ಬಂಧನ

Posted: ಜುಲೈ 31, 2011 in ಕಥಾ ಸಮಯ

ಅಧ್ಯಾತ್ಮ ಆಧಾರಿತ ಸಣ್ಣ ಕಥೆಗಳನ್ನು ಒಂದಷ್ಟು ಬರೆದಿದ್ದೇನೆ. ಇವುಗಳನ್ನು ಕನ್ನಡ ಜೆನ್ ಕಥೆಗಳು ಎಂದರೂ ಸರಿಯೇ. ಇವು ಯಾವುದೇ ಜೆನ್ ಅಥವಾ ಸೂಫಿ ಕಥೆಯ ಅನುವಾದವೂ ಅಲ್ಲ. ನನ್ನ ಸ್ವಂತ ರಚನೆಗಳು. ಆದರೆ ಓದಿದಾಗ ಅದೇ ಫೀಲ್ ಬರಬಹುದೇನೋ. ಮೊದಲು ಉದಯವಾಣಿ ಸಾಪ್ತಾಹಿಕಕ್ಕೆ ಪ್ರಿಥ್ವಿರಾಜ್ ಕವತ್ತಾರ ಹೇಳಿ ಬರೆಸಿ, ‘ಸಪಸ’ ಎಂಬ ಹೆಸರಿನ ಅಂಕಣದಲ್ಲಿ ಪ್ರಕಟವಾದ ಕತೆಗಳಿವು. ಅವುಗಳಲ್ಲೊಂದು ಕಥೆ ಇಲ್ಲಿದೆ.

ಅದೊಂದು ಪುಟ್ಟ ರಾಜ್ಯ. ಆ ರಾಜ್ಯದ ಪ್ರಜೆಗಳೆಲ್ಲಾ ಪರಮ ಧಾರ್ಮಿಕರು. ಈ ಪ್ರಜೆಗಳಿಗೊಬ್ಬ ರಾಜನಿದ್ದ. ಆಶ್ಚರ್ಯವೆಂದರೆ, ಈತ ಪರಮ ನಾಸ್ತಿಕ. ದೇವರೇ ಇಲ್ಲ, ದೇವರೆಂಬ ಕಲ್ಪನೆಗೆ ಪೂಜೆ ಪುನಸ್ಕಾರ ಮಾಡುವುದೆಲ್ಲ ವ್ಯರ್ಥ ಎನ್ನುವುದು ಆತನ ಅಭಿಪ್ರಾಯ. ಇಷ್ಟಕ್ಕೇ ಸುಮ್ಮನಿರಲಿಲ್ಲ ರಾಜ. ತನ್ನ ಪ್ರಜೆಗಳ್ಯಾರೂ ದೇವರನ್ನು ನಂಬಬಾರದು, ಪೂಜಿಸಬಾರದು ಎಂದು ಫರ್ಮಾನು ಹೊರಡಿಸಿಬಿಟ್ಟ. ಜೊತೆಗೆ ತನ್ನ ಸಾಮ್ರಾಜ್ಯದಲ್ಲಿದ್ದ ಎಲ್ಲಾ ದೇಗುಲಗಳಿಗೂ ಬೀಗವನ್ನೂ ಹಾಕಿಸಿದ.

ದೇವರನ್ನು ನಂಬುವ ಬಹುಸಂಖ್ಯಾತ ಪ್ರಜೆಗಳು ಇಷ್ಟಕ್ಕೆ ಸೋಲುತ್ತಾರೆಯೇ? ಎಲ್ಲರೂ ತಂತಮ್ಮ ಮನೆಗಳಲ್ಲಿ ದೇವರ ಮೂರ್ತಿಯನ್ನಿಟ್ಟು ಪೂಜಿಸಲು ಶುರುಮಾಡಿದರು. ಇದು ರಾಜನಿಗೂ ತಿಳಿಯಿತು. ಕೂಡಲೇ ತನ್ನ ಸೈನಿಕರನ್ನು ಎಲ್ಲಾ ಮನೆಗಳಿಗೂ ಕಳುಹಿಸಿ ಆ ಮನೆಗಳಲ್ಲಿದ್ದ ದೇವರ ಪ್ರತಿಮೆಗಳನ್ನೂ ಹೊರಹಾಕಿಸಿ ಸುಡುವಂತೆ ಆಜ್ಞೆ ಮಾಡಿದ. ತಮ್ಮ ನಂಬಿಕೆಗೆ ಧಕ್ಕೆ ಬಂದಾಗ ಪ್ರಜೆಗಳೆಲ್ಲಾ ದುಃಖಿತರಾದರು. ಆದರೂ ಅವರೆಲ್ಲ ಸೋಲಲಿಲ್ಲ. ಮನೆಗಳಲ್ಲೇ ದೇವರ ಚಿತ್ರಗಳನ್ನು ಗೋಡೆಗೆ ಅಂಟಿಸಿಕೊಂಡು ಪ್ರಾರ್ಥನೆ ಸಲ್ಲಿಸತೊಡಗಿದರು.

ಈಗ ಅರಸನಿಗೆ ಸಿಟ್ಟು ನೆತ್ತಿಗೇರಿ ಎಲ್ಲಾ ಪ್ರಜೆಗಳನ್ನೂ ಕಾರಾಗೃಹಕ್ಕೆ ಹಾಕುವಂತೆ ಆಜ್ಞಾಪಿಸಿದ. ಜನರನ್ನು ಬಂಧಿಸಿಡುವುದಕ್ಕಾಗಿಯೇ ಏಕಕೋಣೆಯುಳ್ಳ ದೊಡ್ಡ ಕಟ್ಟಡವನ್ನೂ ನಿರ್ಮಿಸಿದ. ಇಲ್ಲಿ ಬಂದ ಜನರೂ ಮತ್ತೆ ದೇವಾರಾಧನೆಗೆ ಬೇರೆ ಮಾರ್ಗ ಹುಡುಕಿದರು. ಎಲ್ಲರೂ ಗೋಡೆಯಲ್ಲಿ ದೇವರ ಚಿತ್ರ ಬಿಡಿಸಿ ಕೈಮುಗಿಯಲಾರಂಭಿಸಿದರು. ಈಗ ಇನ್ನಷ್ಟು ಸಿಡಿಮಿಡಿಗೊಂಡ ರಾಜ ಆ ಕೋಣೆಯನ್ನು ಪೂರ್ಣವಾಗಿ ಕತ್ತಲುಮಯವಾಗಿಸಿದ. ಹಗಲು ಹೊತ್ತಿನಲ್ಲೂ ಬೆಳಕು ಒಳಬರದ ಈ ಕೋಣೆಯಲ್ಲಿದ್ದ ಪ್ರಜೆಗಳಿಗೆಲ್ಲ ಹತಾಶೆ ಮಡುಗಟ್ಟಿತು. ಎಲ್ಲರೂ ನಿಧಾನವಾಗಿ ರಾಜನ ಅಧಿಕಾರ ದರ್ಪದ ಮುಂದೆ ಸೋಲಲಾರಂಭಿಸಿದರು.

ದೇವರನ್ನು ಪೂಜಿಸುವ ಬೇರಾವ ದಾರಿಯೂ ಕಾಣದೆ ಇವರೆಲ್ಲರೂ ಮಂಕಾಗತೊಡಗಿದರು. ಹೀಗೆ ದುಃಖಿತರಾದ ಜನರನ್ನು ನೋಡನೋಡುತ್ತ ರಾಜನ ಅಹಂಕಾರ ಹೆಚ್ಚುತ್ತ ಬಂತು.

ಒಂದು ದಿನ ಬಂಧನದಲ್ಲಿದ್ದ ಜನರನ್ನೆಲ್ಲ ನೋಡಲು ಬಂದ ರಾಜ. ಜನರ ಸೋತ ಮುಖವನ್ನು ಕಂಡು ಈತನಿಗೆ ಒಳಗೊಳಗೇ ಗೆಲುವಿನ ಸಂತಸ. ಎಲ್ಲರನ್ನೂ ಒಟ್ಟಾಗಿ ಪ್ರಶ್ನಿಸಿದ,

‘ದೇವರನ್ನು ಪೂಜಿಸುವುದಿಲ್ಲ, ದೇವರಿಲ್ಲ ಎಂದು ಒಪ್ಪುತ್ತೀರಾ? ಹಾಗಿದ್ದರೆ ಈ ಕ್ಷಣ ನಿಮ್ಮೆಲ್ಲರನ್ನೂ ಬಿಡುಗಡೆ ಮಾಡುತ್ತೇನೆ’ ಎಂದ.

ಬಂಧಿತರಿಗೆಲ್ಲ ಬಿಡುಗಡೆಯ ಹಂಬಲ. ಆದರೆ, ದೇವರನ್ನು ಧಿಕ್ಕರಿಸಿ ಬದುಕುವ ಧೈರ‍್ಯ ಅವರಾರಿಗೂ ಇರಲಿಲ್ಲ. ಎಲ್ಲರೂ ಸಪ್ಪಗಾದರು. ಆದರೆ, ಇವರೆಲ್ಲರ ನಡುವೆ ಒಬ್ಬ ವ್ಯಕ್ತಿ ಮಾತ್ರ ನಸುನಗುತ್ತಿದ್ದ. ರಾಜನಿಗೆ ಒಳಗೊಳಗೇ ಕುತೂಹಲ. ಈತನೂ ದೈವಭಕ್ತನೇ. ಆದರೆ ಉಳಿದವರಂತೆ ಇವನ ಮುಖ ಕಳೆಗುಂದಿಲ್ಲವಲ್ಲ, ಏನಿದರ ಮರ್ಮ ಎಂಬ ಪ್ರಶ್ನೆ ಆತನನ್ನು ಕಾಡಿತು. ಆದರೂ ಏನನ್ನೂ ಪ್ರಶ್ನಿಸದೆ ಆತನ ಮೇಲೆ ಒಂದು ಕಣ್ಣಿಟ್ಟಿರಲು ಕಾವಲುಭಟರಿಗೆ ಹೇಳಿ ಅರಮನೆಗೆ ತೆರಳಿದ.

ಆ ವ್ಯಕ್ತಿ ತನ್ನ ಪಾಡಿಗೆ ಕುಳಿತಿರುತ್ತಿದ್ದ. ಕೆಲವೊಮ್ಮೆ ಇತರರೊಂದಿಗೆ ಮಾತಾಡುತ್ತಿದ್ದ ಎಂಬ ವರದಿ ಬಂತು. ಹಾಗಿದ್ದರೆ ಆತ ದೇವರ ಪೂಜೆಗೆ ಬೇರಾವುದೇ ದಾರಿ ಕಂಡುಕೊಂಡಿಲ್ಲವೆಂದುಕೊಂಡು ರಾಜ ನಿಶ್ಚಿಂತನಾದ.

ಇನ್ನೊಂದು ವಾರ ಕಳೆದು ಬಂದ ರಾಜ. ಜನರೆಲ್ಲ ಈ ಬಂಧನದಲ್ಲಿ ಸಂಪೂರ್ಣವಾಗಿ ಬಳಲಿದ್ದಾರೆಂದೂ, ತನ್ನ ಕರಾರಿಗೆ ಒಪ್ಪಿ ಬಿಡುಗಡೆಯನ್ನು ಬೇಡುತ್ತಾರೆಂದುಕೊಂಡೇ ಬಂದ. ಆದರೆ, ಈ ಬಾರಿ ಬಂದಾಗ ಅದೇಕೋ ಜನರೆಲ್ಲ ಹೆಚ್ಚು ಗೆಲುವಾಗಿರುವಂತೆ ಕಂಡಿತು ರಾಜನಿಗೆ. ಆದರೂ ಮತ್ತೆ ಪ್ರಶ್ನಿಸಿದ, ‘ದೇವರಿಗೆ ಪೂಜೆ ಮಾಡುವುದಿಲ್ಲ, ದೇವರ ಹೆಸರೆತ್ತುವುದಿಲ್ಲ ಎನ್ನುವವರನ್ನು ಬಿಡುಗಡೆ ಮಾಡುತ್ತೇನೆ, ಯಾರು ಸಿದ್ಧರಿದ್ದೀರಿ?’

ಬಂಧಿತರೆಲ್ಲರೂ ಒಪ್ಪಿ ಮುಂದೆ ಬಂದರು. ರಾಜನಿಗೆ ಅಚ್ಚರಿಯಾಯಿತು. ಮಹಾನ್ ದೈವಭಕ್ತರಾದ ಈ ಜನರೆಲ್ಲ ಇಷ್ಟು ಸುಲಭದಲ್ಲಿ ಈ ಕರಾರಿಗೆ ಒಪ್ಪಿದ್ದು ಹೇಗೋ ಎಂಬ ಸಂದೇಹ ಹುಟ್ಟಿತು. ಹಿಂದಿನ ವಾರ ಬಂದಾಗ ನಸುನಗುತ್ತಿದ್ದ ವ್ಯಕ್ತಿಯ ಮೇಲೆ ಯಾಕೋ ಸಂದೇಹ ಬಂತು. ‘ಈ ಜನರೆಲ್ಲ ನನ್ನ ದಾರಿಗೆ ಬಂದಿದ್ದಾರೆಂದರೆ ದೇವರ ಆರಾಧನೆಗೆ ಅವರೆಲ್ಲ ಇನ್ನಾವುದೋ ದಾರಿ ಕಂಡುಕೊಂಡಿರಬೇಕು. ಈ ಮೂರ್ಖ ಜನರಿಗೆ ಯಾರೋ ಏನನ್ನೋ ಹೇಳಿದ್ದಾರೆ. ನೀನೇ ಇದಕ್ಕೆಲ್ಲ ಕಾರಣವೆಂದು ನನ್ನ ಮನಸ್ಸು ಹೇಳುತ್ತಿದೆ, ಹೇಳು, ಏನು ಮಾಡಿದೆ?’

ಆ ವ್ಯಕ್ತಿ ನಗುತ್ತಲೇ ಉತ್ತರಿಸಿದ,

‘ರಾಜನೇ, ನಾವು ದೇವಸ್ಥಾನಕ್ಕೆ ಹೋಗುವುದಕ್ಕೆ ನೀನು ತಡೆಹಾಕಿದೆ. ನಾವು ಪೂಜಿಸುತ್ತಿದ್ದ ದೇವರ ಪ್ರತಿಮೆಗಳನ್ನೂ ನಾಶಮಾಡಿದೆ. ಆದರೆ, ದೇವರು ನಮ್ಮ ಮನಸ್ಸಿನಲ್ಲಾಗಲೇ ಪ್ರತಿಷ್ಠಾಪಿತನಾಗಿದ್ದಾನೆ. ನಮ್ಮ ಮನಸ್ಸಿನಿಂದ ಅವನನ್ನು ನಾಶಮಾಡಲು ನಿನ್ನಿಂದ ಸಾಧ್ಯವಿಲ್ಲ. ನಾವು ದೇವರನ್ನು ಮನಸ್ಸಿನಲ್ಲೇ ಆರಾಧಿಸುತ್ತೇವೆ. ಅದನ್ನು ನೀನು ತಡೆಯುವುದು ಅಸಾಧ್ಯ. ನಮ್ಮ ಕೈಗಳನ್ನು ನೀನು ಕಟ್ಟಿಹಾಕಬಹುದು, ದೇಹವನ್ನು ಬಂಧನದಲ್ಲಿಡಬಹುದು, ಮನಸ್ಸನ್ನು ಬಂಧಿಸುವುದು ಸಾಧ್ಯವಿಲ್ಲ. ನನ್ನ ಮನಸ್ಸಿಗೆ ಬಂದ ಈ ಯೋಚನೆಯನ್ನು ಈ ಎಲ್ಲ ನನ್ನ ಸ್ನೇಹಿತರಿಗೂ ಹೇಳಿದ್ದೇನೆ’ ಎಂದನಾತ.

ಪ್ರಜೆಗಳ ದೈವಭಕ್ತಿಯನ್ನು ತಡೆಯಲು ಬೇರೆ ದಾರಿ ಕಾಣದೆ ಹತಾಶನಾದ ರಾಜ ಎಲ್ಲರನ್ನೂ ಬಿಡುಗಡೆ ಮಾಡಿದ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s