್ಮಾ ಅಥವಾ ಸಿಎ ಫೌಂಡೇಶನ್ ಕೋರ್ಸ್ ಬರಿಯೋದಾ? ಅಥವಾ ಇದೆಲ್ಲಾ ಬಿಟ್ಟು ಕಾವಾಗೆ ಚಿತ್ರಕಲೆ ಕಲಿಯಲು ಹೋಗಿಬಿಡಲಾ? ಈ ಪ್ರಶ್ನೆಗಳನ್ನೆಲ್ಲ ಮುಂದಿಟ್ಟು ಕುಳಿತವರಿಗೇ ಗೊತ್ತು ತಮ್ಮ  ತಲ್ಲಣಗಳ ಗಂಭೀರತೆಗಳು. ಇವಕ್ಕೆಲ್ಲ ಸರಿಯಾಗಿ ಉತ್ತರಿಸಿಕೊಳ್ಳಲಾಗದವರೂ ಮುಂದೆಂದೋ ಹಿಡಿದ ದಾರಿ ಬಿಟ್ಟು ತಮಗೊಲಿವ ದಾರಿಯತ್ತ ಬರುವುದುಂಟು. ನಿರ್ಧರಿಸುವ ಹಂತದಲ್ಲೇ ತಮಗೆ ಹೊಂದುವ ಮಾರ್ಗ ಹಿಡಿದಿದ್ದರೆ ಇವರು ಹೀಗೆ ಮತ್ತೆ ಮಾರ್ಗ ಬದಲಿಸುವ ಪ್ರಮೇಯ ಬರಲಾರದು.
ಓದುತ್ತಿರುವಾಗಲೇ ನಾನು ಮುಂದೆ ಏನಾಗುತ್ತೇನೆ ಎಂಬ ಯೋಚನೆ ಬಹುತೇಕರ ತಲೆ ತಿನ್ನುತ್ತಲೇ ಇರುತ್ತದೆ. ಪಿಜಿ ಮಾಡಲಾ ಕೆಲಸಕ್ಕೆ ಸೇರಲಾ ಅನ್ನೋದು ಕೆಲವರ ಡೈಲೆಮಾ. ತನಗೆ ಸರಿಹೊಂದೋ ಕೆಲಸ ಯಾವುದು ಅಂತ ನಿರ್ಧರಿಸೋ ಕಷ್ಟ ಇನ್ನು ಹಲವರಿಗೆ. ಪಿಜಿ ಮಾಡಿದ್ದಾಗಿದೆ, ಲೆಕ್ಚರರ್ ಆಗಲಾ ಅಥವಾ ಸೀದಾ ಫೀಲ್ಡ್‌ಗಿಳಿಯಲಾ? ಗೆಳೆಯ ಟೀಚಿಂಗ್ ಫೀಲ್ಡ್‌ಗೆ ಹೋಗ್ತಾನಂತೆ, ನಾನೇನು ಮಾಡಲಿ? ‘ನನಗೆ ಪದವಿ ಮುಗಿದಾಗ ಲೈಬ್ರರಿ ಸೈನ್ಸ್‌ನಲ್ಲಿ ಮೆರಿಟ್ ಸೀಟ್ ಸಿಕ್ಕಿತ್ತು. ಆದರೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆ ಸೇರಬೇಕೆಂಬುದು ನನ್ನ ಇಷ್ಟವಾಗಿತ್ತು. ಆದರೆ ಮನೆಯಲ್ಲಿ ನಾನು ಲೈಬ್ರರಿ ಸೈನ್ಸ್‌ಗೆ ಸೇರಲಿ ಎಂದೇ ಎಲ್ಲರ ಅಭಿಪ್ರಾಯವಿತ್ತು. ಆಗ ಒಂದು ಕ್ಷಣ ಗೊಂದಲವಾದರೂ ನಾನು ಪತ್ರಿಕೋದ್ಯಮವೇ ಬೇಕೆಂದು ಕಾದು ಸೇರಿಕೊಂಡೆ’ ಅಂತಾರೆ ಧಾರವಾಡದ ಪತ್ರಿಕೋದ್ಯಮ ವಿದ್ಯಾರ್ಥಿ ರವಿ ಹಲ್ಲೂರು. ಹೀಗೆ ಪ್ರತಿಯೊಬ್ಬರ ಒಳಗೂ ಒಂದೊಂದು ಸಮಸ್ಯೆ.
ಸಂಬಂಧಗಳ ಸರಿಗಮ
ಸಂಬಂಧಗಳನ್ನು ನಿಭಾಯಿಸೋದೇ ಇನ್ನೊಂದು ದೊಡ್ಡ ಕೆಲಸ. ಗೆಳೆಯರನ್ನು ಆಯ್ಕೆ ಮಾಡುವಲ್ಲಿಂದಲೇ ತೊಡಕು ಶುರು. ಫ್ರೆಂಡ್ಸ್ ಹೇಗಿರಬೇಕು ಅಂತ ನಿರ್ಧರಿಸುವುದೇ ದೊಡ್ಡ ಯಕ್ಷಪ್ರಶ್ನೆ. ಗೆಳೆಯನೋ ಗೆಳತಿಯೋ ತನ್ನದೇ ಅಭಿರುಚಿಯವರಾಗಿರಬೇಕಾ, ಭಿನ್ನ ದಾರಿಯಲ್ಲಿ ನಡೆಯುವವರೂ ಆಗಬಹುದಾ, ಗೆಳೆಯರೆಂದು ನಂಬಿಕೊಂಡವರು ತನ್ನನ್ನು ಡಾಮಿನೇಟ್ ಮಾಡುವಂತಾದರೆ ಏನು ಮಾಡಬಹುದು… ಸ್ನೇಹಿತರೊಂದಿಗೆ ಎಷ್ಟರಮಟ್ಟಿಗೆ ಬೆರೆಯಬೇಕು, ಓದನ್ನೂ ಗೆಳತನವನ್ನೂ ಬ್ಯಾಲೆನ್ಸ್ ಮಾಡುವುದು ಹೇಗೆ? ಟೀನೇಜ್ ಹಂತದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ನೀರೆರೆಯುವ ಗೆಳೆತನವೇ ಇಷ್ಟೆಲ್ಲ ಸಂದೇಹಗಳನ್ನೂ ಜೊತೆಗೇ ಹುಟ್ಟುಹಾಕುವುದು ಮಾತ್ರ ಸುಳ್ಳಲ್ಲ. ‘ನಾನು ಡಿಗ್ರಿಯಲ್ಲಿ ಓದುತ್ತಿದ್ದಾಗ ಫ್ರೆಂಡ್ಸ್ ಜೊತೆ ಇದ್ದ ಒಡನಾಟಕ್ಕೂ ಪಿಜಿ ಗೆ ಬಂದಮೇಲಿನ ಒಡನಾಟಕ್ಕೂ ವ್ಯತ್ಯಾಸವಿದೆ. ಇಲ್ಲಿ ಫ್ರೆಂಡ್ಸ್ ಮೂವ್ ಮಾಡೋ ರೀತಿ ವಿಚಿತ್ರ ಅನ್ನಿಸಿತು. ಆದರೂ ಈಗ ಅಡ್ಜಸ್ಟ್ ಆಗಿದ್ದೇನೆ’ ಅಂತಾರೆ ಬೆಂಗಳೂರಿನ ಎಂಬಿಎ ವಿದ್ಯಾರ್ಥಿನಿ ಸ್ವಾತಿ.
ಫ್ರೆಂಡ್‌ಶಿಪ್‌ನ ಬೆನ್ನಿಗೇ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಜೊತೆಗಿನ ‘ರಿಲೇಶನ್‌ಶಿಪ್’ಗಳೂ ಹಣಕಿ ಹಾಕುತ್ತವೆ. ಈ ಹುಡುಗ-ಹುಡುಗಿಯರ ಸಂಗದಿಂದಲೇ ಓದಿನ ಹಳಿ ತಪ್ಪಿಸಿಕೊಂಡು ನಡೆದವರುಂಟು. ಎಲ್ಲೋ ಮೋಸವಾಗಿ ಇನ್ನಿಲ್ಲದಂತೆ ಗೋಳಾಡಿದವರುಂಟು. ಅಂಥಾ ಉದಾಹರಣೆಗಳನ್ನೆಲ್ಲ ಕೇಳುವಾಗ ಛೇ, ಬೇಡಪ್ಪ ಸಹವಾಸ ಅನ್ನಿಸುವುದೇನೋ ನಿಜ. ಆದರೆ, ಕಾಡುವ ಮನ ಕೇಳಬೇಕಲ್ಲ…
ಓದಿಯೂ ಆಯ್ತು, ಕೆಲಸಕ್ಕೆ ಸೇರಿದ್ದೂ ಆಯ್ತು. ಉದ್ಯೋಗದ ಈ ಹೊಸ ವಾತಾವರಣದಲ್ಲಿ ಮತ್ತೆ ವ್ಯಕ್ತಿಗಳ ಜೊತೆಗಿನ ಬಂಧ ಬೇರೆಯದೇ ಆಗಿರುತ್ತದೆ. ಈ ಕೆಮಿಸ್ಟ್ರಿಯನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಹಿರಿಯರ ಜೊತೆ, ಸಹೋದ್ಯೋಗಿಗಳ ಜೊತೆ ಹೇಗೆ ಹೇಗೋ ವರ್ತಿಸಿ ಏನೋ ಎಡವಟ್ಟುಗಳನ್ನೂ ಮಾಡಿಕೊಂಡಾಗಿರುತ್ತದೆ. ಇನ್ನೊಂದಷ್ಟು ತಿಂಗಳುಗಳು ಹೋದಾಗ ಮನಸ್ಸು ಹೇಳುತ್ತದೆ, ‘ಇದು ಕಾಲೇಜು ಕ್ಯಾಂಪಸ್‌ನ ಹಾಗಲ್ಲ..’
ಎಲ್ಲಾ ಇದೆ ನಮ್ಮೊಳಗೆ
ವ್ಯಕ್ತಿಯೊಬ್ಬ ತನಗೊಂದು ನೆಲೆ ಕಂಡುಕೊಳ್ಳುವ ಈ ಕ್ಷಣಗಳಲ್ಲಿ ಇಷ್ಟೆಲ್ಲಾ ದ್ವಂದ್ವಗಳು ಸಹಜವೇ. ಆದರೆ, ಇವುಗಳು ಎದುರಾದ ತಕ್ಷಣವೇ ಧೃತಿಗೆಡುವುದು ತರವಲ್ಲ. ಪ್ರತಿಯೊಬ್ಬ ಪ್ರೌಢವ್ಯಕ್ತಿಯೂ ಇಂತಹ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡೇ ಬೆಳೆದಿರುತ್ತಾನೆ. ಅವರೆಲ್ಲರೂ ಹಿರಿಯರ, ಗೆಳೆಯರ ಮಾರ್ಗದರ್ಶನ, ಸಲಹೆಯನ್ನು ಪಡೆದೇ ತನ್ನ ಗೊಂದಲ ಪರಿಹರಿಸಿಕೊಂಡಿರುತ್ತಾರೆ. ಮನೋವೈದ್ಯರು ಹೇಳುವುದೂ ಇದನ್ನೇ. ‘ಇಂತಹ ಒತ್ತಡಗಳು ಅತಿಯಾಗಿ ಕಾಡಿದಾಗ ಅನೇಕ ಟೀನೇಜರ್‍ಸ್ ಡ್ರಗ್ಸ್, ಆಲ್ಕೋಹಾಲ್‌ಗಳ ಚಟಕ್ಕೆ ಬೀಳುವುದೂ ಇದೆ. ಅದಕ್ಕೇ ಇಂತಹ ಸಮಸ್ಯೆಗಳನ್ನು ಬೆಳೆಯಲು ಬಿಡಬಾರದು. ಮೊದಲು ತಮ್ಮ ಮನೆಯವರ ಬಳಿ ಹೇಳಿಕೊಳ್ಳಬಹುದು. ಅಥವಾ ಆತ್ಮೀಯ ಗೆಳೆಯರು, ಲೆಕ್ಚರರ್‍ಸ್ ಹತ್ರ ಹೇಳಿಕೊಂಡರೂ ಪರಿಹಾರ ಸಿಗಬಹುದು. ಕಾಲೇಜುಗಳಲ್ಲೇ ಕೌನ್ಸೆಲರ್‍ಸ್ ಇರುವುದೂ ಉಂಟು, ಹಾಗಿದ್ದಲ್ಲಿ ಅವರ ಬಳಿಯೇ ಹೋಗಬಹುದು. ಇಲ್ಲೆಲ್ಲಿಯೂ ಸಮಾಧಾನ ಸಿಗಲಿಲ್ಲವಾದರೆ ಸೈಕಾಲಜಿಸ್ಟ್ ಅಥವಾ ಕೌನ್ಸೆಲರ್‌ಗಳ ನೆರವು ತೆಗೆದುಕೊಳ್ಳಬಹುದು’ ಅಂತಾರೆ ಮನೋವೈದ್ಯೆ ಡಾ. ಪಾವನಾ ರಾವ್.
ಹದಿಹರೆಯವೆಂದರೆ ವ್ಯಕ್ತಿ ತನ್ನ ಪಾಲಿನ ನಿರ್ಧಾರವನ್ನು ತಾನೇ ತೆಗೆದುಕೊಳ್ಳು ಶಕ್ಯವಾಗುವ ಹಂತ. ಆದ್ದರಿಂದ ಇಂತಹ ದ್ವಂದ್ವಗಳ ಸಂದರ್ಭದಲ್ಲಿಯೂ ತಮ್ಮ ಕುರಿತಾದ ನಿರ್ಧಾರಗಳನ್ನು ತಾವೇ ತೆಗೆದುಕೊಂಡು ಅದಕ್ಕೆ ತಾವೇ ಜವಾಬ್ದಾರರಾದರೆ ವ್ಯಕ್ತಿತ್ವಕ್ಕೆ ವಿಶಿಷ್ಟ ದೃಢತೆಯೂ ಸಿಗುತ್ತದೆ. ತಮ್ಮೊಳಗಿನ ಈ ತೀರ್ಪುಗಾರನನ್ನು ಎಚ್ಚರಿಸಿ, ತರ್ಕಕ್ಕೆ ಒಳಪಡಿಸಿ, ಹಿರಿಯರ ಅನುಭವದ ಹಿನ್ನೆಲೆಯಲ್ಲಿ  ತಮ್ಮ ಗೊಂದಲ ನಿವಾರಿಸಿಕೊಳ್ಳುವ ಈ ಕ್ರಿಯೆ ಹೊಸ ಆತ್ಮವಿಶ್ವಾಸ ನೀಡುವುದಂತೂ ಹೌದು.
————–

ಫ್ರೆಂಡ್‌ಶಿಪ್ ವಿಷಯದಲ್ಲಿ ನಾನೂ ತುಂಬಾ ಡೈಲೆಮಾ ಎದುರಿಸಿದ್ದೇನೆ. ಎಷ್ಟೋ ಬಾರಿ ಫ್ರೆಂಡ್ಸ್‌ನಿಂದ ನಾವು ನಿರೀಕ್ಷೆ ಮಾಡಿರೋ ವಿಷ್ಯ ಸಿಕ್ಕಿರೋದಿಲ್ಲ. ನಾವು ಬಯಸಿದ ದಾರಿ ಬಿಟ್ಟು ಅವರ ದಾರಿಗೇ ನಮ್ಮನ್ನವರು ಎಳೀತಾ ಇದ್ದಾರೇನೋ ಅನ್ನೋ ಸಂದೇಹ ಬರೋದಿದೆ.
-ಶ್ರುತಿ ಕೆ., ಅಂತಿಮ ಬಿಎ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ.
ನನಗೆ ಡಿಗ್ರಿ ಮಾಡಿದ ಬಳಿಕ ಯಾವ ಕೋರ್ಸ್‌ಗೆ ಸೇರಿಕೊಳ್ಳಲಿ ಎಂಬ ದ್ವಂದ್ವ ಇತ್ತು. ಹಾಗೇ ಈಗಲೂ ಪಿಜಿ ಆದ ಬಳಿಕ ಇಲೆಕ್ಟ್ರಾನಿಕ್ ಮೀಡಿಯಾಗೆ ಹೋಗಲಾ ಅಥವಾ ಪ್ರಿಂಟ್ ಮೀಡಿಯಾಗೆ ಹೋಗಲಾ ಎಂಬ ದ್ವಂದ್ವ ಕಾಡಿತ್ತು. ಇಂಥ ಸಂದರ್ಭದಲ್ಲೆಲ್ಲ ನಾನು ನನ್ನ ಹಿರಿಯರು, ಲೆಕ್ಚರರ್‍ಸ್‌ನ ಸಲಹೆ ಕೇಳ್ತೇನೆ.
ರವಿ ಹಲ್ಲೂರು, ದ್ವಿತೀಯ ಎಂಸಿಜೆ, ಕರ್ನಾಟಕ ವಿವಿ, ಧಾರವಾಡ.
————-