ಚಲನಚಿತ್ರಗಳಲ್ಲಿ ನಟಿಯರ ಸಂಖ್ಯೆ ಸಾಕಷ್ಟಿದೆ. ನೃತ್ಯ ಮಾಡುವ ಬೆಡಗಿಯರೂ ಸಾಕಷ್ಟಿದ್ದಾರೆ. ಆದರೆ ನಿರ್ದೇಶಕಿಯರು ಮಾತ್ರ ಕಡಿಮೆ. ಏಕೆ ಹೀಗೆ?
ಹಾಗೇ ಕನ್ನಡದ ಚಿತ್ರ ನಿರ್ದೇಶಕರ ಹೆಸರನ್ನೊಮ್ಮೆ ನೆನಪುಮಾಡಿಕೊಳ್ಳೋಣ…
ಗಿರೀಶ್ ಕಾಸರವಳ್ಳಿ, ರವಿಚಂದ್ರನ್, ನಾಗಾಭರಣ, ಕಾಶೀನಾಥ್, ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, ಪ್ರಕಾಶ್, ಸೂರಿ, ಪಿ.ಶೇಷಾದ್ರಿ, ಎಸ್.ಮಹೇಂದರ್, ರಾಜೇಂದ್ರ ಸಿಂಗ್ ಬಾಬು, ಎಸ್.ನಾರಾಯಣ್, ಉಪೇಂದ್ರ… ಬರೆದಷ್ಟೂ ಮುಗಿಯುವುದೇ ಇಲ್ಲವೇನೋ ಎಂಬಂತೆ ಹೆಸರುಗಳ ಸಾಲು ಬೆಳೆಯುತ್ತದೆ. ಅದೇ ರೀತಿ ನಿರ್ದೇಶಕಿಯರ ಹೆಸರನ್ನೂ ಒಮ್ಮೆ ನೆನಪಿಸಿಕೊಂಡರೆ, ಕವಿತಾ ಲಂಕೇಶ್, ವಿಜಯಲಕ್ಷ್ಮಿ ಸಿಂಗ್, ಸುಮನಾ ಕಿತ್ತೂರು, ಪ್ರಿಯಾ ಹಾಸನ್, ರೂಪಾ ಅಯ್ಯರ್ – ಊಹೂಂ, ಎಷ್ಟು ಲೆಕ್ಕ ಹಾಕಿದರೂ ಈ ಸಂಖ್ಯೆ ಐದನ್ನು ದಾಟುವುದೇ ಇಲ್ಲ.
ಅದೇಕೋ ಏನೋ, ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಕ್ಕಿ ನಡೆಯುತ್ತಿರುವ ಹೆಣ್ಣುಮಕ್ಕಳು ಇಲ್ಲಿ ಮಾತ್ರ ಹಿಂದೆ ಹಿಂದೆ. ೧೯೮೩ರಲ್ಲಿ ಮೊದಲ ಬಾರಿಗೆ ಪ್ರೇಮಾ ಕಾರಂತರು ‘ಫಣಿಯಮ್ಮ’ ಚಿತ್ರ ನಿರ್ದೇಶಿಸಿದಾಗ ಕನ್ನಡದ ಮೊದಲ ಚಿತ್ರ ತೆರೆಗೆ ಬಂದು ಐದು ದಶಕಗಳೇ ಸಂದಿದ್ದವು. ಬಳಿಕ ೮೦ರ ದಶಕದ ಮಧ್ಯಭಾಗದಲ್ಲಿ ನಟಿ ಜಯಂತಿ ‘ವಿಜಯ್’ ಹಾಗೂ ‘ನೋಡಿ ಸ್ವಾಮಿ ಅಳಿಯಂದ್ರೆ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದು ಬಿಟ್ಟರೆ ಕನ್ನಡ ಚಿತ್ರರಂಗ ಮಹಿಳಾಮಣಿಯೊಬ್ಬರ ‘ಆಕ್ಷನ್-ಕಟ್’ ಕೇಳಲು ೧೯೯೯ರಲ್ಲಿ ಕವಿತಾ ಲಂಕೇಶ್ ‘ದೇವೀರಿ’ ನಿರ್ದೇಶಿಸುವವರೆಗೆ ಕಾಯಬೇಕಾಯಿತು. ಕಳೆದ ಐದು ವರ್ಷಗಳಿಂದೀಚೆಗೆ ವಿಜಯಲಕ್ಷ್ಮಿ ಸಿಂಗ್, ಪ್ರಿಯಾ ಹಾಸನ್, ಸುಮನಾ ಕಿತ್ತೂರು, ರೂಪಾ ಅಯ್ಯರ್ -ಇವರ ಎಂಟ್ರಿಯೊಂದಿಗೆ ಈ ರಂಗ ಇನ್ನಷ್ಟು ಕಲರ್‌ಫುಲ್ ಆಯಿತು. ಈ ಮಧ್ಯೆ ನಟಿ ಆರತಿಯೂ ‘ಮಿಠಾಯಿ ಮನೆ’ಯ ಸಿಹಿ ಉಣ್ಣಿಸಿದರು. ಇಷ್ಟಾದರೂ ಕನ್ನಡ ಚಿತ್ರರಂಗದಲ್ಲಿನ ನಿರ್ದೇಶಕಿಯರ ಸಂಖ್ಯೆ ಕಡಿಮೆಯೇ. ಕನ್ನಡದಲ್ಲಿ ಅಷ್ಟೇ ಅಲ್ಲ, ದಕ್ಷಿಣ ಭಾರತೀಯ ಭಾಷಾ ಚಿತ್ರಗಳಲ್ಲೇ ಮಹಿಳೆಯರ ಸಂಖ್ಯೆ ಕಡಿಮೆ. ಬಾಲಿವುಡ್‌ನಲ್ಲೂ ಇತ್ತೀಚೆಗಷ್ಟೇ ಕೆಲವು ಸ್ತ್ರೀಯರು ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗಿ ಬರುವ ಮಹಿಳೆಯರು ಇಲ್ಲಿ ಮಾತ್ರ ಏಕೆ ಕಡಿಮೆ? ಕೇಳಹೊರಟರೆ ಸಿಗುವ ವಾಸ್ತವಗಳು ಹಲವು.
ಪುರುಷರದೇ ಮೇಲುಗೈ
ಸಿನಿಮಾ ಮಾಡೋದಂದ್ರೆ ಸಣ್ಣ ಕೆಲಸವಲ್ಲ. ಇಲ್ಲಿ ಬೇರೆ ಬೇರೆ ಅಭಿರುಚಿಯುಳ್ಳ, ಭಿನ್ನ ಹಿನ್ನೆಲೆಯಿಂದ ಬಂದ ನೂರಾರು ಜನರಿರುತ್ತಾರೆ. ಇವರೆಲ್ಲರಿಂದಲೂ ಕೆಲಸ ತೆಗೆಸೋದು ಹೆಣ್ಣುಮಕ್ಕಳಿಗೆ ಕಷ್ಟ ಅನ್ನೋದು ಇಲ್ಲಿ ಪ್ರಚಲಿತದಲ್ಲಿರೋ ಮಾತು. ಮೂಲಭೂತವಾಗಿ ಸ್ತ್ರೀಯೊಬ್ಬಳು ತಮಗೆ ಆರ್ಡರ್ ಮಾಡುತ್ತಾಳೆಂಬುದನ್ನೇ ಪುರುಷರ ಇಗೋ ಸಹಿಸಲಾರದ ಸನ್ನಿವೇಶವೂ ಇಲ್ಲಿದೆ. ‘ಹೌದು, ಯಾವುದೋ ಕೆಲಸ ಹೇಳಿದ್ರೆ ‘ಇಲ್ಲ, ಆ ಥರ ಮಾಡೋಕಾಗಲ್ಲ’ ಅಂತ ಸೋಂಬೇರಿತನ ತೋರಿಸ್ತಾರೆ. ನಾವೇ ಮಾಡಿ ತೋರಿಸಿದಾಗ ಸುಮ್ನಾಗ್ತಾರೆ. ಎಲ್ಲೋ ಒಂದು ಚೂರು ಬೈದ್ರೆ ಸಖತ್ ಜಂಭ ಆ ಹುಡ್ಗಿಗೆ, ಶಾರ್ಟ್ ಟೆಂಪರ್ ಅಂತ ಮಾತಾಡ್ತಾರೆ’ ಅಂತಾರೆ ಪ್ರಿಯಾ ಹಾಸನ್. ‘೪೦-೫೦ ದಿನಗಳ ಕಾಲ ಒಟ್ಟಿಗೇ ಕೆಲಸ ಮಾಡುವಾಗ ಕೆಲವು ಅಪ್ಸ್ ಅಂಡ್ ಡೌನ್ಸ್ ಬರೋದು ಸಹಜ. ಆದ್ರೆ, ಅದನನು ಮೀರಿ ಬೆಳೆಯೋದಕ್ಕೆ ನಾವು ಪ್ರಯತ್ನಿಸ್ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಾವು ಏನು ಮಾಡುತ್ತಿದ್ದೇವೆ ಅನ್ನೋದರ ಸ್ಪಷ್ಟ ಕಲ್ಪನೆ ಇದ್ದರೆ ಯಾರೂ ಡಿಸ್ಟರ್ಬ್ ಮಾಡೋಕಾಗಲ್ಲ’ ಅನ್ನೋ ಅಭಿಪ್ರಾಯ ಸುಮನಾ ಕಿತ್ತೂರು ಅವರದು.
ದುಡ್ಡು ಹಾಕುವವರಿಲ್ಲ
ಇದುವರೆಗೂ ಚಿತ್ರ ನಿರ್ದೇಶಿಸಿದ ಹೆಣ್ಣುಮಕ್ಕಳ ಹಿಂದೆ ಒಂದೊಂದು ಬ್ಯಾನರ್ ಅಥವಾ ಹೋಮ್ ಪ್ರೊಡಕ್ಷನ್ ಎನ್ನುವ ಬೆಂಬಲವಿದೆ. ಜಯಂತಿ, ವಿಜಯಲಕ್ಷ್ಮಿ ಸಿಂಗ್, ಪ್ರಿಯಾ ಹಾಸನ್ ತಮ್ಮದೇ ನಿರ್ಮಾಣದಡಿಯಲ್ಲಿ ಸಿನಿಮಾ ಮಾಡಿದವರು. ಅದರೆ ಇದ್ಯಾವುದೂ ಇಲ್ಲದೆ ಫಿಲ್ಮ್ ಮೇಕಿಂಗ್ ಕೋರ್ಸ್ ಮುಗಿಸಿಕೊಂಡು ಬಂದು ಚಿತ್ರ ನಿರ್ದೇಶಿಸುತ್ತೇನೆಂದು ಬರುವ ಹೆಣ್ಣುಮಗಳ ಚಿತ್ರಕ್ಕೆ ದುಡ್ಡು ಹಾಕುವವರಾರೂ ಇಲ್ಲ. ಹಾಕಿದರೂ ಅದಕ್ಕೆ ಪೂರ್ಣ ಪ್ರಮಾಣದ ಬೆಂಬಲ ಸಿಗುವುದೂ ಇಲ್ಲ ಅನ್ನುವುದು ಇಲ್ಲಿ ಕೇಳಿಬರುವ ಇನ್ನೊಂದು ಪರೋಕ್ಷ ಅನಿಸಿಕೆ. ‘ಮಹಿಳೆಯರು ಅಂದಕೂಡ್ಲೆ ಚಿತ್ರರಂಗದಲ್ಲಿ ಸೆಕೆಂಡರಿ ಸಿಟಿಝನ್ ಅನ್ನೋ ಥರಾನೇ ಟ್ರೀಟ್ ಮಾಡ್ತಾರೆ. ಇಲ್ಲಿ ನಾಯಕಿಗೆ ನಾಯಕನಿಗಿಂತ ಸಂಭಾವನೆ ಕಡಿಮೆ. ನಾಯಕಿ ಪ್ರಧಾನ ಚಿತ್ರವಾದ್ರೆ ಬಜೆಟ್ ಕಡಿಮೆ. ಆದ್ರೆ ನಿರ್ದೇಶಕಿಯೊಬ್ಬಳು ಚಿತ್ರ ಮಾಡೋವಾಗ ಆಕೆಗೆ ನಿರ್ಮಾಪಕರಿಂದ ಪೂರ್ಣ ಪ್ರಮಾಣದ ಭರವಸೆ ಬೇಕಿರುತ್ತದೆ. ನಾನು ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರ ನಿರ್ದೇಶಿಸೋವಾಗ ಮಾತ್ರ ನಿರ್ಮಾಪಕರು ಫುಲ್ ಫ್ರೀಡಂ ಕೊಟ್ಟಿದ್ರು’ ಅಂತಾರೆ ಕವಿತಾ ಲಂಕೇಶ್. ಅಮೆರಿಕಾದಲ್ಲಿರೋ ನಾರಾಯಣ ಹೊಸಮನೆ ನಿರ್ಮಾಣದ ‘ಮುಖಪುಟ’ ಚಿತ್ರ ನಿರ್ದೇಶಿಸಿದ ರೂಪಾ ಅಯ್ಯರ್ ಹೇಳೋದು ಹೀಗೆ, ‘ಹೆಣ್ಣುಮಕ್ಕಳಾದ್ರೆ ಚಿತ್ರೀಕರಣದ ವಾತಾವರಣ ತುಂಬಾ ನೀಟ್ ಆಗಿರ್‍ಬೇಕು ಅಂತ ಬಯಸ್ತಾರೆ. ಅವರು ದಿನದ ಎಲ್ಲಾ ಹೊತ್ತಿನಲ್ಲೂ ಚಿತ್ರ ಸಂಬಂ ಮಾತುಕತೆಗೆ ಸಿಗಲಾರರು. ಹಾಗೇ ಹುಡುಗಿಯಾಗಿದ್ರೆ ನಿರ್ಮಾಪಕರ ಜೊತೆ ಕಮ್ಯುನಿಕೇಟ್ ಮಾಡೋದಕ್ಕೆ, ಅವರನ್ನು ಕನ್ವಿನ್ಸ್ ಮಾಡೋದಕ್ಕೂ ಕಷ್ಟವಾಗಬಹುದು. ನಿರ್ಮಾಪಕರಿಗೂ ಮಹಿಳಾ ನಿರ್ದೇಶಕರ ಜೊತೆ ಅಷ್ಟಾಗಿ ಕಂಫರ್ಟೇಬಲ್ ಅನಿಸದಿದ್ದಾಗ ಅವರು ಮುಂದೆ ಬರಲಾರರು’.
ಪ್ರೋತ್ಸಾಹ ಇಲ್ಲ
‘ಪ್ರತಿಭೆಯನ್ನು ಗುರುತಿಸಿ ಎನ್‌ಕರೇಜ್ ಮಾಡೋ ಮನಃಸ್ಥಿತಿ ನಮ್ಮವರಿಗಿಲ್ಲ. ನಾನು ಮಾಡಿದ ಎರಡೂ ಚಿತ್ರಗಳಿಗೂ ಒಳ್ಳೆಯ ವಿಮರ್ಶೆ ಬಂತು. ಆದರೆ ಡಿಸ್ಟ್ರಿಬ್ಯೂಟರ್‍ಸ್, ಚೇಂಬರ್ ಹೀಗೆ ಇಂಡಸ್ಟ್ರಿಯ ಎಲ್ಲಾ ಕಡೆಯಿಂದಲೂ ಒಳ್ಳೆಯ ಸಹಕಾರ ಸಿಗಲಿಲ್ಲ. ‘ಸ್ವಾಮಿ ಅಳಿಯಂದ್ರೆ’ ಚಿತ್ರ ಮಾಡ್ತಿದ್ದ ಸಮಯದಲ್ಲಿ ಇಂಡಸ್ಟ್ರಿಯಲ್ಲಿ ಸ್ಟ್ರೈಕ್ ನಡೀತಾ ಇತ್ತು. ಈ ಸಮಯದಲ್ಲೇ ಸಿನಿಮಾ ರಿಲೀಸ್ ಮಾಡಿದ್ರು. ಹೀಗೆ ಮಾಡಿದ್ರೆ ಸಿನಿಮಾ ಓಡೋದಾದ್ರೂ ಹೇಗೆ?’ ಅಂತಾರೆ ಹಿರಿಯ ನಟಿ ಜಯಂತಿ. ಪ್ರಿಯಾ ಹಾಸನ್ ಕೂಡ ತಮ್ಮ ಕಹಿ ಅನುಭವದ ಹಿನ್ನೆಲೆಯಲ್ಲೇ ಮಾತನಾಡುತ್ತಾರೆ, ‘ಒಬ್ಬ ನಟ ನಿರ್ದೇಶಕನಾದರೆ ಇಂಡಸ್ಟ್ರಿ ಎಷ್ಟರಮಟ್ಟಿಗೆ ಪ್ರೋತ್ಸಾಹ ನೀಡುತ್ತೋ ಆ ಮಟ್ಟಿನ ಮನ್ನಣೆ, ಪ್ರೋತ್ಸಾಹ ಒಂದು ಹುಡುಗಿಗೆ ಸಿಗೋದಿಲ್ಲ. ಇಲ್ಲಿ ಬೆಳೆಸೋದಕ್ಕಿಂತ ತುಳಿಯೋ ಪ್ರಯತ್ನವೇ ಹೆಚ್ಚು. ಹೀಗೆ ಮಾಡಿದ್ರೆ ಈ ಫೀಲ್ಡ್‌ಗೆ ಯಾರು ಬರ್‍ತಾರೆ?’
ಓದಿದೋರು ಎಲ್ಲಿ ಹೋಗ್ತಾರೆ?
ಆದರೆ ಫಿಲ್ಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಂತಹ ಹಲವಾರು ಫಿಲ್ಮ್ ಸ್ಕೂಲ್‌ಗಳಲ್ಲಿ ಚಿತ್ರ ನಿರ್ದೇಶನವನ್ನು ಕಲಿಯಲಿಕ್ಕೆಂದೇ ಬಂದು ಸೇರುವ ಹೆಣ್ಣು ಮಕ್ಕಳು ಹಲವರಿದ್ದಾರೆ. ಇವರೆಲ್ಲ ನಿರ್ದೇಶನ ಕಲಿತ ಬಳಿಕ ಎಲ್ಲಿ ಹೋಗುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ‘ಅದೆಷ್ಟೋ ಹೆಣ್ಣುಮಕ್ಕಳು ಫಿಲ್ಮ್ ಸ್ಕೂಲ್‌ಗಳಿಗೆ ಸೇರುವುದು ನಿಜ. ಆದರೆ ಇವರಲ್ಲಿ ಬಹಳಷ್ಟು ಜನ ಡಾಕ್ಯುಮೆಂಟರಿ ಕ್ಷೇತ್ರದತ್ತ ಹೋಗುತ್ತಿದ್ದಾರೆ. ಚಿತ್ರ ನಿರ್ದೇಶನವೆಂದರೆ ಅದಕ್ಕೇ ಸಾಕಷ್ಟು ಸಮಯ ಮೀಸಲಿಡಬೇಕು. ನಟನಟಿಯರಿಗಾದರೆ ಮಧ್ಯದಲ್ಲಿ ವಿಶ್ರಾಂತಿ ಇರುತ್ತದೆ, ನಿರ್ದೇಶಕರಿಗೆ ಇದು ಇಲ್ಲ. ಡಾಕ್ಯುಮೆಂಟರಿಯಲ್ಲಾದರೆ ಅಷ್ಟೊಂದು ದೊಡ್ಡ ಟೀಮ್ ಮ್ಯಾನೇಜ್ ಮಾಡಬೇಕಿರೋದಿಲ್ಲ. ಅದಕ್ಕಾಗಿ ಅತ್ತ ಹೋಗುತ್ತಾರೋ ಏನೋ. ಇದಲ್ಲದೆ ಫೀಚರ್ ಫಿಲ್ಮ್‌ನಲ್ಲಿ ನಿರ್ದೇಶಕನನ್ನು ನಿರ್ಮಾಪಕನೇ ನಿರ್ಧರಿಸೋದು. ಒಟ್ಟಿನಲ್ಲಿ ಹೆಣ್ಣುಮಕ್ಕಳು ಇತ್ತ ಹೆಚ್ಚಾಗಿ ಬರದೇ ಇರೋದಕ್ಕೆ ಸಮಾಜವೂ ಕಾರಣ’ ಅಂತಾರೆ ನಿರ್ದೇಶಕ ಗಿರೀಶ್ ಕಾಸರವಳ್ಳಿ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಈ ಅಭಿಪ್ರಾಯಕ್ಕೆ ದನಿಗೂಡಿಸುತ್ತಾರೆ, ‘ನನ್ನ ಪ್ರತಿ ಸಿನಿಮಾದಲ್ಲೂ ನಿರ್ದೇಶನದ ವಿಭಾಗದಲ್ಲಿ ಒಬ್ಬಳಾದರೂ ಹೆಣ್ಣುಮಗಳು ಇದ್ದೇ ಇರುತ್ತಾರೆ. ಆದರೆ ಮಹಿಳಾ ನಿರ್ದೇಶಕರು ಅಗತ್ಯಕ್ಕಿಂತ ಕಡಿಮೆ ಇದ್ದಾರೆ, ಇವರ ಸಂಖ್ಯೆ ಇನ್ನೂ ಹೆಚ್ಚಬೇಕು. ಅನೇಕರು ಟಿವಿ ಸೀರಿಯಲ್‌ಗಳಲ್ಲಿ ನಟನೆ, ನಿರ್ದೇಶನದತ್ತಲೂ ಹೋಗುತ್ತಿದ್ದಾರೆ. ವರ್ಷದಲ್ಲಿ ಬಿಡುಗಡೆಯಾಗುವ ಸುಮಾರು ೧೫೦ ಚಿತ್ರಗಳಲ್ಲಿ ಶೇ.೧೦ರಷ್ಟಾದರೂ ಚಿತ್ರಗಳು ನಿರ್ದೇಶಕಿಯರದಾಗಿರುವುದಿಲ್ಲ’. ಆದರೆ ೨೦ ವರ್ಷಗಳಿಂದ ಡಾಕ್ಯುಮೆಂಟರಿ ನಿರ್ದೇಶಿಸುತ್ತಿರುವ ಜಯಶ್ರೀ ಅವರ ಅಭಿಪ್ರಾಯ ಬೇರೆಯೇ ಇದೆ, ‘ನಾನು ಈ ಕ್ಷೇತ್ರಕ್ಕೆ ಬರುವಾಗ ಡಾಕ್ಯುಮೆಂಟರಿ ನಿರ್ದೇಶಿಸುವವರು ಅಷ್ಟಾಗಿ ಯಾರೂ ಇರಲಿಲ್ಲ. ಈಗಲೂ ಅದೆಷ್ಟೋ ಹುಡುಗಿಯರು ಇಲ್ಲಿಗೆ ಬರುತ್ತಿದ್ದರೂ ಅವರು ಈ ಕೆಲಸದ ಮೇಲಿನ ಪ್ಯಾಷನ್‌ನಿಂದಾಗಿಯೇ ಬರುತ್ತಾರೆ. ಸಿನಿಮಾ ನಿರ್ಮಾಣಕ್ಕೆ ಬೇರೆಯದೇ ಆದ ದೃಷ್ಟಿಕೋನ, ಮೈಂಡ್‌ಸೆಟ್ ಬೇಕು’ ಅಂತಾರೆ ಅವರು. ‘ಬಹುಶಃ ಫಿಲ್ಮ್ ಸ್ಕೂಲ್‌ಗಳಲ್ಲಿ ಫೀಲ್ಡ್‌ನಲ್ಲಿ ಹೇಗಿರುತ್ತದೆ ಅನ್ನೋ ರಿಯಾಲಿಟಿ ಟೆಸ್ಟ್ ಆಗಿರೋದಿಲ್ಲ ಅನಿಸುತ್ತದೆ. ನನ್ನ ಆಫೀಸ್‌ಗೆ ಸಿನಿಮಾ ಮೇಕಿಂಗ್‌ನಲ್ಲಿ ಸೇರಿಕೊಳ್ಳೋದಕ್ಕೆ ಆಂತಾನೇ ತುಂಬಾ ಜನ ಬರ್‍ತಾರೆ. ಮೂರ್‍ನಾಲ್ಕು ದಿನ ಇರ್‍ತಾರೆ, ಆಮೇಲೆ ಕಾಣ್ಸೋದೇ ಇಲ್ಲ. ಸಿನಿಮಾ ನೋಡೋಕೆ ಮಾತ್ರ ಚಂದ, ಮಾಡೋದಕ್ಕಲ್ಲ’ ಅಂತಾರೆ ಕವಿತಾ.
ಸಮಯದ ಮಿತಿ
‘ಇದು ೯ರಿಂದ ೫ರವರೆಗಿನ ಜಾಬ್ ಅಲ್ಲ. ಸಂಜೆ ಶೂಟಿಂಗ್ ಮುಗಿಸಿ ಮನೆಗೆ ಹೋಗುತ್ತೇನೆ ಅನ್ನುವಾಗ ಏನೋ ಥಾಟ್ ಬಂದು ಇನ್ನೂ ಎರಡು ಗಂಟೆ ಶೂಟಿಂಗ್ ಮುಂದುವರಿಸುವ ಹಾಗೆ ಆಗಬಹುದು. ಹೀಗೆ ಸಮಯದ ಏರಿಳಿತಕ್ಕೆ ಹೊಂದಿಕೊಳ್ಳುವ, ಎಲ್ಲಕ್ಕೂ ಪ್ರೋತ್ಸಾಹಿಸುವ ಕುಟುಂಬವೂ ಇರಬೇಕು. ಎಡಿಟಿಂಗ್ ಇದ್ದಾಗಲಂತೂ ಎಷ್ಟೋ ಬಾರಿ ನಾನು ಬೆಳಗ್ಗೆ ೪ ಗಂಟೆಗೆ ಮನೆಗೆ ಬಂದು ಮಲಗಿದ್ದೂ ಇದೆ’ ಅಂತಾರೆ ವಿಜಯಲಕ್ಷ್ಮಿ ಸಿಂಗ್. ರೂಪಾ ಅಯ್ಯರ್ ಕೂಡಾ ಇದನ್ನೇ ಹೇಳುತ್ತಾರೆ, ‘ನಾನು ಮೊದಲಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಇದ್ದವಳು. ರಾತ್ರಿ ಎರಡು ಗಂಟೆಗೆ ಎದ್ದು ಹೊರಹೋಗುವುದೂ ನನಗೆ ವಿಶೇಷವಲ್ಲ. ಇದು ಎಲ್ಲರಿಗೂ ಸಾಧ್ಯವಾಗಲಿಕ್ಕಿಲ್ಲ’. ಆದರೆ ಪುಟ್ಟ ಮಗಳಿರುವ ಕವಿತಾ ಲಂಕೇಶ್ ಇದನ್ನು ನಿಭಾಯಿಸಲು ಕಲಿತಿದ್ದಾರೆ. ‘ಟೈಮಿಂಗ್ಸ್ ವಿಚಾರದಲ್ಲಿ ಸ್ವಲ್ಪ ಕಷ್ಟ ಆಗುತ್ತೆ. ಆದರೆ ಅದು ಸುಮಾರು ಒಂದು, ಒಂದೂವರೆ ತಿಂಗಳು ಮಾತ್ರ. ಶೂಟಿಂಗ್ ಇಟ್ಟುಕೊಳ್ಳುವವರು ನಾವೇ ಆದ್ದರಿಂದ ಅದರ ಸಮಯವನ್ನೂ ನಾವೇ ಅಡ್ಜಸ್ಟ್ ಮಾಡಬಹುದು. ನೈಟ್ ಶೂಟಿಂಗ್ ಕೂಡ ಹೆಚ್ಚೆಂದರೆ ಹತ್ತು ದಿನ ಇರಬಹುದು. ಡಬ್ಬಿಂಗ್ ಹಂತಕ್ಕೆ ಬಂದರೆ ಸಂಜೆ ಆರು ಗಂಟೆಯ ಮೇಲೆ ನಾನು ಅದನ್ನು ಮಾಡೋದೇ ಇಲ್ಲ. ಆರಂಭದಲ್ಲಿ ಸ್ಕ್ರಿಪ್ಟ್ ಇತ್ಯಾದಿಗಳನ್ನೆಲ್ಲಾ ನಾವೇ ಮಾಡೋದರಿಂದ ಮನೆಯಲ್ಲಿ ಎಷ್ಟು ಹೊತ್ತಿಗೆ ಬೇಕಾದರೂ ಮಾಡಬಹುದು’ ಅಂತಾರೆ ಅವರು.
ವೇಳೆ-ಅವೇಳೆಗಳ ಮಿತಿ, ಟೀಮ್ ಅನ್ನು ಮುನ್ನಡೆಸುವ ಕಷ್ಟ, ಬ್ಯಾಕ್ ಅಪ್‌ನ ಕೊರತೆ, ದುಡ್ಡು ಹಾಕುವವರಿಲ್ಲವೆಂಬ ಸಮಸ್ಯೆ… ಹೀಗೆ ಹೆಣ್ಣುಮಕ್ಕಳು ಚಿತ್ರ ನಿರ್ದೇಶನಕ್ಕೆ ಕಾಲಿಡುವುದಕ್ಕೆ ಹಲವು ತೊಡಕುಗಳಿರುವುದೇನೋ ನಿಜ. ಆದರೆ, ‘ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಈ ಇಂಡಸ್ಟ್ರಿಗೂ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದುವರೆಗೂ ಸಿನಿಮಾ ಉದ್ಯಮ ಅಷ್ಟೊಂದು ಯೋಜಿತ ರೀತಿಯಲ್ಲಿರಲಿಲ್ಲ. ಯಾರೋ ದುಡ್ಡಿದ್ದವರು ದುಡ್ಡು ಹಾಕುತ್ತಿದ್ದರು, ಸಿನಿಮಾ ಮಾಡುತ್ತಿದ್ದರು. ಆದರೆ ಈಗ ಯುಟಿವಿ, ರಿಲಯನ್ಸ್ ಮೊದಲಾದ ಸಿನಿಮಾ ನಿರ್ಮಾಣ ಸಂಸ್ಥೆಗಳು ಕಾಲಿಟ್ಟಿವೆ. ಇದರಿಂದಾಗಿ ಉದ್ಯಮ ಹೆಚ್ಚು ರೆಗ್ಯುಲೇಟೆಡ್ ಆಗುತ್ತಿದೆ. ಹೀಗಾದಾಗ ಮಹಿಳೆಯರಿಗೂ ಹೆಚ್ಚಿನ ಅವಕಾಶ ಸಿಗುತ್ತಿದೆ’ ಅಂತಾರೆ ಹಿರಿಯ ಸಾಕ್ಷ್ಯಚಿತ್ರ ನಿರ್ದೇಶಕಿ ದೀಪಾ ಧನ್‌ರಾಜ್. ಇವರ ಮಾತಿಗನುಗುಣವಾಗಿಯೇ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿತ್ರ ನಿರ್ದೇಶಕಿಯರ ಸಂಖ್ಯೆ ಹೆಚ್ಚಿರುವುದು ನಿಜ. ಈ ಟ್ರೆಂಡ್ ಇನ್ನಷ್ಟು ನಿಚ್ಚಳವಾಗಲಿ.
ಅಲ್ಲೂ ಇದ್ದಾರೆ ನಿರ್ದೇಶಕಿಯರು
ಅಲೀಸ್ ಗೀ ಬ್ಲೇಚ್ ೧೮೯೬ರಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಮೂಲಕ ಅಮೇರಿಕಾದ ಮೊದಲ ಚಿತ್ರ ನಿರ್ದೇಶಕಿ ಎನಿಸಿದರು. ಚಿತ್ರ ನಿರ್ದೇಶನಕ್ಕಿಳಿದ ಜಗತ್ತಿನ ಮೊದಲ ಮಹಿಳೆಯೂ ಈಕೆಯೇ ಇರಬೇಕು. ೨೦೦೯ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಕ್ಯಾಥರೀನ್ ಬಿಗೆಲೊ ಸೇರಿದಂತೆ ಸ್ಯಾಮ್ ಟೇಲರ್‌ವುಡ್, ಆಂಡ್ರೆ ಅರ್ನಾಲ್ಡ್, ಜೇನ್ ಚಾಂಪಿಯನ್ ಮೊದಲಾದವರು ಸಕ್ರಿಯರಾಗಿದ್ದರೂ ಇಲ್ಲಿಯೂ ನಿರ್ದೇಶಕಿಯರ ಸಂಖ್ಯೆ ಕಡಿಮೆಯೇ. ಕಳೆದ ಹತ್ತು ವರ್ಷಗಳಲ್ಲಿ ೧೦೦ ಮಿಲಿಯ ಡಾಲರ್‌ಗಿಂತಲೂ ಹೆಚ್ಚು ಗಳಿಸಿದ ೨೪೧ ಚಿತ್ರಗಳಲ್ಲಿ ಮಹಿಳೆಯರು ನಿರ್ದೇಶಿಸಿದ ಚಿತ್ರಗಳು ಕೇವಲ ಏಳು ಎನ್ನುತ್ತದೆ ಒಂದು ವರದಿ.
ಬಾಲಿವುಡ್‌ನಲ್ಲಿ ಹಲವು ಚಿತ್ರ ನಿರ್ದೇಶಕಿಯರ ಕೇಳಿಬರುತ್ತದಾದರೂ ಬಹುತೇಕರೂ ಇತ್ತೇಚೆಗೆ ಕಾಣಿಸಿಕೊಂಡವರು. ೭೦ ರ ದಶಕದಲ್ಲಿ ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿದ ಸಾಯಿ ಪರಾಂಜಪೆ, ೮೦ರ ದಶಕದ ಕೊನೆಯಲ್ಲಿ ಬಂದ ಮೀರಾ ನಾಯರ್, ದೀಪಾ ಮೆಹ್ತಾ, ಗುರಿಂದರ್ ಛಡ್ಡಾ, ಕಲ್ಪನಾ ಲಾಜ್ಮಿ, ೯೦ರ ದಶಕದ ಮಧ್ಯಭಾಗದಲ್ಲಿ ಬಂದ ತನುಜಾ ಚಂದ್ರಾರನ್ನು ಮೊದಲ ಪೀಳಿಗೆಯವರೆನ್ನಬಹುದಾದರೆ ವೀಣಾ ಭಕ್ಷಿ, ಜೋಯಾ ಅಖ್ತರ್, ಲೀನಾ ಯಾದವ್, ಪೂಜಾ ಭಟ್, ರೀಮಾ ಕಾಗ್ಟಿ, ಕಮರ್ಷಿಯಲ್ ಚಿತ್ರಗಳಲ್ಲಿ ಯಶಸ್ಸು ಕಂಡಿರುವ ಫರ್‍ಹಾ ಖಾನ್, ‘ಪೀಪ್ಲಿ ಲೈವ್’ ನಿರ್ದೇಶಿಸಿದ ಅನುಷಾ ರಿಜ್ವಿ, ‘ಟರ್ನಿಂಗ್ ಥರ್ಟಿ’ ಚಿತ್ರ ನಿರ್ದೇಶಿಸುತ್ತಿರುವ ಅಲಂಕೃತಾ ಶ್ರೀವಾಸ್ತವ ಮೊದಲಾದವರು ಇತ್ತೀಚೆಗೆ ಬೆಳಕಿಗೆ ಬಂದವರು.
ದಕ್ಷಿಣ ಭಾರತದ ಇತರ ಭಾಷಾ ಚಿತ್ರೋದ್ಯಮಗಳಲ್ಲೂ ನಿರ್ದೇಶಕಿಯರ ಹೆಸರು ಸಿಗುವುದು ಬೆರಳೆಣಿಕೆಯಷ್ಟೇ. ತೆಲುಗಿನಲ್ಲಿ ಸಾವಿತ್ರಿ, ವಿಜಯನಿರ್ಮಲಾ, ಮಲಯಾಳಮ್‌ನಲ್ಲಿ ಶೀಲಾ ಹೀಗೆ ಕೆಲವು ಹಳಬರ ಹೆಸರುಗಳು ಸಿಗುತ್ತವಾದರೂ ಇಂದಿಗೂ ನಿರ್ದೇಶಕಿಯರ ಸಂಖ್ಯೆ ಬೆರಳೆಣಿಕೆಯನ್ನು ದಾಟಿಲ್ಲ. ಇದುವರೆಗೂ ೪೦ಕ್ಕಿಂತಲೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ತೆಲುಗು ನಟಿ, ನಿರ್ದೇಶಕಿ ವಿಜಯನಿರ್ಮಲಾ ಅತಿಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಮಹಿಳೆ ಎಂಬ ಕಾರಣಕ್ಕೆ ಗಿನ್ನೆಸ್ ದಾಖಲೆಗೂ ಸೇರಿದ್ದಾರೆ. ‘ಅನು’ ಚಿತ್ರ ನಿರ್ದೇಶಿಸಿದ ಸುಹಾಸಿನಿ, ‘ಮಿತ್ರ್ ಮೈ ಫ್ರೆಂಡ್’ ನಿರ್ದೇಶಿಸಿದ ರೇವತಿ, ತೆಲುಗಿನ ಭಾನುಮತಿ, ವಿಜಯಶಾಂತಿ, ರಜನೀಕಾಂತ್‌ರ ಆನಿಮೇಟೆಡ್ ಚಿತ್ರ ನಿರ್ದೇಶಿಸುತ್ತಿರುವ ರಜನಿ ಪುತ್ರಿ ಸೌಂದರ್‍ಯಾ ಹೀಗೆ ಇಲ್ಲಿಯೂ ನಿರ್ದೇಶಕಿಯರ ಸಂಖ್ಯೆ ಕಡಿಮೆಯೇ.
ಕವಿತಾ ಲಂಕೇಶ್: ಕನ್ನಡದ ಜಾಣ ನಿರ್ದೇಶಕಿ. ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಪದವೀಧರೆಯಾದ ಕವಿತಾ ಅಡ್ವರ್ಟೈಸಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದವರು. ‘ದೇವೀರಿ’ ಇವರ ಮೊದಲ ಚಿತ್ರ. ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನೆಲ್ಲ ಸೆಳೆದ ಈ ಚಿತ್ರದ ಬಳಿಕ ‘ಪ್ರೀತಿ ಪ್ರೇಮ ಪ್ರಣಯ’ ಎಂಬ ಕಮರ್ಷಿಯಲ್ ಚಿತ್ರ ನಿರ್ದೇಶಿಸಿ ಯಶಸ್ವಿಯಾದವರು ಕವಿತಾ. ‘ತನನಂ ತನನಂ’ ಇವರ ಇನ್ನೊಂದು ಚಿತ್ರ.
ವಿಜಯಲಕ್ಷ್ಮಿ ಸಿಂಗ್
ಕನ್ನಡ ಚಿತ್ರೋದ್ಯಮದ ಹೆಸರಾಂತ ನಿರ್ಮಾಪಕ ಶಂಕರ ಸಿಂಗ್ ಅವರ ಪುತ್ರಿಯಾದ ವಿಜಯಲಕ್ಷ್ಮಿ ಹುಟ್ಟಿ ಬೆಳೆದದ್ದೆಲ್ಲಾ ಸಿನಿಮಾ ವಾತಾವರಣದಲ್ಲಿ. ಮೊದಲು ತಮ್ಮ ಸಹೋದರ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಭರ್ಜರಿ ಬೇಟೆ’ ಚಿತ್ರದಲ್ಲಿ ವಸ್ತ್ರವಿನ್ಯಾಸ ಮಾಡುವುದರೊಂದಿಗೆ ರಂಗಕ್ಕಿಳಿದ ವಿಜಯಲಕ್ಷ್ಮಿ ಬಳಿಕ ಚಿತ್ರಗಳಲ್ಲಿ ನಟಿಸಿದರು. ಚಿತ್ರ ನಿರ್ಮಾಣವನ್ನೂ ಮಾಡಿದರು. ೧೯ ಚಿತ್ರಗಳನ್ನು ನಿರ್ಮಿಸಿದ ವಿಜಯಲಕ್ಷ್ಮಿ ನಿರ್ದೇಶಿಸಿದ ಮೊದಲ ಚಿತ್ರ ‘ಈ ಬಂಧನ’. ಬಳಿಕ ‘ಮಳೆ ಬರಲಿ, ಮಂಜೂ ಇರಲಿ’ ಹಾಗೂ ‘ವಾರೆವ್ಹಾ’ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ‘ಚಿತ್ರವೊಂದನ್ನು ನಿರ್ದೇಶಿಸುವುದೆಂದರೆ ಮಗುವೊಂದನ್ನು ಗರ್ಭದಲ್ಲಿ ಹೊತ್ತು, ಹೆತ್ತು, ಸಾಕಿದ ಹಾಗೆ. ಮಗುವಿನ ಮುಖ ನೋಡಿ ಹೆರಿಗೆಯ ಕಷ್ಟವನ್ನೆಲ್ಲಾ ಮರೆಯೋ ಹಾಗೆ ಫಿಲ್ಮ್‌ನ ಫೈನಲ ಪ್ರಿಂಟ್ ಬಂದಾಗ ಕಷ್ಟಗಳೆಲ್ಲಾ ಮರೆತುಹೋಗಿ ಇನ್ನೊಂದು ಚಿತ್ರ ಮಾಡೋಣ ಅನ್ಸುತ್ತೆ’ ಅನ್ನೋದು ವಿಜಯಲಕ್ಷ್ಮಿ ಸಿಂಗ್ ಅವರ ಮನದಾಳದ ಮಾತು.
ಪ್ರಿಯಾ ಹಾಸನ್
‘ಜಂಭದ ಹುಡುಗಿ’ ಚಿತ್ರದ ಮೂಲಕ ಆಕಸ್ಮಿಕವಾಗಿ ಚಿತ್ರ ನಿರ್ದೇಶನಕ್ಕೆ ತೊಡಗಿಕೊಂಡ ಪ್ರಿಯಾ ಹಾಸನ್ ಬಳಿಕ ‘ಬಿಂದಾಸ್ ಹುಡುಗಿ’ ಚಿತ್ರದಲ್ಲಿ ಚಿತ್ರಕಥೆ, ಸಂಭಾಷಣೆ, ನಿರ್ದೇಶನವನ್ನು ನಿಭಾಯಿಸಿ ನಾಯಕಿಯಾಗಿಯೂ ನಟಿಸಿದರು. ಈಗ ‘ಗಂಡುಬೀರಿ’ ಚಿತ್ರದ ಚಿತ್ರಕಥೆ ತಯಾರಿಯಲ್ಲಿರುವ ಪ್ರಿಯಾ ಯುಗಾದಿಯ ವೇಳೆಗೆ ಈ ಚಿತ್ರ ಲಾಂಚ್ ಮಾಡುವ ಯೋಜನೆ ಹಾಕಿದ್ದಾರೆ. ಇದಲ್ಲದೆ ‘ರೆಬೆಲ್’, ‘ಚದುರಂಗ’ ಎಂಬ ಅನ್ಯ ಬ್ಯಾನರ್‌ನ ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
ಸುಮನಾ ಕಿತ್ತೂರು
‘ಆ ದಿನಗಳು’ ಚಿತ್ರದಲ್ಲಿ ಎಲ್ಲಾ ವಿಭಾಗಗಳಲ್ಲೂ ತೊಡಗಿಸಿಕೊಂಡು ಕೆಲಸ ಕಲಿತವರು ಮೂಲತಃ ಕೊಡಗಿನವರಾದ ಸುಮನಾ. ಪಿಯುಸಿ ಬಳಿಕ ಓದಿದ್ದು, ತಿಳಿದುಕೊಂಡದ್ದೆಲ್ಲವೂ ಚಿತ್ರನಿರ್ಮಾಣದ ಬಗ್ಗೆಯೇ ಎನ್ನುವ ಸುಮನಾ ‘ಕಳ್ಳರ ಸಂತೆ’ ಚಿತ್ರದ ನಿರ್ದೇಶಕಿ. ಇದೀಗ ಅಗ್ನಿ ಶ್ರೀಧರ್‌ರ ಕಾದಂಬರಿ ‘ಎದೆಗಾರಿಕೆ’ಯನ್ನಾಧರಿಸಿ ಚಿತ್ರ ನಿರ್ದೇಶಿಸುವ ಯೋಜನೆಯಲ್ಲಿದ್ದಾರೆ.
ರೂಪಾ ಅಯ್ಯರ್
ಓದಿದ್ದು ಎಂಕಾಂ, ಈಗ ಫಿಲಾಸಫಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಎಚ್‌ಐವಿ ಪೀಡಿತ ಮಕ್ಕಳ ಕುರಿತಾದ ಕಥೆಯುಳ್ಳ ‘ಮುಖಪುಟ’ ಇವರ ಮೊದಲ ಚಿತ್ರ. ಸಾಮಾಜಿಕ ಕಳಕಳಿಗಾಗಿ ಇರುವ ರಾಜ್ಯಪ್ರಶಸ್ತಿ ಪಡೆದಿರುವ ಈ ಚಿತ್ರ ದಕ್ಷಿಣ ಆಫ್ರಿಕಾ, ಐರ್‍ಲೆಂಡ್, ಕ್ಯಾಲಿಫೋರ್ನಿಯಾ, ವಾಷಿಂಗ್‌ಟನ್, ಕೈರೋ ಹೀಗೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡಿದೆ. ಇದೀಗ ‘ಮೀರಾ’, ‘ಸಾನು ಮೈ ಲವ್’ ಹಾಗೂ ‘ಅಜ್ಞಾನಿ’ ಎಂಬ ಮೂರು ಬಹುಭಾಷಾ ಚಿತ್ರಗಳ ನಿರ್ದೇಶನಕ್ಕೆ ತಯಾರಿ ನಡೆಸುತ್ತಿದ್ದಾರೆ ರೂಪಾ.