ನಾಳೆ ನಮ್ಮದೇ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ತಲ್ಲಣಗಳಾ? ನೋ ಚಾನ್ಸ್… ಡೈಲೆಮಾಗಳು ನಮ್ಮನ್ನು ಕಾಡುವುದಿಲ್ಲ. ನಮ್ಮನ್ನು ನಾವು ಜಡ್ಜ್ ಮಾಡಿಕೊಳ್ಳುತ್ತೇವೆ. ನಮ್ಮ ಭವಿಷ್ಯದ ಚಿತ್ರವನ್ನು ನಾವೇ ಬಿಡಿಸಿಕೊಳ್ಳುತ್ತೇವೆ. ಇದಕ್ಕಾಗಿ ನಾವು ಹೆತ್ತವರ ಮಾರ್ಗದರ್ಶನ ಕೇಳುವುದಿಲ್ಲ. ಹಿರಿಯರ ಕಂಡೀಷನ್‌ಗಳಿಗೆ ಒಪ್ಪುವುದೂ ಇಲ್ಲ. ನಮ್ಮ ಹಾದಿ ನಮ್ಮದು ಅನ್ನುತ್ತಿದ್ದಾರೆ ಇಂದಿನ ಯುವಕರು.

ಯೌವನ ಅನ್ನೋದು ಕೊಂಚ ತಡವಾಗಿ ಬಂದಿದ್ದರೆ ಜೀವನದಲ್ಲಿ ಅದರಷ್ಟು ಒಳ್ಳೆಯ ಸ್ಥಿತಿ ಇನ್ನೊಂದಿರಲಿಲ್ಲ ಅನ್ನುತ್ತಾನೆ ಬ್ರಿಟಿಷ್ ರಾಜಕಾರಣಿ ಹರ್ಬರ್ಟ್ ಹೆನ್ರಿ ಆಸ್ಕಿತ್. ಬಹಳಷ್ಟು ಜನರಿಗೆ ಆಗೋದು ಹೀಗೆಯೇ, ತಾರುಣ್ಯ ಬಂದಾಗ ಅದನ್ನು ಸರಿಯಾಗಿ ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ. ತನ್ನನ್ನು ತಾನು ಅಳೆದುಕೊಂಡು ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳುವ ಆ ಸತ್ವಭರಿತ ಸಮಯ ಸುಮ್ಮನೇ ಕೈಜಾರಿಬಿಡುತ್ತದೆ. ಬಳಿಕ ಕೊಂಚ ವಯಸ್ಸಾದ ಮೇಲೆ, ಈಗ ಯೌವನ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವ ಹಳಹಳಿಕೆ.
ಆದರೆ ಇಂದಿನ ಯುವಕರೆಲ್ಲ ಹೀಗಲ್ಲ. ಇವರು ನಾಳೆ ಯೌವನ ಕಳೆದ ಮೇಲೆ ಹೀಗೆಲ್ಲ ಪಶ್ಚಾತ್ತಾಪ ಪಡುವವರೂ ಅಲ್ಲ. ಇಂದೇ, ಈಗಲೇ ನಾಳೆಗೊಂದು ಭದ್ರ ಅಡಿಪಾಯ ಹಾಕಿಕೊಳ್ಳುತ್ತಾರೆ ಈ ಹುಡುಗರು. ತಮ್ಮ ಉದ್ಯೋಗ, ಭವಿಷ್ಯದ ಬಗೆಗೆ ಇವರಿಗೊಂದು ಸ್ಪಷ್ಟ ನಿಲುವು ಇದೆ. ತಮ್ಮ  ಜೀವನದ ತೀರಕ್ಕೆ ತಾವೇ ದೋಣಿಯನ್ನು ಹುಟ್ಟುಹಾಕುತ್ತಾ ಕೊಂಡೊಯ್ಯುವಷ್ಟು ಗಟ್ಟಿಗರೂ ಇವರು ಹೌದು.
ನಮ್ಮ ಕನಸು ನಮ್ಮದು
‘ನಾನು ಓದಿ ಫೈನಾನ್ಸ್ ಮ್ಯಾನೇಜರ್ ಆಗ್ತೇನೆ’ ಹೀಗನ್ನುತ್ತಾನೆ ಉಡುಪಿಯ ೯ನೇ ತರಗತಿಯ ವಿದ್ಯಾರ್ಥಿ ನಿರಂಜನ್ ಮೊಳೆಯಾರ. ಈ ಹುದ್ದೆಗೇರುವುದಕ್ಕೆ ಏನೇನು ಓದಬೇಕು, ಯಾವೆಲ್ಲ ತಯಾರಿ ಮಾಡಬೇಕು ಎಂಬುದು ಎಲ್ಲವೂ ಅವನಿಗೆ ಗೊತ್ತು. ಅಚ್ಚರಿಯೆಂದರೆ ಇದನ್ನೆಲ್ಲ ಆತ ತಿಳಿದುಕೊಂಡದ್ದು ಅಪ್ಪನ ಸಹಾಯದಿಂದಾಗಲೀ, ಅಮ್ಮನ ಸಹಾಯದಿಂದಾಗಲೀ ಅಲ್ಲ. ತಾನೇ ಇಂಟರ್ನೆಟ್‌ನಲ್ಲಿ ಜಾಲಾಡಿದ, ಎಲ್ಲವನ್ನೂ ತಿಳಿದುಕೊಂಡ.
ಹೀಗೇ ತಾವಾಗಿಯೇ ತಮ್ಮ ಮುಂದಿನ ಓದು, ಉದ್ಯೋಗ ಎಲ್ಲವನ್ನೂ ಸ್ಕೆಚ್ ಮಾಡಿಕೊಂಡ ಹುಡುಗರು ಅದೆಷ್ಟೋ. ‘ಇದು ಕಾಂಪಿಟಿಟಿವ್ ವರ್ಲ್ಡ್. ಇಲ್ಲಿ ನಾವು ಮುಂದೆ ಹೋಗ್ಬೇಕಾದ್ರೆ ತುಂಬಾ ಪ್ರಿಪೇರ್ ಆಗಿರ್‍ಬೇಕು, ಪ್ರೀಪ್ಲಾನ್ ಇರ್‍ಬೇಕು. ಅದ್ಕೇ, ನಾನು ಪಿಯುಸಿಲಿ ಇರೋವಾಗ್ಲೇ ಫ್ಯಾಷನ್ ಡಿಸೈನರ್ ಆಗೋದು ಅಂತ ಡಿಸೈಡ್ ಮಾಡ್ಕೊಂಡು ಅದೇ ಫೀಲ್ಡ್‌ಗೆ ಬಂದೆ’ ಅಂತಾರೆ ಬೆಂಗಳೂರಿನ ಫ್ಯಾಷನ್ ಡಿಸೈನರ್ ಸ್ವಾತಿ. ಇವರಿಗೆಲ್ಲ ಕನಸು ಕಟ್ಟಿಕೊಟ್ಟವರಿಲ್ಲ, ಕನಸು ಕಾಣುವುದನ್ನು ಹೇಳಿಕೊಟ್ಟವರಿಲ್ಲ. ಅವರ ಕನಸು ಅವರದೇ.
ನಮ್ಮಿಂದಲೇ ನನಸು
ಇವರೆಲ್ಲ ಬರಿಯ ಕನಸು ಕಾಣೋದಷ್ಟೇ ಅಲ್ಲ, ಅದನ್ನು ನನಸು ಮಾಡಿಕೊಳ್ತಾರೆ ಕೂಡ. ಶಿರಸಿಯಲ್ಲಿರೋ ಗಾಯತ್ರಿ ಇದೀಗಷ್ಟೇ ಪಿಯುಸಿ ಮುಗಿಸಿ ಬಿಕಾಂ ಮೆಟ್ಟಿಲು ಹತ್ತಿದ್ದಾರೆ. ಮುಂದೆ ಸಿಎ ಓದಬೇಕೆಂಬುದು ಅವರಾಸೆ. ಇದಕ್ಕಾಗಿ ಈಗಲೇ ರೆಡಿಯಾಗುತ್ತಿದ್ದಾರೆ ಆಕೆ. ಜೊತೆಗೆ ಟ್ಯಾಲಿ ಇತ್ಯಾದಿ ಅಕೌಂಟಿಂಗ್ ಸಾಫ್ಟ್‌ವೇರ್‌ಗಳ ಕಲಿಕೆಯೂ ನಡೆದಿದೆ. ಹಳ್ಳಿ ಹುಡುಗಿಯಾದರೇನು, ಯಾರ್‍ಯಾರಲ್ಲೋ ಕೇಳಿ ಮುಂದುವರಿಯಬಾರದೆಂದಿದೆಯೇ ಅನ್ನೋದು ಗಾಯತ್ರಿಯ ನಿಲುವು. ಆಕೆಯ ಹಾಗೆಯೇ ಮಾಸ್ಟರ್ ಆಫ್ ಬಿಸ್ನೆಸ್ ಸ್ಟಡೀಸ್ ಓದುತ್ತಿರುವ ಪೃಥ್ವಿಗೂ ಸಿಎ ಜೊತೆಗೆ ಐಸಿಡಬ್ಲ್ಯೂಎ ಮಾಡೋ ಹಂಬಲ. ‘ನಾನು ಕೆಲಸ ಮಾಡುತ್ತಲೇ ಅದನ್ನೂ ಪಾಸ್ ಮಾಡ್ತೇನೆ’ ಅಂತಾರೆ ಪೃಥ್ವಿ. ಲೆಕ್ಚರರ್‍ಸ್ ಜೊತೆ, ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರೊಂದಿಗೆ ಚರ್ಚೆ ಮಾಡಿ ಈ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದಾರೆ ಪೃಥ್ವಿ.
ಓದಿನಲ್ಲಿ ಮುಂದೆ ಬರುವುದಕ್ಕೆ, ಉದ್ಯೋಗ ಹಿಡಿಯುವುದಕ್ಕೆ ಯಾವೆಲ್ಲ ದಾರಿಗಳಿವೆಯೋ ಅದನ್ನೆಲ್ಲ ಹಿಡಿದುಕೊಂಡು ಮುನ್ನುಗ್ಗುವವರು ಇವರು. ಇಂಟರ್ನೆಟ್‌ನಂತಹ ಇಂದಿನ ಆಧುನಿಕ ಮಾಧ್ಯಮಗಳಂತೂ ಈ ನಿಟ್ಟಿನಲ್ಲಿ ಇವರಿಗೆ ತುಂಬಾ ಸಹಾಯ ಮಾಡಿವೆ.
ಕಾನಿಡೆಂಟ್ ಹುಡುಗರು
‘ನಾನು ಜರ್ನಲಿಸಮ್ ಫೀಲ್ಡ್‌ಗೆ ಹೋಗ್ಬೇಕು ಅಂತ ಒಂಭತ್ತನೇ ಕ್ಲಾಸ್‌ನಲ್ಲಿದ್ದಾಗಲೇ ಅಂದ್ಕೊಂಡೆ. ನಾನು ಈ ವರ್ಷ ಪತ್ರಿಕೋದ್ಯಮ ಪಿಜಿ ಓದುವವನಾಗಿದ್ರೂ ಈಗಲೂ ಫ್ಯಾಮಿಲಿಯಿಂದ ಆ ಕ್ಷೇತ್ರ ಬೇಡ ಅಂತ ವಿರೋಧ ವ್ಯಕ್ತವಾಗೋದಿದೆ. ಆದ್ರೆ, ನಾನು ಕೇರ್ ಮಾಡೋಲ್ಲ. ನಂಗೆ ಏನಾಗ್ಬೇಕೋ ಅದನ್ನೇ ಮಾಡ್ತೇನೆ’ ಅಂತಾರೆ ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿ ಇರ್ಷಾದ್. ಹೈಸ್ಕೂಲ್‌ನಿಂದಲೇ ತನ್ನ ಬರವಣಿಗೆಯನ್ನು ತಾನೇ ರೂಢಿಸಿಕೊಂಡ ಈ ಹುಡುಗನಿಗೆ ಎಷ್ಟೇ ಕಷ್ಟವಾದರೂ ತನ್ನ ಗುರಿ ಮುಟ್ಟಿಯೇ ತೀರುತ್ತೇನೆಂಬ ವಿಶ್ವಾಸ.
ಈ ಹುಡುಗರ ಆತ್ಮವಿಶ್ವಾಸದ ಗುಟ್ಟು ಅವರೊಳಗೇ ಇದೆ. ಇವರೆಲ್ಲ ತಮ್ಮ ಶಕ್ತಿಯನ್ನು ಕಂಡುಕೊಂಡಿದ್ದಾರೆ. ಹೆತ್ತವರಿಗಿಂತ ಹೆಚ್ಚು ಉಪನ್ಯಾಸಕರ, ಗೆಳೆಯರ ಪ್ರಭಾವ ಇವರ ಮೇಲಿದೆ. ಹೊಸ ಹೊಸ ವಿಷಯಗಳನ್ನು ತಾವಾಗಿ ತಿಳಿದುಕೊಳ್ಳುತ್ತಾರೆ, ಮಾಧ್ಯಮಗಳ ಸದುಪಯೋಗ ಮಾಡಿಕೊಳ್ಳುತ್ತಾರೆ.
ಆದರೆ, ಮುಂದೇನು ಅನ್ನುತ್ತ ಡೈಲೆಮಾದಲ್ಲಿರುವ ಎಳೆಯರು ಯಾರೂ ಇಲ್ಲವೇ ಅನ್ನಬೇಡಿ. ಅಂತಹ ಹುಡುಗರ ಸಂಖ್ಯೆಯೂ ಒಂದಷ್ಟಿದೆ. ಇವರೆಲ್ಲ ಒಂದು ಕ್ಷಣ ದ್ವಂದ್ವದಲ್ಲಿ ನಿಂತರೂ ಮತ್ತೆ ಅದನ್ನು ಸ್ಪಷ್ಟಪಡಿಸಿಕೊಂಡು ಮುಂದಕ್ಕೆ ನುಗ್ಗುವಷ್ಟು ಛಾತಿವಂತರು. ಎಳವೆಯಿಂದಲೇ ‘ನೀನು ಡಾಕ್ಟರಾಗು, ನೀನು ಎಂಜಿನಿಯರಾಗ್ಬೇಕು’ ಅನ್ನುವ ಹೆತ್ತವರ ಸಿದ್ಧಸೂತ್ರಕ್ಕೆ ಕಟ್ಟುಬಿದ್ದ ಯುವಕರೂ ಇಲ್ಲದಿಲ್ಲ. ‘ಅದೆಷ್ಟೋ ಬಾರಿ ಹೀಗೆ ಇತರರ ಒತ್ತಾಯಕ್ಕೆ ಕಟ್ಟುಬಿದ್ದು ಇಷ್ಟವಿಲ್ಲದ ಕೋರ್ಸ್‌ಗೆ ಸೇರಿಕೊಂಡವರು ಮತ್ತೆ ತಮ್ಮ ಓದಿನ ಲೈನ್ ಚೇಂಜ್ ಮಾಡಿಕೊಳ್ಳುವುದಿದೆ’ ಅಂತಾರೆ ಬೆಂಗಳೂರಿನ ಉಪನ್ಯಾಸಕ ಶೇಷಗಿರಿ.
ನಮ್ಮ ಸ್ಟೈಲೇ ಬೇರೆ
ತಮ್ಮ ಹಾದಿಯನ್ನು ತಾವೇ ಕಂಡುಕೊಳ್ಳುವ ಈ ಹುಡುಗರ ರೀತಿ ನೀತಿ ಎಲ್ಲವೂ ಅವರಿಗೇ ವಿಶಿಷ್ಟವಾದುದು. ಇವರು ಯಾರನ್ನೂ ಅನುಕರಿಸುವವರಲ್ಲ. ಹಳೆಯದರ ಹಿಂಬಾಲಕರೂ ಅಲ್ಲ. ಹಿಂದೆ ಉದ್ಯೋಗಕ್ಕೆ ಬರಿಯ ಓದು ಮುಖ್ಯವಾಗುತ್ತಿತ್ತು. ಆದರೆ ಇಂದು ಕೌಶಲವೂ ಮುಖ್ಯ ಎಂಬುದು ಇವರಿಗೆ ತಿಳಿದಿದೆ. ಅದಕ್ಕೇ ತಮಗೆ ಅಗತ್ಯವಾದುದನ್ನು ತಾವು ರೂಢಿಸಿಕೊಳ್ಳುವತ್ತಲೇ ಇವರ ನಿರಂತರ ಪ್ರಯತ್ನ. ತಮ್ಮ ನಾಳೆಗಳ ಚಿತ್ರಗಳನ್ನು ತಮ್ಮದೇ ಕ್ಯಾನ್ವಾಸ್‌ನಲ್ಲಿ  ಚೆಂದವಾಗಿ ಬಿಡಿಸಿಕೊಳ್ಳುವಲ್ಲಿ ಇವರು ನಿಪುಣರು.
ಇವರೆಲ್ಲರಿಂದಾಗಿಯೇ ‘ಯುತ್ ಈಸ್ ವೇಸ್ಟೆಡ್ ಆನ್ ದ ಯಂಗ್’ ಎನ್ನುವ ಬರ್ನಾರ್ಡ್ ಶಾನ ಮಾತೂ ಸುಳ್ಳಾಗಿದೆ.
———

ನಂಗೆ ಮೊದಲಿನಿಂದ್ಲೂ ಫೈನಾನ್ಸ್ ಮತ್ತು ಅಕೌಂಟಿಂಗ್ ಅಂದ್ರೆ ಇಷ್ಟ. ಅದ್ಕೇ ಡಿಗ್ರಿ ಆದ್ಮೇಲೆ ಎಂಬಿಎ ಫೈನಾನ್ಸ್ ಮಾಡಿದೆ. ಯವುದು ಓದಿದ್ರೆ ಏನು ಅಡ್ವಾಂಟೇಜ್ ಇದೆ, ಹೇಗೆ ಬೆಳೀಬಹುದು ಎಂದೆಲ್ಲ ನನ್ನ ಸೀನಿಯರ್‍ಸ್, ಲೆಕ್ಚರರ್‍ಸ್ ಹೇಳ್ತಿದ್ರು. ಹಾಗೇ ಇಂಟರ್ನೆಟ್ ಮೂಲಕವೂ ಮಾಹಿತಿ ಪಡ್ಕೊಂಡೆ.
ನಿತಿನ್ ಹೆಗ್ಡೆ ಮುತ್ತಿಗೆ, ಕಾರ್ಪೊರೇಟ್ ಅಕಾರಿ, ಬೆಂಗಳೂರು.
ನನ್ನ ಓದಿನ ವಿಷಯದಲ್ಲಿ ಹೈಸ್ಕೂಲ್‌ನಿಂದ ತೊಡಗಿ ನಂದೇ ಡಿಸಿಷನ್. ಚಿಕ್ಕಂದಿನಿಂದಲೂ ಆಸ್ಟ್ರಾನಮಿ, ಫಿಸಿಕ್ಸ್ ಅಂದ್ರೆ ಆಸಕ್ತಿ ನಂಗೆ. ಅದಕ್ಕೆ ಮುಂದೆ ಇದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡ್ಬೇಕು ಅಂತ ಇದ್ದೇನೆ. ಹೆಚ್ಚು ಹಣ ಮಾಡೋ ಉದ್ಯೋಗ ನನಗೆ ಬೇಡ. ಮನೆಯಲ್ಲೂ ಈ ಬಗ್ಗೆ ಒತ್ತಡ ಏನಿಲ್ಲ.  
ಶಚಿ ಮದ್ದೂರು, ಎಂಎಸ್ಸಿ ಫಿಸಿಕ್ಸ್, ಎನ್‌ಇಟಿಕೆ, ಸುರತ್ಕಲ್.
ತಮ್ಮ ಭವಿಷ್ಯದ ವಿಷಯದಲ್ಲಿ ಯುವಕರು ಈಗ ತುಂಬಾ ಇಂಡಿಪೆಂಡೆಂಟ್ ಆಗಿದ್ದಾರೆ. ತಮ್ಮ ಮುಂದಿನ ಓದು, ಉದ್ಯೋಗ ಎಲ್ಲವನ್ನೂ ಅವರು ತಾವಾಗಿಯೇ ನಿರ್ಧರಿಸಿಕೊಳ್ಳುವಷ್ಟು ಸಬಲರು. ಇದಕ್ಕಾಗಿ ಅವರು ಹೆತ್ತವರ ಮುಖ ನೋಡುವುದೂ ಇಲ್ಲ. ಇಂಟರ್ನೆಟ್‌ನಂತಹ ಮಾಧ್ಯಮಗಳ ಸಹಾಯವೂ ಅವರಿಗಿದೆ.
-ಜಯದೇವ ಪ್ರಸಾದ ಮೊಳೆಯಾರ, ಪೋಷಕರು.

ಮಾನ್ಸೂನ್ ನೆಂಟಸ್ತನ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ತುಂತುರು ಮಳೆ. ಆಗಸದಿಂದ ಹನಿ ಹನಿ ನೀರು ಬೀಳುವಾಗ ಅದೆಷ್ಟೋ ಹೃದಯಗಳೊಳಗೂ ಮಿಡಿವ ಪುಳಕ. ಮಳೆರಾಗದಲ್ಲೂ ಕೇಳಿಸುವ ಪ್ರೇಮರಾಗ. ದೂರಾದ ದಂಪತಿಗೆ ವರ್ಷಧಾರೆಯೇ ವಿರಹಗೀತೆ. ಮುಸಲಧಾರೆಯ ನೋಡುತ್ತ ಕುಳಿತರೆ ಮುತ್ತೈದೆ ಮನಕ್ಕೆ ತವರಿನ ನೆನಪು…

ಚಿರಕ್… ಚಿರಕ್… ಚಿರಕ್… ಮಳೆ ನೀರು ನಿಂತ ನೆಲದಲ್ಲಿ ನಡೆಯುವಾಗ ಕಿವಿಗೆ ರಾಚುವ ಸದ್ದು. ಕಿವಿಗಷ್ಟೇ ಅಲ್ಲ, ಇನ್ನೊಬ್ಬರ ಮೈಗೂ ಸಿಡಿದ ಕೊಚ್ಚೆ ನೀರು ಅವರ ಮುಖದಲ್ಲಿ ಏನೋ ಸಿಡಿಮಿಡಿ ತರಿಸಿ… ಈ ಸಿಡಿಮಿಡಿಯೇ ಒಂದು ಪರಿಚಯಕ್ಕೂ ಕಾರಣವಾಗಿ ನೀರಿನಲ್ಲಿಯೇ ಆಟವಾಡುತ್ತಾ ಸಾಗುವಾಗ ಹುಟ್ಟುವ ಹೊಸದೇ ಒಂದು ಗೆಳೆತನ..
ಮಳೆ ನೀರು ತರುವ ನಂಟುಗಳು ಹೀಗೆಯೇ.. ನೀರಾಟವಾಡುವ ವಯಸ್ಸಿನಿಂದ ತೊಡಗಿ ಮಪ್ಪಿನವರೆಗೂ ಮಳೆಗೂ ಮನುಷ್ಯರಿಗೂ ಅದೇನೋ ಬಂಧ. ಮನಸ್ಸು-ಮನಸ್ಸಿನ ನಡುವಣ ಬಂಧಕ್ಕೂ ಈ ಮಳೆ ನಿಮಿತ್ತ. ನಿಜಕ್ಕಾದರೆ ಮಳೆ ಸಂಬಂಧದ ಸಂಕೇತ, ಆಗಸಕ್ಕೂ ಭೂಮಿಗೂ ಅದರಂತೆ ನಂಟು ತರುವ ನೆಂಟ ಇನ್ನಾರುಂಟು?
ಮಳೆಯೊಳಗೆ ಪ್ರೀತಿಯ ಬಲೆ
ಬೀಳುವ ಹನಿಹನಿಯೂ ಒಂದಕ್ಕೊಂದು ಸೇರಿಕೊಂಡು ಧಾರೆಯಾಗುವ ಆ ಕ್ರಿಯೆಯೇ ಪ್ರೀತಿಗೊಂದು ಮಾದರಿ. ಜೀವಸಂಕುಲಕ್ಕೆಲ್ಲ ಇದು ಸೃಷ್ಟಿಕ್ರಿಯೆಯ ಕಾಲ. ನಾಲ್ಕು ಮಳೆ ಬೀಳುವುದೇ ತಡ, ಪ್ರಕೃತಿಯೆಲ್ಲ ಹಸಿರು ಹೊದ್ದು ನಿಂತು ಜೀವನೋತ್ಸಾಹದ ಮೇಳ ಮಾಡುತ್ತಿರುತ್ತದೆ. ಗಿಡಮರಕ್ಕಷ್ಟೇ ಅಲ್ಲ, ಅದೆಲ್ಲೋ ವಟಗುಟ್ಟುವ ಕಪ್ಪೆಗೂ ಒಲವು ಶುರು. ಇನ್ನು ಮನುಜನೇನು ಇದಕ್ಕಿಂತ ಹೊರತೇ..? ಹೂಂ, ಅಲ್ಲೂ ಪ್ರೀತಿಯ ಓಂಕಾರ.
ಭೂಮಿಗೆ ಬಿದ್ದ ಹೊಸ ಹನಿಗಳ ಹಾಗೇ ಕಾಲೇಜಿಗೂ ಹೊಸ ಮುಖಗಳು. ಮನೆಗೆ ಬಂದರೂ ಕಾಡುವ ಈ ಹೊಸಮುಖಗಳ ಹೊಂಗನಸು. ತುಂತುರು ಮಳೆ ಜಡಿಮಳೆಯಾಗುವ ಹಾಗೇ ಗಾಢವಾಗುವ ಪ್ರೀತಿ. ಅಲ್ಲಿಂದಲೇ ಬೀಸಿ ಬರುವ ತಂಗಾಳಿ ಇಲ್ಲೇ ಒಲವಾಗಿದೆ ಎಂದು ಹೇಳದೇ ಇದ್ದೀತಾದರೂ ಹೇಗೆ? ಪ್ರೇಮ ನಿವೇದಿಸಿಕೊಂಡ ಹೃದಯಗಳಿಗೆ ಮಳೆಗಾಲದ ಥಂಡಿಯೂ ಲೆಕ್ಕಕ್ಕಿಲ್ಲ. ಒಲವಿನ ಮಳೆಯಲ್ಲಿ ಮೀಯುವಾಗ ಎಲ್ಲವೂ ಬೆಚ್ಚಗೇ… ಸುಮ್ಮನೇ ಕತ್ತಲ ಕೋಣೆಯಲ್ಲಿ ಕುಳಿತು ಮಳೆಯನ್ನು ನೋಡುತ್ತಾ ಪ್ರೀತಿಯ ಹೃದಯವನ್ನು ನೆನಪಿಸಿಕೊಂಡರೆ ಅದೆಷ್ಟು ಸುಖವೋ…
ಅಲ್ಲೇ ಶುರುವಾಗಿದೆ ವಿರಹ
ಪ್ರೀತಿಯನ್ನು ಉದ್ದೀಪಿಸುವ ಮಳೆ ವಿರಹಕ್ಕೂ ಕುಮ್ಮಕ್ಕು ನೀಡುವ ಚಾಲಾಕಿ. ಆಷಾಢಮಾಸ ಬಂತೆಂದರೆ ಹೊಸದಾಗಿ ಮದುವೆಯಾದ ದಂಪತಿಯನ್ನು ಬೇರೆ ಮಾಡಿಸಿಬಿಡುತ್ತದೆ ಕಟ್ಟಳೆ. ಉತ್ತರ ಕರ್ನಾಟಕದ ಭಾಗದಲ್ಲಂತೂ ನವವಿವಾಹಿತರಿಗೆ ಆಷಾಢವೆಂದರೆ ದೂರಾಗುವ ಸಂಕಟ. ಈ ಮಾಸ ಬಂತೆಂದರೆ ಸಾಕು, ಖಾಸ ಅಣ್ಣ  ಇನ್ನೂ ಬರಲಿಲ್ಲವಲ್ಲಾ ಎಂದು ಕಾಯುತ್ತ ಅವನು ಬಂದಾಗ ಜೊತೆಗೇ ತವರಿಗೆ ಹೊರಟುನಿಲ್ಲುತ್ತಾಳೆ ನವವಧು. ಅವನಿಗೋ ಅವಳಿಲ್ಲದ ಬೇಸರ. ಅವಳಿಗೆ ತೌರ ಸುಖದ ಸೆಳೆತ ಒಂದೆಡೆ. ಅವನನ್ನು ಬಿಟ್ಟು ಹೊರಡಬೇಕಲ್ಲಾ ಎನ್ನುವ ತಳಮಳ ಇನ್ನೊಂದೆಡೆ. ಇನ್ನೊಂದು ತಿಂಗಳು ಅವರ ಪ್ರೇಮಕ್ಕೆ ಪರೀಕ್ಷೆಯ ಕಾಲ.
ವಿವಾಹಿತರಿಗಷ್ಟೇ ಸೀಮಿತವಲ್ಲ ಈ ಪರೀಕ್ಷೆ. ಪ್ರೇಮಿಗಳಿಗೆಲ್ಲರಿಗೂ ಸವಾಲೇ. ಬೇಕುಬೇಕೆನ್ನುವಾಗಲೆಲ್ಲ ಪರಸ್ಪರ ಭೇಟಿ ಮಾಡುವಂತಿಲ್ಲ. ಅಕ್ಕಪಕ್ಕ ಕುಳಿತು ಸಲ್ಲಾಪ ನಡೆಸುವಂತಿಲ್ಲ. ದೂರದಲ್ಲಿ ಕುಳಿತೇ ದೂರವಾಣಿಯಲ್ಲಿ ಮಾತಾಡೋಣವೆಂದರೆ ಹವಾಮಾನ ಸಂಪರ್ಕಕ್ಕೆ ಕಡ್ಡಿ ಆಡಿಸುತ್ತದೆ. ಇಂಥ ಸಂದರ್ಭದಲ್ಲಿ ಮಳೆಯೇ ನೆಟ್‌ವರ್ಕ್ ಆಗಬೇಕು. ಇವನಿಲ್ಲಿ ಕುಳಿತು ಹೊರದಬ್ಬಿದ ನಿಟ್ಟುಸಿರನ್ನು ಮಳೆರಾಯನೇ ಅವಳಿಗೆ ತಲುಪಿಸಬೇಕು. ಅವರಿಬ್ಬರ ವಿರಹದ ಬೇಗೆಗೆ ಹನಿಮಳೆಯೇ ತಂಪಿನ ಸೇಚನವ ನೀಡಬೇಕು. ಇದೆಲ್ಲವನ್ನೂ ಮಳೆಗೆ ಹೊಸದಾಗಿ ಹೇಳಿಕೊಡಬೇಕಾ, ಅವನು ಇದರಲ್ಲಿ ಪರಿಣತನೇ ಸರಿ. ಜೊತೆಗೆ ಮೇಘನಂತೂ ಪ್ರೇಮಿಗಳಿಗೆ ಹಳೆಯ ದೂತ. ಇವರಿಬ್ಬರ ಮಧ್ಯಸ್ಥಿಕೆಯಲ್ಲಿ ಪ್ರೇಮಬಂಧ ಗಟ್ಟಿಯಾಗಿಬಿಡುತ್ತದೆ. ಅವಳಿಗಾಗಿ ಅವನು, ಅವನಿಗಾಗಿ ಅವಳು ಹಪಹಪಿಸುವಾಗ ಎಂದೆಂದೂ ಬಿಟ್ಟಿರಲಾರೆವೆಂಬ ಪ್ರತಿಜ್ಞೆ ಸದ್ದಿಲ್ಲದೇ ಎದೆಯೊಳಗೆ ಅಡಗಿ ಕೂರುತ್ತದೆ.
ನೆನಪಿನ ನಾವೆಯಲ್ಲಿ
ಮಳೆ ಇಂದಿನ ಯಾವ್ಯಾವುದೋ ಚಟುವಟಿಕೆಗಳಿಗೆಲ್ಲ ಪ್ರೇರಕ. ಹಾಗೆಯೇ ನಿನ್ನೆಯ ನೆನಪುಗಳಿಗೂ ಅಪೂರ್ವ ನಾವೆ. ಕಿಟಕಿಯಲ್ಲಿ ನಿಂತು ಮಳೆಹಬ್ಬವನ್ನು ನೋಡುತ್ತಿದ್ದರೆ ಬಾಲ್ಯದ್ದೇ ಸ್ಮರಣೆ. ಆ ನೀರಧಾರೆಗೆ ಮೈಯೊಡ್ಡಿದ್ದು, ಸೀನುತ್ತಾ ಮನೆಗೆ ಬಂದು ಅಮ್ಮನ ಬಳಿ ಬೈಸಿಕೊಂಡದ್ದು, ಬಿಸಿಬಿಸಿ ಚಳಿ ಕಾಯಿಸಲು ಒಲೆಯ ಬಳಿ ಕೂತದ್ದು, ಬೆಳಗ್ಗೆ ಶಾಲೆಗೆ ತಡವಾದರೂ ಮತ್ತೆ ಮತ್ತೆ ಮುದುರಿದಾಗ ಅಪ್ಪ ಗದರಿದ್ದು, ಗದ್ದೆಯಲ್ಲಿ ಓಡುತ್ತ ಹೋಗುವಾಗ ಜಾರಿ ಬಿದ್ದದ್ದು… ನೆಲಕ್ಕೆ ಬೀಳುವ ಒಂದೊಂದು ಹನಿಯಲ್ಲೂ ಬಾಲ್ಯದ ಎಳೆಗಳಿವೆ.
ಅಡುಗೆಮನೆಯಲ್ಲಿ ಸೌಟು ಹಿಡಿದಿರುವ ಅವಳಿಗೂ ತವರಿನ ನೆನಪಿಗೆ ಈ ಮಳೆಯೇ ಸಾಥಿ. ಮಳೆಯ ಕೆಸರಿಗೆ ಒದ್ದೆಯಾದ ಬಟ್ಟೆ ಹಾಕಿ ಹೊರಟಿದ್ದ ಅವನನ್ನು ಕಂಡು ನಕ್ಕಿದ್ದ ತಾನು, ತನ್ನ ನೋಡಲೆಂದೇ ಮನೆಯಂಗಳಕ್ಕೆ ನೆಪಹೂಡಿ ಬಂದ ಅವನು, ಮಳೆ ಹನಿಯಲು ತೊಡಗಿದರೆ ಸಾಕು ಮನೆಯೊಳಗೇ ಆಟಕ್ಕೆ ಶುರುವಿಟ್ಟುಕೊಳ್ಳುತ್ತಿದ್ದ ಮಕ್ಕಳ ಲೋಕ, ಓದಿಕೊಳ್ಳಿರೆಂದು ಆಗಾಗ ಎಚ್ಚರಿಸುತ್ತಿದ್ದ ಅಪ್ಪ, ಗದ್ದೆಯಲ್ಲಿ ಬತ್ತದ ಸಸಿಗಳನ್ನು ನೆಡುವ ಹೆಣ್ಣುಮಕ್ಕಳು ಹಾಡುವ ಹಾಡು, ಆ ಹಿಗ್ಗು… ಎಲ್ಲವೂ ಮನಃಪಟಲದಲ್ಲೇ ಹಾದುಹೋಗುವಾಗ ಮತ್ತದೇ ಲೋಕಕ್ಕೆ ಓಡಿಹೋಗಿಬಿಡೋಣವೆನ್ನುವ ತವಕ.
ಮಳೆಯ ನೆಪದಲ್ಲಿ ಅರಳುವ ನಂಟು
ಇದ್ದಕ್ಕಿದ್ದಂತೆ ಜೋರಾಗಿ ಸುರಿವ ಮಳೆಗೆ ಎಲ್ಲರನ್ನೂ ತಡೆಹಿಡಿದು ನಿಲ್ಲಿಸಿಬಿಡುವ ಶಕ್ತಿ ಇದೆ. ಕೊಂಚ ಮಳೆ ಕಡಿಮೆಯಾಗಲೆಂದು  ಯಾವುದೋ ಅಂಗಡಿಯ ಬಾಗಿಲಲ್ಲಿ ನಿಂತವರೂ ‘ಓಹ್, ಎಂಥಾ ಮಳೆ’ ಅನ್ನುತ್ತ ಮಾತಿಗೆ ಶುರುವಿಟ್ಟು ಗೆಳೆಯರೇ ಆಗಿಬಿಡುವ ಪರಿಯೇ ಒಂದು ಮ್ಯಾಜಿಕ್. ಮನೆಮನೆಯಲ್ಲೂ ಕುರುಕಲು ತಿಂಡಿಯನ್ನು ಮೆಲ್ಲುತ್ತ ಎಲ್ಲರೂ ಒಟ್ಟಿಗೇ ಕುಳಿತು ಮಾತಿಗೆ ಕೂತಾಗ ಕಳೆದುಕೊಂಡಿದ್ದ ಏನನ್ನೋ ಪಡೆದುಕೊಂಡಂತೆ ಭಾಸ.
ಮಿಂಚು, ಗುಡುಗುಗಳು ದಾಂಗುಡಿ ಇಟ್ಟ ರಭಸಕ್ಕೆ ಒಳಗೊಳಗೇ ಭಯವಾಗುತ್ತದಾದರೂ ಅದೇ ನೆಪದಲ್ಲಿ ಇಬ್ಬಿಬ್ಬರೇ ಅಂಟಿ ಕೂತಾಗ ಗಟ್ಟಿಯಾಗುವ ಬಂಧ. ಹಳಸಿದ ಸಂಬಂಧಕ್ಕೂ ಎಲ್ಲೋ ಸಿಕ್ಕ ನವ ಕಂಪು.. ಕಡಿದುಕೊಂಡು ನಂಟು ಮತ್ತೆ ನೆನಪಾದರೂ ಮನಕ್ಕೆ ತಟ್ಟುವ ಭಾವಗಳು, ನೆಲ ಮುಟ್ಟುವ ಹನಿಗಳ ಟಪ ಟಪ ಸದ್ದಿನಂತೆ…
ಮಳೆ ಸದಾ ವರಪ್ರದಾಯಕನೇನಲ್ಲ. ಒಮ್ಮೊಮ್ಮೆ ಮುಂಗಾರು ಸಿಟ್ಟುಗೊಂಡು ಅಬ್ಬರಿಸಿತಾ, ಜೀವಸಂಕುಲಕ್ಕೆಲ್ಲ  ಹಾನಿಯ ಸುನಾಮಿ. ಆದರೂ ಒಬ್ಬರಿಗೊಬ್ಬರು ಆಸರೆಯಾಗುವಾಗ ಮಾನವೀಯತೆಯನ್ನು ಬಡಿದೆಬ್ಬಿಸಿದ ಶ್ರೇಯ ಪಡೆದುಕೊಳ್ಳುವುದು ಮತ್ತೆ ಮಳೆಯೇ.
ಹನಿಗಳ ಲೀಲೆ
ಮಳೆಗಾಲದ ಭರದಲ್ಲಿ ಸೇತುವೆಗಳು ಮುರಿದು ಬೀಳಬಹುದು. ಆದರೆ ಅದೇ ಮಳೆ ಮನ ಮನಗಳ ಮಧ್ಯೆ ಹೊಸ ಸೇತುಗಳನ್ನು ಹುಟ್ಟಿಸುತ್ತದೆ. ಮುರಿದಿದ್ದ ಮನಗಳನ್ನು ಒಂದಾಗಿಸುತ್ತದೆ ಕೂಡ.
ಮಳೆ ನಂಟುಗಳಿಗೆ ಅಂಟು ಹಾಕುವಂತೆಯೇ ತನ್ನೊಳಗೇ ಹಲವು ನಂಟಸ್ತನಗಳನ್ನು ಕಟ್ಟಿಕೊಂಡೇ ಧರೆಗಿಳಿಯುತ್ತದೆ. ಧೋ ಎಂದು ಸುರಿವ ಮಳೆ ಮಗುವಿನ ಅಳು. ತುಂತುರು ಮಳೆಗೆ ಪ್ರೇಮಿಗಳ ತುಂಟತನ. ಗುಡುಗು ಸಿಡಿಲಿನ ಮಳೆಯಲ್ಲಿದೆ ಅಪ್ಪನ ಜೋರು. ಮುಂಜಾನೆಯ ಮಳೆಗೆ ಅಮ್ಮನ ವಾತ್ಸಲ್ಯ. ಹೀಗೆ ಗ್ರಹಿಸಿದಷ್ಟೂ  ಹಲವು ಭಾವ ಹುಟ್ಟಿಸುವ ಮಳೆ ಭೂಮಿಯ ಮಕ್ಕಳಿಗೆಲ್ಲ ಸಿಕ್ಕ ಅಪೂರ್ವ ಸಂಬಂ. ಮಳೆ ಎಂದರೆ ನಮಗೆಲ್ಲ ಖುಷಿ ಆಗುವುದು ಅದಕ್ಕೇ ಇರಬೇಕು. ವರುಷಕ್ಕೊಮ್ಮೆ ಬರುವ ಆತ್ಮೀಯ ನೆಂಟನನ್ನು ಕಂಡರೆ ಯಾರ ಮನ ತಾನೇ ಅರಳದಿದ್ದೀತು ಹೇಳಿ…
————

ಆಷಾಢಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡು-ಹೆಣ್ಣು ಪರಸ್ಪರ ದೂರ ಇರಬೇಕು ಅನ್ನೋ ಸಂಪ್ರದಾಯ ಇದೆ ನಿಜ. ಏಕೆಂದರೆ ಈ ಕಾಲದಲ್ಲಿ ಹವೆ ತಂಪಾಗಿರುತ್ತದೆ, ಗಂಡು-ಹೆಣ್ಣು ಜೊತೆಗಿರಲು ಬಯಸ್ತಾರೆ. ಈ ಸಂದರ್ಭದಲ್ಲಿಯೇ ಇಬ್ಬರನ್ನೂ ದೂರವಿಟ್ಟು ತೀವ್ರವಾಗಿ ಒಬ್ಬರನ್ನೊಬ್ಬರು ಬಯಸುವಂತೆ ಮಾಡುವ ಸೂತ್ರವಿದು. ಇಬ್ಬರ ನಡುವೆ ಪ್ರೀತಿ, ಆಕರ್ಷಣೆ ಹೆಚ್ಚಾಗಿ ಆ ಬಂಧ ಗಟ್ಟಿಯಾಗಿಸಲು ಮಾಡುವ ಉಪಾಯ ಇದು. ಹಾಗೇ ಈ ಕಾಲದಲ್ಲಿ ವ್ಯವಸಾಯದ ಕೆಲಸ ಹೆಚ್ಚು ಇರುತ್ತದೆ. ಆ ಸಂದರ್ಭದಲ್ಲಿ ನೂತನ ದಂಪತಿ ಜೊತೆಗಿದ್ದರೆ ಇತ್ತ ಕಡೆ ಗಮನ ಕೊಡುವುದಕ್ಕಾಗುವುದಿಲ್ಲವೆಂಬ ಕಾರಣಕ್ಕೂ ಹೆಣ್ಮಗಳನ್ನು ತವರಿಗೆ ಕರೆದುಕೊಂಡು ಹೋಗುತ್ತಾರೆ. ಮದುವೆಯಾಗಿ ವರ್ಷ ಕಳೆದರೆ ನಂತರ ಈ ಬೇರ್ಪಡಿಸುವಿಕೆ ಬೇಕಾಗುವುದಿಲ್ಲ.
-ಜಿ.ವೆಂಕಟಸುಬ್ಬಯ್ಯ, ನಿಘಂಟು ತಜ್ಞ

ಪುಟಾಣಿ ಪ್ರೇಮ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಪ್ರೇಮ ಹುಟ್ಟೋದಕ್ಕೆ ಹೊತ್ತು ಗೊತ್ತು ಹೇಗೂ ಇಲ್ಲ. ಪ್ರಾಯದ ಮಿತಿಯೂ ಇಲ್ಲ ಅಂದ್ರೆ ನಂಬ್ತೀರಾ? ಹೌದು, ನಮ್ಮ ಅಕ್ಕಪಕ್ಕದಲ್ಲೇ ಆಟವಾಡೋ ಹತ್ತರ ಹರೆಯದ ಪುಟಾಣಿಗಳೂ ಲವ್ವಿಗೆ ಬೀಳಬಹುದು. ಅರೆರೆ, ಅಷ್ಟು ಚಿಕ್ಕ ವಯಸ್ಸಿನಲ್ಲಾ? ಡೋಂಟ್ ವರಿ. ಅದು ರೊಮ್ಯಾಂಟಿಕ್ ಲವ್ ಏನಲ್ಲ, ಬರಿಯ ಟೆಂಪರರಿ ಪ್ರೀತಿ ಅಷ್ಟೇ.

ಅಮ್ಮಾ, ನಮ್ ಮಿಸ್ ಎಷ್ಟು ಒಳ್ಳೆಯವ್ರು ಗೊತ್ತಾ..? ಎಷ್ಟು ಚೆನ್ನಾಗಿ ಪಾಠ ಹೇಳ್ಕೊಡ್ತಾರೆ…
-ನಾಲ್ಕನೇ ತರಗತಿಯಲ್ಲಿರೋ ಮಗ ಹೀಗೆ ದಿನವೂ ಟೀಚರಮ್ಮನನ್ನು ಸ್ತುತಿಸುವುದು ಅಮ್ಮನಿಗೇನೂ ಹೊಸದಲ್ಲ. ತನ್ನ ಮಿಸ್ ಹಾಗೆ ಮಾಡಿದ್ರು, ಹೀಗೆ ಮಾಡಿದ್ರು ಅನ್ನುತ್ತಾ ದಿನಕ್ಕೊಂದು ಟೀಚರ್ ಕಥೆ ಹೇಳುವ ಪುಟ್ಟ ಒಂದು ದಿನವಂತೂ ‘ಅಮ್ಮಾ, ನಾನು ನಮ್ ಕರುಣಾ ಮಿಸ್‌ನೇ ಮದ್ವೆ ಆಗೋದು’ ಅನ್ನಬೇಕಾ!? ಅಮ್ಮನಿಗೆ ನಗು. ಪುಟ್ಟನ ಅಪ್ಪ, ಅಮ್ಮನಿಗೆ, ನೆರೆಮನೆಯ ಸಂಗೀತಾ ಆಂಟಿಗೆ ಎಲ್ಲರಿಗೂ ಅವನ ಈ ಟೀಚರ್ ಪ್ರೇಮ ನಗಲೊಂದು ವಿಷಯ.
ಇಷ್ಟು ಸಣ್ಣ ಹುಡುಗನಿಗೇಕೆ ಮದುವೆ ವಿಚಾರ ತಲೆಯಲ್ಲಿ ಹೊಳೆಯಿತು? ಅದೂ ತನಗಿಂತ ಅಷ್ಟೊಂದು ದೊಡ್ಡವರಾದ ಟೀಚರನ್ನೇ ಮದ್ವೆ ಆಗ್ತೇನೆ ಅಂದುದ್ಯಾಕೆ ಎಂದೆಲ್ಲ ಅವರು ಆಲೋಚಿಸುವುದಕ್ಕೆ ಹೋಗಿರಲಾರರು. ನಿಜ, ಎಂಟೊಂಭತ್ತು ವರ್ಷದ ಆ ಪುಟ್ಟ ಹುಡುಗನೂ ಲವ್ ಮಾಡ್ತಾನೆ ಅನ್ನೋ ಸಂಶಯ ಮೂಡೋದಾದ್ರೂ ಕಷ್ಟವೇ. ಆ ವಯಸ್ಸಿನಲ್ಲೂ  ಅವನಲ್ಲಿ ಪ್ರೇಮದ ಭಾವನೆ ಹುಟ್ಟುವುದಕ್ಕೆ ಸಾಧ್ಯವಾ? ಇನ್ನೂ ‘ಲವ್’ ಅನ್ನೋ ಪದವನ್ನು ಟಿವಿಯಲ್ಲಿ ಕೇಳಿ, ನೋಡಿ ಗೊತ್ತಿರುವ ಹುಡುಗನಿಗೆ ಟೀಚರಮ್ಮನ ಮೇಲೆ ಉಂಟಾದದ್ದು  ನಿಜಕ್ಕೂ ಪ್ರೇಮವಾ?
‘ಅಲ್ಲ’ ಅನ್ನುತ್ತದೆ ಮನಃಶಾಸ್ತ್ರ, ಅದರ ಪ್ರಕಾರ ಇದು ‘ಪಪ್ಪಿ ಲವ್’.
ಎಳೆಯರ ಪ್ರೇಮ
ಇನ್ನೇನು ಹದಿಹರೆಯಕ್ಕೆ ಕಾಲಿಡುತ್ತಿದ್ದಾರೆ ಎನ್ನುವಾಗ ಅಥವಾ ಅದಕ್ಕಿಂತಲೂ ಮೊದಲೇ ಎಂಟರಿಂದ ಹತ್ತು ವರ್ಷದ ಪ್ರಾಯದಲ್ಲೇ ಎಳೆಯ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಭಾವನೆ ಇದು. ಹುಡುಗನೊಬ್ಬನಿಗೆ ತನ್ನದೇ ವಯಸ್ಸಿನ ಹುಡುಗಿಯ ಮೇಲೆ ಸುಖಾಸುಮ್ಮನೇ ಪ್ರೀತಿ ಹುಟ್ಟಬಹುದು, ಟೀಚರ್ ಮೇಲೂ ಅಟ್ಯಾಚ್‌ಮೆಂಟ್ ಕಾಣಿಸಿಕೊಳ್ಳಬಹುದು. ಹತ್ತರ ಹರೆಯದ ಹುಡುಗಿಯೂ ತನಗಿಂತ ಕೊಂಚ ದೊಡ್ಡ ಹುಡುಗನೊಬ್ಬನ ಮೇಲೋ ಅಥವಾ ತನ್ನದೇ ಕ್ಲಾಸಿನ ಗೆಳೆಯನ ಮೇಲೆ ಪ್ರೇಮಕ್ಕೆ ಬಿದ್ದುಬಿಡಬಹುದು. ಆದರೆ ಈ ಪ್ರೇಮ ಗಂಭೀರ ಪ್ರೇಮವಲ್ಲ. ಮನೆಯಲ್ಲಿರುವ ನಾಯಿಮರಿಯೊಂದು ಮುದ್ದಿನಿಂದ ಕರೆದಾಗ ನಮ್ಮ ಕಾಲನ್ನೇ ಪ್ರೀತಿಯಿಂದ ನೆಕ್ಕಿ ಮುದ್ದಿಸುತ್ತದಲ್ಲ, ಹಾಗೆಯೇ ಇದು. ತನ್ನನ್ನು ಆದರಿಸುವವರ, ಪ್ರೀತಿಯಿಂದ ಕಾಣುವವರ ಮೇಲೆ ಒಲವು ವ್ಯಕ್ತಪಡಿಸುವ ರೀತಿ ಇದು.
ಇದಕ್ಕೆ ‘ಕಾಫ್ ಲವ್’ ಅಥವಾ ‘ಕಿಟನ್ ಲವ್’ ಎಂಬ ಹೆಸರೂ ಇದೆ. ಎಳೆಗರು ತನ್ನಮ್ಮನನ್ನು ಪ್ರೀತಿಯಿಂದ ನೆಕ್ಕುತ್ತದಲ್ಲ ಹಾಗೆ ಈ ಎಳೆಮಕ್ಕಳ ಪ್ರೀತಿಯೂ ಅಬೋಧ. ಬೆಕ್ಕುಗಳು ಒಂದಕ್ಕೊಂದು ನೆಕ್ಕುತ್ತಾ ಮುದ್ದು ಮಾಡುತ್ತವಲ್ಲ, ಹಾಗೇ ಈ ಪುಟಾಣಿಗಳ ಪ್ರೀತಿಯೂ ನಿಷ್ಕಲ್ಮಷ. ಅಲ್ಲಿ ದೈಹಿಕ ವಾಂಛೆ ಏನೂ ಇರದು. ತನಗಿಷ್ಟವಾದ ಜೀವ ತನ್ನ ಜೊತೆಗಿರಲಿ ಎಂಬ ಹಂಬಲ ಕಾಣಿಸಬಹುದು ಅಷ್ಟೆ.
ಸಕಲರ ಅನುಭವ
ಅಲ್ಲೊಬ್ಬ ಇಲ್ಲೊಬ್ಬರೆಂದಲ್ಲ, ಬಹುತೇಕ ಎಲ್ಲರೂ ಈ ‘ಪಪ್ಪಿ ಲವ್’ ಹಂತವನ್ನು ಅನುಭವಿಸಿಯೇ ದಾಟಿ ಬರುತ್ತಾರೆ ಅನ್ನುತ್ತಾರೆ ಮನಃಶಾಸ್ತ್ರಜ್ಞರು. ಇದು ರೊಮ್ಯಾಂಟಿಕ್ ಲವ್‌ನಷ್ಟು ತೀವ್ರವಲ್ಲ. ಅನೇಕರಲ್ಲಿ ಇತರರ ಬಗೆಗೆ ಇದೊಂದು ಆದರ, ಅಭಿಮಾನವಾಗಿ ಉಳಿಯಬಹುದು. ಇನ್ನು ಕೆಲವರು ಪ್ರೀತಿ, ಪ್ರೇಮ ಎಂದು ವ್ಯಕ್ತಪಡಿಸಲೂಬಹುದು. ಎಳೆಯದರಲ್ಲೇ ಸಿನಿಮಾದಂತಹ ಮಾಧ್ಯಮಗಳಲ್ಲಿ ಪ್ರೇಮ ವ್ಯಕ್ತಪಡಿಸುವಿಕೆಯ ವಿಧಾನಗಳನ್ನು ಕಂಡು ಪರಿಚಯವಿರುವವರು ಅದನ್ನೂ ಅನುಕರಿಸಬಹುದು. ಕೆಲವು ಚಲನಚಿತ್ರಗಳಲ್ಲಿ ಈ ಪಪ್ಪಿ ಲವ್ ಸಮಸ್ಯೆ ಚಿತ್ರಿತವಾದದ್ದುಂಟು. ‘ಮೇರಾ ನಾಮ್ ಜೋಕರ್’ ಚಿತ್ರದಲ್ಲಿ ನಾಯಕ ರಾಜು ತನ್ನ ಹದಿಹರೆಯದಲ್ಲಿ ತನ್ನ ಟೀಚರ್ ಮೇರಿಯನ್ನೇ ಪ್ರೀತಿಸುತ್ತಾನೆ.
ಈ ಪಪ್ಪಿ ಲವ್ ಹುಟ್ಟಿಕೊಳ್ಳಲು ತನ್ನ ಟೀಚರ್ರೇ ಆಗಬೇಕೆಂದಿಲ್ಲ. ದಿನವೂ ಸಿಗುವ ಫ್ಯಾಮಿಲಿ ಫ್ರೆಂಡ್, ಸದಾ ಮುದ್ದು ಮಾಡೋ ಆಂಟಿ, ಅಂಕಲ್, ಫ್ಯಾಮಿಲಿ ಫ್ರೆಂಡ್, ತನ್ನ ಅಭಿಮಾನದ ನಟ ಅಥವಾ ನಟಿ… ಹೀಗೆ ಮನಸ್ಸು ಮೆಚ್ಚಿಕೊಂಡ ಯಾರ ಮೇಲಾದರೂ ಈ ಪ್ರೀತಿ ಹುಟ್ಟಬಹುದು. ತಾನು ಮೆಚ್ಚಿದ ಆ ವ್ಯಕ್ತಿಯ ದಿನಚರಿ, ನಡೆ-ನುಡಿಗಳನ್ನೆಲ್ಲ ಗಮನಿಸುವುದು, ಅವರಿಗೆ ಗಿಫ್ಟ್ ಕೊಡುವುದು, ಅವರ ಬಗ್ಗೆ ತನ್ನದೇ ರೀತಿಯಲ್ಲಿ ಕನಸು ಹೆಣೆದುಕೊಳ್ಳುವುದನ್ನೆಲ್ಲ ಮಾಡಬಹುದು. ಮಾದರಿಗಳನ್ನು ಕಂಡುಕೊಳ್ಳುವ ವಯಸ್ಸೂ ಇದಾಗಿರುವುದರಿಂದ ತಮ್ಮ ಮೆಚ್ಚಿನ ವ್ಯಕ್ತಿಯ ಅಭ್ಯಾಸ, ಹವ್ಯಾಸಗಳನ್ನು ತಾನೂ ಬೆಳೆಸಿಕೊಳ್ಳುವ ಪ್ರಯತ್ನವನ್ನೂ ಕಾಣಬಹುದು. ಚೆನ್ನಾಗಿ ಓದಬೇಕೆನ್ನುವ ಅಭಿಲಾಷೆಯುಳ್ಳ ಹುಡುಗಿಗೆ ಪಕ್ಕದ ಮನೆಯ ಓದಿನಲ್ಲಿ ಮುಂದಿರುವ ಹುಡುಗನ ಮೇಲೆ ಅಭಿಮಾನ ಹುಟ್ಟಿ ಅವನನ್ನೇ ಗಮನಿಸಬಹುದು, ಅವನ ದಿನಚರಿಗಳನ್ನೆಲ್ಲ ತಾನೂ ಅಳವಡಿಸಿಕೊಳ್ಳಬಹುದು. ಕ್ರಮೇಣ ಆಕೆ ತನ್ನದೇ ದಿನಚರಿ, ಓದುವ ರೀತಿಗಳನ್ನು ರೂಢಿಸಿಕೊಂಡಂತೆ ಆ ಹುಡುಗನನ್ನು ಗಮನಿಸುವ ಅಭ್ಯಾಸ ಬಿಟ್ಟೇ ಹೋಗಬಹುದು. ಹೀಗೆ ಅಭಿಮಾನಪೂರ್ವಕವಾಗಿ ಪ್ರೀತಿ ಹುಟ್ಟಿಕೊಳ್ಳಲು ಹೆಚ್ಚು ಸಮಯ ಬೇಡ, ಅದು ಬಹುಕಾಲ ಬಾಳುವುದೂ ಇಲ್ಲ.
ರಿಸ್ಕಿ ಅಲ್ಲ
‘ನಾನು ಕರುಣಾ ಮಿಸ್‌ನ ಮದ್ವೆ ಆಗ್ತೀನಿ’ ಅಂತ ಮೇಲೆ ಪುಟ್ಟ ನೊಬ್ಬ ಹೇಳಿದ ಹಾಗೇ ನಮ್ಮ ಮನೆಯ ಪುಟ್ಟನೋ ಪುಟ್ಟಿಯೋ ಹೇಳಿದಾಕ್ಷಣ ಇದೆಂಥದಪ್ಪಾ ಈ ಪ್ರಾಯದಲ್ಲೇ ಲವ್ವು, ಮದುವೆ ಅಂತಾರಲ್ಲ ಮಕ್ಕಳು ಅಂತ ಹೆತ್ತವರು ಚಿಂತೆಗೆ ಬೀಳೋದೇನೂ ಬೇಡ. ‘ಇಂಥ ಪ್ರೇಮಗಳು ಅಂಥಾ ಗಂಭೀರವೇನಲ್ಲ. ಆ ಹಂತದಲ್ಲಿ ಮನಸ್ಸಿನಲ್ಲಿ ಮೂಡುವ ಇನ್‌ಫ್ಯಾಚುವೇಶನ್ ಅಷ್ಟೇ ಇದು. ಆ ಒಂದು ಹಂತವನ್ನು ದಾಟಿದಾಗ ಅದು ಕ್ರಮೇಣ ಮರೆಯಾಗುತ್ತದೆ. ಈ ರೀತಿಯ ಪ್ರೀತಿಯಲ್ಲಿ ಸಿಲುಕಿದ ಮಕ್ಕಳಿಗೆ ಚಿಕಿತ್ಸೆಯೂ ಬೇಕಾಗುವುದಿಲ್ಲ. ಹೆಚ್ಚೆಂದರೆ ಕೌನ್ಸೆಲಿಂಗ್ ಮಾಡಿದರೆ ಸಾಕಾಗುತ್ತದೆ’ ಅಂತಾರೆ ಮನಃಶಾಸ್ತ್ರಜ್ಞೆ ಡಾ|ಲತಾ.
ಆದರೂ ಈ ಪ್ರೀತಿಯ ಸೆಳೆತಕ್ಕೆ ಬಿದ್ದವರಿಗೆ ಏಕಾಗ್ರತೆಯ ಕೊರತೆ ಆಗಬಹುದು. ಕೆಲವೊಮ್ಮೆ ತಾವೂ ದೊಡ್ಡವರಂತೆಯೇ ಪ್ರೇಮಪತ್ರಗಳನ್ನು ಕೊಡುವಂತಹ ಸಾಹಸಕ್ಕೂ ಇಳಿದು ತಮ್ಮ ಪರಿಸರದಲ್ಲೇ ಗಾಸಿಪ್ ಹುಟ್ಟಿಕೊಳ್ಳುವುದಕ್ಕೂ ಕಾರಣವಾಗಬಹುದು. ತಾನು ಪ್ರೀತಿಸುವ ಹುಡುಗನ ಬಗೆಗೆ ಡೈರಿಯಲ್ಲಿ ಬರೆದಿಟ್ಟುದನ್ನು ಅಮ್ಮ ಓದಿದಳೆಂಬ ಕಾರಣಕ್ಕೇ ಹತ್ತರ ಹರೆಯದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೂ ಬೆಂಗಳೂರಿನಲ್ಲಿ ನಡೆದಿದೆ.
ಮಕ್ಕಳಲ್ಲಿ ಪಪ್ಪಿ ಲವ್ ಶುರುವಾಯಿತೆಂದಾಕ್ಷಣ ಹೆತ್ತವರ ಗಮನಕ್ಕೆ ಅದು ಬಂದೇ ಬರುತ್ತದೆ. ಅದನ್ನು ನಕ್ಕು ಆನಂದಿಸುವ ಹಾಗೆಯೇ ಒಳಗೊಳಗೇ ಮಕ್ಕಳ ಮೇಲೆ ಕೊಂಚ ನಿಗಾ ಇಡಬೇಕಾದ್ದೂ ಹೆತ್ತವರ ಕರ್ತವ್ಯ. ಹೀಗಾದರೆ ಮಕ್ಕಳು ಈ ಆರಂಭಿಕ ಹಂತದ ‘ಕ್ರಶ್’ ಅನ್ನೇ ಪ್ರೇಮವೆಂದು ಗಂಭೀರವಾಗಿ ಪರಿಗಣಿಸುವುದನ್ನು ತಪ್ಪಿಸಬಹುದು. ಕೆಲವೊಮ್ಮೆ ಈ ಪ್ರೀತಿ ಮುರಿದು ಹೋದಂತೆನಿಸಿದಾಗ ಮಕ್ಕಳು ಕುಗ್ಗಿ ಹೋಗುವ ಸಂದರ್ಭದಲ್ಲೂ ಹೆತ್ತವರ ಕಾಳಜಿ ಅವರಿಗೆ ಬೇಕು. ಆದರೆ, ಹೀಗೆ ಹಳಿ ತಪ್ಪುವ ಪ್ರಕರಣಗಳು ಬಹು ಕಡಿಮೆ.
ಪಪ್ಪಿ ಲವ್ ಯಾವ ಸ್ವರೂಪದಲ್ಲೇ ಇರಲಿ, ಅದು ಮಗುವಿಗೊಂದು ವಿಶೇಷ ಆತ್ಮವಿಶ್ವಾಸವನ್ನು ನೀಡುವುದು ಸುಳ್ಳಲ್ಲ. ಮೊತ್ತಮೊದಲ ಬಾರಿಗೆ ತನ್ನ ಮನೆಯಿಂದ ಹೊರತಾದವರೊಬ್ಬರನ್ನು ಅದು ಪ್ರೀತಿಸಿರುತ್ತದೆ. ಹಾಗೆಂದು, ಈ ಪ್ರೀತಿಯನ್ನೇ ಕೊನೆತನಕ ಉಳಿಸಿಕೊಳ್ಳುತ್ತೇನೆ ಅನ್ನುವುದು ಮಾತ್ರ ಮೂರ್ಖತನ. ಇಂತಹ ಮೂರ್ಖತನಕ್ಕೆ ಯಾರೂ ಇಳಿಯುವುದೂ ಇಲ್ಲ. ಈ ಎಳೆಯ ಪ್ರೇಮದ ಮಾಯೆಯೇ ಹಾಗೆ, ಗೊತ್ತಾಗದಂತೆ ಬರುತ್ತದೆ, ಸದ್ದಿಲ್ಲದೇ ಹೊರಟು ಹೋಗಿಬಿಡುತ್ತದೆ.
—–

ಮಕ್ಕಳಲ್ಲಿ ಹದಿಹರೆಯದ ಹಂತದಲ್ಲಾಗುವ ಯಾವುದೋ ಹಾರ್ಮೋನ್ ಬದಲಾವಣೆಯಿಂದ ಇದು ಬರುವುದಿರಬೇಕು. ಹೆಚ್ಚಾಗಿ ಮನೆಯಿಂದ ಹೊರತಾದ ಪರಿಸರದಲ್ಲಿ ಎಲ್ಲರೂ ಮಕ್ಕಳನ್ನು ಆದರಿಸುವುದಿಲ್ಲ. ಇಂಥಲ್ಲಿ ಅವರನ್ನು ವಿಶೇಷವಾಗಿ ಯಾರೋ ಆತ್ಮೀಯತೆಯಿಂದ ಕಂಡು ಪ್ರೀತಿ ನೀಡಿದಾಗ ಮಕ್ಕಳಲ್ಲಿಯೂ ಒಂದು ಅಟ್ಯಾಚ್‌ಮೆಂಟ್ ಬೆಳೆಯುತ್ತದೆ. ಇದನ್ನೇ ‘ಪಪ್ಪಿ ಲವ್’ ಅನ್ನಬಹುದು. ಓದಿನಲ್ಲಿ ಏಕಾಗ್ರತೆ ನಷ್ಟವಾಗೋದು, ತುಂಬಾ ಚೆಂದವಾಗಿ ತಮ್ಮನ್ನು ಸಿಂಗರಿಸಿಕೊಳ್ಳೋದು ಇಂತಹುದರಲ್ಲೂ ಅವರ ‘ಪಪ್ಪಿ ಲವ್’ ಪ್ರಭಾವ ಕಾಣಿಸಿಕೊಳ್ಳಬಹುದು. ಆದರೆ, ಇದು ಶಾಶ್ವತವಾಗಿ ಉಳಿಯುವುದಿಲ್ಲ. ಇದೊಂದು ಪಾಸಿಂಗ್ ಸ್ಟೇಜ್ ಅಷ್ಟೇ.
ಡಾ. ಕೆ.ಎಸ್. ಲತಾ, ಮನಃಶಾಸ್ತ್ರಜ್ಞೆ, ಕೆಎಂಸಿ, ಮಣಿಪಾಲ.

ಟೀನೇಜ್ ತಲ್ಲಣ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಫ್ಯಾಷನ್ ಮಾಡ್ಬೇಕು ಅಂತ ಆಸೆ. ಆದ್ರೆ ಹೇಗೆ ಮಾಡಿದ್ರೆ ತನಗೊಪ್ಪುತ್ತೆ? ಫ್ರೆಂಡ್ಸ್ ಎಲ್ಲಾ ಕ್ಲಾಸ್‌ಗೆ ಬಂಕ್ ಮಾಡ್ತಾರಂತೆ, ನಾನೂ ಮಾಡ್ಲಾ? ಡಿಗ್ರಿ ಆದ್ಮೇಲೆ ಪಿಜಿ ಮಾಡ್ಲಾ, ಕೆಲಸಕ್ಕೆ ಸೇರಲಾ? ಅವ್ಳು ನನ್ನ ಫ್ರೆಂಡ್ ನಿಜ. ಆದ್ರೂ… ಯಾಕೋ ಕಸಿವಿಸಿ. ಓಹ್, ಎಷ್ಟೆಲ್ಲಾ ತಳಮಳ…? ಈ ಹದಿಹರೆಯವೇ ಹಾಗೆ, ದಿನಕ್ಕೊಂದು ಡೈಲೆಮಾದಿಂದ ಮನವನ್ನು ಕುದಿಸುತ್ತದೆ. ನಿತ್ಯವೂ ಕಾಡುವ ಈ ದ್ವಂದ್ವಗಳ್ಯಾವುವು?

ಪಕ್ಕದಲ್ಲಿ ಕೂರೋ ದೀಕ್ಷಾ ತುಂಬಾ ಸ್ಟೈಲಿಷ್ ಆಗಿ ಬರ್‍ತಾಳೆ. ನಾನೂ ಹಾಗೇ ಬಂದ್ರೆ ಹೇಗಿರುತ್ತೆ? ಅಥ್ವಾ ನನ್ ಬಾಡಿ ನೇಚರ್‌ಗೆ ಅದು ಸರಿ ಹೋಗೋಲ್ವಾ? ಯಾರನ್ನ ಕೇಳೋದು? – ಪಿಯುಸಿ ಓದುತ್ತಿರೋ ಸಂಜನಾಳ ತಳಮಳ ಇದು. ಡಿಗ್ರಿ ಓದೋ ಪ್ರಣವನಿಗೆ ಇನ್ನೊಂದು ದ್ವಂದ್ವ. ಅವನ ಜೊತೆಗಾರರೆಲ್ಲ, ‘ಈಗ ಮಜಾ ಮಾಡೋಣ ಕಣೋ, ಎಕ್ಸಾಮ್ ಟೈಮ್‌ಗೆ ಓದ್ಕೊಂಡ್ರಾಯ್ತು’ ಅನ್ನುತ್ತಾ ಜೊತೆಗೆ ಬಾ ಅಂತ ಕರೀತಾರೆ. ಅವರ ಜೊತೆ ಹೋಗ್ಲಾ  ಅಥವಾ ಲೈಬ್ರರಿಗೆ ಹೋಗ್ಲಾ ಅಂತ ನಿತ್ಯ ತಲೆಬಿಸಿ ಅವನಿಗೆ.
ಇವರಿಬ್ಬರಿಗಷ್ಟೇ ಅಲ್ಲ ಈ ಬಗೆಯ ತಳಮಳ, ಹದಿಹರೆಯದ ಹಂತಕ್ಕೆ ಕಾಲಿಟ್ಟ ಎಲ್ಲ ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ವಿಷಯದಲ್ಲಿ ಅದೇನೋ ಗೊಂದಲ, ಅದೇನೋ ತಲ್ಲಣ. ವ್ಯಕ್ತಿತ್ವಕ್ಕೊಂದು ಸ್ವಂತ ಗುರುತು ಕಂಡುಕೊಳ್ಳುವ ಪ್ರಶ್ನೆಯಿಂದ ತೊಡಗಿ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಎನ್ನುವವರೆಗೆ ಇವರ ಮುಂದೆ ಇರುವುದು ಪ್ರಶ್ನೆಗಳೋ ಪ್ರಶ್ನೆಗಳು.
ನಿಮ್ಮೊಳಗಿದ್ದೂ…
ಎಲ್ಲರ ಜೊತೆಗಿದ್ದೂ ಎಲ್ಲರಂತಾಗದಿರುವ ಪ್ರಯತ್ನವಿದು. ಗೆಳೆಯರ ಗುಂಪಿನಲ್ಲಿ ಸೇರಿಕೊಳ್ಳಬೇಕು, ಆದರೆ ಅವರೆಲ್ಲರೂ ಮಾಡಿದಂತೆ ಮಾಡಲು ಮನಸ್ಸೊಪ್ಪುವುದಿಲ್ಲ. ಸಹಪಾಠಿಗಳ ಪ್ರಭಾವ ಒತ್ತಡವಾಗಿಬಿಡುವುದು ಹೀಗೆ. ಗೆಳೆಯರೆಲ್ಲಾ ಕ್ಲಾಸ್ ಬಂಕ್ ಮಾಡಿದರೆ ತಾನು ಮನಸ್ಸಿಲ್ಲದಿದ್ದರೂ ಮಾಡಬೇಕು, ಮಾಡದಿದ್ದರೆ? ತಾನೇ ಪ್ರತ್ಯೇಕವಾಗಿ ನಿಲ್ಲು ವ ಭಯ. ಇತರರಿಗೆ ಚಿಕ್ಕದೆಂದು ಕಾಣುವ ವಿಷಯವೂ ಇವರಿಗೀಗ ದೊಡ್ಡ ವಿಷಯ. ಪಿಯೂಸಿಗೆ ಹಾಸ್ಟೆಲ್‌ಗೆ ಸೇರಿರುವ ಪುಟ್ಟಿಗೆ ತಾನು ಹೇಗೆ ಓದಿಕೊಳ್ಳುವುದೆಂಬುದೇ ಸಮಸ್ಯೆ. ತನ್ನ ರೂಮ್‌ಮೇಟ್ಸ್ ಎಲ್ಲಾ ಕಾರಿಡಾರ್‌ನಲ್ಲಿ ದೊಡ್ಡದಾಗಿ ಓದಿಕೊಳ್ಳುತ್ತಾರೆ, ತಾನು ಹೇಗೆ ಓದಿಕೊಂಡರೆ ಸರಿ? ಗಟ್ಟಿಯಾಗಿ ಹೇಳಿಕೊಳ್ಳುತ್ತಾ ಓದಿದರೆ ಪಾಠ ಬೇಗ ನೆನಪಿನಲ್ಲಿ ಉಳಿಯುತ್ತದೆ ಅಂತಾಳೆ ಪಕ್ಕದ ಬೆಂಚ್‌ನ ಪ್ರಣಮ್ಯಾ. ತನಗೋ ಮನಸ್ಸಿನಲ್ಲೇ ಓದುವ ಅಭ್ಯಾಸ. ಹಾಗಿದ್ದರೆ ಹೇಗೆ ಓದಲಿ?
ಇಂಥ ಸಮಸ್ಯೆಗಳ ಜೊತೆಗೇ ಎದುರಾಗುತ್ತದೆ ಐಡೆಂಟಿಟಿ ಕ್ರೈಸಿಸ್. ಅಪ್ಪ-ಅಮ್ಮನ ಕೋಶದಿಂದ ಹೊರಬಂದು ತನ್ನದೇ ಜಗತ್ತಿನಲ್ಲಿ ತನ್ನದೊಂದು ಗುರುತನ್ನು ಸ್ಥಾಪಿಸುವ ಸಮಯವಿದು. ಇಲ್ಲಿ ತನಗೊಂದು ಅಸ್ತಿತ್ವ ಕಂಡುಕೊಳ್ಳುವುದು ಕಷ್ಟವೇ. ನಾನು ಹೀಗೆ, ನನ್ನ ಅಭಿಪ್ರಾಯ ಇದು ಎಂದು ಗಟ್ಟಿಯಾಗಿ ಮಾತಾಡುವ ದೃಢತೆಯನ್ನು ಬೆಳೆಸಿಕೊಳ್ಳುವುದೇ ಇಲ್ಲೊಂದು ಸವಾಲು.
ಯಾವ ಓದು? ಏನು ಕೆಲ್ಸ?
ಹಂತ ಹಂತದಲ್ಲೂ ಎದುರಾಗೋ ಪ್ರಶ್ನೆ ಇದು. ಹತ್ತನೇ ಕ್ಲಾಸ್ ಮುಗಿದಾಕ್ಷಣ ಮುಂದೇನು ಅನ್ನೋ ಗೊಂದಲ ಕೆಲವರನ್ನಾದರೂ ಕಾಡುತ್ತದೆ. ಅಂಕ ಹೆಚ್ಚು ಸಿಕ್ಕಿತೆಂದು ಸೈನ್ಸ್‌ಗೆ ಹೋಗೋದೋ ಅಥವಾ ಇಷ್ಟದ ಆರ್ಟ್ಸ್ ತೆಗೆದುಕೊಳ್ಳೋದೋ.. ಪಿಯುಸಿಯಲ್ಲಿ ಕಾಮರ್ಸ್ ಓದಿ ಆಯ್ತು. ಇನ್ನು ಬಿಕಾಂ ಮಾಡೋದಾ ಬಿಬಿಎಮ್ಮಾ ಅಥವಾ ಸಿಎ ಫೌಂಡೇಶನ್ ಕೋರ್ಸ್ ಬರಿಯೋದಾ? ಅಥವಾ ಇದೆಲ್ಲಾ ಬಿಟ್ಟು ಕಾವಾಗೆ ಚಿತ್ರಕಲೆ ಕಲಿಯಲು ಹೋಗಿಬಿಡಲಾ? ಈ ಪ್ರಶ್ನೆಗಳನ್ನೆಲ್ಲ ಮುಂದಿಟ್ಟು ಕುಳಿತವರಿಗೇ ಗೊತ್ತು ತಮ್ಮ  ತಲ್ಲಣಗಳ ಗಂಭೀರತೆಗಳು. ಇವಕ್ಕೆಲ್ಲ ಸರಿಯಾಗಿ ಉತ್ತರಿಸಿಕೊಳ್ಳಲಾಗದವರೂ ಮುಂದೆಂದೋ ಹಿಡಿದ ದಾರಿ ಬಿಟ್ಟು ತಮಗೊಲಿವ ದಾರಿಯತ್ತ ಬರುವುದುಂಟು. ನಿರ್ಧರಿಸುವ ಹಂತದಲ್ಲೇ ತಮಗೆ ಹೊಂದುವ ಮಾರ್ಗ ಹಿಡಿದಿದ್ದರೆ ಇವರು ಹೀಗೆ ಮತ್ತೆ ಮಾರ್ಗ ಬದಲಿಸುವ ಪ್ರಮೇಯ ಬರಲಾರದು.
ಓದುತ್ತಿರುವಾಗಲೇ ನಾನು ಮುಂದೆ ಏನಾಗುತ್ತೇನೆ ಎಂಬ ಯೋಚನೆ ಬಹುತೇಕರ ತಲೆ ತಿನ್ನುತ್ತಲೇ ಇರುತ್ತದೆ. ಪಿಜಿ ಮಾಡಲಾ ಕೆಲಸಕ್ಕೆ ಸೇರಲಾ ಅನ್ನೋದು ಕೆಲವರ ಡೈಲೆಮಾ. ತನಗೆ ಸರಿಹೊಂದೋ ಕೆಲಸ ಯಾವುದು ಅಂತ ನಿರ್ಧರಿಸೋ ಕಷ್ಟ ಇನ್ನು ಹಲವರಿಗೆ. ಪಿಜಿ ಮಾಡಿದ್ದಾಗಿದೆ, ಲೆಕ್ಚರರ್ ಆಗಲಾ ಅಥವಾ ಸೀದಾ ಫೀಲ್ಡ್‌ಗಿಳಿಯಲಾ? ಗೆಳೆಯ ಟೀಚಿಂಗ್ ಫೀಲ್ಡ್‌ಗೆ ಹೋಗ್ತಾನಂತೆ, ನಾನೇನು ಮಾಡಲಿ? ‘ನನಗೆ ಪದವಿ ಮುಗಿದಾಗ ಲೈಬ್ರರಿ ಸೈನ್ಸ್‌ನಲ್ಲಿ ಮೆರಿಟ್ ಸೀಟ್ ಸಿಕ್ಕಿತ್ತು. ಆದರೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆ ಸೇರಬೇಕೆಂಬುದು ನನ್ನ ಇಷ್ಟವಾಗಿತ್ತು. ಆದರೆ ಮನೆಯಲ್ಲಿ ನಾನು ಲೈಬ್ರರಿ ಸೈನ್ಸ್‌ಗೆ ಸೇರಲಿ ಎಂದೇ ಎಲ್ಲರ ಅಭಿಪ್ರಾಯವಿತ್ತು. ಆಗ ಒಂದು ಕ್ಷಣ ಗೊಂದಲವಾದರೂ ನಾನು ಪತ್ರಿಕೋದ್ಯಮವೇ ಬೇಕೆಂದು ಕಾದು ಸೇರಿಕೊಂಡೆ’ ಅಂತಾರೆ ಧಾರವಾಡದ ಪತ್ರಿಕೋದ್ಯಮ ವಿದ್ಯಾರ್ಥಿ ರವಿ ಹಲ್ಲೂರು. ಹೀಗೆ ಪ್ರತಿಯೊಬ್ಬರ ಒಳಗೂ ಒಂದೊಂದು ಸಮಸ್ಯೆ.
ಸಂಬಂಧಗಳ ಸರಿಗಮ
ಸಂಬಂಧಗಳನ್ನು ನಿಭಾಯಿಸೋದೇ ಇನ್ನೊಂದು ದೊಡ್ಡ ಕೆಲಸ. ಗೆಳೆಯರನ್ನು ಆಯ್ಕೆ ಮಾಡುವಲ್ಲಿಂದಲೇ ತೊಡಕು ಶುರು. ಫ್ರೆಂಡ್ಸ್ ಹೇಗಿರಬೇಕು ಅಂತ ನಿರ್ಧರಿಸುವುದೇ ದೊಡ್ಡ ಯಕ್ಷಪ್ರಶ್ನೆ. ಗೆಳೆಯನೋ ಗೆಳತಿಯೋ ತನ್ನದೇ ಅಭಿರುಚಿಯವರಾಗಿರಬೇಕಾ, ಭಿನ್ನ ದಾರಿಯಲ್ಲಿ ನಡೆಯುವವರೂ ಆಗಬಹುದಾ, ಗೆಳೆಯರೆಂದು ನಂಬಿಕೊಂಡವರು ತನ್ನನ್ನು ಡಾಮಿನೇಟ್ ಮಾಡುವಂತಾದರೆ ಏನು ಮಾಡಬಹುದು… ಸ್ನೇಹಿತರೊಂದಿಗೆ ಎಷ್ಟರಮಟ್ಟಿಗೆ ಬೆರೆಯಬೇಕು, ಓದನ್ನೂ ಗೆಳತನವನ್ನೂ ಬ್ಯಾಲೆನ್ಸ್ ಮಾಡುವುದು ಹೇಗೆ? ಟೀನೇಜ್ ಹಂತದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ನೀರೆರೆಯುವ ಗೆಳೆತನವೇ ಇಷ್ಟೆಲ್ಲ ಸಂದೇಹಗಳನ್ನೂ ಜೊತೆಗೇ ಹುಟ್ಟುಹಾಕುವುದು ಮಾತ್ರ ಸುಳ್ಳಲ್ಲ. ‘ನಾನು ಡಿಗ್ರಿಯಲ್ಲಿ ಓದುತ್ತಿದ್ದಾಗ ಫ್ರೆಂಡ್ಸ್ ಜೊತೆ ಇದ್ದ ಒಡನಾಟಕ್ಕೂ ಪಿಜಿ ಗೆ ಬಂದಮೇಲಿನ ಒಡನಾಟಕ್ಕೂ ವ್ಯತ್ಯಾಸವಿದೆ. ಇಲ್ಲಿ ಫ್ರೆಂಡ್ಸ್ ಮೂವ್ ಮಾಡೋ ರೀತಿ ವಿಚಿತ್ರ ಅನ್ನಿಸಿತು. ಆದರೂ ಈಗ ಅಡ್ಜಸ್ಟ್ ಆಗಿದ್ದೇನೆ’ ಅಂತಾರೆ ಬೆಂಗಳೂರಿನ ಎಂಬಿಎ ವಿದ್ಯಾರ್ಥಿನಿ ಸ್ವಾತಿ.
ಫ್ರೆಂಡ್‌ಶಿಪ್‌ನ ಬೆನ್ನಿಗೇ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಜೊತೆಗಿನ ‘ರಿಲೇಶನ್‌ಶಿಪ್’ಗಳೂ ಹಣಕಿ ಹಾಕುತ್ತವೆ. ಈ ಹುಡುಗ-ಹುಡುಗಿಯರ ಸಂಗದಿಂದಲೇ ಓದಿನ ಹಳಿ ತಪ್ಪಿಸಿಕೊಂಡು ನಡೆದವರುಂಟು. ಎಲ್ಲೋ ಮೋಸವಾಗಿ ಇನ್ನಿಲ್ಲದಂತೆ ಗೋಳಾಡಿದವರುಂಟು. ಅಂಥಾ ಉದಾಹರಣೆಗಳನ್ನೆಲ್ಲ ಕೇಳುವಾಗ ಛೇ, ಬೇಡಪ್ಪ ಸಹವಾಸ ಅನ್ನಿಸುವುದೇನೋ ನಿಜ. ಆದರೆ, ಕಾಡುವ ಮನ ಕೇಳಬೇಕಲ್ಲ…
ಓದಿಯೂ ಆಯ್ತು, ಕೆಲಸಕ್ಕೆ ಸೇರಿದ್ದೂ ಆಯ್ತು. ಉದ್ಯೋಗದ ಈ ಹೊಸ ವಾತಾವರಣದಲ್ಲಿ ಮತ್ತೆ ವ್ಯಕ್ತಿಗಳ ಜೊತೆಗಿನ ಬಂಧ ಬೇರೆಯದೇ ಆಗಿರುತ್ತದೆ. ಈ ಕೆಮಿಸ್ಟ್ರಿಯನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಹಿರಿಯರ ಜೊತೆ, ಸಹೋದ್ಯೋಗಿಗಳ ಜೊತೆ ಹೇಗೆ ಹೇಗೋ ವರ್ತಿಸಿ ಏನೋ ಎಡವಟ್ಟುಗಳನ್ನೂ ಮಾಡಿಕೊಂಡಾಗಿರುತ್ತದೆ. ಇನ್ನೊಂದಷ್ಟು ತಿಂಗಳುಗಳು ಹೋದಾಗ ಮನಸ್ಸು ಹೇಳುತ್ತದೆ, ‘ಇದು ಕಾಲೇಜು ಕ್ಯಾಂಪಸ್‌ನ ಹಾಗಲ್ಲ..’
ಎಲ್ಲಾ ಇದೆ ನಮ್ಮೊಳಗೆ
ವ್ಯಕ್ತಿಯೊಬ್ಬ ತನಗೊಂದು ನೆಲೆ ಕಂಡುಕೊಳ್ಳುವ ಈ ಕ್ಷಣಗಳಲ್ಲಿ ಇಷ್ಟೆಲ್ಲಾ ದ್ವಂದ್ವಗಳು ಸಹಜವೇ. ಆದರೆ, ಇವುಗಳು ಎದುರಾದ ತಕ್ಷಣವೇ ಧೃತಿಗೆಡುವುದು ತರವಲ್ಲ. ಪ್ರತಿಯೊಬ್ಬ ಪ್ರೌಢವ್ಯಕ್ತಿಯೂ ಇಂತಹ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡೇ ಬೆಳೆದಿರುತ್ತಾನೆ. ಅವರೆಲ್ಲರೂ ಹಿರಿಯರ, ಗೆಳೆಯರ ಮಾರ್ಗದರ್ಶನ, ಸಲಹೆಯನ್ನು ಪಡೆದೇ ತನ್ನ ಗೊಂದಲ ಪರಿಹರಿಸಿಕೊಂಡಿರುತ್ತಾರೆ. ಮನೋವೈದ್ಯರು ಹೇಳುವುದೂ ಇದನ್ನೇ. ‘ಇಂತಹ ಒತ್ತಡಗಳು ಅತಿಯಾಗಿ ಕಾಡಿದಾಗ ಅನೇಕ ಟೀನೇಜರ್‍ಸ್ ಡ್ರಗ್ಸ್, ಆಲ್ಕೋಹಾಲ್‌ಗಳ ಚಟಕ್ಕೆ ಬೀಳುವುದೂ ಇದೆ. ಅದಕ್ಕೇ ಇಂತಹ ಸಮಸ್ಯೆಗಳನ್ನು ಬೆಳೆಯಲು ಬಿಡಬಾರದು. ಮೊದಲು ತಮ್ಮ ಮನೆಯವರ ಬಳಿ ಹೇಳಿಕೊಳ್ಳಬಹುದು. ಅಥವಾ ಆತ್ಮೀಯ ಗೆಳೆಯರು, ಲೆಕ್ಚರರ್‍ಸ್ ಹತ್ರ ಹೇಳಿಕೊಂಡರೂ ಪರಿಹಾರ ಸಿಗಬಹುದು. ಕಾಲೇಜುಗಳಲ್ಲೇ ಕೌನ್ಸೆಲರ್‍ಸ್ ಇರುವುದೂ ಉಂಟು, ಹಾಗಿದ್ದಲ್ಲಿ ಅವರ ಬಳಿಯೇ ಹೋಗಬಹುದು. ಇಲ್ಲೆಲ್ಲಿಯೂ ಸಮಾಧಾನ ಸಿಗಲಿಲ್ಲವಾದರೆ ಸೈಕಾಲಜಿಸ್ಟ್ ಅಥವಾ ಕೌನ್ಸೆಲರ್‌ಗಳ ನೆರವು ತೆಗೆದುಕೊಳ್ಳಬಹುದು’ ಅಂತಾರೆ ಮನೋವೈದ್ಯೆ ಡಾ. ಪಾವನಾ ರಾವ್.
ಹದಿಹರೆಯವೆಂದರೆ ವ್ಯಕ್ತಿ ತನ್ನ ಪಾಲಿನ ನಿರ್ಧಾರವನ್ನು ತಾನೇ ತೆಗೆದುಕೊಳ್ಳು ಶಕ್ಯವಾಗುವ ಹಂತ. ಆದ್ದರಿಂದ ಇಂತಹ ದ್ವಂದ್ವಗಳ ಸಂದರ್ಭದಲ್ಲಿಯೂ ತಮ್ಮ ಕುರಿತಾದ ನಿರ್ಧಾರಗಳನ್ನು ತಾವೇ ತೆಗೆದುಕೊಂಡು ಅದಕ್ಕೆ ತಾವೇ ಜವಾಬ್ದಾರರಾದರೆ ವ್ಯಕ್ತಿತ್ವಕ್ಕೆ ವಿಶಿಷ್ಟ ದೃಢತೆಯೂ ಸಿಗುತ್ತದೆ. ತಮ್ಮೊಳಗಿನ ಈ ತೀರ್ಪುಗಾರನನ್ನು ಎಚ್ಚರಿಸಿ, ತರ್ಕಕ್ಕೆ ಒಳಪಡಿಸಿ, ಹಿರಿಯರ ಅನುಭವದ ಹಿನ್ನೆಲೆಯಲ್ಲಿ  ತಮ್ಮ ಗೊಂದಲ ನಿವಾರಿಸಿಕೊಳ್ಳುವ ಈ ಕ್ರಿಯೆ ಹೊಸ ಆತ್ಮವಿಶ್ವಾಸ ನೀಡುವುದಂತೂ ಹೌದು.
————–

ಫ್ರೆಂಡ್‌ಶಿಪ್ ವಿಷಯದಲ್ಲಿ ನಾನೂ ತುಂಬಾ ಡೈಲೆಮಾ ಎದುರಿಸಿದ್ದೇನೆ. ಎಷ್ಟೋ ಬಾರಿ ಫ್ರೆಂಡ್ಸ್‌ನಿಂದ ನಾವು ನಿರೀಕ್ಷೆ ಮಾಡಿರೋ ವಿಷ್ಯ ಸಿಕ್ಕಿರೋದಿಲ್ಲ. ನಾವು ಬಯಸಿದ ದಾರಿ ಬಿಟ್ಟು ಅವರ ದಾರಿಗೇ ನಮ್ಮನ್ನವರು ಎಳೀತಾ ಇದ್ದಾರೇನೋ ಅನ್ನೋ ಸಂದೇಹ ಬರೋದಿದೆ.
-ಶ್ರುತಿ ಕೆ., ಅಂತಿಮ ಬಿಎ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ.
ನನಗೆ ಡಿಗ್ರಿ ಮಾಡಿದ ಬಳಿಕ ಯಾವ ಕೋರ್ಸ್‌ಗೆ ಸೇರಿಕೊಳ್ಳಲಿ ಎಂಬ ದ್ವಂದ್ವ ಇತ್ತು. ಹಾಗೇ ಈಗಲೂ ಪಿಜಿ ಆದ ಬಳಿಕ ಇಲೆಕ್ಟ್ರಾನಿಕ್ ಮೀಡಿಯಾಗೆ ಹೋಗಲಾ ಅಥವಾ ಪ್ರಿಂಟ್ ಮೀಡಿಯಾಗೆ ಹೋಗಲಾ ಎಂಬ ದ್ವಂದ್ವ ಕಾಡಿತ್ತು. ಇಂಥ ಸಂದರ್ಭದಲ್ಲೆಲ್ಲ ನಾನು ನನ್ನ ಹಿರಿಯರು, ಲೆಕ್ಚರರ್‍ಸ್‌ನ ಸಲಹೆ ಕೇಳ್ತೇನೆ.
ರವಿ ಹಲ್ಲೂರು, ದ್ವಿತೀಯ ಎಂಸಿಜೆ, ಕರ್ನಾಟಕ ವಿವಿ, ಧಾರವಾಡ.
————-

ನಾ ಗೆದ್ದೇ ಬಿಟ್ಟೆ…

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಕಾಲಿಗೊಂದು ಅಪಘಾತವಾಗಿ ಎರಡು ದಿನ ಮನೆಯಲ್ಲಿ ಕುಳಿತುಕೊಳ್ಳುವಂತಾದಾಗಲೇ ಗೊತ್ತಾಗೋದು ಕಾಲಿನ ಮಹತ್ವ ಏನು ಅನ್ನೋದು. ಅದರಲ್ಲೂ ಹುಟ್ಟಿನಿಂದಲೇ ಎರಡೂ ಕಾಲುಗಳೂ ಸ್ವಾನದಲ್ಲಿಲ್ಲದಿದ್ದರೆ..? ಗುಲ್ಬರ್ಗಾದ ರಶ್ಮಿ ಔರಸಂಗೆ ಆಗಿದ್ದು ಹೀಗೆ. ಆದರೆ ಈ ಹುಡುಗಿ ಸೋತು ಮೂಲೆ ಸೇರಲಿಲ್ಲ. ಅದಮ್ಯ ಛಲದಿಂದ ತನ್ನ ಮಿತಿಯನ್ನೇ ಮೀರಿನಿಂತಳು. ಇದೀಗ ದ್ವಿತೀಯ ಪಿಯುಸಿಗೆ ಹೆಜ್ಜೆ ಇಟ್ಟಿರುವ ೧೭ರ ಹರೆಯದ ರಶ್ಮಿ ಕಾಲಿಲ್ಲದಿದ್ದರೂ ಕುಣಿಯುವ, ಪ್ರೇಕ್ಷಕರಿಂದ ‘ವನ್ಸ್ ಮೋರ್’ ಅನ್ನಿಸಿಕೊಳ್ಳುವ ಸಾಧಕಿ. ಈಕೆ ತನ್ನ ಸಾಧನೆಯ ಕಥೆಯನ್ನು ಇಲ್ಲಿ ಹೇಳಿಕೊಂಡಿದ್ದಾರೆ.

(ನಿರೂಪಣೆ: ವಿದ್ಯಾರಶ್ಮಿ ಪೆಲತ್ತಡ್ಕ)
ಹುಟ್ಟಿನಿಂದ ಕೊಂಚ ದೊಡ್ಡವಳಾಗುವವರೆಗೂ ನಾನು ಬೆಳೆದದ್ದು ಹೆತ್ತವರ ಕಂಕುಳಲ್ಲಿ. ಕ್ರಮೇಣ ನಾನು ವೀಲ್‌ಚೇರ್‌ಗೆ ಹಸ್ತಾಂತರವಾದೆ. ಪಾಪ, ಅಪ್ಪ-ಅಮ್ಮರಾದರೂ ಏನು ಮಾಡಿಯಾರು? ಬದುಕು ಪೂರ್ತಿ ಮಗಳನ್ನು ತಮ್ಮ ಕಣ್ರೆಪ್ಪೆಯಲ್ಲೇ ಬಚ್ಚಿಟ್ಟು ಜೋಪಾನವಾಗಿ ಕಾಪಾಡಬೇಕು ಎಂಬುದೇ ಅವರ ಬಯಕೆ ನಿಜ, ಆದರೆ ನಿಜದಲ್ಲಿ ಅದು ಅಸಾಧ್ಯ. ಸೊಂಟದ ಕೆಳಗೆ ಸ್ವಾನವಿಲ್ಲದ ನಾನು ವ್ಹೀಲ್‌ಚೇರ್‌ಗೆ ಟ್ರಾನ್ಸ್‌ಫರ್ ಆದದ್ದು ಹೀಗೆ.
ಇದರಿಂದ ಹೆತ್ತವರಿಗೆ ಅದೆಷ್ಟು ಸಂಕಟವಾಯಿತೋ ಏನೋ, ಆದರೆ ನನಗೆ ಮಾತ್ರ ಏನೂ ಅನಿಸಲೇ ಇಲ್ಲ! ಯಾಕೆ ಗೊತ್ತಾ? ಕಾಲಿಲ್ಲದಿರುವುದರಿಂದ ಆಗುವ ನಷ್ಟ ನನಗೆ ಗೊತ್ತೇ ಇರಲಿಲ್ಲವಲ್ಲ… ಒಮ್ಮೆ ಕಾಲಿದ್ದರೆ ಗೊತ್ತಾಗುತ್ತಿತ್ತು ಕಾಲಿಲ್ಲದ ದುಃಖ. ಹುಟ್ಟು ಕುರುಡರಿಗೆ ಜಗತ್ತಿನ ಸೌಂದರ್‍ಯವೇನು ಗೊತ್ತಿರುತ್ತದೆ ಹೇಳಿ… ನನಗಗಿದ್ದದ್ದು ಹುಟ್ಟಿನಿಂದಲೇ ಬಂದ ಸಮಸ್ಯೆ. ಒಂದೂವರೆ ತಿಂಗಳ ಹಸುಗೂಸಾಗಿದ್ದಾಗಲೇ ಸೊಂಟದ ಕೆಳಗೆ ಸ್ಪರ್ಶಜ್ಞಾನವಿಲ್ಲ ಎನ್ನುವ ಕಾರಣಕ್ಕೆ ಪುಣೆಯ ಆಸ್ಪತ್ರೆಯಲ್ಲಿ ನನಗೊಂದು ಶಸ್ತ್ರಚಿಕಿತ್ಸೆ ನಡೆಯಿತು. ಆದರೆ ಇದರಿಂದ ಪ್ರಯೋಜನವೇನೂ ಆಗಲಿಲ್ಲ. ಮತ್ತೆ ಪರೀಕ್ಷೆ ಮಾಡಿದ ಡಾಕ್ಟರ್ ಹೇಳಿದ್ದರಂತೆ, ‘ಮಗುವಿನ ಬೆನ್ನುಮೂಳೆಯಲ್ಲಿ ಏನೋ ತೊಂದರೆಯಿದೆ. ಮಗು ಬೆಳೆಯುತ್ತಾ ಹೋದಂತೆ ಈ ತೊಂದರೆ ತಂತಾನೇ ಸರಿಹೋಗಬಹುದು. ಸರಿಯಾಗದೆಯೂ ಇರಬಹುದು. ಒಂದು ವೇಳೆ, ಇದೇ ರೀತಿಯ ತೊಂದರೆ ಮುಂದುವರಿದರೆ ಆಕೆ ಬದುಕಿಡೀ ವ್ಹೀಲ್‌ಚೇರ್‌ನೊಂದಿಗೆ ದಿನಕಳೆಯಬೇಕಾಗುತ್ತದೆ. ಹಾಗಾಗದಿರಲಿ.’
ಆದರೆ, ವೈದ್ಯರ ಪ್ರಾರ್ಥನೆಯಂತಾಗಲಿಲ್ಲ. ನಾನು ವ್ಹೀಲ್‌ಚೇರ್‌ನ ಕೂಸಾದೆ.
ಅಮ್ಮ  ನನ್ನ ನೋಡ್ಕೊಂಡ್ರು
ವೈದ್ಯರು ನೀಡಿದ ಮುನ್ನೆಚ್ಚರಿಕೆಯ ಹಾಗೇ ಅಪ್ಪ-ಅಮ್ಮ ನನ್ನನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳೋಕೆ ಶುರುಮಾಡಿದ್ರು. ಗುಲ್ಬರ್ಗಾ, ಪುಣೆ, ಬಾಂಬೆ, ಹೈದ್ರಾಬಾದ್, ಬೆಂಗಳೂರು ಹೀಗೆ ಅದೆಷ್ಟೋ ಆಸ್ಪತ್ರೆಗಳಿಗೆ ಅಲೆದಾಡಿದ್ರು. ದೇವಾನುದೇವತೆಗಳಿಗೆ ಹರಕೆಯನ್ನೂ ಹೇಳಿಕೊಂಡ್ರು. ಊಹೂಂ, ನನ್ನ -ವ್ಹೀಲ್ ಚೇರ್ ಸಾಂಗತ್ಯವನ್ನು ಅಪ್ಪ-ಅಮ್ಮನೂ ಒಪ್ಪಿಕೊಳ್ಳಬೇಕಾಯ್ತು. ಸರಿ, ಕಾಲ ಕಾಯಲಿಲ್ಲ. ನಾನು ಶಾಲೆಗೆ ಹೋಗುವ ವಯಸ್ಸು ಬಂತು. ಅಮ್ಮ ತಾನು ಟೀಚರ್ ಆಗಿದ್ದ ಸೇಡಂನ ವಾಸವದತ್ತಾ ವಿದ್ಯಾವಿಹಾರ ಶಾಲೆಗೇ ನನ್ನನ್ನು ಸೇರಿಸಿದರು.
ಮೊದಮೊದಲು ಶೌಚ ಕಾರ್‍ಯಗಳಲ್ಲೆಲ್ಲ ಅಮ್ಮ ನೆರವಾಗುವಾಗ ನನಗೆ ಏನೂ ಅನ್ನಿಸುತ್ತಿರಲಿಲ್ಲ. ಕ್ರಮೇಣ ದೊಡ್ಡವಳಾದಂತೆ ಯಾಕೋ ಕೊಂಚ ಇರುಸುಮುರುಸಾದದ್ದು ನಿಜ. ಆದರೆ ನನಗೆ ಅಂತಹ ಮುಜುಗರವೇನೂ ಆಗದಂತೆ ಅಮ್ಮ ನನ್ನನ್ನು ನೋಡಿಕೊಂಡಳು. ‘ನೀನು ಯಾವತ್ತಿದ್ದರೂ ನನಗೆ ಪುಟ್ಟಮಗೂನೇ’ ಅನ್ನುತ್ತ ನನ್ನಲ್ಲಿ ಸಂಕೋಚ ಮೂಡದಂತೆ ನೋಡಿಕೊಂಡಳು. ಈ ಮಧ್ಯೆ ಕೊಲ್ಹಾಪುರದಲ್ಲಿರುವ ಹೆಲ್ಪರ್‍ಸ್ ಆಫ್ ದ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಮುಖ್ಯಸ್ಥೆ ನಸೀಮಾ ಹುರಜುಕ್ ಅವರು ನನ್ನಂಥ ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯಕ್ಕಿಂತ ಪಾಶ್ಚಾತ್ಯ ಶೈಲಿಯ ಶೌಚಾಲಯ ಸೂಕ್ತ ಎಂದು ಸೂಚಿಸಿದರು. ಆ ಬಳಿಕ ನಿಧಾನವಾಗಿ ನಾನು ಸ್ವತಂತ್ರಳಾಗಿ ಶೌಚಾಲಯಕ್ಕೆ ಹೋಗಿಬರುವುದನ್ನು ರೂಢಿಸಿಕೊಂಡೆ. ಆಮೇಲಿನಿಂದ ಅಮ್ಮನ ಅಲ್ಪ ಸ್ವಲ್ಪ ಸಹಾಯ ಬಿಟ್ಟರೆ ಈ ಕಾರ್‍ಯದಲ್ಲೆಲ್ಲ ನಾನು ಬಹುತೇಕ ಸ್ವತಂತ್ರಳು.
ನಾನೂ ಡ್ಯಾನ್ಸ್ ಕಲ್ತೆ
ನಮ್ಮಮ್ಮ ಟೀಚರ್. ಅವ್ರ ಬಳಿ ಡ್ಯಾನ್ಸ್ ಕಲಿಯೋಕೆ ಅಂತ ಮಕ್ಕಳೆಲ್ಲ ಮನೆಗೆ ಬರ್‍ತಿದ್ರು. ನನ್ನ ಕ್ಲಾಸ್‌ಮೇಟ್ಸ್ ಎಲ್ಲಾ ಅವರ ಬಂದು ಡ್ಯಾನ್ಸ್ ಕಲಿಯೋದು ನೋಡಿ ನಾನೂ ಯಾಕೆ ಡ್ಯಾನ್ಸ್ ಮಾಡ್ಬಾರ್ದು ಅನ್ನಿಸ್ತಾ ಇತ್ತು. ಒಂದು ದಿನ ನಾನೊಬ್ಬಳೇ ಮನೆಯಲ್ಲಿದ್ದಾಗ ಟಿವಿಯಲ್ಲಿ ‘ಫನ್ಹಾ’ ಎಂಬ ಹಿಂದಿ ಚಿತ್ರವೊಂದು ಬಂತು. ಆ ಚಿತ್ರದಲ್ಲಿ ಕುರುಡಿ ನಾಯಕಿ ಡ್ಯಾನ್ಸ್ ಮಾಡುವ ದೃಶ್ಯವಿದೆ. ಅದನ್ನು ನೋಡುತ್ತ ನೋಡುತ್ತ, ‘ಕುರುಡಿಯೇ ಡ್ಯಾನ್ಸ್ ಮಾಡಿದಳು ಅಂದ್ಮೇಲೆ ಕಣ್ಣಿರುವ ನಾನೇಕೆ ಡ್ಯಾನ್ಸ್ ಮಾಡಬಾರದು?’ ಅನ್ನಿಸಿತು. ಆ ಸಂದರ್ಭದಲ್ಲಿಯೇ ನೃತ್ಯ ನಿರ್ದೇಶಕಿ ಸರೋಜ್ ಖಾನ್ ನಡೆಸಿಕೊಡುವ ’ನಚಲೇ’ ಕಾರ್ಯಕ್ರಮ ಪ್ರಸಾರವಾಯಿತು. ಅದನ್ನು ನೋಡಿ ಇನ್ನಷ್ಟು ಸೂರ್ತಿ ಪಡೆದುಕೊಂಡು ಅದೇ ಫನ್ಹಾ ಚಿತ್ರದ ‘ಯಹಾಂ ಹರ್ ಕದಂ/ಕದಂ ಪೇ ಧರತಿ ಬದಲೇ ರಂಗ್/ ಮೇರಾ ದೇಶ್ ರಂಗೀಲಾ’ ಹಾಡನ್ನು ರೆಕಾರ್ಡ್ ಮಾಡಿಕೊಂಡು ವ್ಹೀಲ್ ಚೇರ್ ಮೇಲೆ ಕುಳಿತೇ ಪ್ರಾಕ್ಟೀಸ್‌ಗೆ ಶುರು ಮಾಡಿದೆ.
ಒಂದು ದಿನ ಹೀಗೆ ಅಭ್ಯಾಸ ಮಾಡುತ್ತಿರುವಾಗಲೇ ಆಕಸ್ಮಿಕವಾಗಿ ಮನೆಗೆ ಬಂದ ಅಪ್ಪ ನನ್ನ ನೃತ್ಯಾಭ್ಯಾಸ ನೋಡಿ ಅಚ್ಚರಿಪಟ್ಟರು. ನನ್ನನ್ನು ತಬ್ಬಿಕೊಂಡು, ‘ಇದನ್ನು ಮುಂದುವರಿಸು ಮಗಳೇ, ನಿನ್ನ ಜೊತೆಗೆ ನಾವಿದ್ದೇವೆ’ ಅಂದ್ರು. ಅಂದಿನಿಂದ ನಿತ್ಯವೂ ಮನೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದೆ. ಜೊತೆಗೆ ಕೊಲ್ಹಾಪುರದ ನಸೀಮಾ ಹುರಜುಕ್ ಅವರ ಸಂಸ್ಥೆಯಲ್ಲಿದ್ದ ಅಂಗವಿಕಲರೂ ಡ್ಯಾನ್ಸ್ ಮಾಡುತ್ತಾರೆಂದು ಗೊತ್ತಾಗಿ ಮಾಹಿತಿ ಕಲೆಹಾಕಿದೆ. ಒಂದು ಕೈಯಲ್ಲಿ ವ್ಹೀಲ್‌ಚೇರನ್ನು ನಡೆಸುತ್ತಾ ಇನ್ನೊಂದು ಕೈ ಹಾಗೂ ಮುಖದಲ್ಲಿ ಭಾವಾಭಿನಯ ಮಾಡುತ್ತಾ ನೃತ್ಯ ಮಾಡುವುದನ್ನು ನಾನೇ ಕಲಿತುಕೊಂಡೆ.
೨೦೦೮ರ ಅಕ್ಟೋಬರ್ ೧೭ರಂದು ಹೈದ್ರಾಬಾದ್‌ನಲ್ಲಿ ಹೆಲ್ಪರ್‍ಸ್ ಆಫ್ ದಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಕಾರ್‍ಯಕ್ರಮದಲ್ಲಿ ನನ್ನ ನೃತ್ಯ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತು. ಅಲ್ಲಿ ನನ್ನ ಡ್ಯಾನ್ಸ್ ನೋಡಿದವರೆಲ್ಲ ಒನ್ಸ್ ಮೋರ್ ಅಂದಿದ್ದು ನೋಡಿ ನನ್ನಲ್ಲಿ ಹೊಸ ಆತ್ಮವಿಶ್ವಾಸ ಮೂಡಿತು.
ಅದಾದ ಬಳಿಕ ನಾನು ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. ಸದಾ ಹೊಸ ಹೊಸ ಹಾಡು, ನೃತ್ಯ ಕಲಿಯುತ್ತಿರುತ್ತೇನೆ. ನನಗಿಷ್ಟವಾದ ಹಾಡು ಆರಿಸಿಕೊಂಡು ಅದಕ್ಕೆ ನಾನೇ ನೃತ್ಯದ ಸ್ಟೆಪ್ಸ್ ಅಳವಡಿಸಿಕೊಂಡು, ಅಮ್ಮನ ಬಳಿ ಸಲಹೆ ಕೇಳುತ್ತೇನೆ. ಬಳಿಕ ನೃತ್ಯಾಭ್ಯಾಸ ಮಾಡುತ್ತೇನೆ. ನನ್ನ ಹೆತ್ತವರಿಗೆ ನನ್ನ ಈ ಪ್ರಯತ್ನದಿಂದ ಹೆಮ್ಮೆ ಉಂಟಾಗಿದೆ. ಹೀಗೆ ಡ್ಯಾನ್ಸ್ ಮಾಡುವಾಗ ನನಗೇನೂ ಕಷ್ಟವೆನಿಸೋದಿಲ್ಲ. ಸಹಜವಾಗಿ ಇರುವವರು ಡ್ಯಾನ್ಸ್ ಮಾಡಿದ ಬಳಿಕ ಹೇಗೆ ಒಂದೆರಡು ನಿಮಿಷ ಜೋರಾಗಿ ಉಸಿರು ಬಿಡುತ್ತಾರೋ ಹಾಗೇ ನಾನೂ ಮಾಡುತ್ತ ಮರುಕ್ಷಣದಲ್ಲೇ ಸುಧಾರಿಸಿಕೊಳ್ಳುತ್ತೇನೆ. ಪ್ರಯತ್ನಪಟ್ಟರೆ ಯಾವ ಕೆಲಸವೂ ಅಸಾಧ್ಯವಲ್ಲ ಅಂತ ಇದರಿಂದ ನನಗೇ ಗೊತ್ತಾಗಿದೆ.
ಕೊರಗಲಿಲ್ಲ ಮರುಗಲಿಲ್ಲ
ನಾನು ಶಾಲಾ ಹಂತದಿಂದಲೂ ಪರಿಚಿತರ ಜೊತೆಗೇ ಇದ್ದುದರಿಂದ ತುಂಬಾ ಪ್ರೊಟೆಕ್ಟೆಡ್ ಏರಿಯಾದಲ್ಲಿದ್ದೆ. ಅಗತ್ಯವಿದ್ದಾಗ ಸಹಾಯ ಮಾಡುವವರೆಲ್ಲರೂ ಅಲ್ಲಿ ಇದ್ದರು. ಈಗ ಕಾಲೇಜು ವಿದ್ಯಾಭ್ಯಾಸಕ್ಕೆಂದು ನಗರ ಪ್ರದೇಶಕ್ಕೆ ಬಂದಿದ್ದೇನೆ. ಇಲ್ಲಿ ಇತರರ ಹಾಗೆ ಓಡಾಡೋಕಾಗೋಲ್ಲ ಅನ್ನುವಾಗ ಕೊಂಚ ಫೀಲ್ ಆಗೋದಿದೆ. ಆದ್ರೆ ಇದನ್ನೆಲ್ಲ ದೊಡ್ಡ ವಿಷಯ ಮಾಡಿಕೊಂಡು ಕೂರುವವಳಲ್ಲ ನಾನು. ಕಷ್ಟ ಎಲ್ಲರಿಗೂ ಇರುತ್ತದೆ. ಮನಸ್ಸು ಗಟ್ಟಿ ಮಾಡಿಕೊಂಡು ಅದನ್ನು ಎದುರಿಸೋದು ಒಳ್ಳೇದು ಅನ್ನೋಳು ನಾನು.
ನನಗಾಗಿ, ನನ್ನ ಸ್ಥಿತಿಗಾಗಿ ನನ್ನ ಅಪ್ಪ-ಅಮ್ಮಂದಿರು ಕೊರಗಿರಬಹುದು. ಸುತ್ತಲಿನವರು ಕನಿಕರ ವ್ಯಕ್ತಪಡಿಸಿರಬಹುದು. ಆದರೆ ನಾನೆಂದೂ ‘ನನಗೆ ಕಾಲಿಲ್ಲ’ ಎಂದು ಬೇಸರಿಸಿಕೊಳ್ಳಲೇ ಇಲ್ಲ. ಏಕೆಂದರೆ ಆ ರೀತಿ ಬೇಸರವಾಗುವಂತೆ ನನ್ನ ಹೆತ್ತವರು ನನ್ನನ್ನು ಬೆಳೆಸಲಿಲ್ಲ. ಹೆತ್ತವರ ಬೆಂಬಲ, ನಸೀಮಾ ಹುಜರಕ್ ಅಂಥವರ ಸೂರ್ತಿ, ಶಿಕ್ಷಕರು, ಗೆಳೆಯರ, ಬಳಗದವರ ಬೆಂಬಲ ನನ್ನನ್ನ್ನು ಈ ಮಟ್ಟಕ್ಕೆ ತಂದಿದೆ.
ನಾನಿನ್ನು ದ್ವಿತೀಯ ಪಿಯೂಸಿ ಓದಲಿದ್ದೇನೆ. ನನ್ನ ದಾರಿ ದೂರವಿದೆ. ಹೀಗೇ ಓದಿ ನಿಧಾನವಾಗಿ ನನಗೆ ಸೂಕ್ತವಾಗೋ ಕೆಲಸವೊಂದನ್ನು ಹುಡುಕಿಕೊಳ್ಳಬೇಕು ಅನ್ನೋ ಗುರಿ ನನಗೆ ಇದೆ. ಸತತ ಪ್ರಯತ್ನದಿಂದ ಅಸಾಧ್ಯ ಅಂದುಕೊಂಡಿರುವುದನ್ನು ಸಾಧ್ಯವಾಗಿಸಬಹುದಾದರೆ ನಾವ್ಯಾಕೆ ಅದಕ್ಕೇಕೆ ಪ್ರಯತ್ನಿಸಬಾರದು?

(ರಶ್ಮಿ ಔರಸಂ ಇಮೇಲ್ ಐಡಿ: sಚಿಚಿ೧೯೬೧@ಡಿeಜiಜಿಜಿmಚಿiಟ.ಛಿom)

ಬಹುಮುಖ ಪ್ರತಿಭೆ ರಶ್ಮಿ
ರಶ್ಮಿ ಬರಿಯ ಡ್ಯಾನ್ಸ್ ಕಲಿತದ್ದಷ್ಟೇ ಅಲ್ಲ. ಶಾಲಾ ಓದಿನಲ್ಲೂ ಮುಂದು. ಅತ್ಯುತ್ತಮ ವಿದ್ಯಾರ್ಥಿನಿ ಅನ್ನೋ ಹೆಗ್ಗಳಿಕೆ. ಸ್ಕೌಟ್ಸ್ ಅಂಡ್ ಗೈಡ್ಸ್‌ನಲ್ಲಿ  ರಾಷ್ಟ್ರಪತಿ ಪುರಸ್ಕಾರ. ಶ್ರಮವಾದರೂ ಇದಕ್ಕೆ ಅಗತ್ಯವಿರುವ ರಾಜ್ಯ, ರಾಷ್ಟ್ರಮಟ್ಟದ ಶಿಬಿರಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡವರು ರಶ್ಮಿ. ಸಂಗೀತ, ಚೆಸ್, ಫ್ಯಾನ್ಸಿ ಡ್ರೆಸ್ ಮೊದಲಾದ ಹಲವು ಚಟುವಟಿಕೆಗಳಲ್ಲಿ ಆಸಕ್ತಿ.

ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂತು. ಪಕ್ಕದ ಮನೆಯ ಶಶಿಯ ಮಗ ಅನೂಪ್‌ನಿಗೂ ರಿಸಲ್ಟ್ ಬಂತು. ೯೫ ಪರ್ಸೆಂಟ್ ಮಾರ್ಕ್ ತೆಗೆದಿದ್ದ ಹುಡುಗ. ಮನೆಮಂದಿಗೆಲ್ಲಾ ಖುಷಿ. ಯಾವುದಾದರೂ ಒಳ್ಳೇ ಕಾಲೇಜಿನಲ್ಲಿ ಸೀಟು ಸಿಗೋದಂತೂ ಗ್ಯಾರಂಟಿಯಾಗಿತ್ತು.
ಒಳ್ಳೇ ಅಂಕ ತೆಗೆದ ಹುಡುಗನಿಗೆ ಕಂಗ್ರಾಟ್ಸ್ ಹೇಳಿಬರೋಣವೆಂದು ಬೆಳಗ್ಗಿನ ಹೊತ್ತಿನಲ್ಲೇ ಪಕ್ಕದ ಮನೆಗೆ ಹೋದೆ. ಹುಡುಗ ಖುಷಿಪಟ್ಟ, ಸ್ವೀಟೂ ಕೊಟ್ಟ. ನಾನು ಶಶಿಯ ಬಳಿ ಅದೇನೇನೋ ಮಾತಾಡುತ್ತಾ ಕುಳಿತಿದ್ದೆ. ಅಲ್ಲೇ ಇದ್ದ ಶಶಿಯ ಗಂಡ, ‘ಹಾ, ಕಾಲೇಜಿಗೆ ಹೊರಡೋಣ್ವೇನೋ..’ ಅಂದರು ಅನೂಪನಿಗೆ.
‘ಹೂಂ, ಈಗ ರೆಡಿ ಆಗಿ ಬರ್‍ತೀನಪ್ಪಾ’ ಅನ್ನುತ್ತ ಮೇಲೆ ಹೋದ ಅನೂಪ. ‘ನೋಡಿ, ಈಗ ಬರ್‍ತೀನಿ ಅಂತ ಹೋಗಿದ್ದಾನೆ, ಒಂದು ಶರ್ಟ್ ಸಿಕ್ಕಿಸ್ಕೊಂಡು ಬರೋಕೆ ಎಷ್ಟು ಹೊತ್ತು ತಗೊಳ್ತಾನೆ ನೀವೇ ನೋಡಿ..’ ಅಂದಳು ಶಶಿ ನನ್ನ ಬಳಿ. ಐದು ನಿಮಿಷದಲ್ಲೇ ರೆಡಿಯಾದ ಅನೂಪನ ಅಪ್ಪ ಸಿಡುಕಿದರು, ‘ಅಲ್ವೇ, ಇವ್ನು ಏನು ಮಾಡ್ತಿದ್ದಾನೆ? ಕಾಲೇಜಿಗೆ ಹೊರಡೋಕೆ ಮದುಮಗಳ ಥರ ರೆಡಿ ಆಗ್ತಿದ್ದಾನಾ ಏನ್ಕಥೆ?’
‘ಅವ್ನು ಹಾಗೇ ಇತ್ತೀಚೆಗೆ, ಹೊರಡೋದೆಲ್ಲಾ ಭಾರೀ ಲೇಟು. ನಾ ಮನೆ ಕೆಲ್ಸ ಎಲ್ಲಾ ಮುಗ್ಸಿ ಹೊರಡೋದಾದ್ರೂ ಇವನಷ್ಟು ಲೇಟ್ ಆಗೋದಿಲ್ಲಪ್ಪ’ ಅನ್ನುತ್ತ ಶಶಿ ಅನೂಪನ ಕೋಣೆಗೇ ಹೋದಳು.
ಹೋಗಿ ನಗುತ್ತ ಕೆಳಗೆ ಬಂದವಳೇ, ‘ಅವ್ನು ಕನ್ನಡಿ ನೋಡ್ಕೊಂಡು ಅದ್ಯಾವುದೋ ಕ್ರೀಮ್ ಹಚ್ಕೋತಾ ಇದ್ದಾನೆ. ಡ್ರೆಸ್ ಸೆಲೆಕ್ಟ್ ಮಾಡೋಕೇ ಇಷ್ಟು ಹೊತ್ತು ಬೇಕಾಯ್ತಂತೆ ಅವ್ನಿಗೆ..!’ ಅಂದಳು.
‘ಅರೆ, ಇದ್ಯಾವ ಸೀಮೆ ತಯಾರಿನಪ್ಪಾ? ಹುಡ್ಗೀರು ಈ ಪರಿ ಗಂಟೆಗಟ್ಟಲೆ ತಯಾರಾಗೋದುಂಟು. ಹುಡುಗ್ರೂ ಹೀಗೆ ತಯಾರಾಗ್ತಾರಾ?’ ಅನ್ನುತ್ತ ಅನೂಪನ ಅಪ್ಪ ನ್ಯೂಸ್‌ಪೇಪರ್ ಬಿಚ್ಚಿದರು. ಶಶಿಯೂ,
‘ಹೌದಪ್ಪ, ಅವನಕ್ಕನೂ ಇವನ ಹಾಗೆ ರೆಡಿಯಾಗೋದಿಲ್ಲಪ್ಪ. ಅದೇನು ಸೌಂದರ್‍ಯಪ್ರಜ್ಞೆಯೋ ಏನೋ.. ನನಗಂತೂ, ಇವ್ನು ಹೀಗೆ ಮಾಡಿ ಮಾಡಿ  ಇವ್ನು ಎಸ್ಸೆಸ್ಸೆಲ್ಸಿಲಿ ಒಳ್ಳೆ ಮಾರ್ಕ್ಸ್ ತೆಗೀತಾನೋ ಇಲ್ವೋ ಅಂತ ಡೌಟ್ ಬಂದಿತ್ತು. ಆದ್ರೂ ಹೇಗೋ ಮಾರ್ಕ್ಸ್ ತೆಗೆದುಬಿಟ್ನಪ್ಪ’ ಅಂದಳು. ಅವಳಿಗೆ ನಾನೂ ಏನೋ ಸಮಾಧಾನ ಹೇಳಹೊರಡುವಷ್ಟರಲ್ಲಿ ಮಹಡಿಯಿಂದ ಇಳಿದುಬಂದ ಮಗರಾಯ.
‘ಆಯ್ತಾ…’ ಅನ್ನುತ್ತ ಅವನ ತಂದೆ ಚಪ್ಪಲಿ ಮೆಟ್ಟಿದರು. ‘ನೀನು ಹೀಗೇ ಆಗ್ಬಿಟ್ರೆ ಪಿಯೂಸಿ ಸೈನ್ಸ್ ಪಾಸಾಗೋದು ಕಷ್ಟ ಇದೆ ಕಣೋ’ ಅಂದಳು ಶಶಿ ಚಿಂತಾಕ್ರಾಂತಳಾಗಿ. ನಮ್ಮತ್ತ ನೋಡಿ ನಕ್ಕ ಅನೂಪ, ‘ನೀನು ಏನೂ ವರಿ ಮಾಡ್ಕೋಬೇಡಮ್ಮಾ, ನಾನು ಪಿಯೂಸಿಲೂ ಒಳ್ಳೇ ಮಾರ್ಕ್ಸ್ ತೆಗೀತೀನಿ ಬಿಡು’ ಅನ್ನುತ್ತ ಮೆಟ್ಟಲಿಳಿದು ಹೋದ.
‘ಅದೇನು ಮಾಡ್ತಾನೋ.. ನೋಡಿ, ಹುಡ್ಗೀರಂದ್ರೆ ತಲೆಬಿಸಿ ಅಂತಾರಾಲ್ಲಾ, ನಮ್ಮನೇಲಿ ಇದು ಉಲ್ಟಾ ಆಗ್ಬಿಟ್ಟಿದೆ. ಅವ್ಳನ್ನು ನೋಡಿದ್ರೆ ಹುಡುಗರ ಥರಾ ಬಿಂದಾಸ್ ಆಗಿರ್‍ತಾಳೆ. ಇವ್ನೋ, ಹುಡ್ಗೀರ ಥರಾ ಒಳ್ಳೇ ಡ್ರೆಸ್ಸು, ಮೇಕಪ್ಪು, ಕನ್ನಡಿ ಅಂತಿರ್‍ತಾನೆ.. ಏನು ಮಾಡೋದು’ ಅನ್ನುತ್ತ ಇನ್ನಷ್ಟು ಬೇಸರ ಹೇಳಿಕೊಳ್ಳತೊಡಗಿದಳು. ‘ಅದಕ್ಯಾಕೆ ಚಿಂತೆ ಮಾಡ್ಕೋತೀರೀ, ಈ ವಯಸ್ಸಿನಲ್ಲಿ ಹುಡುಗ್ರಿಗೆ ಹುಡುಗೀರ್‍ಗೆ ಎಲ್ಲರ್‍ಗೂ ಹೀಗೆ ರೂಪದ ಮೇಲೆ ಕಾಳಜಿ ಬರೋದು ಸಾಮಾನ್ಯ. ಎಲ್ಲಾ ಹುಡುಗರೂ ಇದನ್ನು ಎಕ್ಸ್‌ಪ್ರೆಸ್ ಮಾಡೋಲ್ಲ. ನನ್ ಮಗನೂ ಕಾಲೇಜ್ಗೆ ಹೋಗೋವಾಗ ಹೀಗೇ ಸೊಗಸುಗಾರ ಪುಟ್ಟಸ್ವಾಮಿ ಥರ ಇದ್ದ. ಆದ್ರೆ ಓದೋದ್ರಲ್ಲಿ ಏನೂ ಹಿಂದೆ ಬಿದ್ದಿಲ್ಲ ಅವ್ನು. ಅದ್ಕೆಲ್ಲಾ ಅವನ್ನ ಬೈಬೇಡಿ. ಹೀಗಿದ್ರೆ ಇರ್‍ಲಿ ಬಿಡಿ, ಮುಂದೆ ಅವ್ನ ಡ್ರೆಸ್ ಬಗ್ಗೆ ಎಲ್ಲಾ ನೀವ್ಯಾರೂ ಕಾಳಜಿ ವಹಿಸೋದೇ ಬೇಕಿಲ್ಲ ನೋಡು. ಕೆದರಿದ ಕೂದಲು, ಅಸ್ತವ್ಯಸ್ತ ಬಟ್ಟೆ ಇರೋದಕ್ಕಿಂತ ಇದೇ ಬೆಟರ್ ಅಲ್ವಾ?’ ಅಂದೆ.
ಶಶಿ ಅರೆಮನಸ್ಸಿನಿಂದ ‘ಹೂಂ’ ಅನ್ನುವಷ್ಟರಲ್ಲಿ ಹೊರಗಿನಿಂದ ಅನೂಪನ ಅಕ್ಕ ಅಂಜನಾ ಬಂದಳು. ‘ಎಲ್ಲಮ್ಮಾ, ಅನೂಪ್ ಹೋದ್ನಾ? ಅವ್ನಿಗೆ ಪಿಂಪಲ್ ಕ್ರೀಮ್ ತಂದಿದ್ದೀನಿ..’ ಅನ್ನುತ್ತ ಅನೂಪನ ಕೋಣೆಗೆ ಹೋದಳು. ನನಗೂ ಶಶಿಗೂ ನಗದೇ ಇರಲಿಕ್ಕಾಗಲಿಲ್ಲ…

ಪೆಹಲಾ ಪ್ಯಾರ್

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಮೊದಲ ಪ್ರೇಮದ ಶಕ್ತಿ ಅದು. ಯೇ ಕ್ಯಾ ಹುವಾ ಅನ್ನುವಷ್ಟರಲ್ಲಿಯೇ ಪ್ರೇಮ ಹುಟ್ಟಿಬಿಟ್ಟಿರುತ್ತದೆ. ಇದೇನಾಗುತ್ತಿದೆ ಅಂತ ಅರ್ಥಮಾಡಿಕೊಳ್ಳುವಷ್ಟರಲ್ಲಿ ಜಗವನ್ನೇ ಮರೆವಂತೆ ಮೈಮನವನ್ನೆಲ್ಲ ಆವರಿಸಿಯೂಬಿಡುತ್ತದೆ. ಎಲ್ಲೋ ಮುರಿದು ಹೋಯಿತಾ, ಪ್ರೇಮಿಸಿದ ಆ ನೆನಪು ಮಾತ್ರ ಮಾಸುವುದಿಲ್ಲ ಬಿಡಿ. ಪ್ರೇಮಕ್ಕೆ ಸಾವಿಲ್ಲ. ಮೊದಲ ಪ್ರೇಮಕ್ಕಂತೂ ಮುಪ್ಪೇ ಇಲ್ಲ.

ಒಬ್ಬರೇ ಕುಳಿತು ನೆನಪಿಸಿಕೊಂಡರೆ ಎದೆಯ ತುಂಬ ಸುಖದ ತಂಪು. ಬೊಗಸೆಗೆ ದಕ್ಕದೇ ಜಾರಿಹೋಯಿತಲ್ಲಾ ಎಂಬ ಹಳಹಳಿಕೆ ಶುರುವಾದರೆ ನಡುಗಿಸುವ ಚಳಿಗಾಲದಲ್ಲೂ ಎದೆಯಲ್ಲಿ ಧಗ್ಗನೆದ್ದು ಉರಿಯುವ ಅಗ್ನಿಜ್ವಾಲೆ. ಮೊದಲ ಪ್ರೇಮದ ನೆನಪೇ ಅಂಥದು. ಸ್ವಲ್ಪ ಸಿಹಿ, ಸ್ವಲ್ಪ ಕಹಿ.
ಅದು ಹದಿಹರೆಯದಲ್ಲೇ ಆದದ್ದಿರಬಹುದು, ಇಪ್ಪತ್ತರ ನಂತರವೇ ಹುಟ್ಟಿಕೊಂಡದ್ದಿರಬಹುದು… ಪ್ರೇಮದ ಮೊದಲ ಅನುಭವ ಮನದಲ್ಲಿ ಹುಟ್ಟಿಸುವ ಪುಳಕಕ್ಕೆ ಸಾಟಿಯೇ ಬೇರಿಲ್ಲ. ಪ್ರೇಮಿಸಿ ವಿವಾಹವಾದವರಿಗೂ ಪ್ರೀತಿಸಿದ ಆ ಘಳಿಗೆಯ ರೋಮಾಂಚನ ಮುಂದೆಂದೂ ಸಿಕ್ಕದೇನೋ..  ಸಿಗದ ಪ್ರೇಮವನ್ನು  ಸ್ಮರಿಸಿಕೊಳ್ಳುವವರಿಗಂತೂ ನಡುಗುವ ಮುಪ್ಪಡರಿದರೂ ಆ ಪ್ರೇಮದ ನೆನಪೇ ಒಂದು ಮಧುರ ಯಾತನೆ. ಭಾವುಕ ಮನಸ್ಸಿನ ಬಹುತೇಕರೆಲ್ಲರೂ ಒಂದಲ್ಲ ಒಂದು ಬಾರಿ ಪ್ರೇಮಕ್ಕೆ ಪಕ್ಕಾದವರೇ. ಇಂಥವರೆಲ್ಲವರಿಗೂ ಮೊದಲ ಪ್ರೇಮದ ಸವಿ ಜೀವಮಾನ ಪೂರ್ತಿ ಜೊತೆಗಿರುತ್ತದೆ.
ಪೆಹಲಾ ನಶಾ
ಪ್ರೇಮವೆಂದರೆ ಒಂದು ಚಡಪಡಿಕೆ. ಇನ್ನೊಂದು ಜೀವದ ಬಗ್ಗೆ ಇನ್ನಿಲ್ಲದ ತುಡಿತ. ಜೀವಕ್ಕೆ ಜೀವವನ್ನೇ ಕೊಟ್ಟೇನು ಎಂಬ ಉತ್ಕಟತೆ. ಪ್ರೇಮದ ಎಲ್ಲಾ ಅನುಭವಗಳಲ್ಲೂ ಇದೇ ಬಗೆಯ ಭಾವನೆ ಮೂಡಬಹುದಾದರೂ ಮೊದಲ ಪ್ರೇಮದ ಅನುಭವದಲ್ಲಿ ಇರುವ ತೀವ್ರತೆ ಆ ನಂತರದಲ್ಲೆಲ್ಲೂ ಇರಲಾರದು. ‘ಪೆಹಲಾ ಪ್ಯಾರ್ ಪೆಹಲಾ ನಶಾ’ ಅನ್ನುವುದು ಅದಕ್ಕೇ. ಜಗತ್ತಿನ ಮಹಾಪ್ರೇಮಿ ಶ್ರೀಕೃಷ್ಣನೂ ಈ ಮೊದಲ ಪ್ರೇಮದ ಮಾಯೆಗೆ ಸಿಕ್ಕವನೇ. ಕೃಷ್ಣ-ರಾಧೆಯರ ಸಲ್ಲಾಪದ ಬಗೆಗೆ ಬಂದಿರುವಷ್ಟು ವರ್ಣನೆಗಳು ಅವನ ಇನ್ನಾರ ಜೊತೆಗಿನ ಪ್ರೇಮದ ಬಗೆಗೂ ಬಂದಿಲ್ಲ. ಮುಂದೆ ಆತ ಅದೆಷ್ಟೋ ಹೆಣ್ಮಕ್ಕಳನ್ನು ಬಯಸಿ ವಿವಾಹವಾಗಿರಬಹುದು, ದಾಂಪತ್ಯವನ್ನೂ ನಡೆಸಿರಬಹುದು. ಆದರೆ ಪ್ರೇಮಿಯಾಗಿ ಕೃಷ್ಣನ ಜೊತೆಗೆ ನಂಟು ಉಳಿಸಿಕೊಂಡಿರುವ ಹೆಸರೆಂದರೆ ರಾಧೆಯದೇ.
ಮೊದಲ ಪ್ರೀತಿ ವರ್ಷಗಳ ಕಾಲ ಬಾಳಿರಬಹುದು ಅಥವಾ ಕೆಲವು ದಿನಗಳ ಕಾಲವಷ್ಟೇ ಇದ್ದಿರಬಹುದು, ಅದು ಮನಸ್ಸಿನ ಮೇಲೆ ಮೂಡಿಸುವ ಬೀರುವ ಛಾಯೆಗೆ ಮಾತ್ರ ಹೋಲಿಕೆಯೇ ಇಲ್ಲ. ಮುಂದೆಂದಾದರೂ ಮನಸ್ಸು ಇನ್ನಾರನ್ನೋ ಪ್ರೀತಿಸಿದರೂ ಮೊದಲ ಪ್ರೇಮದ ಸಹಜ ಭಾವ ಅಲ್ಲಿ ಇರಲಾರದೇನೋ.. ಅದಕ್ಕೇ, ಒಮ್ಮೆ ಯಾರನ್ನಾದರೂ ಪ್ರೀತಿಸಿದ ಬಳಿಕ, ಇನ್ನೊಬ್ಬರನ್ನು ಪ್ರೀತಿಸುತ್ತೇನೆ ಅನ್ನುವುದೇ ಸುಳ್ಳು ಅನ್ನುವವರುಂಟು. ಒಮ್ಮೆ ಪ್ರೀತಿಸಿದವರು ಇನ್ನೊಬ್ಬರಿಂದ ಪ್ರೀತಿಸಲ್ಪಡುತ್ತಾರಷ್ಟೇ ಹೊರತು, ಮತ್ತೆ ತಾವಾಗಿ ಮತ್ತೊಬ್ಬರನ್ನು ಪ್ರೀತಿಸಲು ಹೋಗುವುದು ಕಡಿಮೆಯೇ.
ಮೊದಲ ಪ್ರೀತಿಯೇ ಹಾಗೆ, ಹೂವಿನ ಕೇಸರದಷ್ಟು ಮೃದು. ಮುಟ್ಟಿದರೆ ಮುರಿದು ಹೋಗುವ ಕೋಮಲತೆ. ಜಗವೆಲ್ಲ ಅಲ್ಲೋಲ ಕಲ್ಲೋಲವೇ ಆಗಲಿ, ತಾನು ಮಾತ್ರ ಪ್ರೀತಿಸಿದವರನ್ನೇ ಜಪಿಸುವ ಹುಚ್ಚುತನ. ಎಂತಹುದೇ ತಡೆ ಬಂದರೂ ಪ್ರೇಮಿಯನ್ನು ತಲುಪಿಯೇ ಬಿಡುತ್ತೇನೆನ್ನುವ ಫೋರ್ಸ್. ನಂತರದ ಯಾವುದೇ ಅನುಭವದಲ್ಲೂ ಈ ಬಗೆಯ ತೀವ್ರತೆ ಇರುವುದೇ ಇಲ್ಲ.
ಕಣ್ಣುಗಳ ತುಂಬೆಲ್ಲ ಹೊರಚೆಲ್ಲುವ ಭಾವ. ಮೈಮನದಲ್ಲೆಲ್ಲ ಪ್ರೇಮಿಗಾಗಿ ಹಂಬಲಿಕೆ. ಹಗಲೇ ಇರಲಿ, ಇರುಳೇ ಇರಲಿ ಚಿತ್ತದ ತುಂಬ ಪ್ರೇಮಿಯ ಚಿತ್ರ. ಕನಸು ಮನಸೆಲ್ಲವನ್ನೂ ಹೀಗೆ ಆವರಿಸಿಕೊಳ್ಳುವುದೇ ಮೊದಲ ಪ್ರೇಮ.
ಮೊದಲ ಅನುಭವಕೆ ನಮೋ
ಮೊದಲ ಪ್ರೇಮ ದಕ್ಕುತ್ತದೋ ಇಲ್ಲವೋ, ಆದರೆ ಈ ಇದರ ಮೂಲಕ ಹಾದುಹೋದವರೆಲ್ಲ ಅದಕ್ಕೆ ಋಣಿಗಳೇ. ಬದುಕು ತುಂಬ ಜೋಪಾನವಾಗಿಟ್ಟುಕೊಳ್ಳಬಲ್ಲ  ಅನುಭವವನ್ನು ಇದು ಕಟ್ಟಿಕೊಡುತ್ತದೆ. ಬಾಳಿನಲ್ಲಿ ಮೊದಲ ಬಾರಿಗೆ, ಪ್ರೀತಿಸುವುದೆಂದರೆ ಹೇಗೆಂದು ಹೇಳಿಕೊಡುವುದೇ ಈ ಒಲವು. ಹದಿಹರೆಯದ ಹೊತ್ತಿನಲ್ಲಂತೂ ಜೊತೆಯವರೆಲ್ಲ ಯಾರಾದರೊಬ್ಬರ ಪ್ರೇಮಸಿಂಚನಲ್ಲಿ ಮೀಯುತ್ತಿರುವಾಗ ತನ್ನೊಳಗಿನ ಕೀಳರಿಮೆಯನ್ನು, ಖಾಲಿತನವನ್ನು ತುಂಬುವುದೇ ಇದು. ಇದು ತಾನೂ ವ್ಯಕ್ತಿಯೊಬ್ಬರ ಪ್ರೇಮಕ್ಕೆ ಅರ್ಹ ಎನ್ನುವ ಆತ್ಮವಿಶ್ವಾಸವನ್ನೂ ಮೊಗೆ ಮೊಗೆದು ಕೊಡುತ್ತದೆ. ಹೀಗೆ ಸಿಕ್ಕ ಜೊತೆಗಾರರು ಆ ಕ್ಷಣದಲ್ಲಿ ಭಾವಗಳ ಮಾಗುವಿಕೆಗೆ ತಮ್ಮಿಂದಾದ ಕೊಡುಗೆಯನ್ನೂ ಕೊಡುತ್ತಾರೆ.
ಕೆಲವೊಮ್ಮೆ ಎಂಥವರನ್ನು ಪ್ರೀತಿಸಬಾರದು ಎಂಬ ಪಾಠವೂ ಇಲ್ಲಿಯೇ ಸಿಕ್ಕಿಬಿಡುವುದುಂಟು. ಎಂತಹುದೇ ಕಹಿ ಅನುಭವವಾಗಿರಲಿ, ಮೊದಲ ಪ್ರೇಮವನ್ನು ನೆನಪಿಸಿಕೊಂಡರೆ ಯಾಕೋ ‘ಆಹಾ..’ ಅನಿಸುತ್ತದೆ. ‘ಬದುಕಿನಲ್ಲಿ ಮೊದಲ ಪ್ರೇಮದ ಪಾತ್ರವೇ ಒಂದು ಪಾಠದಂತೆ ಅಷ್ಟೆ. ಆದರೆ ಮುಂದಿನ ಜೀವನದ ಎಲ್ಲಾ ಪ್ರೇಮ ಸಂಬಂಧಗಳಿಗೂ ಇದುವೇ ಅಡಿಗಲ್ಲು’ ಎನ್ನುವವರೂ ಉಂಟು. ಕಳೆದುಕೊಂಡ ಮೊದಲ ಪ್ರೇಮಿಯಲ್ಲಿದ್ದ ಗುಣಗಳನ್ನೇ ಸಿಕ್ಕಸಿಕ್ಕವರಲ್ಲೆಲ್ಲ ಹುಡುಕುತ್ತಾ ಹೋಗುವ ಭಗ್ನ ಪ್ರೇಮಿಗಳೂ ನಮ್ಮ ನಡುವೆ ಇದ್ದಾರೆ. ಪ್ರೇಮಿಯಿಂದ ತಿರಸ್ಕೃತಗೊಂಡ ಸಿಟ್ಟಿನಲ್ಲಿ ಆ ವ್ಯಕ್ತಿಗೆ ವಿರುದ್ಧ ಗುಣ ಇರುವವರನ್ನು ಹುಡುಕಿ ಮತ್ತೆ ಪ್ರೇಮಿಸುತ್ತಿದ್ದೇನೆಂಬ ಭ್ರಮೆಗೆ ಬೀಳುವ ನಿದರ್ಶನಗಳೂ ಇವೆ.
ಹಳತಾದಷ್ಟೂ ತಾಜಾ!
ಪ್ರೇಮಿಸಿದ ಆ ಘಟನೆ ನಡೆದು ಅದೆಷ್ಟು ಕಾಲವೇ ಸಂದಿರಬಹುದು. ಆದರೆ, ದಶಕಗಳೇ ಉರುಳಿದರೂ ಮೊದಲು ಪ್ರೇಮಿಸಿದ ಆ ದಿನಗಳು, ಆ ವ್ಯಕ್ತಿ ಎಲ್ಲವೂ ಮನದ ಮರೆಯಲ್ಲಿ ಸದಾ ಹಸಿರು. ಈಗ ಆ ವ್ಯಕ್ತಿ  ಎಲ್ಲಿದ್ದಾನೋ/ಳೋ, ಹೇಗಿದ್ದಾನೋ/ಳೋ ಎಂದು ತಿಳಿದುಕೊಳ್ಳುವ ಕುತೂಹಲವೂ ಒಂದೆಡೆ. ಎಲ್ಲಿಂದಲೋ ಅವರ ಬಗೆಗೊಂದು ಸುದ್ದಿ ಬಂದಾಗ ಹೊರಗೆ ತೋರಿಕೆಯ ನಿರ್ಲಿಪ್ತತೆ ಇದ್ದರೂ ಒಳಮನಸ್ಸು ಒಳಗೊಳಗೇ ಒಮ್ಮೆ ಹಿಂದಕ್ಕೆ ಹೋಗಿಬರುತ್ತದೆ. ಕ್ಷಣಕಾಲವಾದರೂ ಚಡಪಡಿಸುತ್ತದೆ.
ಬದುಕಿನಲ್ಲಿ ಕಂಡುಬರುವ ಇನ್ನೆಲ್ಲಾ ಪ್ರೇಮ ಪ್ರಕರಣಗಳಿಗೂ ಇದುವೇ ಮಾಪಕ. ತನ್ನ ಮುಂದೊಂದು ಪ್ರೇಮ ಪ್ರಸ್ತಾಪ ಬಂದಾಕ್ಷಣ ಅವಳು ಅವನನ್ನು ಅಳೆಯುವುದು ಮೊದಲ ಪ್ರೇಮಿಯ ನೆನಪಿನಲ್ಲೇ. ಅವನಿಗೂ, ಹೊಸ ಗೆಳತಿಯನ್ನು ಅರ್ಥ ಮಾಡಿಕೊಳ್ಳಲು ಆ ಮೊದಲ ಗೆಳತಿಯ ತುಲನೆಯೇ ಬೇಕು. ಹೀಗೆ ಹೋಲಿಸಿಕೊಳ್ಳುತ್ತಲೇ ಇಂದಿನ ಬದುಕನ್ನು ಹಾಳುಮಾಡಿಕೊಳ್ಳುವವರೂ ಉಂಟು. ಬ್ರಿಟನ್‌ನ ಎಸೆಕ್ಸ್ ವಿವಿಯ ಸೋಶಿಯಲ್ ಮತ್ತು ಇಕನಾಮಿಕ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಡಾ|ಮಾಲ್ಕಂ ಬ್ರೈನಿನ್ ಸಂಪಾದಿಸಿರುವ ಸಂಶೋಧನಾ ಗ್ರಂಥದಲ್ಲಿ ಹೇಳಿರುವುದೂ ಇದನ್ನೇ, ‘ಎರಡನೆಯ ಪ್ರೇಮಸಂಬಂಧವನ್ನು ಚೆನ್ನಾಗಿ ನಿಭಾಯಿಸಬೇಕೆಂದರೆ ನೀವು ಮೊದಲನೆಯದನ್ನು ಮರೆತುಬಿಡುವುದು ಒಳ್ಳೆಯದು’.
ಎಲ್ಲಾ ಬಾರಿಯೂ ಮೊದಲ ಪ್ರೇಮವೆಂದರೆ ಕೈಗೆ ಸಿಗದೇ ಜಾರುವ ಭಗ್ನ ಪ್ರೇಮವೇನೂ ಅಲ್ಲ. ಮೊದಲ ಬಾರಿ ಒಲವಿನ ನಂಟಿಗೆ ಅಂಟಿಕೊಂಡವರೇ ಜೀವನ ಪೂರ್ತಿ ಜೊತೆಯಾಗಿ ಇರುವ ಅದೃಷ್ಟವಂತರಾಗಿರುವುದೂ ಉಂಟು. ಆದರೂ ಪ್ರೇಮಕ್ಕೆ ಸಿಲುಕಿದ ಆ ದಿನಗಳೇ ಅವರ ಮುಂದಿನ ಬಾಳಿಗೂ ಸದಾ ಪ್ರೇರಕ. ಮೊದಲ ಪ್ರೀತಿ ಬದುಕಿನ ಬೊಗಸೆಗೆ ದಕ್ಕಲಿ, ದಕ್ಕದಿರಲಿ, ಮೊದಲ ಪ್ರೇಮಿ ಅನಿವಾರ್‍ಯವಾಗಿ ದೂರವಾಗಿರಲಿ ಅಥವಾ ಕೈಕೊಟ್ಟೇ ಹೋಗಿರಲಿ, ಆದರೆ ಪ್ರೇಮದ ಆ ಭಾವ ಮಾತ್ರ ಸದಾ ಶಾಶ್ವತ, ನಿಷ್ಕಳಂಕ.
———————-

ಅದು ಎಂದಿಗೂ ಅಂತ್ಯಗೊಳ್ಳುವುದೇ ಇಲ್ಲ ಎಂಬ ಭ್ರಮೆ ಹುಟ್ಟಿಸುವುದೇ ಮೊದಲ ಪ್ರೇಮದ ಮ್ಯಾಜಿಕ್.
-ಬೆಂಜಮಿನ್ ಡಿಸ್ರೇಲಿ
ಮೊದಲ ಪ್ರೇಮ ಅಂದರೆ ಕೊಂಚ ಮೂರ್ಖತನ ಮತ್ತು ತುಂಬಾ ಕುತೂಹಲ.
-ಜಾರ್ಜ್ ಬರ್ನಾರ್ಡ್ ಶಾ
ನಮ್ಮ ಮೊದಲ ಪ್ರೇಮವೇ ಕೊನೆಯ ಪ್ರೇಮವೆಂದೂ, ಕೊನೆಯ ಪ್ರೇಮವೇ ಮೊದಲ ಪ್ರೇಮವೆಂದೂ ನಾವು ಸದಾ ನಂಬುತ್ತೇವೆ.
-ಜಾನ್ ಜಾರ್ಜ್ ದೆಫೆನ್‌ಬೆಕರ್
ಪುರುಷ ಯಾವಾಗಳೂ ಮಹಿಳೆಯೊಬ್ಬಳ ಮೊದಲ ಪ್ರೇಮಿಯಾಗಲು ಬಯಸುತ್ತಾನೆ. ಹೆಣ್ಣು ಪುರುಷನೊಬ್ಬನ ಕೊನೆಯ ರೊಮ್ಯಾನ್ಸ್ ಆಗಲು ಇಷ್ಟಪಡುತ್ತಾಳೆ.
-ಆಸ್ಕರ್ ವೈಲ್ಡ್
ಮೊದಲ ಪ್ರೇಮ ಒಂದು ರೀತಿಯಲ್ಲ ವ್ಯಾಕ್ಸಿನೇಷನ್ ಇದ್ದಂತೆ. ಅದು ಇನ್ನೊಂದು ಬಾರಿ ಅಂತಹ ಕಂಪ್ಲೇಂಟ್‌ಗೊಳಗಾಗುವುದನ್ನು ತಪ್ಪಿಸುತ್ತದೆ.
-ಹಾನರ್ ಡಿ ಬಾಲ್ಸಾಕ್
———–
ಸಿನಿಮಾದಲ್ಲಿ ಮೊದಲ ಪ್ರೇಮ
ಮೊದಲ ಪ್ರೇಮ, ಅದರ ಹ್ಯಾಂಗ್ ಓವರ್‌ನಲ್ಲೇ ಇರುವ ನಾಯಕ ಅಥವಾ ನಾಯಕಿ – ಇಂಥ ಕಥಾವಸ್ತುವನ್ನಿಟ್ಟುಕೊಂಡು ಹಲವು ಭಾಷೆಗಳಲ್ಲಿ ಅದೆಷ್ಟೋ ಚಿತ್ರಗಳು ಬಂದಿವೆ. ಪ್ರೇಮಿಯ ನೆನಪಿನಲ್ಲೇ ಕೊರಗುವ ‘ದೇವದಾಸ್’ ಇಂತಹ ಭಗ್ನಪ್ರೇಮಿಗಳಿಗೆಲ್ಲಾ ಅನ್ವರ್ಥಕವಾಗುವಷ್ಟರಮಟ್ಟಿಗೆ ಖ್ಯಾತ. ‘ಬಂಧನ’, ‘ಇಂತಿ ನಿನ್ನ ಪ್ರೀತಿಯ’ ಚಿತ್ರಗಳ ನಾಯಕರೂ ಇದೇ ವರ್ಗಕ್ಕೆ ಸೇರಿದವರು. ನಾಯಕಿ ತನ್ನ ವಿವಾಹದ ಬಳಿಕವೂ ಮೊದಲ ಪ್ರೇಮಿಯನ್ನು ನೆನಪಿಸಿಕೊಂಡು, ಆತನನ್ನೇ ಸೇರಲೆಂದು ಪ್ರಯತ್ನಿಸಿ ಮತ್ತೆ ತನ್ನ ವಿವಾಹದ ಚೌಕಟ್ಟಿನೊಳಗೇ ಉಳಿಯುವ ಕಥೆಯುಳ್ಳ ಬಂದಿವೆ. ಮಿಲನ, ಹಮ್ ದಿಲ್ ದೆ ಚುಕೆ ಸನಮ್, ಉಲ್ಲಾಸ ಉತ್ಸಾಹ -ಈ ಬಗೆಯವು. ತಿರಸ್ಕರಿಸಿ ಹೋದ ಮೊದಲ ಪ್ರೇಮಿಯನ್ನೇ ನೆನಪಿಸಿಕೊಂಡು ಆಕೆಯನ್ನೇ ಹೋಲುವ ಇನ್ನೊಬ್ಬಾಕೆಯನ್ನು ವಿವಾಹವಾಗುವ ಕಥೆ ಇರುವುದು ‘ಒಲವಿನ ಉಡುಗೊರೆ’ ಚಿತ್ರದಲ್ಲಿ. ಮುಂಗಾರಿನ ಮಿಂಚು, ಹಿಮಪಾತ, ಬೆಂಕಿಯ ಬಲೆ, ಅಮೃತವರ್ಷಿಣಿ, ಜಬ್ ವಿ ಮೆಟ್, ನಿನಗೋಸ್ಕರ, ಮೊಗ್ಗಿನ ಮನಸ್ಸು, ಮೈ ಅಟೋಗ್ರಾಫ್, ಸಿಲ್ಲುಂ ಒರು ಕಾದಲ್, ವಾರಣ ಐರಂ ಚಿತ್ರಗಳಲ್ಲೂ ಮೊದಲ ಪ್ರೀತಿಯ ನೆನಪನ್ನು ಹೊತ್ತ ನಾಯಕ, ನಾಯಕಿಯರಿದ್ದಾರೆ.

ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಸದಾ ನೆಂಟರಿಷ್ಟರ ಆಗಮನ, ನಿರ್ಗಮನ ನಡೆಯುತ್ತಲೇ ಇರುತ್ತದೆ. ಕಳೆದ ವಾರ ಬಂದದ್ದು ನನ್ನ ತಮ್ಮನ ಹೆಂಡತಿ ಮತ್ತವರ ಮಗಳು ಸ್ಮಿತಾ.
ಮೊನ್ನೆಯಷ್ಟೇ ಪಿಯುಸಿ ಪರೀಕ್ಷೆ ಬರೆದಿರುವ ಸ್ಮಿತಾಳನ್ನು ನೋಡಿ ಆಗಲೇ ಮೂರು ವರ್ಷ ಕಳೆದಿತ್ತು. ಈ ಅವಯಲ್ಲಿ ಅವಳು ಎಷ್ಟೊಂದು ಬದಲಾಗಿದ್ದಳೆಂದರೆ ನಮ್ಮ ಮನೆಯಂಗಳಕ್ಕೆ ಕಾಲಿಡುತ್ತಿದ್ದಂತೆ ಮೊದಲಿಗೆ ‘ಯಾರಪ್ಪಾ ಈ ಚೆಲುವೆ’ ಅನ್ನಿಸಿ ನಿಧಾನವಾಗಿ ಗುರುತು ಹಿಡಿದ. ಉದ್ದಾನುದ್ದಕೆ ಬೆಳೆದ ಹುಡುಗಿ ಚೆನ್ನಾಗಿ ಮೈಕೈ ಬೇರೆ ತುಂಬಿಕೊಂಡು ಲಕ್ಷಣವಾಗಿರುವುದು ಕಂಡು ಮನಸ್ಸಿನಲ್ಲೇ ದೃಷ್ಟಿ ತೆಗೆದೆ.
ಬಂದು ಅರ್ಧ ಗಂಟೆಯಲ್ಲಿಯೇ ನನ್ನ-ಅತ್ತಿಗೆಯ ಪಟ್ಟಾಂಗ ಶುರುವಾಯಿತು. ನಮ್ಮಿಬ್ಬರ ಮಾತೇ ಹಾಗೆ, ಒಮ್ಮೆ ಶುರುವಾದರೆ ಸುಲಭಕ್ಕಂತೂ ಮುಗಿಯುವುದಿಲ್ಲ. ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಾ ಸುಮ್ಮನೆ ಕುಳಿತಿದ್ದಳು ಸ್ಮಿತಾ. ಈ ಹುಡುಗಿಗೆ ಮಾತ್ರ ಯಾಕೋ  ಸಂಗಾತಿಗಳಿಲ್ಲದೇ ಬೋರ್ ಅನಿಸ್ತಿದೆ ಅನ್ನಿಸಿತು. ಅವಳಮ್ಮ ಸ್ನಾನಕ್ಕೆ ನಡೆದಾಗ ಮಾತಿಗೆಳೆದೆ. ಪಿಯುಸಿ ಆದ್ಮೇಲೆ ಏನ್ಮಾಡ್ತೀಯ ಅಂತ ಕೇಳಿದೆ. ಬಿಎ ಓದ್ತೀನಿ ಅಂದಳು. ಡಿಗ್ರಿ ಮಾಡಿ ಯಾವ ಕೆಲ್ಸಕ್ಕೆ ಸೇರ್‍ತೀಯ ಅಂತ ಮತ್ತೆ ಕೇಳಿದೆ. ‘ಏನೂ ಇಲ್ಲ, ಮನೆಯಲ್ಲಿ ಇರೋದು, ನಮ್ಮಪ್ಪನ ಜೊತೆ ತೋಟದಲ್ಲಿ ಕೆಲ್ಸ ಮಾಡೋದು’ ಅಂದಳು. ಈ ಮಾತು ಕೇಳಿ ಯಾಕೋ ಒಮ್ಮೆಲೆ ಮಾತೇ ಹೊರಬರದಂತಾಯಿತು ನನಗೆ. ಆದರೂ ಸುಧಾರಿಸಿಕೊಂಡು, ‘ಯಾಕಮ್ಮಾ, ಎಲ್ಲಾ ಹುಡ್ಗೀರೂ ಕೆಲ್ಸ ಕೆಲ್ಸ ಅನ್ನೋವಾಗ ನೀನು ಮಾತ್ರ ಯಾಕೆ ಹೀಗಂತಿದ್ದೀ? ಯಾಕೆ, ಜಾಬ್ ಮಾಡೋಕೆ ಇಷ್ಟ ಇಲ್ವಾ?’ ಅಂದೆ.
‘ಇಲ್ಲಪ್ಪ, ನಾ ಜಾಬ್‌ಗೆ ಹೋಗೋಲ್ಲ. ನಂಗೆ ಸಿಟಿ ಲೈಫ್ ಇಷ್ಟ ಇಲ್ಲ. ಇಲ್ಲೆಲ್ಲಾ ಬಂದು ಕೆಲ್ಸ ಮಾಡೋದು, ಒದ್ದಾಡೋದು ಎಲ್ಲ ಬೇಡಾಂತ..’ ಅವಳ ಮಾತು ಕೇಳಿ, ಬೇರೇನೂ ಹೇಳುವುದಕ್ಕೆ ತೋಚದೆ ‘ಓ, ಹಾಗಾ’ ಅನ್ನುತ್ತ ಸುಮ್ಮನಾದೆ. ಜೀವನ ಪೂರ್ತಿ ಕೆಲಸ, ಕೆರಿಯರ್ ಅಂತೆಲ್ಲ ದುಡಿದು ರಿಟೈರ್ ಆದ ನನಗೆ ಈ ಕೂಸು ಹೇಳುವ ಮಾತನ್ನು ಅರಗಿಸಿಕೊಳ್ಳುವುದೇ ಕಷ್ಟವಾಯಿತು. ಹೀಗಾಗಿ ಮುಂದೆ ಮಾತು ಬೆಳೆಸಲಿಲ್ಲ.
ಮರುದಿನ ಪುರುಸೊತ್ತಿನಲ್ಲಿ ಅತ್ತಿಗೆಯ ಜೊತೆ ಮಾತಾಡುವಾಗ ವಿಷಯ ಪ್ರಸ್ತಾಪಿಸಿದೆ. ‘ಏನೇ, ನಿನ್ಮಗಳು ಹೀಗೆ ಹೇಳ್ತಿದ್ದಾಳಲ್ಲಾ? ಎಲ್ಲಾ ಹುಡ್ಗೀರೂ ಸಿಟಿ ಲೈಫು, ಜಾಬ್ ಅನ್ನೋವಾಗ ಇವಳ್ಯಾಕೇ ಹೀಗಿದ್ದಾಳೆ?’
‘ಅದೇನೋ, ಕಳೆದ ಎರಡು ವರ್ಷದಿಂದ ಹೀಗೇ ಹೇಳ್ತಿದ್ದಾಳಪ್ಪ ಅವ್ಳು. ಎಲ್ಲಿ, ಯಾರು ಇದನ್ನೆಲ್ಲಾ ತಲೆ ತುಂಬಿದ್ರೋ ಗೊತ್ತಿಲ್ಲ..’
‘ಓದೋದ್ರಲ್ಲಿ ಹೇಗಿದ್ದಾಳೆ?’
‘ಚೆನ್ನಾಗೇ ಮಾಡ್ತಾಳೆ ಅತ್ತಿಗೆ, ಫಸ್ಟ್ ರ್‍ಯಾಂಕ್ ಅಲ್ಲದಿದ್ರೂ ಎಪ್ಪತ್ತು ಪರ್ಸೆಂಟ್ ಮೇಲೇಯೇ ಇರುತ್ತೆ ಅವಳ ಮಾರ್ಕ್ಸ್ ಎಲ್ಲ. ದಡ್ಡಿ ಏನಲ್ಲ. ಶಾರ್ಪ್ ಇದ್ದಾಳೆ. ಅದ್ಕೇ, ಡಿಗ್ರಿ ಒಂದು ಮುಗೀಲಿ ಅಂತ ಕಾಯ್ತಾ ಇದ್ದೀವಿ, ಆಮೇಲೆ ಯಾರಾದ್ರೂ ಒಳ್ಳೆ ಕೆಲಸದಲ್ಲಿರೋನಿಗೆ ಮದುವೆ ಮಾಡಿ ಕೊಡೋದು ಅಂತಿದ್ದೀವಿ’
‘ಅಲ್ವೇ, ಸಿಟಿ ಲೈಫು ಇಷ್ಟ ಇಲ್ಲ ಅಂತಿದ್ಲು ಅವ್ಳು. ಯಾರೋ ಬೆಂಗಳೂರಲ್ಲಿರೋ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮದ್ವೆ ಮಾಡೋಕೆ ಹೋದ್ರೆ ಒಪ್ಕೋತಾಳಾ ಅವ್ಳು?’
‘ಅದೇ ನನಗೂ ಸಮಸ್ಯೆ ಬಂದಿರೋದು. ನನ್ನಂಥ ಹಣ್ಮಕ್ಕಳೆಲ್ಲಾ ಹಳ್ಳಿ ಜೀವನ, ಹಸುಕರು, ತೋಟ, ಗುಡ್ಡ ಎಲ್ಲಾ ಸಾಕು ಅಂತ ಅಂದ್ಕೋತಿದ್ರೆ ಇವಳಿಗೆ ಅದೇ ಇಷ್ಟ. ರಜಾ ಸಮಯದಲ್ಲೂ ಮನೆಯಲ್ಲಿ ಒಂದಷ್ಟು ಕೆಲ್ಸ ಮಾಡಿ ಅಪ್ಪನ ಜೊತೆ ತೋಟಕ್ಕೆ ಹೋಗ್ತಾಳೆ. ಅವಳಪ್ಪ ಒಂದೊಂದ್ಸಲ ಇವಳ ಹತ್ರಾನೇ ಕೆಲ್ಸ ಹೇಳಿ ಕಳಿಸ್ತಾರೆ. ಇವ್ಳೇ ಕೆಲಸದೋರ ಹತ್ರ ನಿಂತು ಮಾಡಿಸ್ಕೊಂಡೂ ಬರ್‍ತಾಳೆ. ಅವಳ ಅಣ್ಣನಿಗಿಂತ ಇವ್ಳಿಗೇ ಕೃಷಿಯಲ್ಲಿ ಆಸಕ್ತಿ ಜಾಸ್ತಿ’
‘ಓ, ಹಾಗಿದ್ರೆ ಯಾಕೆ ತಲೆಬಿಸಿ ಮಾಡ್ಕೋತೀಯೇ? ಅವ್ಳಿಗೆ ಕೃಷಿ ಮಾಡ್ಬೇಕು ಅಂತ ಆಸೆ ಇರ್‍ಬೇಕು, ಸರಿಯಾಗಿ ಕೇಳು ಅವಳನ್ನ’ ಅನ್ನುತ್ತಿರುವಾಗ ಸ್ಮಿತಾ ಅಲ್ಲೇ ಬಂದಳು.
‘ಏನೇ, ಕೃಷಿ ಮಾಡ್ತೀಯಾ?’ ಅಂದೆ.
‘ಹೂಂ ಅತ್ತೆ, ನಂಗೆ ತೋಟ, ಗಿಡದ ಜೊತೆ ಇರೋದಂದ್ರೆ ಇಷ್ಟ. ನಾನು ಅಪ್ಪನ ಜೊತೆ ಒಂದಷ್ಟು ತೋಟದ ಕೆಲ್ಸ ಕಲ್ತಿದ್ದೀನಿ’ ಅಂದ್ಲು.
‘ಮತ್ತೇನು, ನನ್ನ ತಮ್ಮಂಗೆ ಒಳ್ಳೇ ಉತ್ತರಾಕಾರಿ ಸಿಕ್ಬಿಟ್ಳಲ್ಲಾ’ ಅಂತ ನಕ್ಕೆ. ಇಂದಿನ ಹುಡುಗಿಯ ಈ ನಿರ್ಧಾರ ಕಂಡು ಒಳಗೇ ತುಂಬ ಮೆಚ್ಚಿಕೊಂಡೆ.

ಬಹುರೂಪಿ ಅಮ್ಮ

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ಈ ಅಮ್ಮ ಸಾಮಾನ್ಯಳಲ್ಲ. ಅವಳು ಅಡುಗೆ ಮಾಡಿ ಬಡಿಸುವವಳೂ ಹೌದು, ಚೆಂದಕೆ ಸಾಕುವವಳೂ ಹೌದು. ಅಷ್ಟೇ ಅಲ್ಲ, ಆಕೆ ಸೈಕಾಲಜಿಸ್ಟೂ ಹೌದು, ಟ್ರೈನರ್ರೂ ಹೌದು. ಹಾಂ, ಪೊಲೀಸ್ ಕೂಡ! ಜೊತೆಗೆ ಫ್ರೆಂಡ್, ಫಿಲಾಸಫರ್, ಗೈಡ್ ಸಹ. ಅರೆ, ಒಬ್ಬರೇ ವ್ಯಕ್ತಿ ಇದೆಲ್ಲಾ ಆಗೋದು ಹೇಗೆ ಸಾಧ್ಯ?

ಅಮ್ಮನೆಂದರೆ ಹಾಗೆಯೇ, ನಿಜ. ಹಸಿವಾಗಿ ಹೊಟ್ಟೆ ಚುರುಗುಟ್ಟುವಾಗ ನೆನಪಾಗುವವಳು ಅಮ್ಮ. ಆಡುವಾಗ ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡಾಗಲೂ ಮೂಡುವ ಉದ್ಗಾರ ‘ಅಮ್ಮ’. ಮಳೆಗೆ ನೆನೆದು ಜ್ವರ ಬಂದರೆ ಔಷಧ ಕೊಡುವುದಕ್ಕೂ ಅಮ್ಮ. ನಿದ್ರೆ ಬರುವಂತೆ ಜೋಗುಳ ಹಾಡುವವಳು ಅಮ್ಮ. ರಾತ್ರಿ ಚಳಿಯಾದರೆ ಬೆಚ್ಚಗೆ ಹೊದಿಸುವವಳು ಅಮ್ಮ. ಭಯವಾದರೆ ಅಪ್ಪಿ ಸಂತೈಸುವವಳೂ ಅಮ್ಮನೇ. ಅಳು ಬಂದರೆ ಕಣ್ಣೀರೊರೆಸುವವಳೂ ಅವಳೇ, ಅಮ್ಮ. ಮಗುವಿನ ಎಷ್ಟೆಲ್ಲ ಕೆಲಸವನ್ನು ಮಾಡುತ್ತಾಳಲ್ಲ ಅಮ್ಮ?
ಆದರೆ ಇಂದಿನ ಅಮ್ಮಂದಿರು ಬರಿಯ ಇಷ್ಟೇ ಅಲ್ಲ. ಅವರು ಬರಿಯ ತುತ್ತು ಅನ್ನ ನೀಡುವ, ಆರೋಗ್ಯದ ಅಂಕೆ ತಪ್ಪಿದಾಗ ಆರೈಕೆ ಮಾಡುವ, ಬೇಸರಕೆ ಸಂತೈಕೆಯ ಮುಲಾಮು ಹಚ್ಚುವವಳಾಗಿ ಅಷ್ಟೇ ಉಳಿದಿಲ್ಲ. ಅಮ್ಮನ ಪಾತ್ರ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಮಕ್ಕಳ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಲ್ಲಿ ಅವಳ ಪಾತ್ರವೇ ಹಿರಿದು. ಇದಕ್ಕನುಗುಣವಾಗಿಯೇ ಮಗುವಿನ ಆ ಸಂದರ್ಭದ ಅಗತ್ಯವನ್ನರಿತು ತಕ್ಕ ಪಾತ್ರವಹಿಸುತ್ತಾಳೆ ಅವಳು.
ಅಮ್ಮನೆಂಬ ಸೈಕಾಲಜಿಸ್ಟ್
ಎಳೆಯ ಮಗುವಿನ ಹಸಿವು, ಅಳುವನ್ನೆಲ್ಲ ಅರ್ಥ ಮಾಡಿಕೊಳ್ಳುವ ಅಮ್ಮನಿಗೆ ಆ ಮಗು ಬೆಳೆಯುತ್ತ ಹೋದಂತೆಲ್ಲ ಅದರ ಭಾವನೆಗಳೂ ಅರ್ಥವಾಗುತ್ತ ಹೋಗುತ್ತವೆ. ತನ್ನ ಮುದ್ದು ಪುಟಾಣಿಗೆ ಯಾವಾಗ ಬೈಯಬೇಕು, ಯಾವಾಗ ಮುದ್ದು ಮಾಡಬೇಕು ಎಂಬುದು ಆಕೆಗೆ ಗೊತ್ತು. ಶಾಲೆಯಿಂದ ಡಲ್ ಆಗಿ ಬಂದ ಕೂಸಿಗೆ ಏನಾಯ್ತೆಂದು ತಿಳಿಯುವುದು ಅವಳಿಂದ ಮಾತ್ರ ಸಾಧ್ಯ. ಸೊಂಟವೇರಿ ಕುಳಿತಿರುತ್ತಿದ್ದ ಮಗ ತನ್ನ ಎತ್ತರವನ್ನೂ ಮೀರಿ ಬೆಳೆದು ಕಾಲೇಜಿಗೆ ಹೋಗಲಾರಂಭಿಸಿದಾಗಲೂ ಅವನೆದೆಯ ತಹತಹಗಳೆಲ್ಲ  ಅರಿವಾಗುವುದು ಅವಳಿಗೇ. ಮಗಳ ಮನಸು ‘ಕುಛ್ ಕುಛ್ ಹೋತಾ ಹೆ’ ಅಂದಾಗ ಅವಳು ಹೇಳದಿದ್ದರೂ ಈ ಅಮ್ಮನಿಗೆ ಗೊತ್ತಾಗಿಯೇ ಆಗುತ್ತದೆ. ಬೇಕಿದ್ದರೆ ಕೌನ್ಸಿಲರ್ ಆಗಿ ಆಪ್ತಸಲಹೆಯನ್ನೂ ನೀಡುತ್ತಾಳೆ ಅಮ್ಮ.
ಇಷ್ಟೆಲ್ಲ ಅರ್ಥಮಾಡಿಕೊಂಡ ಅಮ್ಮನಿಗೆ ಮಕ್ಕಳ ವ್ಯಕ್ತಿತ್ವ ತಿದ್ದುವುದೂ ಗೊತ್ತಿರುವುದಿಲ್ಲವೇ? ಖಂಡಿತ ಅದನ್ನೂ ಮಾಡುತ್ತಾಳೆ ಅವಳು. ಮಗು ಪರೀಕ್ಷೆಗೆ ಓದದಿದ್ದರೆ ಅದಕ್ಕೆ ಅದರಲ್ಲಿ ಆಸಕ್ತಿ ಹುಟ್ಟಿಸುವ ಬಗೆ, ಉಳಿದ ಮಕ್ಕಳೊಂದಿಗೆ ಬೆರೆಯುವುದನ್ನು ಕಲಿಸುವ ಬಗೆ, ಮಗುವಿನ ಪ್ರತಿಭೆಯನ್ನು ಕಂಡುಹಿಡಿಯುವ ಪರಿಣತಿ ಎಲ್ಲವೂ ಅವಳಿಗೆ ಇದೆ. ಅದಕ್ಕೆ ತಕ್ಕಂತೆ ಅವಳು ಮಗುವಿನ ನಡತೆಯನ್ನು ತಿದ್ದುತ್ತಾ ಬರುತ್ತಾಳೆ. ಮನೆಗೆ ನೆಂಟರು ಬಂದರೂ ನಾಚಿಕೊಂಡು ಒಳಗೆ ಕೂತ ಹುಡುಗನನ್ನು ಕರೆದು ‘ನೋಡು, ಇದ್ಯಾರು ಬಂದಿರೋದು, ಮಾತಾಡು ಅವ್ರ ಹತ್ರ’ ಅಂತನ್ನುವುದು ಅವಳೇ. ನಾಚಿಗೆ ಮುದ್ದೆಯ ಮುದುಡುವಿಕೆಯನ್ನು ಮೆಲ್ಲಗೇ ಅರಳಿಸುವುದೂ ಅವಳೇ. ಎಲ್ಲಕ್ಕಿಂತ ಹೆಚ್ಚಾಗಿ ಸದಾ ಲವಲವಿಕೆಯಿಂದ ಪುಟಿಯುವ ಅಮ್ಮನನ್ನು ನೋಡುತ್ತಾ ಮಕ್ಕಳೂ ತಮ್ಮ ವ್ಯಕ್ತಿತ್ವವನ್ನೂ ಹಾಗೇ ರೂಪಿಸಿಕೊಳ್ಳುವುದೂ ಹೌದು.
ಅಮ್ಮನೆಂಬ ಪೊಲೀಸ್!
ಅಮ್ಮ ಪಲೀಸ್ ಕೂಡ. ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೋ ಎಂದು ಅನುಕ್ಷಣವೂ ಅವರನ್ನು ಹಿಂಬಾಲಿಸುವುದು ಅವಳ ಕಣ್ಣೇ. ಯಾಕೋ ಮಗಳು ಮೊಬೈಲ್‌ನಲ್ಲಿ ಮಾತಾಡುವುದು ಜಾಸ್ತಿ ಆಗಿಬಿಟ್ಟಿದೆಯಲ್ಲಾ ಅನ್ನೋ ಸಂದೇಹ ಕಾಡುವುದು ಅವಳನ್ನೇ. ಮಗ ಇಂಟರ್ನೆಟ್‌ನಲ್ಲಿ  ಕೈಯಾಡಿಸಲು ಶುರು ಮಾಡಿದಾಕ್ಷಣ ಅವಳೂ ಆಗೊಮ್ಮೆ ಈಗೊಮ್ಮೆ ಆ ಕೋಣೆಯಲ್ಲಿ ಸುಳಿದಾಡುವುದುಂಟು. ಶಾಲೆ, ಕಾಲೇಜಿಗೆ ಹೋಗುವ ಹುಡುಗರ ಪ್ಯಾಂಟ್ ಜೇಬನ್ನೆಲ್ಲ ತಡವಿ ತೊಳೆಯಲು ಹಾಕುವುದು ಅಮ್ಮನೇ ಆದ್ದರಿಂದ ಎಲ್ಲೋ ಮರೆತ ಸಿಗರೇಟು ಪ್ಯಾಕೆಟ್ಟೂ ಸಿಗುವುದು ಅವಳ ಕೈಗೇ. ಮನೆ ಮಕ್ಕಳು ಕಾಲೇಜಿಗೆ ಹೋಗಿ ಬರುವ ಸಮಯವನ್ನೆಲ್ಲ ಲೆಕ್ಕ ಇಟ್ಟುಕೊಂಡು ನಿಗಾ ವಹಿಸುವ ಬುದ್ಧಿ ಅದೇಕೋ ಅವಳಲ್ಲಿ ಸದಾ ಜಾಗೃತ. ಮಕ್ಕಳು ನೋಡೋ ಸಿನಿಮಾ, ಓದೋ ಪುಸ್ತಕ, ತಿನ್ನೋ ತಿಂಡಿ-ತೀರ್ಥ ಎಲ್ಲದರ ವಿವರವೂ ಇರುವುದು ಅವಳ ಬಗಲಲ್ಲಿ. ಮಕ್ಕಳು ಹಾದಿ ತಪ್ಪಿದರೋ, ತಕ್ಷಣ ಕ್ರಮ ಕೈಗೊಳ್ಳುವ ಮಾರಲ್ ಪೊಲೀಸ್ ಅವತಾರವೆತ್ತುತ್ತಾಳವಳು.
ಅಮ್ಮನೆಂಬ ಟ್ರೈನರ್
‘ಅಮ್ಮಾ, ನಾಳೆ ಸ್ಕೂಲ್‌ನಲ್ಲಿ ಫ್ಯಾನ್ಸಿ ಡ್ರೆಸ್ ಕಾಂಪಿಟಿಶನ್ ಇದೆ’ ಅಂತ ಮಗಳು ಬಂದು ಕೂಗಿಕೊಂಡಾಗ ತಲೆಕೆಡಿಸಿಕೊಂಡು ಅವಳನ್ನು ರೆಡಿ ಮಾಡುವುದು ಅಮ್ಮ. ಈ ರಜೆಯಲ್ಲಿ ಮಗನನ್ನು ಯಾವ ಸಮ್ಮರ್ ಕ್ಯಾಂಪ್‌ಗೆ ಕಳುಹಿಸೋದು ಅನ್ನುತ್ತ ಯೋಚಿಸಿ, ನಿರ್ಧರಿಸುವುದೂ ಅಮ್ಮನೇ. ಎಲ್‌ಕೆಜಿಯಿಂದ ಹಿಡಿದು ಸಿಇಟಿ ಪರೀಕ್ಷೆ ಬರೆಯುವ ತನಕ ಮಕ್ಕಳ ಪರೀಕ್ಷೆಗಾಗಿ ತಾನೂ ನಿದ್ದೆಗೆಟ್ಟು ಅವರೊಂದಿಗೆ ಕುಳಿತು ಓದಿಸುವ ರಿಸ್ಕ್ ತೆಗೆದುಕೊಳ್ಳುವುದೂ ಅವಳೇ. ಒಂದನೇ ತರಗತಿಯಲ್ಲಿ ಓದುವ ಮಗುವಿಗೂ ಪರೀಕ್ಷೆ ಬಂದರೆ ಈ ಅಮ್ಮ ಟೆನ್ಶನ್‌ನಲ್ಲಿ ಆಫೀಸಿಗೆ ರಜಾ ಹಾಕಿ ಓದಿಸುತ್ತಾಳೆ! ಶಾಲೆಯಲ್ಲಿ ಪೇರೆಂಟ್ಸ್-ಟೀಚರ್‍ಸ್ ಮೀಟಿಂಗ್ ಇದೆಯಾ, ಅದಕ್ಕೆ ಹೋಗುವುದು ಅಮ್ಮ. ಸ್ಕೂಲ್‌ಡೇಗೂ ಅಮ್ಮನೇ ಹಾಜರ್.
ಇಷ್ಟೆಲ್ಲಾ ಮಾಡೋ ಅಮ್ಮ ಹೊರಜಗತ್ತು ಹೇಗಿದೆ ಅಂತಲೂ ಮಕ್ಕಳಿಗೆ ಕಲಿಸುತ್ತಾಳೆ. ಸಂಜೆ ಅಮ್ಮನ ಜೊತೆ ಸ್ಕೂಟಿಯಲ್ಲಿ ಬರುವ ಪುಟ್ಟ, ತರಕಾರಿ ಕೊಳ್ಳುವಾಗ ಅಮ್ಮ ಮಾಡುವ ಚೌಕಾಸಿ ಕಂಡು ವ್ಯಾವಹಾರಿಕ ಲೋಕವನ್ನೂ ತಿಳಿಯುತ್ತಾನೆ. ಅಮ್ಮನ ಶಾಪಿಂಗ್ ಸ್ಟೈಲ್ ಮಗಳಿಗೂ ಬರುತ್ತದೆ. ಎಲ್ಲೋ ಸಣ್ಣಪುಟ್ಟ ವಸ್ತುಗಳನ್ನು ಕೊಳ್ಳಲೆಂದು ಅಮ್ಮ ಕಳುಹಿಸಿದ್ದೇ ಸಾವಿರಗಟ್ಟಲೆ ವ್ಯವಹಾರ ಮಾಡುವ ಆತ್ಮವಿಶ್ವಾಸವನ್ನೂ ಕುದುರಿಸುತ್ತದೆ.
ಫ್ರೆಂಡ್, ಫಿಲಾಸಫರ್, ಗೈಡ್
ಮಗು ಒಂದೇ ಇರಲಿ ಎಂಬ ಸೂತ್ರ ಪಾಲಿಸುವ ಕುಟುಂಬಗಳಲ್ಲೆಲ್ಲ ಮಗು ಶಾಲೆಗೆ ಹೋಗುವವರೆಗೂ ಅಮ್ಮನೇ ಫ್ರೆಂಡ್. ಆಟ, ಮಾತು, ನಗು ಎಲ್ಲಕ್ಕೂ ಅಮ್ಮನೇ ಕಂಪೆನಿ. ವಿಭಕ್ತ ಕುಟುಂಬಗಳಲ್ಲೆಲ್ಲ ಅಜ್ಜ, ಅಜ್ಜಿಯಂತೆ ಕಥೆ ಹೇಳುವವಳೂ ಅಮ್ಮನೇ. ಮೊಮ್ಮಕ್ಕಳನ್ನೆಲ್ಲ ಕೂರಿಸಿ ಸಾಲಾಗಿ ಶ್ಲೋಕ, ಭಜನೆಯನ್ನೆಲ್ಲ ಹೇಳಿಕೊಡುತ್ತಿದ್ದ ತನ್ನಜ್ಜನನ್ನು ನೆನಪಿಸಿಕೊಳ್ಳುತ್ತಲೇ ತನ್ನ ಮಗುವಿಗೂ ಕೈಲಾದುದನ್ನು ಕಲಿಸುತ್ತಾಳವಳು. ಬದುಕಿನ ಪ್ರಮುಖ ಕ್ಷಣಗಳಲ್ಲಿ ಕಂಗೆಟ್ಟು ಕೂತಾಗಲೆಲ್ಲ ಧೈರ್‍ಯ ನೀಡುವವಳು ಅಮ್ಮನೇ. ಮದುವೆಯ ವಿಚಾರದಲ್ಲೂ, ಮಗಳಿಗೆ ಅಮ್ಮನ ಅನುಭವದ ಮಾತುಗಳೇ ಹುಡುಗನನ್ನಾರಿಸುವ ಮಾನದಂಡ. ಮಗನಿಗೂ ಅಮ್ಮ ಕೊನೆಯದಾಗಿ ಒಂದು ಮಾತು ಹೇಳಿದರೇ ಸಮಾಧಾನ.
ಅವನಾಗಬಹುದಾ/ಅವಳಾಗಬಹುದಾ ಅನ್ನುತ್ತ ಕೇಳುವುದಿದ್ದರೆ ಅವಳನ್ನೇ..
ಇಷ್ಟೆಲ್ಲ ಪಾತ್ರಗಳನ್ನು ವಹಿಸುವ ಅವಳಿಗೆ ಇವನ್ನೆಲ್ಲ ಹೇಳಿಕೊಟ್ಟವರು ಯಾರೂ ಇಲ್ಲ. ಕಲಿತ ವಿದ್ಯೆ, ತನ್ನಲ್ಲಿರೋ ಸೂಕ್ಷ್ಮತೆ ಅವಳನ್ನು ಹೀಗೆ ರೂಪಿಸಿದೆ ಅನ್ನಬೇಕಷ್ಟೆ. ‘ಮಕ್ಕಳ ಜವಾಬ್ದಾರಿಯೆಲ್ಲಾ ಪೂರ್ತಿ ಅವಳದು’ ಎಂಬ ಭಾವನೆಯೂ ಈ ಜವಾಬ್ದಾರಿಗಳನ್ನೆಲ್ಲ ಅವಳ ಮೇಲೆ ಹೊರಿಸಿದೆ. ಜಗತ್ತು ಸ್ಪರ್ಧಾತ್ಮಕವಾದಂತೆ ಮಗುವಿಗೆ ಬರಿಯ ಆಹಾರ, ಮಮತೆ ಕೊಟ್ಟರಷ್ಟೇ ಸಾಲದು, ಇನ್ನೂ ಏನೇನನ್ನೋ ಮಕ್ಕಳಿಗಾಗಿ ಮಾಡಬೇಕು ಎಂಬ ಅನಿವಾರ್‍ಯತೆ ಬಂದದ್ದು ಹೌದು. ಆದರೆ, ಈ ಹೆಚ್ಚುವರಿ ಜವಾಬ್ದಾರಿಗಳೆಲ್ಲಾ ಬಿದ್ದಿದ್ದು ಅಮ್ಮನ ಮೇಲೆಯೇ. ಇಂದಿನ ಅಮ್ಮಂದಿರು ಈ ಬಹುರೂಪವನ್ನು ಸಹಜವಾಗಿ ಹೊತ್ತು ನಡೆಯುತ್ತಿದ್ದಾರೆ ನಿಜ. ವಾತ್ಸಲ್ಯದ ನೆಲೆ ಅವರ ಹೊಣೆಗಾರಿಕೆಯನ್ನು ಹಗುರ ಮಾಡಿದೆಯೋ ಏನೋ. ಆದರೆ, ಇದೂ ಆಕೆಗೆ ಯಾವಾಗ ಭಾರವೆನಿಸುತ್ತದೋ ಗೊತ್ತಿಲ್ಲ.
——

ಹದು, ಅಮ್ಮಂದಿರ ಜವಾಬ್ದಾರಿ ಹಿಂದಿಗಿಂತ ಬದಲಾಗಿದೆ, ಹೆಚ್ಚಾಗಿದೆ. ಉದ್ಯೋಗ, ಸಿಂಗಲ್ ಚೈಲ್ಡ್, ವಿಭಕ್ತ ಕುಟುಂಬ ಮೊದಲಾದ ಕಾರಣಗಳಿಂದ ಮಕ್ಕಳಿಗೆ ಫ್ರೆಂಡ್, ಫಿಲಾಸಫರ್, ಗೈಡ್ ಎಲ್ಲವೂ ಅಮ್ಮನೇ ಆಗಬೇಕಾಗಿದೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮೊದಲಾದ ಎಲ್ಲರ ಸ್ಥಾನವನ್ನು ತುಂಬುವ ಜವಾಬ್ದಾರಿ ಅಮ್ಮಂದಿರ ಮೇಲೆಯೇ ಇದೆ.
-ಡಾ| ಸುಲೇಖಾ ವರದರಾಜ್, ಮಕ್ಕಳ ತಜ್ಞರು, ಪುತ್ತೂರು.

ಎಲ್‌ಕೆಜಿಯಿಂದಲೇ ಮಕ್ಕಳ ಮೇಲೆ ಒತ್ತಡ ಇರುತ್ತದೆ. ಇದು ಮಕ್ಕಳ ಮನಃಸ್ಥೈರ್‍ಯದ ಮೇಲೆ ಪ್ರಭಾವ ಬೀರಬಹುದು. ಆಗ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಬೆಳೆಸಬೇಕು. ವಿವಿಧ ಪರೀಕ್ಷೆಗಳಿಗೆ ಅವರನ್ನು ತಯಾರು ಮಾಡಬೇಕು. ಮಕ್ಕಳನ್ನು ಯಾವಾಗ ಸ್ವತಂತ್ರರಾಗಿ ಬಿಡಬೇಕು, ಯಾವಾಗ ನಮ್ಮ ಮೇಲ್ವಿಚಾರಣೆ ಇರಬೇಕು ಎಂದೆಲ್ಲಾ ನಾವೇ ನಿರ್ಧರಿಸಬೇಕು. ಮಕ್ಕಳೂ ಅಮ್ಮಂದಿರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳುವುದರಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ.
-ಶಾಂತಲಾ ಎಂ, ಎಲ್ಲೈಸಿ ಉದ್ಯೋಗಿ, ಬೆಂಗಳೂರು.

ಹ್ಯಾಪಿ ಹಾಲಿಡೇಸ್

Posted: ಸೆಪ್ಟೆಂಬರ್ 5, 2011 in ವಿಷಯ ವಿಶೇಷ

ರಜಾದಲ್ಲಿ ಮಜಾ ಮಾಡಬೇಕು ಅನ್ನೋದು ವಿದ್ಯಾರ್ಥಿಗಳಾಸೆ. ಆದ್ರೆ ಬುದ್ಧಿಯೂ ಶಾರ್ಪ್ ಆಗಬೇಕು ಅಂತಾರೆ ಲೆಕ್ಚರರ್‍ಸ್. ವ್ಯಕ್ತಿತ್ವವೂ ಬೆಳೆಯಬೇಕು ಅಂತಾರೆ ದೊಡ್ಡೋರು. ಕೈಗೆ ಸಿಕ್ಕಿರೋ ಒಂದಷ್ಟು ರಜಾ ದಿನಗಳಲ್ಲಿ ಇವನ್ನೆಲ್ಲಾ ಗಳಿಸಿಕೊಳ್ಳೋದು ಹೇಗಪ್ಪಾ?

ಪರೀಕ್ಷೆ ಬರೆಯುವುದರಲ್ಲೂ ಒಂದು ಖುಷಿ ಇದೆ. ಯಾಕೆ ಗೊತ್ತಾ? ಪರೀಕ್ಷೆಯ ಬೆನ್ನಿಗೇ ರಜೆ ಸಿಗುತ್ತದೆ. ಅದರಲ್ಲೂ ಕೊನೆಯ ಪರೀಕ್ಷೆಯ ಮುನ್ನಾದಿನದ ಪುಳಕವನ್ನಂತೂ ಕೇಳುವುದೇ ಬೇಡ. ಓದುವುದಕ್ಕೂ ಮನಸ್ಸಿಲ್ಲದ ಹಾಗೆ ರಜೆಯತ್ತಲೇ ಚಿತ್ತ. ನಾಡಿದ್ದಿನಿಂದ ರಜಾ… ಕೆಲವರಿಗೆ ತಿಂಗಳು, ಇನ್ನು ಕೆಲವರಿಗೆ ಎರಡು ತಿಂಗಳು ರಜೆಯೋ ರಜೆ. ಖಾಲಿ ಖಾಲಿ ಬಿದ್ದಿರುವ ದಿನಗಳು. ಏನು ಮಾಡೋದು ಈ ದಿನಗಳನ್ನು?
ಅಲ್ಲೆಲ್ಲೋ ಪರೀಕ್ಷೆ ಬರೆಯಲು ಕುಳಿತ ಪಠ್ಯ ಪ್ರವೀಣರಿಗೂ ಮನಸ್ಸಿನೊಳಗೇ ಏನೋ ಒಂದು ಲೆಕ್ಕಾಚಾರ ನಡೆದೇ ಇರುತ್ತದೆ, ಇನ್ನೊಂದು ವಾರಕ್ಕೆ ಎಕ್ಸಾಮ್ ಫಿನಿಷ್. ಆಮೇಲೆ ಏನು ಮಾಡೋದು? ಮಕ್ಕಳಿಗಾದರೆ ಹೋಗಲೊಂದು ಅಜ್ಜಿಮನೆ, ಬೀದಿಗೊಂದು ಸಮ್ಮರ್ ಕ್ಯಾಂಪ್. ಈ ದೊಡ್ಡವರಿಗೇನಿದೆ? ಏನೂ ಇಲ್ಲವೆಂದು ಬೇಸರಿಸಿಕೊಳ್ಳುವ ಹುಡುಗರೇನೂ ಈ ಕಾಲೇಜು ವಿದ್ಯಾರ್ಥಿಗಳಲ್ಲ. ತಮ್ಮ ರಜೆಯನ್ನು ತಾವೇ ಡಿಸೈನ್ ಮಾಡಿಕೊಳ್ಳುವ ಜಾಣರಿವರು. ಕೊಂಚ ಯೋಚಿಸಿದರೆ ರಜೆಯನ್ನು ಅರ್ಥಪೂರ್ಣವಾಗಿ, ಸಂತೋಷವಾಗಿ ಕಳೆಯುವುದಕ್ಕೂ ಹಲವು ದಾರಿಗಳಿವೆ.
ಸಾಹಸಕ್ಕೆ ಸಾವಿರ ದಾರಿ
ರಜೆ ಬಂದಾಕ್ಷಣ ಟೀಮ್ ಕಟ್ಟಿಕೊಂಡು ಹೊರಡುವವರು ಹಲವರು. ಟ್ರೆಕ್ಕಿಂಗೋ, ಊರು ನೋಡುವುದೋ ಎಂದರೆ ಇವರಿಗೆ ಬಲು ಇಷ್ಟ. ದಿನಗಟ್ಟಲೆ ಗೆಳೆಯರ ಜೊತೆ ಹೋಗುವುದು ಕಾಡು, ಮೇಡು ಅಲೆಯುವುದು. ಪ್ರಕೃತಿ ಸಾನಿಧ್ಯದ ಈ ಅನುಭವವೇ ಸುಂದರ. ‘ನಂಗೆ ಟ್ರೆಕ್ಕಿಂಗ್ ಅಂದ್ರೆ ಪ್ರಾಣ. ನಾವು ಗೆಳೆಯರದೇ ಒಂದು ತಂಡ ಇದೆ. ದಕ್ಷಿಣ ಕನ್ನಡದ ಪ್ರಮುಖ ಪ್ರದೇಶಗಳಲ್ಲೆಲ್ಲ ಚಾರಣ ಮಾಡಿದ್ದೇವೆ. ಈ ಬಾರಿ ಬೇರಾವುದಾದರೂ ಊರಿಗೆ ಹೋಗಬೇಕು ಅನ್ನೋ ಪ್ಲಾನ್ ಇದೆ’ ಅಂತಾರೆ ಮಂಗಳೂರಿನ ಪದವಿ ವಿದ್ಯಾರ್ಥಿ ಮಹೇಶ್.
ಪ್ರವಾಸೀ ತಾಣಗಳನ್ನು ನೋಡುವವರು, ಕುಟುಂಬ ಸಮೇತರಾಗಿ ಹೊಸ ಹೊಸ ಸ್ಥಳಗಳನ್ನು ಪರಿಚಯಿಸಿಕೊಳ್ಳುವವರು ಅನೇಕರು. ಬೆಳಗಾವಿಯ ಡಿಪ್ಲೊಮಾ ವಿದ್ಯಾರ್ಥಿನಿ ತೇಜಶ್ರೀ ತಮ್ಮ ಹೆತ್ತವರ ಜೊತೆ ಪ್ರವಾಸ ಹೋಗುತ್ತಾರಂತೆ. ‘ಈ ಬಾರಿಯ ರಜೆಯಲ್ಲಿ ನಾರ್ತ್ ಇಂಡಿಯಾ ಟೂರ್ ನಮ್ಮ ಪ್ಲಾನ್. ನಮ್ಮಪ್ಪ ಬ್ಯಾಂಕ್‌ನಲ್ಲಿರೋದು, ಅಮ್ಮ ಟೀಚರ್. ಹೀಗಾಗಿ ಪ್ರತಿವರ್ಷವೂ ಒಂದು ಹತ್ತು ದಿನವಾದರೂ ಫ್ರೀ ಮಾಡ್ಕೊಂಡು ಟೂರ್ ಹೋಗೋದು ತುಂಬಾ ವರ್ಷಗಳಿಂದ ರೂಢಿ’ ಅಂತಾರೆ ಅವರು. ಊರು ಸುತ್ತುವ ಈ ಅಭಿರುಚಿ ಇರುವವರಿಗೆ ಸಾಗಿದ್ದೇ ದಾರಿ, ನಡೆದಷ್ಟೂ ಅನುಭವ.
ಹವ್ಯಾಸವುಂಟು ಹಲವು ಬಗೆ
ರಜಾ ಸಮಯವೆಂದರೆ ವ್ಯಕ್ತಿತ್ವ ವಿಕಸನವೂ ಆಗಬೇಕು, ಮಜಾ ಕೂಡ ಸಿಗಬೇಕು. ಹೀಗೆ ಬಯಸುವವರಿಗೂ ಈ ರಜೆಯೇ ತೆರೆದ ದಾರಿ. ರಜೆಯ ಈ ಹೊತ್ತಿನಲ್ಲಿಯೇ ಯುವಜನರಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಬಗೆಬಗೆಯ ತರಬೇತಿ ಶಿಬಿರಗಳು ಏರ್ಪಾಡಾಗುವುದುಂಟು. ಕೊಂಚ ಎಚ್ಚರದಿಂದ ಗಮನಿಸಿದರೆ ಅವರವರ ಆಸಕ್ತಿಗೆ ಸೂಕ್ತವಾದ ಒಂದಾದರೂ ವರ್ಕ್‌ಶಾಪ್ ಸಿಕ್ಕಿಯೇ ಸಿಗುತ್ತದೆ. ಚಲನಚಿತ್ರ ರಸಗ್ರಹಣ ಶಿಬಿರ, ಕಥಾ ಕಮ್ಮಟಗಳು, ಸಾಹಿತ್ಯ ಸಂಜೆಗಳು, ಸಂಗೀತ, ಚಿತ್ರಕಲಾ ಶಿಬಿರ, ಅಭಿನಯ ಕಮ್ಮಟ.. ಇವುಗಳೆಲ್ಲ ಬರಿಯ ಯಾವುದರಲ್ಲೋ ತರಬೇತಿ ನೀಡುವ ಕಾರ್‍ಯಕ್ರಮಗಳಷ್ಟೇ ಅಲ್ಲ, ಹತ್ತಾರು ಜನರನ್ನು ಪರಿಚಯಿಸುವ ಕೇಂದ್ರಗಳು. ಇತರರನ್ನು ಪರಿಚಯಿಸಿಕೊಂಡು ಒಡನಾಡುವ, ಸಂಪರ್ಕಗಳನ್ನು ಬೆಳೆಸಿಕೊಳ್ಳುವ ಅವಕಾಶ ಸಿಗುವುದು ಇಲ್ಲಿಯೇ. ಮನೆ, ಕಾಲೇಜಿಗಷ್ಟೇ ಸೀಮಿತವಾಗಿದ್ದ ವಿದ್ಯಾರ್ಥಿಯೊಬ್ಬನ/ಳ ಪ್ರಪಂಚ ಪರೋಕ್ಷವಾಗಿ ವಿಸ್ತರಿಸಿಕೊಳ್ಳುವ ಬಗೆ ಹೀಗೆ.
ತಮ್ಮ ಪಾಡಿಗೆ ತಾವೇ ಚಿತ್ರ ರಚನೆ, ಸಾಹಿತ್ಯ ರಚನೆ, ಕರಕುಶಲ ವಸ್ತುಗಳ ರಚನೆಗಳಲ್ಲಿ ನಿರತರಾಗಿ ಬಗೆಬಗೆಯ ಹವ್ಯಾಸಗಳನ್ನು ಪೋಷಿಸಿಕೊಳ್ಳುವವರು ಇನ್ನೂ ಅದೆಷ್ಟೋ ಮಂದಿ. ‘ಈವರೆಗೆ ಫೈನಲ್ ಡಿಗ್ರಿ ಅಂತ ಏನೋ ಒಂದು ಟೆನ್ಶನ್ ಇತ್ತು. ಇದೀಗ ಪರೀಕ್ಷೆ ಮುಗಿದರೆ ನಾನು ಫ್ರೀ. ಈ ಬಾರಿ ರಜೆಯಲ್ಲಿ ತುಂಬಾ ಪುಸ್ತಕಗಳನ್ನು ಓದಬೇಕು. ಕೆಲವು ಒಳ್ಳೆಯ ಸಿನಿಮಾಗಳನ್ನೂ ನೋಡಬೇಕು’ ಎನ್ನುತ್ತಾ ಉತ್ಸಾಹದಲ್ಲಿರುವವರು ಗುಲ್ಬರ್ಗಾದ ಪದವಿ ವಿದ್ಯಾರ್ಥಿ ಮನೋಜ್. ತಂತಮ್ಮ ಹವ್ಯಾಸಗಳೊಂದಿಗೆ ಸಂತೋಷ ಪಡುವವರ ಹಾಗೆಯೇ ಸಾಮಾಜಿಕ ಕಾರ್‍ಯಗಳಿಗೂ ಧುಮುಕುವ ಸಹೃದಯ ವಿದ್ಯಾರ್ಥಿಗಳೂ ಇದ್ದಾರೆ. ‘ನನಗೆ ಸೋಶಿಯಲ್ ವರ್ಕ್‌ನಲ್ಲಿ ಆಸಕ್ತಿ ಇದೆ. ಅದಕ್ಕೇ ಎನ್‌ಜಿಒ ಒಂದರ ಜೊತೆ ಸೇರಿಕೊಂಡು ಸಮಾಜ ಸೇವೆ ಮಾಡಬೇಕೆಂದು ಇದ್ದೇನೆ’ ಅಂತಾರೆ ಬೆಂಗಳೂರಿನ ಬಿಎಸ್‌ಡಬ್ಲ್ಯು ವಿದ್ಯಾರ್ಥಿನಿ ಛಾಯಾ.
ಗಳಿಸಬೇಕು, ಉಳಿಸಬೇಕು
ಈ ರಜೆ ಬರಿ ಖುಷಿಗಲ್ಲ, ಗಳಿಕೆಗೂ ಅನ್ನುವವರೂ ಇದ್ದಾರೆ. ಈ ಸ್ವಾಭಿಮಾನದ ಹುಡುಗರಿಗೆ ನಾಳಿಯ ಚಿಂತೆ. ಅದಕ್ಕೇ ರಜಾಕಾಲದಲ್ಲಿ ಹಲವು ರೀತಿಯ ದುಡಿಮೆ ಮಾಡಿ ಒಂದಿಷ್ಟು ಕಾಸು ಗಳಿಸಿ ತಮ್ಮ ಫೀಸು ತಾವೇ ಕಟ್ಟುವಷ್ಟು ಗಟ್ಟಿಗರಾಗಿಬಿಡುತ್ತಾರೆ ಇವರು. ಪತ್ರಿಕೋದ್ಯಮ ವಿದ್ಯಾರ್ಥಿಗೆ ಲೇಖನ ಬರೆದು ಸಂಪಾದಿಸುವ ಹಂಬಲವಾದರೆ ಅಕೌಂಟ್ಸ್ ವಿದ್ಯಾರ್ಥಿಗೆ ಲೆಕ್ಕ ಬರೆಯಲು ಹೋಗುವ ತವಕ. ಕಾಲ್ ಸೆಂಟರ್‌ಗಳಲ್ಲಿ ದುಡಿಯುವ ವಿದ್ಯಾರ್ಥಿಗಳೂ ಇಲ್ಲದಿಲ್ಲ. ‘ನಾನು ಎಕ್ಸಾಮ್ ಮುಗಿದ ತಕ್ಷಣ ಎರಡು ತಿಂಗಳ ಮಟ್ಟಿಗೆ ಒಂದು ಕಾಲ್ ಸೆಂಟರ್ ಸೇರಿಕೊಳ್ಳಬೇಕೆಂದಿದ್ದೇನೆ. ಸುಮ್ಮನೇ ಸಮಯ ವೇಸ್ಟ್ ಮಾಡೋ ಬದಲು ಅಷ್ಟಾದರೂ ಸಂಪಾದನೆ ಆಗುತ್ತದಲ್ಲ..’ ಎನ್ನುತ್ತಾರೆ ಬೆಂಗಳೂರಿನ ಪ್ರಥಮ ಬಿಎ ವಿದ್ಯಾರ್ಥಿನಿ ವರ್ಷಾ.
ರಜಾಕಾಲದಲ್ಲಿ ದುಡಿಯುವುದರ ಜೊತೆಗೇ ತಮ್ಮ ಓದಿಗೆ ಪೂರಕವಾದ ಕೋರ್ಸ್‌ಗಳನ್ನು ಮಾಡಿಕೊಂಡು ನಾಳಿನ ದಿನಗಳನ್ನು ಭದ್ರಗೊಳಿಸುವವರೂ ಇದ್ದಾರೆ. ಇಂಥವರಿಗಾಗಿಯೇ ಹಲವಾರು ವೆಕೇಷನಲ್ ಕೋರ್ಸ್‌ಗಳೂ ಇವೆ. ಭರತನಾಟ್ಯ, ಸಂಗೀತ ಇತ್ಯಾದಿ ತಮ್ಮಿಷ್ಟದ ಕಲೆಗಳನ್ನು ಕಲಿಯುವವರಿಗೂ ಇದು ಸೂಕ್ತ ಸಮಯ.
ಒಟ್ಟಿನಲ್ಲಿ ಹೊಸದನ್ನು ಕಲಿಯುವವರಿಗೆ, ನೋಡುವವರಿಗೆ, ಆಡುವವರಿಗೆ, ಹಾಡುವವರಿಗೆ, ಸುಮ್ಮನೇ ನಿದ್ದೆ ಹೊಡೆಯುವವರಿಗೆ… ಹೀಗೆ ಇಷ್ಟಬಂದದ್ದೆಲ್ಲ ಮಾಡುವುದಕ್ಕೇ ಇರುವುದು ಈ ರಜಾದಿನಗಳು. ಸೃಜನಶೀಲ ಯುವಮನಸ್ಸುಗಳಿಗಂತೂ ಈ ಹಾಲಿಡೇಸ್ ಅಂದರೆ ಖಾಲಿ ಕ್ಯಾನ್ವಾಸ್‌ನಂತೆ. ಇದರ ಮೇಲೆ ಚೆಂದದ ಬಣ್ಣದೊಂದಿಗೆ ಸುಂದರ ಚಿತ್ರ ಬಿಡಿಸಿಕೊಂಡವರು ಜಾಣರು. ಎಷ್ಟಾದರೂ ಕಣ್ಣು ಹೊರಳಿದಷ್ಟೇ ಆಗಸ, ಅಲ್ಲವೇ?
—————
ನಂಗೆ ಸಂಗೀತ ಅಂದ್ರೆ ಇಷ್ಟ. ರಜಾ ತುಂಬಾ ಬೆಳಗ್ಗೆ, ಸಂಜೆ ಸಂಗೀತ ಪ್ರಾಕ್ಟೀಸ್ ಮಾಡ್ತೇನೆ. ಜೊತೆಗೆ ಸ್ವಲ್ಪ ಓದು ಇದ್ದೇ ಇದೆ. ಫ್ರೆಂಡ್ಸ್ ಜೊತೆ ಟ್ರಿಪ್ ಹೋಗೋದು ಇತ್ಯಾದಿಯೂ ಮಾಡ್ತೇನೆ.
ಸವ್ಯಸಾಚಿ, ಬಿಕಾಂ,
ನಾನು ರಜೆಯ ಸಮಯದಲ್ಲಿ ಹೆಚ್ಚಾಗಿ ಫ್ಯಾಮಿಲಿ ಜೊತೆ ಕಳೆಯೋಕೆ ಇಷ್ಟಪಡ್ತೇನೆ. ಮುಂದೆ ಹೇಗಿದ್ರೂ ಬಿಕಾಂ ಮಾಡೋದು ಅಂತ ಡಿಸೈಡ್ ಮಾಡಿದ್ದೇನೆ. ಹೀಗಾಗಿ ಮುಂದೇನು ಅನ್ನೋ ಚಿಂತೆ ಇಲ್ಲ. ಅದಕ್ಕೇ ರಜಾನ ಆರಾಮಾಗಿ ಕಳೆಯಬಹುದು. ಮೈಸೂರು, ಬೆಂಗಳೂರು ಇತ್ಯಾದಿ ಪ್ಲೇಸ್ ನೋಡ್ಬೇಕು. ಕೆಲವು ಜನರಲ್ ನಾಲೆಜ್ ಪುಸ್ತಕಗಳನ್ನು ಓದ್ಬೇಕು ಅಂತ ಇದ್ದೇನೆ.
ಅಹ್ಮದ್ ಸುಫೈದ್, ದ್ವಿತೀಯ ಪಿಯುಸಿ, ಎಸ್‌ಡಿಎಂ ಕಾಲೇಜು, ಉಜಿರೆ
—————-
ಬುಕ್ ಗೈಡ್:
ಮಲೆಗಳಲ್ಲಿ ಮದುಮಗಳು (ಕುವೆಂಪು)
ದಿ ಗೈಡ್ (ಆರ್.ಕೆ.ನಾರಾಯಣ್)
ಮರಳಿ ಮಣ್ಣಿಗೆ (ಶಿವರಾಮ ಕಾರಂತ)
ದ ಡೈರಿ ಆಫ್ ಆನ್ ಫ್ರಾಂಕ್ (ಆನ್ ಫ್ರಾಂಕ್)
ದಿ ಆಲ್‌ಕೆಮಿಸ್ಟ್ (ಪೌಲೊ ಕೊಹೆಲೊ)
ಜುಗಾರಿ ಕ್ರಾಸ್ (ಪೂ.ಚಂ.ತೇ)
ಸಂಕ್ರಾಂತಿ (ಲಂಕೇಶ್)
ಮೈಸೂರ ಮಲ್ಲಿಗೆ (ಕವನ ಸಂಕಲನ)
ಫೈವ್ ಇಂಡಿಯನ್ ಮಾಸ್ಟರ್‍ಸ್  (ಕಥಾ ಸಂಗ್ರಹ)
ಕಥಾಜಗತ್ತು (ಸಂ: ಎಸ್.ದಿವಾಕರ್)

ಸಿನಿಮಾ ಗೈಡ್
ಪಥೇರ್ ಪಾಂಚಾಲಿ (ಸತ್ಯಜಿತ್ ರೇ)
ದ್ವೀಪ (ಗಿರೀಶ್ ಕಾಸರವಳ್ಳಿ)
ಚಿಲ್ಡ್ರನ್ ಆಫ್ ಹೆವನ್ (ಮಜೀದ್ ಮಜಿದಿ)
ಸೆವೆನ್ ಸಮುರಾಯ್ಸ್ (ಅಕಿರಾ ಕುರಸೊವಾ)
ಬೈಸಿಕಲ್ ಥೀವ್ಸ್ (ವಿಟ್ಟೊರಿಯೊ ಡಿ ಸಿಕಾ)
ಚಾಕೊಲೇಟ್ (
ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ (ಕಿಮ್ ಕಿ ಡಕ್)
ಝೋರ್ಬಾ ದ ಗ್ರೀಕ್ (ಮೈಕೆಲ್ ಕಾಕೊಯಾನಿಸ್)
ವೆಲ್‌ಡನ್ ಅಬ್ಬಾ (ಶ್ಯಾಂ ಬೆನಗಲ್)
ಬ್ಯೂಟಿಫುಲ್ ಮೈಂಡ್ (ರಾನ್ ಹೊವಾರ್ಡ್)