ಅದು ‘ಅವಳ ಕೆಲಸ’ ಅನ್ನುತ್ತ ಮೂಗು ಮುರಿದು ನಡೆಯುತ್ತಿದ್ದ ಪುರುಷರಲ್ಲೂ ಈಗ ಬದಲಾವಣೆ. ಮನೆಗೆಲಸದಲ್ಲೂ ಸಮಾನ ಭಾಗಿಗಳು ಅವರೀಗ. ಮನೆಗೆಲಸಕ್ಕೀಗ ಲಿಂಗದ ಹಂಗಿಲ್ಲ. ಗೌರೀದುಃಖ ಶಿವನಿಗೂ ಅರ್ಥವಾಗಿಬಿಟ್ಟಿದೆ.  

ಹೌದು, ಪುರುಷರು ಬದಲಾಗುತ್ತಿದ್ದಾರೆ. ಹೆಂಡತಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಹೊರಗೆ ಕಾಲ ಮೇಲೆ ಕಾಲು ಹಾಕಿ ಪೇಪರ್ ಓದುತ್ತ ಕೂರುವ ಮಹನೀಯರಲ್ಲಿ  ಒಳಗೆಲ್ಲೋ ಏನೋ ಸಂಚಲನ. ಪೇಪರ್ ಮಡಿಸಿಟ್ಟು ಒಳಗಿನ ಕೆಲಸಕ್ಕೆ ಕೈಗೂಡಿಸಿಬಿಡುವ ಮನಸ್ಸು. ಪಾಪ, ಅವಳಾದ್ರೂ ಎಷ್ಟೊಂದು ದುಡೀತಾಳೆ ಅನ್ನೋ ತುಡಿತ. ಎಲ್ಲ ಕೆಲಸದಲ್ಲೂ ನಾವು ಸಮಾನರು ಅನ್ನುತ್ತ ಹೆಣ್ಣುಮಕ್ಕಳು ಮುಂದಮುಂದಕ್ಕೆ ಸಾಗುವಾಗ ಅಡುಗೆಮನೆಯ ಆ ಕೆಲಸವೂ ಕೀಳಲ್ಲ ಎಂದು ಜೊತೆಯಾಗುತ್ತಿದ್ದಾರೆ ಪುರುಷರು.
ಕೆರಿಯರ್ ಓರಿಯೆಂಟೆಂಡ್ ಅನ್ನಿಸಿಕೊಳ್ಳುವ ಧಾವಂತದಲ್ಲಿ ಮನೆಯೊಳಗಿನ, ಹೊರಗಿನ ಕೆಲಸಗಳನ್ನೆಲ್ಲ ನಿಭಾಯಿಸುವುದು ಕಷ್ಟವಾದರೂ ಹಲ್ಲುಕಚ್ಚಿ ಸಾಗಿದವಳು ಅವಳು. ಹೊರಗೇ ಇದ್ದ ಅವನಿಗೆ ಅವಳ ಈ ‘ಒಳಗು’ ಅರ್ಥವಾಗಿರಲಿಲ್ಲ. ಆದರೆ ಇದೀಗ ನಿಧಾನವಾಗಿ ಎಲ್ಲವೂ ತಿಳಿಯುತ್ತಿರುವಂತಿದೆ. ಅದಕ್ಕೇ ಅನೇಕ ಪುರುಷರು ಸ್ತ್ರೀಪರರಾಗಿದ್ದಾರೆ. ಪಠ್ಯದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸ್ತ್ರೀವಾದಿಗಳಾಗತೊಡಗಿದ್ದಾರೆ.
ಹೆಲ್ಪ್  ಮಾಡೋರು
‘ಹೇ, ಮೀಸೆ ಬಂದ ಗಂಡಸು ಕಸಬರಿಕೆ ಮುಟ್ಟೋ ಹಾಗಿಲ್ಲ’ ಎನ್ನುತ್ತಾ ಮಡಿವಂತರಾಗಿದ್ದ, ಅಡುಗೆ ಮನೆಗೆ ಕಾಲಿಡುವುದೂ ತಮ್ಮ ಯೋಗ್ಯತೆಗೆ ಕುಂದು ಎನ್ನುತ್ತಿದ್ದ ಗಂಡಸರ ಕಾಲ ಇದಲ್ಲ. ಹೆಂಡತಿ ತನಗೆ ಸಮಾನಳಾಗಿ ಮನೆಯ ಹೊರಗೂ ಕೆಲಸ ಮಾಡಲಾರಂಭಿಸಿದಾಗ ಮನೆಗೆಲಸದಲ್ಲಿಯೂ ತಾನಾಕೆಗೆ ಸಹಾಯ ಮಾಡಬೇಕೆನ್ನಿಸಿತು ಅನೇಕರಿಗೆ. ಅದಕ್ಕೇ ಮನೆಯ ಕ್ಲೀನಿಂಗ್‌ನಲ್ಲಿ, ತರಕಾರಿ ಹೆಚ್ಚುವುದರಲ್ಲಿ ಅವರದೂ ಕೈಚಳಕ ಕಾಣಿಸಲಾರಂಭಿಸಿತು.
ಹೀಗೆ ಇವರೆಲ್ಲ ‘ನಳ’ನ ಪಾತ್ರಕ್ಕೆ ತರಬೇತಿಗಿಳಿದಾಗ ಹಲವು ಕಡೆ ‘ಅಮ್ಮಾವ್ರ ಗಂಡ’ನೆಂಬೋ ಟೀಕೆ ಕೇಳಿಬಂತು. ಕೆಲ ಅಮ್ಮಂದಿರಿಗೂ ತಮ್ಮ  ತಮ್ಮ ಮಗಂದಿರು ಸೊಸೆಗೆ ಸಹಾಯ ಮಾಡುವುದು ಕಂಡು ಸಂಕಟವಾಯ್ತು. ಮಗಳಿಗೆ ಅಳಿಯ ನೆರವಾದದ್ದು ನೋಡಿ ಖುಷಿಯಾಯ್ತು. ಈ ಟೀಕೆಯ ರಗಳೆ ಎಲ್ಲ ಬೇಡ ಎಂದವರು ‘ಹೆಲ್ಪ್’ನ ಮಾತೇ ಬೇಡ ಎಂದು ಮತ್ತೆ ಡ್ರಾಯಿಂಗ್ ರೂಮ್‌ಗೇ ಸೀಮಿತರಾದರು. ‘ಅವಳ’ ಕಷ್ಟ ಅರ್ಥ ಮಾಡಿಕೊಂಡವರು ತಮ್ಮಿಂದಾದ ಕೆಲಸ ಮಾಡೋದು ಮುಂದುವರಿಸಿದರು.
‘ನಮ್’ ಕೆಲ್ಸ ಅನ್ನೋರು
ಆದ್ರೆ ಈಗ ಮನೆಗಳಲ್ಲಿ ಬರೀ ‘ಹೆಲ್ಪ್’ ಮಾಡುವ ಗಂಡಸರಷ್ಟೇ ಇಲ್ಲ. ಬೆಟ್ಟದಷ್ಟಿರುವ ಮನೆಗೆಲಸ ಅವಳದಷ್ಟೇ ಅಲ್ಲ, ತಮ್ಮದೂ ಎಂಬಂತೆ ಭಾವಿಸಿ ಸಹಕರಿಸುವವರೂ ಇದ್ದಾರೆ. ಇವರೆಲ್ಲ ಕೆಲಸ ಹಂಚಿಕೊಳ್ಳೋಣ ಅನ್ನುವವರು. ಆಕೆ ಆಫೀಸಿನಿಂದ ಬರುವುದು ತಡವಾದರೆ ತಾನೇ ಕುಕ್ಕರ್ ಇಟ್ಟು ಅಡುಗೆ ಮುಗಿಸಿಬಿಡುವ ಹುಡುಗರು ಇವರು. ಮನೆ ಕ್ಲೀನಿಂಗ್, ವಾಷಿಂಗ್ ಎಲ್ಲಕ್ಕೂ ಇವರು ರೆಡಿ. ಮನೆಗೆಲಸ ಮಾಡಬೇಕೆಂದರೆ ಹೆಂಡತಿಗೆ ಅಸೌಖ್ಯವಾಗಿರಬೇಕೆಂಬ ಕಾರಣವೇನೂ ಇವರಿಗೆ ಬೇಕಿಲ್ಲ. ತಮ್ಮ ಕೆಲಸ ತಾವು ಮಾಡೋದು ಅಷ್ಟೆ. ಇಲ್ಲಿ ಅವನು, ಅವಳೆಂಬ ಭೇದವಿಲ್ಲ. ಪತ್ನಿಗೆ ರಜೆ ಸಿಗದಿದ್ದರೆ ತಾನೇ ರಜೆ ಹಾಕಿ ಮನೆಯಲ್ಲಿದ್ದು ಮಗುವನ್ನು ನೋಡಿಕೊಳ್ಳುವ ಅಪ್ಪಂದಿರೂ ಉಂಟು.
ಈ ಕೆಲಸವೆಲ್ಲಾ ಹೆಣ್ಣುಮಕ್ಕಳು ದುಡಿಯುವುದಕ್ಕೆಂದು ಹೊರಗೆ ಹೋಗುವ ಮನೆಗಳಲ್ಲಿ ಮಾತ್ರವೆಂದರೆ ತಪ್ಪು ತಿಳಿದಂತಾದೀತು. ಹೋಂ ಮೇಕರ್‌ಗಳಿಗೂ ತಮ್ಮ ಗಂಡ ಹೀಗೆ ಮನೆಗೆಲಸಗಳಲ್ಲಿ ಸಹಭಾಗಿಯಾಗುವುದನ್ನು ನೋಡುವ ಭಾಗ್ಯ ಸಿಕ್ಕಿಬಿಟ್ಟಿದೆ. ಈಗ ಉದ್ಯೋಗಸ್ಥ ಪುರುಷನೂ ರಜೆಯ ದಿನದಂದು ಮನೆಯಲ್ಲಿರುವಾಗ ಮುಜುಗರವಿಲ್ಲದೇ ಅಪ್ಪಟ ಗೃಹಸ್ಥನಾಗುತ್ತಾನೆ. ಪ್ರತಿದಿನವೂ ಮನೆ, ಅಡುಗೆ ಎಂದು ಬೇಸರಿಸುವ ಅವಳಿಗೊಂದು ಚೇಂಜ್ ಇರಲಿ ಅನ್ನುತ್ತಾ ಭಾನುವಾರ ತನ್ನ ಕೈ ಅಡುಗೆ ಮಾಡಿ ಬಡಿಸುವ ಸಹೃದಯರಿವರು. ಮನೆಯಲ್ಲಿ ಪುಟ್ಟ ಮಗುವಿದ್ದರೆ ಅದರ ಮೈಗೆ ಎಣ್ಣೆ ಹಚ್ಚುವ, ಸ್ನಾನ ಮಾಡಿಸುವ, ಅದರ ಬಟ್ಟೆ ತೊಳೆಯುವ… ಹೀಗೆ ಎಲ್ಲ ಕೆಲಸಕ್ಕೂ ಅವರು ಸೈ. ಅವಳಿಗಿಷ್ಟವಾದ ಸೀರಿಯಲ್ ನೋಡಲು ಬಿಟ್ಟು ಅಳುವ ಮಗುವನ್ನು ಎತ್ತಿಕೊಂಡು ಟೆರೇಸ್‌ಗೆ ಹೋಗುವ ಜೊತೆಗಾರರೂ ಇದ್ದಾರೆ. ‘ಹೌದು, ಅರ್ಜೆಂಟ್ ಇದ್ದಾಗ, ಗೆಸ್ಟ್‌ಗಳು ಬಂದ್ರೆ ನನ್ನ ಹಸ್ಬೆಂಡ್ ತಮಗೆ ತಿಳಿದಿರುವ ಕೆಲ್ಸ ಮಾಡ್ತಾರೆ. ಇಂಥಾ ಕೆಲ್ಸಗಳನ್ನು ತಾನು ಮಾಡ್ಬಾರ್ದು ಅಂತೇನೂ ಅವರಿಗಿಲ್ಲ’ ಅಂತಾರೆ ಬೆಂಗಳೂರಿನ ಹೋಂ ಮೇಕರ್ ವಸುಧಾ ತುಕ್ದರ್.
ಆದರೂ ತಮ್ಮ ಈ ಪಾಲ್ಗೊಳ್ಳುವಿಕೆಯನ್ನು ಹೊರಜಗತ್ತಿಗೆ ಹೇಳಿಕೊಳ್ಳುವುದು ಕೆಲ ಗಂಡುಮಕ್ಕಳಿಗೆ ಇಷ್ಟವಿಲ್ಲ. ಎಲ್ಲಿ ಉಳಿದ ಗಂಡಸರ ಸರ್ಕಲ್‌ನಲ್ಲಿ ತಾನು ಚಿಕ್ಕವನಾಗಿಬಿಡುತ್ತೇನೋ ಎಂಬ ಅಳುಕು ಇವರಿಗೆ. ಎಲ್ಲರ ಮನೆಯ ಕಥೆಯೂ ಒಂದೇ ಆದಾಗ ಈ ಹಿಂಜರಿಕೆಯೂ ಮಾಯವಾಗುತ್ತಿರುವುದೂ ಅಷ್ಟೇ ನಿಜ.
ಇದು ಜಗದ ನಿಯಮ
ಈ ಬದಲಾವಣೆಗಳೆಲ್ಲಾ ತಾನಾಗಿ ಧುತ್ತೆಂದು ಕಂಡುಬಂದವಲ್ಲ. ಮೊದಮೊದಲು ಮನೆಯನ್ನು ಸ್ವಸ್ಥವಾಗಿ ನಿಭಾಯಿಸುವ ಅನಿವಾರ್‍ಯತೆಯೇ ಇವರಿಗೆ ಪ್ರೇರಣೆ. ಆ ಸಂದರ್ಭದ ‘ಹೆಲ್ಪ್’ನ ಮುಂದುವರಿದ ರೂಪವೇ ಕೆಲಸವನ್ನು ಹಂಚಿಕೊಳ್ಳುವ ಪ್ರಕ್ರಿಯೆ.
ಮನೆಗೆಲಸದಲ್ಲಿ ತೊಡಗಿಸಿಕೊಳ್ಳುವ ಈ ಪ್ರಕ್ರಿಯೆ ಸಹಜವೇ ಆಗಿಬಿಟ್ಟಿರುವುದಕ್ಕೆ ಪ್ರತಿ ಮನೆಯಲ್ಲಿರುವ ಮಹಿಳೆಯೇ ಕಾರಣ.
ಮೂಲಭೂತವಾಗಿ ಪುರುಷರಲ್ಲಿರುವ ‘ಮೇಲ್ ಇಗೋ’ ಇಂಥ ಕೆಲಸಗಳನ್ನೆಲ್ಲಾ ಮಾಡಗೊಡುವುದಿಲ್ಲ. ಅಡುಗೆ ಮನೆಯ ಕೆಲಸವಿದ್ದರೂ ಹೆಣ್ಣುಮಕ್ಕಳನ್ನೇ ಕರೆಯುವ ರೂಢಿಯೂ ಇದಕ್ಕೆ ಪರೋಕ್ಷವಾಗಿ ಇಂಬು ಕೊಟ್ಟೇ ಕೊಡುತ್ತದೆ. ಆದರೆ, ಅದೆಷ್ಟೋ ಹೆಣ್ಣುಮಕ್ಕಳು ಮನೆಗೆಲಸವನ್ನು ತನ್ನ ಗಂಡುಮಕ್ಕಳಲ್ಲಿ ಹೇಳಬಾರದು ಎಂಬ ಮಡಿವಂತಿಕೆಯನ್ನು ಮೀರಿದ್ದಾರೆ. ನೆಂಟರು ಬಂದಾಗ ಸಹಾಯಕ್ಕೆಂದು ಅಲ್ಲೇ ಓಡಾಡುವ ಹುಡುಗನನ್ನೇ ಕರೆದುಬಿಡುತ್ತಾರೆ ಅವರು. ಜೊತೆಗೆ ಅಪ್ಪನ್ನೂ ಆಗೊಮ್ಮೆ ಈಗೊಮ್ಮೆ ಅಮ್ಮನಿಗೆ ಸಹಾಯ ಮಾಡುವುದನ್ನು ನೋಡಿದ್ದಾನವನು. ಹೀಗೆ ಬೆಳೆದ ಹುಡುಗ ತನ್ನ ಸಂಸಾರದಲ್ಲಿ ಸಹಭಾಗಿಯಾಗದಿರುತ್ತಾನೆಯೇ?
ಆದರೂ ಎಲ್ಲಾ ಪುರುಷರೂ ಹೀಗೆ ಬದಲಾಗಿದ್ದಾರೆ ಅಂತೇನೂ ಅಲ್ಲ. ಸ್ತ್ರೀಯ ಅಂತರಂಗವನ್ನು ಅರ್ಥಮಾಡಿಕೊಂಡವರ ಸಂಖ್ಯೆ ಬಲು ಕಡಿಮೆಯೇ. ಆದರೆ ಈಗಿನ ಅಲ್ಪ ಬದಲಾವಣೆ ಮುಂದಿನ ಸಮಗ್ರ ಬದಲಾವಣೆಗೆ ನಾಂದಿಯಾಗಬಹುದು ಅನ್ನುವುದರಲ್ಲೇನೂ ತಪ್ಪಿಲ್ಲ.
——–

ನಮ್ಮ ಮನೆಯಲ್ಲಿ ನಾವು ಗಂಡ-ಹೆಂಡತಿಯರಿಬ್ಬರೂ ಎಲ್ಲ ಕೆಲಸದಲ್ಲೂ ಸಮಾನವಾಗಿ ಭಾಗಿಗಳಾಗ್ತೇವೆ. ನನ್ನ ಗಂಡನಲ್ಲಂತೂ ‘ಈ ಕೆಲ್ಸ ನನ್ನದಲ್ಲ’ ಅನ್ನೋ ಭಾವನೆ ಇಲ್ಲವೇ ಇಲ್ಲ. ಆದರೆ ಅವ್ರು ಬೆಳೆದ ವಾತಾವರಣದಿಂದಾಗಿ ಕೆಲವು ಕೆಲಸ ಅವರಿಗೆ ಬರೋದಿಲ್ಲ, ಕೆಲವು ಹೊರಗಿನ ಕೆಲಸ ನನಗೆ ಹೇಗೆ ಅಷ್ಟು ಸಲೀಸು ಅನ್ನಿಸೋದಿಲ್ಲವೋ ಹಾಗೆ. ಅವರಿಗೆ ಪುರುಸೊತ್ತಿರುವಾಗ, ಅವ್ರ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಕೆಲಸಗಳಲ್ಲಿ  ಅವ್ರು ಭಾಗಿಯಾಗ್ತಾರೆ. ಇತ್ತೀಚೆಗೆ ಹೀಗೆ ಕೆಲಸಗಳಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಿದೆ. ಆದರೆ, ಹೆಣ್ಣುಮಕ್ಕಳೇ ಎಲ್ಲವನ್ನೂ ನಿಭಾಯಿಸುವ ಬಗ್ಗೆ ಯಾವುದೇ ರೀತಿಯಲ್ಲೂ ಸ್ಪಂದಿಸದೇ ಇರುವ ಗಂಡಸರೂ ನಮ್ಮ ನಡುವೆ ಇದ್ದಾರೆ.
ಮಲ್ಲಿಕಾ, ಸೂಪರಿಂಟೆಂಡೆಂಟ್, ಕೇಂದ್ರೀಯ ಅಬಕಾರಿ ಇಲಾಖೆ
————-
ಅಲ್ಲಿ  ಹೇಗೆ?
ಭಾರತದಲ್ಲಿ ಮಾತ್ರ ಗಂಡಸರು ಅಳೆದೂ ಸುರಿದು ಮನೆಗೆಲಸದಲ್ಲಿ ಸೇರೋದು, ಬೇರೆ ದೇಶಗಳಲ್ಲೆಲ್ಲ ಹೀಗಿಲ್ಲ ಅಂತೀರಾ?
ಹೌದು, ಅಲ್ಲಿ ನಿತ್ಯವೂ ಮನೆಗೆಲಸವನ್ನು ಹಂಚಿಕೊಳ್ಳುವ, ಅಡುಗೆ, ಮಕ್ಕಳನ್ನು ನೋಡಿಕೊಳ್ಳುವ ಗಂಡಸರು ಸಾಮಾನ್ಯ. ‘ಸಂಸಾರ ನಿರ್ವಹಣೆಯ ನೊಗವನ್ನು ಸಮವಾಗಿ ಹೆಗಲಿಗೇರಿಸಿಕೊಂಡ ಅನೇಕರು ಅಮೆರಿಕದಲ್ಲಿಯೂ ಸಾಕಷ್ಟು ಇದ್ದಾರೆ. ಗಂಡ-ಹೆಂಡತಿ ಇಬ್ಬರೂ ದುಡಿಯುವ ಸಂದರ್ಭದಲ್ಲ ಸಹಜವಾಗಿಯೇ ‘ನೀ ನನಗಿದ್ದರೆ ನಾನಿನಗೆ’ ಅನ್ನೋ ತತ್ವ ಪಾಲಿಸಲೇಬೇಕಾಗುತ್ತದೆ. ಇದಲ್ಲದೇ ಅಮೆರಿಕದಲ್ಲಿ ‘ಮನೆಗೆಲಸದವಳು’ ಅನ್ನೋ ಕಾನ್ಸೆಪ್ಟ್ ತೀರಾ ಅಪರೂಪ. ಸಿಕ್ಕರೂ ಸಿಕ್ಕಾಪಟ್ಟೆ ದುಡ್ಡು ಕೊಡಬೇಕು. ಅದಕ್ಕೇ ಮನೆಯವರೇ ಮ್ಯಾನೇಜ್ ಮಾಡಿಕೊಳ್ಳುತ್ತಾರೆ’ ಅಂತಾರೆ ಅಮೆರಿಕನ್ನಡಿಗ ಶ್ರೀವತ್ಸ ಜೋಶಿ.
ಹಾಗೆ ನೋಡಿದರೆ ಪತ್ನಿ ಕೆಲಸ ಮುಂದುವರಿಸುವುದಕ್ಕಾಗಿ ತಾನೇ ಉದ್ಯೋಗ ತ್ಯಜಿಸಿ ಮನೆ, ಮಕ್ಕಳನ್ನು ನೋಡಿಕೊಳ್ಳುವ ‘ಮಿಸ್ಟರ್ ಮಾಮ್’ ಪರಿಕಲ್ಪನೆ ಆರಂಭವಾದದ್ದು ಅಮೆರಿಕದಲ್ಲಿ. ೧೯೮೩ರಲ್ಲಿ  ‘ಮಿ.ಮಾಮ್’ ಎಂಬ ನಾಟಕ, ಸಿನಿಮಾವೂ ಇಲ್ಲಿ ಪ್ರದರ್ಶನ ಕಂಡಿತು. ರಿಸೆಷನ್ ಸಂದರ್ಭದಲ್ಲಿ ಅದೆಷ್ಟೋ ಪುರುಷರು ಕೆಲಸ ಕಳಕೊಂಡು ಮನೆಯಲ್ಲಿ ಉಳಿಯುವಂತಾದಾಗ ಈ ಪದ್ಧತಿ ಸಹಜವಾಗಿಯೇ ಜಾರಿಗೆ ಬಂತು. ಈ ಸಂದರ್ಭದ ನೆನಪುಗಳನ್ನು ಇನ್ನೊಬ್ಬ ಅಮೆರಿಕನ್ನಡಿಗ ಶ್ರೀನಾಥ್ ಭಲ್ಲೆ ಹೇಳಿಕೊಳ್ಳುತ್ತಾರೆ, ‘ಹೆಂಡತಿಯ ಸಂಬಳ ಮತ್ತು ಉಳಿತಾಯದ ಹಣದಲ್ಲೇ ಸಂಸಾರ ತೂಗಿಸಿಕೊಂಡು ಹೋಗಬೇಕಾದ ದಿನಗಳವು. ಮಕ್ಕಳನ್ನು ಡೇ-ಕೇರ್‌ನಿಂದ ಬಿಡಿಸಿ ಮನೆಯಲ್ಲೇ ಮಗುವನ್ನು ನೋಡಿಕೊಳ್ಳುವುದು, ಹೆಂಡತಿ ಹೆಚ್ಚು ಕೆಲಸ ಮಾಡಿ ನಾಲ್ಕು ಕಾಸು ಹೆಚ್ಚು ಸಂಪಾದಿಸಲು ಅನುಕೂಲವಾಗುವಂತೆ ಮನೆಯ ಎಲ್ಲ ಕೆಲಸಗಳನ್ನೂ ವಹಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಎಷ್ಟರಮಟ್ಟಿಗೆ ಆಗ ಜವಾಬ್ದಾರಿ ಹೊತ್ತರೆಂದರೆ ಆಗ ಹಿಡಿದ ಸೌಟನ್ನು ಇನ್ನೂ ಕೆಳಗಿಳಿಸಿಲ್ಲ!’ ವೀಕೆಂಡ್ ದಂಪತಿಗಳು, ವರ್ಷಕ್ಕೊಮ್ಮೆ ತಿಂಗಳೋ, ಎರಡು ತಿಂಗಳೋ ಜೊತೆಯಾಗಿ ಪ್ರವಾಸ ಹೋಗಿಬರುವವರು, ಒಂದೇ ಅಭಿರುಚಿಯ ದಂಪತಿಗಳು -ಇವರಲ್ಲೆಲ್ಲ ಇಂತಹ ಹೊಂದಾಣಿಕೆ ಇದ್ದದ್ದೇ.
ಆದರೆ, ಇಲ್ಲಿ ಎಲ್ಲ ಗಂಡಸರೂ ಹಾಗೆನ್ನುವಂತಿಲ್ಲ. ಮನೆಯೊಳಗಣ ಕಾರ್‍ಯಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳದವರೂ ಇಲ್ಲಿ  ಕಾಣಿಸುವುದುಂಟು ಅಂತಾರೆ ಅಮೆರಿಕದಲ್ಲಿದ್ದು ಇದೀಗ ಉಡುಪಿಯಲ್ಲಿ ನೆಲೆಸಿರುವ ಜ್ಯೋತಿ ಮಹದೇವ್. ‘ಅಮೆರಿಕಾದಲ್ಲಿ  ಎರಡೂ ಥರದ ಗಂಡಸರೂ ಇದ್ದಾರೆ. ಹೆಂಡತಿಯ ಕೆರಿಯರ್ ಮುಖ್ಯ ಎಂದು ತಾನೇ ರಜೆ ಹಾಕಿ, ಕೆರಿಯರ್ ಬ್ರೇಕ್ ಮಾಡಿ ಮಕ್ಕಳನ್ನು ನೋಡಿಕೊಳ್ಳುವ ಪುರುಷರೂ ಇಲ್ಲಿ ಇದ್ದಾರೆ. ಬರಿಯ ಮದರ್‍ಸ್ ಡೇ, ಹೆಂಡತಿಯ ಬರ್ತ್‌ಡೇಗಳಂದು ಮಕ್ಕಳನ್ನೂ ಇನ್‌ವಾಲ್ವ್ ಮಾಡಿಕೊಂಡು ಅಡುಗೆ ಮಾಡಿ ಆಕೆಗೊಂದು ಸ್ಪೆಷಲ್ ಡೇಯ ಅನುಭವ ಸಿಗುವಂತೆ ಮಾಡುವವರೂ ಇದ್ದಾರೆ. ಏನೇ ಆದರೂ ಎಂಟ್ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಇದ್ದಷ್ಟು ರಿಜಿಡಿಟಿಯನ್ನು ಅಲ್ಲಿ ಕಾಣಲು ಸಾಧ್ಯವಿಲ್ಲ.’ ಅಂತಾರೆ ಅವರು.
———-
ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಪ್ರಕಟಿತ.

ಅಪ್ಪ ತಿಂಗಳಿಗಿಷ್ಟು ಅಂತ ಕೊಡೋ ಪಾಕೆಟ್ ಮನಿ. ಎಲ್ಲೋ ಸಾಲದೆ ಹೋದರೆ ಅಮ್ಮ ಪ್ರೀತಿಯಿಂದ ಕೊಡೋ ಎಕ್ಸ್‌ಟ್ರಾ ಹಣ. ಎರಡೂ ಸೇರಿದ್ರೆ ಪಾಕೆಟ್ಟೂ, ಮನಸ್ಸೂ ಭರ್ತಿಯಾದಂತೆ. ಆದ್ರೂ ತಿಂಗಳಿಗಿಷ್ಟು ಅಂತ ಕೈಗಿಟ್ರೆ ಅದನ್ನು  ದಿನದಿನವೂ ಇಷ್ಟಿಷ್ಟೇ ಅಂತ ಖರ್ಚು ಮಾಡ್ತಾ ಬರೋದು ಮಾತ್ರ ಕಷ್ಟ ಕಣ್ರೀ.. ಆದ್ರೆ, ಕೊಡೋದ್ರಲ್ಲೇ ಉಳಿಸೋ ಶಾಣ್ಯಾ ಹುಡುಗ್ರೂ ಇರ್‍ತಾರ್ರೀ…

ನಾಳೆ ಶನಿವಾರ. ಮಧ್ಯಾಹ್ನ  ಕ್ಲಾಸ್ ಬಿಟ್ಟ ಮೇಲೆ ಮೊದಲು ಹೋಟೆಲ್‌ನಲ್ಲಿ  ಪಾರ್ಟಿ. ಅದಾಗಿ ಸೀದಾ ಹೋಗೋದು ಫಿಲ್ಮ್‌ಗೆ. ಸಂಜೆ ಚಾಟ್ಸ್. ಎಲ್ಲಾ ಮುಗಿಸಿದ ಮೇಲೆ ಮನೆಗೆ. ಕೊನೆಗೆ ಪರ್ಸ್ ನೋಡ್ಕೊಂಡ್ರೆ ಬೇಸರ. ಕಾರಣ ಇಷ್ಟೇ, ಅಪ್ಪ  ಕೊಟ್ಟ ಪಾಕೆಟ್ ಮನಿಯಲ್ಲಿ ಮುಕ್ಕಾಲೂ ಖರ್ಚಾಗಿಬಿಟ್ಟಿದೆ. ಇನ್ನೂ ಈ ತಿಂಗಳಲ್ಲಿ ಇಪ್ಪತ್ತು ದಿನ ಇದೆ, ಹೇಗೆ ಕಳೆಯೋದಪ್ಪಾ?
ಪಾಕೆಟ್ ಮನಿ ಖಾಲಿಯಾಗುವ ಬಗೆಯೇ ಹಾಗೆ, ಹೇಗೆ ಮುಗಿದು ಹೋಗುತ್ತದೋ ಗೊತ್ತೇ ಆಗುವುದಿಲ್ಲ. ಕಾಲೇಜು ವಿದ್ಯಾರ್ಥಿಗಳೆಲ್ಲರನ್ನೂ ಕಾಡುವ ಕಷ್ಟ ಇದು. ತಿಂಗಳಿಗೊಮ್ಮೆಯೋ, ವಾರಕ್ಕೊಮ್ಮೆಯೋ ಕೈಗೆ ಸಿಗೋ ಹಣದಲ್ಲೇ ಎಲ್ಲಾ ಖರ್ಚುಗಳನ್ನೂ ನಿಭಾಯಿಸಬೇಕು. ಅದರಲ್ಲಿಯೂ ಉಳಿಸು ಅಂತ ಬುದ್ಧಿ ಹೇಳ್ತಾರೆ ಕೆಲವು ಅಪ್ಪ-ಅಮ್ಮಂದಿರು. ಅದೆಲ್ಲಾ ಹೇಗಪ್ಪಾ ಸಾಧ್ಯ? ಅದಕ್ಕೇ ಯಾವ ಎಕ್ಸಾಮ್‌ಗೂ ತಲೆಕೆಡಿಸಿಕೊಳ್ಳದ ಹುಡುಗರು ಈ ಪಾಕೆಟ್ ಮನಿ ವಿಚಾರದಲ್ಲಿ ಮಾತ್ರ ತಲೆ ಕೆಡಿಸಿಯೇ ಕೆಡಿಸಿಕೊಳ್ಳುತ್ತಾರೆ. ಪಾಕೆಟ್ ಮನಿ ಮ್ಯಾನೇಜ್‌ಮೆಂಟ್‌ನ ಈ ಸರ್ಕಸ್ಸು ಅವರಿಗೆ ಮಾತ್ರ ಗೊತ್ತು.
ಏಕತೆಯಲ್ಲಿ ವೈವಿಧ್ಯತೆ!
ಎಲ್ಲಾ ವಿದ್ಯಾರ್ಥಿಗಳಿಗೂ ಮನೆಯಲ್ಲಿ ಕೈಗಿಡೋ ಈ ಹಣದ ಹೆಸರು ಮಾತ್ರ ‘ಪಾಕೆಟ್ ಮನಿ’. ಆದರೆ ಈ ಹಣೆಪಟ್ಟಿಯಡಿಯಲ್ಲಿ  ಒಂದೇ ತರಗತಿಯಲ್ಲಿರುವ ಒಬ್ಬೊಬ್ಬರಿಗೂ ಸಿಗೋ ದುಡ್ಡಿನ ಪ್ರಮಾಣ ಮಾತ್ರ ಬೇರೆ ಬೇರೆ. ಇದರಲ್ಲೇ ಸಿರಿವಂತರು, ಮಧ್ಯಮವರ್ಗದವರು, ಬಡವರು ಅನ್ನೋ ವಿಭಾಗಗಳೆಲ್ಲಾ  ಸ್ಪಷ್ಟ. ಒಬ್ಬ ಹುಡುಗನಿಗೆ ಬಸ್ ಖರ್ಚಿಗೇ ಮನೆಯಲ್ಲಿ ಕಾಸು ಸಿಗುವುದು ಕಷ್ಟವಾಗಬಹುದು. ಇನ್ನೊಬ್ಬನಿಗೆ ಪೆಟ್ರೋಲ್ ಖರ್ಚು, ಮೊಬೈಲ್ ಕರೆನ್ಸಿ, ಪಾರ್ಟಿ, ತಿಂಡಿ… ಹೀಗೆ ಹತ್ತು ಹಲವು ಅವಶ್ಯಕತೆಗಳ ಲೆಕ್ಕಾಚಾರವಿಡದೇ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಕೈಗಿಡುವ ಪೋಷಕರೂ ಇರಬಹುದು. ಗ್ರಾಮೀಣ ಪ್ರದೇಶ, ನಗರ, ಪಟ್ಟಣ… ಹೀಗೆ ಪ್ರಾದೇಶಿಕ ಲೆಕ್ಕಾಚಾರವೂ ಈ ಪಾಕೆಟ್ ಮನಿ ಹಿಂದಿದೆ. ಸಮೀಕ್ಷೆಯೊಂದರ ಪ್ರಕಾರ ದೆಹಲಿ, ಚೆನ್ನೈ, ಕೊಲ್ಕೊತಾ ಮೊದಲಾದ ನಗರಗಳಲ್ಲಿ  ೨೦೦೫ರಲ್ಲಿ ೧೨ರಿಂದ ೨೦ ವರ್ಷ ವಯಸ್ಸಿನ ಮಕ್ಕಳು ೪೫೦-೫೦೦ ರೂಪಾಯಿ ಪಾಕೆಟ್ ಮನಿ ಪಡೆಯುತ್ತಿದ್ದರೆ ಈಗ ಅದೇ ವಯೋಮಾನದ ವಿದ್ಯಾರ್ಥಿಗಳು ೩,೬೦೦ರಿಂದ ೧೨,೦೦೦ ದಷ್ಟು ಹಣವನ್ನು ಜೇಬಿಗಿಳಿಸಿಕೊಳ್ಳುತ್ತಾರಂತೆ. ಬೆಂಗಳೂರಿನ ಟ್ರೆಂಡ್ ಕೂಡ ಇದೇ ಮಟ್ಟದಲ್ಲಿದೆ.
ಇಲ್ಲಿನ ವಿದ್ಯಾರ್ಥಿಗಳು ಕೂಡ ಹೇಳೋದು ಇದನ್ನೇ, ‘ಹೌದು, ಕಾಸ್ಟ್ ಆಫ್ ಲಿವಿಂಗ್ ಹೆಚ್ಚಾಗಿದೆ. ಹೀಗಾಗಿ ಖರ್ಚು ಕೂಡ ಹೆಚ್ಚು. ನಮ್ಮ ನ್ಯಾಷನಲ್ ಕಾಲೇಜ್ ಆಸುಪಾಸಿನಲ್ಲಿ ಖರ್ಚು ಕಡಿಮೆ. ಕ್ಯಾಂಟೀನ್ ಕೂಡ ಇದೆ. ಇದರಿಂದಾಗಿ ಕೆಲವೊಮ್ಮೆ ಸ್ವಲ್ಪ ಉಳಿತಾಯ ಮಾಡೋಕೆ ಸಾಧ್ಯ ಆಗುತ್ತೆ’ ಅಂತಾರೆ ಬೆಂಗಳೂರಿನ ವಿದ್ಯಾರ್ಥಿ ವೆಂಕಟ್ ರೆಡ್ಡಿ. ಕ್ಯಾಂಪಸ್‌ನಿಂದ ಕ್ಯಾಂಪಸ್‌ಗೆ ವಿದ್ಯಾರ್ಥಿಗಳ ಖರ್ಚು, ಜೀವನ ಶೈಲಿ ಬದಲಾಗುವುದರಿಂದ ಅವರಿಗೆ ಸಿಗೋ ಪಾಕೆಟ್ ಮನಿಯ ಮೊತ್ತವೂ ಭಿನ್ನವೇ.
ಕಾಸ್ಟ್ಲಿ ಕರೆನ್ಸಿ
ಹುಡುಗರು-ಹುಡುಗಿಯರು ಅನ್ನೋ ಭೇದವಿಲ್ಲದೇ ಕಾಲೇಜು ವಿದ್ಯಾರ್ಥಿಗಳಿಗಳಿಗೆಲ್ಲ ಮೊದಲ ಖರ್ಚು ಬರೋದೆಂದರೆ ಮೊಬೈಲ್ ರೀಚಾರ್ಜ್ ಮಾಡೋದು. ಎಲ್ಲರೂ ಸಾಕಷ್ಟು ಕಡಿಮೆ ಖರ್ಚು ಬರೋ ಸ್ಟೂಡೆಂಟ್ ಪ್ಲಾನ್ ಹಾಕಿಸಿಕೊಂಡಿದ್ದರೂ ಏನೇನೋ ವಿಷಯಕ್ಕೆ ಅತ್ತಿಂದಿತ್ತ ಫೋನ್ ಮಾಡಿದಾಗ ಇರುವ ಕರೆನ್ಸಿ ಎಲ್ಲ ಮುಗಿದೇಬಿಡುತ್ತದೆ. ಬೈಕೋ, ಸ್ಕೂಟಿಯೋ ಇಟ್ಟುಕೊಂಡವರಿಗೆ ಅದರ ಹೊಟ್ಟೆತುಂಬಿಸೋಕೆ ಇನ್ನೊಂದಷ್ಟು ಖರ್ಚು. ಬರ್ತ್‌ಡೇ ಬಂದರೆ ಅದೇ ದೊಡ್ಡ ಬ್ಲೇಡು. ವಾರಕ್ಕೊಮ್ಮೆ ಹೋಗುವ ಸಿನಿಮಾ, ಫಾಸ್ಟ್ ಫುಡ್ ಎಲ್ಲಾ ಮಾಮೂಲಿ ಬಿಡಿ.
ಗ್ರಾಮೀಣ ವಿದ್ಯಾರ್ಥಿಗಳಿಗೂ ಈ ಮೊಬೈಲ್ ಖರ್ಚು ಇದ್ದಿದ್ದೇ. ಆದರೆ ಪೇಟೆ ಹುಡುಗರಷ್ಟು ಬಿಂದಾಸ್ ಇವ್ರಲ್ಲ. ‘ನಮಗೂ ಮೊಬೈಲ್‌ಗೆ, ಬಸ್‌ಗೆ, ಅಪರೂಪಕ್ಕೊಮ್ಮೆ ಸಿನಿಮಾಗೆ ಖರ್ಚಾಗುತ್ತೆ. ಆದ್ರೆ ಫಾಸ್ಟ್ ಫುಡ್, ಕ್ಯಾಂಟೀನ್ ಖರ್ಚು ಎಲ್ಲಾ ಕಡಿಮೆ. ನಾವೆಲ್ಲಾ ಮಧ್ಯಾಹ್ನಕ್ಕೆ ಬಾಕ್ಸ್ ತರ್‍ತೀವಿ. ಸಂಜೆ ಕಾಲೇಜು ಬಿಟ್ಟ ತಕ್ಷಣ ಮನೆ ಸೇರೋದೇ ಮುಖ್ಯ ಆಗಿರೋವಾಗ ಇನ್ನೆಲ್ಲೋ ಸುತ್ತಾಡಿ ಸಮಯ ಕಳೆಯೋಕಾಗಲ್ಲ’ ಅಂತಾರೆ ಸಾಗರದ ಪದವಿ ವಿದ್ಯಾರ್ಥಿನಿ ಪ್ರಿಯಾ. ‘ಏನಿದ್ರೂ ಬಟ್ಟೆ, ಸ್ಲಿಪ್ಪರ್‍ಸ್, ಕಾಸ್ಮೆಟಿಕ್ಸ್‌ಗೆ ಹುಡ್ಗೀರು ಖರ್ಚು ಮಾಡೇ ಮಾಡ್ತಾರೆ’ ಅಂತಾರೆ ತುಮಕೂರಿನ ಸ್ನಾತಕೋತ್ತರ ವಿದ್ಯಾರ್ಥಿನಿ ಉಷಾ ಹೆಗ್ಡೆ.
‘ಬರೇ ತಿನ್ನೋದು, ಬಟ್ಟೆಗಳಿಗಷ್ಟೇ ಖರ್ಚಾಗೋದಿಲ್ಲ. ಚಟಗಳಿಗೂ ಖರ್ಚು ಮಾಡೋ ಹುಡುಗರಿದ್ದಾರೆ’ ಅಂತ ಪಿಸುಗುಡುತ್ತಾರೆ ಕೆಲವು ಕ್ಯಾಂಪಸ್‌ಗಳ ಹುಡುಗಿಯರು. ಪ್ರತಿ ಎರಡು ಗಂಟೆಗೊಮ್ಮೆ ಸಿಗರೇಟು ಸೇದೋರು, ವಾರಕ್ಕೊಮ್ಮೆ ಪಾರ್ಟಿ ಮಾಡೋರೂ ಉಂಟು. ಜೊತೆಗೆ ಐಪಿಎಲ್ಲೋ, ಕ್ರಿಕೆಟ್ ವಿಶ್ವಕಪ್ಪೋ ಹೀಗೆ ಕ್ರಿಕೆಟ್ ಸೀಸನ್‌ಗಳು ಬಂದರಂತೂ ಕೇಳೋದೇ ಬೇಡ. ಅದಕ್ಕೂ ಬೆಟ್ ಕಟ್ಟೋಕೆ ದುಡ್ಡು ಬೇಕು. ಇದಕ್ಕೆಲ್ಲಾ ಹೇಗೆ ಹಣ ಹೊಂದಿಸ್ಕೋತಾರಪ್ಪಾ? ಕೇಳಿದ್ರೆ ಆ ಹುಡುಗರೂ ‘ಹೇಗೋ ಮ್ಯಾನೇಜ್ ಮಾಡ್ತೀವಿ’ ಅಂತ ನುಣುಚಿಕೊಳ್ತಾರೆ. ಆದ್ರೂ ಇವರ ಅಂತರಂಗ ಕೆದಕಿದ್ರೆ, ‘ಕಷ್ಟ ಕಣ್ರೀ’ ಅಂತಾರೆ…
ಮನಿ ಮ್ಯಾನೇಜ್‌ಮೆಂಟ್
ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೂ ತಾವಾಗಿ ಹಣ ಸಂಪಾದಿಸುವ ಮುನ್ನವೇ ಮನಿ ಮ್ಯಾನೇಜ್‌ಮೆಂಟ್‌ನ ಪಾಠ ಹೇಳಿಕೊಡುವುದೇ ಈ ಪಾಕೆಟ್ ಮನಿ. ಕೆಲವು ವಿದ್ಯಾರ್ಥಿಗಳು ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋ ನಿಯಮ ಪಾಲಿಸಿದ್ರೆ ಇಲ್ಲೂ ಹಾಸಿಗೆಯಿಂದ ಹೊರಗೆ ಕಾಲು ಚಾಚಿ ಸಾಲಸೋಲ ಮಾಡಿಕೊಂಡು ಸುಸ್ತಾಗುವವರೂ ಇದ್ದಾರೆ. ಜಾಣರಾಗಿ ಅಲ್ಲಿಂದಲ್ಲಿಗೆ ವೆಚ್ಚ ಮಾಡುತ್ತಾ ತಮ್ಮ ಹಿತವನ್ನೂ, ಪರ್ಸ್‌ನ ಹಿತವನ್ನೂ ನೋಡಿಕೊಂಡು ಉಳಿತಾಯ ಮಾಡುವವರೂ ಇದ್ದಾರೆ. ಪುತ್ತೂರಿನ ವಿದ್ಯಾರ್ಥಿನಿ ಸ್ವಾತಿ ಇಂಥ ಜಾಣರ ಗುಂಪಿಗೆ ಸೇರಿದವರು. ಅವರಂತಾರೆ, ‘ನಾನು ವಾರಕ್ಕೊಮ್ಮೆ ಹಣ ತೆಗೆದುಕೊಳ್ಳುತ್ತೇನೆ, ಅದೂ ಬೇಕಿದ್ದರೆ ಮಾತ್ರ. ಅನಗತ್ಯವಾಗಿ ಏನೂ ಖರ್ಚು ಮಾಡೋದಿಲ್ಲ. ಆಗಿರೋ ಖರ್ಚನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆದಿಡ್ತೇನೆ .’
ಪಾಕೆಟ್ ಮನಿಗೇಕೆ ಮನೇಲಿ ಹಣ ಕೇಳ್ಬೇಕು ಅನ್ನುತ್ತಾ ತಾವೇ ದುಡಿಯುವ ಹುಡುಗರೂ ಇದ್ದಾರೆ. ಉತ್ತರಕನ್ನಡದ ಶಿರಸಿಯ ಆದರ್ಶ ಈ ಬಗೆಯವರು. ಇವರು ಪ್ರತೀ ಶನಿವಾರ, ಭಾನುವಾರಗಳಂದು ಮದುವೆ ಮನೆಗಳಲ್ಲಿ ಬಡಿಸುವ ಟೀಂಗೆ ಸೇರಿಕೊಂಡಿದ್ದಾರೆ. ಇದರಲ್ಲಿ ಬರುವ ಆದಾಯದಲ್ಲಿಯೇ ಇವರ ಎಲ್ಲ ಖರ್ಚೂ ನಡೆಯುತ್ತದೆ. ಮನೆಯಲ್ಲಿ ಕೇಳುವ ಪ್ರಮೇಯವೇ ಇಲ್ಲ.  ಎಲ್ಲೋ ಹಾಸ್ಟೆಲ್‌ಗಳಲ್ಲಿ, ರೂಮ್ ಮಾಡಿಕೊಂಡು ಇರುವವರಿಗೂ ಹಣದ ಬೆಲೆ ಚೆನ್ನಾಗಿಯೇ ಅರ್ಥವಾಗುತ್ತದೆ. ಪಾಕೆಟ್ ಖಾಲಿಯಾದಾಗ ಜೊತೆಗಿರುವ ಗೆಳೆಯನೋ ಗೆಳತಿಯೋ ಸಹಾಯ ಮಾಡಿದಾಗ ಮನುಷ್ಯತ್ವದ ಅರಿವೂ ಆಗುತ್ತದೆ.
ತಿಂಗಳಿಗಿಷ್ಟು ಅಥವಾ ವಾರಕ್ಕಿಷ್ಟು ಅಂತ ಹಣ ಕೊಟ್ಟರೆ ಅದನ್ನು ದಿನಕ್ಕಿಷ್ಟು ಅಂತ ಖರ್ಚು ಮಾಡೋದು ನಿಜಕ್ಕೂ ಕಷ್ಟ. ಆದರೆ ಇದನ್ನೂ ಪ್ಲಾನ್ ಮಾಡಿ ವೆಚ್ಚ ಮಾಡಲು ಕಲಿತವರು ನಾಳಿನ ಬದುಕಿಗೆ ಮನಿ ಮ್ಯಾನೇಜ್‌ಮೆಂಟ್ ಪಾಠ ಇಂದೇ ಕಲಿತಂತಾಗೋದೂ ನಿಜ.
———-
ನಾನು ಈಗ ಪಾರ್ಟ್ ಟೈಮ್ ವರ್ಕ್ ಮಾಡೋದ್ರಿಂದ ಮನೇಲಿ ಪಾಕೆಟ್ ಮನಿ ಕೇಳೋದಿಲ್ಲ. ಆದ್ರೆ ಮೊದಲೆಲ್ಲ ತಿಂಗಳಿಗೆ ಸುಮಾರು ೩೦೦೦ ರೂಪಾಯಿಯಷ್ಟು ಪಾಕೆಟ್ ಮನಿ ತಗೋತಿದ್ದೆ. ಗಾಡಿಗೆ ಪೆಟ್ರೋಲ್, ಮೊಬೈಲ್ ಕರೆನ್ಸಿ, ಮೇಕಪ್ ಸೆಟ್ ಹೀಗೆ ತಿಂಗಳಿಗೆ ೨೦೦೦ದಷ್ಟಾದ್ರೂ ಖರ್ಚಾಗುತ್ತೆ.
ಮೇಘಾ, ಪ್ರಥಮ ಎಂಸಿಜೆ, ತುಮಕೂರು ವಿವಿ
ನಾನೇ ನನ್ನ ಪಾಕೆಟ್ ಮನಿಯನ್ನ ದುಡಿದುಕೊಳ್ಳೋ ಬಗೆಗೆ ನನಗೆ ಹೆಮ್ಮೆ ಇದೆ. ವಾರಕ್ಕೊಮ್ಮೆ ಸಿನಿಮಾ ನೋಡೋದು, ಐಸ್ ಕ್ರೀಮ್ ತಿನ್ನೋದು, ಬಟ್ಟೆ, ಮೊಬೈಲ್ ಕರೆನ್ಸಿ ಹೀಗೆ ಬೇರೆ ಬೇರೆ ಖರ್ಚುಗಳಿಗೆ ದುಡ್ಡು ಬೇಕಾಗುತ್ತೆ. ನಾನೇ ಸಂಪಾದಿಸೋದ್ರಿಂದ ಇದನ್ನು ಮ್ಯಾನೇಜ್ ಮಾಡೋ ರೀತಿಯೂ ಚೆನ್ನಾಗಿಯೇ ತಿಳಿದಿದೆ.
ಆದರ್ಶ, ದ್ವಿತೀಯ ಬಿಕಾಂ, ಎಂಇಎಸ್ ಕಾಮರ್ಸ್ ಕಾಲೇಜು, ಶಿರಸಿ, ಉ.ಕ.
ಪಾಕೆಟ್ ಮನಿ ವಾರಕ್ಕೆ ೫೦೦ ರೂಪಾಯಿ ಕೊಡ್ತಾರೆ. ಪೆಟ್ರೋಲ್‌ಗೆ, ಫ್ರೆಂಡ್ಸ್ ಬರ್ತ್‌ಡೇ ಸೆಲೆಬ್ರೇಷನ್, ದಿನಕ್ಕೊಮ್ಮೆ  ಜ್ಯೂಸ್ ಕುಡಿಯೋದು, ಕ್ಯಾಂಟೀನ್ ಖರ್ಚು -ಹೀಗೆ ಹಣ ಬೇಕಾಗುತ್ತೆ. ಆದ್ರೂ ಇದ್ರಲ್ಲೇ ಸ್ವಲ್ಪ ಉಳಿಯೋದಿದೆ. ಎಕ್ಸ್‌ಟ್ರಾ ದುಡ್ಡು ಬೇಕಾದ್ರೆ ಅಮ್ಮನ್ನ ಕೇಳ್ತೇನೆ.
ವೆಂಕಟ್ ರೆಡ್ಡಿ, ಅಂತಿಮ ಬಿಎ, ನ್ಯಾಷನಲ್ ಕಾಲೇಜು, ಬೆಂಗಳೂರು.
ಕೆಲವ್ರು ಸುಮ್ ಸುಮ್ನೆ ಚಾಕೊಲೇಟ್ ತಗೊಳ್ಳೋಕೆ ಇತ್ಯಾದಿಗಳಿಗೆ ಹಣ ಖರ್ಚು ಮಾಡ್ತಾರೆ. ಆದ್ರೆ ಅನಗತ್ಯವಾಗಿ ದುಡ್ಡು ಖರ್ಚು ಮಾಡೋದು ತಪ್ಪು. ನಾವೂ ನಮ್ಮ ಭವಿಷ್ಯದ ಬಗ್ಗೆ ಗಮನ ಹರಿಸ್ಬೇಕು. ನಾನಂತೂ ಅಗತ್ಯಕ್ಕಿಂತ ಜಾಸ್ತಿ ಹಣ ಕೇಳೋದಕ್ಕೆ ಹೋಗೋದಿಲ್ಲ. ಹಣ ಜಾಸ್ತಿ ಇದ್ರೆ ಖರ್ಚು ಮಾಡಿ ಹೋಗ್ತದೆ, ಅದ್ಕೆ.
ಸ್ವಾತಿ ಮೈಕೆ, ಪ್ರಥಮ ಬಿಕಾಂ, ವಿವೇಕಾನಂದ ಕಾಲೇಜು, ಪುತ್ತೂರು.

ಎಸ್ಸೆಸ್ಸೆಲ್ಸಿ, ಪಿಯುಸಿಯವರಿಗೆಲ್ಲಾ ಪರೀಕ್ಷೆ ಮುಗೀತು. ಇನ್ನು ಎಕ್ಸಾಮ್ ಬರೆಯೋ ಸರದಿ ಡಿಗ್ರಿ ವಿದ್ಯಾರ್ಥಿಗಳದು. ಇವರಿಗೆಲ್ಲ ಈಗ ಸ್ಟಡಿ ಹಾಲಿಡೇಸ್. ತಿಂಗಳ ಕಾಲದ ಈ ರಜಾದಿನಗಳಿವೆಯಲ್ಲಾ, ಇವನ್ನು ಕಳೆಯೋದೇ ಭಾರೀ ಕಷ್ಟ ಕಣ್ರೀ… ಅತ್ತ ಓದೋಕೆ ಮನಸ್ಸಿಲ್ಲ, ಇತ್ತ ಮಜಾ ಮಾಡೋಕೆ ಯಾಕೋ ಪಾಪಪ್ರಜ್ಞೆ…
ಆದ್ರೂ, ಈ ಓದೋ ದಿನಗಳೆಂದರೆ ಅಂತಿಂಥವಲ್ಲ. ಇದಕ್ಕೂ ತಯಾರಿ ಮಾಡ್ಕೋಬೇಕು. ಪ್ರಾಜೆಕ್ಟ್, ಅಸೈನ್‌ಮೆಂಟ್ ಸಲ್ಲಿಸಬೇಕಾದವರೆಲ್ಲಾ ಕೊನೆಯ ಕ್ಷಣದ ಗಡಿಬಿಡಿ ಮುಗಿಸಿಕೊಂಡು ‘ಉಸ್ಸಪ್ಪಾ’ ಅನ್ನುತ್ತ ಕುಳಿತಾಗಲೇ ಇರುವೆ ಕಚ್ಚಿದಂತೆ ಚುಚ್ಚಿ ಎಬ್ಬಿಸುತ್ತದೆ ಪರೀಕ್ಷೆಯ ನೆನಪು. ಏಳು, ಲೈಬ್ರರಿಗೆ ಓಡು, ಗೆಳೆಯರು ತೆಗೆದುಕೊಂಡು ಹೋಗಿ ಉಳಿದ ಪುಸ್ತಕ ತಗೋ,  ಅವರಿವರ ಕೈಯಲ್ಲಿ ನೋಟ್ಸ್ ಕೇಳು, ಜೆರಾಕ್ಸ್ ಮಾಡು. ಓದೋಕೆ ಎಲ್ಲ ಸರಕು ಸಿಕ್ಕಮೇಲೆ ಎಲ್ಲವನ್ನೂ ಕಟ್ಟಿಕೊಂಡು ಮನೆಗೆ ನಡೆ.
ರಜಾ ಶುರುವಾಯ್ತಾ… ಈಗಿನಿಂದಲೇ ಓದೋಕೆ ಮನಸ್ಸಿಗೇಕೋ ಕಸಿವಿಸಿ. ಅಷ್ಟೊಂದು ದಿನಗಳಿವೆಯಲ್ಲ, ಬಿ ಕೂಲ್ ಮ್ಯಾನ್… ಅದಕ್ಕೇ ಮೊದಲೊಂದು ದಿನ ಗಡದ್ದು ನಿದ್ದೆ, ನಾಳೆಯಿಂದ ಓದೋದಕ್ಕೆ ಶುರು ಅಂತ ಪ್ಲಾನ್. ಮರುದಿನವೋ ಶುಕ್ರವಾರ ಬಂತಮ್ಮ.. ತುಂಬಾ ದಿನದಿಂದ ಕಾಯ್ತಿದ್ದ  ಆ ಫಿಲ್ಮ್  ರಿಲೀಸ್ ಇವತ್ತು. ಮಿಸ್ ಮಾಡೋಕಾಗುತ್ತಾ? ಛೆ ಛೆ… ಸರಿ, ಓದಿಗೆ ಚಕ್ಕರ್, ಮ್ಯಾಟನಿಗೆ ಹಾಜರ್.. ಸಿನಿಮಾ ಮುಗಿಸಿ, ಚಾಟ್ಸು, ಹರಟೆ ಎಲ್ಲಾ ಮುಗಿಸಿ ಬರುವಾಗ ಆ ದಿನ ಮಟಾಷ್. ಇನ್ನು  ಓದೋದೇನಿದ್ದರೂ ನಾಳೆ ಬಿಡಿ.
ಮರುದಿನ, ಉಳಿದಿರೋ ರಜಾ ದಿನಗಳಿಗೊಂದು ಟೈಂಟೇಬಲ್ ಹಾಕಿ ಪುಸ್ತಕ ಹಿಡಿದಾಗ ಯಾಕೋ ಬೋರು. ಯಾವುದೋ ಸ್ಟಡಿ ಮಟೀರಿಯಲ್ ಇಲ್ಲವೆಂಬ ನೆನಪು. ಛೆ, ಮತ್ತೆ ಗೆಳೆಯರಿಗೆಲ್ಲಾ ಒಂದು ರೌಂಡ್ ಕಾಲ್. ನಾಳೆಯ ದಿನಕ್ಕೆ ಅಪಾಯಿಂಟ್‌ಮೆಂಟ್ ಫಿಕ್ಸ್ ಆಯ್ತಪ್ಪಾ..
ಸರಿ, ಪುಸ್ತಕ ತರೋ ನೆಪದಲ್ಲಿ ಮತ್ತೆ ಗೆಳೆಯರ ಮನೆಗೆ ಅಲೆತ. ಮಧ್ಯಾಹ್ನವೇ ಮನೆಗೆ ಬಂದರೂ ಸಂಜೆಯಿಂದ ಕಾಡುವ ಐಪಿಎಲ್.. ಛೇ, ಓದುವುದಕ್ಕೆ ಅದೆಷ್ಟು ಅಡ್ಡಿಗಳು… ಈ ಮಧ್ಯೆ ಗರ್ಲ್‌ಫ್ರೆಂಡೋ ಬಾಯ್‌ಫ್ರೆಂಡೋ ಇದ್ದರಂತೂ ಅವರನ್ನೂ ಭೇಟಿ ಮಾಡಿಕೊಳ್ಳುವುದೋ, ಮಾತಾಡುವುದೋ ಮಾಡದಿದ್ದರೆ ಬಲು ಬೇಜಾರ್ ಕಣೊ ಹೋಯೀ..
ಈ ಮಧ್ಯೆ ಮನೆಯಲ್ಲೊಂದು ವಿಚಾರಣೆ. ‘ಏನು, ಓದ್ತಾ ಇದ್ದೀಯಾ? ಬರೀ ಸುತ್ತಾಡೋದೇ ಕಾಣ್ತಿದೆ…?’ ‘ಇಲ್ಲಪ್ಪಾ, ಅದೂ…’ ಅಂತೇನೋ ಸಮಜಾಯಿಷಿ. ಹುಡ್ಗೀರಿಗೋ, ಸುತ್ತಾಟದ ಸಮಸ್ಯೆ ಇಲ್ಲ. ಮನೆಯಲ್ಲಿ ಪುಸ್ತಕ ಬಿಡಿಸಿಟ್ಟೇ ಹಗಲಗನಸು ಕಂಡೇ ಟೈಂಪಾಸ್ ಮಾಡಬಲ್ಲ ಜಾಣೆಯರಿವರು. ಅಲ್ಲೊಮ್ಮೆ ಇಲ್ಲೊಮ್ಮೆ ಟಿವಿ, ಫೋನ್, ಮೆಸೇಜು, ನೆಟ್ಟು-ಚಾಟು, ಕಿವಿಗೆ ಸಿಕ್ಕಿಸಿಕೊಂಡ ಎಫೆಂ, ಸಿಕ್ಕರೊಂದು ಕಾದಂಬರಿ, ಬೋರ್ ಆದರೆ ಅಮ್ಮನ ಜೊತೆಗಿಷ್ಟು ಹರಟೆ… ಇಷ್ಟಾದರೆ ಬಿಂದಾಸ್.
ಇಷ್ಟೊಂದು ಬಿಝಿ ಶೆಡ್ಯೂಲ್‌ನಲ್ಲಿ ಸ್ಟಡಿ ಲೀವ್ ಕಳೆದೇ ಹೋಯಿತಲ್ಲಾ, ಛೇ ಇನ್ನು ನಾಲ್ಕೇ ದಿನ. ಯಾರ್‍ಯಾರು ಎಷ್ಟೆಷ್ಟು ಓದಿದ್ರೋ? ಎಲ್ಲರಿಗೂ ಒಂದು ಕಾಲ್… ಹಾ, ಸುಮೀ ರಿವೈಸ್ ಮಾಡ್ತಿದ್ದಾಳಂತೆ, ಬಿಡು ಅವ್ಳು ಕುಡುಮಿ, ಓದೋದು ಬಿಟ್ರೆ ಬೇರೇನೂ ಗೊತ್ತಿಲ್ಲದ ಪ್ರಾಣಿ ಅದು. ಚಕ್ರಿ ಈಗಷ್ಟೇ ಸೀರಿಯಸ್ಸಾಗಿ ಓದೋಕೆ ಕೂತಿದ್ದಾನಂತೆ. ಪ್ರಿಯಾಗೆ ಇನ್ನೊಂದೇ ಸಬ್ಜೆಕ್ಟ್ ಬಾಕಿ ಅಂತೆ. ಓಹ್, ನಾನು ಇನ್ನಾದ್ರೂ ಓದೋಕೆ ಶುರು ಮಾಡ್ಬೇಕು.
ಇಷ್ಟೊಂದು ಗಟ್ಟಿ ಮನಸ್ಸು ಮಾಡಿ ಓದೋಕೆ ಕೂತ ಮೇಲೂ ಒಳಗೊಳಗೇ ಯಾಕೋ ಡೌಟು, ಈಗ್ಲೇ ಓದಿದ್ರೆ ಮರೆತು ಹೋಗೋದಿಲ್ವಾ? ಏನಿದ್ರೂ ಎಕ್ಸಾಂ ಹಿಂದಿನ ದಿನ ಓದಿದ್ರೇ ಎಫೆಕ್ಟ್ ಜಾಸ್ತಿ. ಹೌದು, ಈಗ ಚೆನ್ನಾಗಿ ಒಂದು ನಿದ್ದೆ ಹೊಡೆದ್ರೆ ಹೇಗೆ? ನಿದ್ದೆಯಿಂದ ಏಳುವಾಗ ಕ್ಯಾಂಪಸ್ ಹುಡುಗರ ಬಾಯಲ್ಲಿ ಹುಟ್ಟಿದ ವಚನವೊಂದರ ನೆನಪು,
ಓದದೇ ಪಾಸಾಗುವವ ರೂಢಿಯೊಳಗುತ್ತಮ
ಓದಿ ಪಾಸಾಗುವವ ಮಧ್ಯಮ
ಅಧಮ ತಾನೋದಿಯೂ ಪಾಸಾಗದವ..
ಹೌದಲ್ಲ, ಮೊದಲನೇ ಕೆಟಗರಿಗೆ ಬೀಳೋರು ಎಲ್ಲಾದ್ರೂ ಓದೋದುಂಟಾ, ಛೆ ಛೇ…

ಎಲ್ಲರಿಗೂ ಒಂದು ಕಾಲವಾದರೆ ಇವರಿಗೆ ಅವರದ್ದೇ ಟೈಮು. ಬಾಲ್ಯದಲ್ಲಿ ಪ್ರತಿಭೆ ತೋರಿಸಿ ಒಂದೊಂದು ಕ್ಷೇತ್ರದಲ್ಲಿ ಗುರುತಿಸಿಕೊಳ್ಳೋರ ಮುಂದೆ ಇವರೆಲ್ಲಾ ಲೇಟ್ ಲತೀಫ್‌ಗಳು. ಆದರೆ ಒಂದೊಮ್ಮೆ ಫಾರ್ಮ್‌ಗೆ ಬಂದುಬಿಟ್ಟರಾ, ಮತ್ತೆ ಇವರನ್ನು ತಡಯೋರು ಯಾರೂ ಇಲ್ಲ!
——————-
ಪಕ್ಕದ್ಮನೆಯ ಶ್ರಾವ್ಯ ಇವನದೇ ವಯಸ್ಸಿನವಳು, ಆಗಲೇ ಟಿವಿಯಲ್ಲಿ ಕಾಣಿಸ್ಕೊಂಡಾಯ್ತು. ನಮ್ ಭಾವನೋರ ಮಗನೂ ಓದೋದ್ರಲ್ಲೂ ಮುಂದೆ, ಸಂಗೀತದಲ್ಲೂ ಇದ್ದಾನೆ. ಛೇ, ಇವನ್ಯಾಕೆ ಹೀಗೆ? ಓದಿನಲ್ಲೂ ಸಾಧಾರಣ, ಎಕ್ಸ್‌ಟ್ರಾ ಕರಿಕ್ಯುಲರ್ ಆಕ್ಟಿವಿಟೀಸ್ ಕೂಡ ಏನೂ ಇಲ್ಲ. ಏನಪ್ಪಾ ಮಾಡೋದು…
ಅದೇಕೋ ಏನೋ ಆದಷ್ಟು ಬೇಗ ಮಕ್ಕಳ ಪ್ರತಿಭೆಯನ್ನು ಹುಡುಕಿ ಹೊರತೆಗೆವ ಹಂಬಲ ನಮಗೆ. ನಮ್ಮ ಮಕ್ಕಳಲ್ಲಷ್ಟೇ ಅಲ್ಲ, ಇನ್ನೊಬ್ಬರ ಮಕ್ಕಳ ಬಗೆಗೂ  ‘ಏನು ಇವ್ನ ಸ್ಪೆಷಲ್ ಟ್ಯಾಲೆಂಟು?’ ಎಂಬ ಪ್ರಶ್ನೆ ಕೇಳಿಯೇಬಿಡುತ್ತೇವೆ. ಮಾಧ್ಯಮಗಳು ಚೆಲ್ಲುವ ಬೆಳಕಿನಿಂದಲೋ ಅಥವಾ ಹೆತ್ತವರು ನೀಡುವ ತರಬೇತಿಯಿಂದಲೋ, ಅಂತೂ ಸುತ್ತೆಲ್ಲ ಚೈಲ್ಡ್ ಪ್ರಾಡಿಜಿಗಳನ್ನೇ ನೋಡುತ್ತಿರುವಾಗ ಪ್ರತಿಯೊಂದು ಮಗುವೂ ಯಾವುದಾದರೊಂದು ಪ್ರತಿಭೆ ಪ್ರದರ್ಶಿಸಲಿ ಅನ್ನಿಸುವುದು ಸಹಜ. ಆದರೆ, ಟ್ಯಾಲೆಂಟ್‌ಗಾಗಿ ಹಂಬಲಿಸುವ ಈ ಹೊತ್ತಿನಲ್ಲೇ ಎಲ್ಲರೂ ಬಾಲ್ಯದಲ್ಲಿಯೇ ತಮ್ಮ ಪ್ರತಿಭೆ ಪ್ರದರ್ಶಿಸುವುದಿಲ್ಲವೆಂಬ ಸತ್ಯ ಮನಗಾಣದೇ ಹೋಗುವುದು ಮಾತ್ರ ದುರಂತ. ಅದೆಷ್ಟೋ ಮಕ್ಕಳು ಎಳೆಯದರಲ್ಲಿ ಸಾಮಾನ್ಯರಾಗಿದ್ದರೂ ಬೆಳೆಬೆಳೆಯುತ್ತ  ತಮ್ಮ ಹೆಚ್ಚುಗಾರಿಕೆಯನ್ನು ಕಂಡುಕೊಂಡು ಮಿಂಚಿಬಿಡಬಹುದು, ಆ ಕ್ಷೇತ್ರದಲ್ಲಿ ಹಿಂದಿನಿಂದಲೂ ಇದ್ದವರನ್ನು, ತನ್ನ ಸಮಕಾಲೀನರೆಲ್ಲರನ್ನೂ ಮೀರಿಸಿಬಿಡಬಹುದು. ಇವರೆಲ್ಲ ನಿಧಾನವಾಗಿ ಅವರಳುವ ಹೂಗಳು ಅಥವಾ ‘ಲೇಟ್ ಬ್ಲೂಮರ್‍ಸ್’.
ನಮ್ಮೊಳಗಿನ ಅಸಾಮಾನ್ಯರು
ಶಾಲೆಯಲ್ಲಿ ಓದುವಾಗ ವಿಶೇಷವಾಗಿ ಎದ್ದುಕಾಣದ ಮಕ್ಕಳಿವರು. ಹೆತ್ತವರಿಗೂ, ಅಧ್ಯಾಪಕರಿಗೂ ಇವರ ಸಾಧನೆ ತೃಪ್ತಿಕರವೇನೂ ಆಗಿರುವುದಿಲ್ಲ.  ‘ಕೆಲವೊಮ್ಮೆ ಈ ಮಕ್ಕಳು ಉಳಿದ ಮಕ್ಕಳಿಗಿಂತ ಎಲ್ಲಾ ವಿಷಯದಲ್ಲೂ ಕಳಪೆ ಸಾಧನೆ ತೋರಿಸುವುದಿದೆ. ಆಗೆಲ್ಲ ಮುಂದೆ ಇವರು ಯಾವ ಕ್ಷೇತ್ರದಲ್ಲಿ ಏನನ್ನು ಸಾಸುತ್ತಾರೋ ಅನ್ನುವುದರ ಬಗ್ಗೆ ಕಿಂಚಿತ್ ಸೂಚನೆಯೂ ದೊರಕುವುದಿಲ್ಲ’ ಅನ್ನುತ್ತದೆ ಮನಃಶಾಸ್ತ್ರೀಯ ವಿವರಣೆ. ವ್ಯಕ್ತಿಯಲ್ಲಿ ಒಂದು ಪ್ರತಿಭೆ ಅಥವಾ ಸಾಮರ್ಥ್ಯ ಹುಟ್ಟಿನಿಂದಲೇ ಇರುತ್ತದೆ. ಆದರೆ ಅದು ಬೆಳಕಿಗೆ ಬರುವುದು ಬೇರೆ ಬೇರೆ ವ್ಯಕ್ತಿಗಳ ಭಿನ್ನ ವಯೋಮಾನದಲ್ಲಿ. ವ್ಯಕ್ತಿ ಇದನ್ನು ಕಂಡುಕೊಳ್ಳುವುದೇ ತಡವಾಗಬಹುದು ಅಥವಾ ಇನ್ನಾರೋ ಆತನ ಸಾಮರ್ಥ್ಯವನ್ನು ಗುರುತಿಸಿ ಬೆಳಕಿಗೆ ತರುವುದಕ್ಕೆ ಅದೆಷ್ಟೋ ದಿನಗಳು ಬೇಕಾಗಬಹುದು.
‘ಮಗುವಿನಲ್ಲಿ ಇರುವ ಪ್ರತಿಭೆ ಆರಂಭದ ಹಂತದಲ್ಲಿ ವ್ಯಕ್ತವಾಗದೇ ಕ್ರಮೇಣ ಸ್ಪಷ್ಟವಾಗುವ ರೀತಿಯಿದು. ಟ್ಯಾಲೆಂಟ್ ಅರಳುವುದಕ್ಕೆ ಬೇಕಾದ ಪೂರಕ ವಾತಾವರಣ, ಅವಕಾಶಗಳು ವ್ಯಕ್ತಿಗೆ ಸಿಕ್ಕಿಲ್ಲದೇ ಇರುವುದೂ ಇದಕ್ಕೆ ಕಾರಣವಿರಬಹುದು’ ಅನ್ನುತ್ತಾರೆ ಮನಃಶಾಸ್ತ್ರಜ್ಞೆ ಡಾ| ಲತಾ. ಚಿಕ್ಕಂದಿನಿಂದ ಚೆಸ್ ಮಣೆಯನ್ನೇ ನೋಡಿರದ ಬಾಲೆಯೊಬ್ಬಳು ತನ್ನ ಹದಿನೈದನೇ ವಯಸ್ಸಿಗೆ ಚೆಸ್ ಆಟದ ಪರಿಚಯ ಪಡೆದು ಅದರಲ್ಲೇ ಆಡಿ ಜಗದ್ವಿಖ್ಯಾತಳಾದರೆ ಅದಕ್ಕೆ ಪರಿಸರದ ಮಿತಿಯೇ ಕಾರಣ.
ತನ್ನ ಸಾಮರ್ಥ್ಯವನ್ನು ಮೊದಲಿನಿಂದಲೇ ಒರೆಗೆ ಹಚ್ಚಿದ್ದರೂ ಜಗತ್ತಿನ ಗಮನಕ್ಕೆ ಬರುವಲ್ಲಿ ತಡವಾಗಿ ಸಾಮಾಜಿಕ ಜೀವನದಲ್ಲಿ ನಿಧಾನವಾಗಿ ‘ಯಶಸ್ಸು’ ಗಳಿಸಿದವರನ್ನೂ ಲೇಟ್ ಬ್ಲೂಮರ್‍ಸ್ ಅನ್ನುವುದುಂಟು. ಬಾಲ್ಯದಿಂದಲೇ ಅಭಿನಯದ ಹುಚ್ಚು ಹೊಂದಿದ್ದ ಅಮಿತಾಭ್ ಬಚ್ಚನ್ ನಟನಾಗಿ ಖ್ಯಾತರಾದದ್ದು ೩೦ರ ವಯಸ್ಸಿನಲ್ಲಿ. ಇತರ ಮಕ್ಕಳೆಲ್ಲಾ ಓದಿನಲ್ಲಿ ಆಸಕ್ತಿ ತೋರುವಾಗ ಅದನ್ನೆಲ್ಲವನ್ನೂ ಬಿಟ್ಟು ಹೋಗಿ, ಇಪ್ಪತ್ತರ ವಯಸ್ಸಿನ ಬಳಿಕ ಇದ್ದಕ್ಕಿದ್ದಂತೆ ಓದಿನಲ್ಲಿ ಆಸಕ್ತಿ ಮೂಡಿ ಬದುಕಿನಲ್ಲಿ ಸ್ಪಷ್ಟ ನೆಲೆ ಕಂಡುಕೊಳ್ಳುವ ಅನೇಕರನ್ನೂ ನಾವು ನೋಡಿರುತ್ತೇವೆ. ಇವರೂ ಸೇರುವುದು ಇದೇ ಕೆಟಗರಿಗೆ. ಬದುಕಿನ ಉತ್ತರಾರ್ಧದಲ್ಲೆಲ್ಲೋ ತನ್ನ ಪ್ರತಿಭೆಯನ್ನು ಕಂಡುಕೊಂಡು ಅದರಲ್ಲಿ ವಿಶೇಷವಾದುದನ್ನು ಸಾಸಿದವರೂ ಈ ಬಗೆಯವರೇ. ಸೆಲೆಬ್ರಟಿ ಲೇಟ್ ಬ್ಲೂಮರ್‍ಸ್
ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ಗೆ ಬಾಲ್ಯದಲ್ಲಿ ಸುಲಲಿತವಾಗಿ ಮಾತಾಡುವುದೇ ಕಷ್ಟವಾಗುತ್ತಿತ್ತು. ಕ್ರಮೇಣ ಆತ ತನ್ನ ಮಾತಿನ ಸಮಸ್ಯೆಯನ್ನು ಮೀರಿನಿಂತು ಅಗ್ರಮಾನ್ಯ ವಿಜ್ಞಾನಿಯಾದ. ಇನ್ನೊಬ್ಬ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಕೂಡ ಓದಿನಲ್ಲಿ ಆಸಕ್ತಿ ತೋರಿಸದೆ, ತನ್ನ ಅತಿಯಾದ ಚಟುವಟಿಕೆಯಿಂದಾಗಿಯೇ ಶಾಲೆಯಿಂದ ಹೊರಹಾಕಲ್ಪಟ್ಟಿದ್ದ. ಕವಿ ಡಬ್ಲ್ಯ.ಬಿ.ಯೇಟ್ಸ್ , ಲೇಖಕ ಮಾರ್ಕ್ ಟ್ವೈನ್ ಮೊದಲಾದವರೂ ಓದಿನಲ್ಲಿ  ಆಸಕ್ತಿ ಕಂಡುಕೊಂಡುದು ತಡವಾಗಿಯೇ. ಖ್ಯಾತ ಇಂಗ್ಲಿಷ್ ಲೇಖಕ ಜೋಸೆಫ್ ಕಾನ್ರಾಡ್‌ಗೆ ತನ್ನ ೨೧ನೆಯ ವಯಸ್ಸಿನವರೆಗೂ ಒಂದೇ ಒಂದು ಇಂಗ್ಲಿಷ್ ಶಬ್ದವನ್ನೂ ಮಾತಾಡಲು ಬರುತ್ತಿರಲಿಲ್ಲ. ೩೨ನೇ ವಯಸ್ಸಿನಲ್ಲಿ ಬರೆಯುವುದಕ್ಕಾರಂಭಿಸಿದ ಈತನ ಪುಸ್ತಕಗಳು ಪ್ರಕಟವಾದದ್ದು ೩೭ನೇ ವಯಸ್ಸಿನಲ್ಲಿ. ಈತನಂತೆಯೇ ೪೦ರ ಹರೆಯದ ನಂತರ ಇದ್ದಕ್ಕಿದ್ದಂತೆ ಬರೆಯುವ ಆಸಕ್ತಿ ಕಂಡುಕೊಂಡು ಖ್ಯಾತರಾದ ಭಾರತೀಯರು, ಕನ್ನಡಿಗರು ಅದೆಷ್ಟೋ ಜನ.
ಚಿತ್ರ, ಸಂಗೀತ ಜಗತ್ತಿನಲ್ಲೆಲ್ಲ ವ್ಯಕ್ತಿ ಮೊದಲೇ ತನ್ನ ಪ್ರತಿಭೆಯನ್ನು ತಾನು ಗುರುತಿಸಿಕೊಂಡಿದ್ದರೂ ಜಗತ್ತು ಅದನ್ನು ಗುರುತಿಸುವ ‘ಬ್ರೇಕ್’ಗಾಗಿ ಕಾಯಲೇಬೇಕಾಗುತ್ತದೆ. ಅದೆಷ್ಟೋ ಚಿತ್ರ ನಿರ್ದೇಶಕರು ತಮ್ಮ ಇಪ್ಪತ್ತರ ವಯಸ್ಸಿನಲ್ಲೇ ನಿರ್ದೇಶನಕ್ಕಿಳಿದರೂ ಯಶಸ್ವೀ ನಿರ್ದೇಶಕರಾಗಿ ಗುರುತಿಸಲು ನಲುವತ್ತರ ವಯಸ್ಸಿನವರೆಗೂ ಕಾಯಬೇಕಾಗುತ್ತದೆ.  ನಿರ್ದೇಶಕ ಗುರುದತ್ ಮೊದಲಿನಿಂದಲೂ ಒಳ್ಳೆಯ ನಿರ್ದೇಶಕ ಎನಿಸಿಕೊಂಡಿದ್ದರೂ ‘ಕಾಗಜ್ ಕೆ ಫೂಲ್’ ಮತ್ತು ‘ಪ್ಯಾಸಾ’ ಮಾಡುವವರೆಗೆ ಅವರನ್ನು ‘ಜೀನಿಯಸ್’ ಅಂದವರಿರಲಿಲ್ಲ. ನಟಿ ವಿದ್ಯಾ ಬಾಲನ್ ಕೂಡ ‘ಪರಿಣೀತಾ’ದಿಂದ ಹೆಸರುಗಳಿಸಿದ್ದು ಸಾಮಾನ್ಯವಾಗಿ ನಾಯಕನಟಿಯರು ತರೆಮರೆಗೆ ಸರಿಯುವ ವಯಸ್ಸಿನಲ್ಲಿ!
ತಡವಾದರೇನಂತೆ ನಷ್ಟವಿಲ್ಲ…
ಈ ಲೇಟ್ ಬ್ಲೂಮರ್‌ಗಳೆಲ್ಲ ಹೊರಜಗತ್ತಿಗೆ ತಮ್ಮ ಶಕ್ತಿಯನ್ನು ತೋರಿಸುವುದು ನಿಧಾನವಾಗಿಯೇ ಇರಬಹುದು. ಆದರೆ, ಮುಂಚಿತವಾಗಿಯೇ ಪ್ರತಿಭೆ ತೋರಿ ಸುಮ್ಮನಾಗುವ ಉಳಿದವರಿಗಿಂತ ಇವರು ಕಡಿಮೆಯೇನೂ ಅಲ್ಲ. ಆವರೆಗಿನ ಬದುಕು ಇವರಿಗೆ ಅದೆಷ್ಟೋ ಪಾಠಗಳನ್ನು ಹೇಳಿಕೊಟ್ಟಿರುತ್ತದೆ, ಉಳಿದವರಿಗಿಂತ ಹೆಚ್ಚಿನ ತಾಲೀಮು ಅಷ್ಟರಲ್ಲೇ ಸಿಕ್ಕಿರುತ್ತದೆ. ಆದ್ದರಿಂದ ಇವರಿಂದ ಹೊರಬರುವ ಎಲ್ಲವೂ ಗುಣಾತ್ಮಕವಾಗಿ ಹೆಚ್ಚು ಶ್ರೇಷ್ಠವಾಗಿರುತ್ತದೆ ಅನ್ನುವುದೂ ಸತ್ಯ. ನಿಜಕ್ಕಾದರೆ ಮಾನಸಿಕ, ಭಾವನಾತ್ಮಕ ಪಕ್ವತೆ ಬಂದಾಗಲೇ ವ್ಯಕ್ತಿ ತನ್ನ ಸಾಮರ್ಥ್ಯದ ಪೂರ್ಣ ಪ್ರಯೋಜನ ಪಡೆಯುವುದು. ಆದ್ದರಿಂದಲೇ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ತಾಳ್ಮೆಯಿಂದ ಕಾಯುವುದೇ ಸುಖ. ಸುಮ್ಮನೇ ಕಾಯನ್ನು ಹಿಚುಕಿ ಹಣ್ಣಾಗಿಸುವ ಬಲವಂತವೂ ಬೇಡ. ಪ್ರತಿಭೆಗಾಗಿ ನಿರೀಕ್ಷಿಸಿ ಕೊರಗಿ ಸಂತಾಪ ಪಡುವುದೂ ಬೇಡ. ಹೂವು ಅರಳಲಿ ಅದರಷ್ಟಕೆ ಸುಮ್ಮನೆ, ಅಲ್ಲವೇ?
———-
ಖ್ಯಾತ ಮನಃಶಾಸ್ತ್ರಜ್ಞ ಎರಿಕ್ ಎರಿಕ್‌ಸನ್ ಪ್ರಕಾರ ಎಲ್ಲರೂ ಬದುಕಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ಕ್ರಿಯೇಟಿವ್ ಆಗಿರುತ್ತಾರೆ. ಯಾರ್‍ಯಾರು ಯಾವ್ಯಾವ ವಯಸ್ಸಿನಲ್ಲಿ ಕ್ರಿಯೇಟಿವ್ ಆಗಿರುತ್ತಾರೋ ಆ ಸಂದರ್ಭದಲ್ಲಿ ವಿಶೇಷವಾಗಿ ಗುರುತಿಸಿಕೊಳ್ಳಬಹುದು. ಬದುಕಿನ ಉತ್ತರಾರ್ಧದಲ್ಲೂ ಹಿಂದೆ ತಾನೇನೂ ಸಾಸಿಲ್ಲ ಎಂಬ ಎಚ್ಚರಿಕೆಯಲ್ಲಿ ಹಟದಿಂದ, ಬದ್ಧತೆಯಿಂದ ಸಾಸುವವರೂ ಇದ್ದಾರೆ. ಇದು ಅವರಿಗೆ ಸಮಗ್ರತೆಯ ಭಾವವನ್ನು ಕೊಡುತ್ತದೆ. ಏನೂ ಸಾಧ್ಯವಾಗದಿದ್ದರೆ ಹತಾಶರಾಗುತ್ತಾರೆ.
-ಡಾ. ಕೆ.ಎಸ್.ಲತಾ, ಅಸಸಿಯೇಟ್ ಪ್ರೊಫೆಸರ್, ಕೆಎಂಸಿ, ಮಣಿಪಾಲ.

ನಿವೃತ್ತಿಯ ಹಂತದಲ್ಲಿರೋ ಬಾಸ್. ನಲುವತ್ತೈದರ ನಡುಹರೆಯದಲ್ಲಿರೋ ಮ್ಯಾನೇಜರ್. ಇಪ್ಪತ್ತೈದರ ಹೊಸ ಉದ್ಯೋಗಿ. ವಯಸ್ಸಿನಲ್ಲಿ  ಇವರು ಮೂವರದೂ ಒಂದೊಂದು ಜನರೇಷನ್. ಕೆಲಸದ ರೀತಿಯಲ್ಲಿಯೂ ಇವರದು ಒಂದೊಂದು ಸ್ಟೈಲಾ? ಇವರು ಮೂವರೂ ಒಟ್ಟಿಗೇ ಕೆಲಸ ಮಾಡೋ ಹಾಗಾದ್ರೆ ಹೇಗಿರುತ್ತೆ?

ಮೀಟಿಂಗ್ ಮುಗೀತು. ಸಿಗರೇಟ್ ಸೇದಲೆಂದು ಹೊರಬಂದ ಅನೂಪ್‌ನ ಮನತುಂಬ ಅಸಮಾಧಾನದ ಹೊಗೆ. ಸಿಗರೇಟಿನ ಹೊಗೆಯೊಂದಿಗೇ ಅಸಮಾಧಾನವನ್ನೂ ಗೆಳೆಯ ಸಾತ್ವಿಕ್ ಜೊತೆ ಹಂಚಿಕೊಂಡ. ಮುಂದಿನ ಪ್ರಾಜೆಕ್ಟ್ ಬಗೆಗೆ ಪ್ಲಾನ್ ಮಾಡಲು ಕರೆದಿದ್ದ ಮೀಟಿಂಗ್‌ನಲ್ಲಿ  ಟೀಂ ಲೀಡರ್‌ಗೆ ಅನೂಪ್‌ನ ಐಡಿಯಾ ಯಾಕೋ ಇಷ್ಟವಾಗಿರಲಿಲ್ಲ. ಅದಕ್ಕೇ ಅವನಲ್ಲಿ ಧುಸುಮುಸು. ‘ನೋಡೋಣ, ಸದ್ಯಕ್ಕೆ ಸುಮ್ನಿರು. ನಿಂಗೂ ಪ್ರೊಮೋಷನ್ ಆಗಿ ನೀನೂ ಟೀಮ್ ಲೀಡರ್ ಆಗ್ತೀಯಲ್ಲಾ, ಆಗ ನಿನ್ನ ಐಡಿಯಾಗೆ ಬೆಲೆ ಸಿಗುತ್ತೆ, ನೋಡ್ತಿರು’ ಅಂದ ಸಾತ್ವಿಕ್.
ಹೀಗೆ ಮುನಿಸಿಕೊಂಡ ಅನೂಪ್‌ನ ಹಾಗೆಯೇ ಅದೆಷ್ಟು ಜನ ತಮ್ಮ ಕಚೇರಿಗಳಲ್ಲಿ ಮುನಿಸಿಕೊಳ್ಳುತ್ತಾರೋ. ಇವರೆಲ್ಲರ ಅಸಮಾಧಾನ ರಜಾ ಕೊಡದಿರುವ, ಸಂಬಳ ಹೆಚ್ಚು ಮಾಡದಿರುವ ಬಾಸ್‌ನ ಮೇಲಲ್ಲ. ತಮ್ಮ ಜೊತೆಯೇ ಕೆಲಸ ಮಾಡುವ ಸಹೋದ್ಯೋಗಿಗಳ ಮೇಲೆ, ತನಗೆ ಹೊಂದಿಕೆಯಾಗದಿರುವ ಕೆಲಸದ ರೀತಿಯ ಮೇಲೆ. ಇದಕ್ಕೆ ಕಾರಣ, ಜನರೇಷನ್ ಗ್ಯಾಪ್.
ಎಲ್ಲಿದೆ ಅಂತರ?
ಮನೆಮನೆಯಲ್ಲೂ ಅಪ್ಪ-ಮಗನ ನಡುವೆ, ಅಮ್ಮ-ಮಗಳ ನಡುವೆ ತಲೆಮಾರುಗಳ ನಡುವಣ ಅಂತರ, ಘರ್ಷಣೆ ಆಗುವುದು ನಮಗೆ ಗೊತ್ತು. ಉದ್ಯೋಗದ ಸ್ಥಳದಲ್ಲೂ ಇದು ಇರುವುದುಂಟಾ? ಸೂಕ್ಷ್ಮವಾಗಿ ನೋಡಿದರೆ ಕಚೇರಿಗಳಲ್ಲೂ ಇದು ಗಮನಕ್ಕೆ ಬರುತ್ತದೆ. ಒಂದೇ ಕಚೇರಿಯಲ್ಲಿ ವಿವಿಧ ವಯೋಮಾನದ ಉದ್ಯೋಗಿಗಳು ಇರುವುದಂತೂ ಸಾಮಾನ್ಯ. ಇವರ ನಡುವೆ ವಯಸ್ಸಿನ ಕಾರಣಕ್ಕಾಗಿಯೇ ಯೋಚನೆ, ನಿಲವು, ವೇಗ, ವರ್ತನೆಗಳಲ್ಲಿ ಭಿನ್ನತೆಗಳು, ಆ ಮೂಲಕ ಅಂತರಗಳು ತಲೆದೋರುತ್ತವೆ.
ಐಡಿಯಾ
‘ಯುವಕರೆಲ್ಲಾ ಹೊಸ ಹೊಸ ಐಡಿಯಾ ಕೊಟ್ಟರೆ ಹಳಬರು ಮಾತ್ರ ತಮ್ಮ ಹಳೇ ಐಡಿಯಾವನ್ನೇ ಹಿಡಿದುಕೊಂಡು ಕುಳಿತುಕೊಳ್ಳುತ್ತಾರೆ. ಇಲ್ಲೆಲ್ಲಾ ನಮಗೆಲ್ಲಾ ಒಳಗೊಳಗೇ ಅಸಮಾಧಾನ ಆಗುವುದುಂಟು’ ಅಂತಾರೆ ಅಡ್ವರ್ಟೈಸಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಪ್ರಜ್ವಲ್. ‘ಹೊಸಬರಲ್ಲಿ ಈ ರೀತಿ ಹೊಸ ಐಡಿಯಾವನ್ನು ಪ್ರೊಪೋಸ್ ಮಾಡೋ ಒರಿಜಿನಾಲಿಟಿ ಎಲ್ಲ ಇರುತ್ತದೆ ನಿಜ. ಆದರೆ ಒಂದೇ ಬಾರಿಗೆ ಇದಕ್ಕೆ ಧುಮುಕುವ ದುಡುಕು ಅವರದು. ಕೊಂಚ ಕುಳಿತು ಯೋಚಿಸುವ, ಪರಿಣಾಮಗಳ ಬಗೆಗೆ ಪರಾಮರ್ಶಿಸುವ ವ್ಯವಧಾನ ಇವರಿಗಿಲ್ಲ. ಬಹುಶಃ ಹೇರಳ ಅವಕಾಶಗಳಿರೋ ಕಾರಣ ಈ ರೀತಿ ರಿಸ್ಕ್ ತೆಗೆದುಕೊಳ್ಳೋ ಪ್ರವೃತ್ತಿ ಇವರಲ್ಲಿ ಹೆಚ್ಚು ಇರಬೇಕು. ಹಿಂದಿನವರಲ್ಲಾದರೆ ಹೊಸ ಐಡಿಯಾಗಳ ಸಾಧಕ ಬಾಧಕಗಳನ್ನು ಅಳೆದೂ ಸುರಿದೂ ಕೊನೆಗೆ ಅದು ಜಾರಿಗೆ ಬರದೇ ಇರುವ ನಿದರ್ಶನಗಳೇ ಜಾಸ್ತಿ’ ಅಂತಾರೆ ಎಂಎನ್‌ಸಿ ಕಂಪೆನಿಯಲ್ಲಿ ಪೀಪಲ್ ಮ್ಯಾನೇಜರ್ ಆಗಿರುವ ರವಿರಾಜ್ ಭಟ್.
ಫಾಸ್ಟೋ ಫಾಸ್ಟು
‘ಇಂದಿನ ಹುಡುಗರ ಕೆಲಸ ತುಂಬಾ ಫಾಸ್ಟ್. ತುಂಬಾ ಅಪ್‌ಡೇಟೆಡ್ ಆಗಿಯೂ ಇರುತ್ತಾರವರು. ಆದರೆ ಹಳಬರ ಅನುಭವಕ್ಕೆ ಬೆಲೆ ಕೊಡುವವರು ಇವರಲ್ಲ, ತಾವೇ ಶ್ರೇಷ್ಠವೆಂಬ ಇಗೋ ಇವರಿಗೆ’ ಅನ್ನೋದು ಇನ್ನೊಬ್ಬ ಹಿರಿಯರ ಗುರುತರ ಆಪಾದನೆ. ‘ಹೌದು, ನಾವು ಎಷ್ಟು ಬೇಕೋ ಅದಕ್ಕಿಂತಲೂ ಹೆಚ್ಚೇ ಕಲಿತುಕೊಂಡು ಹೋಗಿರ್‍ತೇವೆ. ಅದಕ್ಕೇ ಅವರಿಗಿಂತ ಬೇಗ ಎಲ್ಲವನ್ನೂ ಕಲಿತುಕೊಳ್ತೇವೆ. ಬೇಗ ನಮ್ಮ ಕೆಲಸ ಮಾಡಿ ಮುಗಿಸಿ ಎದ್ದು ಬರ್‍ತೇವೆ. ಅನಗತ್ಯವಾಗಿ ಅಲ್ಲಿ ಕೂತ್ಕೊಳೋ ಅಗತ್ಯ ಏನಿದೆ?’ ಅಂತ ಪ್ರಶ್ನಿಸ್ತಾರೆ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಸೌಮ್ಯಾ ಹೆಗ್ಡೆ. ಈ ಹೊಸ ಹುಡುಗರ ವೇಗ, ಗುಣಮಟ್ಟವನ್ನು ಮೆಚ್ಚಿಕೊಳ್ಳುವ ಹಿರಿಯರು, ತಾನು, ತನ್ನ ಕೆಲಸ, ತನ್ನ ಹೊಣೆ ಎಂದಷ್ಟೇ ಸ್ವಕೇಂದ್ರಿತವಾಗುವ ಇವರ ನಿಲವನ್ನು ಮೆಚ್ಚಿಕೊಳ್ಳುವುದಿಲ್ಲ. ಆದರೆ, ಅವರವರು ಮಾಡುವ ಕೆಲಸಕ್ಕೆ ಅವರವರಿಗೆ ತಕ್ಕ ಸಂಬಳ ಸಿಗುತ್ತದೆ, ಅದಕ್ಕೆ ಇನ್ನೊಬ್ಬರಿಗೇಕೆ ಸಹಾಯ ಮಾಡಬೇಕು ಎನ್ನುವ ವಾದ ಹೊಸ ತಲೆಮಾರಿನದು. ಹೀಗನ್ನುತ್ತಲೇ ಟೀಂ ವರ್ಕ್‌ನಿಂದ ದೂರವಾಗುತ್ತಾರೆ ಈ ಹುಡುಗರು. ಹಿಂದಿನವರೆಲ್ಲ  ‘ತಿe’ ಅಂದರೆ ಇಂದಿನವರದೆಲ್ಲ  ‘me’ ಅನ್ನುವವರು. ಎಲ್ಲೋ ಅನಿವಾರ್‍ಯವಾಗಿ ಟೀಂ ವರ್ಕ್‌ಗಿಳಿದರೂ ಒಳಗೊಳಗೇ ಅಸಮಾಧಾನದ ಹುತ್ತದೊಳಗೆ ಬೇಯುವವರು ಇವರು.
‘ಸೀನಿಯರ್‍ಸ್ ಆಟಿಟ್ಯೂಡ್ ಸರಿ ಇಲ್ದೆ ಇದ್ರೆ ನಿಜಕ್ಕೂ ಕಷ್ಟ ಆಗುತ್ತೆ. ಅವ್ರು ತುಂಬಾ ರಿಜಿಡ್ ಆಗಿದ್ರೆ ಹೊಸತಕ್ಕೆ ಯಾವುದಕ್ಕೂ ಓಪನ್ ಆಗೋದಿಲ್ಲ. ಆಗ ಅವ್ರನ್ನು ಕನ್‌ವಿನ್ಸ್  ಮಾಡಿ ಮುಂದುವರೀಬೇಕು. ಅವ್ರು ಒಪ್ಪಿಕೊಳ್ಳದಿದ್ರೆ ನಮ್ಗೆ ಡಿಸ್‌ಅಪಾಯಿಂಟ್ ಆಗುತ್ತೆ’ ಅಂತಾರೆ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವ ಬೆಂಗಳೂರಿನ ಯುವಕ.
ಸ್ಟೈಲ್
ನಿಯಮಗಳನ್ನು ಹೆಜ್ಜೆ ಹೆಜ್ಜೆಗೂ ಪಾಲಿಸುತ್ತಾ ಕ್ರಮಪ್ರಕಾರವಾಗಿ ಕೆಲಸ ಮಾಡುವ ಪ್ರವೃತ್ತಿ ಆಧುನಿಕರಿಗಿರುವುದು ಕಡಿಮೆ, ರಿಸಲ್ಟ್ ಮುಖ್ಯ ಅನ್ನುತ್ತಾ ದಾಪುಗಾಲಿಕ್ಕುವವರು ಇವರು. ನಿಯಮಗಳನ್ನು ಪಾಲಿಸದಿದ್ದರೆ ಶಿಸ್ತು ಇಲ್ಲವೆನ್ನುವ ಅಸಮಾಧಾನ ಹಿರಿಯರಲ್ಲಿ. ಹಳಬರೆಲ್ಲ ಹಳೆಯ ಅಂಕಿಸಂಖ್ಯೆಗಳನ್ನು ಆಧರಿಸಿ ಕೆಲಸ ಮಾಡುತ್ತಾರೆ ಎಂಬ ಮೂದಲಿಕೆ ಹೊಸಬರದು. ಹೊಸಬರಲ್ಲಿ ಅನುಭವವೂ ಇಲ್ಲ, ಇತರರಿಂದ ಕಲಿಯುವ ತಾಳ್ಮೆಯೂ ಇಲ್ಲ ಎಂಬ ಆಪಾದನೆ ಹಳಬರದು. ನೈತಿಕತೆ, ಬದ್ಧತೆಗಳಲ್ಲಿಯೂ ತಮಗಿಂತ ಇಂದಿನವರು ತುಂಬಾ ಭಿನ್ನ ಎಂಬುದನ್ನು ಇವರು ಗುರುತಿಸುತ್ತಾರೆ. ಅವಕಾಶಗಳ ಆಕ್ಯದಿಂದಲೋ ಏನೋ ಇಂದು ಕಂಪೆನಿಯೊಂದಕ್ಕೆ ಸೇರುವ ಯುವಕನೊಬ್ಬ  ಸೇರುತ್ತಲೇ ಹೇಳಿಕೊಳ್ಳುತ್ತಾನೆ, ‘ಆರು ತಿಂಗಳು, ಹೆಚ್ಚೆಂದ್ರೆ ಒಂದು ವರ್ಷ ಇಲ್ಲಿ ಕೆಲಸ ಮಾಡ್ತೇನೆ. ಮತ್ತೆ ಬೇರೆ ಒಳ್ಳೆ ಆಫರ್ ಸಿಕ್ಕಾಗ ಜಂಪ್ ಮಾಡ್ಬೇಕು.’ ತಮ್ಮ ಸಂಸ್ಥೆ, ಅದರ ಪ್ರಗತಿ ಎನ್ನುತ್ತ ವರ್ಷಗಟ್ಟಲೆ ಕಂಪನಿಯೊಂದರ ಶ್ರೇಯಸ್ಸಿಗಾಗಿ ದುಡಿದ ಹಿರಿಯ ಉದ್ಯೋಗಿಗೆ ಈ ಮನಃಸ್ಥಿತಿಯನ್ನು ಅರಗಿಸಿಕೊಳ್ಳುವುದಕ್ಕಾಗುವುದಿಲ್ಲ.
ಎಲ್ಲಕ್ಕೂ ಮೇಲ್, ಎಸ್ಸೆಮ್ಮೆಸ್‌ನ್ನೇ ನೆಚ್ಚಿಕೊಳ್ಳುವುದು ಇಂದಿನವರ ಸ್ಟೈಲ್. ಹಳಬರಿಗೆಲ್ಲ ಹಿಂದೆ ಬಳಸುತ್ತಿದ್ದ  ಪ್ರಿಂಟೆಡ್ ‘ನೋಟ್’ ಬಳಸುವುದೇ ಸುರಕ್ಷಿತ ಅನ್ನುವ ಭಾವ, ಮೇಲ್‌ನಲ್ಲಿ ಎಲ್ಲ ಬಗೆಯ ಮೋಸವೂ ನಡೆಯುತ್ತದೆ ಎನ್ನುವ ತರ್ಕ. ವರ್ಷಗಟ್ಟಲೆ ದುಡಿದು ಕ್ರಮೇಣ ಮೇಲಕ್ಕೇರುವುದಕ್ಕೆ ಒಗ್ಗಿದವರು ಅಂದಿನವರು. ಕೆಲಸಕ್ಕೆ ಸೇರಿದ ಆರು ತಿಂಗಳಲ್ಲೇ ಇನ್‌ಕ್ರಿಮೆಂಟ್, ವರ್ಷದಲ್ಲೇ ಪ್ರೊಮೋಷನ್ ಬೇಕೆನ್ನುವವರು ಇಂದಿನವರು.
ಅಂತರದ ಅಂತರಾಳ
ಈ ಎಲ್ಲ  ವ್ಯತ್ಯಾಸಗಳ ಜೊತೆಗೆ ವಯಸ್ಸಿನ ಅಂತರಕ್ಕೆ ಅಂಟಿಕೊಂಡೇ ಬಂದಿರುವ ಸಾಮಾಜಿಕ, ಕೌಟುಂಬಿಕ ಬದಲಾವಣೆಗಳೂ ಕಾರಣವಿರಬಹುದು. ಕೂಡುಕುಟುಂಬದಲ್ಲಿ ಬೆಳೆದವರು ಟೀಂ ವರ್ಕ್‌ಗೆ ಸಹಜವಾಗಿ ತೆರೆದುಕೊಳ್ಳಬಹುದು. ತಾನು, ಅಪ್ಪ, ಅಮ್ಮ  -ಇಷ್ಟೇ ಜಗತ್ತು ಎಂದುಕೊಂಡು ಬೆಳೆದ ಯುವಕನೋ ಯುವತಿಯೋ ಉದ್ಯೋಗದಲ್ಲೂ ತಾನು, ತನ್ನ ಕೆಲಸ ಎಂದಷ್ಟೇ ವರ್ತಿಸುವುದು ಸಹಜ. ಹೆಚ್ಚುತ್ತಿರುವ ಅವಕಾಶಗಳು, ಪೂರಕ ತರಬೇತಿ, ಬೇಕೆಂದಾಗ ತಕ್ಷಣ ಇಂಟರ್ನೆಟ್‌ನಲ್ಲಿ ಸಿಗುವ ರೆಡಿಮೇಡ್ ಮಾಹಿತಿ -ಇವೆಲ್ಲವೂ ಇವರನ್ನು ಆಕ್ರಮಣಕಾರಿಗಳನ್ನಾಗಿ, ಅವಕಾಶವಾದಿಗಳನ್ನಾಗಿ ಮಾಡಿರುವುದೂ ಹೌದು. ಇಷ್ಟೆಲ್ಲ ಭಿನ್ನತೆಗಳಿದ್ದರೂ  ಮನೆಗಳಲ್ಲಾಗುವಂತೆ ದೊಡ್ಡ ಮಟ್ಟಿನ ಘರ್ಷಣೆಗಳು ಕಚೇರಿಗಳಲ್ಲಿ ಹುಟ್ಟಿಕೊಳ್ಳುವುದಿಲ್ಲವೆನ್ನುವುದು ಮಾತ್ರ ಹೌದು. ತಾನು ಹೇಳಿದಂತೆಯೇ ಮಗ ಮಾಡಲಿ ಎಂಬ ಅಪ್ಪನ ಹಟವಾಗಲೀ, ತನ್ನದೇ ನಡೆಯಲಿ ಎಂಬ ಮಗನ ಇಗೋ ಆಗಲೀ ಪರಸ್ಪರ ಘರ್ಷಿಸಿದಂತೆ ಇಲ್ಲಿ ಘರ್ಷಿಸುವುದಿಲ್ಲ. ಎಲ್ಲೋ ಕೊಂಚ ಅಸಮಾಧಾನವಿದ್ದರೂ ಅದು ತಾನಾಗಿ ಮರೆಯಾಗುವುದೇ ಹೆಚ್ಚು.
ಹಳಬರ ಅನುಭವಕ್ಕೆ ಇಂದಿನವರ ಹೊಸತನ, ಉತ್ಸಾಹಗಳು ತಾಳೆಯಾದರೆ ಚೆನ್ನ ಎಂದು ಹೇಳುವುದೇನೋ ಸುಲಭ. ಆದರೆ, ಅದು ಕಂಡುಬರುವುದು ಆ ಸಂದರ್ಭದಲ್ಲಿ ಎದುರಾದ ವ್ಯಕ್ತಿಗಳ ಮನಃಸ್ಥಿತಿ ಹೇಗಿರುತ್ತದೆ ಎಂಬುದರ ಮೇಲೆ. ದೈಹಿಕವಾಗಿ ವಯಸ್ಸಾದರೂ ಮಾನಸಿಕವಾಗಿ, ತಾಂತ್ರಿಕವಾಗಿ ಸದಾ ನೂತನರಾಗಿರುವವರೂ ಇಲ್ಲಿ ಇರುವುದುಂಟು. ಆದರೆ ಇಂಥವರ ಸಂಖ್ಯೆ ಕಡಿಮೆ ಎಂಬುದೂ ಸತ್ಯವೇ.
—————–
ಹೆಚ್ಚಾಗಿ ಯಂಗ್ ಟೀಮ್‌ನ, ಅವ್ರ ಐಡಿಯಾಗಳನ್ನು ಸೀನಿಯರ್‍ಸ್ ಪರಿಗಣಿಸ್ತಾರೆ. ಇದಕ್ಕೂ ಮೀರಿ ಐಡಿಯಾಗಳು, ವರ್ಕಿಂಗ್ ಸ್ಟೈಲ್ ಮ್ಯಾಚ್ ಆಗದಿರೋದೂ ಇದೆ. ಆದ್ರೆ ಈ ಕಾರಣದಲ್ಲಿ ಕ್ಲಾಶ್ ಆಗೋದಿಲ್ಲ, ಅಸಮಾಧಾನಗಳು ಉಂಟಾಗ್ತವೆ. ಎಲ್ಲವೂ ಆಯಾ ಸಂಸ್ಥೆಯನ್ನು ಅವಲಂಬಿತವಾಗಿರುತ್ತದೆ.
ರವಿರಾಜ್ ಭಟ್, ಎಚ್ ಆರ್ ಮ್ಯಾನೇಜರ್, ಎಂಎನ್‌ಸಿ ಕಂಪನಿ, ಬೆಂಗಳೂರು.
ಹೊಸ ಜೆನರೇಷನ್‌ನವ್ರು ಯಾವಾಗ್ಲೂ ಫಾಸ್ಟ್, ಅಪ್‌ಡೇಟೆಡ್. ನಾವು ಎಲ್ಲವನ್ನೂ ಬೇಗ ಗ್ರಾಸ್ಪ್ ಮಾಡ್ತೇವೆ, ಕೆಲ್ಸವನ್ನು ಬೇಗ ಮಾಡಿ ಮುಗಿಸ್ತೇವೆ. ಕೆಲವು ವಯಸ್ಸಾದವ್ರು ತುಂಬಾ ಸ್ಲೊ ಅನ್ಸುತ್ತೆ ನಮ್ಗೆ, ಆದ್ರೇನು ಮಾಡೋದು ನಮ್ ನಮ್ ಕೆಲಸ ನಮ್ಗೆ ಅಷ್ಟೆ.
-ಸೌಮ್ಯಾ ಹೆಗ್ಡೆ, ಎಂಜಿನಿಯರ್
——
ನಾಲ್ಕು ತಲೆಮಾರು
ಸಾಮಾನ್ಯವಾಗಿ ೧೯೨೨ರಿಂದ ೧೯೪೫ರ ಅವಯಲ್ಲಿ ಜನಿಸಿದವರನ್ನು ವೆಟೆರನ್ಸ್ ಎಂದೂ, ೧೯೪೬-೬೪ರ ಅವಯವರನ್ನು ಬೇಬಿ ಬೂಮರ್‍ಸ್ ಎಂದೂ, ೧೯೬೫ರಿಂದ ೧೯೮೦ರ ತಲೆಮಾರನ್ನು ಜನರೇಷನ್ ಎಕ್ಸ್ ಎಂದೂ, ೧೯೮೦-೨೦೦೦ದ ಅವಯಲ್ಲಿ ಹುಟ್ಟಿದವರನ್ನು ಜನರೇಷನ್ ವೈ ಎಂದೂ ವಿಂಗಡಿಸುವುದುಂಟು. ಉದ್ಯೋಗದ ಸ್ಥಳದಲ್ಲಿಯೂ ಈ ನಾಲ್ಕು ತಲೆಮಾರುಗಳ ಮಧ್ಯೆಯೇ ಅಂತರ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಸಮಾಜ ವಿಜ್ಞಾನಿಗಳು. ಆದರೆ ಇದನ್ನು ಎಲ್ಲಾ ಸಂದರ್ಭದಲ್ಲಿಯೂ ನಿಖರವಾಗಿ ಗುರುತಿಸುವುದು ಕಷ್ಟ.

ಮೊನ್ನೆ ಶನಿವಾರ ಸಂಜೆ ಮೊಮ್ಮಗ ಮನುಜನೊಂದಿಗೆ ಹರಟುತ್ತ ಟೆರೇಸ್‌ನಲ್ಲಿ ಕುಳಿತಿದ್ದೆ. ಸೊಸೆ ಸೌಖ್ಯಾ ಬಂದಳು. ಸಂಜೆಯಾಗುತ್ತಲೇ ಮುದುಡಿ ಹೋದ ಹೂವಿನಂತಿರುವ ಹುಡುಗಿಯ ಮುಖದಲ್ಲೊಂದು ಗೆಲುವು. ನಾಳೆ ರಜಾದಿನ ಎನ್ನುವ ಖುಷಿಯ ಎಫೆಕ್ಟ್ ಇರಬೇಕು ಅಂದ್ಕೊಂಡೆ.
ಆಮೇಲೆ ಹೇಳಿದ್ಳು, ‘ಇವತ್ತು ನನ್ನ ಫ್ರೆಂಡ್ ಬರ್‍ತಾಳೆ ಅತ್ತೇ.. ನಾಳೆ ಹೊರಗೆಲ್ಲಾದ್ರೂ ಸುತ್ತೋಣ ಅಂತ…’ ‘ಯಾರು, ಸಂಜನಾನಾ?’ ಅಂದೆ. ‘ಹಾಂ ಅತ್ತೇ, ಅವ್ಳೇ. ಇನ್ನೇನು ಅರ್ಧ-ಒಂದ್ಗಂಟೇಲಿ ಬರ್‍ಬಹುದು’ ಅಂದ್ಳು. ಸಂಜನಾ ನನ್ನ ಸೊಸೆಯ ಬಾಲ್ಯದ ಗೆಳತಿ. ಅವಳಿಗೆ ಮದುವೆ ಒಂದು ವರ್ಷ ಆಗಿದೆ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ. ಅವಳ ಕೈಹಿಡಿದವನೂ ಒಳ್ಳೆಯವನೇ, ಸುಖೀ ಸಂಸಾರ ಅವಳದ್ದು.
ಸಂಜನಾ ಬರ್‍ತಿದ್ದಾಳಲ್ಲ, ಅವ್ಳಿಗೆ ಕ್ಯಾರೆಟ್ ಹಲ್ವಾ ಅಂದ್ರೆ ಇಷ್ಟ, ಮಾಡೋಣ ಅನ್ನುತ್ತಾ ಎದ್ದು ಅಡುಗೆ ಮನೆ ಸೇರುವಷ್ಟರಲ್ಲಿ ಸಂಜನಾ ಬಂದೂಬಿಟ್ಟಳು. ಸಂಜೂಗೆ ತುಂಬಾ ಮಾತು. ಅವಳಿದ್ದರೆ ಮನೆಯಲ್ಲಿ ಹತ್ತು ಜನರಿದ್ದ ಹಾಗೆ. ಆದರೆ ಇವತ್ತು ಮಾತ್ರ ಎಂದಿನಂತಿರಲಿಲ್ಲ ಅವಳು. ‘ಹಾಯ್ ಆಂಟೀ, ಹೇಗಿದ್ದೀರಾ?’ ಅಂತ ಕೇಳಿದವಳ ಮುಖವೂ ಸಪ್ಪಗಿತ್ತು. ಸೌಖ್ಯಾ ಮಾಡಿಕೊಟ್ಟ ಕಾಫಿ ಕುಡಿದು ಸೌಖ್ಯಾನ ಕೋಣೆ ಸೇರಿಕೊಂಡವಳು ಮತ್ತೆ ಹೊರಬಂದದ್ದು ಊಟದ ಹೊತ್ತಿಗೇ.
ಊಟ ಮಾಡುವಾಗಲೂ ಸೌಖ್ಯಾ, ಸಂಜೂದು ಏನೋ ಗುಸುಗುಸು. ‘ಬಿಟ್ಬಿಡೇ ಅದನ್ನೆಲ್ಲಾ…’ ಅನ್ನೋ ಸೌಖ್ಯಾ, ‘ಅದು ಹೇಗಾಗುತ್ತೇ…’ ಅನ್ನೋ ಸಂಜೂ…
ಊಟ ಮಾಡಿ ಸೌಖ್ಯಾ ಮನುಜನನ್ನು ಮಲಗಿಸಲು ಹೋದಳು. ಸಂಜೂ ಅಡುಗೆಕೋಣೆಯಲ್ಲಿ ಉಳಿದಳು. ‘ಏನೇ, ನಿನ್ ಗಂಡನ್ನ ಕರ್‍ಕೊಂಡು ಬರ್‍ಬಾರ್ದಿತ್ತಾ?’ ಅಂದೆ. ‘ಅವ್ರೂ ಫ್ರೆಂಡ್ ಮನೆಗೆ ಹೋಗಿದ್ದಾರೆ ಆಂಟಿ’ ಅಂತ ಅಂದು ಸುಮ್ಮನಾದಳು. ಸ್ವಲ್ಪ ಹೊತ್ತು ಸುಮ್ಮನೇ ಬೆರಳಲ್ಲಿ ನೆಲ ಕೊರೆಯುತ್ತಾ ಕುಳಿತಿದ್ದ ಸಂಜೂ ಇದ್ದಕ್ಕಿದ್ದ ಹಾಗೆ ಮಾತು ತೆಗೆದಳು. ‘ಆಂಟೀ, ನೀವು ಕಾಲೇಜ್‌ಗೆ ಹೋಗ್ತಿದ್ದಾಗ ಯಾರೂ ನಿಮ್ಮನ್ನು ಲವ್ ಮಾಡ್ಲಿಲ್ವಾ? ನೀವು ಯಾರನ್ನೂ ಲವ್ ಮಾಡ್ಲಿಲ್ವಾ?’ ಅಂದ್ಳು. ನನಗೆ ಸೋಜಿಗ, ‘ಅರೆ, ಇದ್ಯಾಕಮ್ಮಾ ನನ್ ಕಾಲದ ಕಥೆ ಕೇಳ್ತಿದ್ದೀಯಾ?’ ಅಂದೆ. ‘ಈಗ್ಲೂ ಕಳೆಕಳೆಯಾಗಿ ಇಷ್ಟೊಂದು ಚೆನ್ನಾಗಿದ್ದೀರಲ್ಲಾ ಆಂಟೀ, ಯಾರನ್ನಾದ್ರೂ ಅಟ್ರಾಕ್ಟ್ ಮಾಡಿರ್‍ತೀರಾ ಅಂತ ಕೇಳ್ದೆ’ ಅಂದ್ಳು. ‘ಏನೀಗ ನಿನ್ ಸಮಸ್ಯೆ?’ ಅಂತ ನೇರವಾಗಿ ಕೇಳ್ದೆ. ‘ಆಂಟೀ, ನಾನು ಕಾಲೇಜ್‌ನಲ್ಲಿದ್ದಾಗ ಒಬ್ಬನನ್ನ ಲವ್ ಮಾಡಿದ್ದೆ. ಅದ್ಯಾಕೋ ನಾವು ಮದ್ವೆ ಆಗ್ಲಿಲ್ಲ. ಆದ್ರೆ ಈಗ ಒಂದು ಮೂರು ತಿಂಗಳ ಹಿಂದೆ ಅವ್ನು ನಮ್ ಆಫೀಸ್ ಬಸ್ ಸ್ಟಾಪ್ ಹತ್ರ ಸಿಕ್ಕ. ಸುಮ್ನೆ ಮಾತಾಡಿದ್ವಿ. ಆಮೇಲಿಂದ ಅವ್ನು ಪ್ರತಿದಿನ ಅದೇ ಬಸ್ ಸ್ಟಾಪ್‌ನಲ್ಲಿ ಸಿಗ್ತಿದ್ದಾನೆ. ಇತ್ತೀಚೆಗೆ ಈ ವಿಷ್ಯದಲ್ಲಿ ನಾನು ತುಂಬಾ ಡಿಸ್ಟರ್ಬ್ ಆಗಿದ್ದೀನಿ ಆಂಟಿ.  ಅವನ ಬಗೆಗೆ ಫೀಲ್ ಮಾಡ್ಕೊಂಡು ಈಗ ನನ್ನ ಗಂಡಂಗೆ ದ್ರೋಹ ಮಾಡ್ತಿದ್ದೀನೇನೋ ಅನಿಸ್ತಿದೆ. ನನ್ ಹಸ್ಬೆಂಡ್‌ಗೆ ಹೇಳೇ ಬಿಡೋಣ ಅಂದ್ಕೊಂಡೆ, ಆದ್ರೂ ಸುಮ್ನಾದೆ’ ಅಂದಾಗ ಹುಡ್ಗಿ ವಿಷ್ಯ ಗಂಭೀರ ಆಗಿದ್ಯಲ್ಲಾ ಅಂದ್ಕೊಂಡು ಶುರುಮಾಡಿದೆ, ‘ನೋಡು ಸಂಜೂ, ಅಂದಿನ ಆ ಪ್ರೀತಿ, ಆ ಹುಡುಗ ಎಲ್ಲಾ ಆ ಕಾಲಕ್ಕೆ ಸರಿ. ಆಗ ನೀನು ಪ್ರೀತಿ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ಆದ್ರೆ ಈಗ ಅವನನ್ನು ನೆನಪಿಸಿಕೊಂಡು ಕೊರಗೋದು ತಪ್ಪು. ಮೊದಲ ಪ್ರೇಮವನ್ನು ಮರೆಯೋದು ಸುಲಭ ಅಲ್ಲ. ಆದರೆ ಅದನ್ನು ಜೀವಂತ ಇಟ್ಟುಕೊಳೋದ್ರಿಂದ ಇವತ್ತು ಯಾವ ಪ್ರಯೋಜನವೂ ಇಲ್ಲ. ಎಲ್ಲೋ ಒಂಟಿಯಾಗಿದ್ದಾಗ ಆ ಪ್ರೀತಿ ನಿನಗೊಂದು ಹನಿ ಖುಷಿ ಕೊಡಲಿ. ಅಷ್ಟರಮಟ್ಟಿಗೆ ಅದನ್ನು ಪಕ್ಕಕ್ಕಿಡು. ಅವನು ದಿನವೂ ಸಿಕ್ಕರೂ ಮತ್ತೆ ಅದೇ ಪ್ರೀತಿಯನ್ನು ಮುಂದುವರಿಸಬೇಡ. ಹಳೆಯ ಪ್ರೀತಿಯನ್ನು ಮದುವೆಯ ಬಳಿಕವೂ ಎಳೆತರೋ ತಪ್ಪು ಮಾತ್ರ ಮಾಡ್ಬೇಡ’
‘ಹೂಂ ಆಂಟಿ’ ಎಂದು ನಗುನಗುತ್ತ ಮಲಗುವುದಕ್ಕೆ ಹೊರಟ ಸಂಜೂ ಮತ್ತೆ ತಿರುಗಿ ಕೇಳಿದಳು, ‘ಆದ್ರೂ ಆಂಟೀ, ಒಂದು ಪ್ರಶ್ನೆಗೆ ಮಾತ್ರ ಉತ್ತರ ಸಿಗ್ಲಿಲ್ಲ.. ನಿಮ್ ಲವ್ವು…?’
ಸುಮ್ಮನೇ ನಕ್ಕೆ.

ಮೊಬೈಲ್, ಆನ್‌ಲೈನ್ ಚಾಟು, ಸಿನಿಮಾ, ಫೇಸ್ಬುಕ್, ಪಬ್ಬು, ಕೆಫೆ… ಓಹ್, ಇದರಲ್ಲೆಲ್ಲಾ ಮುಳುಗಿರೋ ಇಂದಿನ ಯುವಕರು ಓದೋ ಅಭಿರುಚಿ ಬೆಳೆಸಿಕೊಳ್ಳೋದುಂಟಾ? ಖಂಡಿತಾ ಇಲ್ಲ ಅಂತೀರಾ? ಅಷ್ಟು ಅವಸರದ ತೀರ್ಮಾನ ತಗೋಬೇಡಿ, ಓದೋರ ಸಂಖ್ಯೆ ಕಡಿಮೆ ಆಗಿದೆ ನಿಜ. ಆದ್ರೆ, ಪುಸ್ತಕ ಓದೋ ಹುಡುಗರು ಇನ್ನೂ ಇದ್ದಾರೆ.
———————————
ಪಿಯುಸಿಯ ಪವನ್‌ಗೆ ಈ ವರ್ಷವಷ್ಟೇ ಅಪ್ಪ ಕೊಡಿಸಿದ ಮೊಬೈಲ್‌ನಲ್ಲಿ  ಮೆಸೇಜಿಸುವ ಖುಷಿ. ಡಿಗ್ರಿಯ ದೀಪಿಕಾಗೆ ದಿನವೆಲ್ಲಾ ಇಂಟರ್ನೆಟ್‌ನಲ್ಲಿ ಚಾಟಿಸುವ ಚಟ. ಪಿಜಿಯಲ್ಲಿರೋ ಪ್ರಮೋದ್‌ಗೆ ಅಸೈನ್‌ಮೆಂಟ್ ಬರೆಯೋ ಬಿಝಿ. ಹೀಗೆ ಎಲ್ಲರಿಗೂ ಪುರುಸೊತ್ತಿಲ್ಲ. ಬಿಡುವಾದವರಿಗೆ ಫ್ರೀ ಟೈಂನಲ್ಲೂ ಸೆಳೆಯೋಕೆ ಏನೇನೋ ಇವೆ.
ಅದಕ್ಕೇ, ಕಾಲೇಜು ಲೈಬ್ರರಿಯಿಂದ  ಸಾಯಿಸುತೆ, ಉಷಾನವರತ್ನರಾಂರ ಕಾದಂಬರಿಗಳನ್ನು ಪಡೆದು ಎದೆಗವಚಿಕೊಂಡು ನಡೆಯುವ ಹೆಣ್ಣುಮಕ್ಕಳು ಈಗಿಲ್ಲ. ಎಚ್.ನರಸಿಂಹಯ್ಯ, ಜಿ.ಪ್ರಕಾಶ್ ಮೊದಲಾದವರ ಸಸ್ಪೆನ್ಸ್ ಕಾದಂಬರಿಗಳನ್ನು ಟೆಕ್ಸ್ಟ್ ಪುಸ್ತಕದ ಮಧ್ಯೆ ಅಡಗಿಸಿಟ್ಟು ಓದುವ ಹುಡುಗರೂ ಇಲ್ಲ. ಹೌದು, ಪುಸ್ತಕಗಳನ್ನು ಓದುವ ಹುಡುಗರ ಸಂಖ್ಯೆ ಕಡಿಮೆಯಾಗಿದೆ.
ಕಾರಣಗಳು ನೂರೆಂಟು
ಮೊದಮೊದಲು ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ಓದುವ ಹವ್ಯಾಸದಿಂದ ದೂರ ಸರಿಸಿದ್ದು ಟಿವಿ ಎಂಬ ಮಾಯೆ. ಯುವಕರೂ ಇದಕ್ಕೆ ಹೊರತಲ್ಲ. ಗ್ರಾಮೀಣ ಪ್ರದೇಶಗಳಲ್ಲೆಲ್ಲ ಈಗಲೂ ಯುವಕರು ಇದರ ಪ್ರಭಾವದಿಂದ ಹೊರಬಂದಿಲ್ಲ. ಎಲ್ಲಾ ಚಾನೆಲ್‌ಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿಗೆಲ್ಲ ಯುವಕರೇ ವಸ್ತು. ಸಹಜವಾಗಿಯೇ ಅದಕ್ಕೆ ಯುವಕರೇ ಮುಖ್ಯ ವೀಕ್ಷಕರು. ‘ಹೌದು, ನಮ್ ಕ್ಲಾಸ್‌ನಲ್ಲಿ, ಕಾಲೇಜ್‌ನಲ್ಲೆಲ್ಲ ಈ ರಿಯಾಲಿಟಿ ಶೋಗಳ ವಿಷ್ಯ ಡಿಸ್ಕಸ್ ಆಗ್ತಾನೇ ಇರುತ್ತೆ. ಯಾರೋ ಯಾವುದೋ ಎಪಿಸೋಡ್ ಮಿಸ್ ಮಾಡ್ಕೊಂಡ್ರೆ ಮರುದಿನ ಫ್ರೆಂಡ್ಸ್ ಹತ್ರ ಏನಾಯ್ತು ಅಂತ ಕೇಳಿ ತಿಳ್ಕೋತೇವೆ’ ಅಂತಾರೆ ಬೀದರ್‌ನ ಪದವಿ ವಿದ್ಯಾರ್ಥಿನಿ ಶ್ರೇಯಾ.
ಸಿಟಿ ಕಾಲೇಜು ಹುಡುಗರ ಆಸಕ್ತಿ ಇದಕ್ಕಿಂತ ಭಿನ್ನ. ವೀಡಿಯೋ ಗೇಮ್ಸ್, ಪಬ್, ಕ್ಲಬ್ಬುಗಳು, ಕಾಫಿ ಡೇಗಳು, ಸೈಬರ್ ಕೆಫೆಗಳು… -ಹೀಗೆ ಇವರಿಗಿರುವ ಆಕರ್ಷಣೆಗಳ ಪರಿ ಹೇಳತೀರದು. ಎಲ್ಲೋ ಕೆಲವರಿಗೆ ಇಂಟರ್ನೆಟ್‌ನಲ್ಲೇ ಓದೋ ಅಭ್ಯಾಸವೂ ಇದೆ. ಆದರೆ ಇಂಟರ್ನೆಟ್‌ನ ಓದು ಬರಿಯ ಅಕಾಡೆಮಿಕ್ ವಿಷಯಕ್ಕೇ ಸೀಮಿತ.
ಕಾಲೇಜು ಹುಡುಗರಿಗೇನೋ ಕಾರಣ ಇದೆ, ಈಗಷ್ಟೇ ಕಾಲೇಜಿನಿಂದ ಹೊರಗೆ ಬಂದು ಉದ್ಯೋಗಿಗಳಾದವರು? ‘ಕಾಲೇಜಿನಲ್ಲೆಲ್ಲ ಓದು, ಪ್ರಾಜೆಕ್ಟ್ ಅಂತ ಬಿಝಿ ಇದ್ದು ಓದೋ ಅಭ್ಯಾಸವೇ ಬಿಟ್ಟು ಹೋಯ್ತಲ್ಲಾ, ಈಗ ಮತ್ತೆ ಓದೋಕೇ ಆಗ್ತಿಲ್ಲ’ ಅಂತಾರೆ ಎಂಬಿಎ ಪದವಿ ಪಡೆದು ಉದ್ಯೋಗದಲ್ಲಿರೋ ಮೈಸೂರಿನ ಸಜ್ಜನ್.
ಓದುವ ಅಭ್ಯಾಸ ಚಿಕ್ಕವರಿದ್ದಾಗಿನಿಂದಲೇ ಮೂಡಿಬರಬೇಕು. ಇದಕ್ಕೆ ಹೆತ್ತವರೇ ಪ್ರೇರಕರಾಗಿರಬೇಕು. ಮಕ್ಕಳು ನೋಡುವಾಗಲೆಲ್ಲ ಟಿವಿ ಹಾಕಿ ಕೂತಿರುವ ಪೋಷಕರನ್ನೇ ಕಂಡರೆ ಅವರಲ್ಲಿ ಓದುವ ಅಭಿರುಚಿ ಬೆಳೆಯುವುದಾದರೂ ಹೇಗೆ ಎಂಬ ಪ್ರಶ್ನೆಯೂ ಮೂಡುವುದುಂಟು. ಈ ಕಾರಣವನ್ನೂ ಇಲ್ಲವೆನ್ನುವ ಹಾಗಿಲ್ಲ.
ಸೆಮಿಸ್ಟರ್ ಪ್ರೆಶರ್
‘ನನಗೆ ಓದೋ ಹವ್ಯಾಸ ಚಿಕ್ಕಂದಿನಿಂದ ಇದೆ. ಆದ್ರೆ ಸೆಮಿಸ್ಟರ್ ಪ್ರೆಶರ್‌ನಿಂದಾಗಿ ಓದೋ ಅಸೆ ಇದ್ರೂ ಓದೋಕೆ ಮಾತ್ರ ಆಗ್ತಾ ಇಲ್ಲ.’ ಅಂತಾರೆ ಬೆಂಗಳೂರಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಗಗನ್. ಇದು ಹೌದೆನ್ನುವ ಬೆಂಗಳೂರಿನ ಕೆಎಲ್‌ಇ ಕಾಲೇಜಿನ ಲೈಬ್ರರಿಯನ್ ಕೌಜಲಗಿ ಹೇಳುತ್ತಾರೆ, ‘ಇದು ಹೌದು. ೧೫ ವರ್ಷಗಳ ಹಿಂದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದ ಹೊರತಾಗಿ ಬೇರೆ ಪುಸ್ತಕಗಳನ್ನು ಓದುತ್ತಿದ್ದರು. ವಾರ್ಷಿಕ ಪದ್ಧತಿಯಲ್ಲಿ ಜೂನ್‌ನಿಂದ ಡಿಸೆಂಬರ್‌ವರೆಗೆ ಎಕ್ಸ್ಟ್ರಾ ರೀಡಿಂಗ್‌ಗೆ ಟೈಂ ಇತ್ತು. ಈಗ ಒಂದು ಸೆಮಿಸ್ಟರ್ ಮುಗಿದ ತಕ್ಷಣ ಇನ್ನೊಂದು ಸೆಮಿಸ್ಟರ್‌ಗೆ ರೆಡಿ ಆಗೋ ಧಾವಂತ. ೧೯೮೦ರಲ್ಲ ನಮ್ಮ ಲೈಬ್ರರಿಗೆ ಖರೀದಿ ಮಾಡಿದ ಹಿರಿಯ ರಾಜತಂತ್ರಜ್ಞ ಎಂ.ಸಿ.ಚಗ್ಲಾ ಅವರ ಆತ್ಮಕಥನವನ್ನಾಗಲೀ ಟಾಲ್‌ಸ್ಟಾಯ್‌ನ ‘ವಾರ್ ಅಂಡ್ ಪೀಸ್’ ಕಾದಂಬರಿಯನ್ನಾಗಲೀ ದಶಕದ ಹಿಂದೆಲ್ಲ ವರ್ಷಕ್ಕೆ ೧೫-೧೬ ವಿದ್ಯಾರ್ಥಿಗಳಾದರೂ ಓದುತ್ತಿದ್ದರು. ಆದರೆ ಈಗ ವರ್ಷಕ್ಕೊಬ್ಬರೂ ಓದುವವರಿಲ್ಲ’
ಅಲ್ಲೊಬ್ಬರು ಇಲ್ಲೊಬ್ಬರು
ಪುಸ್ತಕ ಓದೋರು ಇಲ್ಲವೇ ಇಲ್ಲವೆಂದಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಪುಸ್ತಕಪ್ರಿಯ ಯವಕರು ಇದ್ದೇ ಇದ್ದಾರೆ. ಮಂಗಳೂರಿನ ಮಾಧ್ಯಮ ವಿದ್ಯಾರ್ಥಿನಿ ಲತಾ, ‘ನಾನು ಪುಸ್ತಕ ಓದ್ತೇನೆ’ ಅಂತಾರೆ. ‘ಹರ್ಮನ್ ಹೆಸ್‌ನ ‘ಸಿದ್ಧಾರ್ಥ’ದಂತಹ ಆಧ್ಯಾತ್ಮಿಕ ಪುಸ್ತಕಗಳು, ಸಿಡ್ನಿ ಶೆಲ್ಡನ್, ಚೇತನ್ ಭಗತ್‌ರ ಕಾದಂಬರಿಗಳು, ದೊಡ್ಡ ಸಾಧಕರ ಆತ್ಮಚರಿತ್ರೆಗಳು ಇತ್ಯಾದಿಗಳನ್ನು ಓದುತ್ತೇನೆ’ ಅನ್ನುವ ಲತಾ, ಯುವಕರು ಪುಸ್ತಕ ಓದೋದಿಲ್ಲ ಅನ್ನುವ ಮಾತನ್ನು ಒಪ್ಪಲು ತಯಾರಿಲ್ಲ. ‘ಇಂಟರ್ನೆಟ್ಟು, ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳು ಯೂತ್ ಮೇಲೆ ಪ್ರಭಾವ ಬೀರಿದೆ ಅನ್ನೋದು ನಿಜ. ಆದ್ರೆ ಇದರಲ್ಲೇ ಟೈಂ ಕಳೆಯೋರು ಪಠ್ಯೇತರ ಪುಸ್ತಕಗಳನ್ನಷ್ಟೇ ಏನು, ಪಠ್ಯಪುಸ್ತಕಗಳನ್ನೇ ಓದೋದಿಲ್ಲ. ಅವ್ರನ್ನು ಬಿಟ್ಟುಬಿಡಿ. ಆದ್ರೆ ಈಗ ಯುವಕರೆಲ್ಲಾ ಫಿಕ್ಷನ್‌ಗಳಿಗೆ ಮಾರು ಹೋಗ್ತಿದ್ದಾರೆ. ಯುವಜನಾಂಗದ ಚಿಂತನೆ, ಜೀವನಶೈಲಿ, ಅಗತ್ಯಗಳು ಮೊದಲಾದ ಅಂಶಗಳನ್ನೊಳಗೊಂಡ ಕಾದಂಬರಿ, ಕಥೆಗಳಿಗೆ ಈಗ ಯುವಕರಿಂದಲೇ ತುಂಬಾ ಡಿಮಾಂಡ್ ಇದೆ’ ಅಂತಾರೆ ಅವರು.
ಚಿಕ್ಕಂದಿನಿಂದಲೇ ಬಾಲಮಂಗಳ, ಚಂದಮಾಮ, ಟಿಂಕಲ್‌ಗಳನ್ನು ಹಿಡಿದ ಮಕ್ಕಳು ಬೆಳೆಯುತ್ತಾ ಪುಸ್ತಕಗಳ ಗೆಳೆತನ ಬೆಳೆಸಿಕೊಳ್ಳುವುದು ನಿಜ. ಇಂಥವರು ಎಲ್ಲೋ ಆಧುನಿಕ ಮಾಧ್ಯಮಗಳ ಸೆಳೆತಕ್ಕೆ ಸಿಕ್ಕರೂ ಅದರ ಜೊತೆಗೇ ಪುಸ್ತಕಗಳ ಓದನ್ನೂ ಮುಂದುವರೆಸುವುದೂ ಹೌದು.
‘ಹೌದು, ನಾನು ಎಮ್ಮೆಸ್ಸಿ ವಿದ್ಯಾರ್ಥಿ. ನನ್ನ ಮನೆಯ ವಾತಾವರಣದಿಂದಾಗಿ ನನ್ನಲ್ಲಿ ಓದೋ ಅಭಿರುಚಿ ಇದೆ. ಈಗ ನನ್ನ ಅಕಾಡೆಮಿಕ್ ಓದಿನ ಒತ್ತಡದಿಂದ ಅಷ್ಟೊಂದು ಕಥೆ, ಕಾದಂಬರಿಗಳನ್ನು ಓದೋಕೆ ಆಗ್ತಿಲ್ಲವಾದರೂ ಸಮಯ ಸಿಕ್ಕಾಗ ನಾನು ಓದೋದು ಪುಸ್ತಕಗಳನ್ನೇ’ ಅಂತಾರೆ ಮೈಸೂರಿನ ವಿನ್ಯಾಸ್. ಹೀಗೆನ್ನುವ ಯುವಕರೆಲ್ಲ , ‘ಯುವಕರು ಪುಸ್ತಕ ಓದುವುದಿಲ್ಲ’ ಅಂತ ಅಷ್ಟು ಬೇಗ ಷರಾ ಬರೆಯಬೇಡಿ, ಪುಸ್ತಕ ಓದುವವರು ಅವರ ಪಾಡಿಗೆ ಓದುತ್ತಲೇ ಇದ್ದಾರೆ ಅನ್ನುತ್ತಿದ್ದಾರೆ. ಹೀಗೆ ಹೇಳುವ ಹುಡುಗರ ಸಂಖ್ಯೆ ದುಪ್ಪಟ್ಟಾಗಲಿ.
————–
ಸೈನ್ಸ್ ತಗೊಂಡಿರೋರಿಗೆಲ್ಲ ತಮ್ಮ ಸಿಲಬಸ್‌ನ ಪ್ರೆಶರ್ ಹೆಚ್ಚು. ಲ್ಯಾಬ್, ಟೆಸ್ಟ್ ಅಂತೆಲ್ಲ ಅವ್ರು ಬಿಝಿ ಇರ್‍ತಾರೆ. ಆದ್ರಿಂದ ಓದೋರು ಕಡಿಮೆ. ಬಿಎ ಫ್ರೆಂಡ್ಸ್ ಕೂಡ ಓದ್ತಾರೆ, ಆದ್ರೆ ಪರ್ಸೆಂಟೇಜ್ ಕಡಿಮೆ. ಯುವಕರಲ್ಲಿ ಓದೋ ಹವ್ಯಾಸ ಇಲ್ಲ ಅಂತಲ್ಲ. ಆದ್ರೆ ಮನೇಲಿ ಓದೋರು ಇದ್ರೆ, ಆ ವಾತಾವರಣ ಸಿಕ್ಕಿದ್ರೆ ಓದೋ ಅಭ್ಯಾಸ ಇರುತ್ತದೆ. ಇಲ್ಲದಿದ್ರೆ ಆ ಅಭಿರುಚಿ ಇರೋದಿಲ್ಲ.
-ಕಾವ್ಯ ಅರುಣ್ ಜೋಳದಕೂಡ್ಲಿಗಿ, ಚಳ್ಳಕೆರೆ
ಓದೋ ಹವ್ಯಾಸ ತುಂಬಾ ಕಡಿಮೆ ಆಗಿದೆ. ಇದಕ್ಕೆ ಸೆಮೆಸ್ಟರ್ ಪದ್ಧತಿಯೂ ಕಾರಣ ಅನ್ಬಹುದು. ಹೆಚ್ಚಿನವ್ರು ಬರಿ ನ್ಯೂಸ್‌ಪೇಪರ್, ಮ್ಯಾಗಝಿನ್ಸ್ ಮಾತ್ರ ಓದ್ತಾರೆ. ಕಥೆ ಕಾದಂಬರಿ ಓದೋರು ಕಡಿಮೆಯೇ. ಪಿಜಿ ವಿದ್ಯಾರ್ಥಿಗಳಿಗಂತೂ ಕಥೆ ಕಾದಂಬರಿ ಓದೋ ಅಷ್ಟು ಪುರುಸೊತ್ತು ಇರೋದೇ ಇಲ್ಲ.
ಕ್ಷಮಾ ಭಾರದ್ವಾಜ್, ಪ್ರಥಮ ಎಂಸಿಜೆ, ಎಸ್‌ಡಿಎಂ ಕಾಲೇಜು, ಉಜಿರೆ.
ಓದದಿರೋ ವಿದ್ಯಾರ್ಥಿಗಳನ್ನು ಹೊರಗಿಟ್ಟರೂ ಫಿಕ್ಷನ್, ನಾನ್ ಫಿಕ್ಷನ್‌ಗಳತ್ತ ಆಕರ್ಷಿತರಾಗಿರೋ ವಿದ್ಯಾರ್ಥಿಗಳು ಅದೆಷ್ಟೋ ಮಂದಿ ಇದ್ದಾರೆ. ಅನೇಕರಿಗೆ ಇದು ಹವ್ಯಾಸ, ಕೆಲವರಿಗೆ ಇದು ರೂಢಿ, ಮತ್ತೆ ಕೆಲವರಿಗೆ ಅಗತ್ಯ. ಬೇರೆ ಹಲವು ಸೆಳೆತಗಳ ಹೊರತಾಗಿಯೂ ಓದೋ ಅಭ್ಯಾಸ ಇದ್ದೇ ಇದೆ.
ಲತಾ, ಅಂತಿಮ ಬಿಎ, ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು
ಈಗ ಪುಸ್ತಕ ಓದುವ ವಿದ್ಯಾರ್ಥಿಗಳು ಕಡಿಮೆ. ವಿದ್ಯಾರ್ಥಿಗಳು ಲೈಬ್ರರಿಗೆ ಬಂದರೂ ಬರೀ ಪಠ್ಯ ಸಂಬಂ ಪುಸ್ತಕಗಳು, ನ್ಯೂಸ್‌ಪೇಪರ್‍ಸ್, ಮ್ಯಾಗಝಿನ್‌ಗಳನ್ನಷ್ಟೇ ಓದ್ತಾರೆ. ಅದೂ ಪ್ರತಿದಿನ ಬರೋ ಅದೇ ೧೫-೨೦ ವಿದ್ಯಾರ್ಥಿಗಳ ಮುಖವನ್ನೇ ಇಲ್ಲಿ ಕಾಣೋದು ಹೆಚ್ಚು. ಸಿನಿಮಾ ಪುರವಣಿ ಬರೋ ದಿನ, ಕ್ರಿಕೆಟ್ ಮ್ಯಾಚ್‌ನ ಮರುದಿನ ಇನ್ನೂ ಸ್ವಲ್ಪ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ ಅಷ್ಟೆ.
-ಕೌಜಲಗಿ, ಲೈಬ್ರರಿಯನ್, ಕೆಎಲ್‌ಇ ಕಾಲೇಜು, ಬೆಂಗಳೂರು.

ಇಬ್ಬರು ಮಕ್ಕಳ ಅಮ್ಮ ಸುಶ್ಮಿತಾ ಸೇನ್, ರವೀನಾ ಟಂಡನ್, ವಿವಿಯನ್ ರಿಚರ್ಡ್ಸ್‌ರಿಂದ ಮಗು ಪಡೆದ ನೀನಾ ಗುಪ್ತಾ ಎಲ್ಲರೂ ಸಿಂಗಲ್ ಪೇರೆಂಟ್‌ಗಳೇ. ಕೇಳೋದಕ್ಕೇನೋ ಇದು ಆಕರ್ಷಕವಾಗಿದೆ. ಆದರೆ ಈ ಪಾತ್ರ ವಹಿಸುವುದು ಮಾತ್ರ ಕಷ್ಟವೋ ಕಷ್ಟ. ಒಂದೇ ವ್ಯಕ್ತಿ ಅಪ್ಪನೂ, ಅಮ್ಮನೂ ಆಗಿ ದ್ವಿಪಾತ್ರ ವಹಿಸುವುದು ಸಾಮಾನ್ಯದ ಕೆಲಸವಲ್ಲ.
—————–
ವಾಲ್ಮೀಕಿಯ ಆಶ್ರಮದಲ್ಲಿ  ಮಕ್ಕಳನ್ನು ಹೆತ್ತು, ಅಲ್ಲಿಯೇ ಅವರನ್ನು ಬೆಳೆಸಿದ ಸೀತೆಗೆ ತಿಳಿದಿರಬಹುದು ಒಬ್ಬಳೇ ಮಕ್ಕಳನ್ನು ಬೆಳೆಸುವುದು ಹೇಗೆಂದು. ಐವರು ಗಂಡು ಮಕ್ಕಳನ್ನು ಮಡಿಲಲ್ಲಿಟ್ಟು  ಸಾಕಿದ ಕುಂತಿ ಹೇಳಬಹುದು ಗಂಡನಿಲ್ಲದೇ ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟವೆಂದು. ಪ್ರಕೃತಿಯ ಆಸರೆಯಲ್ಲಿ ಮಗು ಭರತನನ್ನು ಬೆಳೆಸಿದ ಶಕುಂತಲೆ ಕಲಿತಿರಬಹುದು ಒಬ್ಬಳೇ ಮಗನನ್ನು ಸಾಕುವ ಕಷ್ಟ ಎಷ್ಟೆಂದು.
ಗಂಡು, ಹೆಣ್ಣು -ಇಬ್ಬರೂ ಸೇರಿದಾಗ ಜನಿಸಿದ ಮಗುವನ್ನು ಅವರಿಬ್ಬರೂ ಸೇರಿಯೇ ಸಾಕುವುದು ಪ್ರಕೃತಿಯ ನಿಯಮ. ಆದರೆ ಆಕಸ್ಮಿಕವಾಗಿ ಜತೆ ಕಡಿದಾಗ ಒಬ್ಬರೇ ಮಗುವನ್ನು ಲಾಲಿಸಬೇಕು, ಪಾಲಿಸಬೇಕು. ಸೀತೆ, ಕುಂತಿ, ಶಕುಂತಲೆಯರೆಲ್ಲ ಅನಿವಾರ್‍ಯವಾಗಿ ಈ ಜವಾಬ್ದಾರಿಯನ್ನು ನಿಭಾಯಿಸಿದವರು. ಇಂದು ಮಾತ್ರ ಇದನ್ನೇ ಐಚ್ಛಿಕವಾಗಿ ಆರಿಸಿ ‘ಸಿಂಗಲ್ ಪೇರೆಂಟ್’ ಹುದ್ದೆಯನ್ನು ನೆಚ್ಚಿಕೊಳ್ಳುವವರು ಹಲವರು.
ಸುಲಭವಲ್ಲ ಈ ಪೇರೆಂಟಿಂಗ್
ಸಂಗಾತಿ ಇನ್ನಿಲ್ಲವಾದಾಗ, ಉದ್ಯೋಗಕ್ಕೆಂದು ದಂಪತಿಗಳು ದೂರದೂರದ ಸ್ಥಳಗಳಲ್ಲಿ ನೆಲೆಸಬೇಕಾಗಿ ಬಂದಾಗ, ದಾಂಪತ್ಯದಲ್ಲಿ ವಿರಸ ಬಂದು ವಿಚ್ಛೇದನ ಪಡೆದಾಗಲೆಲ್ಲ ಮಗು ಹೆತ್ತವರಲ್ಲಿ ಯಾರಾದರೊಬ್ಬರ ಸುಪರ್ದಿಯಲ್ಲಿ ಇರಲೇಬೇಕಾಗುತ್ತದೆ. ಹೀಗೆ ಮಗುವನ್ನು ಸಾಕುವ ಹೊಣೆ ಹೊತ್ತವರದೆಲ್ಲ ಒಂಟಿ ಹಳಿಯ ಮೇಲಿನ ಪಯಣವೇ. ವಿವಾಹವನ್ನೇ ಆಗದೆ ಮಗುವೊಂದನ್ನು ದತ್ತು ಪಡೆದು ಸಾಕಲು ಇಚ್ಛಿಸುವವರೂ ಇಂದು ಬಹಳಷ್ಟು ಮಂದಿ.
ಮಕ್ಕಳನ್ನು ಸಾಕುವ ಅನುಭವವೇ ಒಂದು ಖುಷಿ ನಿಜ. ಆದರೆ ಹೀಗೆ ಒಬ್ಬೊಬ್ಬರೇ ಎಲ್ಲ ಜವಾಬ್ದಾರಿಗಳನ್ನೂ ಹೊತ್ತುಕೊಳ್ಳುವುದೆಂದರೆ ಸಾಮಾನ್ಯ ಕೆಲಸವಲ್ಲ. ಅಪ್ಪ ಜೊತೆಗಿಲ್ಲದಿದ್ದರೆ ಆ ಅಪ್ಪನ ಪಾತ್ರವನ್ನೂ ತಾನೇ ವಹಿಸಬೇಕು ಈಕೆ. ಅಮ್ಮನಿಲ್ಲವೇ, ಅಪ್ಪ ತಾನೇ ಅಮ್ಮನೂ ಆಗಬೇಕು. ಜೊತೆಗೆ ಆ ಮಗು ತನ್ನ ಗೆಳೆಯನ ಮನೆಯಲ್ಲಿ ಕಂಡುದನ್ನು ತಮ್ಮ ಮನೆಗೂ ಹೋಲಿಸಿ ‘ನಮ್ಮ ಮನೆಯಲ್ಲೇಕೆ ಅಮ್ಮ ಇಲ್ಲ?’ ಎಂದು ಕೇಳಿದರೆ ಅದಕ್ಕೂ ಉತ್ತರಿಸಬೇಕು. ಆ ಉತ್ತರ ಮಗುವಿಗೆ ಸಮಾಧಾನವನ್ನೂ ತರಬೇಕು. ನೆರೆಹೊರೆಯವರು, ಸಹೋದ್ಯೋಗಿಗಳು, ಗೆಳೆಯರು ಕೇಳುವ ಪ್ರಶ್ನೆಗಳಿಗೂ ಉತ್ತರ ಸಿದ್ಧವಿರಬೇಕು. ಹೊರಜಗತ್ತಿನ ಕಣ್ಣಿನಲ್ಲಿ ತನಗೊಂದು ಘನತೆಯನ್ನು ಇಟ್ಟುಕೊಂಡಿರುವಂತೆಯೇ ಮಗುವಿನ ಕಣ್ಣಿನಲ್ಲಿಯೂ ತನ್ನ ವ್ಯಕ್ತಿತ್ವ ಕಿರಿದಾಗದಂತೆ ನೋಡಿಕೊಳ್ಳುವ ಎಚ್ಚರಿಕೆಯೂ ಇರಬೇಕು. ಇಷ್ಟೆಲ್ಲ ಜಾಗ್ರತೆ ವಹಿಸಿ ಮಗುವನ್ನು ಬೆಳೆಸಿದರೂ ಎಲ್ಲೋ ಒಂದು ಸಣ್ಣ ಲೋಪ ಮಗುವಿನಲ್ಲೊಂದು ಸಮಸ್ಯೆಯನ್ನು ತಂದೊಡ್ಡಬಹುದು.
ಎಲ್ಲರಂತಲ್ಲ  ಈ ಮಕ್ಕಳು
ತಮ್ಮ ಮನೆಯಲ್ಲೇಕೆ ಅಪ್ಪನಿಲ್ಲ ಎಂದು ಕೇಳದ ಮಗುವೊಂದು ಒಳಗೊಳಗೇ ಈ ಪ್ರಶ್ನೆಯನ್ನು ಇಟ್ಟುಕೊಂಡೇ ಬೆಳೆದಿರಬಹುದು. ಇದಕ್ಕೆ ಸೂಕ್ತ ಸಮಾಧಾನ ದೊರಕದಿದ್ದಲ್ಲಿ ಇದನ್ನೇ ದೊಡ್ಡ ಸಮಸ್ಯೆ ಮಾಡಿಕೊಳ್ಳಬಹುದು. ತನ್ನ ಓರಗೆಯ ಹುಡುಗರೆಲ್ಲ ತಂತಮ್ಮ ಅಪ್ಪಂದಿರಂತೆಯೇ ಡ್ರೆಸ್ ಮಾಡಿಕೊಳ್ಳುತ್ತಾರೆ, ಅವರಂತೆಯೇ ವರ್ತಿಸುತ್ತಾರೆ. ಆದರೆ ತಾನು ಯಾರನ್ನು ಫಾಲೋ ಮಾಡಲಿ ಎಂಬ ಸಮಸ್ಯೆ ಈ ಮಗುವನ್ನು ಕಾಡಿಬಿಟ್ಟರೆ ಕ್ರಮೇಣ ಮಗು ಅದನ್ನೇ ಮನಸ್ಸಿಗೆ ಹಚ್ಚಿಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳಲ್ಲಿ  ಭಾವನಾತ್ಮಕ ಅಥವಾ ನಡವಳಿಕೆಯ ಸಮಸ್ಯೆ ಕಂಡುಬರುವುದುಂಟು ಅನ್ನುತ್ತಾರೆ ಮನಃಶಾಸ್ತ್ರಜ್ಞೆ ಡಾ|ಲತಾ. ‘ಗಂಡು ಮಗುವಿಗೆ ತನ್ನನ್ನು ತಾನು ಐಡೆಂಟಿಫೈ ಮಾಡಿಕೊಳ್ಳೋದಕ್ಕೆ ಫಾದರ್ ಮಾಡೆಲ್ ಇಲ್ಲದಿದ್ದರೆ ಎಮೋಷನಲ್ ಪ್ರಾಬ್ಲಂ ಕಂಡುಬರಬಹುದು. ಇದೇ ರೀತಿ ಹುಡುಗಿಯರೂ ತಮ್ಮ ತಮ್ಮ ಅಮ್ಮಂದಿರ ಸ್ವಭಾವ, ನಡವಳಿಕೆಗಳನ್ನು ಅನುಕರಿಸುತ್ತಾರೆ. ಅವರಿಗೂ ಅಮ್ಮನ ಮಾದರಿ ಸಿಗದಿದ್ದರೆ ಕಷ್ಟವಾಗುತ್ತದೆ. ಇಂಥ ಮಕ್ಕಳಿಗೆ ಅದೇ ರೀತಿಯ ಇನ್ನೊಂದು ಮಾದರಿ ಅಂದರೆ ಗಂಡು ಮಗುವಿಗೆ ಮಾವನೋ, ಹೆಣ್ಣು ಮಗುವಿಗೆ ಅತ್ತೆಯೋ ಚಿಕ್ಕಮ್ಮನೋ ಸಿಕ್ಕಿಬಿಟ್ಟರೆ ಈ ತೊಂದರೆ ಹಾಗೆಯೇ ನಿವಾರಣೆಯಾಗಿಬಿಡಬಹುದು’ ಅಂತಾರೆ ಅವರು.
ಈ ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟಾಗಲಂತೂ ಹೆತ್ತವರ ಭುಜದ ಮೇಲಿನ ಹೊರೆ ಇನ್ನಷ್ಟು ಹೆಚ್ಚುತ್ತದೆ. ಹದಿಹರೆಯಕ್ಕೆ ಬಂದ ಹುಡುಗಿಗೆ ಕೆಲವೊಂದು ಕ್ಷಣಗಳಲ್ಲಂತೂ ಅಮ್ಮ ಬೇಕೇಬೇಕು. ಅಪ್ಪನೇ ಅಮ್ಮನಾಗಿ ನಿಲ್ಲುವ ನಿದರ್ಶನಗಳೂ ಇಲ್ಲದಿಲ್ಲ. ಆದರೂ ಇದು ಕಷ್ಟವೆನ್ನುವ ಕಾರಣಕ್ಕೋ ಏನೋ ಪುರುಷರು ಸಿಂಗಲ್ ಪೇರೆಂಟ್‌ತನದ ಜವಾಬ್ದಾರಿ ವಹಿಸುವುದು ಕಡಿಮೆಯೇ. ಮಗ ಮೂರು ವರ್ಷದವನಿರುವಾಗ ಪತಿಯನ್ನು ಕಳೆದುಕೊಂಡ ಬೆಂಗಳೂರಿನ ಶಿಕ್ಷಕಿ ನಗೀನಾ ಕೌಸರ್ ಮಗನನ್ನು ಎಂಜಿನಿಯರಿಂಗ್ ತರಗತಿಯವರೆಗೆ ತಂದು ನಿಲ್ಲಿಸಿದ್ದಾರೆ. ಅವರಿಗೂ ಟೀನೇಜ್‌ನಲ್ಲಿರುವ ಮಗನನ್ನು ನಿಭಾಯಿಸುವುದು ಅಂತಹ ಕಷ್ಟ ಏನಾಗಿಲ್ಲವಂತೆ. ‘ನಾನು ಎಷ್ಟೇ ಬಿಝಿ ಇದ್ದರೂ ಪ್ರತಿದಿನ ಮಗ ನಿದ್ದೆ ಮಾಡುವ ಮೊದಲು ಅವನ ಜೊತೆ ಅರ್ಧ ಗಂಟೆ ಕಳೆಯುತ್ತೇನೆ. ಅವನ ಕಾಲೇಜ್ ವಿಷಯ, ಫ್ರೆಂಡ್ಸ್ ವಿಚಾರ ಎಲ್ಲಾ ಕೇಳ್ತೇನೆ. ಗರ್ಲ್‌ಫ್ರೆಂಡ್, ಲವ್ ಇತ್ಯಾದಿಗಳ ಬಗ್ಗೆಯೂ ನಾನು ಹೇಳಿದ್ದ್ದೇನೆ.  ಸ್ಮೋಕಿಂಗ್, ಫ್ರೆಂಡ್‌ಶಿಪ್ ಬಗ್ಗೆಯೂ ತಿಳಿಹೇಳಿದ್ದೇನೆ. ನಾವು ಪ್ರತಿದಿನವೂ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತೇವೆ. ನನ್ನ ತವರು ಮನೆಯ ಪರಿಸರವೂ ಅವನು ದಾರಿ ತಪ್ಪದಂತೆ ಕಾಪಾಡಿದೆ’ ಅಂತಾರೆ ನಗೀನಾ.
ಎಚ್ಚರೆಚ್ಚರ
ಅನಿವಾರ್‍ಯದಿಂದಲೇ ಇರಲಿ, ಐಚ್ಛಿಕವಾಗಿಯೇ ಇರಲಿ ಒಂಟಿ ಪಾಲಕರ ಪಾತ್ರವನ್ನು ವಹಿಸಿಕೊಳ್ಳುವವರು ಹಲವಾರು ವಿಷಯಗಳಲ್ಲಿ ಎಚ್ಚರ ವಹಿಸಲೇಬೇಕು. ಮನೆಯಲ್ಲಿ ಆರ್ಥಿಕ ಸದೃಢತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸದಾ ಪರಿಶ್ರಮಿಸುವುದು ಇಲ್ಲಿ ಮುಖ್ಯ. ಮನೆಯಲ್ಲಿ ಪೇರೆಂಟ್ ಒಬ್ಬರೇ ಇರುವುದಾದರೂ ಮಗುವಿಗೆ ಅಲ್ಲೊಂದು ಕುಟುಂಬದ ಭಾವನೆ ಮೂಡಿಬರಲೇಬೇಕು. ತನಗೆ ಅಪ್ಪ ಅಥವಾ ಅಮ್ಮ ಏಕಿಲ್ಲ ಎಂದಾಗ ಅದಕ್ಕೆ ಉತ್ತರಿಸಲೇಬೇಕು. ‘ಈ ವಿಚಾರದಲ್ಲಂತೂ ಮಗು ಸತ್ಯವನ್ನು ಇನ್ನಾರಿಂದಲೋ ತಿಳಿದುಕೊಳ್ಳುವಂತಾಗಬಾರದು. ಮಗು ಅರ್ಥ ಮಾಡಿಕೊಳ್ಳುವ ವಯಸ್ಸಿಗೆ ಬಂದಾಗ ಅರ್ಥವಾಗುವ ರೀತಿಯಲ್ಲಿ ಅದಕ್ಕೆ ವಿವರಿಸಬೇಕು’ ಅನ್ನುತ್ತಾರೆ ಮನಃಶಾಸ್ತ್ರಜ್ಞರು.
ಸಂಗಾತಿಯ ಜೊತೆ ಯಾವುದೇ ಮನಸ್ತಾಪವಿದ್ದರೂ ಮಗುವಿನ ಮುಂದೆ ಆತನ/ಆಕೆಯ ಬಗೆಗೆ ತನ್ನ ಅನಾದರ ಪ್ರದರ್ಶಿಸುವುದು ಕೂಡ ಸರಿಯಲ್ಲ. ಪೋಷಕರ ನಗು, ಅಳು ಎಲ್ಲವೂ ಮಗುವಿನ ಮುಂದೆಯೇ ಇರಲಿ. ಆಗ ಅದು ತಾನಾಗಿಯೇ ಹೆತ್ತವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಗುವಿಗೆ ಯಾವುದೇ ನಿರ್ಬಂಧವಿಲ್ಲದೆ ಪ್ರೀತಿ ನೀಡಿದರೆ ಮಗು ತಾನಾಗಿ ಹತ್ತಿರಕ್ಕೆ ಬರುತ್ತದೆ. ಪೋಷಕರ ಒಂಟಿತನವನ್ನೂ ನೀಗಿಸುತ್ತದೆ.
————–
ಆರಂಭದಿಂದಲೂ ನನಗೆ ನನ್ನ ಹೆತ್ತವರ, ಸಹೋದರರ ಸಹಕಾರ ಇತ್ತು. ಹೀಗಾಗಿ ನನ್ನ ಕಷ್ಟ, ನೋವುಗಳನ್ನು ಹೊರಹಾಕದೇ ನಾನು ಕೆಲಸ ಮಾಡುತ್ತಾ ಬಂದೆ. ನನ್ನ ಮಗ ಇದೆಲ್ಲವನ್ನೂ ಗಮನಿಸುತ್ತಾ ಬಂದಿದ್ದಾನೆ. ಒಂದು ರೀತಿಯಲ್ಲಿ ನನ್ನನ್ನು ನೋಡುತ್ತಾ ಅವನೂ ಬದುಕನ್ನು ಎದುರಿಸುವುದು ಹೇಗೆಂದು ಕಲಿತುಕೊಂಡಿದ್ದಾನೆ. ಅವನು ಟೀನೇಜ್ ಹುಡುಗನಾದರೂ ದಾರಿ ತಪ್ಪಲಾರ ಎಂಬ ನಂಬಿಕೆ ನನಗಿದೆ. ನಾನು ಅವನಿಗೆ ಸ್ಟ್ರಿಕ್ಟ್ ಮದರ್ ಆಗಿಲ್ಲ, ಲವಿಂಗ್ ಮದರ್ ಆಗಿದ್ದೇನೆ.
ನಗೀನಾ ಕೌಸರ್
ನನ್ನ ಪತಿ ತೀರಿಕೊಂಡಾಗ ನನ್ನ ಮಗ ಹತ್ತನೇ ತರಗತಿಯಲ್ಲಿದ್ದ. ಆಗಿನಿಂದಲೇ ಅವನಿಗೆ ಅಮ್ಮನ ಕಷ್ಟ ಅರ್ಥವಾಗುತ್ತಾ ಬಂದಿದೆ. ಹೀಗಾಗಿ ಏನನ್ನಾದರೂ ನಯವಾಗಿ ಹೇಳಿದರೆ ಸ್ವೀಕರಿಸುತ್ತಾನೆ. ತಾನಾಗಿ ಕೆಟ್ಟ ಸಹವಾಸಕ್ಕೆ ಹೋಗುವ ಹುಡುಗನೂ ಅವನಲ್ಲ. ಈಗ ಪಿಯೂಸಿಯಲ್ಲಿರೋ ಅವನು ನಾಳೆ ಯಾವ ಕೋರ್ಸ್ ಬೇಕೆನ್ನುತ್ತಾನೋ ಅದನ್ನು ಕಷ್ಟಪಟ್ಟಾದರೂ ಕೊಡಿಸುವ ನಿರ್ಧಾರ ಮಾಡಿದ್ದ್ದೇನೆ.
ಸಂಧ್ಯಾ ಶೆಣೈ
ಭಾವನಾತ್ಮಕ ಸಮಸ್ಯೆಯನ್ನು ಎದುರಿಸುತ್ತಿರುವ ಮಗು ಇದನ್ನು ಎಂದೂ ನೇರವಾಗಿ ವ್ಯಕ್ತಪಡಿಸದು. ಕದಿಯುವುದು, ಸುಳ್ಳು ಹೇಳುವುದು ಮೊದಲಾದ ಚಟುವಟಿಕೆಗಳ ಮೂಲಕ ತಮ್ಮೊಳಗಿನ ಖಿನ್ನತೆಯನ್ನು ಹೊರಹಾಕಬಹುದು. ಮನೆಯಲ್ಲಿ ಮಾದರಿಗಳು ಸಿಗದೆ ಹೊರಗಿನ ಸಹವಾಸ ದೋಷದಿಂದಾಗಿ ಕೆಟ್ಟು ಹೋಗುವ ಮಕ್ಕಳೂ ಇದ್ದಾರೆ.
ಡಾ|ಲತಾ, ಮನಃಶಾಸ್ತ್ರಜ್ಞರು, ಕೆಎಂಸಿ, ಮಣಿಪಾಲ.

ರೋಲ್ ಮಾಡೆಲ್

Posted: ಆಗಷ್ಟ್ 31, 2011 in ವಿಷಯ ವಿಶೇಷ

ನಮಗೆ ರೋಲ್ ಮಾಡೆಲ್‌ಗಳು ಬೇಡ ಅನ್ನುವ ಅವಳು. ಮಾದರಿಗಳಿಲ್ಲ ಅನ್ನುವ ಅವನು. ಹಾಗಿದ್ದರೆ ಆದರ್ಶವೊಂದನ್ನು  ಹುಡುಕುವ ಈ ವಯಸ್ಸಿನಲ್ಲಿ ಇವರೇನು ಮಾಡುತ್ತಾರೆ? ಇವರ ಪ್ರಗತಿಯ ಬಗೆ ಹೇಗೆ? ಇವರಿಗೆ ರೋಲ್ ಮಾಡೆಲ್‌ಗಳು ಏಕೆ ಬೇಡ?
——————
ಹಿಂದಿನವರಂತಲ್ಲ ಈ ಹುಡುಗರು. ಅಂದಿನವರಿಗೆಲ್ಲ ಒಂದು ಆದರ್ಶವಿತ್ತು. ಕಣ್ಣ ಮುಂದೆಯೇ ಗಾಂ, ನೆಹರೂ, ಸುಭಾಷ್‌ರಂತಹ ರೋಲ್ ಮಾಡೆಲ್‌ಗಳಿದ್ದರು. ದೇಶ ಕಟ್ಟುವ ಹಿರಿಯ ನೇತಾರರಿದ್ದರು. ಸಾಧನೆಯ ಶಿಖರವೇರಿದ ಛಲದಂಕ ಮಲ್ಲರಿದ್ದರು. ಇವರೆಲ್ಲರನ್ನೂ ಕಾಣುತ್ತಾ ಅವರೂ ಕನಸು ಕಾಣುತ್ತಿದ್ದರು, ಅವರ ಸೂರ್ತಿಯ ಬೆಳಕಿನಲ್ಲಿ ನಡೆಯುತ್ತಿದ್ದರು.
ಇಂದಿನವರು ಮಾತ್ರ ಅವರಂತಲ್ಲ. ಇವರೂ ಕನಸು ಕಾಣುತ್ತಾರೆ, ಆದರ್ಶದ ಬಲೆ ನೇಯುತ್ತಾರೆ. ಆದರೆ ರೋಲ್ ಮಾಡೆಲ್‌ಗಳ ಹಂಗು ಇವರಿಗಿಲ್ಲ. ನಾನು ಇವರಂತೆಯೇ ಆಗಬೇಕು ಎನ್ನುತ್ತ  ಕನಸುವವರು ಇವರಲ್ಲ. ಇವರೇ ನನ್ನ ಆದರ್ಶ ಎಂದು ಭಾವುಕರಾಗಿ ನುಡಿಯುತ್ತಾ ಬದುಕು ಕಟ್ಟಿಕೊಳ್ಳುವ ಈ ವಯಸ್ಸಿನಲ್ಲಿ  ರೋಲ್ ಮಾಡೆಲ್‌ಗಳೇ ಬೇಡ ಎನ್ನುವ ಈ ಹುಡುಗರ ಈ ಪರಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ.
ಕಾಪಿ ಮಾಡೋಲ್ಲ
‘ಯಾರೋ ಒಬ್ರನ್ನ ರೋಲ್ ಮಾಡೆಲ್ ಅಂತ ಇಟ್ಕೊಳ್ಳೋ ಈ ಕಾನ್ಸೆಪ್ಟ್‌ನ ಬಗೆಗೆ ನನಗೆ ಅಷ್ಟಾಗಿ ಒಲವಿಲ್ಲ. ಇಲ್ಲಿ ರೋಲ್ ಮಾಡೆಲ್‌ಗಿಂತ ನನ್ನ ಸ್ಕಿಲ್‌ನ ಇನ್ನಷ್ಟು ಶಾರ್ಪ್ ಮಾಡ್ಕೊಳ್ಳೋದು ಮುಖ್ಯ. ಒಂದೊಂದು ವಿಷ್ಯದಲ್ಲಿ ಒಬ್ಬೊಬ್ರು ಪರಿಣತರಾಗಿರ್‍ತಾರೆ. ಅವ್ರು ಯಾವ ದಾರಿಯಲಿ ಎಕ್ಸೆಲ್ ಆದ್ರು ಅನ್ನೋದನ್ನ ನೋಡ್ಕೋಬೇಕು. ಆದ್ರೆ ಯಾರನ್ನೂ ಕಾಪಿ ಮಾಡೋದು ತಪ್ಪು. ಒಟ್ಟಿನಲ್ಲಿ ಹೊರ ಪರಿಸರವನ್ನು ಬಿಟ್ಟ ಕಣ್ಣುಗಳಿಂದ ನೋಡ್ಬೇಕು’ ಅಂತಾರೆ ಉಜಿರೆಯ ವಿದ್ಯಾರ್ಥಿನಿ ಅಕ್ಷತಾ. ಹಲವು ಹದಿಹರೆಯದ ವಿದ್ಯಾರ್ಥಿಗಳದ್ದು ಇದೇ ಮಾತು. ಇಂದಿನ ಅದೆಷ್ಟೋ ಯುವಕರಿಗೆ ರೋಲ್ ಮಾಡೆಲ್‌ಗಳು, ಅವರನ್ನು ಹಿಂಬಾಲಿಸುವುದೆಂದರೆ ‘ಕಾಪಿ’ ಮಾಡಿದ ಹಾಗೆ. ಇವರೆಲ್ಲ ಬುದ್ಧಿವಂತರೂ ಹೌದು, ವೈಚಾರಿಕರೂ ಹೌದು. ಯಾರನ್ನೋ ಕಣ್ಣು ಮುಚ್ಚಿ ಹಿಂಬಾಲಿಸುವುದು ಇವರಿಗೆ ಹಿಡಿಸುವುದಿಲ್ಲ. ಎಲ್ಲವನ್ನೂ ಪ್ರಶ್ನಿಸುತ್ತಾ ಬೆಳೆಯುವುದು ಇವರಿಗಿಷ್ಟ.
ಮೈಸೂರಿನ ಬಿಕಾಂ ವಿದ್ಯಾರ್ಥಿನಿ ಚೇತನಾ ಕೂಡ ಇದನ್ನೇ ಹೇಳುತ್ತಾರೆ, ‘ರೋಲ್ ಮಾಡೆಲ್ ಅಂತ ಯಾರೂ ಇಲ್ಲ ನನಗೆ. ಆದ್ರೆ ಬೇರೆಯವರಲ್ಲಿ ಒಳ್ಳೇದು ಅಂತ ಏನಾದ್ರೂ ಇದ್ರೆ ಅದನ್ನು ಅಡಪ್ಟ್ ಮಾಡಿಕೊಳ್ಳುತ್ತೇನೆ. ಹಾಗೇ ಇತರರ ಕೆಟ್ಟ ಗುಣದಿಂದ ಹೇಗಿರಬಾರದು ಎಂಬ ಬಗ್ಗೆಯೂ ನಾವು ಪಾಠ ಕಲೀಬಹುದು’. ಯಾರೋ ಒಬ್ಬರಿಂದ ಅಥವಾ ಒಂದಷ್ಟು ಜನರ ಸಮೂಹದಿಂದ ಕಲಿಯುವುದಕ್ಕಿಂತ ತನ್ನದೇ ಯೋಜನೆ, ಯೋಚನೆ, ಅನುಭವಗಳ ಮೇಲೆ ಕಲಿಯುವುದು ಇವರೆಲ್ಲರಿಗೂ ಹೆಚ್ಚು ಪ್ರಿಯ. ಅಮೆರಿಕನ್ ಸಮಾಜದಲ್ಲಿ ದಶಕಗಳ ಹಿಂದೆ ಕಂಡುಬಂದಿದ್ದ ‘ಇಂಡಿವಿಜುವಲಿಸಮ್ ಅಥವಾ ಐ-ಇಸಮ್’ ಇಲ್ಲಿಯೂ ಕಂಡುಬರುತ್ತಿರುವುದಕ್ಕೆ ಸಾಕ್ಷಿಯಿದು.
ಸ್ಕಿಲ್‌ಗೆ ತಕ್ಕ ಆದರ್ಶ
ತಮ್ಮ ಅಗತ್ಯಕ್ಕೆ ತಕ್ಕಂತೆ, ತಮ್ಮಲ್ಲಿರೋ ಕೌಶಲಕ್ಕೆ ತಕ್ಕ ಹಾಗೆ ರೋಲ್ ಮಾಡೆಲ್‌ಗಳನ್ನು ಆರಿಸಿಕೊಳ್ಳುವ ಯುವಕರೂ ಇದ್ದಾರೆ. ‘ನಾನು ಒಳ್ಳೆಯ ಸಿನಿಮಾ ನಿರ್ದೇಶಕ ಆಗಬೇಕು’ ಅನ್ನುವ ಶಿವಮೊಗ್ಗದ ವಿದ್ಯಾರ್ಥಿ ರಜ್‌ಗೆ ಜಪಾನ್‌ನ ನಿರ್ದೇಶಕ ಅಕಿರಾ ಕುರಸೋವಾ, ಕನ್ನಡದ ಗಿರೀಶ್ ಕಾಸರವಳ್ಳಿಯವರೇ ಮಾದರಿಯಂತೆ. ಅವರಿಬ್ಬರ ಎಲ್ಲ ಚಿತ್ರಗಳನ್ನೂ ಅಧ್ಯಯನ ಮಾಡುತ್ತಿದ್ದೇನೆ ಎನ್ನುವ ರಜ್ ಮೊದಲು ಗುರಿ ನಿರ್ಧರಿಸಿಕೊಂಡು ಬಳಿಕ ಹಲವರ ಸಿನಿಮಾಗಳನ್ನು ನೋಡುತ್ತಾ ಇವರಿಬ್ಬರನ್ನು ಮಾದರಿಯನ್ನು ಆಯ್ದುಕೊಂಡರಂತೆ.
ನಂಗೆ ಐಎಎಸ್ ಆಫೀಸರ್ ಆಗ್ಬೇಕು ಅಂತ ಇಷ್ಟ. ಅದಕ್ಕೇ ಕಿರಣ್ ಬೇಡಿ ಒಬ್ಬ ಐಪಿಎಸ್ ಅಕಾರಿಯಾಗಿ ನನಗೆ ಮಾದರಿ. ನಾನು ಚಿಕ್ಕಂದಿನಿಂದಲೇ ಅವರನ್ನು ರೋಲ್ ಮಾಡೆಲ್ ಅಂತ ಅಂದುಕೊಂಡು ಬಂದಿದ್ದೇನೆ. ಸಾಮಾನ್ಯವಾಗಿ ನಮ್ಮ ಎಂಬಿಷನ್, ಅಗತ್ಯಕ್ಕೆ ತಕ್ಕಂತೆ ರೋಲ್ ಮಾಡೆಲ್ ಆಯ್ಕೆ ಮಾಡ್ಕೋತೇವೆ’ ಅಂತಾರೆ ಮೈಸೂರಿನ ಸ್ವಪ್ನಾ. ಯಾವುದೋ ಕ್ರೇಝ್‌ನಲ್ಲಿ  ಯಾರನ್ನೋ ಸುಮ್ಮನೇ ಮೆಚ್ಚಿಕೊಳ್ಳುವುದು ಈ ಬುದ್ಧಿವಂತರ ರೀತಿಯಲ್ಲ. ಹಾಗೆಂದು ಶಾರೂಖ್, ಅಮಿತಾಭ್, ಸಚಿನ್‌ರಂತಹವರನ್ನೆಲ್ಲ ಇಷ್ಟಪಡುವವರು ಇಲ್ಲವೆಂದಲ್ಲ. ಈ ರೀತಿ ಅಭಿಮಾನಿಸುವುದಕ್ಕೂ ಜೀವನಕ್ಕೆ ಆದರ್ಶವಾಗಿಟ್ಟುಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎನ್ನುತ್ತಾರೆ ಈ ಹುಡುಗರು. ‘ನನಗೂ ಸಚಿನ್ ತೆಂಡೂಲ್ಕರ್ ಇಷ್ಟ. ಆದರೆ ಆತನ ಹಾಗೆ ನಾನು ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಅದೆಲ್ಲಾ ಬರಿಯ ಅಭಿಮಾನ ಅಷ್ಟೇ. ಸೈಂಟಿಸ್ಟ್ ಆಗಬೇಕೆಂದಿರೋ ನಾನು ನನ್ನದೇ ಕ್ಷೇತ್ರದ ಯಾರಾದರೊಬ್ಬರನ್ನು ಮಾಡೆಲ್ ಆಗಿಟ್ಟುಕೊಂಡರೇ ಸರಿ’ ಅಂತಾರೆ ಮಂಗಳೂರಿನ ಬಿಎಸ್ಸಿ ವಿದ್ಯಾರ್ಥಿ ಸುಜ್ಞಾನ್. ಟ್ಯಾಬ್ಲಾಯ್ಡ್ ನ್ಯೂಸ್‌ಪೇಪರ್ ಶುರುಮಾಡುತ್ತೇನೆಂದುಕೊಂಡಿರುವ ಗುಲ್ಬರ್ಗಾದ ಪತ್ರಿಕೋದ್ಯಮ ವಿದ್ಯಾರ್ಥಿ ಹಸನಪ್ಪಗೂ ಕನ್ನಡದ ಟ್ಯಾಬ್ಲಾಯ್ಡ್  ಪತ್ರಕರ್ತರೇ ಮಾದರಿಯಂತೆ.
ಐಕಾನ್‌ಗಳಿಲ್ಲ!
ಇಂದಿಗೂ ಆದರ್ಶ ವ್ಯಕ್ತಿಗಳಿಗಾಗಿ ಹುಡುಕುವ ಹುಡುಗರಿದ್ದಾರೆ. ಆದರೆ ಇವರಿಗೆ ಸೂಕ್ತ ವ್ಯಕ್ತಿಗಳೇ ಸಿಕ್ಕಿಲ್ಲ. ಯಾರನ್ನೇ ತನ್ನ ಬದುಕಿಗೊಂದು ಮಾದರಿ ಅಂದುಕೊಂಡು ಮುಂದುವರೆದಾಗಲೂ ಥಟ್ಟನೆ ಅವರಲ್ಲೇನೋ ಒಂದು ಹುಳುಕು ಕಾಣಿಸಿಕೊಳ್ಳುತ್ತದೆ.
‘ಹಿಂದಿನ ಕಾಲದಲ್ಲಾದರೆ ದೊಡ್ಡ ದೊಡ್ಡ ರಾಷ್ಟ್ರಭಕ್ತರಿದ್ದರು. ಎಲ್ಲಾ ಕ್ಷೇತ್ರಲ್ಲೂ ಸಾಧಕರಿದ್ದರು. ಈಗ ಹೀಗೆ ಸೂರ್ತಿ ನೀಡುವವರಿಗಿಂತ ಕರಪ್ಟ್ ಜನರೇ ಕಾಣೋದು ಜಾಸ್ತಿ. ವ್ಯಕ್ತಿಯನ್ನು ಎಷ್ಟೇ ದೊಡ್ಡ ಮನುಷ್ಯನೆಂದು ಆರಾಸಲು ಹೋದರೂ ಇದ್ದಕ್ಕಿದ್ದಂತೆ ಅವರಲ್ಲಿನ ಏನೋ ಒಂದು ಕೆಟ್ಟ ಗುಣ ನಮಗೆ ಕಾಣಿಸುತ್ತದೆ’ ಅಂತಾರೆ ಧಾರವಾಡದ ಪದವಿ ವಿದ್ಯಾರ್ಥಿ ಶರಣು. ಇರುವುದರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಲೋಕಾಯುಕ್ತ ಸಂತೋಷ್ ಹೆಗಡೆ, ಕಿರಣ್ ಬೇಡಿ ಮೊದಲಾದವರು ಓಕೆ ಅಂತ ನೆಚ್ಚಿಕೊಂಡವರು ಕೆಲವರಿದ್ದಾರೆ. ‘ನಂಗೆ ಕಲಾಂ ಅವ್ರು ಆದರ್ಶ. ಯಾಕಂದ್ರೆ ಅವ್ರು ತುಂಬಾ ಹಾರ್ಡ್ ವರ್ಕ್ ಮಾಡಿ ಕಷ್ಟಪಟ್ಟು ಮೇಲೆ ಬಂದವ್ರು’ ಅಂತಾರೆ ಈಗಷ್ಟೇ ದ್ವಿತೀಯ ಪಿಯುಸಿ ಮುಗಿಸಿ ಸಿಇಟಿ ಪರೀಕ್ಷೆ ಬರೆಯುತ್ತಿರುವ ಬೆಂಗಳೂರಿನ ಪವಿತ್ರಾ. ಗಗನಯಾತ್ರಿ ಕಲ್ಪನಾ ಚಾವ್ಲಾ ಈಗಲೂ ಕೆಲವು ಹುಡುಗಿಯರಿಗೆ ಸೂರ್ತಿಯ ಚಿಲುಮೆ. ತುಂಬಾ ಹಣ ಮಾಡಬೇಕೆನ್ನುವ ಕೆಲವು ಹುಡುಗರಿಗೆ ಬಿಲ್‌ಗೇಟ್ಸ್, ಅಂಬಾನಿಗಳೆಂದರೆ ವಿಶೇಷ ಸೆಳೆತ.
ಮಾಧ್ಯಮಗಳ ಪ್ರಭಾವದಿಂದಲೋ ಏನೋ ದೊಡ್ಡವರೆನಿಸಿಕೊಂಡವರ ಸಣ್ಣತನಗಳು ಎಲ್ಲ ಯುವಕರಿಗೂ ಗೊತ್ತು. ಅದಕ್ಕೇ ರೋಲ್ ಮಾಡೆಲ್‌ಗಳೆಂಬ ವಿಚಾರದ ಬಗ್ಗೆಯೇ ಇವರು ಭ್ರಮನಿರಸನಗೊಂಡಿರಬೇಕು. ಇನ್ನೂ ಅದೆಷ್ಟೋ ಯುವಕರಿಗೆ ನಮ್ಮ ಹಾದಿ ನಮ್ಮದು ಎಂಬ ಧೋರಣೆ. ಯಾರ ಮಾದರಿಯೂ ಬೇಡವೆನ್ನುವ ಧೋರಣೆ. ಒಟ್ಟಿನಲ್ಲಿ ತಮ್ಮನ್ನು ತಾವೇ ರೂಪಿಸಿಕೊಳ್ಳ ಹೊರಟಿದ್ದಾರೆ ಈ ಹುಡುಗರು.

———–
ನಂಗೆ ಅಬ್ದುಲ್ ಕಲಾಂ ಅವ್ರು ಆದರ್ಶ. ಅವ್ರು ತುಂಬಾ ಕಷ್ಟಪಟ್ಟು ಮೇಲೆ ಬಂದಿರೋರು. ತುಂಬಾ ಹಾರ್ಡ್ ವರ್ಕರ್. ಇದಲ್ಲದೆ ನಮ್ಮಪ್ಪನೂ ನಂಗೆ ಆದರ್ಶ. ಅವ್ರ ಗುಣಗಳನ್ನೂ ನಾನು ಫಾಲೋ ಮಾಡ್ತೇನೆ.
-ಪವಿತ್ರಾ, ದ್ವಿತೀಯ ಪಿಯೂಸಿ, ಸೈಂಟ್ ಫ್ರಾನ್ಸಿಸ್ ಪಿಯು ಕಾಲೇಜು, ಬೆಂಗಳೂರು.
ನಾವು ಬ್ಲೈಂಡ್ ಆಗಿ ಯಾರನ್ನೂ ಫಾಲೋ ಮಾಡ್ಬಾರ್ದು. ಎಲ್ಲವನ್ನೂ ಪ್ರಶ್ನೆ ಮಾಡುತ್ತ ಹೋಗಬೇಕು. ಯಾರೂ ಪ್ರಶ್ನೆಗಿಂತ ದೊಡ್ಡವರಲ್ಲ. ನನಗೆ ಮಾಡೆಲ್‌ಗಿಂತ ನನ್ನ ಸ್ಕಿಲ್‌ನ್ನು ಇನ್ನಷ್ಟು ಅಭಿವೃದ್ಧಿಗೊಳಿಸೋದು ಮುಖ್ಯ.
ಅಕ್ಷತಾ, ತೃತೀಯ ಬಿಎಸ್ಸಿ, ಎಸ್‌ಡಿಎಂ ಕಾಲೇಜು, ಉಜಿರೆ.
ನಾನು ಐಎಎಸ್ ಆಫೀಸರ್ ಆಗ್ಬೇಕು ಅಂತಿದ್ದೇನೆ. ಹೀಗಾಗಿ ಉನ್ನತ ಹುದ್ದೆಯಲ್ಲಿದ್ದು , ಡೇರಿಂಗ್ ಆಗಿ ಹೆಸರು ಮಾಡಿರೋ ಕಿರಣ್ ಬೇಡಿ ನನಗೆ ಮೊದಲಿನಿಂದಲೂ ರೋಲ್ ಮಾಡೆಲ್. ಇದಲ್ಲದೇ ನನ್ನನ್ನು ಎಲ್ಲಾ ರೀತಿಯಲ್ಲೂ ಸಪೋರ್ಟ್ ಮಾಡುವ ಹೆತ್ತವರೂ ನನಗೆ ಆದರ್ಶ.
ಸಪ್ನಾ, ಪ್ರಥಮ ಬಿಕಾಂ, ಮಹಾರಾಣಿ ಕಾಲೇಜು, ಮೈಸೂರು.

ಅವಳು ದಿನವಿಡೀ ಮನೆಯಲ್ಲಿರುವವಳು. ಗಂಡ, ಮನೆ, ಮಕ್ಕಳು ಅಂತ ಬಿಝಿಯಾಗಿರುವವಳು. ಅವಳು ಹೊರಗೆಲ್ಲೂ ಕೆಲಸಕ್ಕೆ ಹೋಗೋದಿಲ್ಲ, ಸಂಬಳ ತರೋದಿಲ್ಲ. ಅದಕ್ಕೇ ಅವಳು ‘ವರ್ಕಿಂಗ್’ ಅಲ್ಲ. ಹಾಗಿದ್ದರೆ ಅವಳು ಮನೆಯಲ್ಲಿ ಮಾಡೋ ಕೆಲಸ ‘ಕೆಲಸ’ ಅಲ್ವಾ? ಹೌಸ್‌ವೈಫ್ ಅಂದ್ರೆ ಅಷ್ಟೇನಾ?

ನೀವು ವರ್ಕ್ ಮಾಡ್ತೀರಾ? -ಹೀಗೊಂದು ಪ್ರಶ್ನೆಯನ್ನು ಗೃಹಿಣಿಯೊಬ್ಬಾಕೆಯ ಮುಂದಿಟ್ಟರೆ ಆಕೆ ಅರೆಮನಸ್ಸಿನಿಂದಲೇ ಉತ್ತರಿಸುತ್ತಾಳೆ, ‘ಇಲ್ಲ, ನಾನು ಮನೆಯಲ್ಲೇ ಇರೋದು’. ‘ಹಾ, ವರ್ಕ್ ಮಾಡ್ತೇನೆ’ ಅಂತ ಆಕೆ ಎಲ್ಲಾದರೂ ಉತ್ತರಿಸಿದಳಾ, ತಕ್ಷಣ ಉಪಪ್ರಶ್ನೆಗಳು ಹೊರಬರುತ್ತವೆ, ‘ಎಲ್ಲಿ, ಮನೆಯಲ್ಲೇ ವರ್ಕ್ ಮಾಡ್ತೀರಾ? ವರ್ಕ್ ಫ್ರಂ ಹೋಮ್ ಮಾಡ್ತಿದ್ದೀರಾ?’
ಅದೇಕೋ ಏನೋ ಹೆಣ್ಣೊಬ್ಬಳು ಮನೆಯಲ್ಲೇ ಇದ್ದು ದಿನದ ಇಪ್ಪತ್ತನಾಲ್ಕು ಗಂಟೆಯ ಕಾಲವೂ ಮನೆ, ಮಕ್ಕಳು, ಅಡುಗೆ, ಕುಟುಂಬದವರು ಎಂದೆಲ್ಲ ಮೈಮುರಿದು ದುಡಿದರೂ ಆಕೆ ‘ಉದ್ಯೋಗಿ’ ಅಲ್ಲ, ಆಕೆ ಮಾಡುವುದು ‘ವರ್ಕ್’ ಅಲ್ಲ. ಶತಮಾನಗಳಿಂದ ಚಾಲ್ತಿಯಲ್ಲಿರುವ ಈ ಉದ್ಯೋಗವಲ್ಲದ ಉದ್ಯೋಗವೆಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಬೇಕೆಂದೋ ಏನೋ, ಇಂದಿನ ಹೆಣ್ಣುಮಕ್ಕಳಿಗೆ ಅದೆಷ್ಟೇ ಕಷ್ಟವಾದರೂ ಮನೆಯಿಂದ ಹೊರಹೋಗಿ ದುಡಿಯುವ ಹಟ. ಆದರೆ, ಅನಿವಾರ್ಯವಾಗಿ ಮನೆಯಲ್ಲಿ ಕುಳಿತವರ ಮುಂದೆ ಮಾತ್ರ ತನ್ನ ಕರ್ತವ್ಯದ ಕಾರಣಕ್ಕೇ ಎದುರಾಗುವ ಸಮಸ್ಯೆಗಳ ಸಾಲು ಸಾಲು. ಮತ್ತೆ ಅದೇ ‘ಹೌಸ್‌ವೈಫ್’ ಅನ್ನಿಸಿಕೊಂಡು ಕುಗ್ಗಿಹೋಗುವ ಸರದಿ.
ಒಳಗೊಳಗೇ ಅಳುವವಳು
ಇಂದಿನ ಗೃಹಿಣಿಯರಿಗಂತೂ ಸಮಸ್ಯೆ ಇನ್ನಷ್ಟು ಹೆಚ್ಚು. ಇವರೆಲ್ಲ ಓದಿಕೊಂಡವರು. ಆದ್ದರಿಂದಲೇ ಮನಸ್ಸು ಸೂಕ್ಷ್ಮವಾಗಿದೆ. ಮನೆಯೊಳಗಿನ ಪ್ರತಿ ಸಣ್ಣ ತರತಮವೂ ಇವರನ್ನು ಚುಚ್ಚುತ್ತದೆ. ತನ್ನಷ್ಟೇ ಓದಿಕೊಂಡ ಗೆಳತಿ ಹೊರಗೆಲ್ಲೋ ದುಡಿದು ಕೈತುಂಬ ಸಂಪಾದಿಸುವುದು ಕಂಡಾಗ ‘ಆಹ್, ಯಾರ ಹಂಗೂ ಇಲ್ಲದ ಅಂಥಾ ಜೀವನ ತನಗೂ ಇದ್ದಿದ್ದರೆ..’ ಮನಸ್ಸು ಕಲ್ಪನೆಯ ಬಲೆ ಹೆಣೆಯುತ್ತದೆ. ವೈಯಕ್ತಿಕ ಖರ್ಚಿಗೆಂದು ಹಣ ಕೊಡುವಾಗಲೂ ಗಂಡ, ‘ಎಷ್ಟು ಬೇಕು?’ ಅನ್ನುವಾಗ ಎಷ್ಟೆಂದು ಹೇಳುವುದು ಅನ್ನುತ್ತಾ ಮನ ಮುದುಡುತ್ತದೆ.
ತನಗೆ ಆಸಕ್ತಿ, ಉತ್ಸಾಹ ಇಲ್ಲದಿದ್ದರೂ ಗಂಡನ ಬೇಕು-ಬೇಡಕ್ಕೆಲ್ಲ ಸ್ಪಂದಿಸುವ ತುರ್ತು ಇವಳಿಗೆ. ಏಕೆಂದರೆ ಇವಳು ದಿನವಿಡೀ ಮನೆಯಲ್ಲೇ ತಣ್ಣಗೆ ಇರುವವಳು, ಸುಸ್ತು, ಬೇನೆ, ಬೇಸರಕೆಲ್ಲ ಅತೀತಳು. ಒಲ್ಲದ ಲೈಂಗಿಕತೆಯನ್ನೂ ಸುಖವೆಂದುಕೊಂಡು ಸುಮ್ಮನಿರುವವಳು. ಕಚೇರಿಯಲ್ಲಿ ದುಡಿಯುವ ಹುಡುಗಿಗಾದರೂ ಊಟವಾಯ್ತಾ, ತಿಂಡಿ ಆಯ್ತಾ ಎಂದು ವಿಚಾರಿಸಿಕೊಳ್ಳುವ ಗೆಳೆಯ, ಗೆಳತಿಯರೆಲ್ಲ ಇದ್ದಾರೆ. ಗಂಡ, ಮಕ್ಕಳ ಹೊಟ್ಟೆ ತುಂಬಿಸಿ ಕೊನೆಗೊಬ್ಬಳೇ ಕುಳಿತು ತಿನ್ನುವ ಇವಳನ್ನು ಕೇಳುವವರು ಯಾರೂ ಇಲ್ಲ. ಹೆತ್ತವರೊಂದು ಹೆಸರಿಟ್ಟೇ ಲೋಕಕ್ಕೆ ಪರಿಚಯಿಸಿದ್ದರೂ ಈ ಅಡುಗೆ ಮನೆ ಹುಡುಗಿಯನ್ನು ಸುತ್ತಲಿನವರು ಕರೆಯುವುದು ಮಾತ್ರ ‘ಆ ಡಾಕ್ಟ್ರನ ಹೆಂಡತಿ’, ‘ಪಕ್ಕದ್ಮನೆ ಲಾಯರ್ ಕೃಷ್ಣನ ಮಿಸೆಸ್’ ಎಂದೇ. ಎಷ್ಟೇ ಜಾಣೆಯಾಗಿದ್ದರೂ ಹೊರಗೆಲ್ಲೋ ಹೋದಾಗ ‘ನಾನು ಇಂಥವನ ಹೆಂಡತಿ’ ಎಂದು ಪರಿಚಯಿಸಿಕೊಳ್ಳದೆ ಬೇರೆ ವಿಯಿಲ್ಲ ಅವಳಿಗೆ.
ಮನೆಯೊಳಗಿನ ಪ್ರಮುಖ ನಿರ್ಧಾರಗಳಲ್ಲೂ ಅದೆಷ್ಟೋ ಗೃಹಿಣಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲದವರೇ. ಮೊದಮೊದಲು ಮನೆ-ಮಕ್ಕಳ ಒತ್ತಡವೆನ್ನುತ್ತಾ ತನ್ನ ಆಸೆ, ಆಕಾಂಕ್ಷೆಗಳನ್ನು ಬದಿಗಿಡುವ ಹೆಣ್ಣಿಗೆ ಕ್ರಮೇಣ ಎಲ್ಲದರತ್ತಲೂ ಒಂದು ದಿವ್ಯ ನಿರಾಸಕ್ತಿಯೇ ಸ್ಥಾಯಿಯಾಗುತ್ತದೇನೋ.. ಈ ಎಲ್ಲ  ಹಿಂಜರಿತಗಳನ್ನೂ ಮೀರಿ ತಮ್ಮತನವನ್ನೂ ಬದುಕಿನಲ್ಲೊಂದು ಲವಲವಿಕೆಯನ್ನೂ ಕಾಯ್ದುಕೊಂಡವರು ಕಡಿಮೆಯೇ. ಆದರೆ, ನಾವೆಲ್ಲ ಹೀಗೆಯೇ ಸುಮ್ಮನಿದ್ದರೆ ‘ಗೃಹಿಣಿ’ಯ ಪಟ್ಟ , ಅದಕ್ಕೆ ಆರೋಪಿಸಿರುವ ಅರ್ಥ ತಮ್ಮನ್ನು ಪೂರ್ತಿಯಾಗಿ ಇಲ್ಲವಾಗಿಸುತ್ತದೆ ಎಂದು ಎಚ್ಚೆತ್ತುಕೊಂಡವರೂ ಅನೇಕರಿದ್ದಾರೆ.
ಹೌದು, ನಾನು ಉದ್ಯೋಗಿ
ತಾನು ಮನೆಯಲ್ಲಿ ಎಷ್ಟೇ ಕೆಲಸ ಮಾಡಿದರೂ ಅದನ್ನು ಒಂದು ‘ಕೆಲಸ’ ಎಂದು ಪರಿಗಣಿಸುವವರೇ ಇಲ್ಲ ಎನ್ನುವುದು ಪ್ರತಿಯೊಬ್ಬ ಗೃಹಿಣಿಯ ಕೊರಗು. ಹೊತ್ತು ಗೊತ್ತಿನ ಪರಿವೆಯಿಲ್ಲ, ವಾರದ ರಜೆಯ ಸೌಲಭ್ಯವೂ ಇಲ್ಲ, ಬಾಕಿ ಇರುವ ಕೆಲಸ ತನ್ನನ್ನು ಬೇಡಿದಾಗಲೆಲ್ಲ ಅವಳು ರೆಡಿಯಾಗಬೇಕು. ಇಷ್ಟೆಲ್ಲ ಮಾಡಿದರೂ ‘ಹೌಸ್‌ವೈಫ್’ ಅನ್ನೋ ಪದ ಹೇಳುವುದಕ್ಕೆ, ಕೇಳುವುದಕ್ಕೆ ಯಾಕೋ ಅಹಿತ. ಅದಕ್ಕೇ ಇದನ್ನು ‘ಹೌಸ್‌ಮೇಕರ್’ ಎಂದು ಕರೆದುಕೊಂಡು ಕೊಂಚ ಮೇಲಕ್ಕೇರಿದೆವು ಅಂದುಕೊಂಡ ಹೆಣ್ಣುಮಕ್ಕಳುಂಟು. ಆದರೆ ‘ವರ್ಕಿಂಗ್ ವುಮನ್’ ಅಲ್ಲದ ಯಾವುದೇ ಹೆಸರೂ ತಮ್ಮನ್ನು ಉದ್ಯೋಗಸ್ಥರ ಗುಂಪಿನಿಂದ ದೂರವೇ ಇಟ್ಟಿದೆ ಎಂಬುದು ಇವರ ಅನುಭವಕ್ಕೂ ಬಂದಿದೆ.
ಆದರೆ, ‘ಐ ಅಮ್ ಎ ವರ್ಕಿಂಗ್ ವುಮನ್. ಬಿಕಾಸ್ ಐ ವರ್ಕ್ ಆಲ್ ದ ಟೈಮ್. ಐ ಡು ಮೈ ಹೌಸ್‌ವರ್ಕ್’ -ಹೀಗೆ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡವರು ಮೈಸೂರಿನ ಸಂಗೀತಾ ಶೆಣೈ. ಇಂಗ್ಲಿಷ್ ಉಪನ್ಯಾಸಕಿಯಾಗಿದ್ದ ಸಂಗೀತಾ ಈಗ ಯಾರು ಕೇಳಿದರೂ ‘ನಾನು ವರ್ಕ್ ಮಾಡ್ತೇನೆ’ ಅಂತಾರಂತೆ. ‘ಯಾರಾದರೂ ಇನ್ನಷ್ಟು ವಿವರ ಕೇಳಿದರೆ, ಇದೊಂದು ಪ್ರೈವೇಟ್ ಕಂಪನಿ, ಫ್ಲೆಕ್ಸಿಬಲ್ ಟೈಮಿಂಗ್ಸ್ ನ ಸೌಲಭ್ಯ ಇದೆ, ತುಂಬಾ ಜಾಬ್ ಸ್ಯಾಟಿಸ್‌ಫ್ಯಾಕ್ಷನ್ ಕೂಡ ಇದೆ ಅಂತ ಹೇಳ್ತೇನೆ’ ಅಂತಾರೆ ಸಂಗೀತಾ. ಇಲ್ಲಿ ವೇತನದ ಬದಲಾಗಿ ಒಂದು ಪ್ರೀತಿಯ ಅಪ್ಪುಗೆ, ಮೆಚ್ಚುಗೆ, ಕಾಳಜಿಗಳು ಸಿಗುತ್ತವಲ್ಲ ಎನ್ನುವುದು ಅವರ ಪ್ರಶ್ನೆ. ನಿಜ, ಸ್ತ್ರೀ ತನ್ನೀ ಕೆಲಸಕ್ಕೆ ವೇತನ ಬಯಸುವದಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಆಕೆಗೆ ಮೆಚ್ಚುಗೆ, ಪ್ರೀತಿಯನ್ನು ವ್ಯಕ್ತಪಡಿಸುವುದು ಉಳಿದವರ ಜವಾಬ್ದಾರಿ. ಎಲ್ಲರಿಗೂ ಇದನ್ನು ಪಡೆಯುವ ಅದೃಷ್ಟವಿರುವುದಿಲ್ಲ. ಆಕೆಯ ಅಭಿರುಚಿಗೆ ಆದ್ಯತೆ, ವ್ಯಕ್ತಿತ್ವಕ್ಕೆ ಮನ್ನಣೆ ಸಿಗದಿದ್ದರೆ ಆಕೆ ದಿನದಿನಕ್ಕೂ ಮುದುಡುತ್ತಾಳೆ.
ಬೆಲೆ ಕಟ್ಟುವವರುಂಟೇ?
ದಿನದ ಮೂರು ಹೊತ್ತೂ ಅಡುಗೆಯಾಳಾಗುವ, ಮನೆಮಂದಿಗೆ ಅನಾರೋಗ್ಯವಾದಾಗ ನರ್ಸ್ ಆಗುವ, ಸಂಜೆ ಮಗುವಿಗೆ ಟೀಚರ್ ಆಗುವ, ತನ್ನವನ ನೋವಿಗೆ ಸಂತೈಸುತ್ತಾ ಕೌನ್ಸೆಲರ್ ಆಗುವ, ಮನೆಯ ಖರ್ಚನ್ನೆಲ್ಲ ಸಂಭಾಳಿಸುವ ಇಕಾನಮಿಸ್ಟ್  ಆಗುವ… ಹೀಗೆ ಅಗತ್ಯಬಿದ್ದ ಪಾತ್ರವನ್ನೆಲ್ಲ ವಹಿಸುವ ಗೃಹಿಣಿಯ ಕಾಯಕವನ್ನು ಹಣದಲ್ಲಿ ಅಳೆಯುವ ಪ್ರಯತ್ನ ಮಾಡಿದವರುಂಟು. ಆದರೆ, ವೇತನದ ಆಕಾಂಕ್ಷೆಯೇ ಇಲ್ಲದೆ, ಸ್ವಹಿತದ ಸ್ವಾರ್ಥವನ್ನೂ ಮರೆತು, ಪ್ರೀತಿಯ ಎರಕ ಹೊಯ್ದು ಮಾಡುವ ಈ ಕೆಲಸಕ್ಕೆ ಬೆಲೆ ಕಟ್ಟುವ ಯತ್ನ ವ್ಯರ್ಥ, ನಿರರ್ಥಕ. ‘ಹೌದು, ಗೃಹಿಣಿಯ ಕೆಲಸವನ್ನು ಮಾಪಕ ಹಿಡಿದು ಅಳೆಯುವುದು ಸಾಧ್ಯವಿಲ್ಲ, ಅದು ಸರಿಯೂ ಅಲ್ಲ. ಇದಲ್ಲದೆ ಮಹಿಳೆಯನ್ನು ‘ನೀವು ವರ್ಕ್ ಮಾಡ್ತೀರಾ’ ಅಂತ ಕೇಳೋದೂ ತಪ್ಪು’ ಅಂತಾರೆ ಉಡುಪಿಯ ಜಯದೇವ ಪ್ರಸಾದ್ ಮೊಳೆಯಾರ.
ಇತರರು ‘ವರ್ಕಿಂಗಾ?’ ಅಂತ ಕೇಳುವುದನ್ನು ಯಾವಾಗ ನಿಲ್ಲಿಸುತ್ತಾರೋ ತಿಳಿಯದು. ಆದರೆ ಗೃಹಿಣಿಯರು ತಮ್ಮ ಕೆಲಸವನ್ನು ‘ಉದ್ಯೋಗ’ ಎಂದು ತಾವೇ ಗಟ್ಟಿಯಾಗಿ ಹೇಳಿಕೊಂಡರೆ ಅವರ ಆತ್ಮವಿಶ್ವಾಸ ವೃದ್ಧಿಯಾಗುವುದಂತೂ ಖಂಡಿತ. ಇದು ಇತರರಲ್ಲೂ ಬದಲಾವಣೆ ತಂದೀತು.

———–
ಯಾರೇ ಕೇಳಿದರೂ ನಾನು ‘ವರ್ಕಿಂಗ್’ ಅನ್ನುತ್ತೇನೆ. ಹೌದು, ನಾವು ಮನೆಯಲ್ಲಿ, ಮನೆಗಾಗಿ ದುಡಿಯುತ್ತೇವೆ. ಇದನ್ನು ಎಲ್ಲ ಹೆಣ್ಣುಮಕ್ಕಳೂ ಹೇಳಿಕೊಳ್ಳಬೇಕು. ನಮಗಿಲ್ಲಿ ಹಣದ ಬದಲು ಪ್ರೀತಿ, ಕಾಳಜಿ ಸಿಕ್ಕರೆ ಸಾಕು. ಇಲ್ಲಿ ಎಲ್ಲರೂ ಕೆಲಸ ಮಾಡೋದು ಕೇವಲ ಜಾಬ್ ಸ್ಯಾಟಿಸ್‌ಫ್ಯಾಕ್ಷನ್‌ಗಾಗಿ.
ಸಂಗೀತಾ ಶೆಣೈ
ಮಹಿಳೆಯರನ್ನು ‘ವರ್ಕ್ ಮಾಡ್ತೀರಾ’ ಅಂತ ಪ್ರಶ್ನಿಸುವುದು ನನಗೆ ಯಾವತ್ತೂ ಇಷ್ಟವಾಗಿಲ್ಲ. ನೀವು ಮನೆಯಿಂದ ಹೊರಗೆ ಎಲ್ಲಾದರೂ ದುಡಿಯುತ್ತೀರಾ ಅಥವಾ ಆಫೀಸ್‌ನಲ್ಲಿ ಕೆಲಸ ಮಾಡ್ತೀರಾ ಅಂತ ಕೇಳಬಹುದು. ಜಪಾನ್‌ನಲ್ಲಿ ‘ಓ.ಎಲ್’ ಎಂಬ ಬಳಕೆ ಇದೆ, ಅಂದರೆ ‘ಆಫೀಸ್ ಲೇಡಿ – ಕಚೇರಿಯಲ್ಲಿ ಕೆಲಸ ಮಾಡುವಾಕೆ’ ಎಂದರ್ಥ.
ಜಯದೇವ ಪ್ರಸಾದ ಮೊಳೆಯಾರ